ತಂದೆಯ ಮಾತನ್ನೇ ಕೇಳದೆ ಇದ್ದ ಈ ಮಕ್ಕಳನ್ನು ನಾನು ಆದರಿಸಿ ಉಪಚರಿಸಿದರೆ ಪುನಃ ದಾರಿತಪ್ಪುವರು.
ಸಮಯ ಯಾರಿಗೂ ಕಾಯುವುದಿಲ್ಲ ಗಂಟೆಗಳು ಉರುಳಿದವು, ಬೆಳಗು ಸರಿಯಿತು, ಮಧ್ಯಾಹ್ನ ಹಾಜರಾಯಿತು. ಜೊತೆಯಲ್ಲಿಯೇ ಮಕ್ಕಳ ದಂಡು ಅಜ್ಜಿಯನ್ನು ಸುತ್ತುವರಿಯಿತು. ಮಕ್ಕಳೆಲ್ಲ ಬಂದಿರುವಿರಿ ಅಲ್ಲವೇ, ಕಥೆ ಪ್ರಾರಂಭಿಸಲೇ ಎಂದರು ಅಜ್ಜಿ. ಹೂಂ ನಾವೆಲ್ಲ ರೆಡಿಯಾಗಿದ್ದೇವೆ ಎಂದಳು ಶ್ರೇಯಾ, ಶ್ರೇಯಾಳನ್ನು ಅನ್ವಿತಿ ನಾವೆಲ್ಲ ಸಿದ್ಧವಾಗಿದ್ದೇವೆ ಅಂತ ಹೇಳು ಎಂದು ಕನ್ನಡ ಪದದ ಪರವಾಗಿ ತಿದ್ದಿದಳು. ಆಯಿತು ಅಜ್ಜಿ, ನಾವೆಲ್ಲ ಸಿದ್ಧವಾಗಿದ್ದೇವೆ ಎಂದು ಶ್ರೇಯಾ ತನ್ನನ್ನು ತಿದ್ದಿಕೊಂಡಳು. ಅಜ್ಜಿ ಕಥೆ ಪ್ರಾರಂಭಿಸಿದರು.
ಇಲ್ಲಿಯವರೆಗೂ ಹೇಳಿದ ಕಥೆಗಳು, ಮುಂದೆ ಹೇಳುವ ಕಥೆಗಳು ಭ್ರಾಜಿಷ್ಣು ಎನ್ನುವ ಸಾಹಿತಿ ಬರೆದಿರುವ ವಡ್ಡಾರಾಧನೆಯಿಂದ ಹಾಗೂ ಅದೇ ಪುಸ್ತಕದಲ್ಲಿರುವ ಸುಕುಮಾರಸ್ವಾಮಿ ಕಥೆಯನ್ನು ಆಧರಿಸಿ ಶಾಂತಿನಾಥ ಕವಿ ಬರೆದಿರುವ ಚಂಪೂಕಾವ್ಯದಿಂದ ಆಯ್ದುಕೊಂಡಿದ್ದೇನೆ. ಭ್ರಾಜಿಷ್ಣುವಿನ ಕಾಲ ೯ನೆಯ ಶತಮಾನದ ಆರಂಭ. ಶಾಂತಿನಾಥನ ಕಾಲ ೧೧ನೇ ಶತಮಾನ. ಈಗ ನಾಗಶ್ರೀಯ ಹಿಂದಿನ ಜನ್ಮ ವಾಯುಭೂತಿಯ ಕತೆ ಹಾಗೂ ಜೊತೆಯಲ್ಲಿಯೇ ಸೋಮಶರ್ಮರ ಕಥೆಯನ್ನೂ ಕೇಳಿ ಎಂದರು ಅಜ್ಜಿ.
ವತ್ಸದೇಶ ಅಂತ ಒಂದು ದೇಶ ಇತ್ತು. ಅದರ ರಾಜಧಾನಿ ಕೌಶಾಂಬಿಪುರ. ಅದನ್ನು ಆಳುತ್ತಾ ಇದ್ದ ದೊರೆ ಹೆಸರು ಅತಿಬಳ ಮಹಾರಾಜ. ಆತನ ಮಂತ್ರಿ ಸೋಮಶರ್ಮ, ತುಂಬಾ ಬುದ್ಧಿವಂತನಾಗಿದ್ದನು. ವಿದ್ವಾಂಸನಾಗಿದ್ದನು. ಅವನ ಹೆಂಡತಿ ಕಾಶ್ಯಪಿ. ಅವರಿಗೆ ಇಬ್ಬರು ಗಂಡುಮಕ್ಕಳಿದ್ದರು. ದೊಡ್ಡವನ ಹೆಸರು ಅಗ್ನಿಭೂತಿ, ಚಿಕ್ಕವನ ಹೆಸರು ವಾಯುಭೂತಿ. ಈ ಅಣ್ಣ-ತಮ್ಮಂದಿರಿಗೆ ಓದಿ ವಿದ್ಯಾವಂತರಾಗಬೇಕೆನ್ನುವ ಆಸಕ್ತಿ ಇರಲಿಲ್ಲ. ತಂದೆಯಂತೆ ವಿದ್ವಾಂಸರು ಎನಿಸಿಕೊಳ್ಳುವ ಹಂಬಲವೂ ಇರಲಿಲ್ಲ. ಕೇಡಾಳಿಗಳಾಗಿ ಬೆಳೆದರು. ತಂದೆ ಸೋಮಶರ್ಮ ಎಷ್ಟೇ ಪ್ರಯತ್ನಿಸಿದರೂ ಮಕ್ಕಳನ್ನು ತಿದ್ದಲಾಗಲಿಲ್ಲ. ಅತ್ಯಂತ ವ್ಯಥಿತನಾದ ಸೋಮಶರ್ಮ ಮಕ್ಕಳ ದುಃಖದಲ್ಲಿಯೇ ಮರಣ ಹೊಂದಿದನು. ಆಸ್ಥಾನದಲ್ಲಿ ಮೇಧಾವಿಯಾಗಿ ಇದ್ದ ಸೋಮಶರ್ಮನ ಸಾವು ದೊರೆಗೂ ಆಸ್ಥಾನದ ಎಲ್ಲ ಗಣ್ಯರಿಗೂ ನೋವನ್ನುಂಟುಮಾಡಿತು. ಕೆಲವು ದಿವಸಗಳ ನಂತರ ಅತಿಬಳ ಮಹಾರಾಜನು ಅಗ್ನಿಭೂತಿ, ವಾಯುಭೂತಿ ಸೋದರರನ್ನು ಆಸ್ಥಾನಕ್ಕೆ ಕರೆಸಿಕೊಂಡು ಅವರಿಗೆ ಸಮಾಧಾನದ ಮಾತುಗಳನ್ನಾಡಿ ರಾಜಸನ್ಮಾನಗಳಿಂದ ಗೌರವಿಸಿದನು. ತಂದೆಯಂತೆ ಮಕ್ಕಳು ವಿದ್ವಾಂಸರಾಗಿರುತ್ತಾರೆಂದು ಭಾವಿಸಿ ಅವರ ತಂದೆಯ ಮಂತ್ರಿ ಪದವಿಯನ್ನು ಅವರಿಗೆ ಕೊಟ್ಟನು.
ಈ ಸನ್ಮಾನ ಪದವಿಗಳಿಂದ ಸಂತೋಷ ಹೊಂದಿ ಸೋದರರು ಸುಖದಿಂದಿದ್ದರು. ಹೀಗಿರಲು ಒಮ್ಮೆ ಬೇರೆ ದೇಶದಿಂದ ವಿಜಯಜಿಹ್ವನೆಂಬ ವಾದಿ ಸಂವಾದಾರ್ಥಿಯಾಗಿ ಬಂದು ರಾಜಸಭೆಯನ್ನು ಪ್ರವೇಶಿಸುವನು. ಆಸ್ಥಾನದಲ್ಲಿ ತನ್ನ ವಾಗ್ವೈಖರಿಯನ್ನು ಪ್ರದರ್ಶಿಸುವನು. ಅವನ ವಾದಕ್ಕೆ ಉತ್ತರ ನೀಡಲು ಯಾರೂ ಇರಲಿಲ್ಲ. ದೊರೆಗೆ ತಕ್ಷಣ ಸೋಮಶರ್ಮನ ಮಕ್ಕಳ ನೆನಪಾಗಿ ಅವರನ್ನು ಆಸ್ಥಾನಕ್ಕೆ ಕರೆಸುವನು. ಅವರು ‘ವಿಜಯಜಿಹ್ವ’ನನ್ನು ನೋಡಿಯೇ ಬೆಕ್ಕನ್ನು ಕಂಡ ಇಲಿಯಂತೆ ಹೆದರಿ ಗಡಗಡ ನಡುಗುತ್ತಾ ನಿಲ್ಲುವರು. ಕಣ್ಣೀರು ಸುರಿಸುತ್ತಾ ತಲೆತಗ್ಗಿಸುವರು. ವ್ಯಾಕುಲಗೊಂಡ ಅತಿಬಳ ಮಹಾರಾಜ ವಿಜಯಜಿಹ್ವನನ್ನು ಸನ್ಮಾನಿಸಿ ಕಳುಹಿಸುವನು. ಅಗ್ನಿಭೂತಿ, ವಾಯುಭೂತಿಯಿಂದ ಮಂತ್ರಿಪದವಿಯನ್ನು ಹಿಂದಕ್ಕೆ ಪಡೆದು ಛೀಮಾರಿ ಹಾಕಿ ಆಸ್ಥಾನದಿಂದ ಓಡಿಸುವನು. ಅವರ ದಾಯಾದಿಗೆ ಮಂತ್ರಿಪದವಿ ನೀಡಿ ಗೌರವಿಸುವನು.
ಅಗ್ನಿಭೂತಿ-ವಾಯುಭೂತಿಯರು ಆದ ಅವಮಾನದಿಂದ ತುಂಬ ದುಃಖತಪ್ತರಾಗುವರು. ತಂದೆಯನ್ನು ನೆನೆದು ಅಂದಿನ ತಮ್ಮ ಮೂರ್ಖತನಕ್ಕಾಗಿ ವ್ಯಾಕುಲಗೊಳ್ಳುವರು. ತಮ್ಮ ತಾಯಿಗೆ ಮುಖ ತೋರಿಸಲು ನಾಚುವರು. `ವಿದ್ಯೆ ಕಲಿತಲ್ಲದೆ ತಾಯಿಯ ಮುಖ ನೋಡೆವು’ ಎಂದು ನಿರ್ಧರಿಸುವರು. ತಾಯಿಗೆ ವಿಷಯ ತಿಳಿದು ಮಕ್ಕಳನ್ನು ಮನೆಗೆ ಬರಮಾಡಿಕೊಳ್ಳುವಳು. ಮಕ್ಕಳಿಗೆ ಮಗಧ ದೇಶದ ರಾಜಗೃಹದ ರಾಜರು ಸುಬಳ ಮಹಾರಾಜರು. ಆತನ ಬಳಿ ನನ್ನ ಸೋದರನೂ ನಿಮಗೆ ಸೋದರಮಾವನೂ ಆದ ಸೂರ್ಯಮಿತ್ರ ಮಂತ್ರಿಯಾಗಿದ್ದಾನೆ. ಆತ ಸಕಲವಿದ್ಯಾಪಾರಂಗತ. ಆತನಲ್ಲಿಗೆ ಹೋಗಿ ವಿದ್ಯೆ ಕಲಿತು ಬನ್ನಿ” ಎಂದು ಬುದ್ಧಿವಾದದ ಮಾತುಗಳನ್ನು ಹೇಳುವಳು. ಜೊತೆಗೆ ಸೂರ್ಯಮಿತ್ರನಿಗೆ ಒಂದು ವಿನಯ ಪತ್ರವನ್ನೂ ಬರೆಸಿಕೊಡುವಳು.
ಅಜ್ಜಿ, ಸೂರ್ಯಮಿತ್ರ ಅಂದರೆ ನಾಗಶ್ರೀಗೆ ವ್ರತಗಳನ್ನು ಕೊಟ್ಟರಲ್ಲ ಅವರೇನಾ? ಎಂದು ಅನ್ವ್ವಿತಿ ಪ್ರಶ್ನಿಸಿದಳು. ಹೌದು ಮೊಮ್ಮಗಳೇ, ಆ ಸೂರ್ಯಮಿತ್ರರೇ. ಅವರ ಕಥೆಯೂ ಮುಂದೆ ಬರುತ್ತದೆ. ತುಂಬ ಸ್ವಾರಸ್ಯವಾಗಿದೆ ಎಂದರು ಕಮಲಜ್ಜಿ.
ಕೆಲವು ದಿವಸಗಳು ಪ್ರಯಾಣ ಮಾಡಿದ ನಂತರ ಅಗ್ನಿಭೂತಿ-ವಾಯುಭೂತಿ ರಾಜಗೃಹವನ್ನು ಪ್ರವೇಶಿಸಿದರು. ಸೂರ್ಯಮಿತ್ರರನ್ನು ಕಂಡು ವಿಷಯ ತಿಳಿಸಿ ಪತ್ರಕೊಟ್ಟರು. ಓಲೆಯನ್ನು ಓದಿಕೊಂಡ ಸೂರ್ಯಮಿತ್ರ ತನ್ನ ಮೈದುನನ ಮರಣಕ್ಕಾಗಿ ಮನದಲ್ಲಿಯೇ ಮರುಗಿದನು. ತಂದೆಯ ಮಾತನ್ನೇ ಕೇಳದೆ ಇದ್ದ ಈ ಮಕ್ಕಳನ್ನು ನಾನು ಆದರಿಸಿ ಉಪಚರಿಸಿದರೆ ಪುನಃ ದಾರಿತಪ್ಪುವವರು ಎಂದು ಆಲೋಚಿಸಿ, ನನ್ನ ಹೆಸರೇನೋ ಲೋಕವಿಖ್ಯಾತವಾಗಿದೆ. ಸೂರ್ಯಮಿತ್ರನೆಂದೂ ಇದೆ. ಆದರೆ ಸೋಮಶರ್ಮನಿಗೂ ಕಾಶ್ಯಪಿಗೂ ನನಗೂ ಯಾವ ಸಂಬಂಧವೂ ಇಲ್ಲ. ಆದರೆ ನೀವು ವಿದ್ಯೆ ಕಲಿಯುವ ಇಚ್ಛೆಯಿಂದ ನನ್ನಲ್ಲಿಗೆ ಬಂದಿರುವಿರಿ. ನಾನು ವಿದ್ಯೆ ಕಲಿಸುವೆನು. ಊಟವಸತಿಗಳನ್ನು ನೀವೇ ನೋಡಿಕೊಳ್ಳಬೇಕು ಎಂದು ತಿಳಿಸುವನು. ಇದನ್ನು ಕೇಳಿ ತಮ್ಮ ದಯೆಯಿಂದ ನಾವು ಚೆನ್ನಾಗಿ ವಿದ್ಯೆ ಕಲಿಯುವೆವು. ಅಲ್ಲಿಯವರೆಗೂ ನಗರದಲ್ಲಿ ಸುತ್ತಾಡಿ ನಮ್ಮ ಜೀವರಕ್ಷಣೆಗಾಗಿ ವ್ಯವಸ್ಥೆ ಮಾಡಿಕೊಳ್ಳುವೆವು. ಭಿಕ್ಷೆ ಬೇಡಿ ಹೊಟ್ಟೆ ಹೊರೆದುಕೊಳ್ಳುವೆವು ಎಂದು ಹೇಳಿ ಗುರು ಸೂರ್ಯಮಿತ್ರರಲ್ಲಿ ವಿದ್ಯಾಭ್ಯಾಸಕ್ಕೆ ತೊಡಗುವರು. ಶ್ರದ್ಧೆ ಮತ್ತು ನಿಷ್ಠೆಯಿಂದ ಅಭ್ಯಾಸ ಮಾಡುವರು. ಕೆಲವು ವರುಷಗಳ ನಂತರ ಸಕಲವಿದ್ಯಾಪಾರಂಗತರಾಗಿ ಗುರುವಿಗೆ ವಂದಿಸಿ ಹೊರಡಲು ಅನುವಾಗುವರು.
ಹಾಗೆ ಹೊರಟ ಅವರೀರ್ವರಿಗೂ ಸೂರ್ಯಮಿತ್ರ ಎಣ್ಣೆ-ಮಜ್ಜನ ಮಾಡಿಸಿ, ಸುಗಂಧದ್ರವ್ಯಗಳನ್ನು ಪೂಸಿ, ಉಡಲು ಪೀತಾಂಬರ ವಸ್ತ್ರಗಳನ್ನಿತ್ತು, ತೊಡಲು ಆಭರಣಗಳನ್ನು ಕೊಟ್ಟನು. ಊಟೋಪಚಾರ ಮಾಡಿಸಿದನು. ಉಡುಗೊರೆಯನ್ನು ಇತ್ತನು. ಕಡೆಯಲ್ಲಿ ನೀವಿಬ್ಬರೂ ನನ್ನ ಅಳಿಯಂದಿರು, ನೀವು ವಿದ್ಯಾವಂತರೂ, ಬುದ್ಧಿವಂತರಾಗಬೇಕಂದು ನಾನು ಸ್ವಲ್ಪ ಕಠಿಣವಾಗಿ ವರ್ತಿಸಿದೆನು. ಈಗ ನನಗೆ ಸಂತೋಷವಾಗಿದೆ, ನೀವೂ ವಿದ್ಯಾಪಾರಂಗತರಾಗಿರುವಿರಿ. ನನ್ನ ತಂಗಿ ಕಾಶ್ಯಪಿ ಸಂತೋಷಿಸುತ್ತಾಳೆ. ಸತ್ತಿರುವ ನಿಮ್ಮ ತಂದೆಯ ಆತ್ಮಕ್ಕೂ ಶಾಂತಿ ದೊರೆಯುತ್ತದೆ. ಕಳೆದುಕೊಂಡಿರುವ ಮಂತ್ರಿಪದವಿಯೂ ನಿಮಗೆ ಪ್ರಾಪ್ತವಾಗುತ್ತದೆ” ಎಂದು ಹರಸಿ ಕಳುಹಿಸುವನು.
“ಈಗ ನೀವು ಮಂತ್ರಿಪದವಿಗೆ ಯೋಗ್ಯರಾಗಿರುವಿರಿ, ಸ್ವೀಕರಿಸಿ” ಎಂದು ಗೌರವ ಆತಿಥ್ಯದೊಡನೆ ಪುನಃ ಪದವಿಯನ್ನು ನೀಡಿದನು
ಸೋದರಮಾವ ಕೊಟ್ಟ ಉಡುಗೊರೆಗಳನ್ನು ಹೇಸರಕತ್ತೆಗಳ ಮೇಲೆ ಹೇರಿಕೊಂಡು ಕೌಶಾಂಬಿಪುರಕ್ಕೆ ಅಗ್ನಿಭೂತಿ ಮತ್ತು ವಾಯುಭೂತಿ ಹೊರಡುತ್ತಾರೆ. ಅಣ್ಣ ಅಗ್ನಿಭೂತಿ ಸಾತ್ತ್ವಿಕ ಸ್ವಭಾವದವನು. ಮಾವನ ಒಳ್ಳೆಯ ಗುಣಗಳನ್ನು ಕೊಂಡಾಡುತ್ತಾನೆ. ತಮ್ಮನ್ನು ವಿದ್ಯಾವಂತರನ್ನಾಗಿ ಮಾಡಿದ್ದನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಾನೆ. ವಾಯುಭೂತಿ ಗರ್ವಿಷ್ಠ, ಕೃತಘ್ನನಾಗಿದ್ದನು. “ನಾವು ಭಿಕ್ಷೆ ಬೇಡಿ ತಂದ ಅನ್ನಕ್ಕೆ ಒಂದು ಮಿಳ್ಳೆ ಎಣ್ಣೆಯಾಗಲಿ ಸ್ವಲ್ಪ ಉಪ್ಪನ್ನಾಗಲೀ ನೀಡಲಿಲ್ಲ. ಕಡೆಗೆ ಹುಳಿ ಮಜ್ಜಿಗೆಯನ್ನು ಕೊಡಲಿಲ್ಲ ಎಂದು ಮಾವನನ್ನು ಹೀಯಾಳಿಸುವನು.
ಹಲವು ದಿವಸಗಳ ಪ್ರಯಾಣದನಂತರ ಅಣ್ಣ-ತಮ್ಮ ಕೌಶಾಂಬಿಪುರವನ್ನು ತಲಪಿದರು. ತಾಯಿಗೆ ಒಸಗೆಯನ್ನು ಉಂಟುಮಾಡಿದರು. ದೊರೆಯನ್ನು ಕಂಡು ಆಸ್ಥಾನದಲ್ಲಿ ವಿದ್ಯೆಯ ಪ್ರೌಢಿಮೆಯನ್ನು ಮೆರೆದರು. ಅತಿಬಳ ಮಹಾರಾಜನಿಗೂ ತುಂಬ ಸಂತೋಷವಾಯಿತು. ಹೆಮ್ಮೆಯಾಯಿತು. ಈಗ ನೀವು ಮಂತ್ರಿಪದವಿಗೆ ಯೋಗ್ಯರಾಗಿರುವಿರಿ, ಸ್ವೀಕರಿಸಿ ಎಂದು ಗೌರವ ಆತಿಥ್ಯದೊಡನೆ ಪುನಃ ಪದವಿಯನ್ನು ನೀಡಿದನು. ಇಂದಿನ ಕತೆ ಮುಗಿಯಿತು. ನಾಳೆ ಸೂರ್ಯಮಿತ್ರಾಚಾರ್ಯನ ಕಥೆ ಎಂದು ಹೇಳಿ ಅಜ್ಜಿ ಕಥೆ ನಿಲ್ಲಿಸಿದರು.
ಮಾರನೆಯ ದಿನದ ಕಥೆ ಹೀಗೆ ಪ್ರಾರಂಭವಾಯಿತು. ಅತ್ತ ಕಡೆ ರಾಜಗೃಹದ ರಾಜನಾದ ಸುಬಳ ಮಹಾರಾಜನು ಮಂತ್ರಿ ಸೂರ್ಯಮಿತ್ರರೊಡನೆ ಹೊರಟನು. ಉದ್ಯಾನವನದ ಕೊಳದಲ್ಲಿ ಸ್ನಾನ ಮಾಡಲು ಇಳಿದನು. ಸಮೀಪದಲ್ಲಿಯೇ ಇದ್ದ ಸೂರ್ಯಮಿತ್ರನ ಕೈಗೆ ತನ್ನ ಬೆರಳಿನಲ್ಲಿದ್ದ ಉಂಗುರವನ್ನು ಕೊಡುವನು. ಆ ಉಂಗುರವನ್ನು ತನ್ನ ಬೆರಳಿಗೆ ಹಾಕಿಕೊಂಡ ಸೂರ್ಯಮಿತ್ರ ಮಹಾರಾಜನಿಗೆ ಅದನ್ನು ಹಿಂದಿರುಗಿಸಿ ಕೊಡುವುದನ್ನು ಮರೆಯುವನು. ಮನೆಗೆ ಹಿಂದಿರುಗಿದ ಸೂರ್ಯಮಿತ್ರ ಬೆರಳಲ್ಲಿದ್ದ ಉಂಗುರವನ್ನು ಕಂಡು ಮರುದಿನ ಮಹಾರಾಜನಿಗೆ ಉಂಗುರ ತಲಪಿಸುವುದು ಎಂದುಕೊಂಡನು.
ಮಾರನೆಯ ದಿವಸ ಸೂರ್ಯಮಿತ್ರ ಕೊಳದಲ್ಲಿ ನಿಂದು ಸೂರ್ಯನಿಗೆ ಅರ್ಘ್ಯ ಅರ್ಪಿಸುವಾಗ ಆತನ ಬೆರಳಿನಿಂದ ಉಂಗುರ ಜಾರಿ ಕೊಳದಲ್ಲಿ ಬೀಳುತ್ತದೆ. ಅದನ್ನು ಸೂರ್ಯಮಿತ್ರ ಗಮನಿಸುವುದಿಲ್ಲ. ಆಸ್ಥಾನಕ್ಕೆ ಹೊರಟಾಗ ಬೆರಳಲ್ಲಿ ಉಂಗುರವಿರುವುದಿಲ್ಲ. ಸೂರ್ಯಮಿತ್ರ ತುಂಬಾ ಆಘಾತಕ್ಕೆ ಒಳಗಾಗುತ್ತಾನೆ. ಅದು ಸಾಮಾನ್ಯವಾದ ಉಂಗುರವಲ್ಲ, ಮಹಾರಾಜರು ನಂಬಿ ನನ್ನ ಕೈಗೆ ಉಂಗುರ ಕೊಟ್ಟಿದ್ದಾರೆ. ಈಗೇನು ಮಾಡಲಿ ಎಂದು ಚಿಂತಿತನಾಗುವನು. ಹೋದ ಬಂದ ದಾರಿಯಲ್ಲೆಲ್ಲ ಹುಡುಕಿದನು. ಉಂಗುರ ಸಿಗಲಿಲ್ಲ, ದೊರೆಯೊಡನೆ ಇದ್ದ ನಿಕಟ ಸಂಬಂಧಕ್ಕೆ ಧಕ್ಕೆಯಾಗುವುದೆಂದು ವ್ಯಾಕುಲನಾದನು, ಕಡೆಗೆ ಜ್ಯೋತಿಷಿ ಪರಮಸ್ವಾಮಿಯನ್ನು ಬರಮಾಡಿಕೊಳ್ಳುವನು. ಅವನಾದರೂ ಬಳಪವನ್ನು ತೆಗೆದುಕೊಂಡು ಏನೇನೋ ಬರೆಯುತ್ತ ಲೆಕ್ಕ ಹಾಕುವಂತೆ ನಟಿಸುವನು. ಅವನ ಅಜ್ಞಾನವನ್ನು ತಿಳಿದು ಅವನನ್ನು ಅವಮಾನಿಸದೆ ಸನ್ಮಾನಿಸಿ ಕಳುಹಿಸಿದನು.
ಅನಂತರ ಚಿಂತಿಸುತ್ತ ಊರ ಹೊರಗಿನ ಉದ್ಯಾನವನಕ್ಕೆ ಬರುವನು. ದೂರದಲ್ಲಿ ಸುಧಮಾಚಾರ್ಯರೆನ್ನುವ ಜೈನ ದಿಂಗಂಬರ ಯತಿಗಳನ್ನು ಕಾಣುವನು. ‘ಪುತಂ ಬತ್ತಲೆಯಂ ಬರಿದಿಲ್ಲ ಎಂಬ ನಾಣ್ಣುಡಿಯುಂಟು’ ಎಂದುಕೊಂಡು ಅವರನ್ನು ಸಮೀಪಿಸಿದನು. ಆ ಮುನಿ ಸೂರ್ಯಮಿತ್ರನನ್ನು ನೋಡಿ ತನ್ನ ದಿವ್ಯ ಅವಧಿಜ್ಞಾನದಿಂದ ‘ಈ ಬ್ರಾಹ್ಮಣನು ಕರ್ಮಫಲ ಕಳೆದು ಜಿನಶಾಸನ ಪ್ರದೀಪನಾಗುತ್ತಾನೆ’ ಎಂದು ತಿಳಿಯುವನು. ತನಗೆ ನಮಸ್ಕರಿಸಿ ತನ್ನ ಎದುರಿನಲ್ಲಿ ಕೈಮುಗಿದು ನಿಂತ ಸೂರ್ಯಮಿತ್ರನಿಗೆ ‘ಸುಬಳನಾಥ ಮಹಾರಾಜನ ಕೈ ಬೆರಳಿನ ಉಂಗುರವನ್ನು ಅತ್ತಬಿಸುಟು ಇತ್ತ ಏಕೆ ಬಂದಿರಿ?’ ಎಂದು ಪ್ರಶ್ನಿಸುವನು. ಮುನಿಗಳು ಇಷ್ಟು ಖಚಿತವಾಗಿ ತನ್ನ ಮನಸ್ಸಿನಲ್ಲಿದ್ದ ವಿಚಾರವನ್ನು ತಿಳಿಸಿದುದನ್ನು ಕೇಳಿ ಸೂರ್ಯಮಿತ್ರ ಯತಿಗಳನ್ನು ಕುರಿತು ಉಂಗುರವನ್ನು ನಾನೆಲ್ಲಿ ಕೆಡವಿದೆ? ಅದೀಗ ಯಾರ ಬಳಿ ಇದೆ? ಹೇಗೆ ಹುಡುಕಿದರೆ ಅದನ್ನು ಪಡೆಯಲು ಸಾಧ್ಯ? ದಯಮಾಡಿ ತಿಳಿಸಿ ಎಂದು ಪ್ರಾರ್ಥಿಸುವನು. ಅದಕ್ಕೆ ಸುಧರ್ಮಾಚಾರ್ಯರು ಇಂದು ಬೆಳಗ್ಗೆ ನೀವು ಸರೋವರದಲ್ಲಿ ಸೂರ್ಯನಿಗೆ ಅರ್ಘ್ಯ ಕೊಡುವಾಗ ಬೆರಳಿನಿಂದ ಜಾರಿ ಉಂಗುರ ಕೊಳದ ತಾವರೆ ಹೂವಿನಲ್ಲಿ ಸಿಲುಕಿಕೊಂಡಿದೆ ಎಂದರು. ಆಗ ಸೂರ್ಯಮಿತ್ರ ಸಮಾಧಾನದಿಂದ ನಮ್ರನಾಗಿ ಮುನಿಗಳಿಗೆ ನಮಿಸಿ ಮನೆಗೆ ಹಿಂದಿರುಗುವನು. ಆ ವೇಳೆಗೆ ರಾತ್ರಿಯಾಗುವುದು.
ಸೂರ್ಯಮಿತ್ರನು ಕೊಳದ ಸುತ್ತಲೂ ಆ ರಾತ್ರಿ ಭಟರನ್ನು ಕಾವಲಿಟ್ಟನು. ಬೆಳಗ್ಗೆ ಬಂದು ನೋಡಲಾಗಿ ಅರಳಿದ ಕಮಲದಲ್ಲಿ ಉಂಗುರ ಫಳಫಳ ಹೊಳೆಯುತ್ತಿತ್ತು. ಆನಂದ ಹೊಂದಿದ ಅವನು, ಒಡನೆಯೇ ಉಂಗುರವನ್ನು ತೆಗೆದುಕೊಂಡು ಹೋಗಿ ಸುಬಳ ಮಹಾರಾಜನಿಗೆ ತಲಪಿಸುವನು. ಸಮಾಧಾನ ಸಂತೋಷದಿಂದ ಮನೆಗೆ ಹಿಂದಿರುಗಿದನು. ನಡೆದ ವಿಚಿತ್ರ ವಿಸ್ಮಯಗಳನ್ನೆಲ್ಲಾ ಹೆಂಡತಿಗೆ ವಿವರಿಸುವನು ಮತ್ತು ಆ ಮುನಿಗಳ ಬಳಿಗೆ ಹೋಗಿ ಜ್ಯೋತಿಷ್ಯಜ್ಞಾನವನ್ನು ಒಂದು ದಿನದಲ್ಲಿ ಕಲಿತು ಬರುವೆನು. ಆ ವಿದ್ಯೆ ನನಗೆ ದೊರೆತರೆ ತ್ರಿಲೋಕ ಸಾಮ್ರಾಜ್ಯವೇ ನನಗೆ ದೊರೆತಂತಾಗುವುದು ಎಂದು ಹೇಳಿ ಹೆಂಡತಿಯನ್ನು ಒಪ್ಪಿಸುವನು. ಅನಂತರ ನಂದನವನಕ್ಕೆ ಬರುವನು. ಆದರೆ ಆ ವೇಳೆಗೆ ಸುಧರ್ಮಾಚಾರ್ಯರು ಅಲ್ಲಿಂದ ಮುಂದಕ್ಕೆ ಪ್ರಯಾಣ ಬೆಳೆಸಿದ್ದರು.
ಜ್ನಾನಕ್ಕೇ ಮಿಗಿಲಾದದ್ದು ಯಾವುದು ಇಲ್ಲ
ಜ್ಞಾನವು ಜಗತ್ತನ್ನು ಅಳುತ್ತದೆ
ಕಲಿಕೆಗೆ ದೇವರು ದಾರಿ ಮಾಡುವ ಕೊಡುವವನು