ಒಂದು ರೀತಿಯಲ್ಲಿ ವಿಶ್ವ ಕ್ರಿಕೆಟ್ ರಂಗದಲ್ಲಿ ಭಾರತೀಯ ಮೂಲದವರದ್ದೇ ಆಧಿಪತ್ಯ ಎನ್ನಬಹುದು
ನೀವು ಜಗತ್ತಿನ ಯಾವುದೇ ಮೂಲೆಗೆ ಹೋಗಿ, ಅಲ್ಲೊಬ್ಬ ಭಾರತೀಯ ನಿಮಗೆ ಸಿಕ್ಕೇ ಸಿಗುತ್ತಾನೆ. ಎಷ್ಟಾದರೂ `ವಸುಧೈವ ಕುಟುಂಬಕಂ’ (ಇಡೀ ವಿಶ್ವವೇ ಒಂದು ಕುಟುಂಬ) ಎಂದು ಹೇಳಿದವರಲ್ಲವೇ ನಾವು? ಅದೂ ಅಲ್ಲದೇ ಭಾರತದಿಂದ ಹೊರದೇಶಗಳಿಗೆ ಉದ್ಯೋಗ, ವಿದ್ಯಾಭ್ಯಾಸ, ವ್ಯಾಪಾರ… ಹೀಗೆ ನಾನಾ ಕಾರಣಗಳಿಗಾಗಿ ಹೋದವರು ಅಲ್ಲಿಯೇ ನೆಲೆಸಿ, ಅವರ ಮುಂದಿನ ತಲೆಮಾರು ಅಲ್ಲಿ ಪ್ರತಿಷ್ಠಿತವಾಗಿದೆ. ಬ್ರಿಟಿಷರು ಭಾರತವನ್ನಾಳುತ್ತಿದ್ದ ಕಾಲದಲ್ಲಿ ಅವರು ತಮ್ಮ ಆಡಳಿತವಿರುವ ಇತರ ದೇಶಗಳಿಗೆ ಕೆಲಸಕ್ಕಾಗಿ ಕಾರ್ಮಿಕರನ್ನು ಇಲ್ಲಿಂದ ಸಾಗಿಸುತ್ತಿದ್ದರು. ಹಾಗೆ ಕಾರ್ಮಿಕರಾಗಿ ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕ ಮೊದಲಾದ ದೇಶಗಳಿಗೆ ಹೋದವರು ಬಹಳಷ್ಟು ಮಂದಿ. ಅವರ್ಯಾರೂ ಮತ್ತೆ ತಿರುಗಿ ಭಾರತಕ್ಕೆ ಬರಲಿಲ್ಲ. ಸ್ವಾತಂತ್ರ್ಯ ಬಂದ ಬಳಿಕ ಅನೇಕ ಭಾರತೀಯರು ಇಂಗ್ಲೆಂಡ್, ಅಮೆರಿಕ, ಕೆನಡಾ ಮತ್ತು ಆಸ್ಟ್ರೇಲಿಯಾ ದೇಶಗಳಿಗೆ ಉತ್ತಮ ಅವಕಾಶಗಳನ್ನು ಅರಸಿಕೊಂಡು ಹೊರಟರು. ಅವರ ಮಕ್ಕಳು ಈಗ ಅಲ್ಲೆಲ್ಲಾ ವಿವಿಧ ಕ್ರೀಡೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕ್ರಿಕೆಟ್ನಲ್ಲಂತೂ ಭಾರತೀಯ ಮೂಲದ ಆಟಗಾರರು ಹೇರಳವಾಗಿದ್ದಾರೆ.
ಕ್ರಿಕೆಟ್ ಹುಟ್ಟಿದ್ದು ಇಂಗ್ಲೆಂಡ್ನಲ್ಲಿ. ಆದರೆ ಕ್ರಿಕೆಟ್ ಆಟಗಾರರು ಹೆಚ್ಚು ಸಂಖ್ಯೆಯಲ್ಲಿ ತಯಾರಾಗಿದ್ದು ಭಾರತದಲ್ಲಿ! ಹಾಗಲ್ಲದಿದ್ದರೆ ಇಂಗ್ಲೆಂಡ್ ಸೇರಿದಂತೆ ಕ್ರಿಕೆಟ್ ಆಡುವ ಅನೇಕ ದೇಶಗಳ ತಂಡಗಳಲ್ಲಿ ಭಾರತೀಯ ಮೂಲದ ಆಟಗಾರರು ಸೇರ್ಪಡೆಯಾಗಲು ಸಾಧ್ಯವಿತ್ತೆ? ಒಂದು ರೀತಿಯಲ್ಲಿ ವಿಶ್ವ ಕ್ರಿಕೆಟ್ ರಂಗದಲ್ಲಿ ಭಾರತೀಯ ಮೂಲದವರz ಅಧಿಪತ್ಯ ಎನ್ನಬಹುದು.
ಪ್ರಸ್ತುತ ಕಾಲಘಟ್ಟದಲ್ಲಿ ನ್ಯೂಜೀಲ್ಯಾಂಡ್ ತಂಡದಲ್ಲಿರುವ ಭಾರತೀಯ ಮೂಲದ ಆಟಗಾರರೆಂದರೆ ಜೀತನ್ ಪಟೇಲ್ ಮತ್ತು ಇಶ್ ಸೋಧಿ. ಪಟೇಲ್ ಸಮರ್ಥಶಾಲಿ ಸ್ಪಿನ್ನರ್ ಹಾಗೂ ಉತ್ತಮ ಕ್ಷೇತ್ರ ರಕ್ಷಕ. ಸೋಧಿ ಉತ್ತಮ ಲೆಗ್ ಸ್ಪಿನ್ನರ್. ನ್ಯೂಜಿಲ್ಯಾಂಡ್ನ ಡೇನಿಯಲ್ ವೆಟ್ಟೋರಿಯೇ ಆತನ ಸಾಮರ್ಥ್ಯದ ಬಗ್ಗೆ ಕೊಂಡಾಡಿದ್ದಾರೆ. ಆಸ್ಟ್ರೇಲಿಯಾ ತಂಡದಲ್ಲಿರುವ ಗುರಿಂದರ್ ಸಂಧು ಭಾರತೀಯ ಮೂಲದ ಆಟಗಾರ. ವೇಗದ ಬೌಲಿಂಗ್ ದಾಳಿ ನಡೆಸುವ ಈತ ಎದುರಾಳಿ ಬ್ಯಾಟ್ಸ್ಮನ್ಗಳನ್ನು ತನ್ನ ಬೌನ್ಸ್ ಮೂಲಕ ಕಕ್ಕಾಬಿಕ್ಕಿ ಮಾಡಬಲ್ಲ.
ದಕ್ಷಿಣ ಆಫ್ರಿಕ ತಂಡದ ಆರಂಭಿಕ ಆಟಗಾರ ಹಷೀಮ್ ಆಮ್ಲ ಗುಜರಾತ್ನ ಸೂರತ್ ಮೂಲದವರು. ನಿರಹಂಕಾರಿ, ವೃತ್ತಿಪರ ಹಾಗೂ ಅತ್ಯುತ್ತಮ ಬ್ಯಾಟ್ಸ್ಮನ್. ಆಮ್ಲ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಟಾಪ್ ೧೦ ಕ್ರಿಕೆಟಿಗರಲ್ಲಿ ಮೊದಲ ರ್ಯಾಂಕ್ಗೆ ಭಾಜನನಾಗಿದ್ದಾರೆ. ಗಡ್ಡಧಾರಿ ಆಮ್ಲ ೩ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದರೆ ಬಂಡೆಯಂತೆ ನಿಂತು ರನ್ ಪೇರಿಸುವುದರಲ್ಲಿ ನಿಷ್ಣಾತ. ೨೦೧೩ರ ವಿಸ್ಡನ್ ಕ್ರಿಕೆಟರ್ಸ್ ಪ್ರಶಸ್ತಿ ಪಡೆದಾತ.
ಇಂಗ್ಲೆಂಡ್ನ ಪ್ರಸಕ್ತ ತಂಡದಲ್ಲಿರುವ ರವಿ ಬೊಪಾರ ಒಬ್ಬ ಉತ್ತಮ ಆಲ್ರೌಂಡರ್. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ – ಎಲ್ಲದರಲ್ಲೂ ಎತ್ತಿದ ಕೈ. ಇಂಗ್ಲೆಂಡ್ ತಂಡದಲ್ಲಿರುವ ಇನ್ನಿಬ್ಬರು ಭಾರತೀಯ ಮೂಲದವರೆಂದರೆ ಸಮಿತ್ ಪಟೇಲ್ ಮತ್ತು ಮೋಂಟೆ ಪನೆಸರ್. ಸಮಿತ್ ಸ್ಫೋಟಕ ಬ್ಯಾಟ್ಸ್ಮನ್ ಹಾಗೆಯೇ ಉತ್ತಮ ಎಡಗೈ ಸ್ಪಿನ್ನರ್. ಪಂಜಾಬ್ ಮೂಲದ ಮೋಂಟೆ ಪನೆಸರ್ ಕಳೆದ ವರ್ಷ ಭಾರತ ತಂಡವನ್ನು ತನ್ನ ಬೌಲಿಂಗ್ ಕೈಚಳಕದಿಂದ ನೆಲಕಚ್ಚುವಂತೆ ಮಾಡಿದ ಅದ್ಭುತ ಬೌಲರ್. ಇಂಗ್ಲೆಂಡ್ ತಂಡಕ್ಕೆ ಪನೆಸರ್ ಒಂದು ಅದ್ಭುತ ವರದಾನ.
ಕೆರೆಬಿಯನ್ ರಾಷ್ಟ್ರವಾದ ವೆಸ್ಟ್ ಇಂಡೀಸ್ ತಂಡದಲ್ಲಂತೂ ಭಾರತೀಯ ಮೂಲದ ಆಟಗಾರರz ದರ್ಬಾರು. ರೋಹನ್ ಕನ್ನಾಯ್, ಅಲ್ವಿನ್ ಕಾಳಿಚರಣ್, ರಾಮದಿನ್, ಶಿವನರೇನ್ ಚಂದ್ರಪಾಲ್, ಸುನಿಲ್ ನರೆಯನ್, ರವಿ ರಾಂಪಾಲ್, ರಾಮ್ನರೇಶ್ ಸರವಣ್, ದೇವೇಂದ್ರ ಬಿಷು – ಇವರೆಲ್ಲಾ ವೆಸ್ಟ್ ಇಂಡೀಸ್ ತಂಡದ ಭಾರತೀಯ ಮೂಲದ ಪ್ರತಿಭಾವಂತ ಕ್ರಿಕೆಟಿಗರು. ಸುನಿಲ್ ನರೆಯನ್ ಏಕದಿನ ಹಾಗೂ ಟ್ವೆಂಟಿ-೨೦ ಪಂದ್ಯಗಳಲ್ಲಿ ಅತಿಹೆಚ್ಚು ವಿಕೆಟ್ ಗಳಿಸಿದ ಬೌಲರ್. ಸುನಿಲ್ ನರೆಯನ್ ಬೌಲಿಂಗ್ ಶೈಲಿಯ ಬಗ್ಗೆ ಐಸಿಸಿ ಆಗಾಗ ತಕರಾರು ತೆಗೆದು ಆತನಿಗೆ ನಿಷೇಧ ಹೇರಿದ್ದುಂಟು. ಆದರೆ ಮತ್ತೆ ನಿಷೇಧ ತೆರವಾಗಿ ತಂಡದಲ್ಲಿ ಸೇರಿಕೊಂಡದ್ದೂ ಇದೆ. ವೆಸ್ಟ್ ಇಂಡೀಸ್ ತಂಡದ ಪಾಲಿಗೆ ಸುನಿಲ್ ಒಂದು ಅಮೂಲ್ಯ ಆಸ್ತಿ.
೬೦ ರ ದಶಕದಲ್ಲಿ ವೆಸ್ಟ್ ಇಂಡೀಸ್ ತಂಡದ ಪರವಾಗಿ ಆಡುತ್ತಿದ್ದ ರೋಹನ್ ಕನ್ನಾಯ್ ಒಬ್ಬ ಅತ್ಯುತ್ತಮ ಬ್ಯಾಟ್ಸ್ಮನ್. ಈತನ ಆಕರ್ಷಕ ಆಟದ ಮೋಡಿಗೆ ಒಳಗಾದ ಸುನಿಲ್ ಗವಾಸ್ಕರ್ ತನ್ನ ಮಗನಿಗೆ ರೋಹನ್ ಎಂದೇ ನಾಮಕರಣ ಮಾಡಿದ್ದರು. ಈತನ ಬ್ಯಾಟಿಂಗ್ ಶೈಲಿಯಲ್ಲಿ ಶಾಸ್ತ್ರೀಯವಲ್ಲದ ಹೊಡೆತಗಳಿಗೇ ಆದ್ಯತೆ. ವಿಕೆಟ್ ಕೀಪಿಂಗ್ನಲ್ಲೂ ಎತ್ತಿದ ಕೈ, ಜೊತೆಗೆ ಮಧ್ಯಮ ವೇಗದ ಬೌಲರ್ ಕೂಡ. ೧೯೭೫ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕನ್ನಾಯ್ ಹೊಡೆದ ಅರ್ಧ ಸೆಂಚುರಿ ಆ ತಂಡಕ್ಕೆ ಗೆಲುವಿನ ಸೋಪಾನವಾಗಿತ್ತು. ಗ್ಯಾರಿ ಸೋಬರ್ಸ್ ಬಳಿಕ ರೋಹನ್ ಕನ್ನಾಯ್ ವೆಸ್ಟ್ ಇಂಡೀಸ್ ತಂಡದ ಕಪ್ತಾನ ಕೂಡ ಆಗಿದ್ದರು.
ವೆಸ್ಟ್ ಇಂಡೀಸ್ ತಂಡದಲ್ಲಿದ್ದ ಅಲ್ವಿನ್ ಕಾಳಿಚರಣ್ ೧೯೭೨ ರಿಂದ ೧೯೮೧ರ ವರೆಗೆ ರಾಷ್ಟ್ರೀಯ ತಂಡ ಪ್ರತಿನಿಧಿಸಿದ್ದರು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಒಂದರಲ್ಲಿ ೧೫೮ ರನ್ ಬಾರಿಸಿ ದಾಖಲೆ ಮಾಡಿದ್ದರು.
ಇಂಗ್ಲೆಂಡ್ ತಂಡ ಕಂಡ ಒಬ್ಬ ಅತ್ಯುತ್ತಮ ಕಪ್ತಾನನೆಂದರೆ ನಾಸೆರ್ ಹುಸೇನ್. ಭಾರತೀಯ ಮುಸ್ಲಿಂ ತಂದೆ ಹಾಗೂ ಇಂಗ್ಲಿಷ್ ತಾಯಿಗೆ ಮದರಾಸಿನಲ್ಲಿ ಜನಿಸಿದ ನಾಸೆರ್ ಇಂಗ್ಲೆಂಡ್ನಲ್ಲಿ ಬೆಳೆದು ಕೊನೆಗೆ ಆ ತಂಡದ ನಾಯಕನಾಗಿದ್ದು ಒಂದು ಯಶೋಗಾಥೆ. ಇಂಗ್ಲೆಂಡ್ ತಂಡದ ಹಲವಾರು ಗೆಲವುಗಳಿಗೆ ಹುಸೇನ್ ಮುನ್ನುಡಿ ಬರೆದಿದ್ದರು. ಇಂಗ್ಲೆಂಡ್ ತಂಡಕ್ಕೆ ಹೊಸದೊಂದು ಭವಿಷ್ಯ ರೂಪಿಸಿದವರಲ್ಲಿ ನಾಸೆರ್ ಹುಸೇನ್ ಪ್ರಮುಖರು.
ನ್ಯೂಜೀಲ್ಯಾಂಡ್ ತಂಡದ ಪರವಾಗಿ ಆಡಿದ ಆಲ್ರೌಂಡರ್ ಆಟಗಾರ ದೀಪಕ್ ಪಟೇಲ್ ಗುಜರಾತ್ ಮೂಲದ ವ್ಯಕ್ತಿ. ಮೊದಲು ಪಟೇಲ್ ಇಂಗ್ಲೆಂಡ್ ಪರವಾಗಿ ದೇಶೀಯ ಕ್ರಿಕೆಟ್ನಲ್ಲಿ ಆಡುತ್ತಿದ್ದರು. ಆದರೆ ಆಯ್ಕೆಗಾರರ ಅವಗಣನೆಯಿಂದಾಗಿ ಪಟೇಲ್ ನ್ಯೂಜೀಲ್ಯಾಂಡ್ಗೆ ಪ್ರಯಾಣ ಬೆಳೆಸಿ, ಅಲ್ಲಿ ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಯಾಗಿದ್ದಷ್ಟೇ ಅಲ್ಲ, ಟೆಸ್ಟ್ ಹಾಗೂ ಏಕದಿನ ಪಂದ್ಯಗಳಿಗೆ ಆಯ್ಕೆಯಾದರು. ೧೯೮೭, ೧೯೯೨ರ ವಿಶ್ವಕಪ್ನಲ್ಲಿ ನ್ಯೂಜೀಲ್ಯಾಂಡ್ ತಂಡವನ್ನು ಪ್ರತಿನಿಧಿಸಿದ ಹಿರಿಮೆ ದೀಪಕ್ ಪಟೇಲ್ ಅವರದ್ದು.
ಬಂಗ್ಲಾ ದೇಶ ಕ್ರಿಕೆಟ್ ತಂಡದಲ್ಲಿದ್ದ ಹಿಂದು ಆಟಗಾರರೆಂದರೆ
ಬಿಕಾಶ್ ರಂಜನ್ದಾಸ್ (ಮಧ್ಯಮ ವೇಗದ ಬೌಲರ್), ಹನ್ನನ್ ಸರ್ಕಾರ್ (ಆರಂಭಿಕ ಬ್ಯಾಟ್ಸ್ಮನ್), ಅಲೋಕ್ ಕಪಾಲಿ (ಆಲ್ರೌಂಡರ್), ತಪಶ್ ಬೈಷ್ಯಾ (ಮಧ್ಯಮ ವೇಗದ ಬೌಲರ್), ಸೌಮ್ಯ ಸರ್ಕಾರ್ (ಅತ್ಯುತ್ತಮ ಬ್ಯಾಟ್ಸ್ಮನ್, ಬೌಲರ್), ಶುವಗೊತೊ ಹೋಂ ಚೌಧರಿ (ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್) ಮತ್ತು ಧೀಮನ್ ಘೋಷ್ (ವಿಕೆಟ್ ಕೀಪರ್). ಪ್ರಸ್ತುತ ಬಂಗ್ಲಾದೇಶ ತಂಡದಲ್ಲಿರುವ ಸೌಮ್ಯ ಸರ್ಕಾರ್ ಇತ್ತೀಚೆಗೆ ನಡೆದ ಭಾರತದ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಅದ್ಭುತ ಬ್ಯಾಟಿಂಗ್ ನಡೆಸಿ ಗಮನ ಸೆಳೆದಿದ್ದರು.
ಪಾಕಿಸ್ತಾನ ಹಾಗೂ ಬಂಗ್ಲಾ ದೇಶಗಳ ತಂಡಗಳಲ್ಲೂ ಭಾರತೀಯ ಮೂಲದ ಕ್ರಿಕೆಟಿಗರು ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಅನಿಲ್ ದಲ್ಪತ್ ಪಾಕಿಸ್ತಾನ ತಂಡ ಕಂಡ ಮೊದಲ ಹಿಂದು ಕ್ರಿಕೆಟಿಗ. ಆದರೆ ಆತ ಹೆಚ್ಚುಕಾಲ ಆ ತಂಡದಲ್ಲಿರಲಿಲ್ಲ. ದನೇಶ್ಕನೇರಿಯ ಪಾಕಿಸ್ತಾನ ತಂಡದ ಎರಡನೇ ಹಿಂದು ಕ್ರಿಕೆಟಿಗ. ಅತ್ಯುತ್ತಮ ಲೆಗ್ ಸ್ಪಿನ್ನರ್ ಆಗಿದ್ದ. ಕನೇರಿಯ ಪಾಕ್ ತಂಡದ ಪರವಾಗಿ ೬೧ ಟೆಸ್ಟ್ಗಳಲ್ಲಿ ಆಡಿ, ೨೬೧ ವಿಕೆಟ್ಗಳನ್ನು ಕಬಳಿಸಿದ್ದರು. ಇದು ದಾಖಲೆ ಕೂಡ ಆಗಿತ್ತು. ಪಾಕ್ ತಂಡದ ಖಾದಿರ್, ಸಕ್ಲೈನ್ ಮುಸ್ತಾಕ್, ಮುಸ್ತಾಕ್ ಅಹಮದ್ರಂತಹ ಘಟಾನುಘಟಿ ಬೌಲರ್ಗಳು ಕೂಡ ಇಷ್ಟೊಂದು ವಿಕೆಟ್ ಗಳಿಸಲು ಸಾಧ್ಯವಾಗಿರಲಿಲ್ಲ. ಆದರೆ ಇಂಗ್ಲಿಷ್ ಕೌಂಟಿ ಕ್ರಿಕೆಟ್ನಲ್ಲಿ ಎಸಗಿದ ಪ್ರಮಾದಕ್ಕಾಗಿ ಕನೇರಿಯ ಜೀವಾವಧಿ ನಿಷೇಧಕ್ಕೊಳಗಾಗಿ ತೆರೆಮರೆಗೆ ಸರಿಯಬೇಕಾಯಿತು. ಅನಿಲ್ ದಲಪತ್ ಹಾಗೂ ದನೇಶ್ ಕನೇರಿಯ ಸಂಬಂಧಿಕರು. ಭಾರತ ವಿಭಜನೆಯಾದ ಬಳಿಕ ಇವರಿಬ್ಬರು ಪಾಕಿಸ್ತಾನದಲ್ಲೇ ಉಳಿದಿದ್ದರು. ಹೀಗೆ ಜಗತ್ತಿನ ಬಹುತೇಕ ಪ್ರಮುಖ ಕ್ರಿಕೆಟ್ ತಂಡಗಳಲ್ಲಿ ಭಾರತೀಯ ಮೂಲದ ಆಟಗಾರರ ಸಂಖ್ಯೆ ಸಾಕಷ್ಟಿದೆ. ಈಚೆಗೆ ಕ್ರಿಕೆಟ್ ರಂಗಕ್ಕೆ ಕಾಲಿಟ್ಟಿರುವ ಯುಎಇ ತಂಡದಲ್ಲೂ ಭಾರತೀಯ ಮೂಲದವರz ಪಾರುಪತ್ಯ. ವಿಶ್ವ ಕ್ರಿಕೆಟ್ ರಂಗಕ್ಕೆ ಭಾರತೀಯ ಮೂಲದ ಆಟಗಾರರ ಕೊಡುಗೆ ಅನನ್ಯ.