ಸೇವಕರು ಕೊಳದ ನೀರನ್ನು ಹೊರಗಡೆ ಹರಿಯಲು ಬಿಟ್ಟರು. ನೀರೆಲ್ಲ ತೂಬಿನಿಂದ ಹೊರಗೆ ಹೋಯಿತು. ಅಲ್ಲಿ ದೊರೆ ತನ್ನ ಉಂಗುರವನ್ನಲ್ಲ ಕಂಡಿದ್ದು; ಕುಬೇರನ ಭಂಡಾರವೇ ತೆರೆದಂತಾಯಿತು…..
ಮಾರನೆಯ ದಿವಸ ಅಜ್ಜಿ ಕಥೆಯನ್ನು ಮುಂದುವರಿಸಿದರು. ದೀಕ್ಷೆ ಸ್ವೀಕರಿಸಿದ ನಾಗಶ್ರೀ ಮುಂದೆ ತಪಸ್ಸು ಮಾಡಿದಳು. ಅದರ ಪುಣ್ಯಫಲದಿಂದ ‘ಅಚ್ಯುತಕಲ್ಪದಲ್ಲಿ ‘ಪದ್ಮಪ್ರಭ’ನೆಂಬ ದೇವನಾಗಿ ಹುಟ್ಟಿದಳು.
“ಅಚ್ಯುತ ಕಲ್ಪ ಅಂದರೇನು ಅಜ್ಜಿ?”
ಜೈನ ಪುರಾಣಗಳಲ್ಲಿ ಅದು ಒಂದು ಸ್ವರ್ಗದ ಹೆಸರು. ಆ ಸ್ವರ್ಗದಲ್ಲಿ ಅನೇಕ ವರ್ಷಗಳ ಕಾಲ ಪದ್ಮ ಪ್ರಭದೇವ ಸುಖವನ್ನು ಅನುಭವಿಸಿದನು.
ಇತ್ತ ಭೂಲೋಕದಲ್ಲಿ ‘ಅವಂತಿ’ ಎಂಬುದು ಒಂದು ದೇಶ. ಉಜ್ಜಯಿನಿ ಅದರ ರಾಜಧಾನಿ. ಅದರ ದೊರೆ ವೃಷಭಾಂಕ. ಆತನ ಪ್ರಧಾನಶ್ರೇಷ್ಠಿ ಇಂದ್ರದತ್ತ. ಆತನ ಮಗ ಸೂರದತ್ತ. ಆತ ರಾಜವರ್ತಕ ಹಾಗೂ ಸಿರಿವಂತ. ಆ ಸೂರದತ್ತನ ಮಡದಿ ಯಶೋಭದ್ರೆ. ಈ ದಂಪತಿಗಳಿಗೆ ಬಹಳ ವರುಷಗಳಾದರೂ ಮಕ್ಕಳಾಗಲಿಲ್ಲ. ಸಂಪತ್ತ್ತು ಇದೆ, ನಿಜ. ಆದರೆ ಅದನ್ನು ಅನುಭವಿಸುವ ಮಕ್ಕಳಿಲ್ಲದ ಚಿಂತೆ ಆ ದಂಪತಿಗಳನ್ನು ಗಾಢವಾಗಿ ಕಾಡುತ್ತಿತ್ತು.
ಇಂಥ ಸಂದರ್ಭದಲ್ಲಿ ಆ ಪಟ್ಟಣಕ್ಕೆ ಅಭಿನಂದನ ಮುನೀಂದ್ರರು ಆಗಮಿಸಿದರು. ಅವರ ದರ್ಶನ ಪಡೆದು ಭಕ್ತಿಯಿಂದ ನಮಿಸಿ ಯಶೋಭದ್ರೆ “ನನಗೆ ಮಕ್ಕಳ ಭಾಗ್ಯವಿದೆಯೇ?” ಎಂದು ಕೇಳುವಳು. ಮುನಿಗಳು “ನಿಮಗೆ ಗರ್ಭಸುಖಿಯಾದ ಮಗನು ಹುಟ್ಟುವನು. ಆದರೆ ಮಗನ ಮುಖ ನೋಡಿದ ಮೇಲೆ ತಂದೆ ತಪಸ್ಸಿಗೆ ಹೋಗುವನು. ಆ ಮಗುವಿಗೂ ಯತಿದರ್ಶನವಾದ ಕೂಡಲೇ ಅವನೂ ಯತಿಯಾಗುವನು” – ಎಂದು ತಿಳಿಸುವರು. ಇದನ್ನು ಕೇಳಿದ ಯಶೋಭದ್ರೆಗೆ ಮಗ ಹುಟ್ಟುವನು ಎಂಬ ಸಂತೋಷ ಒಂದು ಕಡೆಯಾದರೆ, ಮಗುವಿನ ಮುಖದರ್ಶನ ಮಾತ್ರದಿಂದಲೇ ತಂದೆ ತಪಸ್ಸಿಗೆ ನಡೆಯುವನೆಂಬ ದುಃಖ ಇನ್ನೊಂದು ಕಡೆಯಾಗಿ ಹರ್ಷ – ವಿಷಾದಗಳು ಏಕಕಾಲದಲ್ಲಿ ಉಂಟಾದವು.
ಅತ್ತಕಡೆ ಸ್ವರ್ಗದಲ್ಲಿದ್ದ ತನ್ನ ದೇವಲೋಕದಲ್ಲಿನ ಅವಧಿ ಮುಗಿಯಲು ಅಲ್ಲಿಂದ ಚ್ಯುತನಾಗಿ ಯಶೋಭದ್ರೆಯ ಗರ್ಭವನ್ನು ಪ್ರವೇಶಿಸುವನು. ಅವಳಿಗೆ ನವಮಾಸ ತುಂಬಿತು. ಸುಂದರವಾದ ಒಂದು ಗಂಡುಮಗುವಿನ ಜನನವಾಯಿತು. ಸೂರದತ್ತನು ತನ್ನ ಮಗನನ್ನು ನೋಡಿ ತೊಟ್ಟಿಲಿಗೇ ಸೆಟ್ಟಿ ಪಟ್ಟಕಟ್ಟಿ ತನ್ನ ಕರ್ತವ್ಯ ತೀರಿತೆಂದು ತಪಸ್ಸಿಗೆ ಹೊರಡುವನು. ಸೂರದತ್ತನನ್ನು ಉಳಿಸಿಕೊಳ್ಳಲು ಯಶೋಭದ್ರೆ ಎಷ್ಟೇ ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ. ಅಭಿನಂದನ ಮುನೀಂದ್ರರ ಮಾತು ನಿಜವಾಯಿತು. ಯಶೋಭದ್ರೆಯಾದರೋ ಮಗನ ಮೇಲಿನ ಮೋಹದಿಂದ ಮನೆಯಲ್ಲಿಯೇ ಉಳಿದಳು. ಮಗುವಿಗೆ ಸುಕುಮಾರನೆಂಬ ಹೆಸರಿಟ್ಟು ಲಾಲಿಸಿ ಬೆಳೆಸಿದಳು. ಹೀಗೆ ವಾಯುಭೂತಿ, ನಾಗಶ್ರೀ ಆಗಿ ಈಗ ಸುಕುಮಾರನಾಗಿ ಸುಖ ಸಂತೋಷದಿಂದ ಬೆಳೆದನು.
ಯಶೋಭದ್ರೆಗೆ ಕ್ಷಣಕ್ಷಣಕ್ಕೂ ಅಭಿನಂದನ ಮುನಿಗಳು ಹೇಳಿದ – “ಮಗುವಿಗೂ ಯತಿದರ್ಶನವಾದ ಕೂಡಲೇ ಅವನೂ ಯತಿಯಾಗುವನು” – ಎನ್ನುವ ಮಾತುಗಳು ನೆನಪಾಗುತ್ತಿತ್ತು. ಗಂಡನು ತಪಸ್ಸಿಗೆ ಹೋದ ಹಾಗೆ ಮಗನೂ ಎಲ್ಲಿ ತನ್ನ ಕೈ ತಪ್ಪಿ ಹೋಗುವನೋ ಎಂದು ಮಗನಿಗಾಗಿ ನೆಲಮಾಳಿಗೆಯಲ್ಲಿ ನವರತ್ನ ಖಚಿತವಾದ ಅರಮನೆಯೊಂದನ್ನು ಕಟ್ಟಿಸಿದಳು. ಅದರ ಸುತ್ತಲೂ ಮುವ್ವತ್ತೆರಡು ಸೌಧಗಳನ್ನು ಮಾಡಿಸಿದಳು. ನೆಲಮಾಳಿಗೆಯಲ್ಲಿ ಒಂದು ಚಿಕ್ಕ ಪ್ರಪಂಚನ್ನು ನಿರ್ಮಿಸಿದಳು. ಅಪ್ಪಿತಪ್ಪಿಯೂ ಮಗನ ಕಿವಿಗಳಿಗೆ ‘ಯತಿ’ ಎನ್ನುವ ಶಬ್ದ ಕೇಳದ ಹಾಗೆ ಹಾಗೂ ಅವರ ಯಾವುದೇ ಚಿತ್ರಪಟಗಳು, ರೂಪದ ಕುರುಹುಗಳು ಕಣ್ಣಿಗೆ ಬೀಳದಂತೆ ಅತ್ಯಂತ ಎಚ್ಚರಿಕೆವಹಿಸಿದಳು. ಮಗ ಸುಕುಮಾರ ಗರ್ಭಸುಖಿಯಾಗಿ ಬೆಳದು ದೊಡ್ಡವನಾದನು. ಸುಕುಮಾರನಿಗೆ ತಾಯಿ ಯಶೋಭದ್ರೆ ಮುವ್ವತ್ತೆರಡು ಸ್ಫುರದೂಪಿ, ಸುಗುಣ ಗುಣದ ಕನ್ನೆಯರನ್ನು ತಂದು ಮದುವೆ ಮಾಡಿಸಿದಳು. ಸಿರಿವಂತಿಕೆಯ ಸುಪ್ಪರಿಕೆಯಲ್ಲಿ, ಸುಖ ಸಂಕಥಾ ವಿನೋದಗಳಲ್ಲಿ ನಾಟ್ಯ, ನೃತ್ಯ ಸಂಗೀತ, ಕಲೆಗಳಲ್ಲಿ ಸುಕುಮಾರ ಮಡದಿಯರೊಡನೆ ಸಂತಸದಿಂದ ಕಾಲ ಕಳೆಯುತ್ತಿದ್ದನು. ಮಗನ ವೈಭವದ ಲೀಲೆಗಳನ್ನು ನೋಡಿ, ಆನಂದಿಸುತ್ತಾ ನೆಮ್ಮದಿಯ ಉಸಿರಾಡುತ್ತಾ ಯಶೋಭದ್ರೆ ಸಮಾಧಾನ ಸಂಸತದಿಂದಿದ್ದಳು.
ಹುಟ್ಟು ಕುರುಡಿಯಾಗಿ ಕಷ್ಟಕೋಟಲೆಗೆ ಒಳಗಾಗಿ ದುಃಖಿಸುತ್ತಿದ್ದ ಹಿಂದಿನ ಜನ್ಮದ ಮಾತಂಗಿ ಕನ್ಯೆ ಎಲ್ಲಿ, ಸುಖ ಭೋಗಗಳ ತುತ್ತತುದಿಯಲ್ಲಿರುವ ಸುಕುಮಾರನೆಲ್ಲಿ? ಪಂಚನಮಸ್ಕಾರಗಳನ್ನು ಜಪಿಸುತ್ತಾ ಪಶ್ಚಾತ್ತಾಪದಿಂದ ತನ್ನ ತಪ್ಪಿಗಾಗಿ ಮರುಗಿದ್ದರ ಪರಿಣಾಮದಿಂದ ಇಂಥ ಸುಖ-ಭೋಗಗಳು ವಾಯುಭೂತಿಗೆ ದೊರಕಿದವು.
ಹೀಗಿರಲು ಒಮ್ಮೆ ದೊರೆ ವೃಷಭಾಂಕನ ಆಸ್ಥಾನಕ್ಕೆ ಝಂಝೂವೇಗನೆಂಬುವನು ಅಪೂರ್ವ ರತ್ನಕಂಬಳಿಯೊಂದನ್ನು ತರುವನು.
“ಇದು ಬೇರೆ ಕಥೆನಾ ಅಜ್ಜಿ?”
“ಹೌದು ಇದೊಂದು ಬೇರೆ ಕಥೆಯೇ, ಆದರೆ ಇದು ಯಶೋಭದ್ರೆ ಹಾಗೂ ಸುಕುಮಾರನಿಗೆ ಸಂಬಂಧಿಸಿದ್ದೆ ಆಗಿದೆ.”
“ಆಯ್ತು ಅಜ್ಜಿ” ಮುಂದೆ ಹೇಳಿ.
ಆ ರತ್ನಕಂಬಳಿಯನ್ನು ಆಸ್ಥಾನದಲ್ಲಿ ಹರಡುತ್ತಾನೆ. ಒಮ್ಮೆಲೇ ಕೋಟಿ ಸೂರ್ಯರು ಉದಯಿಸಿದಂತೆ ಆ ಕಂಬಳಿ ಪ್ರಕಾಶಮಾನವಾಗಿ ಹೊಳೆಯುತ್ತದೆ. ಮುತ್ತು, ರತ್ನ, ವಜ್ರ, ವೈಢೂರ್ಯ, ಪಚ್ಚೆ, ನೀಲ, ಕೆಂಪು, ಹವಳ ಹೀಗೆ ನವರತ್ನಗಳಿಂದ ತಯಾರಾಗಿದ್ದ ಅದರ ಬೆಲೆ ಒಂದು ಕೋಟಿ ದಿನಾರ(ಹೊನ್ನು, ಹಣ)ವೆಂದು ಹೇಳುವನು. ಅದನ್ನು ನೋಡಿ ದೊರೆ ವೃಷಭಾಂಕ ಹಾಗೂ ಆಸ್ಥಾನದಲ್ಲಿದ್ದವರೆಲ್ಲ ಅನಂದಿಸುವರು. ಆದರೆ ಯಾರಿಗೂ ಅದನ್ನು ಕೊಳ್ಳುವ ಸಿರಿವಂತಿಕೆ ಶಕ್ತಿ ಇರಲಿಲ್ಲ. ದೊರೆ ವೃಷಭಾಂಕನಿಗೂ ಸಾಧ್ಯವಿರಲಿಲ್ಲ.
ಅಷ್ಟು ಬೆಲೆ ಕೊಟ್ಟುಕೊಳ್ಳಲು ತಮಗೆ ಸಾಧ್ಯವಿಲ್ಲವೆಂದು ಹೇಳಿ ವೃಷಭಾಂಕ ದೊರೆಯು ಝಂಝೂವೇಗನಿಗೆ ಉಡುಗೊರೆ ಕೊಟ್ಟು ಸನ್ಯಾಸಿ ಕಳುಹಿಸುವನು. ಆಸ್ಥಾನದಿಂದ ಹೊರಬಿದ್ದ ಝಂಝೂವೇಗನು ನಗರದಲ್ಲಿ, “ಇಷ್ಟು ಬೆಲೆ ಬಾಳುವ ರತ್ನಗಂಬಳಿಯನ್ನು ಕೊಳ್ಳುವ ಶ್ರೀಮಂತರು ಯಾರಿದ್ದಾರೆ?” ಎಂದು ವಿಚಾರಿಸಿದನು. ಆಗ ಇದನ್ನು ಕೊಳ್ಳುವ ಶ್ರೀಮಂತಿಕೆ ಇರುವವನೆಂದರೆ ಸುಕುಮಾರಸ್ವಾಮಿ ಮಾತ್ರ ಎನ್ನುವರು. ವರ್ತಕನು ಸುಕುಮಾರಸ್ವಾಮಿಯ ಮನೆಗೆ ಬರುವನು. ಯಶೋಭದ್ರೆಗೆ ರತ್ನಗಂಬಳಿಯನ್ನು ತೋರಿಸುವನು. ಒಂದು ಕೋಟಿ ಹೊನ್ನನ್ನು ಒಂದು ಕವಡೆ ಕೊಡುವಂತೆ ಕೊಟ್ಟು ಆ ಕಂಬಳಿಯನ್ನು ಕೊಂಡುಕೊಳ್ಳುವಳು. ತನ್ನ ಮಗನಿಗೆ ಹೊದೆಯಲೆಂದು ಕಳುಹಿಸುವಳು. ಸುಕುಮಾರ ಅದನ್ನು ಹೊದ್ದುಕೊಳ್ಳಲು ಅವನಿಗೆ ತುಂಬ ಸೆಕೆಯಾಗುವದು. ತಾಯಿಗೆ ವಿಷಯ ತಿಳಿಸಿ ಹಿಂದಿರುಗಿಸುವನು ಮತ್ತು ತನಗೆ ಮೆಚ್ಚುಗೆಯಾದ ಸೊಸೆಯೊಬ್ಬಳಿಗೆ ಕೊಡಬಹುದೆಂದು ತಿಳಿಸುವನು. ಅಗ ಯಶೋಭದ್ರೆ ಒಬ್ಬ ಸೊಸೆಗೆ ಕೊಟ್ಟರೆ ಪಕ್ಷಪಾತವಾಗುವುದೆಂದು ಯೋಚಿಸಿದಳು. ನಂತರ ರತ್ನಗಂಬಳಿಯನ್ನು ಕತ್ತರಿಸಿ ಎಲ್ಲ ಸೊಸೆಯರಿಗೂ ಪಾದುಕೆಗಳಾಗಿ ಹೊಲಿಸಿಕೊಡುವಳು.
ಇತ್ತ ರಾಜ ವೃಷಭಾಂಕನು, ಮಾರನೆಯ ದಿನ ತನ್ನ ಆಸ್ಥಾನದಲ್ಲಿ “ಝಂಝೂವೇಗನು ತಂದಿದ್ದ ರತ್ನಗಂಬಳಿಯನ್ನು ಯಾರೂ ಕೊಳ್ಳಲಾರರು ಅಲ್ಲವೇ?” ಎಂದು ಕೇಳುವನು. ಆಗ “ಸುಕುಮಾರನ ತಾಯಿ ಯಶೋಭದ್ರೆ ಅದನ್ನು ಕೊಂಡು ಸೊಸೆಯರಿಗೆ ಪಾದುಕೆಗಳಾಗಿ ಹೊಲಿಸಿಕೊಟ್ಟಳು” ಎಂದು ಮಹಾಮಂತ್ರಿ ತಿಳಿಸುವನು. ನಾವು ಕೊಳ್ಳಲಾರದ ವಸ್ತುವನ್ನು ಕೊಂಡವನ ಮಹಿಮೆ ಎಷ್ಟೋ! ಅಂಥ ಸಿರಿವಂತರು ನನ್ನ ರಾಜ್ಯದಲ್ಲಿ ಅದರಲ್ಲಿಯೂ ನನ್ನ ನಗರದಲ್ಲಿಯೇ ಇರುವುದು ನನಗೆ ಹೆಮ್ಮೆ ಎನಿಸಿದೆ. ಆತನ ವೈಭವವನ್ನು ಆ ತಾಯಿಯ ಔದಾರ್ಯವನ್ನು ನಾವು ಕಾಣಬೇಕು – ಎಂದು ನಿರ್ಧರಿಸಿ ಹೇಳುವನು. ಯಶೋಭದ್ರೆಗೆ ರಾಜಭಟರಿಂದ ನಿರೂಪ ತಲಪುವುದು.
ಕತೆ ಅಂದಿಗೆ ಮುಕ್ತಾಯವಾಯಿತು.
“ಹೋಗಿ ಅಜ್ಜಿ, ಟಿವಿ ಸೀರಿಯಲ್ನಲ್ಲಿ ಒಳ್ಳೆ ಇಂಟರೆಸ್ಟಿಂಗ್ ಸಮಯದಲ್ಲಿ ನಿಲ್ಲಿಸುವ ಹಾಗೆ ನೀವೂ ನಿಲ್ಲಿಸುವಿರಿ. ನಾವು ನಾಳೆವರೆಗೂ ಕಾಯಬೇಕು” ಎಂದು ಮಕ್ಕಳು ಹುಸಿಮುನಿಸು ತೋರಿದರು.
“ಹೌದು ಮಕ್ಕಳೆ, ಹಿಂದಿನ ಕಾಲದಲ್ಲೂ ಹೀಗೆ ನಡೀತಿತ್ತು. ಕಾವ್ಯವಾಚನ, ಗಮಕ, ಹರಿಕಥೆ, ಶಿವಕಥೆ, ಜಿನಕಥೆ – ಇವೆಲ್ಲವೂ ಒಂದೇ ದಿವಸದಲ್ಲಿ ಮುಗಿಯುತ್ತಿರಲಿಲ್ಲ. ಹರಿಕಥೆಯ ಜಿನದಾಸರು ಸಹ ನನ್ನ ಹಾಗೆ ಒಳ್ಳೆ ಘಟ್ಟಗಳಲ್ಲಿ ಕಥೆಗಳನ್ನು ನಿಲ್ಲಿಸುತ್ತಿದ್ದರು. ಕಾವ್ಯವಾಚನ ಗಮಕದ ವ್ಯಾಖ್ಯಾನವೂ ಹಾಗೆಯೇ ನಿಲ್ಲುತ್ತಿತ್ತು. ನನ್ನ ಕಥೆಯೂ ಹೀಗೆ, ಇಂದು ನಿಂತಿದೆ, ನಾಳೆ ಮುಂದಕ್ಕೆ ನಡೆಯುತ್ತದೆ.”
ಅಜ್ಜಿಯ ವಿವರಣೆಯಿಂದ ತೃಪ್ತರಾದ ಮಕ್ಕಳು “ಆಯಿತು ಅಜ್ಜಿ, ನಾಳೆ ಬರುತ್ತೇವೆ” ಎಂದು ಕೇಳಿ ಹೋದರು. ಅನ್ವ್ವಿತಿ ಮಾತ್ರ ಅಜ್ಜಿಯ ಸೆರಗು ಹಿಡಿದು ತೊಡೆಯ ಮೇಲೆ ಹಾಗೆ ತಲೆ ಇಟ್ಟು ನಿದ್ರೆಹೋದಳು.
ಮಾರನೆಯ ದಿನದ ಕಥೆ ಪ್ರಾರಂಭವಾಯಿತು. ರಾಜ್ಯದ ದೊರೆ ತಮ್ಮ ಮನೆಗೆ ಬರುವುದು ತಿಳಿದು ಸುಕುಮಾರನ ಮನೆ ಪೂರ್ತಿ ಅಲಂಕಾರಗೊಂಡಿತು. ದೊರೆ, ದೊರೆ ಪರಿವಾರ, ಸುಕುಮಾರನ ಮನೆಗೆ ಹೊರಟ ಮಾರ್ಗವೆಲ್ಲ ಸಿಂಗಾರಗೊಂಡಿತ್ತು. ಮನೆಗಳ ಬಾಗಿಲುಗಳು ತಳಿರು ತೋರಣಗಳಿಂದ ಶೋಭಿಸಿದರೆ ಮನೆ ಮುಂದೆ ಸಾರಿಸಿದ ನೆಲದ ಮೇಲೆ ರಂಗವಲ್ಲಿ ಚಿತ್ತಾರಗೊಂಡಿದ್ದವು. ಬೀದಿಬೀದಿಗಳಲ್ಲಿ ದೊರೆಯನ್ನು ಕಾಣಲು ಜನ ಕಿಕ್ಕಿರಿದು ನೆರೆದಿದ್ದರು. ಸುಕುಮಾರನ ಮನೆಯ ಮುಂದೆ ಜನಜಾತ್ರೆಯೇ ನೆರೆದಿತ್ತು. ದೊರೆಗಳ ಪರಿವಾರ ಬರುತ್ತಿದ್ದಂತೆಯೇ ಯಶೋಭದ್ರೆ ಕೈ ಮುಗಿದು ಸ್ವಾಗತ ಕೋರಿದಳು. ಸುಮಂಗಲಿಯರು ಕಳಸ ಕನ್ನಡಿಗಳ ಸಹಿತ ಆರತಿ ಬೆಳಗಿದರು. ದೇವದುಂದುಭಿಗಳಂತೆ ಮಂಗಳವಾದ್ಯಗಳು ಮೊಳಗಿದವು. ದೊರೆಗಳು ಸುಕುಮಾರನ ಅರಮನೆಯನ್ನು ಪ್ರವೇಶಿದರು. ಉನ್ನತ ಆಸನದಲ್ಲಿ ಕೂಡಿಸಿ ಕುಶಲೋಪರಿಯ ನಂತರ ಸೇವಕಿಯರು ರಾಜನನ್ನು ಸ್ನಾನಗೃಹಕ್ಕೆ ಕರೆದುಕೊಂಡು ಹೋದರು. ಸುಗಂಧದ ಬಿಸಿನೀರಿನ ಕೊಳದಲ್ಲಿ ಮೀಯಿಸಿದರು. ಸ್ನಾನಮುಗಿಸಿದ ದೊರೆಗಳು ಪೋಷಾಕು ಧರಿಸಿದರು. ಒಡವೆಗಳನ್ನು ತೊಟ್ಟುಕೊಂಡರು. ಆದರೆ ಕೈ ಬೆರಳಿನ ಉಂಗುರ ಕಾಣೆಯಾಗಿತ್ತು. ಕೊಳದಲ್ಲಿ ಸ್ನಾನಮಾಡುವಾಗ ಜಾರಿಬಿದ್ದಿತ್ತು.
ಸೇವಕರು ಕೊಳದ ನೀರನ್ನು ಹೊರಗಡೆ ಹರಿಯಲು ಬಿಟ್ಟರು. ನೀರೆಲ್ಲ ತೂಬಿನಿಂದ ಹೊರಗೆ ಹೋಯಿತು. ಅಲ್ಲಿ ದೊರೆ ತನ್ನ ಉಂಗುರವನ್ನಲ್ಲ ಕಂಡಿದ್ದು. ಕುಬೇರನ ಭಂಡಾರವೇ ತೆರೆದಂತಾಯಿತು. ಕೊಳದ ತಳಭಾಗದಲ್ಲಿ ಒಡವೆಗಳ ರಾಶಿ ಬಿದ್ದಿವೆ. ಅವುಗಳು ಸುಕುಮಾರನು ಸ್ನಾನ ಮಾಡುವಾಗ ಕಳಚಿ ಬಿದ್ದಿರುವ ಒಡವೆಗಳು.
ಅಲ್ಲಿಂದ ಹೊರ ಬಂದ ದೊರೆಗಳು “ನಮ್ಮ ತಮ್ಮನೆಲ್ಲಿ, ಅವನನ್ನು ನೋಡಲು ಬಂದೆವು” ಎನ್ನುವನು. ಯಶೋಭದ್ರೆ ಹೋಗಿ ಸುಕುಮಾರನ್ನು “ನಮ್ಮನ್ನು ಆಳುವ ದೊರೆಗಳು ನಿನ್ನ ದರ್ಶನಾಕಾಂಕ್ಷಿಗಳಾಗಿ ಬಂದಿದ್ದಾರೆ. ಬಾ ಮಗನೇ” ಎನ್ನುವಳು. ಸುಕುಮಾರನಿಗೆ ಆಶ್ಚರ್ಯವಾಗುತ್ತದೆ. “ನಮ್ಮನ್ನೂ ಆಳುವವರು ಇರುವರೇನಮ್ಮ ಎಂದು ಪ್ರಶ್ನಿಸುವನು. ತಾಯಿ ಜೊತೆಯಲ್ಲಿ ಬಂದ ಮನ್ಮಥಾಕಾರನಾದ ಸುಕುಮಾರನ ಸುಂದರ ರೂಪಕ್ಕೆ ದೊರೆ ಬೆಕ್ಕಸಬೆರಗಾಗುವನು. ಅವನನ್ನು ಪ್ರೀತಿಯಿಂದ ಆಲಂಗಿಸಿಕೊಂಡನು. ಅನಂತರ ಯಶೋಭದ್ರೆ ರಾಜನನ್ನೂ ರಾಜಪರಿವಾರವನ್ನೂ ಊಟೋಪಚಾರಗಳಿಂದ ಸತ್ಕರಿಸುವಳು.
ವೃಷಭಾಂಕ ಸಂತೃಪ್ತನಾಗಿ ಹೊರಡುವಾಗ ಯಶೋಭದ್ರೆಗೆ “ನಿಮ್ಮ ಮಗ ಪೀಠದ ಮೆಲೆ ಸರಿಯಾಗಿ ಕುಳಿತುಕೊಳ್ಳಲಾರ, ಊಟ ಮಾಡುವಾಗ ಅನ್ನದ ಒಂದು ಅಗುಳನ್ನು ನುಂಗುವನು, ಇನ್ನೊಂದು ಅಗುಳನ್ನು ಉಗಿಯುವನು ಮತ್ತು ಆಗಾಗ ಬೆಚ್ಚುವನು, ಕಣ್ಣುಗಳು ಕೆಂಪಗಾಗಿ ಆಗಾಗ ನೀರಿನಿಂದ ತುಂಬಿಕೊಳ್ಳುತ್ತವೆ. ಸರಿಯಾದ ವೈದ್ಯರಿಗೆ ತೋರಿಸಿ ಔಷಧಿ ಕೊಡಿಸಿ” ಎಂದು ಹೇಳುವನು. ಅದಕ್ಕೆ ಯಶೋಭದ್ರೆ ಹೀಗೆ ವಿವರಿಸುವಳು.
“ನಮ್ಮ ಸುಕುಮಾರ ಹುಟ್ಟಿನಿಂದಲೇ ಇಂದಿನವರೆಗೂ ಸ್ವಾಮಿ-ಸೇವಕ, ಹಗಲು-ಇರುಳು ಎಂಬ ಭೇದವನ್ನು ಅರಿಯನು. ಚಾಮರದ ಗಾಳಿಯಲ್ಲದೆ ಬೇರೆ ಗಾಳಿಯನ್ನು ತಿಳಿಯನು. ನೀವು ಬಂದದ್ದರಿಂದ ಮಣಿಮಾಡದಿಂದ ಹೊರಗೆ ಬಂದಿದ್ದಾನೆ.
ಒಂದು ಅಗುಳನ್ನು ನುಂಗಿ ಇನ್ನೊಂದನ್ನು ಉಗಿಯಲು ಕಾರಣವಿದೆ. ಚಂದ್ರಕಾಂತಶಿಲೆಯ ನೀರು, ಕಬ್ಬಿನರಸ, ಎಳನೀರನ್ನು ಹಾಯಿಸಿ ಬೆಳೆಸಿದ ಭತ್ತವನ್ನು ಕುಟ್ಟಿ ಮಾಡಿದ ಅಕ್ಕಿಯನ್ನು, ಮಾಡಿದ ಹಿಂದಿನ ದಿವಸ ತಾವರೆ ಹೂವಿನ ಎಸಳುಗಳಲ್ಲಿ ಇಟ್ಟಿದ್ದು ಆ ಅಕ್ಕಿಯಿಂದ ಮಾಡಿದ ಅನ್ನವನ್ನು ತಿನ್ನುವ ಅಭ್ಯಾಸ ಅವನದು. ಇಂದು ನೀವು ಬಂದಿರಿ ಎಂದು ಸ್ವಲ್ಪ ಬೇರೆ ಅಕ್ಕಿಯನ್ನು ಬೆರೆಸಿ ಅನ್ನ ಮಾಡಲಾಯಿತು. ಪುಷ್ಪವಾಸನೆ ಇದ್ದದ್ದನ್ನು ನುಂಗುತ್ತಾ, ಉಳಿದ ಅಗಳನ್ನು ಉಗುಳುತ್ತಿದ್ದನು.
“ಇಂದು ಮೊದಲ ಬಾರಿಗೆ ಇಷ್ಟು ದೊಡ್ಡ ಜನಸಂದಣಿಯನ್ನು ನೋಡಿದನು. ಆದುದರಿಂದ ಆಗಾಗ ಬೆಚ್ಚುತ್ತಿದ್ದನು.
“ನೀವು ಬಂದಾಗ, ನಿಮ್ಮಿಬ್ಬರನ್ನು ಕೂಡಿಸಿ ಬಿಳಿಸಾಸುವೆಯಿಂದ ಸೇಸೆಯನ್ನು ಇಡಲಾಯಿತು. ಪೀಠದ ಮೇಲೆ ಬಿದ್ದಿರುವ ಸಾಸುವೆಗಳು ಒತ್ತುತ್ತಿದ್ದರಿಂದ ಅವನು ಆಸನದ ಮೇಲೆ ಸರಿಯಾಗಿ ಕುಳಿತುಕೊಳ್ಳಲಾಗಲಿಲ್ಲ.
“ನಿಮಗೆ ಮಂಗಳಾರತಿ ಬೆಳಗಿದಾಗ, ಆ ಬೆಳಕಿನಿಂದ ಅವನ ಕಣ್ಣುಗಳು ಕೆಂಪಾಗಿ, ನೀರು ತುಂಬಿಕೊಂಡಿತು. ಏಕೆಂದರೆ ಅವನು ಇಲ್ಲಿಯವರೆಗೂ ರತ್ನದೀಪದ ಬೆಳಕನ್ನು ಮಾತ್ರ ನೋಡಿದ್ದನು. ಆದುದರಿಂದ ಸುಕುಮಾರನಿಗೆ ಯಾವ ರೋಗವೂ ಇಲ್ಲ. ವೈದ್ಯರಿಗೆ ತೋರಿಸುವ ಅಗತ್ಯವೂ ಇಲ್ಲ ಎಂದು ಯಶೋಭದ್ರೆ ಹೇಳಿದ ಮಾತನ್ನು ಕೇಳಿ ವೃಷಭಾಂಕ ದೊರೆ “ಸುಕುಮಾರನ ಹೆಸರು ಇವನಿಗೆ ತಕ್ಕುದಾಗಿದೆ” ಎಂದು ಅವನ ವೈಭವದ ಜೀವನಕ್ಕೆ ಸಂತಸಗೊಂಡು, ಮೆಚ್ಚಿ “ಇವನು ಬರೀ ಸುಕುಮಾರನಲ್ಲ. ಆವಂತೀ ದೇಶಕ್ಕೆ ಸುಕುಮಾರ. ಈತ ಆವಂತೀ ಸುಕುಮಾರ” ಎಂಬ ಗೌರವದ ಹೆಸರನ್ನು ಕೊಟ್ಟು ತೆರಳುವನು.
“ಕಥೆಯ ಕಟ್ಟ ಕಡೆಯ ಭಾಗಕ್ಕೆ ಬರುತ್ತಿದ್ದೇವೆ. ನಾಳೆ ಮುಕ್ತಾಯವಾಗುತ್ತದೆ” ಎಂದರು ಅಜ್ಜಿ. “ಇವತ್ತೆ ಹೇಳಿ ಮುಗಿಸಿ ಬಿಡಿ ಅಜ್ಜಿ, ನಾಳೆ ಹೊಸ ಕಥೆ ಪ್ರಾರಂಭಿಸುವಿರಂತೆ” ಎಂದು ಶ್ರೇಯ, ವಿನು, ಅನ್ವಿತಿ, ರಾಧಾ ಎಲ್ಲರೂ ಪೀಡಿಸಿದರು. ಆದರೆ ತಾನು ಎಲ್ಲಿಗೋ ಹೋಗಬೇಕಿದೆ ಎಂದೂ, ತನಗೆ ಈಗ ಕಥೆ ಹೇಳಲು ಸಮಯ ಇಲ್ಲವೆಂದು ಹೇಳಿ ಮೇಲಕ್ಕೆದ್ದರು ಅಜ್ಜಿ. ಮಕ್ಕಳು ವಿಧಿ ಇಲ್ಲದೆ ಮೇಲೆದ್ದರು.
(ಸಶೇಷ)
Amazing
ಸರಳ ಹಾಗೂ ಸುಂದರವಾಗಿದೆ.