ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
59ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > News > ‘ಉತ್ಥಾನ’ ಮಾಸಪತ್ರಿಕೆಯ ಸಂಪಾದಕ ಕಾಕುಂಜೆ ಕೇಶವ ಭಟ್ಟ ಅವರ ನಿಧನಕ್ಕೆ ಆರೆಸ್ಸೆಸ್ ಹಾಗೂ ಪರಿಷತ್ತಿನ ಪ್ರಮುಖರಿಂದ ಸಂತಾಪ

‘ಉತ್ಥಾನ’ ಮಾಸಪತ್ರಿಕೆಯ ಸಂಪಾದಕ ಕಾಕುಂಜೆ ಕೇಶವ ಭಟ್ಟ ಅವರ ನಿಧನಕ್ಕೆ ಆರೆಸ್ಸೆಸ್ ಹಾಗೂ ಪರಿಷತ್ತಿನ ಪ್ರಮುಖರಿಂದ ಸಂತಾಪ

ಉತ್ಥಾನ ಮಾಸಪತ್ರಿಕೆಯ ಸಂಪಾದಕರಾದ ಶ್ರೀ ಕಾಕುಂಜೆ ಕೇಶವ ಭಟ್ಟ (೬೬ ವರ್ಷ) ಅವರು ನಿನ್ನೆ ರಾತ್ರಿ (ಮೇ ೧) ೧೨.೧೫ಕ್ಕೆ ಬೆಂಗಳೂರಿನಲ್ಲಿ ನಿಧನರಾದರು.

ಕಳೆದ ೯ ವರ್ಷಗಳಿಂದ ರಾಷ್ಟ್ರೋತ್ಥಾನ ಪರಿಷತ್ ಪ್ರಕಾಶಿಸುತ್ತಿರುವ ’ಉತ್ಥಾನ’ ಮಾಸಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದ ಕಾಕುಂಜೆ ಕೇಶವ ಭಟ್ಟ ಅವರು ಮೂಲತಃ ಗಡಿನಾಡು ಕಾಸರಗೂಡಿನ ನೀರ್ಚಾಲು ಗ್ರಾಮದ ಕಾಕುಂಜೆಯವರು. ಖ್ಯಾತ ಸಂಸ್ಕೃತ ವಿದ್ವಾಂಸ, ಮೀಮಾಂಸಾ ಶಿರೋಮಣಿ, ವಿದ್ವಾನ್ ಕಾಕುಂಜೆ ಕೃಷ್ಣ ಭಟ್ಟ ಹಾಗೂ ಸಾವಿತ್ರೀ ಅಮ್ಮ ಅವರ ಐದನೇ ಮಗನಾಗಿ ಆಗಸ್ಟ್ ೧೪, ೧೯೫೫ ರಂದು ಕೇಶವ ಭಟ್ ಅವರು ಜನಿಸಿದರು. ನೀರ್ಚಾಲಿನ ಎಂ.ಎಸ್.ಸಿ ಹೈಸ್ಕೂಲ್‌ನಲ್ಲಿ, ಉಡುಪಿಯ ಎಂ.ಜಿ.ಎಂ ಕಾಲೇಜ್ ಹಾಗೂ ಮಣಿಪಾಲದ ಕೆ.ಎಂ.ಸಿ. ಫಾರ್ಮಸಿ ಕಾಲೇಜಿನಲ್ಲಿ ತಮ್ಮ ಶಿಕ್ಷಣ ಪೂರೈಸಿದರು.

ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿದ್ದ ಅವರು ೧೯೮೩ರಲ್ಲಿ ಮಾನನೀಯ ಅಜಿತ್ ಕುಮಾರ್ ಅವರ ಪ್ರೇರಣೆಯಿಂದ ಯೋಗ ತರಬೇತಿ ಪ್ರಾರಂಭಿಸಿದರು. ಪದ್ಮಭೂಷಣ ಡಾ. ಬಿ.ಕೆ.ಎಸ್. ಅಯ್ಯಂಗಾರ್ ಅವರ ಬಳಿ ಯೋಗ ತರಬೇತಿ ಪಡೆದರು. ಕೆಲಕಾಲ ಹಿಂದೂ ಸೇವಾ ಪ್ರತಿಷ್ಠಾನದ ಸೇವಾವೃತ್ತಿಯಾಗಿಯೂ (ಪೂರ್ಣಾವಧಿ ಕಾರ್ಯಕರ್ತರಾಗಿಯೂ) ಕಾರ್ಯನಿರ್ವಹಿಸಿದ್ದರು. ೧೯೮೩ರಿಂದ ಐದು ವರ್ಷಗಳ ಕಾಲ ರಾಷ್ಟ್ರೋತ್ಥಾನ ಸಾಹಿತ್ಯದ ಸಂಪಾದಕೀಯ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದರು.

ಅನುಭವೀ ಯೋಗ ಶಿಕ್ಷಕರಾಗಿದ್ದ ಅವರು ತದನಂತರ ಯೋಗ ಪ್ರಸಾರ ಮಾಡುವ ಉದ್ದೇಶದಿಂದ ತುಮಕೂರಿನಲ್ಲಿ ತುಮಕೂರು ಯೋಗ ಶಿಕ್ಷಣ ಸಮಿತಿ ಮತ್ತು ಬೆಂಗಳೂರಿನಲ್ಲಿ ಶ್ರೀ ಯೋಗ ಭಾರತೀ ಅಷ್ಟಾಂಗ ಯೋಗ ಶಿಕ್ಷಾ ಕೇಂದ್ರ ಪ್ರಾರಂಭಿಸಿ ಹಲವು ದಶಕಗಳ ಕಾಲ ಸಾವಿರಾರು ಮಂದಿಗೆ ಯೋಗ ತರಬೇತಿ ನೀಡಿದ್ದಾರೆ.

೨೦೧೨ ರಿಂದ ಉತ್ಥಾನ ಮಾಸಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಸಂಪಾದಕತ್ವದಲ್ಲಿ ಉತ್ಥಾನ ಹೊರತಂದ ಅಂಬೇಡ್ಕರ್-೧೫೦, ಜಲಸಂರಕ್ಷಣೆ, ಎಸ್.ಎಲ್. ಭೈರಪ್ಪ ಅವರ ಕುರಿತ ವಿಶೇಷ ಸಂಚಿಕೆಗಳು ಅಪಾರ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಸ್ವತಃ ಲೇಖಕರೂ ಆಗಿರುವ ಅವರು ಒತ್ತಡಕ್ಕೆ ವಿದಾಯ, ಗುಡ್ ಬೈ ಅಸ್ತ್ಮ, ಬದುಕು ಸವಿಯೋಣ, ಆರೋಗ್ಯಕರವಾಗಿ ಬೊಜ್ಜು ಕರಗಿಸುವುದು ಹೇಗೆ, ಸೂರ್ಯನಮಸ್ಕಾರ ಸೇರಿದಂತೆ ೧೦ಕ್ಕೂ ಅಧಿಕ ಪುಸ್ತಕಗಳನ್ನು ಬರೆದಿದ್ದಾರೆ.

ಕಾಕುಂಜೆ ಕೇಶವ ಭಟ್ಟ ಅವರ ನಿಧನಕ್ಕೆ ಆರೆಸ್ಸೆಸ್‌ನ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಚಾಲಕರಾದ ವಿ. ನಾಗರಾಜ್,  ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ, ಉಪಮುಖ್ಯಮಂತ್ರಿಗಳಾದ ಅಶ್ವತ್ಥ್ ನಾರಾಯಣ, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ