ರಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಇನ್ನು ಕೇವಲ ಒಂಭತ್ತು ತಿಂಗಳು ಮಾತ್ರ ಬಾಕಿ. ೨೦೧೬ರ ಆಗಸ್ಟ್ ೫ರಿಂದ ೨೧ರವರೆಗೆ ದಕ್ಷಿಣ ಅಮೆರಿಕದ ಬ್ರೆಜಿಲ್ನ ರಿಯೋ-ಡಿ-ಜನೈರೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ಗೆ ಭಾರತ ಎಷ್ಟರ ಮಟ್ಟಿಗೆ ಸಿದ್ಧತೆ ನಡೆಸಿದೆ? ಇದೊಂದು ಮಿಲಿಯನ್ ಡಾಲರ್ ಪ್ರಶ್ನೆ!
ರಿಯೋ ಒಲಿಂಪಿಕ್ಸ್ಗೆ ಭಾರತ ಏನೇನೂ ತಯಾರಿ ನಡೆಸಿಲ್ಲವೆಂದಾಗಲೀ, ಪದಕ ಗೆಲ್ಲುವತ್ತ ಅದರ ಲಕ್ಷ್ಯ ಇಲ್ಲವೆಂದಾಗಲೀ ಇದರರ್ಥವಲ್ಲ. ಆದರೆ ಈಗ ನಡೆದಿರುವ ಒಟ್ಟಾರೆ ತಯಾರಿಯ ಸಿಂಹಾವಲೋಕನ ಮಾಡಿದಾಗ ಪೂರ್ವಸಿದ್ಧತೆ ಏನೇನೂ ಸಾಲದು ಎನ್ನುವುದು ಕಣ್ಣಿಗೆ ರಾಚುವ ಸಂಗತಿ.
ಲಂಡನ್ನಲ್ಲಿ ೨೦೧೨ರ ಒಲಿಂಪಿಕ್ಸ್ ಕೂಟದಲ್ಲಿ ಭಾರತ ಗೆದ್ದಿದ್ದು ಕೇವಲ ೨ ಬೆಳ್ಳಿ ಮತ್ತು ೪ ಕಂಚಿನ ಪದಕ. ಜಾಗತಿಕ ಮಟ್ಟದಲ್ಲಿ ಈ ಪದಕಗಳೊಂದಿಗೆ ಭಾರತ ೫೫ನೇ ಸ್ಥಾನಕ್ಕೆ ಇಳಿದಿತ್ತು. ಅದಕ್ಕೂ ಮುನ್ನ ಬೀಜಿಂಗ್ನಲ್ಲಿ ನಡೆದ ಒಲಿಂಪಿಕ್ಸ್ ಕೂಟದಲ್ಲಿ ಭಾರತ ೧ ಚಿನ್ನ ಹಾಗೂ ೨ ಕಂಚು ಪದಕಗಳೊಂದಿಗೆ ೫೦ನೇ ಸ್ಥಾನಕ್ಕೇರಿತ್ತು. ಲಂಡನ್ ಕೂಟದಲ್ಲಿ ಬಾಕ್ಸರ್ ಸುಶೀಲ್ಕುಮಾರ್ ಹಾಗೂ ಶೂಟರ್ ವಿಜಯಕುಮಾರ್ ಬೆಳ್ಳಿ ಪದಕಗಳಿಗೆ ತೃಪ್ತಿಪಟ್ಟರು. ೫ ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಕುಸ್ತಿಪಟು ಮೇರಿ ಕೋಂ, ಶೆಟಲ್ ತಾರೆ ಸೈನಾ ನೆಹವಾಲ್, ಶೂಟರ್ ಗಗನ್ ನಾರಂಗ್ ಹಾಗೂ ರೆಸೆಲರ್ ಯೋಗೇಶ್ವರದತ್- ಇವರೆಲ್ಲಾ ಕಂಚಿನ ಪದಕಕ್ಕೇ ತಮ್ಮ ಸಾಧನೆಯನ್ನು ಸೀಮಿತಗೊಳಿಸಿದರು. ಇವರೆಲ್ಲಾ ಕೊಂಚ ಪ್ರಯತ್ನಪಟ್ಟಿದ್ದರೆ ಭಾರತ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ೪೦ನೇ ಸ್ಥಾನಕ್ಕೆ ಜಿಗಿಯಬಹುದಿತ್ತು. ಲಂಡನ್ ಒಲಿಂಪಿಕ್ಸ್ನಲ್ಲಿ ಅಮೆರಿಕ ೪೬ ಚಿನ್ನ, ೨೯ ಬೆಳ್ಳಿ, ೨೯ ಕಂಚು ಪದಕಗಳೊಂದಿಗೆ ಒಟ್ಟು ೧೦೪ ಪದಕಗಳನ್ನು ಪಡೆದು ಅಗ್ರಸ್ಥಾನದಲ್ಲಿ ವಿರಾಜಿಸಿದರೆ, ಚೀನಾ ೩೮ ಚಿನ್ನ, ೨೭ ಬೆಳ್ಳಿ ಹಾಗೂ ೨೨ ಕಂಚು ಪದಕಗಳ ಸಹಿತ ಒಟ್ಟು ೮೭ ಪದಕಗಳನ್ನು ಪಡೆದು ಎರಡನೇ ಸ್ಥಾನದಲ್ಲಿ ಕಂಗೊಳಿಸಿತು.
ಹಾಗೆ ನೋಡಿದರೆ ನಮ್ಮ ನೆರೆಯ ದೇಶ ಚೀನಾದ ಜನಸಂಖ್ಯೆಯೂ ಭಾರತಕ್ಕಿಂತ ಹೆಚ್ಚಿದೆ. ಭಾರತದ ಜನಸಂಖ್ಯೆ ೧೦೦ ಕೋಟಿ ಈಗಾಗಲೇ ದಾಟಿದೆ. ಆದರೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕನಿಷ್ಠ ೧೦ ಪದಕಗಳನ್ನಾದರೂ ಬಾಚಿಕೊಳ್ಳುವ ಸಮರ್ಥಶಾಲಿ ಕ್ರೀಡಾಪಟುಗಳು ಈ ೧೦೦ ಕೋಟಿಯಲ್ಲಿ ಇಲ್ಲ ಎನ್ನುವುದೇ ದೌರ್ಭಾಗ್ಯದ ಸಂಗತಿ. ಪೋಲೆಂಡ್ನಂತಹ ಚಿಕ್ಕ ದೇಶ ಕೂಡ ಲಂಡನ್ ಒಲಿಂಪಿಕ್ಸ್ನಲ್ಲಿ ೨ ಚಿನ್ನ, ೨ ಬೆಳ್ಳಿ ಹಾಗೂ ೬ ಕಂಚು ಪದಕಗಳ ಸಹಿತ ೧೦ ಪದಕಗಳನ್ನು ತನ್ನದಾಗಿಸಿಕೊಂಡಿತ್ತು. ಅಜರ್ಬೇನ್ನಂತಹ ಪುಟ್ಟ ದೇಶವೂ ಇಷ್ಟೇ ಸಂಖ್ಯೆಯ ಪದಕಗಳನ್ನು ಪಡೆದು, ಪದಕ ಪಟ್ಟಿಯಲ್ಲಿ ಭಾರತಕ್ಕಿಂತ ಅಗ್ರಸ್ಥಾನಕ್ಕೇರಿತ್ತು. ಭಾರತ ಮಾತ್ರ ಮೇಲೇರುವ ಬದಲು ಕೆಳಗಿಳಿಯುತ್ತಲೇ ಇದೆ. ಇದಕ್ಕೇನು ಕಾರಣ ಎಂಬುದನ್ನು ಕ್ರೀಡಾ ಸಂಸ್ಥೆಗಳು ಹಾಗೂ ಸರ್ಕಾರ ಹುಡುಕಬೇಕಾಗಿದೆ.
ಲಂಡನ್ ಒಲಿಂಪಿಕ್ಸ್ಗೆ ಭಾರತದಿಂದ ೮೩ ಮಂದಿ ಅರ್ಹ ಕ್ರೀಡಾಪಟುಗಳು ತೆರಳಿದ್ದರು. ೧೩ ವಿವಿಧ ಕ್ರೀಡೆಗಳಲ್ಲಿ ಇವರೆಲ್ಲ ಪಾಲ್ಗೊಂಡಿದ್ದರು. ಈ ೮೩ ಮಂದಿ ಕ್ರೀಡಾಪಟುಗಳ ತಯಾರಿ ಹಾಗೂ ಒಲಿಂಪಿಕ್ಸ್ಗೆ ಕಳಿಸುವ ವೆಚ್ಚ ಸೇರಿದಂತೆ ಸರ್ಕಾರ ಖರ್ಚು ಮಾಡಿದ ಒಟ್ಟು ಹಣ ೫೦ ದಶಲಕ್ಷ ಅಮೆರಿಕನ್ ಡಾಲರ್. ಇದಲ್ಲದೇ ಖಾಸಗಿ ಪ್ರಾಯೋಜಕರು ಹಾಗೂ ಭಾರತೀಯ ಕಾರ್ಪೊರೇಟ್ ಸಂಸ್ಥೆಗಳು ಹೆಚ್ಚುವರಿಯಾಗಿ ೧೦-೧೫ ದಶಲಕ್ಷ ಅಮೆರಿಕನ್ ಡಾಲರ್ನಷ್ಟು ಹಣ ಖರ್ಚು ಮಾಡಿವೆ. ೧೯೨೪ರಿಂದ ೨೦೧೬ರವರೆಗೆ ನಡೆದ ೯೨ ವರ್ಷಗಳ ಅವಧಿಯ ಒಲಿಂಪಿಕ್ಸ್ಕೂಟಗಳಲ್ಲಿ ಭಾರತಕ್ಕೆ ಸಾಧ್ಯವಾಗಿರುವುದು ಕೇವಲ ೧ ವೈಯಕ್ತಿಕ ಚಿನ್ನದ ಪದಕ ಗಳಿಕೆ. ರಿಯೋ ಒಲಿಂಪಿಕ್ಸ್ನಲ್ಲಾದರೂ ಇದು ಬದಲಾದೀತೇ? ಈಗಾಗಲೇ ರಿಯೋ ಒಲಿಂಪಿಕ್ಸ್ಗೆ ೩೩ ಮಂದಿ ಭಾರತೀಯ ಅಥ್ಲೆಟ್ಗಳು ಅರ್ಹತೆ ಪಡೆದಿದ್ದಾರೆ. ಇನ್ನು ಕೆಲವರು ಅರ್ಹತೆ ಪಡೆ ಯುವ ಹಂತದಲ್ಲಿದ್ದಾರೆ. ಈ ಬಾರಿ ನಿಖರವಾಗಿ ಎಷ್ಟು ಮಂದಿ ಕ್ರೀಡಾಪಟುಗಳು ರಿಯೋ ಒಲಿಂಪಿಕ್ಸ್ಗೆ ತೆರಳಲಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ.
ಈ ಬಾರಿ ಪದಕ ಗಳಿಕೆಯ ಭರವಸೆ ಹೊತ್ತು ರಿಯೋಗೆ ತೆರಳುತ್ತಿರುವವರೆಂದರೆ ಶೂಟರ್ಗಳು ಹಾಗೂ ರೆಸೆಲರ್ಗಳು. ಲಂಡನ್ ಒಲಿಂಪಿಕ್ಸ್ನಲ್ಲಿ ೧೧ ಮಂದಿ ಶೂಟರ್ಗಳು ಪಾಲ್ಗೊಂಡಿದ್ದರು. ಈ ಪೈಕಿ ಐವರು ಈಗಾಗಲೇ ರಿಯೋ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದ್ದಾರೆ. ಕುವೈಟ್ನಲ್ಲಿ ನವೆಂಬರ್ ತಿಂಗಳಲ್ಲಿ ನಡೆಯಲಿರುವ ವಿಶ್ವಕಪ್ನಲ್ಲಿ ಇನ್ನೊಂದಷ್ಟು ಶೂಟಿಂಗ್ ಚಾಂಪಿಯನ್ಗಳು ಹೊರಹೊಮ್ಮಲಿದ್ದಾರೆ. ಈ ಪೈಕಿ ಅಭಿನವ ಬಿಂದ್ರಾ, ಗಗನ್ ನಾರಂಗ್, ಅಪೂರ್ವಿ ಚಂಡೇಲಾ, ಗುರುಪ್ರೀತ್ಸಿಂಗ್ ಮೊದಲಾದವರಿದ್ದಾರೆ. ಇವರಲ್ಲದೇ ಚೈನ್ಸಿಂಗ್, ಲಜ್ಜಾ ಗೋಸ್ವಾಮಿ, ಹೆನ್ನಾಸಿದ್ದು, ಸಂಜೀವ ರಜಪೂತ್, ಪ್ರಕಾಶ್ ನಂಜಪ್ಪ ಮತ್ತು ಅಯೋನಿಕ ಪೌಲ್ ಕೂಡ ಸಮರ್ಥಶಾಲಿಗಳಾಗಿದ್ದಾರೆ. ಕಳೆದ ಬಾರಿ ಬೆಳ್ಳಿ ಪದಕ ಗೆದ್ದ ಸುಶೀಲ್ ಕುಮಾರ್ ಈ ಬಾರಿ ಬ್ರೆಜಿಲ್ನಲ್ಲಿ ಮತ್ತೆ ಚಿನ್ನ ಗೆಲ್ಲುವ ಪವಾಡ ಮಾಡಬಲ್ಲರೆಂಬ ವಿಶ್ವಾಸವಿದೆ. ೭೪ ಕೆ.ಜಿ. ವಿಭಾಗಕ್ಕೆ ಏರಿರುವ ಸುಶೀಲ್ ಕುಮಾರ್ಗೆ ರಿಯೋದಲ್ಲಿ ಸ್ಪರ್ಧೆ ಮಾತ್ರ ತುಂಬಾ ಕಠಿಣವಾಗಿರಲಿದೆ. ಯೋಗೀಶ್ವರದತ್ ಕೂಡ ಈ ಬಾರಿ ಪದಕ ಬಾಚಬಲ್ಲ ಸಾಮರ್ಥ್ಯ ಹೊಂದಿರುವವರು.
ಬಾಕ್ಸರ್ ಮೇರಿ ಕೋಂ ಮತ್ತು ಸರಿತಾದೇವಿ ರಿಯೋ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವ ಭರವಸೆ ಹುಟ್ಟಿಸಿರುವ ಇನ್ನಿಬ್ಬರು ಪಟುಗಳು. ೩ ಮಕ್ಕಳ ತಾಯಿ ಮೇರಿ ಕೋಂ ಈಗಾಗಲೇ ಬಾಕ್ಸಿಂಗ್ ಕ್ಷೇತ್ರದಲ್ಲಿ ದಂತಕತೆ. ಇನ್ನು ಸೈನಾ ನೆಹವಾಲ್, ಪಿ.ವಿ. ಸಿಂಧು ಬ್ಯಾಡ್ಮಿಂಟನ್ನಲ್ಲಿ ಸಾಧನೆ ಮಾಡಿರುವ ಆಶಾಕಿರಣಗಳು. ಬಾಕ್ಸಿಂಗ್ನಲ್ಲಿ ವಿಕಾಸ್ ಕೃಷ್ಣನ್, ದೇವೇಂದ್ರೋ ಸಿಂಗ್ ಕೂಡ ಸಾಧನೆ ಮಾಡಬಲ್ಲವರು. ಟೆನಿಸ್ನಲ್ಲಿ ಜನಪ್ರಿಯರಾಗಿರುವ ಲಿಯಾಂಡರ್ ಪೇಸ್ ಮತ್ತು ಸಾನಿಯಾ ಮಿರ್ಜಾ ಈ ಬಾರಿ ಭಾರತಕ್ಕೆ ಪದಕ ಬಾಚಿ ತರಬಲ್ಲರೆಂದು ಇಡೀ ದೇಶ ಕುತೂಹಲದಿಂದ ನಿರೀಕ್ಷಿಸಿದೆ. ಆ ನಿರೀಕ್ಷೆ ಹುಸಿಯಾಗಬಾರದಷ್ಟೆ.
ಬ್ರೆಜಿಲ್ನ ರಿಯೋ ಡಿ ಜನೈರೋ ಭಾರತದ ಕ್ರೀಡಾಪಟುಗಳನ್ನು ಸ್ವಾಗತಿಸಲು ಆಗಲೇ ಸಿದ್ಧವಾಗಿ ನಿಂತಿದೆ. ಆದರೆ ಪ್ರಶ್ನೆ ಇರುವುದು – ಭಾರತೀಯ ಕ್ರೀಡಾಪಟುಗಳು ರಿಯೋ ಒಲಿಂಪಿಕ್ಸ್ಗೆ ಸಿದ್ಧವಾಗಿದ್ದಾರಾ ಎಂಬುದು.
ಭಾರತದಲ್ಲಿ ಕ್ರಿಕೆಟ್ ಬಗ್ಗೆ, ಕ್ರಿಕೆಟಿಗರ ಬಗ್ಗೆ ಇನ್ನಿಲ್ಲದಷ್ಟು ಚರ್ಚೆ ನಡೆಯುತ್ತದೆ. ಕ್ರಿಕೆಟ್ ತಂಡದ ನಾಯಕ ದೋನಿ ಒಂದು ಪಂದ್ಯದಲ್ಲಿ ಸರಿಯಾಗಿ ಆಡದಿದ್ದರೂ ಮಾಧ್ಯಮಗಳು ಆ ಬಗ್ಗೆ ಪುಟಗಟ್ಟಲೆ ಲೇಖನ ಕೊರೆಯುತ್ತವೆ. ಆದರೆ ೨೦೧೬ರ ರಿಯೋ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳುವ ಭಾರತದ ಕ್ರೀಡಾಪಟುಗಳು, ಅವರ ಪೂರ್ವಸಿದ್ಧತೆ, ಗೆಲ್ಲುವ ಸಾಮರ್ಥ್ಯ ಇತ್ಯಾದಿ ಕುರಿತು ಮಾದ್ಯಮಗಳಾಗಲೀ, ಕ್ರೀಡಾ ಸಂಸ್ಥೆಗಳಾಗಲೀ ಗಂಭೀರವಾಗಿ ಗಮನಹರಿಸಿದ ನಿದರ್ಶನಗಳಿಲ್ಲ. ಒಲಿಂಪಿಕ್ಸ್ ಇನ್ನೇನು ಶುರುವಾಗಲಿದೆ ಎನ್ನುವಾಗ ಒಂದಿಷ್ಟು ಮಾಹಿತಿಗಳು ಪ್ರಕಟವಾಗುತ್ತವೆ. ಒಂದಿಷ್ಟು ಟೀಕೆಗಳೂ ಹರಿದುಬರುತ್ತವೆ. ಭಾರತ ಗೆಲ್ಲದಿದ್ದಾಗ ಮತ್ತೊಂದಿಷ್ಟು ವಾಗ್ಬಾಣಗಳು ಸಿಡಿಯುತ್ತವೆ. ಆದರೆ ಭಾರತ ರಿಯೋ ಒಲಿಂಪಿಕ್ಸ್ನಲ್ಲಿ ಉತ್ತಮ ಸಾಧನೆ ಮಾಡಬೇಕಾದರೆ ಏನೇನು ಪೂರ್ವಸಿದ್ಧತೆ ಬೇಕು, ಕ್ರೀಡಾಪಟುಗಳ ಅಗತ್ಯವೇನು ಮುಂತಾದ ಸಂಗತಿಗಳ ಬಗ್ಗೆ ಚರ್ಚೆಗಳು ಅಷ್ಟಾಗಿ ನಡೆಯುವುದಿಲ್ಲ. ರಿಯೋ ಒಲಿಂಪಿಕ್ಸ್ನಲ್ಲಿ ಕನಿಷ್ಠ ಎಷ್ಟು ಪದಕಗಳನ್ನು ಗೆಲ್ಲಬೇಕು ಎಂಬ ಬಗ್ಗೆಯೂ ಉನ್ನತ ಹಂತದಲ್ಲಿ ಯೋಜನೆಗಳು ರೂಪುಗೊಳ್ಳುವುದಿಲ್ಲ. ಒಂದು ವೇಳೆ ಯೋಜನೆಯಾಗಿದ್ದರೂ ಅದರ ಅನುಷ್ಠಾನ ಸೂಕ್ತ ರೀತಿಯಲ್ಲಿ ಆಗುವುದಿಲ್ಲ. ಹೀಗೆ ಏನೇನೋ ತೊಡಕು, ತೊಂದರೆಗಳು.
ಇನ್ನೂ ಸಮಯ ಮಿಂಚಿಲ್ಲ. ಭಾರತೀಯ ಒಲಿಂಪಿಕ್ಸ್ ಆಯ್ಕೆ ಸಮಿತಿ, ಇನ್ನಿತರ ಕ್ರೀಡಾ ಸಂಸ್ಥೆಗಳು ಒಗ್ಗೂಡಿ ರಿಯೋ ಒಲಿಂಪಿಕ್ಸ್ನಲ್ಲಿ ಭಾರತ ಅತ್ಯುತ್ತಮ ಸಾಧನೆ ಮಾಡುವಂತೆ ಚಿಂತನೆ ನಡೆಸಬೇಕು. ಅರ್ಹ ಕ್ರೀಡಾಪಟುಗಳಿಗೆ ಅಗತ್ಯವಿರುವ ಎಲ್ಲಾ ಬಗೆಯ ಸೌಲಭ್ಯಗಳನ್ನು ಒದಗಿಸಬೇಕು. ಕೇಂದ್ರ ಕ್ರೀಡಾ ಸಚಿವಾಲಯ ಕೂಡ ಸಾಥ್ ನೀಡಬೇಕು. ರಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಕೀರ್ತಿ ಪತಾಕೆ ಎತ್ತರೆತ್ತರಕ್ಕೇರಲಿ ಎಂಬ ಮಹದಾಸೆಯಂತೂ ದೇಶದ ಕ್ರೀಡಾಭಿಮಾನಿಗಳದು.