ಇದೀಗ ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆಯಾಗಿರುವ ಫುಟ್ಬಾಲ್ ರಂಗಕ್ಕೂ ಭ್ರಷ್ಟಾಚಾರದ ಕಳಂಕ ಅಂಟಿಕೊಂಡಿರುವುದು ಅತ್ಯಂತ ಕಳವಳಕಾರಿ ಸಂಗತಿ.
ಭ್ರಷ್ಟಾಚಾರ ಎಂಬ ಅನಿಷ್ಟ ಅಂಟದ ಕ್ಷೇತ್ರವೇ ಇಲ್ಲ ಎನ್ನಬಹುದು. ಸಿನಿಮಾ, ರಾಜಕೀಯ, ಸಾಹಿತ್ಯ, ಕಲೆ, ಸಂಗೀತ, ಶಿಕ್ಷಣ, ವಿಜ್ಞಾನ, ಆಡಳಿತ….. ಮೊದಲಾದ ಕ್ಷೇತ್ರಗಳಲ್ಲಿ ಭ್ರಷ್ಟಾಚಾರದ ಕಬಂಧಬಾಹುಗಳು ಆಳಕ್ಕಿಳಿದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಯುವಜನಾಂಗದ ಶಕ್ತಿ, ಸಾಹಸ, ಕೌಶಲಗಳಿಗೆ ನೀರೆರೆಯುವ ಕ್ರೀಡಾಕ್ಷೇತ್ರಕ್ಕೂ ಭ್ರಷ್ಟಾಚಾರದ ಈ ಅನಿಷ್ಟ ಅಂಟಿಕೊಂಡಿರುವುದು ಹೊಸ ಸಂಗತಿ ಅಲ್ಲವಾದರೂ ಅದು ಈ ಪರಿಯ ಪ್ರಮಾಣದಲ್ಲಿ ಆವರಿಸಿಕೊಂಡಿದೆ ಎಂಬುದು ಗೊತ್ತಾಗಿದ್ದು ಇತ್ತೀಚೆಗೆ. ಜಾಗತಿಕ ಫುಟ್ಬಾಲ್ ಸಂಸ್ಥೆ ಫಿಫಾ (ಫೆಡರೇಷನ್ ಡೀ ಇಂಟರ್ ನ್ಯಾಷನಲ್ ಫುಟ್ಬಾಲ್ ಅಸೋಸಿಯೇಷನ್) ಇದೀಗ ವ್ಯಾಪಕ ಭ್ರಷ್ಟಾಚಾರ ಮತ್ತು ಲಂಚ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಆಘಾತಕಾರಿ ವಿದ್ಯಮಾನ ಇದಕ್ಕೆ ನಿದರ್ಶನ.
ಭಾರತದ ಕ್ರಿಕೆಟ್ ರಂಗದಲ್ಲಿ ಮ್ಯಾಚ್ಫಿಕ್ಸಿಂಗ್, ಬೆಟ್ಟಿಂಗ್, ಸ್ಪಾಟ್ಫಿಕ್ಸಿಂಗ್ ಮುಂತಾದ ಅಪಸವ್ಯಗಳ ಮೂಲಕ ಕ್ರಿಕೆಟ್ಲೋಕದಲ್ಲಿ ಭ್ರಷ್ಟಾಚಾರದ ಹಗರಣಗಳು ತೆರೆದುಕೊಂಡಿದ್ದು ಎಲ್ಲರಿಗೂ ನೆನಪಿದೆ. ಕ್ರಿಕೆಟ್ ಪಂದ್ಯ ನಡೆಯುತ್ತಿರುವಾಗ ಕಣ್ಣಿಗೆ ಎಣ್ಣೆ ಹಾಕಿಕೊಂಡು ಯಾರು ಗೆಲ್ಲುತ್ತಾರೋ, ಯಾರು ಸೋಲುತ್ತಾರೋ ಎಂಬ ಆತಂಕವನ್ನು ಮೈಮೇಲೆಳೆದುಕೊಂಡು ಆಟ ವೀಕ್ಷಿಸುವ ಅಭಿಮಾನಿಗಳಿಗೆ ಆ ಪಂದ್ಯದಲ್ಲಿ ಯಾರು ಗೆಲ್ಲಬೇಕೆಂಬುದು ಮೊದಲೇ `ಫಿಕ್ಸ್’ ಆಗಿರುತ್ತದೆ ಎನ್ನುವುದು ತಿಳಿದೇ ಇರುವುದಿಲ್ಲ. ಅಂತಹ ಮುಗ್ಧ, ಪ್ರಾಮಾಣಿಕ ವೀಕ್ಷಕರು ಅವರು. ಈ ಬಾರಿ ನಡೆದ ಐಪಿಎಲ್ನ ಕೆಲವು ಪಂದ್ಯಗಳು ಕೂಡ `ಫಿಕ್ಸ್’ ಆಗಿತ್ತು ಎಂದು ಸುದ್ದಿ.
ಬರೋಬ್ಬರಿ ೯೮೦ ಕೋಟಿ ಹಗರಣ !
ಬಂಧನದಲ್ಲಿ ಫಿಫಾದ ಉಪಾಧ್ಯಕ್ಷ ಯುಜಿನಿಯೋ ಫಿಗರೆಡೋ
ಇದೀಗ ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆಯಾಗಿರುವ ಫುಟ್ಬಾಲ್ ರಂಗಕ್ಕೂ ಭ್ರಷ್ಟಾಚಾರದ ಕಳಂಕ ಅಂಟಿಕೊಂಡಿರುವುದು ಅತ್ಯಂತ ಕಳವಳಕಾರಿ ಸಂಗತಿ. ಇಡೀ ಜಗತ್ತಿನ ಫುಟ್ಬಾಲ್ ಚಟುವಟಿಕೆಗಳೆಲ್ಲವನ್ನೂ ನಿಯಂತ್ರಿಸುವ ಫಿಫಾದ ೭ ಉನ್ನತಾಧಿಕಾರಿಗಳನ್ನು ಮೇ ೨೭ರಂದು ಸ್ವಿಜರ್ಲೆಂಡ್ನ ಜ್ಯೂರಿಚ್ನಲ್ಲಿ ದಾಳಿ ನಡೆಸಿ ಬಂಧಿಸಲಾಗಿದೆ. ಈ ದಾಳಿಯ ಸಣ್ಣ ಕುರುಹು ಕೂಡ ಫಿಫಾ ಅಧಿಕಾರಿಗಳಿಗೆ ಸಿಕ್ಕಿರಲಿಲ್ಲ. ಫಿಫಾದಲ್ಲಿ ನಡೆದಿದ್ದು ಅಷ್ಟಿಷ್ಟಲ್ಲ, ಬರೋಬ್ಬರಿ ೯೮೦ ಕೋಟಿ ರೂ.ಗಳ ಭಾರೀ ಮೊತ್ತದ ಅವ್ಯವಹಾರ. ಇದು ನಡೆದದ್ದು ಈಗಲ್ಲ. ಕಳೆದ ೨೦ ವರ್ಷಗಳಿಂದ ಫಿಫಾದ ಆಡಳಿತ ಮಂಡಳಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿತ್ತು. ಅಮೆರಿಕದ ಕಾನೂನು ಸಚಿವಾಲಯದ ಮನವಿ ಅನ್ವಯ ಸ್ವಿಜರ್ಲೆಂಡ್ನಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತ ೭ ಅಧಿಕಾರಿಗಳ ಬಂಧನವಾಗಿದೆ. ಅಮೆರಿಕದ ಕಾನೂನು ಸಚಿವಾಲಯ ಒಟ್ಟು ೧೪ ಮಂದಿಯ ಮೇಲೆ ಪಿತೂರಿ, ಭ್ರಷ್ಟಾಚಾರ, ಲಂಚದ ಆರೋಪಗಳನ್ನು ಹೊರಿಸಿದೆ. ಇದರಲ್ಲಿ ೪ ವ್ಯಕ್ತಿಗಳು ಮತ್ತು ೨ ಕಂಪೆನಿಗಳನ್ನು ತಪ್ಪಿತಸ್ಥರೆಂದು ಈಗಾಗಲೇ ಘೋಷಿಸಲಾಗಿದೆ. ಫಿಫಾದ ಉಪಾಧ್ಯಕ್ಷ ಯುಜಿನಿಯೋ ಫಿಗರೆಡೋ ಸೇರಿದಂತೆ ೭ ಮಂದಿಯ ಬಂಧನವಾಗಿದ್ದರೂ ಕಳೆದ ೧೭ ವರ್ಷಗಳಿಂದ ಫಿಫಾ ಅಧ್ಯಕ್ಷರಾಗಿರುವ ಸೆಪ್ ಬ್ಲಾಟರ್ ಅವರ ಬಂಧನವಾಗಿಲ್ಲ ಎನ್ನುವುದು ವಿಶೇಷ. ಬ್ಲಾಟರ್ ಅಧ್ಯಕ್ಷರಾಗಿರುವ ಅವಧಿಯಲ್ಲಿ ಹಲವಾರು ವಿವಾದಗಳು ಸಂಸ್ಥೆಯನ್ನು ಸುತ್ತಿಕೊಂಡಿವೆ. ಆದರೆ ಬ್ಲಾಟರ್ ಅವೆಲ್ಲವನ್ನೂ ಮೀರಿ ಬೆಳೆದಿದ್ದಾರೆ. ಈ ಬಾರಿಯ ವಿವಾದ ಮಾತ್ರ ಅವರ ಅಧ್ಯಕ್ಷ ಸ್ಥಾನಕ್ಕೆ ಕುತ್ತು ತರುವ ಹಂತ ತಲಪಿದೆ.
ಬ್ಲಾಟರ್ ಅಧಿಕಾರಾವಧಿಯಲ್ಲಿ ಒಟ್ಟು ೧೦ ವಿವಾದಗಳು ತಲೆದೋರಿದವು. ಬ್ಲಾಟರ್ ಮೊದಲು ಫಿಫಾ ಅಧ್ಯಕ್ಷರಾಗಿದ್ದು ೧೯೯೮ರಲ್ಲಿ. ಇದು ಫ್ರಾನ್ಸ್ ವಿಶ್ವಕಪ್ ಜರುಗುವುದಕ್ಕೆ ಮುನ್ನ ನಡೆದ ಚುನಾವಣೆ. ಬ್ಲಾಟರ್ ಆಗ ಪ್ಯಾರಿಸ್ನ ಹೋಟೆಲ್ನಲ್ಲಿ ತಂಗಿದ್ದ ಆಫ್ರಿಕ ನಿಯೋಗದ ಪ್ರತಿಯೊಬ್ಬ ಸದಸ್ಯರಿಗೂ ತಲಾ ೩೧ ಲಕ್ಷ ರೂ. ನೀಡಿದ್ದರೆಂದು ಆರೋಪ. ಆದರೆ ಈ ಆರೋಪವನ್ನು ಬ್ಲಾಟರ್ ತಳ್ಳಿಹಾಕಿದ್ದರು. ೨೦೦೬ರಲ್ಲಿ ಫಿಫಾ ಉಪಾಧ್ಯಕ್ಷ ಜಾಕ್ ವಾರ್ನರ್ ಸಂಸ್ಥೆಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾಗಿ ನೇಮಕವಾದಾಗ, ಅವರು ೫.೭೪ ಕೋಟಿ ಕಮಿಷನ್ ಪಡೆದಿದ್ದರೆಂಬ ಆರೋಪ ಕೇಳಿಬಂದಿತ್ತು. ಆದರೆ ವಾರ್ನರ್ ಮಗ ಹಣ ಪಡೆದಿರುವುದು ಸಾಬೀತಾಯಿತೇ ವಿನಾ ಉಳಿದವರು ಈ ಪ್ರಕರಣದಲ್ಲಿ ಸಿಕ್ಕಿ ಬೀಳಲಿಲ್ಲ. ೨೦೧೮ ಮತ್ತು ೨೦೨೨ರ ವಿಶ್ವಕಪ್ ಅತಿಥ್ಯವನ್ನು ರಷ್ಯಾ ಹಾಗೂ ಖತಾರ್ಗೆ ನೀಡುವಾಗ ಸಾಕಷ್ಟು ಲಂಚ ಪಡೆಯಲಾಗಿದೆ ಎಂಬ ಆರೋಪ ಮಾಧ್ಯಮಗಳಲ್ಲಿ ಪ್ರಸಾರಗೊಂಡಿತ್ತು. ಈ ವಿವಾದ ಈಗಲೂ ಜೀವಂತ. ಫಿಫಾ ಅಧ್ಯಕ್ಷ ಸ್ಥಾನಕ್ಕಾಗಿ ೨೦೧೧ರಲ್ಲಿ ಖತಾರ್ನ ಮೊಹಮ್ಮದ್ ಹಾಲಿ ಅಧ್ಯಕ್ಷ ಬ್ಲಾಟರ್ ವಿರುದ್ಧ ತಿರುಗಿ ನಿಂತರು. ಇದೇ ವೇಳೆ ಕೆರೆಬಿಯನ್ ಅಧಿಕಾರಿಗಳು ಲಂಚ ಸ್ವೀಕರಿಸಿದ್ದಾರೆಂಬ ಆರೋಪ ಕೇಳಿಬಂದಿತ್ತು. ಅಮೆರಿಕ, ಕೆರೆಬಿಯನ್ ಸದಸ್ಯರಾಷ್ಟ್ರಗಳಿಂದ ಮತ ಪಡೆಯುವುದಕ್ಕಾಗಿ ಅಲ್ಲಿಯ ಫುಟ್ಬಾಲ್ ಸಂಸ್ಥೆಗಳಿಗೆ ಫಿಫಾದಿಂದ ತಲಾ ೧೦ ಲಕ್ಷ ಡಾಲರ್ ಹಣ ನೀಡುವುದಾಗಿ ಬ್ಲಾಟರ್ ಘೋಷಿಸಿದ್ದರು. ಇದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ೨೦೧೪ರಲ್ಲಿ ಬ್ರೆಜಿಲ್ನಲ್ಲಿ ನಡೆದ ವಿಶ್ವಕಪ್ ವೇಳೆ ಪಂದ್ಯಗಳ ಟಿಕೆಟ್ಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿತ್ತು ಎಂಬ ಆರೋಪವಿದ್ದರೂ ಅದರಿಂದ ಬ್ಲಾಟರ್ ಮುಕ್ತಿ ಪಡೆದಿದ್ದರು. ೨೦೧೦ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಫಿಫಾ ವಿಶ್ವಕಪ್ ಅತಿಥ್ಯ ಪಡೆದುಕೊಳ್ಳಲು ೬೩ ಕೋಟಿ ರೂ. ಲಂಚ ನೀಡಲಾಗಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಹೀಗೆ ಬ್ಲಾಟರ್ ಅಧ್ಯಕ್ಷರಾದ ೧೭ ವರ್ಷಗಳ ಉದ್ದಕ್ಕೂ ಒಂದಿಲ್ಲೊಂದು ಭ್ರಷ್ಟಾಚಾರದ ವಿವಾದದ ಹುತ್ತ ಅವರ ಸುತ್ತ ಬೆಳೆದು ನಿಂತಿದೆ. ಆ ಎಲ್ಲ ವಿವಾದದ ಹುತ್ತವನ್ನು ಬ್ಲಾಟರ್ ಲಂಚದ ಮೂಲಕವೇ ಕುಟ್ಟಿ ಪುಡಿಮಾಡಿದ್ದರು. ಈಗ ಮಾತ್ರ ಅವರ ಕೈ ಕಟ್ಟಿಹಾಕಿದಂತಾಗಿದೆ.
ವಿಶ್ವದ ಅತ್ಯಂತ ಪ್ರತಿಷ್ಠಿತ ಕ್ರೀಡಾ ಸಂಸ್ಥೆಯಾಗಿರುವ ಫಿಫಾದ ಒಟ್ಟು ಆಸ್ತಿಯ ಮೌಲ್ಯವೇ ೧೫೦ ಕೋಟಿ ಡಾಲರ್ (೯೦ ಸಾವಿರ ಕೋಟಿ ರೂ.). ಪ್ರತಿ ೪ ವರ್ಷಗಳಿಗೊಮ್ಮೆ ಇದರ ಅಧೀನದಲ್ಲಿ ವಿಶ್ವಕಪ್ ಫುಟ್ಬಾಲ್ ಹಬ್ಬ ನಡೆಯುತ್ತದೆ. ಒಟ್ಟು ೨೦೯ ಫುಟ್ಬಾಲ್ ತಂಡಗಳ ನಿರ್ವಹಣೆ ಫಿಫಾದ ನಿಯಂತ್ರಣದಲ್ಲಿದೆ. ವಿಶ್ವಕಪ್ ಬಿಡ್ ಸಲ್ಲಿಕೆ ಪ್ರಕ್ರಿಯೆ, ಮಾರುಕಟ್ಟೆ, ನೇರ ಪ್ರಸಾರ ಹಕ್ಕು ವಿತರಣೆ ಇತ್ಯಾದಿಗಳಲ್ಲಿ ಫಿಫಾ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿದ್ದಾರೆಂದು ಅಮೆರಿಕದ ನ್ಯೂಯಾರ್ಕ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ. ಅಮೆರಿಕ ಮತ್ತು ದಕ್ಷಿಣ ಅಮೆರಿಕದ ಕೆಲವು ಕ್ರೀಡಾ ಮಾರುಕಟ್ಟೆ ಅಧಿಕಾರಿಗಳು ಕೋಟ್ಯಂತರ ರೂ. ಲಂಚ ನೀಡಿ ಫುಟ್ಬಾಲ್ನ ಮಾರುಕಟ್ಟೆ ಪ್ರಚಾರ ಮತ್ತು ಮಾಧ್ಯಮ ಹಕ್ಕನ್ನು ಪಡೆದುಕೊಂಡಿದ್ದಾರೆಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ. ಈ ಆರೋಪಗಳೆಲ್ಲವೂ ಸಾಬೀತಾದರೆ ಬಂಧಿತರಿಗೆ ಅಮೆರಿಕದಲ್ಲಿ ಗರಿಷ್ಠ ೨೦ ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ.
೨೦೧೫ರ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ, ಮತದಾನಕ್ಕೆ ಮುಂಚೆ ಸದಸ್ಯರೊಬ್ಬರಿಗೆ ಪರಿಚಯಪತ್ರ ನೀಡುತ್ತಿರುವ ಸೆಪ್ ಬ್ಲಾಟರ್
ಅಷ್ಟಕ್ಕೂ ಫಿಫಾ ಅಧಿಕಾರಿಗಳನ್ನು ಬಂಧಿಸಲು ಅಮೆರಿಕಕ್ಕೇನು ಅಧಿಕಾರ? ಅಂತಾರಾಷ್ಟ್ರೀಯ ಮಹತ್ತ್ವ ಪಡೆದಿರುವ ಪ್ರಕರಣಗಳಲ್ಲಿ ವಿದೇಶೀಯರ ಮೇಲೂ ಮೊಕದ್ದಮೆ ದಾಖಲಿಸಲು ಅಮೆರಿಕ ಕಾನೂನು ಅಲ್ಲಿನ ಕಾನೂನು ಸಚಿವಾಲಯಕ್ಕೆ ಅಧಿಕಾರ ನೀಡಿದೆ. ಆರೋಪಿಗಳು ಅಮೆರಿಕಕ್ಕೆ ಯಾವುದೇ ರೀತಿಯಲ್ಲಿ ಸಂಬಂಧಪಟ್ಟಿದ್ದರೂ ಅದು ಮೊಕದ್ದಮೆ ದಾಖಲಿಸಬಹುದು. ಉದಾಹರಣೆಗೆ, ವ್ಯಕ್ತಿಯೊಬ್ಬ ಅಮೆರಿಕದ ಬ್ಯಾಂಕ್ನಲ್ಲಿ ಖಾತೆ ಹೊಂದಿದ್ದರೆ, ಅಮೆರಿಕ ಮೂಲದ ಕಂಪೆನಿಯ ಇಂಟರ್ನೆಟ್ ಸೇವೆ ಪಡೆಯುತ್ತಿದ್ದರೆ ಪ್ರಕರಣ ದಾಖಲಿಸಬಹುದು.
ಅಂದ ಹಾಗೆ, ಫಿಫಾದಲ್ಲಿ ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗಿರುವವರೆಲ್ಲ ೭೦ ವರ್ಷ ದಾಟಿದವರೇ. ಒಂದಿಬ್ಬರಂತೂ ೮೦ರ ಇಳಿವಯಸ್ಸಿನಲ್ಲಿದ್ದಾರೆ! ಫಿಫಾ ಅಧ್ಯಕ್ಷ ಬ್ಲಾಟರ್ಗೂ ಇದೀಗ ೭೯ ವರ್ಷ. ಈ ಇಳಿವಯಸ್ಸಿನಲ್ಲೂ ಇವರೆಲ್ಲ ಕಾಸುಮಾಡುವ ಕೆಟ್ಟ ಚಟಕ್ಕೆ ಬಿದ್ದಿದ್ದಾರೆಂದರೆ ಏನಾಶ್ಚರ್ಯ! ಭ್ರಷ್ಟಾಚಾರದ ಅಪಸವ್ಯಕ್ಕೆ ವಯಸ್ಸಿನ ಮಿತಿಯಿಲ್ಲ ಎಂಬುದು ಇದರಿಂದ ವೇದ್ಯ.
ಫುಟ್ಬಾಲ್ನ ದಂತಕಥೆಯಾಗಿರುವ ಅರ್ಜೆಂಟೀನ ಫುಟ್ಬಾಲ್ ತಂಡದ ಮಾಜಿ ನಾಯಕ ಡಿಗೊ ಮರಡೋನ ಫಿಫಾ ಅಧಿಕಾರಿಗಳ ಬಂಧನಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಮುಂದಿನ ಬಂಧನ ಅಧ್ಯಕ್ಷ ಬ್ಲಾಟರ್ ಅವರದ್ದು ಎಂದೂ ಎಚ್ಚರಿಸಿದ್ದಾರೆ. ಅಮೆರಿಕ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಗ್ರೇಗ್ಡೈಕ್ ಕೂಡ `ಬ್ಲಾಟರ್ ಫಿಫಾ ಅಧ್ಯಕ್ಷ ಸ್ಥಾನ ತ್ಯಜಿಸಬೇಕು’ ಎಂದು ಆಗ್ರಹಿಸಿದ್ದಾರೆ. ಇಂತಹದೇ ಆಗ್ರಹ ಇನ್ನೂ ಕೆಲವು ದೇಶಗಳಿಂದ ಕೇಳಿಬಂದಿದೆ. ಈ ನಡುವೆ ಫಿಫಾ ಪ್ರಾಯೋಜಕ ಕಂಪೆನಿಗಳಾದ ಕೋಕಾ ಕೋಲಾ, ಅಡಿಡಾಸ್, ವೀಸಾಗಳು ಫಿಫಾ ಮೇಲೆ ಒತ್ತಡ ಹೇರಲು ಶುರು ಮಾಡಿವೆ. ಫಿಫಾಕ್ಕೆ ಸುರಿದಿರುವ ಹಣ ಹಿಂತೆಗೆದುಕೊಳ್ಳುವುದಾಗಿ ಬೆದರಿಕೆಯೊಡ್ಡಿವೆ.
ಬ್ಲಾಟರ್ ಪುನರಾಯ್ಕೆ ಮತ್ತು ರಾಜೀನಾಮೆ
ಈ ಎಲ್ಲ ವಿವಾದಗಳ ನಡುವೆ ನಡೆದ ಫಿಫಾ ಅಧ್ಯಕ್ಷಸ್ಥಾನದ ಚುನಾವಣೆಯಲ್ಲಿ ಸೆಪ್ ಬ್ಲಾಟರ್ ಪುನರಾಯ್ಕೆಯಾಗಿದ್ದಾರೆ. ೭೯ ವರ್ಷದ ಬ್ಲಾಟರ್ ಅಧ್ಯಕ್ಷರಾಗಿದ್ದು ಇದು ೫ನೇ ಬಾರಿ. ಮೊದಲ ಸುತ್ತಿನ ಮತದಾನದಲ್ಲಿ ಬ್ಲಾಟರ್ ಪಡೆದಿದ್ದು ೧೩೩ ಮತ. ಆದರೆ ಬಹುಮತ ಗಳಿಸಲು ೧೪೦ ಮತಗಳು ಬೇಕಿದ್ದವು. ಎರಡನೇ ಸುತ್ತು ಆರಂಭವಾಗಲು ಕೆಲ ನಿಮಿಷಗಳಷ್ಟೇ ಬಾಕಿ ಇದ್ದಾಗ ಎದುರಾಳಿ ಅಲಿ ಅಲ್ಹುಸೇನ್ ಸ್ಪರ್ಧೆಯಿಂದ ಹಿಂದೆ ಸರಿದರು. ಇದರಿಂದ ಬ್ಲಾಟರ್ ಹಾದಿ ಸುಗಮವಾಯಿತು. ೭೯ ವರ್ಷದ ಬ್ಲಾಟರ್ ವಿರುದ್ಧ ಸ್ಪರ್ಧಿಸಿದ ಅಲಿ ಹುಸೇನ್ ಅವರ ವಯಸ್ಸು ೩೯! ಏಷ್ಯಾ ರಾಷ್ಟ್ರಗಳಲ್ಲಿನ ಫುಟ್ಬಾಲ್ ಸಂಸ್ಥೆಗಳು ಹಾಗೂ ಇತರ ಸಣ್ಣಪುಟ್ಟ ದೇಶಗಳ ಫುಟ್ಬಾಲ್ ಸಂಸ್ಥೆಗಳು ಬ್ಲಾಟರ್ ಬೆನ್ನಿಗೆ ನಿಂತಿz ಅವರ ಗೆಲವಿಗೆ ಕಾರಣ. ಗೆದ್ದ ಬಳಿಕ ಬ್ಲಾಟರ್ ‘ನನ್ನ ಮೇಲೆ ನಂಬಿಕೆ ಇಡಿ. ಫುಟ್ಬಾಲ್ ರಂಗವನ್ನು ಇನ್ನಷ್ಟು ಅಭಿವೃದ್ಧಿ ಮಾಡುತ್ತೇನೆ’ ಎಂದಿದ್ದಾರೆ.
ಫಿಫಾ ಅಧ್ಯಕ್ಷರಾಗಿ ಐದನೇ ಬಾರಿಗೆ ಆಯ್ಕೆಯಾದ ಬಳಿಕ ಬ್ಲಾಟರ್ ಇದು ತಮ್ಮ ಕೊನೆಯ ಅವಧಿ. ಇನ್ನು ಚುನಾವಣೆಗೆ ನಿಲ್ಲುವುದಿಲ್ಲ ಎಂದಿದ್ದರು; ಆದರೆ, ಆಯ್ಕೆಯಾದಷ್ಟೇ ವೇಗದಲ್ಲಿ ಇದೀಗ ಅವರು ರಾಜೀನಾಮೆ ನೀಡಿದ್ದಾರೆ. ಅಧ್ಯಕ್ಷರಾಗಿ ಆಯ್ಕೆಯಾದ ಮೇಲೂ ಭ್ರಷ್ಟಾಚಾರದ ಭೂತ ಅವರ ಬೆನ್ನು ಬಿಟ್ಟ್ಟಿರಲಿಲ್ಲ. ಜಾಗತಿಕ ಮಟ್ಟದಲ್ಲಿ ಹಲವಾರು ದೇಶಗಳ ಫುಟ್ಬಾಲ್ ಸಂಸ್ಥೆಗಳಲ್ಲಿನ ಕೋಟಿಗಟ್ಟಲೆ ಹಣಕಾಸು ಅವ್ಯವಹಾರ ಹಗರಣಗಳಿಗೆ ಅವರ ಕುಮ್ಮಕ್ಕಿತ್ತು ಎಂಬ ಆರೋಪ ಜೋರಾಗಿ ಕೇಳಿಬಂದಿತ್ತು. ಅಲ್ಲದೇ, ಬ್ಲಾಟರ್ ಅವರ ಆಪ್ತರಾದ ಕೆಲವು ಫಿಫಾ ಅಧಿಕಾರಿಗಳ ಕೊರಳಿಗೆ ಹಗರಣಗಳ ಹಾರ ಸುತ್ತಿಕೊಂಡಿತ್ತು. ಇವೆಲ್ಲ ಅವರಿಗೆ ನುಂಗಲಾರದ ಬಿಸಿತುತ್ತಾಗಿ ಪರಿಣಮಿಸಿದ್ದೇ ರಾಜೀನಾಮೆಗೆ ಕಾರಣ. ಜೊತೆಗೆ ಜಾಗತಿಕ ಮಟ್ಟದಲ್ಲಿ ಫಿಫಾ ಎರಡು ಹೊಳಾಗುವ ಸಾಧ್ಯತೆಯೂ ಹೆಚ್ಚಿತ್ತು. ಫುಟ್ಬಾಲ್ ಕ್ರೀಡೆಯನ್ನು ದೇವರಂತೆ ಆರಾಧಿಸುವ ಅಮೆರಿಕ ಹಾಗೂ ಯೂರೋಪ್ ರಾಷ್ಟ್ರಗಳನ್ನು ಎದುರುಹಾಕಿಕೊಂಡು ಫಿಫಾ ನಡೆಸುವುದು ಸುಲಭವಾಗಿರಲಿಲ್ಲ. ಹೀಗಾಗಿ ಬ್ಲಾಟರ್ ರಾಜೀನಾಮೆ ಸಲ್ಲಿಸಿದ್ದಾರೆ.
ವಾರ್ನರ್ ಪಾರ್ಟಿ
ಸ್ವಿಜರ್ಲೆಂಡ್ನಲ್ಲಿ ಬಂಧಿತರಾಗಿ ಜೈಲು ಸೇರಿದ್ದ ಫಿಫಾ ಉಪಾಧ್ಯಕ್ಷ ಜಾಕ್ ವಾರ್ನರ್ ತನಗೆ ವಿಪರೀತ ಅನಾರೋಗ್ಯ ಇದೆ ಎಂದು ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಆದರೆ ಬಿಡುಗಡೆಯಾದ ಕೆಲವೇ ಘಂಟೆಗಳ ಅಂತರದಲ್ಲಿ ರಾಜಕೀಯ ಕಾರ್ಯಕ್ರಮವೊಂದರಲ್ಲಿ ಕಾಣಸಿಕೊಂಡು, ಕುಡಿದು ಪಾರ್ಟಿ ಮಾಡಿದರು. ಇದು ನ್ಯಾಯಾಲಯವನ್ನು ಇನ್ನಷ್ಟು ಕೆರಳಿಸಿದೆ.
ಬಂಧನ: ಸಂತಸದ ವಿಚಾರ
ಜಗತ್ತಿನ ಪ್ರಮುಖ ಕ್ರೀಡಾ ಸಂಸ್ಥೆ ಫಿಫಾದಲ್ಲಿ ಅಡಗಿದ್ದ ಕಳ್ಳಕಾಕರ ಬಂಧನವಾಗಿರುವುದು ಸಂತಸದ ವಿಚಾರ ಎಂದು ಬ್ರೆಜಿಲ್ ರಾಷ್ಟ್ರೀಯ ಫುಟ್ಬಾಲ್ ತಂಡದ ಮಾಜಿ ಆಟಗಾರ ರೊಮಾರಿಯೋ ಹೇಳಿದ್ದಾರೆ. ಫುಟ್ಬಾಲ್ನ ದಂತಕಥೆಯಾಗಿರುವ ಅರ್ಜೆಂಟೀನ ಫುಟ್ಬಾಲ್ ತಂಡದ ಮಾಜಿ ನಾಯಕ ಡಿಗೊ ಮರಡೋನ ಫಿಫಾ ಅಧಿಕಾರಿಗಳ ಬಂಧನಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಮುಂದಿನ ಬಂಧನ ಅಧ್ಯಕ್ಷ ಬ್ಲಾಟರ್ ಅವರದ್ದು ಎಂದೂ ಎಚ್ಚರಿಸಿದ್ದಾರೆ. ಅಮೆರಿಕ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಗ್ರೇಗ್ಡೈಕ್ ಕೂಡ `ಬ್ಲಾಟರ್ ಫಿಫಾ ಅಧ್ಯಕ್ಷ ಸ್ಥಾನ ತ್ಯಜಿಸಬೇಕು’ ಎಂದು ಆಗ್ರಹಿಸಿದ್ದಾರೆ. ಫುಟ್ಬಾಲ್ ಅಧಿಕಾರಿಗಳನ್ನು ಬಂಧಿಸಿದ್ದು ಒಳ್ಳೆಯ ಸುದ್ದಿ. ಯಾವುದೇ ಕ್ರೀಡೆಯಾಗಲಿ ಅದರೊಂದಿಗೆ ರಾಜಕೀಯ ಬೆರೆಯಬಾರದೆಂದು ಖ್ಯಾತ ಟೆನ್ನಿಸ್ ಆಟಗಾರ ಸ್ಪೇನ್ನ ರಫೆಲ್ ನಡಾಲ್ ಪ್ರತಿಕ್ರಿಯಿಸಿದ್ದಾರೆ.
ಜಗತ್ತಿನ ಬಹುತೇಕ ದೇಶಗಳು ಆಡುವ ಆಟ ಫುಟ್ಬಾಲ್. ಆದರೆ ವಿಶ್ವ ಫುಟ್ಬಾಲ್ ಸಂಸ್ಥೆ ಫಿಫಾ ಈಗ ಕಳಂಕಿತ. ಅದೇನೂ ಅಚ್ಚರಿಯ ಸಂಗತಿ ಅಲ್ಲ. ಭಾರತದಲ್ಲಿರುವ ಚಿಕ್ಕಪುಟ್ಟ ಕ್ರೀಡಾ ಸಂಸ್ಥೆಗಳಲ್ಲೇ ಅವ್ಯವಹಾರ, ಭ್ರಷ್ಟಾಚಾರ ನಡೆಯುತ್ತಿದೆ. ಇನ್ನು ಸಾವಿರಾರು ಕೋಟಿ ರೂ. ಹರಿದು ಬರುವಾಗ ಫಿಫಾದಲ್ಲಿರುವ ಭ್ರಷ್ಟ ಅಧಿಕಾರಿಗಳು ಸುಮ್ಮನೆ ಕುಳಿತಿರಲು ಸಾಧ್ಯವೆ? ಬ್ರೆಜಿಲ್ ವಿಶ್ವಕಪ್ ಒಂದರಲ್ಲೇ ಫಿಫಾಗೆ ಹರಿದುಬಂದಿದ್ದು ೩೬,೩೯೭ ಕೋಟಿ ರೂ. ಆದಾಯ. ೨೦೧೪ರ ವಿಶ್ವಕಪ್ನಿಂದ ಫಿಫಾಕ್ಕೆ ದೊರೆತ ಲಾಭ ೧೬,೬೦೮ ಕೋಟಿ ರೂ. ಹೀಗೆ ವಿವಿಧ ಮೂಲಗಳಿಂದ ಇನ್ನೂ ಅದೆಷ್ಟೋ ಕೋಟಿ ಹಣ ಹರಿದುಬರುತ್ತಿದೆ. ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆ ಎಂಬುದು ಗಾದೆ. ಫಿಫಾ ಅಧಿಕಾರಿಗಳು ಮಾತ್ರ ಸತ್ಯಹರಿಶ್ಚಂದ್ರರಾಗಿರಲು ಹೇಗೆ ಸಾಧ್ಯ? ಕಷ್ಟಪಟ್ಟು, ಬೆವರು ಸುರಿಸಿ, ಕೈ ಕಾಲು ಮುರಿದುಕೊಂಡು ಗೆಲವಿಗಾಗಿ ಆಡುವ ಫುಟ್ಬಾಲ್ ಆಟಗಾರರಿಗೆ ಮಾತ್ರ ಈ ಪ್ರಕರಣ ಆಘಾತ ತಂದಿರುವುದು ನಿಜ.
Comments are closed.