‘ಶ್ರೀಕಾಂತ್ ಎಂಬ ಈ ಪ್ರತಿಭಾವಂತ ಆಟಗಾರನ ಅತಿದೊಡ್ಡ ತಾಕತ್ ಎಂದರೆ ಆತ ದೊಡ್ಡ ದೊಡ್ಡ ಪಂದ್ಯಗಳಲ್ಲಿ ಆಡಲು ಕಿಂಚಿತ್ತೂ ಹಿಂಜರಿಯುವುದಿಲ್ಲ. ಆತನ ಹೊಡೆತಗಳಿಗೆ ಹಲವು ಬಾರಿ ಹಿರಿಯ ಆಟಗಾರರೂ ಅಳುಕಿದ್ದುಂಟು’ _ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಗೋಪಿಚಂದ್.
ಬ್ಯಾಡ್ಮಿಂಟನ್ ಆಟದಲ್ಲಿ, ಚೀನಾ ಓಪನ್ ಸ್ಪರ್ಧೆಯಲ್ಲಿ ಚೀನಾದ ಸ್ಪರ್ಧಿ ಲಿನ್ ಡಾನ್ನನ್ನು ಸೋಲಿಸುವುದೆಂದರೆ ಅದೊಂದು ದೊಡ್ಡ ಸಾಧನೆ. ಏಕೆಂದರೆ ಲಿನ್ ಡಾನ್ ೫ ಬಾರಿ ಚೀನಾ ಓಪನ್ ಸ್ಪರ್ಧೆಯ ಚಾಂಪಿಯನ್. ಅಷ್ಟೇ ಅಲ್ಲ, ೫ ಬಾರಿ ಆತ ಜಾಗತಿಕ ಚಾಂಪಿಯನ್ ಕಿರೀಟ ಧರಿಸಿದಾತ. ಜೊತೆಗೆ ೨ ಬಾರಿ ಒಲಿಂಪಿಕ್ ಚಿನ್ನದ ಪದಕ ಪಡೆದ ಗರಿಮೆ. ಚೀನಾದ ಪ್ರೇಕ್ಷಕರ ಎದುರೇ ಲಿನ್ ಡಾನ್ ಎಂಬ ಬ್ಯಾಡ್ಮಿಂಟನ್ ಚಾಂಪಿಯನ್ನನ್ನು ಸೋಲಿಸುವುದೆಂದರೆ ಅದು ಮ್ಯಾಡ್ರಿಡ್ನ ಆವೆಮಣ್ಣಿನ ಅಂಗಳದಲ್ಲಿ ರಾಫೆಲ್ ನಡಾಲ್ನನ್ನು ಟೆನಿಸ್ನಲ್ಲಿ ಸೋಲಿಸಿದಂತೆ ಅಥವಾ ಆಸ್ಟ್ರೇಲಿಯಾದ ವಿರುದ್ಧ ಕ್ರಿಕೆಟ್ ಟೆಸ್ಟ್ ಸರಣಿ ಜಯಿಸಿದಂತೆ.
ಹೀಗೆ ಲಿನ್ ಡಾನ್ನನ್ನು ಅವನದೇ ತವರು ನೆಲದಲ್ಲಿ ಸೋಲಿಸಿದ ಧೀರ ಇನ್ಯಾರೂ ಅಲ್ಲ, ಆತನೇ ೨೧ರ ಹರೆಯದ ಭಾರತದ ಕಿಡಂಬಿ ಶ್ರೀಕಾಂತ್. ಲಿನ್ ಡಾನ್ನನ್ನು ಆತ ಸೋಲಿಸಿದ್ದು ಕಳೆದ ೨೦೧೪ರ ನವೆಂಬರ್ ತಿಂಗಳಲ್ಲಿ. ಶ್ರೀಕಾಂತ್ಗೆ ತನ್ನ ಬ್ಯಾಡ್ಮಿಂಟನ್ ವೃತ್ತಿ ಬದುಕಿನಲ್ಲಿ ಇದೊಂದು ದೊಡ್ಡ ಗೆಲವು. ೨೦೧೨ರಲ್ಲಿ ಶ್ರೀಕಾಂತ್ ಜಾಗತಿಕ ಮಟ್ಟದಲ್ಲಿ ೨೪೦ನೇ ಸ್ಥಾನದಲ್ಲಿದ್ದು, ಅಷ್ಟಾಗಿ ಯಾರ ಗಮನಕ್ಕೂ ಬಿದ್ದಿರಲಿಲ್ಲ. ಆದರೆ ೨೦೧೩ರ ಕೊನೆಯಲ್ಲಿ ಆತ ೪೭ನೇ ಸ್ಥಾನಕ್ಕೆ ಜಿಗಿದಿದ್ದ. ೨೦೧೪ರಲ್ಲಿ ಇನ್ನಷ್ಟು ಸಾಧನೆ ಮಾಡಿ ಆತ ಏರಿದ್ದು ಜಾಗತಿಕ ಮಟ್ಟದ ೪ನೇ ಸ್ಥಾನಕ್ಕೆ. ಚೀನಾ ಓಪನ್ ಸ್ಪರ್ಧೆಯನ್ನು ಗೆದ್ದಿದ್ದಕ್ಕೆ ಆತನಿಗೆ ದೊರಕಿದ್ದು ಬರೋಬ್ಬರಿ ೫೦ ಸಾವಿರ ಅಮೆರಿಕನ್ ಡಾಲರ್ ಹಣ. ಜೊತೆಗೆ ಚೈನಾ ಕ್ರೀಡಾ ಬ್ರಾಂಡ್ ಲಿ ನಿಂಗ್ ಉಪಕರಣ.
ಶ್ರೀಕಾಂತ್ ಹುಟ್ಟಿದ್ದು ಆಂಧ್ರಪ್ರದೇಶದ ಗುಂಟೂರಿನ ಒಂದು ಸಾಧಾರಣ ರೈತ ಕುಟುಂಬದಲ್ಲಿ (ಜನನ: ೧೯೯೩ ಫೆಬ್ರುವರಿ ೭). ತಂದೆ ಕೆ.ವಿ.ಎಸ್. ಕೃಷ್ಣ ಒಬ್ಬ ರೈತ. ತಾಯಿ ರಾಧಾ ಗೃಹಿಣಿ. ಶ್ರೀಕಾಂತ್ ಅಣ್ಣ ನಂದಗೋಪಾಲ್ ಕೂಡ ಒಬ್ಬ ಬ್ಯಾಡ್ಮಿಂಟನ್ ಆಟಗಾರ. ಶ್ರೀಕಾಂತ್ಗೆ ಬ್ಯಾಡ್ಮಿಂಟನ್ ಆಡಲು ಅಣ್ಣನದೇ ಸ್ಫೂರ್ತಿ. ಚಿಕ್ಕಂದಿನಿಂದಲೇ ಬ್ಯಾಡ್ಮಿಂಟನ್ ಆಟದಲ್ಲಿ ಮೈಮರೆತ ಶ್ರೀಕಾಂತ್ ಬಾಲ್ಯಸಹಜ ಇತರೆ ಚಟುವಟಿಕೆಗಳಿಗೆ ತಿಲಾಂಜಲಿ ನೀಡಿದ. ಮೈಮನಗಳಲ್ಲಿ ಬ್ಯಾಡ್ಮಿಂಟನ್ ಆಟ ತುಂಬಿಕೊಂಡ. ಸದಾ ಆತನಿಗೆ ಬ್ಯಾಡ್ಮಿಂಟನ್ದೇ ಧ್ಯಾನ.
ಯಶಸ್ಸಿನ ಸೋಪಾನ
ಹೀಗೆ ಕನಸು ಮನಸುಗಳಲ್ಲಿ ಬ್ಯಾಡ್ಮಿಂಟನ್ ಹುಚ್ಚು ತುಂಬಿಕೊಂಡ ಶ್ರೀಕಾಂತ್ಗೆ ನೆರವಾಗಿದ್ದು ಹೈದರಾಬಾದ್ನಲ್ಲಿರುವ ಪುಲ್ಲೇಲ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿ. ವಿಶಾಖಪಟ್ಟಣಂನಿಂದ ಶ್ರೀಕಾಂತ್ ತನ್ನ ನೆಲೆಯನ್ನು ಹೈದರಾಬಾದ್ಗೆ ಹೀಗೆ ಬದಲಾಯಿಸಿದ್ದು ೨೦೦೯ರಲ್ಲಿ. ಆಲ್ ಇಂಗ್ಲೆಂಡ್ ಚಾಂಪಿಯನ್ ಆಗಿದ್ದ ಗೋಪಿಚಂದ್ ಅವರ ಅಕಾಡೆಮಿ ಶ್ರೀಕಾಂತ್ಗೆ ಕೇವಲ ತರಬೇತಿಯಷ್ಟೇ ಅಲ್ಲ, ಆತನೊಳಗಿದ್ದ ಬ್ಯಾಡ್ಮಿಂಟನ್ ಪ್ರತಿಭೆ ಅರಳಲು ಎಲ್ಲ ಬಗೆಯಲ್ಲೂ ನೆರವಾಯಿತು. ಇದಕ್ಕೆ ಅನಂತರ ಶ್ರೀಕಾಂತ್ ತುಳಿದ ಯಶಸ್ಸಿನ ಸೋಪಾನಗಳೇ ನಿದರ್ಶನ.
೨೦೧೧ರ ಕಾಮನ್ವೆಲ್ತ್ ಗೇಮ್ಸ್ನ ಮಿಕ್ಸೆಡ್ ಡಬಲ್ಸ್ನಲ್ಲಿ ಬೆಳ್ಳಿ ಪದಕ ಮತ್ತು ಡಬಲ್ಸ್ನಲ್ಲಿ ಕಂಚು ಪದಕ. ಪುಣೆಯಲ್ಲಿ ನಡೆದ ಆಲ್ ಇಂಡಿಯಾ ಜೂನಿಯರ್ ಇಂಟರ್ನ್ಯಾಷನಲ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನ ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗದಲ್ಲಿ ಗೆಲವು. ೨೦೧೨ರಲ್ಲಿ ಮಾಲ್ಡೀವ್ಸ್ ಇಂಟರ್ನ್ಯಾಷನಲ್ ಸ್ಪರ್ಧೆಯಲ್ಲಿ ಮಲೇಷಿಯಾದ ಜೂನಿಯರ್ ವರ್ಲ್ಡ್ ಚಾಂಪಿಯನ್ ಜುಲ್ಕಿಫಿಯನ್ನು ಸೋಲಿಸಿ ಪುರುಷರ ಸಿಂಗಲ್ಸ್ ಪ್ರಶಸ್ತಿಯ ಗೆಲವು. ೨೦೧೩ರಲ್ಲಿ ನಡೆದ ಥೈಲ್ಯಾಂಡ್ ಓಪನ್ ಗ್ರಾಂಡ್ ಪ್ರಿಕ್ಸ್ನ ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ. ಅದೇ ವರ್ಷ ಒಲಂಪಿಕ್ ಕ್ರೀಡಾಪಟು ಪರುಪಲ್ಲಿ ಕಶ್ಯಪ್ ಅವರನ್ನು ಆಲ್ ಇಂಡಿಯಾ ಸೀನಿಯರ್ ನ್ಯಾಷನಲ್ ಚಾಂಪಿಯನ್ಶಿಪ್ನಲ್ಲಿ ಸೋಲಿಸಿ ಚಾಂಪಿಯನ್ ಕಿರೀಟ. ೨೦೧೪ರಲ್ಲಿ ಲಕ್ನೋದಲ್ಲಿ ನಡೆದ ಇಂಡಿಯಾ ಓಪನ್ ಗ್ರಾಂಡ್ ಪ್ರಿಕ್ಸ್ನಲ್ಲಿ ರನ್ನರ್ ಅಪ್ ಪ್ರಶಸ್ತಿ. ಅದೇ ವರ್ಷ ಮಲೇಷಿಯಾ ಓಪನ್ ಸ್ಪರ್ಧೆಯಲ್ಲಿ ಕ್ವಾರ್ಟರ್ ಫೈನಲ್ವರೆಗೆ ಪಯಣ… ಹೀಗೆ ಶ್ರೀಕಾಂತ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಹಲವು ಸ್ಪರ್ಧೆಗಳಲ್ಲಿ ಗೆಲವಿನ ದಾಖಲೆ ಬರೆದಿದ್ದಾರೆ.
‘ಈ ವರ್ಷ ಇನ್ನಷ್ಟು ಹೆಚ್ಚು ಗ್ರಾಂಡ್ ಪ್ರಿಕ್ಸ್ ಮತ್ತು ಗ್ರಾಂಡ್ ಪ್ರಿಕ್ಸ್ ಗೋಲ್ಡ್ ಪ್ರಶಸ್ತಿಗಳನ್ನು ಗೆಲ್ಲಬೇಕೆಂಬುದು ನನ್ನಾಸೆ. ೨೦೧೪ರ ಆರಂಭ ನನ್ನ ಪಾಲಿಗೆ ಉತ್ತಮವಾಗಿಯೇ ಇತ್ತು. ಕೆಲವು ಉನ್ನತ ರ್ಯಾಂಕಿಂಗ್ ಪಟುಗಳ ವಿರುದ್ಧ ಚೆನ್ನಾಗಿಯೆ ಆಡಿ, ಗೆದ್ದಿರುವೆ. ಅದನ್ನೇ ಈಗ ಮುಂದುವರಿಸಬೇಕು’ – ಇದು ಶ್ರೀಕಾಂತ್ ಮನದ ಹಂಬಲ.
ಸುಲಭವಲ್ಲದ ಹಂಬಲ
ಕ್ರೀಡೆಯಲ್ಲಿ, ಅದರಲ್ಲೂ ಬ್ಯಾಡ್ಮಿಂಟನ್ನಂತಹ ವೈಯಕ್ತಿಕ ಕ್ರೀಡೆಯಲ್ಲಿ ಜಾಗತಿಕ ಮಟ್ಟದ ಉನ್ನತ ಸ್ಥಾನಕ್ಕೇರುವುದು ಎಣಿಸಿದಷ್ಟು ಸುಲಭವಲ್ಲ. ಅಲ್ಲಿ ಒಂದೊಂದು ದಿನವೂ ಸವಾಲಿನ ದಿನವೇ. ಊರಿಂದೂರಿಗೆ, ದೇಶದಿಂದ ಇನ್ನೊಂದು ದೇಶಕ್ಕೆ, ಒಂದು ವಿಮಾನ ನಿಲ್ದಾಣದಿಂದ ಇನ್ನೊಂದು ವಿಮಾನ ನಿಲ್ದಾಣಕ್ಕೆ ತಂದೆ ತಾಯಿ, ಕುಟುಂಬ ಎಲ್ಲರನ್ನೂ ಹಿಂದೆ ಬಿಟ್ಟು, ಆದರೆ ಶಾರೀರಿಕ ದೃಢತೆ ಹಾಗೂ ಸಾಧನೆಗಳನ್ನು ಕಾಪಾಡಿಕೊಂಡು ಹೋಗಬೇಕಾದ ಅನಿವಾರ್ಯತೆಯಲ್ಲಿ ಜಾಗತಿಕ ಮಟ್ಟದ ರ್ಯಾಂಕಿಂಗ್ ಉಳಿಸಿಕೊಳ್ಳುವುದು ಹರಸಾಹಸವೇ ಸರಿ. ಇದಕ್ಕೆ ಸ್ಥಿರ ಮನಸ್ಸು, ಯೋಗಿಯೊಬ್ಬನಿಗಿರಬೇಕಾದ ದೃಢ ಮಾನಸಿಕತೆ ಅಗತ್ಯ. ಚಾಂಪಿಯನ್ಗಳು ಇರುವುದೇ ಹಾಗೆ. ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಚಾಂಪಿಯನ್ ಆಗಿರುವ ಲಿನ್ ಡಾನ್ ಇರುವುದು ಹಾಗೆಯೇ.
ಶ್ರೀಕಾಂತ್ ಈಗ ಭಾರತೀಯ ಬ್ಯಾಡ್ಮಿಂಟನ್ ತಾರೆಯಾಗಿ ಹೊರಹೊಮ್ಮಿರಬಹುದು. ಆದರೆ ಆತನ ಮೊದಲ ತರಬೇತುದಾರ ಸುಧಾಕರ ರೆಡ್ಡಿ ಆರಂಭದ ದಿನಗಳಲ್ಲಿ ಶ್ರೀಕಾಂತ್ ಹೇಗಿದ್ದ ಎಂದು ಕೊಡುವ ಚಿತ್ರಣವೇ ಬೇರೆ. ರೆಡ್ಡಿ ಶ್ರೀಕಾಂತ್ನನ್ನು ಮೊದಲು ಭೇಟಿ ಮಾಡಿದ್ದು ೧೩ರ ವಯೋಮಾನದ ಕೆಳಗಿನ ಆಟಗಾರರ ಚಾಂಪಿಯನ್ಶಿಪ್ ಸ್ಪರ್ಧೆಯೊಂದರಲ್ಲಿ. ಶ್ರೀಕಾಂತ್ ಮತ್ತು ಆತನ ಅಣ್ಣ ನಂದಗೋಪಾಲ್ ಆಂಧ್ರಪ್ರದೇಶ ಸರ್ಕಾರದ ಅಕಾಡೆಮಿಗೆ ಆಯ್ಕೆಯಾಗಿದ್ದರು. ೮ರ ಹರೆಯದಲ್ಲೇ ಶ್ರೀಕಾಂತ್ ಅಕಾಡೆಮಿಯ ಬಾಲಕರ ಹಾಸ್ಟೆಲ್ಗೆ ಸೇರಿದ ಅತಿ ಕಿರಿಯನಾಗಿದ್ದ. ಆಗ ಆತ ಅತ್ಯಂತ ಸೋಮಾರಿ, ತಿನ್ನುವುದರಲ್ಲೂ ಅಷ್ಟೆ. ಎಂದಿಗೂ ಬೆವರು ಹರಿಸುವ ಜಾಯಮಾನವೇ ಅವನದಾಗಿರಲಿಲ್ಲ ಎಂದು ರೆಡ್ಡಿ ಹೇಳುತ್ತಾರೆ. ಆದರೆ ಶ್ರೀಕಾಂತ್ ಅಣ್ಣ ನಂದಗೋಪಾಲ್ ಕಠಿಣ ಪರಿಶ್ರಮಿಯಾಗಿದ್ದ. ಶ್ರೀಕಾಂತ್ ತಾಂತ್ರಿಕವಾಗಿ ಮಾತ್ರ ಸಮರ್ಥನೆನಿಸಿದ್ದ. ಶಾರೀರಿಕವಾಗಿ ಆತ ಬ್ಯಾಡ್ಮಿಂಟನ್ ಆಟಕ್ಕೆ ಲಾಯಕ್ ಆಗಿರಲಿಲ್ಲ. ೨೦೧೧ರಲ್ಲಿ ಜೈಪುರದಲ್ಲಿ ನಡೆದ ರಾಷ್ಟ್ರೀಯ ಜೂನಿಯರ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಶ್ರೀಕಾಂತ್ಗೆ ನಿರಾಶೆಯ ಸೋಲು. ತರಬೇತುದಾರ ರೆಡ್ಡಿಗೆ ತಡೆದುಕೊಳ್ಳಲಾಗಲಿಲ್ಲ. ‘ಎಂತಹ ಮೂರ್ಖತನದ ಕೆಲಸ ಮಾಡುತ್ತಿರುವೆ? ಮುಂದಿನ ವರ್ಷ ನೀನು ಸೀನಿಯರ್ ಆಟಗಾರರ ಜೊತೆ ಆಡಬೇಕು. ಆಗೇನು ಮಾಡುವೆ?’ ಎಂದು ತರಾಟೆಗೆ ತೆಗೆದುಕೊಂಡಿದ್ದರು.
ಆಗ ಶ್ರೀಕಾಂತ್ ನೆರವಿಗೆ ಬಂದಿದ್ದು ಗೋಪಿಚಂದ್ ಅಕಾಡೆಮಿ. ಆತನಿಗೆ ಅಗತ್ಯವಿರುವ ತಾಂತ್ರಿಕ ನೆರವು ಕೂಡ ದೊರಕಿತು. ಅಷ್ಟೆ ಅಲ್ಲ, ಗೋಸ್ಪೋರ್ಟ್ಸ್ ಫೌಂಡೇಷನ್ ಆತನಿಗೆ ಆರ್ಥಿಕ ಸಹಕಾರವನ್ನು ೨೦೧೨ರಿಂದ ನಿರಂತರವಾಗಿ ನೀಡುತ್ತಾ ಬಂದಿದೆ. ಪ್ರತಿಭೆಯೊಂದಿದ್ದರೆ ಸಾಲದು, ಅದನ್ನು ಪೋಷಿಸಲು ಅಗತ್ಯವಿರುವ ಆರ್ಥಿಕಬೆಂಬಲವೂ ಬೇಕು. ಶ್ರೀಕಾಂತ್ ಆ ಅದೃಷ್ಟ ಪಡೆದಿದ್ದಾರೆ. ಗೋಸ್ಪೋರ್ಟ್ಸ್ ಫೌಂಡೇಷನ್ ಶ್ರೀಕಾಂತ್ ಎಂಬ ಬ್ಯಾಡ್ಮಿಂಟನ್ ಪ್ರತಿಭೆಯ ಸಮಗ್ರ ಬೆಳವಣಿಗೆಗೆ ಸಂಪೂರ್ಣ ಕಟಿಬದ್ಧವಾಗಿದೆ.
‘ಶ್ರೀಕಾಂತ್ ಎಂಬ ಈ ಪ್ರತಿಭಾವಂತ ಆಟಗಾರನ ಅತಿದೊಡ್ಡ ತಾಕತ್ ಎಂದರೆ ಆತ ದೊಡ್ಡ ದೊಡ್ಡ ಪಂದ್ಯಗಳಲ್ಲಿ ಆಡಲು ಕಿಂಚಿತ್ತೂ ಹಿಂಜರಿಯುವುದಿಲ್ಲ. ಆತನ ಹೊಡೆತಗಳಿಗೆ ಹಲವು ಬಾರಿ ಹಿರಿಯ ಆಟಗಾರರೂ ಅಳುಕಿದ್ದುಂಟು’ ಎನ್ನುತ್ತಾರೆ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಗೋಪಿಚಂದ್.
ಶ್ರೀಕಾಂತ್ಗೆ ಗೋಪಿಚಂದ್ ಅವರ ಈ ಹೊಗಳಿಕೆ ನೂರಾನೆ ಬಲ ನೀಡಿದೆ. ನನ್ನ ಆರಾಧ್ಯ ದೈವವೇ ಗೋಪಿಚಂದ್. ಅವರು ೨೦೦೧ರಲ್ಲಿ ಆಲ್ ಇಂಗ್ಲೆಂಡ್ ಓಪನ್ ಚಾಂಪಿಯನ್ಶಿಪ್ನಲ್ಲಿ ಗೆದ್ದ ಆಟವನ್ನು ನೋಡಿಯೇ ನಾನು ಸಾಕಷ್ಟು ಕಲಿತಿರುವೆ ಎಂದು ಶ್ರೀಕಾಂತ್ ಹೇಳುತ್ತಾರೆ.
ಭವ್ಯ ಕನಸು
ಶ್ರೀಕಾಂತ್ ಗುರಿ ಈಗ – ೨೦೧೬ರ ರಿಯೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವುದು. ೨೦೧೬ರ ವೇಳೆಗೆ ಶ್ರೀಕಾಂತ್ ೨೨ರ ಹರೆಯಕ್ಕೆ ಕಾಲಿಡುತ್ತಾರೆ. ಆದರೆ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವುದು ಸುಲಭವಲ್ಲ. ಅದಕ್ಕಾಗಿ ಕಠಿಣ ಶ್ರಮ ವಹಿಸಬೇಕು. ಇನ್ನೊಂದು ವರ್ಷ ಶ್ರೀಕಾಂತ್ ಕಠಿಣ ಹಾದಿ ಸವೆಸಬೇಕು ಎಂಬುದು ತರಬೇತುದಾರ ರೆಡ್ಡಿಯವರ ಕಿವಿಮಾತು. ಹಾಗಾಗಿ ಈ ವರ್ಷ ಶ್ರೀಕಾಂತ್ ಪಾಲಿಗೆ ನಿರ್ಣಾಯಕ ವರ್ಷ. ತಲೆಬಗ್ಗಿಸಿ, ಬೆವರಿಳಿಸಿ ಬ್ಯಾಡ್ಮಿಂಟನ್ ಆಟದಲ್ಲಿ ಇನ್ನಷ್ಟು ಪರಿಣತಿ ಪಡೆಯಬೇಕಾಗಿದೆ.
ಒಲಿಂಪಿಕ್ ಪದಕ ಗಳಿಕೆ ಪ್ರತಿಯೊಬ್ಬ ಆಟಗಾರನ ಭವ್ಯ ಕನಸು. ನನ್ನ ಕನಸು ಕೂಡ ಅದೇ ಎಂದು ಶ್ರೀಕಾಂತ್ ವಿನೀತರಾಗಿ ಹೇಳುತ್ತಾರೆ. ಆದರೆ ನನ್ನ ಮುಂದಿನ ದೊಡ್ಡ ಗುರಿ ಜಗತ್ತಿನ ನಂಬರ್ ಒನ್ ಆಟಗಾರನಾಗುವುದು. ರಿಯೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಪಡೆದರೆ ನನ್ನ ಗುರಿ ಈಡೇರಲಿದೆ ಎಂದು ಹೇಳಲು ಶ್ರೀಕಾಂತ್ ಮರೆಯುವುದಿಲ್ಲ.
ಅದೇನೇ ಇರಲಿ, ಶ್ರೀಕಾಂತ್ಗೆ ಉಜ್ಜ್ವಲ ಭವಿಷ್ಯ ಖಂಡಿತ ಇದೆ. ಪ್ರಕಾಶ್ ಪಡುಕೋಣೆ, ಪುಲ್ಲೇಲ ಗೋಪಿಚಂದ್ ಎಂಬ ಬ್ಯಾಡ್ಮಿಂಟನ್ ತಾರೆಗಳ ಸಾಲಿನಲ್ಲಿ ಶ್ರೀಕಾಂತ್ ಹೆಸರು ಕೂಡ ಸೇರ್ಪಡೆ ಆಗುವ ದಿನ ದೂರವಿಲ್ಲ.