“ಇಂಜಿನಿಯರನ ಮಗ ಇಂಜಿನಿಯರ್, ಡಾಕ್ಟರನ ಮಗ ಡಾಕ್ಟರ್, ಸಂಗೀತಗಾರನ ಮಗ ಸಂಗೀತಗಾರ, ವಕೀಲನ ಮಗ ವಕೀಲ ಆಗಬಹುದಾದರೆ ರಾಜಕಾರಣಿಯ ಮಗ ರಾಜಕಾರಣಿ ಆಗುವುದು ತಪ್ಪೆ?”
– ಹೀಗೆಂದು ಕಳೆದ ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಂಡ್ಯ ಕ್ಷೇತ್ರದ ಲೋಕಸಭಾ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಪ್ರಚಾರಭಾಷಣ ಮಾಡುತ್ತ ಪ್ರಶ್ನಿಸಿದ್ದರು. ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮಗ ಎಂಬ ಕಾರಣಕ್ಕೆ ನಿಖಿಲ್ ಅಭ್ಯರ್ಥಿಯಾಗಿದ್ದಾರೆ, ಆತನಿಗೆ ನಿಜಕ್ಕೂ ಅಭ್ಯರ್ಥಿಯಾಗುವ ಅರ್ಹತೆ ಇಲ್ಲ – ಎಂಬ ವಿರೋಧಿಗಳ ಆರೋಪಕ್ಕೆ ತಿರುಗೇಟು ನೀಡಲು ನಿಖಿಲ್ ಈ ಹೇಳಿಕೆ ನೀಡಿದ್ದರು.
ನಿಖಿಲ್ ಹೇಳಿಕೆಯಲ್ಲಿ ತಪ್ಪೇನೂ ಇಲ್ಲ. ಅದೇ ರೀತಿ ನಿಖಿಲ್ ಹೇಳಿಕೆ ಸಂಪೂರ್ಣ ಸರಿ ಎನ್ನುವಂತೆಯೂ ಇಲ್ಲ. ರಾಜಕಾರಣಿಗಳ ಮಕ್ಕಳೆಲ್ಲರೂ ರಾಜಕಾರಣಿಗಳಾಗಿದ್ದಾರೆ ಅಥವಾ ರಾಜಕಾರಣಿಗಳಾಗಲೇಬೇಕು ಎಂಬ ಸ್ಥಾಪಿತ ನಿಯಮವೇನೂ ಇಲ್ಲ. ರಾಜಕಾರಣದ ಭೀಷ್ಮ ಎಲ್.ಕೆ. ಆಡ್ವಾಣಿಯವರ ಮಗನಾಗಲಿ ಮಗಳಾಗಲಿ ರಾಜಕಾರಣಿಯಾಗಲಿಲ್ಲ. ಕರ್ನಾಟಕದ ಖ್ಯಾತ ರಾಜಕಾರಣಿಯಾಗಿದ್ದ ವಿ.ಎಸ್. ಆಚಾರ್ಯ ಅವರ ಮಕ್ಕಳೂ ಅವರಂತೆ ರಾಜಕಾರಣದ ಹಾದಿ ತುಳಿಯಲಿಲ್ಲ. ಈ ಸಾಲಿಗೆ ಸೇರುವವರ ಸಂಖ್ಯೆ ಇನ್ನೂ ಸಾಕಷ್ಟಿದೆ, ಬಿಡಿ. ಆಟಗಾರರ ಮಕ್ಕಳು ಆಟಗಾರರಾಗಿರುವ ಸಾಕಷ್ಟು ನಿದರ್ಶನಗಳಿವೆ. ಆಟಗಾರರ ಕುಟುಂಬವೆಂದು ಕರೆಸಿಕೊಂಡಿರುವ ನಮ್ಮ ದೇಶದ ಪ್ರಸಿದ್ಧ 10 ಆಟಗಾರರ ಕುಟುಂಬದ ಬಗ್ಗೆ ಮಾಹಿತಿ ಹಂಚಿಕೊಳ್ಳುವುದು ಈ ಲೇಖನದ ಉದ್ದೇಶ. ಜಗತ್ತಿನ ಬೇರೆ ಬೇರೆ ದೇಶಗಳಲ್ಲಿರುವಂತೆ ಭಾರತದಲ್ಲೂ ಕೆಲವು ಪ್ರಸಿದ್ಧ ಆಟಗಾರ ಕುಟುಂಬಗಳಿವೆ. ಕ್ರೀಡೆಯನ್ನೇ ವಂಶಪಾರಂಪರ್ಯ ವೃತ್ತಿಯನ್ನಾಗಿಸಿಕೊಂಡಿರುವ ಕುಟುಂಬಗಳು ಹಲವಿವೆ.
ಧ್ಯಾನ್ಚಂದ್ ಮತ್ತು ರೂಪ್ಸಿಂಗ್ (ಹಾಕಿ)
ಹಾಕಿ ಆಟದ ಮಾಂತ್ರಿಕ ಎಂದ ಕೂಡಲೇ ನೆನಪಿಗೆ ಬರುವ ವ್ಯಕ್ತಿ ಧ್ಯಾನ್ಚಂದ್. ಎದುರಾಳಿಯನ್ನು ವಂಚಿಸಿ ಗೋಲಿನ ಸುರಿಮಳೆಗೈಯುವುದರಲ್ಲಿ ಧ್ಯಾನ್ಚಂದ್ ಅತ್ಯಂತ ಪ್ರವೀಣರಾಗಿದ್ದರು. ಭಾರತೀಯ ಹಾಕಿ ತಂಡಕ್ಕೆ 3 ಚಿನ್ನದ ಪದಕಗಳನ್ನು ಒಲಿಂಪಿಕ್ನಲ್ಲಿ ತಂದುಕೊಟ್ಟ ಕೀರ್ತಿ ಅವರಿಗೆ ಸಂದಿದೆ.
ಧ್ಯಾನ್ಚಂದ್ರ ಮೂಲ ಹೆಸರು ಧ್ಯಾನ್ಸಿಂಗ್. 16ರ ವಯಸ್ಸಿನಲ್ಲಿ ಸೈನ್ಯ ಸೇರಿದ ಧ್ಯಾನ್ಸಿಂಗ್ಗೆ ಆತನ ಜತೆ ಆಟಗಾರರು ಕೊಟ್ಟ ಅಡ್ಡಹೆಸರು ಧ್ಯಾನ್ಚಂದ್ ಎಂದು. ಚಾಂದ್ ಎಂದರೆ ಚಂದಿರ. ಏಕೆಂದರೆ ಧ್ಯಾನ್ಚಂದ್ ಚಂದ್ರ ಉದಯಿಸಿದ ಬಳಿಕವೇ ಹಾಕಿ ಆಟದ ತರಬೇತಿಗೆ ಸಿದ್ಧರಾಗುತ್ತಿದ್ದರಂತೆ.
400ಕ್ಕೂ ಹೆಚ್ಚು ಗೋಲುಗಳನ್ನು ತನ್ನ ವೃತ್ತಿಜೀವನದಲ್ಲಿ ಸಾಧಿಸಿದ ಧ್ಯಾನ್ಚಂದ್ ಚಿನ್ನದ ಪದಕ ಗಳಿಸಿದ ಮೂರು ಒಲಿಂಪಿಕ್ ಸ್ಪರ್ಧೆಯಲ್ಲಿ ಪ್ರತಿ ಬಾರಿ ಫೈನಲ್ ಪಂದ್ಯದಲ್ಲಿ ತಲಾ 3 ಗೋಲುಗಳನ್ನು ಬಾರಿಸಿದ್ದರು. ಆತನ ತಮ್ಮ ರೂಪ್ಸಿಂಗ್ ಕೂಡ ಅದ್ಭುತ ಹಾಕಿ ಆಟಗಾರರಾಗಿದ್ದರು. ಗೋಲು ಬಾರಿಸುವುದರಲ್ಲಿ ಆತ ನಿಸ್ಸೀಮ. ಅಪಾರ ಶಕ್ತಿ ಹಾಕಿ ಗೋಲು ಬಾರಿಸುತ್ತಿದ್ದರು. ‘ನಿನ್ನ ಅದ್ಭುತ ಶಕ್ತಿಯನ್ನು ವ್ಯರ್ಥ ಮಾಡಬೇಡ. ಏಕೆಂದರೆ ಎದುರಾಳಿಗಳು ನಿನ್ನನ್ನು ಗಾಯಗೊಳಿಸಬಹುದು’ ಎಂದು ಧ್ಯಾನ್ಚಂದ್ ಎಚ್ಚರಿಕೆ ನೀಡಿದ್ದರು. ಬರ್ಲಿನ್ ಒಲಿಂಪಿಕ್ಸ್ನಲ್ಲಿ ಭಾರತದ ಪರವಾಗಿ ರೂಪ್ಸಿಂಗ್ರದ್ದು ಒಂದು ಅದ್ಭುತ ಪ್ರದರ್ಶನ. ಜಪಾನ್ ವಿರುದ್ಧ 3 ಹಾಗೂ ಅಮೆರಿಕದ ವಿರುದ್ಧ 10 ಗೋಲುಗಳನ್ನು ಲಾಸ್ ಏಂಜಲೀಸ್ ಒಲಿಂಪಿಕ್ಸ್ನಲ್ಲಿ ಗಳಿಸಿದ್ದು ಒಂದು ದಾಖಲೆ. ಆದರೆ ಆ ವೇಳೆ ರೂಪ್ಸಿಂಗ್ಗೆ ಹಾಕಿ ಆಟದಲ್ಲಿ ಧರಿಸುವ ಸೂಕ್ತ ದಿರಿಸೂ ಇರಲಿಲ್ಲ.
ಇವರ ತಂದೆ ಸುಬೇದಾರ್ ಸೋಮೇಶ್ವರದತ್ ಸಿಂಗ್ ಕೂಡ ಬ್ರಿಟಿಷ್ ಸೈನ್ಯದಲ್ಲಿ ಒಬ್ಬ ಹಾಕಿ ಆಟಗಾರರಾಗಿದ್ದರು. ಧ್ಯಾನ್ಚಂದ್ ಅವರ ಪುತ್ರ ಅಶೋಕ್ ಕುಮಾರ್ ಕೂಡ ಒಬ್ಬ ಉತ್ತಮ ಹಾಕಿಪಟುವಾಗಿದ್ದು, 1975ರಲ್ಲಿ ಕೌಲಾಲಂಪುರದಲ್ಲಿ ನಡೆದ ವಿಶ್ವಕಪ್ ಹಾಕಿ ಚಾಂಪಿಯನ್ಶಿಪ್ ಗೆದ್ದ ತಂಡದ ಸದಸ್ಯರಾಗಿದ್ದರು.
ಮಿಲ್ಕಾಸಿಂಗ್ ಮತ್ತು ಜೀವ್ ಮಿಲ್ಕಾಸಿಂಗ್ (ಅಥ್ಲೆಟಿಕ್ಸ್)
ಹಾರುವ ಸಿಖ್ ಎಂದೇ ಜಗತ್ತಿಗೆ ಸುಪರಿಚಿತರಾಗಿರುವ ಮಿಲ್ಕಾಸಿಂಗ್ ಶರವೇಗದ ಓಟಕ್ಕೆ ಪ್ರಸಿದ್ಧರಾದವರು. ಅವರು ಓಡುತ್ತಿದ್ದಾರೋ ಅಥವಾ ಸ್ಪರ್ಧೆಯಲ್ಲಿ ಹಾರುತ್ತಿದ್ದರೋ ಎಂಬಷ್ಟು ಗೊಂದಲ ಮೂಡಿಸುವ ಅದ್ಭುತ ಓಟಗಾರ. 1956, 1960 ಮತ್ತು 1964ರ ಒಲಿಂಪಿಕ್ಸ್ನಲ್ಲಿ ಭಾರತದ ತಂಡವನ್ನು ಪ್ರತಿನಿಧಿಸಿದ್ದರು. 1958 ಮತ್ತು 1962ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದರು.
ಮಿಲ್ಕಾಸಿಂಗ್ ಅವರ 45.73 ಸೆ. ಭಾರತೀಯ ಸಾ ರ್ವಕಾಲಿಕ ಶ್ರೇಷ್ಠ ದಾಖಲೆಯಾಗಿ ಸರಿಸುಮಾರು 41 ವರ್ಷಗಳ ವರೆಗೆ ಉಳಿದಿತ್ತು. ಅವರ ಪತ್ನಿ ನಿರ್ಮಲ್ ಕೌರ್ ಭಾರತದ ವಾಲಿಬಾಲ್ ತಂಡದ ಕಪ್ತಾನರಾಗಿದ್ದರು. 1955ರಲ್ಲಿ ಸಿಲೋನ್(ಈಗ ಶ್ರೀಲಂಕಾ)ನಲ್ಲಿ ಭೇಟಿಯಾದ ಬಳಿಕ ಇಬ್ಬರೂ ಮದುವೆಯಾಗಿದ್ದರು.ಇವರಿಬ್ಬರ ಪುತ್ರ ಜೀವ್ ಮಿಲ್ಕಾಸಿಂಗ್ ವೃತ್ತಿಪರ ಗೋಲ್ಫ್ ಆಟಗಾರನಾಗಿದ್ದು 1993ರಲ್ಲಿ ಮೊದಲಬಾರಿಯ ಪ್ರಶಸ್ತಿ ಗಳಿಸಿದ್ದರು. ಅರ್ಜುನ ಪ್ರಶಸ್ತಿ ಗಳಿಸಿದ ಮೂವರು ಗಾಲ್ಫ್ ಆಟಗಾರರ ಪೈಕಿ ಜೀವ್ ಕೂಡ ಒಬ್ಬರು. 20ಕ್ಕೂ ಹೆಚ್ಚು ವೃತ್ತಿಪರ ಪ್ರಶಸ್ತಿಗಳನ್ನು ಗಳಿಸಿರುವ ಹಿರಿಮೆ ಇವರದು.
ರಾಮನಾಥನ್ ಮತ್ತು ರಮೇಶ್ ಕೃಷ್ಣನ್ (ಟೆನ್ನಿಸ್)
ರಾಮನಾಥನ್ ಭಾರತದ ಮೊಟ್ಟಮೊದಲ ವೃತ್ತಿಪರ ಟೆನಿಸ್ ಆಟಗಾರ. 1954ರಲ್ಲಿ ವಿಂಬಲ್ಡನ್ ಜೂನಿಯರ್ ಪ್ರಶಸ್ತಿಗೆ ಪಾತ್ರರಾಗಿದ್ದರು. ಎರಡು ಬಾರಿ ವಿಂಬಲ್ಡನ್ ಸೆಮಿಫೈನಲ್ ಹಂತಕ್ಕೆ ತಲಪಿದ್ದರು. ರಾಮನಾಥನ್ ಕೃಷ್ಣನ್ಗೆ ಗುರುವಾಗಿದ್ದವರು ತಂದೆ ಟಿ.ಕೆ. ರಾಮನಾಥನ್ ಅವರೂ ಟೆನಿಸ್ ಆಟಗಾರರಾಗಿದ್ದರು. ರಾಮನಾಥನ್ ವೃತ್ತಿಜೀವನದಲ್ಲಿ ಜಾಗತಿಕ ಮಟ್ಟದಲ್ಲಿ 6ನೇ ಶ್ರೇಯಾಂಕ ಗಳಿಸಿದ್ದರು.
ರಮೇಶ್ ಕೃಷ್ಣನ್ ರಾಮನಾಥನ್ ಅವರ ಪುತ್ರ. ತಂದೆಯಂತೆಯೇ ವಿಂಬಲ್ಡನ್ ಸ್ಪರ್ಧೆಯಲ್ಲಿ ಜೂನಿಯರ್ ಪ್ರಶಸ್ತಿಯಲ್ಲದೆ ಫ್ರೆಂಚ್ ಓಪನ್ ಜೂನಿಯರ್ ಪ್ರಶಸ್ತಿಗೂ ಪಾತ್ರರಾದರು. ವಿಂಬಲ್ಡನ್ ಸ್ಪರ್ಧೆಯ ಫೈನಲ್ಗೆ ಒಮ್ಮೆ ಹಾಗೂ ಯುಎಸ್ ಓಪನ್ ಟೂರ್ನಿಯ ಕ್ವಾರ್ಟರ್ ಫೈನಲ್ಗೆ ಒಮ್ಮೆ ತಲಪಿದ್ದರೂ ಟ್ರೋಫಿಯನ್ನು ಗೆಲ್ಲಲಾಗಲಿಲ್ಲ.
1989ರ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಆಗ ವಿಶ್ವದ ನಂಬರ್-ಒನ್ ಎನಿಸಿದ್ದ ಮ್ಯಾಟ್ಸ್ ವಿಲಾಂಡರ್ ವಿರುದ್ಧ ಗೆದ್ದು ರಮೇಶ್ ದಾಖಲೆ ಬರೆದಿದ್ದರು. 1977ರಲ್ಲಿ ಡೇವಿಸ್ ಕಪ್ಗೆ ಭಾರತವನ್ನು ಪ್ರತಿನಿಧಿಸಿದ್ದ ರಮೇಶ್, 2007ರಲ್ಲಿ ಡೇವಿಸ್ ಕಪ್ ತಂಡದ ಕಪ್ತಾನ ಆಗಿದ್ದರು.
ವೇಸ್ ಪೇಸ್ ಮತ್ತು ಲಿಯಾಂಡರ್ ಪೇಸ್
ಪ್ರಸಿದ್ಧ ಟೆನಿಸ್ಪಟು ಆಗಿದ್ದ ಲಿಯಾಂಡರ್ ಪೇಸ್ ಅವರ ತಂದೆ ವೇಸ್ ಪೇಸ್ ಹಾಕಿಪಟುವಾಗಿದ್ದರು. 1972ರಲ್ಲಿ ಕಂಚಿನ ಪದಕ ಗಳಿಸಿದ ಭಾರತೀಯ ಹಾಕಿ ತಂಡದ ಆಟಗಾರರಾಗಿದ್ದರು. ವೇಸ್ ಪೇಸ್ ಅವರ ಪತ್ನಿ ಜೆನ್ನಿಫರ್ ದತ್ ಕೂಡ ಬಾಸ್ಕೆಟ್ಬಾಲ್ ಪಟುವಾಗಿದ್ದು, 1980ರಲ್ಲಿ ನಡೆದ ಏಷಿಯನ್ ಬಾಸ್ಕೆಟ್ಬಾಲ್ ಚಾಂಪಿಯನ್ಶಿಪ್ನಲ್ಲಿ ಭಾರತ ಮಹಿಳಾ ತಂಡದ ಕ್ಯಾಪ್ಟನ್ ಆಗಿದ್ದರು. ಜೆನ್ನಿಫರ್ ಪ್ರಖ್ಯಾತ ಬಂಗಾಲಿ ಕವಿ ಮೈಕೆಲ್ ಮಧುಸೂದನ್ ದತ್ತ ಅವರ ಮೊಮ್ಮಗಳು.
ವೇಸ್ ಪೇಸ್ ಮತ್ತು ಜೆನ್ನಿಫರ್ ದಂಪತಿಯ ಪುತ್ರ ಲಿಯಾಂಡರ್ ಪೇಸ್ ಭಾರತ ಕಂಡ ಅತ್ಯಂತ ಯಶಸ್ವಿ ಟೆನಿಸ್ ಆಟಗಾರ. ಲಿಯಾಂಡರ್ ಟೆನಿಸ್ ತರಬೇತಿ ಪಡೆದಿದ್ದು ಚೆನ್ನೈನ ಅಮೃತರಾಜ್ ಅಕಾಡೆಮಿಯಲ್ಲಿ. ಯುಎಸ್ ಓಪನ್ ಮತ್ತು ವಿಂಬಲ್ಡನ್ ಸ್ಪರ್ಧೆಗಳಲ್ಲಿ ಜೂನಿಯರ್ ಪ್ರಶಸ್ತಿ ಗಳಿಸಿದ ಲಿಯಾಂಡರ್ ಆನಂತರ ಹಲವು ವರ್ಷ ಆ ಪ್ರಶಸ್ತಿಯನ್ನು ಕಾಯ್ದುಕೊಂಡಿದ್ದರು. 1992ರ ಬಾರ್ಸಿಲೋನಾ ಒಲಿಂಪಿಕ್ಸ್ನಲ್ಲಿ ರಮೇಶ್ ಕೃಷ್ಣನ್ ಜೊತೆ ಟೆನ್ನಿಸ್ ಆಡಿ, ಕ್ವಾರ್ಟರ್ ಫೈನಲ್ನಲ್ಲಿ ಪರಾಭವಗೊಂಡಿದ್ದರು. ಆದರೆ ಅಟ್ಲಾಂಟಾದಲ್ಲಿ ನಡೆದ ಸ್ಪರ್ಧೆಯಲ್ಲಿ ಫೆರ್ನಾಂಡೋ ಮೆಲಿಗಿನಿಯನ್ನು ಸೋಲಿಸಿ ವೈಯಕ್ತಿಕ ಪ್ರಶಸ್ತಿ ಗಳಿಸಿದರು. 55 ಡಬಲ್ಸ್ ಪ್ರಶಸ್ತಿ ಹಾಗೂ ಮಿಕ್ಸೆಡ್ ಡಬಲ್ಸ್ ಪ್ರಶಸ್ತಿ ಗಳಿಸಿರುವ ಲಿಯಾಂಡರ್ 2015ರಲ್ಲಿ ಸ್ವಿಟ್ಜಲ್ರ್ಯಾಂಡ್ನ ಮಾರ್ಟಿನಾ ಹಿಂಜಿಸ್ ಜೊತೆಗೂಡಿ ಗಳಿಸಿದ ಪ್ರಶಸ್ತಿ ಇತ್ತೀಚಿನದು.
ಸುನಿಲ್ ಗಾವಸ್ಕರ್ ಮತ್ತು ರೋಹನ್ ಗಾವಸ್ಕರ್ (ಕ್ರಿಕೆಟ್)
ಭಾರತೀಯ ಕ್ರಿಕೆಟ್ನ ದಂತಕಥೆ ಎನಿಸಿರುವ ಸುನಿಲ್ ಗಾವಸ್ಕರ್ ಭಾರತ ತಂಡದ ಅತ್ಯುತ್ತಮ ಓಪನಿಂಗ್ ಬ್ಯಾಟ್ಸ್ಮನ್. ಸ್ಟ್ರೈಟ್ ಡ್ರೈವ್ ಮತ್ತು ರಕ್ಷಣಾತ್ಮಕ ಆಟಕ್ಕೆ ಹೆಸರಾಗಿದ್ದ ಸುನಿಲ್ ಗಾವಸ್ಕರ್ 34 ಟೆಸ್ಟ್ ಶತಕ ಸಿಡಿಸಿ ದಾಖಲೆ ಮಾಡಿದ್ದರು.
27 ಟೆಸ್ಟ್ ಪಂದ್ಯ ಮತ್ತು 72 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಆಲ್ರೌಂಡರ್ ಆಗಿ ಪ್ರತಿನಿಧಿಸಿದ್ದವರು ರೋಜರ್ ಬಿನ್ನಿ. 1983ರಲ್ಲಿ ಭಾರತ ಜಯಿಸಿದ ತಂಡದ ಸದಸ್ಯನಾಗಿ 18 ವಿಕೆಟ್ ಪಡೆದ ಯಶಸ್ವಿ ಮುಂಚೂಣಿ ಬೌಲರ್ ಆಗಿದ್ದವರು. ಬೌಲಿಂಗ್ನಂತೆಯೇ ಅನೇಕ ಬಾರಿ ಉತ್ತಮ ಬ್ಯಾಟಿಂಗ್ ಕೂಡ ಮಾಡಿ ಭಾರತ ತಂಡದ ಗೌರವ ಕಾಪಾಡಿದವರು.
ರೋಜರ್ ಬಿನ್ನಿ ಪುತ್ರ ಸ್ಟುವರ್ಟ್ ಬಿನ್ನಿ ಕೂಡ ಆಲ್ರೌಂಡರ್ ಆಟಗಾರ. ದೇಶೀಯ ಕ್ರಿಕೆಟ್ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುವ ಅವರು ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಾರೆ. ಬಾಂಗ್ಲಾದೇಶದ ವಿರುದ್ಧ 4 ರನ್ ನೀಡಿ 6 ವಿಕೆಟ್ ಕಿತ್ತದ್ದು ಇವರ ಗಮನಾರ್ಹ ಸಾಧನೆ.
ಇಫ್ತಿಕರ್ ಅಲಿಖಾನ್ ಪಟೌಡಿ ಮತ್ತು ಮನ್ಸೂರ್ ಅಲಿಖಾನ್ ಪಟೌಡಿ
ಇಂಗ್ಲೆಂಡ್ ಮತ್ತು ಭಾರತ ಎರಡೂ ಕ್ರಿಕೆಟ್ ತಂಡಗಳನ್ನು ಪ್ರತಿನಿಧಿಸಿದ ಅಪರೂಪದ ಕ್ರಿಕೆಟಿಗ ಇಫ್ತಿಕರ್ ಅಲಿಖಾನ್ ಪಟೌಡಿ. ನವಾಬ ವಂಶದ ಭಾರತ ಕ್ರಿಕೆಟ್ ತಂಡದ ಕಪ್ತಾನ ಕೂಡ ಆಗುವುದರಲ್ಲಿದ್ದರು. ಆದರೆ ಆರೋಗ್ಯ ಕೈಕೊಟ್ಟು ಹೃದಯಾಘಾತದಿಂದ ನಿಧನರಾದರು. ಇವರ ಪುತ್ರ ಮನ್ಸೂರ್ ಅಲಿಖಾನ್ ಪಟೌಡಿ (ಎಂ.ಎ.ಕೆ. ಪಟೌಡಿ ಅಥವಾ ಟೈಗರ್) ಶಾಲಾ ದಿನಗಳಿಂದಲೇ ಪ್ರತಿಭಾವಂತ ಕ್ರಿಕೆಟಿಗರಾಗಿದ್ದರು. ಲಂಡನ್ನಲ್ಲಿದ್ದಾಗ ನಡೆದ ಅಪಘಾತವೊಂದರಲ್ಲಿ ಬಲಗಣ್ಣಿಗೆ ಗಾಜಿನ ಚೂರು ಚುಚ್ಚಿ ಆ ಕಣ್ಣು ನಿಷ್ಕ್ರಿಯವಾಯಿತು. ಇನ್ನೇನು ಕ್ರಿಕೆಟ್ ಬದುಕು ಕೊನೆಗೊಂಡಿತೆಂದೇ ಹಲವರು ಭಾವಿಸಿದ್ದರು. ಆದರೆ ಆರು ತಿಂಗಳ ಬಳಿಕ ಮತ್ತೆ ಕ್ರಿಕೆಟ್ ಆಡತೊಡಗಿ 21ರ ಹರೆಯದಲ್ಲೇ ಭಾರತ ತಂಡದ ಟೆಸ್ಟ್ ಕ್ಯಾಪ್ಟನ್ ಆಗಿ ಮಿಂಚಿದರು. ಭಾರತದ ಪರವಾಗಿ ಒಟ್ಟು 46 ಟೆಸ್ಟ್ ಪಂದ್ಯಗಳನ್ನಾಡಿದ ಪಟೌಡಿ 40 ಪಂದ್ಯಗಳಲ್ಲಿ ಕಪ್ತಾನರಾಗಿದ್ದರು. 1962ರಲ್ಲಿ ವರ್ಷದ ವಿಸ್ಡನ್ ಕ್ರಿಕೆಟಿಗನೆಂಬ ಬಿರುದಿಗೂ ಪಾತ್ರರಾದರು.
ಸೈಯದ್ ನಯೀಮುದ್ದೀನ್ ಮತ್ತು ಸೈಯದ್ ಫಜಲುದ್ದೀನ್
ಸೈಯದ್ ನಯೀಮುದ್ದೀನ್ ಭಾರತದ ಮಾಜಿ ಫುಟ್ಬಾಲ್ ಆಟಗಾರ ಹಾಗೂ ಕೋಚ್ ಆಗಿದ್ದರು. 1970ರ ಏಷ್ಯನ್ ಗೇಮ್ಸ್ನಲ್ಲಿ ಇವರ ನೇತೃತ್ವದಲ್ಲಿ ಭಾರತ ತಂಡಕ್ಕೆ ಕಂಚಿನ ಪದಕ ದೊರಕಿತ್ತು. ಫುಟ್ಬಾಲ್ನಲ್ಲಿ ಅರ್ಜುನ ಮತ್ತು ದ್ರೋಣಾಚಾರ್ಯ – ಎರಡೂ ಪ್ರಶಸ್ತಿಗಳನ್ನು ಪಡೆದ ಹಿರಿಮೆ ಇವರದು. ಆನಂತರ ಅವರು ಬಾಂಗ್ಲಾದೇಶದ ರಾಷ್ಟ್ರೀಯ ಫುಟ್ಬಾಲ್ ತಂಡದ ಕೋಚ್ ಆಗಿದ್ದರು.
ನಯೀಮುದ್ದೀನ್ರವರ ಪುತ್ರ ಸೈಯದ್ ಫಜಲುದ್ದೀನ್ ಒಬ್ಬ ವೃತ್ತಿಪರ ಟೆನಿಸ್ ಆಟಗಾರರಾಗಿದ್ದು ಎಟಿಪಿ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. 1998 ಮತ್ತು 2001ರಲ್ಲಿ ಡೇವಿಸ್ ಕಪ್ಗೆ ಭಾರತವನ್ನು ಪ್ರತಿನಿಧಿಸಿದ್ದರು. 2002ರಲ್ಲಿ ನಿವೃತ್ತಿ ಪಡೆದು ಮಹೇಶ್ ಭೂಪತಿಗೆ ತರಬೇತಿ ನೀಡಿದರು. 1998ರಲ್ಲಿ ಬ್ಯಾಂಕಾಕ್ನಲ್ಲಿ ನಡೆದ ಏಷ್ಯನ್ ಗೇಮ್ಸ್ನಲ್ಲಿ ಕಂಚಿನ ಪದಕವನ್ನು ಭಾರತಕ್ಕೆ ಗೆದ್ದುಕೊಟ್ಟಿದ್ದರು. ಇದೀಗ ಫಿಲಡೆಲ್ಫಿಯಾದಲ್ಲಿ ಒಂದು ಟೆನಿಸ್ ಅಕಾಡೆಮಿಯನ್ನು ನಿರ್ವಹಿಸುತ್ತಿದ್ದಾರೆ.
ವಿಜಯ್ ಮಂಜ್ರೇಕರ್ ಮತ್ತು ಸಂಜಯ್ ಮಂಜ್ರೇಕರ್ (ಕ್ರಿಕೆಟ್)
55 ಟೆಸ್ಟ್ ಕ್ರಿಕೆಟ್ ಪಂದ್ಯಗಳಲ್ಲಿ ಭಾರತ ತಂಡದ ಸದಸ್ಯರಾಗಿದ್ದವರು ವಿಜಯ್ ಮಂಜ್ರೇಕರ್. ಚೆಂಡನ್ನು ಹುಕ್ ಮಾಡಿ ಬೌಂಡರಿ ಅಥವಾ ಸಿಕ್ಸರ್ಗೆ ಅಟ್ಟುವುದರಲ್ಲಿ ಈತ ನಿಸ್ಸೀಮರೆನಿಸಿದ್ದರು. ಕೇವಲ 20ರ ಹರೆಯದಲ್ಲೇ ಹೆಡ್ಡಿಂಗ್ಲೆಯಲ್ಲಿ ನಡೆದ ಟೆಸ್ಟ್ನಲ್ಲಿ ಇಂಗ್ಲೆಂಡ್ ವಿರುದ್ಧ 133 ರನ್ ಬಾರಿಸಿ ತಾನೊಬ್ಬ ಉತ್ತಮ ಕ್ರಿಕೆಟ್ ಪಟು ಎನಿಸಿಕೊಂಡಿದ್ದರು. ಆದರೆ ಸ್ಥೂಲದೇಹ ಇದ್ದಿದ್ದರಿಂದ ಕ್ರಿಕೆಟ್ನಲ್ಲಿ ಹೆಚ್ಚಿನ ಸಾಧನೆ ಮಾಡಲಾಗಲಿಲ್ಲ. ರಣಜಿಯಲ್ಲಿ 6 ತಂಡಗಳನ್ನು ಪ್ರತಿನಿಧಿಸಿದ್ದರು.
ವಿಜಯ್ ಅವರ ಪುತ್ರ ಸಂಜಯ್ ಮಂಜ್ರೇಕರ್ 34 ಟೆಸ್ಟ್ ಹಾಗೂ 74 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ವಿಕೆಟ್ ಕೀಪರ್ ಆಗಿ ಪಾತ್ರ ನಿರ್ವಹಿಸಿದ ಸಂಜಯ್ 1987ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡುವ ಮೂಲಕ ತನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಕಾಲಿಟ್ಟರು. 1989ರ ಸರಣಿಯಲ್ಲಿ ಪಾಕಿಸ್ತಾನದ ವಿರುದ್ಧ 218 ರನ್ ಸಿಡಿಸಿದ್ದು ಅವರ ಸ್ಮರಣೀಯ ಸಾಧನೆ. 1996ರಲ್ಲಿ ನಿವೃತ್ತಿಯ ಬಳಿಕ ಸಂಜಯ್ ಮಂಜ್ರೇಕರ್ ಒಬ್ಬ ಯಶಸ್ವಿ ವೀಕ್ಷಕ ವಿವರಣೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕೃಷ್ಣಮಾಚಾರಿ ಶ್ರೀಕಾಂತ್ ಮತ್ತು ಅನಿರುದ್ಧ ಶ್ರೀಕಾಂತ್ (ಕ್ರಿಕೆಟ್)
ಭಾರತ ಕಂಡ ಒಬ್ಬ ಆಕ್ರಮಣಕಾರಿ ಓಪನಿಂಗ್ ಬ್ಯಾಟ್ಸ್ಮನ್ ಎಂದರೆ ಕೃಷ್ಣಮಾಚಾರಿ ಶ್ರೀಕಾಂತ್. 21ರ ಹರೆಯದಲ್ಲೇ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿದ ಶ್ರೀಕಾಂತ್, ಸುನಿಲ್ ಗಾವಸ್ಕರ್ ಜೊತೆ ಓಪನಿಂಗ್ ಬ್ಯಾಟ್ಸ್ಮನ್ ಆಗಿ ಅದ್ಭುತವಾಗಿ ಆಡಿದ ಹೆಗ್ಗಳಿಕೆಗೆ ಪಾತ್ರರಾದರು.
1983ರ ವಿಶ್ವಕಪ್ ವಿಜೇತ ತಂಡದಲ್ಲಿದ್ದ ಶ್ರೀಕಾಂತ್ ಆ ಪಂದ್ಯದಲ್ಲಿ 38 ರನ್ ಗಳಿಸಿದ್ದರು. 1989ರಲ್ಲಿ ತಂಡದ ಕ್ಯಾಪ್ಟನ್ ಕೂಡ ಆಗಿದ್ದರು. 43 ಟೆಸ್ಟ್ ಪಂದ್ಯ ಹಾಗೂ 146 ಏಕದಿನ ಪಂದ್ಯಗಳನ್ನಾಡಿದ ಬಳಿಕ ಶ್ರೀಕಾಂತ್ ವೃತ್ತಿಜೀವನಕ್ಕೆ ವಿದಾಯ ಹೇಳಿದರು. ಆನಂತರ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು.
ಶ್ರೀಕಾಂತ್ ಅವರ ಪುತ್ರ ಅನಿರುದ್ಧ ಕೂಡ ಆಕ್ರಮಣಕಾರಿ ಓಪನಿಂಗ್ ಬ್ಯಾಟ್ಸ್ಮನ್. 16ನೇ ವಯಸ್ಸಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್ಗೆ ಕಾಲಿಟ್ಟು ತಮಿಳುನಾಡು ರಣಜಿ ತಂಡದ ಪರವಾಗಿ ಆಡಿದರು. ಐಪಿಎಲ್ನ ಮೊದಲ ಎರಡು ಆವೃತ್ತಿಗಳಲ್ಲಿ ಅನಿರುದ್ಧ ಚೆನ್ನೈ ಸೂಪರ್ಸ್ಟಾರ್ ಪರವಾಗಿ ಆಡಿದ್ದರು. ಕಳೆದ ವರ್ಷ ಸನ್ರೈಡರ್ಸ್ ಹೈದರಾಬಾದ್ ತಂಡ ಅವರನ್ನು ಖರೀದಿಸಿತ್ತು. ಭಾರತ ತಂಡ ಸೇರಲು ಅನಿರುದ್ಧ ಅವಕಾಶಕ್ಕಾಗಿ ಕಾದು ಕುಳಿತಿದ್ದಾರೆ.
ಇಂತಹ ಇನ್ನೂ ಕೆಲವು ಆಟಗಾರರ ಕುಟುಂಬಗಳು ಭಾರತದಲ್ಲಿವೆ. ಆಟಗಾರರ ಮಕ್ಕಳು ಉತ್ತಮ ಆಟಗಾರರಾಗಿ ದೇಶದ ಘನತೆ ಗೌರವಗಳನ್ನು ಎತ್ತಿಹಿಡಿದಿದ್ದಾರೆ. ಅಂತಹ ಕುಟುಂಬಗಳು ಹೆಚ್ಚಲಿ ಎಂಬುದು ಕ್ರೀಡಾಭಿಮಾನಿಗಳ ಹಾರೈಕೆ.