ಮಣ್ಣ ಮಮತೆ ಕ್ಷಮೆಯ ಗುಣದಿ
ಹೆಣ್ಣುತನದ ದರುಶನ |
ಕನ್ನಡಾಂಬೆಯೆನ್ನ ತಾಯಿ
ಹೊನ್ನಭಾವ ವಿಕಸನ ||
ಕನ್ನಡಿಗನು ತಾಯ ಕರದ
ಕನ್ನಡಿಯೊಳಗಿಣುಕಿದ |
ಬೆನ್ನ ಹಿಂದೆ ಭರತಮಾತೆ
ನಿನ್ನ ಬಿಂಬ ನೋಡಿದ ||
ಹೊಸತು ಕಂಡ ಕವಿಯ ಮನಕೆ
ಹಸಿರೆಲೆಗಳ ತೋರಣ |
ಹೊಸಪದಗಳ ಕುಸುಮಮಾಲೆ
ಯಶದ ಗೀತೆ ಗಾಯನ ||
ಕವಿಯ ಕವನ ಕಥನದಿಂದ
ಕವಿದ ನಿಶೆಯು ಸರಿಯಿತು |
ನವಭಾರತ ನಿರ್ಮಾಣಕೆ
ಯುವವೃಂದವು ತೊಡಗಿತು ||
ಭರತಮಾತೆ ಜಗದೊಡತಿಯು
ಕರೆದುಣಿಸುವ ದಾತೆಯು |
ಕರವ ಪಿಡಿದು ಸತ್ಪಥದಲಿ
ಕರೆದೊಯ್ಯುವ ಮಾತೆಯು ||
ದಿವಿಜಕುಲಕು ಜನಿಸುವಾಸೆ
ಬುವಿಯೊಡತಿಯ ಬಸಿರಲಿ |
ಕವಿದ ಮಬ್ಬ ಕಳಚುವಾಸೆ
ಸುವಿಚಾರದ ಬೆಳಕಲಿ ||