ಮತ್ತೆ ಮೂರು ದಿನಗಳು ಅನ್ವ್ವಿತಿಗೆ, ಅವಳ ಗೆಳತಿಯರಿಗೆ ಕಥೆಯ ಸವಿ ಸಿಗಲಿಲ್ಲ. ಕಾರಣ ಕಮಲಜ್ಜಿ, ತನ್ನ ತಂಗಿ ಶ್ಯಾಮಲೆಯ ಮನೆಗೆ ಹೋದರು. ಅನ್ವಿತಿಗಂತೂ ಅಜ್ಜಿ ಎಂದು ಬರುವರೋ, ಯಾವಾಗ ಕಥೆ ಹೇಳುವರೋ ಎಂದು ಜಾತಕಪಕ್ಷಿ ಮಳೆಗೆ ಕಾಯುವಂತೆ ಕಾದಿದ್ದಳು. ಅಜ್ಜಿ ಬಂದರು, ಅನ್ವಿತಿಗೆ ಅಜ್ಜಿಯ ಮೇಲೆ ಹುಸಿಮುನಿಸು, ಹೋಗಿ ಅಜ್ಜಿ, ನಿಮ್ಮ ಜೊತೆ ಟೂ, ನಾನು ಮಾತಾಡೊಲ್ಲ – ಎಂದು ಹೇಳುತ್ತಲೇ ಅವರ ಕೊರಳಿಗೆ ಜೋತು ಬಿದ್ದಿದ್ದಳು. ಅಜ್ಜಿ ಅವಳ ತಲೆ ನೇವರಿಸಿದರು. ಮುದ್ದು ಮಾಡಿ ಕೆನ್ನೆಗಳಿಗೆ ಮುತ್ತಿಟ್ಟು ಕಥೆ ಪ್ರಾರಂಭಿಸಿದರು. ಸ್ವಲ್ಪ ತಾಳಿ ಅಜ್ಜಿ. ಶ್ರೇಯಾ, ಮಿನು, ಭುವಿಯನ್ನು ಕರೆದುಕೊಂಡು ಬರುತ್ತೇನೆ” ಎಂದು ಹೇಳುತ್ತಿದ್ದಳು. ಅಷ್ಟರಲ್ಲಿ ಅವರೆಲ್ಲರೂ ಹಾಜರಾದರು, ಕತೆ ಪ್ರಾರಂಭವಾಯಿತು.
ನಾಗಶರ್ಮ ಹಾಗೂ ನಾಗಶ್ರೀ ವಧಾಸ್ಥಾನದ ಸಮೀಪದಿಂದಲೇ ನಾಗರಠಾಣಕ್ಕೆ ಹೋಗಬೇಕಿತ್ತು. ವಧಾಸ್ಥಾನದಲ್ಲಿ ಒಬ್ಬನನ್ನು ಬಹಳವಾಗಿ ಹಿಂಸಿಸಿ ಕೊಲ್ಲಲಾಗುತ್ತಿತ್ತು. ಇದನ್ನು ನೋಡಿದ ನಾಗಶ್ರೀ ಹೆದರಿ ಬೆಚ್ಚಿಬಿದ್ದಳು. ಎರಡು ಕೈಗಳಿಂದ ಕಣ್ಣುಗಳನ್ನು ಮುಖವನ್ನು ಮುಚ್ಚಿಕೊಂಡಳು. ಮಗಳಿಗೆ ಸಮಾಧಾನ ಮಾಡಿದ ನಾಗಶರ್ಮ ವಿಷಯ ತಿಳಿದುಕೊಂಡು ಬಂದನು; ಮಗಳಿಗೆ ಘಟನೆಯನ್ನು ಕುರಿತು ಹೇಳತೊಡಗಿದನು.
ಈ ಊರಿನಲ್ಲಿ ಸುಮಿತ್ರನೆಂಬ ಒಬ್ಬ ಶ್ರೀಮಂತ ವರ್ತಕನಿದ್ದಾನೆ, ಆತನಿಗೆ ಒಬ್ಬಳೇ ಮಗಳಿದ್ದಳು. ಅವಳ ಹೆಸರು ವಸುಕಾಂತೆ ಎಂದು. ಒಂದು ದಿನ ಅವಳಿಗೆ ಒಂದು ಹಾವು ಕಡಿದು, ಅವಳು ಮರಣವನ್ನಪ್ಪಿದಳು. ದುಃಖತಪ್ತನಾದ ಸುಮಿತ್ರ ಅವಳ ಶವವನ್ನು ದಹನ ಮಾಡಲು ಸ್ಮಶಾನಕ್ಕೆ ಕೊಂಡೊಯ್ದನು. ಅಲ್ಲಿಗೆ ಗರುಡನಾಭಿ ಎಂಬ ಒಬ್ಬ ಗಾರುಡಿಗನು ಬಂದನು. ನಿಮ್ಮ ಮಗಳಿಗೆ ಆಯಸ್ಸು ಬರುವಂತೆ ಮಾಡುವೆ. ಆದರೆ ಆಕೆಯನ್ನು ನೀವು ನನಗೆ ಕೊಟ್ಟು ಮದುವೆ ಮಾಡಬೇಕು ಎಂದನು. ಮಗಳು ಪುನಃ ಬದುಕಿದರೆ ಸಾಕೆಂದು ಸುಮಿತ್ರ ಗಾರುಡಿಗನ ಷರತ್ತಿಗೆ ಒಪ್ಪಿಕೊಂಡನು. ಗಾರುಡಿಗ, ಮಾರನೆ ದಿನ ಬೆಳಗ್ಗೆ ತಾನು ಬರುವುದಾಗಿಯೂ, ಕಳೇಬರವನ್ನು ಎಚ್ಚರಿಕೆಯಿಂದ ಕಾಯಬೇಕೆಂದು ಹೇಳಿ ಹೋದನು.
ಸುಮಿತ್ರನು ಹೆಣದ ಕಾವಲಿಗೆ ನಾಲ್ವರು ಭಟರನ್ನು ಗೊತ್ತು ಮಾಡಿದನು, ಒಬ್ಬೊಬ್ಬರಿಗೆ ಒಂದು ಸಾವಿರ ಹೊನ್ನಿನಂತೆ ನಾಲ್ಕು ಕಟ್ಟುಗಳನ್ನು ಅವರ ಮಧ್ಯದಲ್ಲಿಟ್ಟನು. ಮಧ್ಯರಾತ್ರಿಯಾಯಿತು. ಆ ನಾಲ್ವರಲ್ಲಿ ಒಬ್ಬನು, ಇತರ ಮೂವರ ಭಟರನ್ನು ವಂಚಿಸಿ ಒಂದು ಕಟ್ಟನ್ನು ಕದ್ದನು. ಬೆಳಗಾದ ಮೇಲೆ ಒಂದು ಹೊನ್ನಿನ ಕಟ್ಟು ಕಡಮೆ ಇರುವುದು ತಿಳಿಯಿತು. ಸುಮಿತ್ರನು ಆ ನಾಲ್ವರು ಭಟರನ್ನು ತಳವಾರನಿಗೆ ಒಪ್ಪಿಸಿದನು. ಈ ನಾಲ್ಕು ಜನರಲ್ಲಿ ಒಬ್ಬ ಕಳ್ಳನಿದ್ದಾನೆ. ಅವನನ್ನು ಪತ್ತೆ ಮಾಡಿಕೊಡು, ಇಲ್ಲದಿದ್ದರೆ ಆ ಕಳ್ಳನಿಗಾಗುವ ಶಿಕ್ಷೆ ನಿನಗೇ ಆಗುತ್ತದೆ’ – ಎಂದು ಹೇಳಿದನು. ಆ ವೇಳೆಗೆ ಗಾರುಡಿಗ ಒಂದು ಹಾವಿನ ವಿಷ ತೆಗೆದು ವಸುಕಾಂತೆಯನ್ನು ಬದುಕಿಸಿ ಮದುವೆಯಗುವನು.
ಇತ್ತ ಕಡೆ ತಳವಾರನು ಅನೇಕ ರೀತಿಯಿಂದ ಕಳ್ಳನನ್ನು ಪತ್ತೆಮಾಡಲು ಪ್ರಯತ್ನಿಸುತ್ತಾನೆ. ಆದರೆ ಕಳ್ಳನನ್ನು ಕಂಡು ಹಿಡಿಯಲಾಗದೆ ತುಂಬ ದುಃಖಿತನಾಗುತ್ತಾನೆ. ತಳವಾರನಿಗೆ ಸುಮತಿ ಎಂಬ ಮಗಳು ಇರುತ್ತಾಳೆ.
ಅವಳು ತುಂಬ ಜಾಣೆಯಾಗಿರುತ್ತಾಳೆ. ತಂದೆಯ ದುಃಖ ಅವಳಿಗೆ ಅರ್ಥವಾಗುತ್ತದೆ. ತಂದೆಯ ಕಷ್ಟವನ್ನು ಪರಿಹರಿಸಲು ಒಂದು ಉಪಾಯ ಮಾಡುತ್ತಾಳೆ. ನಾನು ಕಳ್ಳನನ್ನು ಉಪಾಯದಿಂದ ಹಿಡಿದುಕೊಡುತ್ತೇನೆ. ಅಪ್ಪ, ಯೋಚಿಸಬೇಡಿ ಎಂದು ಧೈರ್ಯ ಹೇಳುತ್ತಾಳೆ. ಅನಂತರ ಒಬ್ಬೊಬ್ಬ ಭಟರನ್ನು ಪ್ರತ್ಯೇಕವಾಗಿ ಭೇಟಿಮಾಡುತ್ತಾಳೆ. ಅವರನ್ನು ಪ್ರೀತಿಸುವಂತೆ ನಟನೆ ಮಾಡುತ್ತಾಳೆ. ಅನಂತರ ಎಲ್ಲರನ್ನು ಒಟ್ಟಿಗೆ ಸೇರಿಸಿ ಅವರಿಗೆ ಒಂದು ವಿಚಿತ್ರವಾದ ಕಥೆಯನ್ನು ಹೇಳುತ್ತಾಳೆ.
ಒಂದು ಪಟ್ಟಣವಿತ್ತು. ಅದರ ಹೆಸರು ಪಾಟಲಿಪುತ್ರ. ಆ ಪಟ್ಟಣದಲ್ಲಿ ವಸುದತ್ತನೆಂಬ ವರ್ತಕನಿದ್ದನು. ಅವನಿಗೊಬ್ಬ ಮಗಳಿದ್ದಳು. ಅವಳ ಹೆಸರು ಸುಧಾಮೆ. ಒಮ್ಮೆ ಅವಳು ನದಿಯಲ್ಲಿ ಸ್ನಾನ ಮಾಡುತ್ತಿದ್ದಳು. ಆಗ ಒಂದು ಮೊಸಳೆ ಅವಳನ್ನು ಹಿಡಿಯಿತು. ದೂರದಲ್ಲಿದ್ದ ತನ್ನ ಭಾವ ಧನದೇವನನ್ನು ಸಹಾಯಕ್ಕಾಗಿ ಕೂಗಿ ಕರೆದಳು. ಅವನಾದರೋ ನಾದಿನಿ ಎಂಬ ಸಲಿಗೆಯಿಂದ ಮೊಸಳೆಯಿಂದ ನಿನ್ನನ್ನು ಬಿಡಿಸುವೆನು. ಆದರೆ ನಿನ್ನ ಮದುವೆಯ ದಿವಸದ ಅಲಂಕಾರವನ್ನು ನನಗೆ ತೋರಿಸಬೇಕು ಎಂದು ಹೇಳುವನು. ಸುಧಾಮೆ ಒಪ್ಪಿಕೊಳ್ಳಲು ಧನದೇವನು ಅವಳನ್ನು ಮೊಸಳೆಯ ಬಾಯಿಂದ ಬಿಡಿಸುವನು.
ಕೆಲವು ವರುಷಗಳು ಕಳೆದವು. ಸುಧಾಮೆ ಕನ್ಯೆ ಆಗಿದ್ದವಳು ಮದುವೆ ವಯಸ್ಸಿನ ಯೌವನೆಯಾಗಿ ಬೆಳೆದಳು. ಅವಳಿಗೆ ಮದುವೆ ನಿಶ್ಚಯವಾಯಿತು. ಅತ್ಯಂತ ಸುಂದರಿಯಾಗಿದ್ದ ಅವಳು ಮದುವೆಯ ಹಿಂದಿನ ರಾತ್ರಿ ಪಟ್ಟೆ ಪೀತಾಂಬರವನ್ನು ಉಟ್ಟಳು. ಬಂಗಾರ, ಮುತ್ತು, ರತ್ನ, ಹವಳ, ವಜ್ರ, ವೈಢೂರ್ಯಗಳ ಆಭರಣಗಳನ್ನು ತೊಟ್ಟಳು. ಅಲಂಕಾರ ಮುಗಿಯಿತು. ಕೆಲವು ವರುಷಗಳ ಹಿಂದೆ ತನ್ನ ಭಾವನಿಗೆ ಕೊಟ್ಟಿದ್ದ ಮಾತನ್ನು ನೆರವೇರಿಸಲು ಭಾವ ಧನದೇವನ ಮನೆಗೆ ಹೊರಟಳು. ದಾರಿ ಮಧ್ಯದಲ್ಲಿ ಒಬ್ಬ ಬ್ರಹ್ಮರಾಕ್ಷಸ ಅವಳನ್ನು ತಿನ್ನಲು ಬಂದು ಅಡ್ಡಗಟ್ಟಿದನು. ಸುಧಾಮೆ ತಾನು ಎಲ್ಲಿಗೆ, ಏತಕ್ಕಾಗಿ ಹೋಗುತ್ತಿರುವನೆಂಬ ವಿಷಯ ತಿಳಿಸಿದಳು. ಬೇಗನೆ
ಹಿಂತಿರುಗಿ ಬರುವನೆಂದು ಮಾತುಕೊಟ್ಟು ಮುಂದೆ ಹೊರಟಳು. ಸ್ವಲ್ಪ ದೂರ ಹೋದ ನಂತರ ಒಬ್ಬ ಕಳ್ಳ ಎದುರಿಗೆ ಸಿಕ್ಕಿದನು. ಸುಧಾಮೆಯ ಮೈಮೇಲಿದ್ದ ಒಡವೆಗಳ ಆಸೆಯಿಂದ ಅವಳನ್ನು ತಡೆದನು. ಕಳ್ಳನಿಗೂ ಸುಧಾಮೆ ವಿಷಯ ತಿಳಿಸಿ ಹಿಂತಿರುಗಿ ಬರುವುದಾಗಿ ಭಾಷೆಕೊಟ್ಟು ಮುಂದಕ್ಕೆ ಹೋದಳು. ಸ್ವಲ್ಪ ದೂರದಲ್ಲಿ ಭಾವನ ಮನೆ ಕಂಡಿತು. ಅಷ್ಟರಲ್ಲಿ ರಾತ್ರಿ ಹೊತ್ತಿನಲ್ಲಿ ಗಸ್ತು ತಿರುಗುತ್ತಿದ್ದ ತಳವಾರ ಸುಧಾಮೆಯನ್ನು ಕಂಡನು. ಸರಿ ರಾತ್ರಿಯಲ್ಲಿ ಒಂಟಿ ಹೆಣ್ಣನ್ನು ನೋಡಿ ಅವನಿಗೆ ಆಶ್ಚರ್ಯವಾಯಿತು. ಅನುಮಾನದಿಂದ ಅವಳನ್ನು ತಡೆದನು. ಎಲ್ಲಿಗೆ ಏಕೆ ಹೋಗುತ್ತಿರುವುದಾಗಿ ಪ್ರಶ್ನಿಸಿದನು. ಅವನಿಗೂ ಸುಧಾಮೆ ಎಲ್ಲ ವಿಷಯವನ್ನೂ ವಿವರಿಸಿ ಮುಂದಕ್ಕೆ ನಡೆದಳು. ಅವಳ ಹಿಂದೆ ಬ್ರಹ್ಮರಾಕ್ಷಸ, ಕಳ್ಳ, ತಳವಾರ ಅವಳಿಗೆ ತಿಳಿಯದಂತೆ ಹಿಂಬಾಲಿಸಿ ಬಂದರು. ಸುಧಾಮೆಗೆ ಭಾವನ ಮನೆ ಸಿಕ್ಕಿತು. ಭಾವ ಧನದೇವ, ಅವಳು ತನ್ನ ಸತ್ಯದ ಮಾತನ್ನು ಉಳಿಸಿಕೊಂಡದ್ದನ್ನು ಮೆಚ್ಚಿಕೊಂಡನು. ನಡುರಾತ್ರಿಯಲ್ಲಿ ತನ್ನ ಮನೆಗೆ ಬಂದಿದ್ದ ಅವಳಿಗೆ ಮನೆಗೆ ಬೇಗನೆ ಹಿಂತಿರುಗುವಂತೆ ಎಚ್ಚರಿಕೆ ಹೇಳಿ ಕಳುಹಿಸಿದನು. ಹಿಂದಿರುಗಿ ಬಂದ ಸುಧಾಮೆಯನ್ನು ಕಂಡು ಬ್ರಹ್ಮರಾಕ್ಷಸ, ಕಳ್ಳ, ತಳವಾರ ಅವಳ ಸತ್ಯಕ್ಕೆ ಮೆಚ್ಚಿಕೊಳ್ಳುವರು.
ನಿನ್ನಂಥ ಸತ್ಯವತಿಯನ್ನು ನಾನು ತಿಂದು ಯಾವ ನರಕಕ್ಕೆ ಹೋಗಲಿ, ನಿನ್ನನ್ನು ತಿನ್ನುವುದಿಲ್ಲ ಎಂದು ಬ್ರಹ್ಮರಾಕ್ಷಸ ಅವಳನ್ನು ಬಿಟ್ಟನು. ಕಳ್ಳ, ನಿನ್ನಂಥ ಸತ್ಯವಂತೆಯ ಒಡವೆಗಳನ್ನು ನಾನು ಮುಟ್ಟಲಾರೆ, ಕದಿಯಲಾರೆ, ಮನೆಗೆ ಹೋಗು ತಾಯಿ ಎಂದು ನಮಿಸಿದನು. ತಳವಾರನೂ ಸಹ ನೀನು ಸತ್ಯಪಾಲಕಳ ಮತ್ತು ಶೀಲವಂತೆ; ನಡಿಯಮ್ಮ, ನಿನ್ನನ್ನು ನಿನ್ನ ಮನೆಯವರೆಗೂ ಬಿಟ್ಟುಬರುತ್ತೇನೆ ಎಂದು ನುಡಿದನು. ಸುಧಾಮೆಯನ್ನು ಮದುವೆ ಮನೆಗೆ ಜೋಪಾನವಾಗಿ ಕರೆದು ತಂದು ಬಿಟ್ಟು ಹೋದನು.
ಈ ಕಥೆಯನ್ನು ಸುಮತಿ ನಾಲ್ಕು ಜನ ಭಟರಿಗೆ ಹೇಳಿ, ಈ ನಾಲ್ಕು ಜನರಲ್ಲಿ ಯಾರು ಒಳ್ಳೆಯವರು? ಎಂದು ಕೇಳಿದಳು. ಒಬ್ಬ ಭಟ, ಧನದೇವ ಒಳ್ಳೆಯವನು. ಸರಿರಾತ್ರಿಯಲ್ಲಿ ಸುಂದರ ಹೆಣ್ಣು ತನ್ನ ಬಳಿಗೆ ಬಂದರೂ ಅವಳಿಗೆ ಏನೂ ಕೆಡಕು ಮಾಡಲಿಲ್ಲ ಎಂದನು. ಅವಳನ್ನು ತಿನ್ನದೆ ಹಾಗೇ ಬಿಟ್ಟ ಬ್ರಹ್ಮರಾಕ್ಷಸ ಒಳ್ಳೆಯವನು ಎಂದು ಇನ್ನೊಬ್ಬ ಭಟ ಹೇಳಿದನು. ಅವಳನ್ನು ರಾತ್ರಿ ರಕ್ಷಿಸಿದ ತಳವಾರ ಒಳ್ಳೆಯವನು ಎಂದು ಮತ್ತೊಬ್ಬ ಭಟ ಹೇಳಿದನು. ಅಷ್ಟು ಬೆಲೆಬಾಳುವ ಆಭರಣಗಳನ್ನು ಕಳ್ಳತನ ಮಾಡದೇ ಬಿಟ್ಟ ಕಳ್ಳನೇ ತುಂಬ ಒಳ್ಳೆಯವನು ಎಂದು ನಾಲ್ಕನೆಯ ಭಟ ತಿಳಿಸಿದನು.
ಸುಮತಿ ಕಳ್ಳನನ್ನು ಒಳ್ಳೆಯವನೆಂದವನೇ ಕಳ್ಳನೆಂದು ನಿರ್ಧರಿಸಿದಳು. ಇತರ ಮೂವರು ಭಟರನ್ನು ಕಳುಹಿಸಿ ಕಳ್ಳನಾದ ಭಟನನ್ನು ಪ್ರೀತಿಸುವಂತೆ ನಟಿಸಿದಳು. ತನ್ನ ಬಳಿ ಸ್ವಲ್ಪ ಹಣವಿದೆ, ಅದನ್ನು ತೆಗೆದುಕೊಂಡು ಬರುವೆ, ಬೇರೆ ಊರಿಗೆ ಹೋಗಿ, ಮದುವೆ ಮಾಡಿಕೊಂಡು ಸುಖವಾಗಿ ಇರೋಣ ಎಂದು ಒಲಿಸಿ ಮಾತನಾಡಿದಳು. ಕಳ್ಳನೂ ಅವಳ ಮಾತನ್ನು ನಂಬಿ ತಾನು ಕದ್ದಿದ್ದ ಹೊನ್ನಿನ ಕಟ್ಟನ್ನು ಅವಳ ಕೈಗೆ ಕೊಟ್ಟನು. ಸ್ವಲ್ಪ ಹೊತ್ತು ನಿದ್ರಿಸೋಣ, ಮಧ್ಯರಾತ್ರಿ ಕಳೆದ ನಂತರ ಹೊರಡೋಣ ಎಂದು ನಿಶ್ಚಯಿಸಿ ಮಲಗುವರು. ಭಟನಿಗೆ ಚೆನ್ನಾಗಿ ನಿದ್ರೆ ಬರಲು ಸುಮತಿ ಎದ್ದು ಹೋಗಿ ತನ್ನ ತಂದೆಗೆ ತಿಳಿಸುವಳು. ಅವನು ಗಂಟು ಸಮೇತ ಭಟನನ್ನು ಹಿಡಿದು ದೊರೆಗೆ ಒಪ್ಪಿಸಿದನು.
ಕಳ್ಳತನ ಮಾಡಿದುದಕ್ಕಾಗಿ ದೊರೆ ‘ಈ ಕಳ್ಳನನ್ನು ಹಿಂಸಿಸಿ ಕೊಲ್ಲಿರಿ’ ಎಂದು ಆಜ್ಞಾಪಿಸಿದನು. ಅದಕ್ಕೆ ಈ ಕಳ್ಳನನ್ನು ಹೀಗೆ ಕೊಲ್ಲುತ್ತಿದ್ದಾರೆ ಎಂದು ನಾಗಶರ್ಮ ನಾಗಶ್ರೀಗೆ ಹೇಳಿದನು. ಹಾಗಾದರೆ, ನಾನು ಕದಿಯದ ವ್ರತವನ್ನು ಹೇಗೆ ಬಿಡಲಿ ಅಪ್ಪಾಜಿ ಎಂದು ಮುಗ್ಧಳಾಗಿ ನಾಗಶ್ರೀ ಕೇಳಿದಳು. ಆ ವ್ರತ ಇರಲಿ ಮಗಳೇ, ಉಳಿದ ಎರಡು ವ್ರತಗಳನ್ನು ಬಿಡುವೆಯಂತೆ ಬಾ ಎಂದು ಹೇಳಿ ತಂದೆ ಮಗಳು ಮುಂದೆ ಹೊರಟರು.
ಕಮಲಜ್ಜಿ ಹೇಳಿದ ಕಥೆಯೊಳಗಿನ ದೊಡ್ಡ ಕಥೆ ಕೇಳಿ ಮಕ್ಕಳೆಲ್ಲ ಆನಂದತುಂದಿಲರಾದರು. ‘ಸುಮತಿ ಎಷ್ಟು ಜಾಣೆ!’ ಎಂದು ಮಾತನಾಡಿಕೊಂಡು ಮೇಲೆದ್ದರು. ನಾಳೆ ಬರುತ್ತೇವೆ; ಅಜ್ಜಿ, ತುಂಬಾ ಥ್ಯಾಂಕ್ಸ್ ಎಂದರು. ಏ ಧನ್ಯವಾದಗಳು ಎನ್ನಿರಿ. ಒಳ್ಳೆಯ ಕನ್ನಡ ಪದ ಇದೆ. ಅದೇ ಪದ ಬಳಸೋಣ, ನಾವೆಲ್ಲ ಕನ್ನಡಿಗರು ಎಂದು ಅನ್ವಿತಿ ಕನ್ನಡದ ಬಗೆಗೆ ಒಂದು ಪುಟ್ಟ ಭಾಷಣವನ್ನೇ ಮಾಡಿದಳು. ಕನ್ನಡ ಪ್ರೇಮಿ ಕಮಲಜ್ಜಿಯ ಮೊಮ್ಮಗಳಲ್ಲವೇ ಅವಳು!?
( ….ಮುಂದುವರಿಯುವುದು)