ಕಾರ್ಪೋರೇಟ್ ಜಗತ್ತಿನ ಹಣದ ಹೊಳೆ, ಕೋಟಿ ಮೊತ್ತದ ಬಹುಮಾನಗಳ ಸುರಿಮಳೆ ಇತ್ಯಾದಿ ಆಕರ್ಷಣೆಗಳ ನಡುವೆ ಕಬಡ್ಡಿಯ ಮೂಲಸತ್ತ್ವ ಕೊಚ್ಚಿಹೋಗದಿರಲಿ. ಕಬಡ್ಡಿಯ ಪಾವಿತ್ರ್ಯಕ್ಕೆ ಕಳಂಕ ತಟ್ಟದಿರಲಿ.
ಕ್ರಿಕೆಟ್ ಆಟದ ಗುಂಗಿನ ನಡುವೆ ಅಪ್ಪಟ ಗ್ರಾಮೀಣ ಕ್ರೀಡೆಯಾಗಿರುವ ಕಬಡ್ಡಿ ಸೋತು, ಸೊರಗಿ ಹೋಗಿತ್ತು. ಅಲ್ಲಲ್ಲಿ ಕಬಡ್ಡಿ ಆಡುವ ಪಡ್ಡೆ ಹುಡುಗರು ಈ ಆಟವನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಿದ್ದರಾದರೂ ಅದಕ್ಕೊಂದು ಮಾನ್ಯತೆ ಅಷ್ಟಾಗಿ ಸಿಕ್ಕಿರಲಿಲ್ಲ. ಆದರೆ ಈಗ ಕಬಡ್ಡಿಗೂ ಖದರ್ ಬಂದಿದೆ. ಹೀಗೆ ಕಬಡ್ಡಿಗೊಂದು ಜನಪ್ರಿಯತೆ ಬರಬಹುದೆಂದು ಬಹುಶಃ ಯಾರೂ ಊಹಿಸಿರಲಾರರು. ಅಸಲಿಗೆ ಕಬಡ್ಡಿಗೆ ಒಂದು ಲೀಗ್ ಬರಬಹುದೆಂಬ ಆಲೋಚನೆ ಕೂಡ ಕಬಡ್ಡಿ ಪ್ರೇಮಿಗಳ ಮನದಲ್ಲಿ ಸುಳಿದಿರಲಿಕ್ಕಿಲ್ಲ. ಕೊನೆಗೂ ಕಬಡ್ಡಿಗೆ ಶುಕ್ರದೆಸೆ ಒದಗಿದೆ. ಮೊನ್ನೆ ಆಗಸ್ಟ್ ೨೪ರಂದು ಮುಂಬೈನಲ್ಲಿ ಮುಕ್ತಾಯಗೊಂಡ ಪ್ರೊ ಕಬಡ್ಡಿ ೨ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಯು ಮುಂಬಾ ತಂಡ ಗೆದ್ದು ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದೆ.
ಕಬಡ್ಡಿ ಕಲಿಗಳು
ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿ ಆರಂಭಗೊಂಡಿದ್ದು ೨೦೧೪ರಲ್ಲಿ. ಅದು ಕಬಡ್ಡಿ ಆಟಗಾರರ ಪಾಲಿಗೆ ಅಕ್ಷಯ ಪಾತ್ರೆಯೇ ಆಯಿತು. ಪ್ರೊ ಕಬಡ್ಡಿ ಲೀಗ್ನ ಮೊದಲ ಆವೃತ್ತಿಯಲ್ಲಿ ಪಾಲ್ಗೊಂಡಿದ್ದ ತಂಡಗಳು ಒಟ್ಟು ಎಂಟು. ಸ್ಟಾರ್ಸ್ಪೋರ್ಟ್ಸ್ ವಾಹಿನಿ ಈ ಪಂದ್ಯಾವಳಿಯ ನೇರ ಪ್ರಸಾರ ಮಾಡಿತ್ತು. ಆಗ ಕಬಡ್ಡಿ ಪಂದ್ಯಾವಳಿಯನ್ನು ವೀಕ್ಷಿಸಿದವರ ಸಂಖ್ಯೆಯೇ ಬರೋಬ್ಬರಿ ೪೩೫ ದಶಲಕ್ಷ. ಫೈನಲ್ ಪಂದ್ಯವನ್ನು ವೀಕ್ಷಿಸಿದವರ ಸಂಖ್ಯೆಯೇ ೮೬.೪ ದಶಲಕ್ಷ ಆಗಿತ್ತು. ಸ್ಟಾರ್ಸ್ಪೋರ್ಟ್ಸ್ನ ಮುಖ್ಯಸ್ಥ ನಿತಿನ್ ಕುಜ್ರೇಜ ಅವರು ಆಗ ‘೨೦೧೪ರ ಪ್ರೊ ಕಬಡ್ಡಿ ಪಂದ್ಯಾವಳಿ ವೀಕ್ಷಕರ ಸಂಖ್ಯೆ ಯಾವುದೇ ವಿಶ್ವಕಪ್ ಕ್ರಿಕೆಟ್ ಟೂರ್ನಿಗಿಂತಲೂ ಕಡಮೆ ಇರಲಿಲ್ಲ’ ಎಂದು ಉದ್ಗರಿಸಿದ್ದರು. ಅವರ ಈ ಉದ್ಗಾರದಲ್ಲಿ ಉತ್ಪ್ರೇಕ್ಷೆ ಇರಲಿಲ್ಲ. ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ಹೊರತುಪಡಿಸಿದರೆ ಅತಿಹೆಚ್ಚು ವೀಕ್ಷಕರ ಸಂಖ್ಯೆ ದಾಖಲಾಗಿದ್ದು ಪ್ರೊ ಕಬಡ್ಡಿ ಪಂದ್ಯಗಳಿಗೇ.
ಜನಪ್ರಿಯತೆಗೆ ಸಾಕ್ಷಿ
ಮೊನ್ನೆ ಆಗಸ್ಟ್ ೨೪ರಂದು ಪ್ರೊ ಕಬಡ್ಡಿ ಪಂದ್ಯಾವಳಿಯ ೨ನೇ ಆವೃತ್ತಿ ಮುಗಿದಿದ್ದು, ಅದು ದೇಶದಾದ್ಯಂತ ಕಬಡ್ಡಿ ಪ್ರೇಮಿಗಳ ಮೈಮನದಲ್ಲಿ ಕಿಚ್ಚು ಹಚ್ಚಿದೆ. ಕಬಡ್ಡಿ ಪ್ರೇಮ ಈಗ ಹುಚ್ಚಾಗಿ ಹರಿದಿದೆ. ಕ್ರಿಕೆಟ್ಗೆ ಸಡ್ಡು ಹೊಡೆಯುತ್ತಿರುವ ಅಪ್ಪಟ ಗ್ರಾಮೀಣ ಕ್ರೀಡೆ ಕಬಡ್ಡಿಯ ಫೈನಲ್ ಮತ್ತು ೩ನೇ ಸ್ಥಾನಕ್ಕಾಗಿ ನಡೆದ ಪಂದ್ಯಗಳಿಗೆ ಮುಂಬೈಯಲ್ಲಿ ಜನಸಾಗರವೇ ಸೇರಿತ್ತು. ಆಗಸ್ಟ್ ೨೪ರಂದು ಮುಂಬೈನ ೫-೬ ಸಾವಿರ ಸಾಮರ್ಥ್ಯದ ಸರ್ದಾರ್ ವಲ್ಲಭಬಾಯಿ ಪಟೇಲ್ ಕ್ರೀಡಾಂಗಣದಲ್ಲಿ ಸೇರಿದ್ದು ೧೦ ಸಾವಿರಕ್ಕೂ ಹೆಚ್ಚು ಮಂದಿ. ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ನಡುವಣ ಫೈನಲ್ ಪಂದ್ಯಕ್ಕೆ ಸಂಜೆ ೪ ಗಂಟೆಯಿಂದಲೇ ಅಭಿಮಾನಿಗಳ ಮಹಾಪೂರ ಹರಿದುಬಂದಿತ್ತು. ಈ ಪಂದ್ಯ ವೀಕ್ಷಿಸಲು ಭಾರತ ಕ್ರಿಕೆಟ್ ತಂಡದ ಏಕದಿನ ನಾಯಕ ಮಹೇಂದ್ರ ಸಿಂಗ್ ಧೋನಿ, ನಟರಾದ ಸೈಫ್ ಆಲಿ ಖಾನ್, ಅಭಿಷೇಕ್ ಬಚ್ಚನ್, ನಟಿಯರಾದ ಖತ್ರಿನಾಕೈಫ್, ಅಲಿಯಾ ಭಟ್, ಕ್ರಿಕೆಟ್ ದಂತಕತೆ ಕಪಿಲ್ದೇವ್, ಹಿಂದಿ ಚಿತ್ರದ ಮೇರುತಾರೆ ಅಮಿತಾ ಬಚ್ಚನ್…. ಹೀಗೆ ತಾರೆಗಳ ಸಮೂಹವೇ ಜಮಾಯಿಸಿತ್ತು. ಕ್ರಿಕೆಟ್ಗಿಂತಲೂ ಹೆಚ್ಚು ಜನಪ್ರಿಯತೆ ಕಬಡ್ಡಿಗಿದೆ ಎಂಬುದಕ್ಕೆ ಇದು ಸಾಕ್ಷಿಯಾಯಿತು. ತವರಿನ ತಂಡ ಯು ಮುಂಬಾ ಬೆಂಗಳೂರು ಬುಲ್ಸ್ ತಂಡವನ್ನು ೩೬-೩೦ ಅಂಕಗಳಿಂದ ಸೋಲಿಸಿ, ಚೊಚ್ಚಲ ಪ್ರಶಸ್ತಿಗೆ ಪಾತ್ರವಾಯಿತು. ಕಳೆದ ಬಾರಿ ಜೈಪುರ ಪಿಂಕ್ ಪ್ಯಾಂಥರ್ಸ್ ಯು ಮುಂಬಾ ತಂಡವನ್ನು ಸೋಲಿಸಿತ್ತು. ಆದರೆ ಈ ಬಾರಿ ಜೈಪುರ ತಂಡ ಲೀಗ್ ಹಂತದಲ್ಲೇ ಹೀನಾಯ ಸೋಲಿನ ಸುಳಿಗೆ ಸಿಲುಕಿದ್ದು ಆಶ್ಚರ್ಯಕರ.
೩೭ ದಿನಗಳ ಅವಧಿಯಲ್ಲಿ ಈ ಬಾರಿ ೮ ನಗರಗಳಲ್ಲಿ ಒಟ್ಟು ನಡೆದ ಪಂದ್ಯಗಳು ೬೦. ಜುಲೈ ೧೮ರಂದು ಬಾಲಿವುಡ್ನ ಹಿರಿಯ ನಟ ೭೨ರ ಅಮಿತಾ ಬಚ್ಚನ್ ರಾಷ್ಟ್ರಗೀತೆ ಹಾಡುವುದರ ಮೂಲಕ ಪ್ರೊ ಕಬಡ್ಡಿ ೨ನೇ ಆವೃತ್ತಿಗೆ ಚಾಲನೆ ನೀಡಿದ್ದರು. ಈ ಬಾರಿಯೂ ೮ ತಂಡಗಳು ಪಾಲ್ಗೊಂಡಿದ್ದವು. ಆದರೆ ಅಂತಿಮವಾಗಿ ಯು ಮುಂಬಾ (ಮೊದಲ ಸ್ಥಾನ), ಬೆಂಗಳೂರು ಬುಲ್ಸ್ (೨ನೇ ಸ್ಥಾನ) ಹಾಗೂ ತೆಲುಗು ಟೈಟಾನ್ಸ್ (೩ನೇ ಸ್ಥಾನ) ಪಡೆಯಿತು. ಮುಂಬಾ ತಂಡ ಕಳೆದ ವರ್ಷ ರನ್ನರ್ಸ್ ಅಪ್ ಆಗಿತ್ತು. ಈ ವರ್ಷ ಅದು ಕಬಡ್ಡಿಯಲ್ಲಿ ಚಾಂಪಿಯನ್. ಇದರ ಯಶಸ್ಸಿನ ಹಿಂದೆ ತಂಡದ ಕೋಚ್ ಆಗಿರುವ ಕನ್ನಡಿಗ ರವಿಶೆಟ್ಟಿ, ಜೊತೆಗೆ ತಂಡದಲ್ಲಿರುವ ಶಬೀರ್ ಬಾಪು, ಜೀವಕುಮಾರ್, ಋಷಾಂಕ್ ದೇವಾಡಿಗ ಸೇರಿದಂತೆ ೬ ಜನ ಕನ್ನಡಿಗ ಆಟಗಾರರು ತಂಡದ ಪ್ರಮುಖ ಶಕ್ತಿಯಾಗಿರುವುದು ಕೂಡಾ ಕಾರಣ. ಚಾಂಪಿಯನ್ನರಿಗೆ ಈ ಬಾರಿ ಲಭಿಸಿದ್ದು ೧ ಕೋಟಿ ರೂ. ಬಹುಮಾನ. ರನ್ನರ್ಸ್ ಅಪ್ ತಂಡಕ್ಕೆ ೫೦ ಲಕ್ಷ ರೂ. ಹಾಗೂ ೩ನೇ ಸ್ಥಾನ ಪಡೆದ ಟೈಟಾನ್ಸ್ ತಂಡಕ್ಕೆ ಲಭಿಸಿದ್ದು ೩೦ ಲಕ್ಷ ರೂ. ಇದೇನೂ ಕಡಮೆ ಮೊತ್ತದ ಹಣವಲ್ಲ ಎಂಬುದು ಇಲ್ಲಿ ಗಮನಾರ್ಹ.
ಪ್ರೊ ಕಬಡ್ಡಿ ಪಂದ್ಯ ನಡೆಯುತ್ತಿದ್ದ ದಿನಗಳಲ್ಲಿ ರಾತ್ರಿ ೮ರಿಂದ ೧೦ ಗಂಟೆಯವರೆಗೆ ಯಾವುದೇ ಮನೆಗೆ ಹೋದರೂ ಅಲ್ಲಿ ಕಬಡ್ಡಿ ಕಾಮೆಂಟರಿ ಕೇಳಿಬರುತ್ತಿತ್ತು. ಬಾಕಿ ಸಮಯದಲ್ಲಿ ಸಾಮಾನ್ಯವಾಗಿ ರಾತ್ರಿ ಎಂಟಾದರೆ ಎಲ್ಲಾ ಮನೆಯ ಟಿ.ವಿ.ಗಳಿಂದ ಕೇಳಿಬರುತ್ತಿದ್ದುದು ಧಾರಾವಾಹಿಯ ಡೈಲಾಗ್ಗಳು. ಕಬಡ್ಡಿಯ ಆಕರ್ಷಣೆ ಈ ಮಟ್ಟಕ್ಕೆ ಬೆಳೆದಿರುವುದು ಸೋಜಿಗವೇ ಸರಿ. ಯುವ ಪೀಳಿಗೆಯ ಬಾಯಲ್ಲಿ ಸಾಮಾನ್ಯವಾಗಿ ಕೇಳಿಬರುತ್ತಿದ್ದುದು ಸಚಿನ್, ದ್ರಾವಿಡ್, ಧೋನಿ, ಕೊಹ್ಲಿ, ಧವನ್, ಹರ್ಭಜನ್ ಸಿಂಗ್ ಮುಂತಾದ ಕ್ರಿಕೆಟಿಗರ ಹೆಸರುಗಳು. ಆದರೆ ಈಗ ಇದೇ ಯುವ ಪೀಳಿಗೆಯ ಬಾಯಲ್ಲಿ ಮಂಜಿತ್ ಚಿಲ್ಲರ್, ಅನುಪ್ಕುಮಾರ್, ರಾಹುಲ್ ಚೌಧರಿ, ಕಾಶೀಲಿಂಗ್ ಅಡಿಕೆ, ಜಸ್ವೀರ್ ಸಿಂಗ್, ಋಷಾಂಕ್ ದೇವಾಡಿಗ, ಅಜಯ್ ಠಾಕೂರ್, ಜುಂಗ್ ಕುನ್ ಲೀ… ಮುಂತಾದ ಹೆಸರುಗಳು ನಲಿದಾಡುತ್ತಿವೆ. ಸಚಿನ್, ದ್ರಾವಿಡ್ ಮುಂತಾದ ಜನಪ್ರಿಯ ಹೆಸರುಗಳು ಸದ್ಯಕ್ಕೆ ಮೂಲೆಗೆ ಸೇರಿವೆ. ಎಲ್ಲರ ಬಾಯಲ್ಲಿ ಫೋರ್, ಸಿಕ್ಸ್ ಬದಲಿಗೆ ರೈಡ್, ಟ್ಯಾಕಲ್, ಅಟ್ಯಾಕ್ ಮುಂತಾದ ಕಬಡ್ಡಿಗೆ ಸಂಬಂಧಿಸಿದ ಶಬ್ದಗಳು ಮಾರ್ದನಿಸುತ್ತಿವೆ.
ಗುಣಗಳ ಗಣಿ
ಕಬಡ್ಡಿ ಆಟ ಜನಪ್ರಿಯವಾಗುವುದಕ್ಕೆ ಅದು ಕೇವಲ ೪೦ ನಿಮಿಷಗಳ ಅವಧಿಯಲ್ಲಿ (ನಡುವೆ ೫ ನಿಮಿಷಗಳ ವಿರಾಮ) ಮುಕ್ತಾಯವಾಗುವುದು ಮುಖ್ಯ ಕಾರಣ. ಕ್ರಿಕೆಟ್ನಂತೆ ಗಂಟೆಗಟ್ಟಲೆ, ದಿನಗಟ್ಟಲೆ ನೋಡಬೇಕಾದ ಅಗತ್ಯವಿಲ್ಲ. ೪೦ ನಿಮಿಷಗಳ ಪ್ರತಿಯೊಂದು ಕ್ಷಣವೂ ಅತ್ಯಂತ ರೋಚಕ. ಪ್ರತೀ ಆಟಗಾರನು ಈ ಅವಧಿಯಲ್ಲಿ ಸತರ್ಕನಾಗಿರಬೇಕಾಗುತ್ತದೆ. ಯಾರೂ ಸೋಮಾರಿಯಾಗಿ ಕಾಲ ಕಳೆಯುವಂತಿಲ್ಲ. ಕೇವಲ ಶಕ್ತಿಯೊಂದಿದ್ದರೆ ಸಾಲದು, ಯುಕ್ತಿಯೂ ಬೇಕು. ಜೊತೆಗೆ ಸಾಹಸ, ಆಕ್ರಮಣಕಾರಿ ಪ್ರವೃತ್ತಿ, ಕುಶಲತೆ, ಜಾಣ್ಮೆ, ಬುದ್ಧಿವಂತಿಕೆ ಇತ್ಯಾದಿ ಅನೇಕ ಗುಣಗಳ ಗಣಿ ಈ ಕಬಡ್ಡಿ ಆಟ. ಕಬಡ್ಡಿ, ಕಬಡ್ಡಿ ಎನ್ನುತ್ತಾ ಒಂದೇ ಉಸಿರಿನಲ್ಲಿ ದಾಳಿ ಮಾಡಿ ಹೆಚ್ಚು ಎದುರಾಳಿಗಳನ್ನು ಮುಟ್ಟಿ, ಅವರಿಂದ ತಪ್ಪಿಸಿಕೊಂಡು ಬರುವವನೇ ಇಲ್ಲಿ ಸರದಾರ, ಆತನೇ ಹೀರೋ. ಪ್ರತಿ ತಂಡದಲ್ಲೂ ೭ ಮಂದಿ ಆಟಗಾರರು ಇರುವ ಕಬಡ್ಡಿ ಆಟವನ್ನು ಇಷ್ಟಪಡದವರೇ ಇಲ್ಲ. ಮಕ್ಕಳು, ಮಹಿಳೆಯರು, ಕೊನೆಗೆ ಮುದುಕರು ಕೂಡ ಕಬಡ್ಡಿ ಎಂದೊಡನೆ ಉತ್ಸಾಹಿತರಾಗಿ ಬೆರಗುಗಣ್ಣಿನಿಂದ ವೀಕ್ಷಿಸುವುದುಂಟು.
ಪ್ರೊ ಕಬಡ್ಡಿ ಲೀಗ್ಗೆ ವೇದಿಕೆ ಒದಗಿಸಿದ್ದು ಮಾರ್ಷಲ್ ಸ್ಪೋರ್ಟ್ಸ್ ಪ್ರೈ. ಲಿ. ಸಂಸ್ಥೆಯ ಪಾಲುದಾರರಾದ ರವಿಕೃಷ್ಣನ್ ಲೂಥ್ರಾ, ವಿಷ್ಣುಕುಮಾರ್, ಚಿಮನ್ಲಾಲ್ ಗರ್ಗ್, ನೋಶಿರ್ ರುಸ್ತುಂ ದಸ್ತೂರ್ ಹಾಗೂ ಚಾರುಚಂದ್ರ ಶರ್ಮ ಅವರು ಪ್ರೊ ಕಬಡ್ಡಿ ಲೀಗ್ ಪ್ರಮುಖ ರೂವಾರಿಗಳು. ಈ ದೇಸೀ ಕ್ರೀಡೆಗೆ ಸಾರ್ವಜನಿಕರನ್ನು ಸೆಳೆಯುವ ಸಾಮರ್ಥ್ಯವಿದೆ ಎಂಬ ಭರವಸೆಯನ್ನು ಮೂಡಿಸಿದ ಮಹನೀಯರು ಇವರು. ಪ್ರೊ ಕಬಡ್ಡಿ ಆಟಗಾರರಿಗೆ ಹೊಸ ಭವಿಷ್ಯವನ್ನೇ ರೂಪಿಸಿದೆ. ಹೊಸ ಅವಕಾಶಗಳನ್ನು ತೆರೆದಿಟ್ಟಿದೆ. ಭರವಸೆಯ ಬೆಳಕನ್ನು ಬೀರಿದೆ. ಕಬಡ್ಡಿಯನ್ನೇ ನಂಬಿ ಬದುಕಬಹುದು ಎಂಬ ಸಂದೇಶವನ್ನು ರವಾನಿಸಿದೆ. ಹೀಗಾಗಿ ಪ್ರೊ ಕಬಡ್ಡಿ ಪಂದ್ಯಗಳು ಕಬಡ್ಡಿ ಪಟುಗಳ ಪಾಲಿಗೆ ಜೀವಾಮೃತ ಇದ್ದಂತೆ. ಪ್ರೊ ಕಬಡ್ಡಿ ಲೀಗಿನಿಂದಾಗಿ ಕಬಡ್ಡಿಗೆ ವೃತ್ತಿಪರ ಕ್ರೀಡೆ ಎಂಬ ಹೆಗ್ಗಳಿಕೆಯೂ ಸಂದಿದೆ. ಕಬಡ್ಡಿ ಆಡಿ ಕುಟುಂಬವನ್ನು, ಮನೆಯನ್ನು, ಮುನ್ನಡೆಸಬಹುದು ಎನ್ನುವ ಮಟ್ಟಿಗೆ ಆರ್ಥಿಕ ಭದ್ರತೆ ಒದಗಿಸಿದೆ.
ಕಬಡ್ಡಿಯನ್ನು ೧೯೯೦ರಲ್ಲಿ ನಡೆದ ೧೧ನೇ ಬೀಜಿಂಗ್ ಏಷ್ಯನ್ ಗೇಮ್ಸ್ನಲ್ಲಿ ಒಂದು ನಿಯಮಿತ ಆಟವನ್ನಾಗಿ ಸೇರಿಸಲಾಗಿತ್ತು. ಆಗ ಭಾರತ ಕಬಡ್ಡಿಯಲ್ಲಿ ಚಿನ್ನದ ಪದಕ ಗೆದ್ದಿತ್ತು. ಅನಂತರ ನಡೆದ ಎಲ್ಲಾ ಏಷ್ಯನ್ ಗೇಮ್ಸ್ನಲ್ಲೂ ಭಾರತ ಚಿನ್ನ ಅಥವಾ ಬೆಳ್ಳಿ ಪದಕ ಗೆದ್ದು, ಇತಿಹಾಸ ನಿರ್ಮಿಸಿದೆ. ಪ್ರೊ ಲೀಗ್ ಕಬಡ್ಡಿ ಪಂದ್ಯಾವಳಿಯ ಜನಪ್ರಿಯತೆಯಿಂದಾಗಿ ಕಬಡ್ಡಿಯನ್ನು ಒಲಿಂಪಿಕ್ ಗೇಮ್ಸ್ಗೆ ಸೇರಿಸಬೇಕೆಂಬ ಒತ್ತಡ ಹೆಚ್ಚಿರುವುದು ನಿಜ.
ಆಕರ್ಷಣೆ ಉಳಿಸಿಕೊಟ್ಟ ಆರೆಸ್ಸೆಸ್
ಹಾಗೆ ನೋಡಿದರೆ ಎಲ್ಲೋ ಮೂಲೆಗೆ ಬಿದ್ದಿದ್ದ ಕಬಡ್ಡಿ ಆಟವನ್ನು ಜೀವಂತವಾಗಿ ಉಳಿಸಿದ್ದು ಆರೆಸ್ಸೆಸ್. ಅದು ತನ್ನ ಶಾಖೆಗಳಲ್ಲಿ ಉಳಿದ ಕ್ರೀಡೆಗಳೊಂದಿಗೆ ಕಬಡ್ಡಿಯನ್ನು ಆಕರ್ಷಣೆಯ ಭಾಗವಾಗಿ ಉಳಿಸಿಕೊಂಡಿದೆ. ಪ್ರತಿನಿತ್ಯ ಶಾಖೆಗಳಲ್ಲಿ ಕಬಡ್ಡಿ ಆಡಲಾಗುತ್ತದೆ. ಆ ಆಟದ ಮೂಲಕ ಸ್ವಯಂಸೇವಕರಲ್ಲಿ ಸ್ನೇಹ, ಆತ್ಮೀಯತೆ, ದೇಶಭಕ್ತಿ, ಐಕ್ಯಭಾವ, ಸಾಹಸ ಇತ್ಯಾದಿ ಗುಣಗಳನ್ನು ಬೆಳೆಸಲಾಗುತ್ತಿದೆ. ಒಮ್ಮೆ ಸಂಘದ ೨ನೇ ಸರಸಂಘಚಾಲಕರಾಗಿದ್ದ ಗುರೂಜಿಯವರನ್ನು ಸೈನ್ಯಾಧಿಕಾರಿಯೊಬ್ಬ ‘ನಿಮ್ಮ ಸ್ವಯಂಸೇವಕರಲ್ಲಿ ದೇಶಭಕ್ತಿ, ಸಾಹಸದ ಗುಣಗಳು ಮೂಡಲು ಏನು ಕಾರಣ?’ ಎಂದು ಪ್ರಶ್ನಿಸಿದಾಗ ಗುರೂಜಿ ಹೇಳಿದ್ದು: ‘ಇನ್ನೇನಿಲ್ಲ. ಪ್ರತಿನಿತ್ಯ ಶಾಖೆಯಲ್ಲಿ ಆಡುವ ಕಬಡ್ಡಿ ಆಟವೇ ಕಾರಣ!’ ಕಬಡ್ಡಿಯ ಮಹತ್ತ್ವ ಇರುವುದು ಇಲ್ಲಿಯೇ.
ಒಟ್ಟಾರೆ ಈಗ ಕಬಡ್ಡಿಗೆ ಖದರ್ ಬಂದಿದೆ. ಕಾರ್ಪೋರೇಟ್ ಯೋಗವೂ ಬಂದಿದೆ. ಬಾಲಿವುಡ್ ನಟ-ನಟಿಯರು, ಕಾರ್ಪೋರೇಟ್ ಜಗತ್ತು, ರಾಜಕಾರಣಿಗಳು… ಹೀಗೆ ಎಲ್ಲರಿಗೂ ಕಬಡ್ಡಿ ಎಂದರೆ ಅಭಿಮಾನ. ಆದರೆ ಕ್ರಿಕೆಟ್ಗೆ ಬಡಿದಂತೆ ‘ಫಿಕ್ಸಿಂಗ್’ ಕಳಂಕ ಕಬಡ್ಡಿಗೆ ತಟ್ಟದಂತೆ ಜಾಗ್ರತೆ ವಹಿಸಬೇಕಾದ ಅಗತ್ಯವಿದೆ. ಕಾರ್ಪೋರೇಟ್ ಜಗತ್ತಿನ ಹಣದ ಹೊಳೆ, ಕೋಟಿ ಮೊತ್ತದ ಬಹುಮಾನಗಳ ಸುರಿಮಳೆ ಇತ್ಯಾದಿ ಆಕರ್ಷಣೆಗಳ ನಡುವೆ ಕಬಡ್ಡಿಯ ಮೂಲಸತ್ತ್ವ ಕೊಚ್ಚಿಹೋಗದಿರಲಿ. ಕಬಡ್ಡಿಯ ಪಾವಿತ್ರ್ಯಕ್ಕೆ ಕಳಂಕ ತಟ್ಟದಿರಲಿ. ಇದು ನನ್ನ-ನಿಮ್ಮಂತಹ ಅಸಂಖ್ಯ ಕಬಡ್ಡಿ ಪ್ರೇಮಿಗಳ ಆಶಯ.