ಕಣಾದ ಗೌತಮ ಕಪಿಲ ಜೈಮಿನಿಯು ಗುರುವ್ಯಾಸ
ಮುನಿ ಪತಂಜಲಿ ತೋರ್ದ ವೇದಮಾರ್ಗ
ಜಿನ ಬೌದ್ಧ ಸಿದ್ಧಾಂತ ಚಾರ್ವಾಕ ತತ್ತ್ವಗಳು
ಪಥ ಹಲವು ದಿಶೆಯೊಂದೆ ಮನುಜನುತ್ಕರ್ಷ
ಕಾನನದಿ ಬಲುಕಠಿಣ ತಪಗಳನು ಆಚರಿಸಿ
ಕಾಣಸಿಗದಿಹ ಸತ್ಯ ಕಂಡರಸಿದವರು
ತಾನರಿತ ಘನತತ್ತ್ವ ಜಗದ ಏಳ್ಗೆಗೆ ಬಳಸಿ
ಮಾನವನ ಕುಲಧರ್ಮ ತಿಳಿಸಿಕೊಟ್ಟಿಹರು
ಭಂಡ ಧೂರ್ತರು ಗೈದ ಬರಿದೆ ಬಡಿವಾರವಿದು
ಕಂಡರಿಯದಿದ್ದುದಕೆ ಬೇಡ ದುಮ್ಮಾನ
ಇಂದು ತೊರೆದುಣಬೇಕು ನಾಳೆಗಳ ಚಿಂತೆಯನು
ಎಂದವರ ನುಡಿಗಳಿಗು ವೇದಗಳ ಸ್ಥಾನ
ಸೃಷ್ಟಿಮೂಲವನರಸಿ ಗಮ್ಯವನು ನಿಶ್ಚಯಿಸಿ
ನೀತಿ ಸಂಹಿತೆಯನ್ನು ಮನದಿ ನೆಟ್ಟಿಹರು
ನನ್ನರಿವನೆಚ್ಚರಿಸಿ ವಿಧಿ ನಿಷೇಧವನಿರಿಸಿ
ಶಿವತತ್ವದೆಡೆ ನಡೆಯ ತೋರಿ ಕೊಟ್ಟಿಹರು
ಜೀವನದ ಗುರಿಯರಿತು ಮುನ್ನಡೆಯೆ ಸತ್ಪಥವು
ಪಾವನವು ಹಿಂದುತ್ವವೆಂಬ ಋಜುಮಾರ್ಗ
ಜೀವದುಗಮವದೇಕೆ ಭವದ ಬಂಧವದೇಕೆ
ದೇವನೆಂಬವನರಸೆ ಬದುಕ ವಿನಿಯೋಗ
ಮೋಕ್ಷ ಲಕ್ಷ್ಯವನಿರಿಸಿ ಅರ್ಥ ಕಾಮದ ಹರಿವು
ಧರ್ಮತಟಗಳ ನಡುವೆ ಪಥವು ಅದಕೆ
ಜಗದ ಹಿತದಲೆ ಸುಖವು ಐಹಿಕದ ಜೀವನದಿ
ಪರದಲ್ಲಿ ಪರಮಪದ ಶಾಂತಿ ಗಳಿಕೆ