ಚಿತ್ರದುರ್ಗ: ಬುದ್ಧ, ಗಾಂಧಿ, ಬಸವಣ್ಣನರಿಗೆ ನೀಡಿದಂತಹ ಆದ್ಯತೆ ಅಂಬೇಡ್ಕರ್‌ರಿಗೂ ಸಲ್ಲಬೇಕು ಎಂದು ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನದ ಪೀಠಾಧ್ಯಕ್ಷ ಶಾಂತವೀರ ಮಹಾಸ್ವಾಮಿಜೀ ಹೇಳಿದರು.
ಅವರು ಚಿತ್ರದುರ್ಗದ ಮಾದಾರ ಚನ್ನಯ್ಯ ಮಠದ ಆವರಣದಲ್ಲಿ ಏಪ್ರಿಲ್ 9 ರಂದು ಡಾ|| ಬಾಬಾಸಾಹೇಬ್ ಅಂಬೇಡ್ಕರರ 125ನೇ ಜನ್ಮ ವರ್ಷದ ಅಂಗವಾಗಿ ಉತ್ಥಾನ ಮಾಸಪತ್ರಿಕೆ ಹೊರತಂದಿರುವ ವಿಶೇಷ ಸಂಚಿಕೆಯನ್ನು ಬಿಡುಗಡೆಮಾಡಿ ಮಾತನಾಡಿದರು.
ಭಾರತ ತನ್ನ ಸುದೀರ್ಘ ವರ್ಣಮಯ ಇತಿಹಾಸದಲ್ಲಿ ಕಂಡುಕೊಂಡ ಕೆಲವೇ ಮಹಾಮೇಧಾವಿಗಳಲ್ಲಿ ಡಾ|| ಬಿ.ಆರ್. ಅಂಬೇಡ್ಕರ್ ಒಬ್ಬರು. ಆದರೆ ನಮ್ಮ ಸಮಾಜ ಬುದ್ಧ, ಗಾಂಧಿ, ಬಸವಣ್ಣನರಿಗೆ ಕೊಟ್ಟಂತಹ ಆದ್ಯತೆಯನ್ನು ಅಂಬೇಡ್ಕರ್ ಅವರಿಗೆ ಕೊಡಲಿಲ್ಲ. ಅವರಿಗೆ ಆದ್ಯತೆ ಕೊಟ್ಟಿದ್ದರೆ ಇಲ್ಲಿನ ದಲಿತ ಸಮುದಾಯಗಳು ಎಲ್ಲರ ಜೊತೆಯಲ್ಲಿ ಇರಲು ಸಾಧ್ಯವಾಗುತ್ತಿತ್ತು. ಇಳಕಲ್ ಮಠದ ಮಹಾಂತಪ್ಪ ಸ್ವಾಮಿ ತಮ್ಮ ಬದುಕಿನ ಅವಧಿಯಲ್ಲಿಯೇ ದಲಿತರನ್ನು ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಿರುವುದು ಉಳಿದೆಲ್ಲ ಮಠಗಳಿಗೆ ಆದರ್ಶಪ್ರಾಯವಾಗಬೇಕಾಗಿದೆ. ನಾವೆಲ್ಲ ಭಾರತೀಯರು ಎಂಬ ಮಾತು ಹೃದಯದಲ್ಲಿ ಬಂದರೆ ಯಾವುದೇ ತೊಂದರೆ ಇರುವುದಿಲ್ಲ ಎಂದು ಶಾಂತವೀರ ಮಹಾಸ್ವಾಮಿಜೀ ಹೇಳಿದರು.
ಉತ್ಥಾನ ಮಾಸಪತ್ರಿಕೆ ಹೊರತಂದಿರುವ ವಿಶೇಷಾಂಕ ’ಡಾ|| ಬಾಬಾಸಾಹೇಬ ಅಂಬೇಡ್ಕರ್ ೧೨೫’ ವನ್ನು ಕುಂಚಿಟಿಗ ಮಹಾಸಂಸ್ಥಾನದ ಪೀಠಾಧ್ಯಕ್ಷ ಶಾಂತವೀರ ಮಹಾಸ್ವಾಮಿಜೀ, ಮದಾರ ಚನ್ನಯ್ಯ ಗುರಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ, ಭೋವಿ ಗುರುಪೀಠದ ಶ್ರೀಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಜೀ ಬಿಡುಗಡೆಗೊಳಿಸಿದರು. ಸಾಮರಸ್ಯ ವೇದಿಕೆ ರಾಜ್ಯ ಸಂಚಾಲಕ ವಾದಿರಾಜ್, ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ ಹೆಗಡೆ ಉಪಸ್ಥಿತರಿದ್ದರು.
ಭೋವಿ ಗುರುಪೀಠದ ಶ್ರೀಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಜೀ ಮಾತನಾಡಿ ಅಂಬೇಡ್ಕರ್ ವಿಚಾರಗಳು ಆಚರಣೆಗಳಿಗಿಂತ ವಿಮರ್ಶೆಗೆ ಹೆಚ್ಚು ತೆರೆದುಕೊಂಡಿವೆ. ಅವುಗಳು ಆಚರಣೆಗೆ ಬರಬೇಕಾಗಿದೆ. ಬಸವಣ್ಣನವರ ತತ್ತ್ವಗಳು ಆಧುನಿಕತೆಗೆ ಹೇಗೆ ಮುಖಾಮುಖಿ ಆಗಿವೆಯೋ ಅದೇ ರೀತಿ ಅಂಬೇಡ್ಕರ್ ತತ್ತ್ವಗಳು ಇಂದು ಸಮಾಜದಲ್ಲಿ ಮುಖಾಮುಖಿಯಾಗುತ್ತಿವೆ. ಮೀಸಲಾತಿ ವಿಷಯದಲ್ಲಿ ಅನಗತ್ಯವಾಗಿ ಪ್ರಶ್ನಿಸುವ ಜನ ಅಂಬೇಡ್ಕರ್ ತತ್ತ್ವಗಳನ್ನು ಬುಡಮೇಲು ಮಾಡಿದ್ದಾರೆ. ಕೆಲವು ಸಂಘಟನೆಗಳು ಮೂಲ ಸ್ವರೂಪವನ್ನು ಸರಿಯಾಗಿ ತಿಳಿಯದೆ ಸುಳ್ಳನ್ನು ಪದೇಪದೇ ಹೇಳಿ ಸತ್ಯವೆಂದು ನಂಬಿಸುವ ಪ್ರಯತ್ನ ನಡೆಸುತ್ತಿವೆ ಎಂದರು.
ಮಾದಾರ ಚನ್ನಯ್ಯ ಗುರಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿಜೀ ಅವರು ಮಾತನಾಡಿ. ಅಕ್ಷರ ಮತ್ತು ಜ್ಞಾನಕ್ಕೆ ಮತ್ತೊಂದು ಹೆಸರೇ ಅಂಬೇಡ್ಕರ್. ಸದೃಢ ಭಾರತ ನಿರ್ಮಾಣಕ್ಕೆ ಜಾತಿ ಅಸಮಾನತೆಯಂತಹ ವಿಚಾರಗಳನ್ನು ದೂರಮಾಡಬೇಕಾಗಿದೆ. ವಿದ್ಯೆ ಒಂದೇ ಧರ್ಮಕ್ಕೆ ಸೀಮಿತವಲ್ಲ. ಎಲ್ಲರಿಗೂ ಸಿಗಬೇಕು. ಅಂಬೇಡ್ಕರ್ ಜೀವಿತ ಕಾಲದಲ್ಲಿ ಇದ್ದಂತಹ ಜೀವನ ಚಿತ್ರ ಮತ್ತು ಧರ್ಮಾಂಧತೆ ವಿಚಾರಗಳು ಬೇರೆ ಬೇರೆಯಾಗಿದ್ದವು. ಹಾಗಾಗಿ ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದರು ಎಂದರು.
ಅಂಬೇಡ್ಕರ್‌ರ ಅನೇಕ ಮುಖಗಳ ಹೊಸ ವಿಷಯಗಳು ಉತ್ಥಾನ ಹೊರತಂದಿರುವ ಈ ಸಂಚಿಕೆಯಲ್ಲಿದೆ. ಇದೊಂದು ವಿಶಿಷ್ಟವಾದ ಪ್ರಯತ್ನ. ದಲಿತರ ನೋವುಗಳು, ಅಲೆಮಾರಿ ಸಮಸ್ಯೆ, ದೇವದಾಸಿ ಸಮಸ್ಯೆಗಳ ಕುರಿತು ಚರ್ಚೆ ಮಾಡಿರುವುದು ಸಮಯೋಚಿತವಾದುದು ಎಂದು ಮಾದಾರ ಚೆನ್ನಯ್ಯ ಸ್ವಾಮಿಜೀ ತಿಳಿಸಿದರು.
ವೇದಿಕೆಯಲ್ಲಿ ಸಾಮರಸ್ಯ ವೇದಿಕೆ ರಾಜ್ಯ ಸಂಚಾಲಕ ವಾದಿರಾಜ್, ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ ಹೆಗ್ಡೆ ಉಪಸ್ಥಿತರಿದ್ದರು.