ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ೮ನೇ ಆವೃತ್ತಿಯ ಟೂರ್ನಿ ಮುಕ್ತಾಯಗೊಂಡಿದೆ. ಐಪಿಎಲ್ ಟೂರ್ನಿಯ ಕುರಿತು ನಾನಾ ಬಗೆಯ ಟೀಕೆಟಿಪ್ಪಣಿಗಳು ವ್ಯಕ್ತವಾಗಿವೆ. ಮನರಂಜನೆ ಹೆಸರಿನಲ್ಲಿ ಚಿಯರ್ ಗರ್ಲ್ಸ್ ಕುಣಿತ, ಸ್ಪಾಟ್ ಫಿಕ್ಸಿಂಗ್ನ ಮೋಸದಾಟ ಮುಂತಾದ ಅಪಸವ್ಯಗಳು ಐಪಿಎಲ್ಗೆ ಕಳಂಕ ತಂದಿರುವುದು ನಿಜ. ಹೀಗಾಗಿಯೇ ಈ ಬಾರಿ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಕಟ್ಟುನಿಟ್ಟಾಗಿ ನಡೆಸಲು ನಿರ್ಧರಿಸಿತ್ತು. ಯಾವುದೇ ಅಪಸವ್ಯಗಳಿಗೆ ಅಲ್ಲಿ ಎಡೆಕೊಡಬಾರದೆಂದು ಎಚ್ಚರವಹಿಸಿತ್ತು.
ಲಾಭವೇ ಹೆಚ್ಚು
ಯಾರು ಏನೇ ಹೇಳಲಿ, ಐಪಿಎಲ್ ಈ ದೇಶದಲ್ಲಿ ಕ್ರಿಕೆಟ್ಗೆ ಹೊಸ ದಿಕ್ಕು ತೋರಿಸಿದೆ. ಐಪಿಎಲ್ ಟೂರ್ನಿ ಆರ್ಥಿಕ ಲಾಭದ ಉದ್ದೇಶದಿಂದಲೇ ರೂಪ ತಳೆದಿರಬಹುದು. ಅದೇ ಕಾರಣಕ್ಕಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಟೂರ್ನಿಯಲ್ಲಿ ವಿದೇಶೀ ಆಟಗಾರರಿಗೂ ಆಡಲು ಅವಕಾಶ ನೀಡಿರಬಹುದು. ಆದರೆ ಅದರಿಂದ ನಮ್ಮ ಆಟಗಾರರಿಗೆ ನಷ್ಟಕ್ಕಿಂತ ಲಾಭವೇ ಹೆಚ್ಚಾಗಿದೆ ಎಂಬುದು ನಿಜ.
ವಿದೇಶೀ ಆಟಗಾರರು ಐಪಿಎಲ್ ಟೂರ್ನಿಯಲ್ಲಿ ಆಡುವುದರಿಂದ ಅವರು ಪಂದ್ಯಕ್ಕೆ ಹೇಗೆ ಸಜ್ಜಾಗುತ್ತಾರೆ, ಅವರ ಆಟದ ಕೌಶಲಗಳು ಏನೇನು, ಪಂದ್ಯದ ವೇಳೆ ಯಾವ ರೀತಿಯ ತಂತ್ರಗಳನ್ನು ಹೆಣೆಯುತ್ತಾರೆ… ಮುಂತಾದ ಹತ್ತು ಹಲವು ಅಂಶಗಳನ್ನು ನಮ್ಮ ಆಟಗಾರರು ಅರಿತುಕೊಳ್ಳಬಹುದು. ಅಷ್ಟೇ ಅಲ್ಲ, ಆಟದ ಗುಣಮಟ್ಟವನ್ನು ಇನ್ನಷ್ಟು ವೃದ್ಧಿಸಿಕೊಳ್ಳಲೂಬಹುದು.
ಬಾರಿ ಟೂರ್ನಿಯಲ್ಲಿ ಪಾಲ್ಗೊಂಡ ಸಿಎಸ್ಕೆ, ಡಿಡಿ, ಕಿಂಗ್ಸ್ ಇಲೆವೆನ್ ಪಂಜಾಬ್, ಕೆಕೆಆರ್, ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್, ಆರ್ಸಿಬಿ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳಲ್ಲಿ ಆಡಿದ ವಿದೇಶೀ ಆಟಗಾರರು ಒಟ್ಟು ೪೪ ಮಂದಿ. ಸಿಎಸ್ಕೆ ತಂಡದಲ್ಲಿದ್ದ ವಿದೇಶೀ ಆಟಗಾರರು: ಬ್ರೆಂಡನ್ ಮೆಕಲಮ್, ಡ್ವೇನ್ ಬ್ರಾವೋ, ಡ್ವೇನ್ ಸ್ಮಿತ್, ಫಫ್ ಡು ಪ್ಲೆಸಿಸ್. ಡೆಲ್ಲಿ ಡೆವಿಲ್ಸ್ ತಂಡದಲ್ಲಿದ್ದವರು: ಜೆ.ಪಿ. ಡುಮಿನಿ, ಷಾಬಾಜ್ ನದೀಮ್, ಇಮ್ರಾನ್ ತಾಹಿರ್, ನಥನ್ ಕೋಲ್ಟರ್ ನೀಲ್. ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದವರು: ಹೆಂಡ್ರಿಕ್ಸ್, ಡೇವಿಡ್ ಮಿಲ್ಲರ್, ಜಾರ್ಜ್ ಬೈಲಿ, ಗ್ಲೆನ್ ಮ್ಯಾಕ್ಸ್ವೆಲ್, ಮಿಷಲ್ ಜಾನ್ಸನ್, ಶಾನ್ ಮಾರ್ಷ್, ತೀಸರಾ ಪೆರೆರಾ. ಕೆಕೆಆರ್ ತಂಡದಲ್ಲಿದ್ದವರು: ಆಂಡ್ರೆ ರಸೆಲ್, ಮೋರ್ನ್ ಮಾರ್ಕೆಲ್, ಪ್ಯಾಟ್ರಿಕ್ಸ್ ಕಮ್ಮಿಂಗ್ಸ್ ಸುನಿಲ್ ನಾರಾಯಣ್. ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದವರು: ಶೇನ್ ವ್ಯಾಟ್ಸನ್, ಬೆನ್ ಕಟ್ಟಿಂಗ್, ಜೇಮ್ಸ್ ಫಾಕ್ನರ್, ಕೇನ್ ರಿಚಡ್ಸ್ಸನ್, ಟಿಮ್ ಸೌದೀ. ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದವರು: ಕೋರಿ ಅಂಡರ್ಸನ್, ಕಿರನ್ ಪೋಲಾರ್ಡ್, ಲಸಿತ್ ಮಲಿಂಗ, ಸಿಮನ್ಸ್. ಆರ್ಸಿಬಿ ತಂಡದಲ್ಲಿದ್ದವರು: ಎಬಿ ಡೆವಿಲಿಯರ್ಸ್, ಕ್ರಿಸ್ಗೇಲ್, ಮಿಷಲ್ ಸ್ಟಾರ್ಕ್, ಅಬು ನೆಜಿಮ್ ಅಹಮದ್, ಇಕ್ಬಾಲ್ ಅಬ್ದುಲ್ಲಾ. ಸನ್ರೈಸರ್ಸ್ ತಂಡದಲ್ಲಿದ್ದವರು: ಡೇಲ್ ಸ್ಟೇನ್, ಡೇವಿಡ್ ವಾರ್ನರ್, ಪರ್ವೀಜ್ ರಸುಲ್, ರಿಕಿ ಬುಯಿ.
ಕೌಶಲಗಳನ್ನು ಕಲಿಯಲು ಸದವಕಾಶ
ಅಂತಾರಾಷ್ಟ್ರೀಯ ತಂಡಗಳಲ್ಲಿ ಈಗಾಗಲೇ ಮಿಂಚು ಹರಿಸಿರುವ ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ಡ್ವೇನ್ ಸ್ಮಿತ್, ಜಾರ್ಜ್ ಬೈಲಿ, ಬ್ರೆಂಡನ್ ಮೆಕಲಮ್ ಅವರಂತಹ ಪ್ರಸಿದ್ಧ ಆಟಗಾರರನ್ನು ನಮ್ಮ ದೇಶದ ಬಹಳಷ್ಟು ಕ್ರಿಕೆಟಿಗರು ಹತ್ತಿರದಿಂದ ನೋಡಿಯೇ ಇರುವುದಿಲ್ಲ. ಐಪಿಎಲ್ನಲ್ಲಿ ಇವರ ಜೊತೆ ಆಡುವ ಅವಕಾಶ ಸಿಕ್ಕರೆ ನಮ್ಮ ಆಟಗಾರರಿಗೆ ಹೊಸ ಕೌಶಲಗಳನ್ನು ಕಲಿಯುವ ಸದವಕಾಶ ಸಿಗುತ್ತದೆ ಎಂಬುದು ಮಾಜಿ ಆಟಗಾರ ಎರ್ರಪಳ್ಳಿ ಪ್ರಸನ್ನ ಅವರ ಅಭಿಮತ. ಪ್ರಸನ್ನ ಅವರ ಮಾತಿನಲ್ಲಿ ಸತ್ಯಾಂಶ ಇಲ್ಲದಿಲ್ಲ. ಕಳೆದ ಟೂರ್ನಿಗಳಲ್ಲಿ ಆಸ್ಟ್ರೇಲಿಯಾದ ಅತಿರಥ ಮಹಾರಥ ಆಟಗಾರರಾದ ಮ್ಯಾಥ್ಯು ಹೇಡನ್, ಗಿಲ್ ಕ್ರಿಸ್ಟ್, ಸೈಮಂಡ್ಸ್, ಶೇನ್ವಾರ್ನ್, ರಿಕಿ ಪಾಂಟಿಂಗ್, ಬ್ರೆಟ್ಲೀ, ಶ್ರೀಲಂಕಾದ ಸನತ್ ಜಯಸೂರ್ಯ, ಕುಮಾರ ಸಂಗಕ್ಕಾರ…. ಹೀಗೆ ಹಲವು ಮಂದಿ ವಿವಿಧ ತಂಡಗಳಲ್ಲಿ ಆಡಿದ್ದರು. ರಾಜಸ್ಥಾನ ರಾಯಲ್ಸ್ ತಂಡದ ಸಾರಥ್ಯ ವಹಿಸಿದ್ದ ಶೇನ್ವಾರ್ನ್ ೨೦೦೮ರ ಋತುವಿನಲ್ಲಿ ತಂಡವನ್ನು ಪ್ರಶಸ್ತಿಯತ್ತ ಮುನ್ನಡೆಸಿದ್ದರು.
ಆಗ ತಂಡದಲ್ಲಿದ್ದ ಭಾರತದ ಯುಸೂಫ್ ಪಠಾಣ್, ಮುನಾಫ್ ಪಟೇಲ್, ರವೀಂದ್ರ ಜಡೇಜ ಹಾಗೂ ಮೊಹಮ್ಮದ್ ಕೈಫ್ ಅವರಲ್ಲಿ ಅಡಗಿದ್ದ ಸುಪ್ತ ಪ್ರತಿಭೆಗೆ ಅವರು ಸಾಣೆಹಿಡಿದಿದ್ದರು. ಆ ಟೂರ್ನಿಯಲ್ಲಿ ಯುಸೂಫ್ ಪಠಾಣ್ ೪ ಬಾರಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದು ಇದಕ್ಕೊಂದು ನಿದರ್ಶನ.
ಈ ಬಾರಿಯೂ ಬ್ರೆಂಡನ್ ಮೆಕಲಮ್, ಡೇವಿಡ್ ಮಿಲ್ಲರ್, ಬ್ರಾವೋ, ಕೋರಿ ಅಂಡರ್ಸನ್, ಎಬಿ ಡಿವಿಲಿಯರ್ಸ್ ಮೊದಲಾದ ವಿದೇಶೀ ಆಟಗಾರರಿಂದ ನಮ್ಮ ಆಟಗಾರರು ಕಲಿಯಬೇಕಾದ ಪಾಠಗಳು ಬಹಳಷ್ಟು ಇದ್ದವು. ಆಟದ ವೇಳೆ ಅವರು ಹೆಣೆಯುತ್ತಿದ್ದ ತಂತ್ರ, ನಿರ್ವಹಿಸುತ್ತಿದ್ದ ಕೌಶಲ, ದೈಹಿಕ ಕ್ಷಮತೆಗೆ ಕೊಡುತ್ತಿದ್ದ ಒತ್ತು – ಇವೆಲ್ಲವೂ ಅನುಕರಣೀಯ. ಜೊತೆಗೆ ಡ್ರೆಸ್ಸಿಂಗ್ ಕೊಠಡಿಯಲ್ಲಿ ಅವರೊಂದಿಗೆ ಮಾತನಾಡುವ ಅವಕಾಶ ಸಿಗುವುದು ಇನ್ನೊಂದು ಪ್ಲಸ್ ಪಾಯಿಂಟ್. ಅವರ ಮನಃಸ್ಥಿತಿ ಹೇಗಿರುತ್ತದೆ, ಒತ್ತಡದ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾರೆ, ಕಠಿಣ ಸಂದರ್ಭಗಳಲ್ಲಿ ಎಂತಹ ನಿರ್ಧಾರ ಕೈಗೊಳ್ಳುತ್ತಾರೆ ಇತ್ಯಾದಿ ಗುಣಾತ್ಮಕ ಅಂಶಗಳನ್ನು ವಿದೇಶೀ ಆಟಗಾರರಿಂದ ಕಲಿಯಬಹುದು ಎಂಬುದು ಹಿರಿಯ ಮಾಜಿ ಆಟಗಾರ ಬ್ರಿಜೇಶ್ ಪಟೇಲ್ ಅವರ ಅಭಿಮತ.
ವಾದಗಳು
ನಮ್ಮ ಆಟಗಾರರು ವಿದೇಶೀ ಆಟಗಾರರ ಜೊತೆ ಐಪಿಎಲ್ನಲ್ಲಿ ಆಡುವುದರಿಂದ ಅವರ ಬಲ ಮತ್ತು ದೌರ್ಬಲ್ಯಗಳನ್ನು ಚೆನ್ನಾಗಿ ಅರಿತುಕೊಳ್ಳಬಹುದು. ಅವರು ಸರಣಿ ಆಡಲು ಭಾರತಕ್ಕೆ ಬಂದಾಗ ಅಥವಾ ನಾವು ಅವರ ನೆಲದಲ್ಲಿ ಆಡಲು ಹೋದಾಗ ಇವುಗಳ ಲಾಭ ಪಡೆದು ಅವರನ್ನು ಸೋಲಿಸಬಹುದು ಎಂಬ ಅಭಿಪ್ರಾಯವೂ ಇದೆ. ಈ ಅಭಿಪ್ರಾಯಕ್ಕೆ ಕೆಲವರ ವಿರೋಧವೂ ಇದೆ. ಭಾರತದಲ್ಲಿ ಆಡುವುದಕ್ಕೂ ವಿದೇಶೀ ನೆಲದಲ್ಲಿ ಆಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಭಾರತದಲ್ಲಿ ಸ್ಪಿನ್ನರ್ಗಳಿಗೆ ನೆರವು ನೀಡುವ ಪಿಚ್ಗಳು ಹೆಚ್ಚಿವೆ. ಆದರೆ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ಗಳಲ್ಲಿ ವೇಗಿಗಳಿಗೆ ನೆರವಾಗಬಲ್ಲ ಬೌನ್ಸಿ ಪಿಚ್ಗಳು ಸಿದ್ಧವಾಗಿರುತ್ತವೆ. ಹೀಗಾಗಿ ವಿದೇಶೀ ಆಟಗಾರರ ಬಲ ಮತ್ತು ದೌರ್ಬಲ್ಯ ಗೊತ್ತಿದ್ದರೂ ಅವರ ನೆಲದಲ್ಲಿ ಅವರನ್ನು ಕಟ್ಟಿಹಾಕುವುದು ಸುಲಭವಲ್ಲ ಎಂಬುದು ಕೆಲವರ ವಾದ. ಈ ಎಲ್ಲಾ ವಾದಗಳಲ್ಲೂ ಒಂದಷ್ಟು ಸತ್ಯಾಂಶ ಇದ್ದೇ ಇದೆ.
ಅದೇನೇ ಇರಲಿ, ವಿದೇಶೀ ಆಟಗಾರರು ಐಪಿಎಲ್ನಲ್ಲಿ ಆಡುವುದರಿಂದ ನಮ್ಮ ಆಟಗಾರರಿಗೆ ನಷ್ಟಕ್ಕಿಂತ ಲಾಭವೇ ಅಧಿಕ ಎಂಬುದನ್ನು ಮರೆಯುವಂತಿಲ್ಲ. ಐಪಿಎಲ್ನಲ್ಲಿ ಆಡುವ ವಿದೇಶೀ ಆಟಗಾರರಿಗೂ ನಮ್ಮ ಆಟಗಾರರಿಂದ ಕಲಿಯಬಹುದಾದ ಗುಣಾತ್ಮಕ ಅಂಶಗಳು ಇದ್ದೇ ಇವೆ. ಮೇಲಾಗಿ ವಿವಿಧ ದೇಶಗಳ ಆಟಗಾರರೊಂದಿಗೆ ಒಂದು ತಂಡವಾಗಿ ಆಡಿದಾಗ ನಾವೆಲ್ಲರೂ ಒಂದೇ ವಿಶ್ವಕುಟುಂಬಕ್ಕೆ ಸೇರಿದವರು ಎಂಬ ವಿಶಾಲಭಾವನೆ ಬೇರೂರುವುದನ್ನು ಮರೆಯುವುದು ಹೇಗೆ?