ಒಂದೇ ವರ್ಷದಲ್ಲಿ ಫ್ರೆಂಚ್ ಓಪನ್, ವಿಂಬಲ್ಡನ್ ಎರಡನ್ನೂ ಗೆದ್ದಿರುವ ಜಗತ್ತಿನ ಆರನೇ ಆಟಗಾರ ಆಲ್ಕರಜ್. ಹೀಗೆ ಈಗಾಗಲೆ ಲೇವರ್, ಬೋರ್ಗ್, ಫೆಡರರ್, ನಡಾಲ್, ಜೋಕೊವಿಚ್ – ಈ ಶ್ರೇಷ್ಠರ ಪಂಕ್ತಿಯಲ್ಲಿ ಆಲ್ಕರಜ್ ಸೇರ್ಪಡೆಯಾಗಿಬಿಟ್ಟಿದ್ದಾರೆ.
ಟೆನಿಸ್ ಕ್ರೀಡಾಳುಗಳಲ್ಲಿ ವಿರಳರ ಮುಡಿಗಷ್ಟೆ ಏರುವ ವಿಂಬಲ್ಡನ್ ಕಿರೀಟವನ್ನು ಸತತ ಎರಡನೇ ಬಾರಿ ತಮ್ಮದಾಗಿಸಿಕೊಂಡ ಸ್ಪೇಯ್ನ್ ದೇಶದ ಕೇವಲ ೨೧ ವಯಸ್ಸಿನ ಕಾರ್ಲೋಸ್ ಆಲ್ಕರಜ್ ಜಗತ್ತಿನಾದ್ಯಂತ ಕ್ರೀಡಾಸಕ್ತರನ್ನು ಹುಚ್ಚೆಬ್ಬಿಸಿಬಿಟ್ಟಿದ್ದಾರೆ. ಆಲ್ಕರಜ್‌ಗೆ ಸ್ಪರ್ಧೆಯನ್ನೊಡ್ಡಿದ ಸರ್ಬಿಯ ಮೂಲದ ‘ಸೋಲರಿಯದ ಸರ್ದಾರ’ ನೊವಾಕ್ ಜೋಕೊವಿಚ್ ತಮ್ಮ ೨೫ನೇ ಟ್ರೋಫಿಯನ್ನು ಗೆಲ್ಲುವ ಕನಸು ಈಡೇರಲಿಲ್ಲ. ಮೂರು ನೇರ ಸೆಟ್‌ಗಳಲ್ಲಿ ಆಲ್ಕರಜ್‌ರ ಚುರುಕುತನ-ರಭಸದೆದುರಿಗೆ ಜೋಕೊವಿಚ್ ಸಾಹಸ ನಿಸ್ತೇಜವೆನಿಸಿತು. ಭವ್ಯ ಭವಿಷ್ಯಕ್ಕೆ ನಾಂದಿ ಹಾಡಿರುವ ಆಲ್ಕರಜ್ ಹಲವು ದಾಖಲೆಗಳನ್ನು ಈಗಾಗಲೆ ತಮ್ಮದಾಗಿಸಿಕೊಂಡಿದ್ದಾರೆ. ಈ ಹಿಂದೆ ಜೋಕೊವಿಚ್‌ರನ್ನು ಸತತ ಎರಡನೇ ಬಾರಿ ಸೋಲಿಸಿದ್ದವರು ರಾಫೆಲ್ ನಡಾಲ್ ಮಾತ್ರ. ೨೦೨೨ರಿಂದ ನಾಲ್ಕು ಬಾರಿ ಸತತವಾಗಿ ಗ್ರಾನ್‌ಸ್ಲಾಂ ಫೈನಲ್‌ನಲ್ಲಿ ಶೃಂಗಕ್ಕೇರಿ ಫೆಡರರ್ ದಾಖಲೆಯನ್ನು ಆಲ್ಕರಜ್ ಸರಿಗಟ್ಟಿದ್ದಾರೆ. ಒಂದೇ ವರ್ಷದಲ್ಲಿ ಫ್ರೆಂಚ್ ಓಪನ್, ವಿಂಬಲ್ಡನ್ ಎರಡನ್ನೂ ಗೆದ್ದಿರುವ ಜಗತ್ತಿನ ಆರನೇ ಆಟಗಾರ ಆಲ್ಕರಜ್. ಹೀಗೆ ಈಗಾಗಲೆ ಲೇವರ್, ಬೋರ್ಗ್, ಫೆಡರರ್, ನಡಾಲ್, ಜೋಕೊವಿಚ್ – ಈ ಶ್ರೇಷ್ಠರ ಪಂಕ್ತಿಯಲ್ಲಿ ಆಲ್ಕರಜ್ ಸೇರ್ಪಡೆಯಾಗಿಬಿಟ್ಟಿದ್ದಾರೆ.