
ಕಾಡೇ ಅಳಿದರೆ ಉಳಿಯುತ್ತದದೆಲ್ಲಿ ನಾಡು?
ಗಿಡ ಮರ ಬಳ್ಳಿಗಳೇ ಇಲ್ಲವೆಂದಾದ ಮೇಲೆ
ಎಲ್ಲಿ ನೋಡಿದರಲ್ಲಿ ಬಯಲು, ಬಟಾಬಯಲು!
ಸೂಸಿ ಸೂಸಿ ಬೀಸುವುದಿಲ್ಲ ಆಗ ತಂಗಾಳಿ
ಸುಗಂಧವ ಹೊತ್ತು… ಸಂಭ್ರಮದಿಂದ
ಎಲೆಲ್ಲೂ ಬಿಸಿ ಬಿಸಿ ಬಿರುಗಾಳಿಯೇ ಗಾಳಿ!
ಹಾಡುವುದಂತೂ ಉಳಿಯಿತು ಗಾವುದ ದೂರ,
ಕೂಗುವುದನ್ನೂ ಮರೆಯುತ್ತದೆ ಆಗ ಕೋಗಿಲೆ.
ಯಾವ ಐಸಿರಿಗದು ಎಲ್ಲಿ ಕುಳಿತು ಕೂಗಬೇಕು?
ಏನು ನೋಡಿ ನಾಟ್ಯವಾಡಬೇಕು ನವಿಲು?
ನಡೆಯುವುದು ನೀರಸವಾಗಿ ನೀರಿದ್ದ ಕಡೆಗೆ
ಹಳೆಯದನ್ನೆಲ್ಲ ನೆನೆದು ಹಾಕುತ್ತ ಕಣ್ಣೀರು!
ಹೀರುವವರಾರು ಆಗ ಅಂಗಾರಾಮ್ಲವಾಯು?
ಪಶು ಪಕ್ಷಿ ಮೃಗ ಪ್ರಾಣಿ… ಮನುಷ್ಯರಿಗೆ
ಕೊಡುವವರಾದರೂ ಯಾರು ಪ್ರಾಣವಾಯು?
ಅಳಿದರೆ ಕಾಡು ಹಾಳಾಗುವವರು ನಾವೇ.
ಅಳಿಯದಂತೆ ಕಾಡು ಮಾಡಬೇಕದರ ರಕ್ಷಣೆ.
ನಮಗೆಲ್ಲರಿಗೂ ಇರುವುದಿದೊಂದೇ ಸುಂದರ ಭೂಮಿ!