
ಬಂದಳಿಕೆಯೇ ತುಂಬಿದ್ದಾಗಲೂ ಮರ ಹಸುರಾಗಿಯೇ ಕಾಣುತ್ತದೆ.
ಹಾಗೆ ಮರವನ್ನೇ ಕಳೆದುಕೊಂಡವರು ಬಂದಳಿಕೆಯನ್ನು ಕೀಳ ಹೋದರೆ;
ಹಸಿರನ್ನೇ ಕಿತ್ತರೆನ್ನುವ ಆರೋಪ, ಸೌಂದರ್ಯದ ಸಾವು, ಸಾಮರಸ್ಯಕ್ಕೆ ಧಕ್ಕೆ,
ಪ್ರಾಣವಾಯುವಿಗೆ ಸಂಚಕಾರ, ಭೂಮಿಯ ತಾಪಮಾನ ಏರುತ್ತಿದೆ..
ಒಂದೇ ಎರಡೇ ಬಂದಳಿಕೆಯ ಬಲಕ್ಕೆ ಬೆಂಬಲದ ಬಳಗ ದೊಡ್ಡದು
ಮೂಲ ಕೃಷಿಕನಿಗೆ ಮಾತ್ರ ಅಸಲೀ ವಿಷಯ ಗೊತ್ತು
ಬಹಳ ವರ್ಷಗಳ ಬಂದಳಿಕೆಯಿಂದ ಮೂಲ ಮರ ಬದುಕಿಲ್ಲ.
ಬಂದಳಿಕೆಯೂ ಒಣಗುತ್ತಿದೆ. ಅಲ್ಲಿ ಹಕ್ಕಿಗಳ ಕಲರವದ
ಪ್ರಾರ್ಥನೆಯಿಲ್ಲ, ಯಾವ ಪುಷ್ಪ ಫಲಗಳ ನಿರೀಕ್ಷೆಯೂ ಇಲ್ಲ
ಹೊಸ ಚಿಗುರಿಗೆ ಬೇಕಾದ ಸತ್ತ್ವವೇ ಉಳಿದಿಲ್ಲ. ಆದರೂ ಬಂದಳಿಕೆಯನ್ನು
ವೈಭವಿಕರಿಸುವ ಅದನ್ನು ಸ್ಮಾರಕವಾಗಿಸುವ ದೊಡ್ಡ ಯೋಜನೆಯೇ
ನಡೆದಿದೆ. ಸತ್ತ ಮರದ ರಕ್ಷಣೆಗೆ ಜಗತ್ತೇ ನಿಂತಿದೆ.
ಪೂಜೆಯಿಲ್ಲದ ದೇವಾಲಯವನ್ನು ಶಿಲ್ಪಕಲೆಯ ತಾಣವೆಂದು ಹೊಗಳುವ,
ಪೂಜೆಯಾದರೆ ಮೂಢನಂಬಿಕೆಗೆ ಅವಕಾಶವಾಗಿಬಿಡುತ್ತದೆ ಎಂದು
ಆತಂಕಗೊಳ್ಳುವ ವೈಚಾರಿಕರು, ವೈಜ್ಞಾನಿಕರು, ಇತಿಹಾಸಕಾರರು,
ಕಾಮಾರ್ಥಪೂಜಕರು.. ಒಬ್ಬರೇ ಇಬ್ಬರೇ… ಇವರೆಲ್ಲರಿಗೂ
ಪರಂಪರೆಯೆಂದರೆ; ಒಣಮರ, ಪಾಳುಬಿದ್ದ ಗುಡಿ,
ಪ್ರಾರ್ಥನಾ ಸ್ಥಳವಾದ ಪೂಜಾ ಸ್ಥಳ, ಹಾಳುಬಾವಿ,
ಕೈಕಾಲು ಕಳೆದುಕೊಂಡ ಮ್ಯೂಸಿಯಂ ಮೂರ್ತಿಗಳು..
ಬಂದಳಿಕೆ; ಜೀವಂತ ಮರದಮೇಲೆ ಆಕ್ರಮಣ, ಅತಿಕ್ರಮಣ.
ಒಣಮರವನ್ನು ಎಷ್ಟುಕಾಲ ಸಹಿಸೀತು ಜೀವಂತ ಮಣ್ಣು
ಮೂಲ ಕೃಷಿಕರ ಕರಸೇವೆಯಲ್ಲಿ ಸತ್ತ ಮರ ಕಿತ್ತುಬಿತ್ತು
ಮರದ ಬುಡದಲ್ಲಿ ಅಗೆದಷ್ಟೂ ಮೂಲ ಬೇರುಗಳ ತುಂಡುಗಳು
ಸಾವಿರ ಸಾವಿರ ವರುಷಗಳ ಜೀವಂತ ಸಾಕ್ಷಿ
ತೀರ್ಪು ಬರೆದವರೂ ಮತ್ತೆ ಮರ ಬೆಳೆಯಲಿ ಎಂದರು
ಮರದ ಮೂಲಕ್ಕೂ ವನವಾಸ ಕಳೆಯಿತು!
ಮಣ್ಣು ಹದವಾಯಿತು, ಸರಯೂ ನೀರೆರೆಯಿತು
ಬೀಜ ಮೊಳಕೆಯೊಡೆದು ಎರಡೇ ವರ್ಷದಲ್ಲಿ ಚಿಗುರಿ ಹಸಿರಾಗಿದೆ
ಉತ್ಸವದ ಉತ್ಸಾಹ ಮಣ್ಣಿನ ಮಕ್ಕಳಿಗೆ
ತೊಂಡು ದನಗಳು ಬಾಯಿಹಾಕುತ್ತವೆ, ಬೀದಿ ನಾಯಿಗಳು ಕಾಲೆತ್ತುತ್ತವೆ,
ಕತ್ತೆಗಳು ಮೈ ತಿಕ್ಕಲು ನುಗ್ಗುತ್ತವೆ. ಬೇಲಿ, ಕಾವಲು ಎಲ್ಲವೂ ಬೇಕೇ
ಆತಂಕ ಎಷ್ಟೇ ಇರಲಿ ಆತ್ಮವಿಶ್ವಾಸ ಬೆಳೆದಿದೆ
ಭಾರತದ ಮರ್ಯಾದೆಗೆ ಅಭಿಮಾನದ ಅಶ್ವತ್ಥ, ಇನ್ನುಮೇಲೆ ಹೊಸಬೆಳೆ