ಆ ವೇಳೆಗೆ ಸರಿಯಾಗಿ ಒಂದು ಹಾವು ಅವಳನ್ನು ಕಚ್ಚುವುದು, ಒಡನೆಯೇ ಸಾವಿಗೀಡಾಗುವಳು. ಅವಳ ಜೀವ, ತ್ರಿವೇದಿ ಗರ್ಭ ಪ್ರವೇಶಿಸಿ ನಾಗಶರ್ಮ ದಂಪತಿಗಳಿಗೆ ಮಗಳಾಗಿ ಹುಟ್ಟುವುದು.
ಮಾರನೆಯ ದಿವಸ ಕಥೆ ಮುಂದುವರಿಯಿತು. “ಸೂರ್ಯಮಿತ್ರಾಚಾರ್ಯರದು ಅರ್ಧ ಕಥೆ ಆಯಿತು. ಮುಂದಿನದನ್ನು ಕೇಳಿ” ಎಂದರು ಅಜ್ಜಿ, ಎಲ್ಲರೂ ಕುತೂಹಲಿಗಳಾಗಿ ಕಥೆ ಕೇಳಲು ಸಿದ್ಧರಾಗಿದ್ದರು. ಸೂರ್ಯಮಿತ್ರನು, ಯತಿಗಳು, ಯಾವ ದಿಕ್ಕಿಗೆ ಹೋದರೆಂದು ವಿಚಾರಿಸಿ ತಿಳಿದುಕೊಂಡನು. ಅದೇ ದಿಕ್ಕಿನಲ್ಲಿ ಹೊರಟ ಆತನಿಗೆ ಮುಂದಿನ ಊರಿನ ಹೊರವಲಯದ ಮಾವಿನತೋಪಿನಲ್ಲಿ ಸುಧರ್ಮಾಚಾರ್ಯರನ್ನು ಕಂಡನು. ಅವರಿಗೆ ನಮಿಸಿ, “ನನಗೆ ಹೆಂಡತಿ ಮಕ್ಕಳ ಕುಟುಂಬ ದೊಡ್ಡದು. ತುಂಬ ಕಷ್ಟದಲ್ಲಿದ್ದೇನೆ, ನಿಮಗೆ ತಿಳಿದಿರುವ ಜೋತಿಷ್ಯ ವಿದ್ಯೆಯನ್ನು ದಯಮಾಡಿ ನನಗೆ ಕಲಿಸಿಕೊಡಿ. ಹೇಗಾದರೂ ಬದುಕಿಕೊಳ್ಳುತ್ತೇನೆ” ಎಂದು ಕಪಟ ವಿನಯದಿಂದ ಪ್ರಾರ್ಥಿಸಿದನು. ಆತನ ಮನಸಿನಲ್ಲಿ ಯಾವ ಉದ್ದೇಶವಿದೆ ಎನ್ನುವುದನ್ನು ತಿಳಿದ ಸುಧರ್ಮಾಚಾರ್ಯರು “ಈ ವಿದ್ಯೆ ನಮ್ಮಂಥ ಋಷಿರೂಪದವರಿಗೆ ಅಲ್ಲದೆ ಬೇರೆಯವರಿಗೆ ಬಾರದು” ಎಂದರು.
ಆದರೆ ಸೂರ್ಯಮಿತ್ರನಿಗೆ ವೈದಿಕ ಧರ್ಮ ಬಿಟ್ಟು ಜೈನಧರ್ಮಕ್ಕೆ ಶರಣಾಗಲು ಮನಸ್ಸು ಒಪ್ಪಲಿಲ್ಲ. ಜೈನಯತಿಗಳಂತೆ ಬಟ್ಟೆ ಕಳಚಿ ದಿಗಂಬರನಾಗಲು ಇಷ್ಟವಾಗಲಿಲ್ಲ. ಆದರೆ ಜ್ಯೋತಿಷಶಾಸ್ತ್ರದ ಮೇಲಿನ ಮೋಹ ಅತಿಯಾಗಿತ್ತು. ಮನಸ್ಸು ತೊಯ್ದಾಡತೊಡಗಿತು. ಕಡೆಗೆ ಅತಿ ಆಕಾಂಕ್ಷೆಯಿಂದ ಕಪಟ ದೀಕ್ಷೆ ವಹಿಸಲು ನಿರ್ಧರಿಸಿದನು. “ಇದು ಪರಸ್ಥಳ, ಇಲ್ಲಿ ನನ್ನನ್ನು ಗುರುತಿಸುವವರು ಯಾರೂ ಇಲ್ಲ. ಬಟ್ಟೆ ಕಳಚಿದರೇನು? ತಲೆಯಲ್ಲಿ ಹುಲ್ಲು ಬೆಳೆಯುವುದೇ” ಎಂದು ಚಿಂತಿಸಿದನು. ಮಾಯಾವಿಕೃತಿಯಿಂದ ದೀಕ್ಷೆ ವಹಿಸಿದನು. “ಜ್ಯೋತಿಷವಿದ್ಯೆಯನ್ನು ಕಲಿಸಿ” ಎಂದು ಬೇಡಿದನು. ಸುಧರ್ಮಾಚಾರ್ಯರು “ಜೈನ ಆಗಮಗಳನ್ನು ಕಲಿತಲ್ಲದೆ ಈ ಜ್ಞಾನ ಲಭಿಸದು” ಎಂದು ಹೇಳಿ, ಜೈನ ಆಗಮ, ಸಿದ್ಧಾಂತ, ತರ್ಕ, ಮೀಮಾಂಸೆ ಹೀಗೆ ಎಲ್ಲ ಧರ್ಮಗ್ರಂಥಗಳನ್ನೂ ಕ್ರಮವಾಗಿ ಉಪದೇಶಿಸಿದರು. ವೈದಿಕ ಧರ್ಮದಲ್ಲಿ ಮೊದಲೇ ವಿದ್ವಾಂಸನಾಗಿದ್ದ ಸೂರ್ಯಮಿತ್ರ ಜೈನ ಧರ್ಮದ ಎಲ್ಲ ಗ್ರಂಥಗಳನ್ನು ಶ್ರದ್ಧೆ, ಅಸಕ್ತಿಯಿಂದ ಬಹುಬೇಗನೆ ಓದಿ ಅರ್ಥಮಾಡಿಕೊಂಡನು.
ಇವುಗಳನ್ನು ಓದುತ್ತಾ ಹೋದ ಹಾಗೆ ಸ್ವಲ್ಪ ದಿವಸಗಳಲ್ಲಿಯೇ ಆತನಲ್ಲಿ ಹಿಂದೆ ಮೂಡಿದ್ದ ಕಪಟತ್ವ ಮಾಯವಾಯಿತು. ಮನಸ್ಸು ವಿಶುದ್ಧವಾಯಿತು. ನಿರ್ಮಲ ಮನಸ್ಸಿನಿಂದ ಪುನರ್ದೀಕ್ಷೆ ಪಡೆದನು. ಮುನಿಗಳ ಪಾದಸೇವೆ ಮಾಡುತ್ತಾ ಅವರ ಬಳಿಯೇ ನಿಂತನು. ಹೀಗಿರುವಾಗ ಸೂರ್ಯಮಿತ್ರನಿಗೆ ಅವಧಿ ಜ್ಞಾನವು ಲಭಿಸಿತು. ಅವರು ಈಗ ಸೂರ್ಯಮಿತ್ರ ಮುನೀಂದ್ರರಾದರು.
“ಅವಧಿ ಜ್ಞಾನ ಎಂದರೆ ಏನು ಅಜ್ಜಿ?”
“ಅವಧಿ ಜ್ಞಾನ ಅಂದರೆ ಹಿಂದಿನ, ಇಂದಿನ, ಮುಂದಿನ ಮೂರು ಕಾಲದ ಎಲ್ಲ ವಿಷಯಗಳನ್ನು ತಿಳಿಯುವ ಅಪರೂಪದ ಜ್ಞಾನ. ಆ ಜ್ಞಾನ ಉಂಟಾಯಿತು. ಅವನು ಇಷ್ಟಪಟ್ಟ ಜೋತಿಷ್ಯ ವಿದ್ಯೆಯೂ ಅವನಿಗೆ, ಯಾವಾಗಲೋ ಕರಗತವಾಗಿತ್ತು. ಆದರೆ ಅದೆಲ್ಲ ಎಷ್ಟು ನಶ್ವರ ಎನ್ನುವ ಜ್ಞಾನ ಮೂಡಿತ್ತು, ನಶ್ವರವಾದ ಏನೇನೋ ವಸ್ತುಗಳನ್ನು ಪಡೆಯುವ ಅತಿಯಾಸೆಯಿಂದ ಬಂದಿದ್ದ ಸೂರ್ಯಮಿತ್ರ ಶಾಶ್ವತ ಜ್ಞಾನ ಪಡೆದು ಸುಖಿಯಾಗಿದ್ದನು. ಗುರುಗಳಾದ ಸುಧರ್ಮಾಚಾರ್ಯರ ಜೊತೆಯಲ್ಲಿ ಧರ್ಮಬೋಧನೆ ಮಾಡುತ್ತಾ ಅನೇಕ ದೇಶಗಳನ್ನು ಸುತ್ತಿದನು. ಸುಧರ್ಮಾಚಾರ್ಯರು ಮುಂದಿನ ಕೆಲವು ವರುಷಗಳಲ್ಲಿ ಕೇವಲ ವಿಭೂತಿಯನ್ನು ಹೊಂದಿ ಮೋಕ್ಷ ಪಡೆದರು.
ಸೂರ್ಯಮಿತ್ರ ಮನೀಂದ್ರರು ವಿಹರಿಸುತ್ತಾ ಕೌಶಾಂಬಿಪುರಕ್ಕೆ ಬರುವರು. ಪಾರಣೆಯ ದಿನ ಚರಿಗೆಗೆ ಹೊರಟರು. ದಾರಿಯಲ್ಲಿ ಅಗ್ನಿಭೂತಿಯ ಮನೆಗೆ ಬರುವರು. ತನ್ನ ಗುರುವನ್ನು ಕಂಡು ಸಂತಸಗೊಂಡು ಅಗ್ನಿಭೂತಿ, ಗುರುಗಳನ್ನು ಸತ್ಕರಿಸುವನು. ಅನಂತರ ಅಗ್ನಿಭೂತಿ “ತಮ್ಮ ಕಿರಿಯ ಶಿಷ್ಯ, ನನ್ನ ತಮ್ಮ ವಾಯುಭೂತಿಯನ್ನು ಆಶೀರ್ವದಿಸಿ” ಎಂದು ಪ್ರಾರ್ಥಿಸಿ, ತಮ್ಮನ ಮನೆಗೆ ಕರೆದುಕೊಂಡು ಹೋಗುವನು. ವಿಪ್ರಸಭೆಗೆ ವ್ಯಾಖ್ಯಾನ ಮಾಡುತ್ತಿದ್ದ ವಾಯುಭೂತಿ, ತನ್ನ ಸೋದರಮಾವನೂ ಗುರುವೂ ಆದ ಸೂರ್ಯಮಿತ್ರನ ಬರುವಿಕೆಯನ್ನು ಗಮನಿಸುತ್ತಾನೆ. ಆದರೆ ಅವರಿಗೆ ಗೌರವ ತೋರದೆ ಗರ್ವದಿಂದ ವರ್ತಿಸುತ್ತಾನೆ. ಅಣ್ಣನಿಗೆ ತುಂಬಾ ನಾಚಿಕೆಯಾಗತ್ತದೆ. “ಗುರುಗಳು ನಿನ್ನನ್ನು ಹರಸಲು ಬಂದಿದ್ದಾರೆ. ಆದರೆ ನೀನು ಹೀಗೆ ಉದಾಸೀನನಾಗಿರಬಹುದೇ?” ಎನ್ನುವನು. ಅಗ ವಾಯುಭೂತಿ, ಆ ವಿಪ್ರಸಮೂಹದ ಎದುರಿನಲ್ಲಿಯೇ ಗುರುಗಳಿಗೆ “ನಿಮ್ಮ ಮನೆಯಲ್ಲಿ ಮಹಿಮೆಯಿಂದ ಬಾತುಕೊಂಡ ಕಣ್ಣು ಕಾಣದಂತೆ ಇದ್ದ ಆ ದಿವಸಗಳು ಎಲ್ಲಿ ಹೋದವು? ನೀವ್ಯಾರು? ನಿಮ್ಮನು ನಾವು ಅರಿಯೆವು ಎಂದು ನಟಿಸಿದ್ದು ಮರೆತು ಹೋಯಿತೆ? ಭಿಕ್ಷಾನ್ನವನ್ನು ಕೊಡಲು ಬಂದ ಮಡದಿಯನ್ನು ಹೆದರಿಸಿದ ಅಂದಿನ ಸೊಕ್ಕು ಎಲ್ಲಿ ಹೋಯಿತು? ನಿಮಗೂ ಭಿಕ್ಷೆ ಬೇಡುವ ಗತಿ ಬಂದಿತೇ” ಎಂದು ಹೀಯಾಳಿಸಿ ಸೊಕ್ಕಿನಿಂದ ತಿರಸ್ಕರಿಸುವನು. ಕ್ಷಮೆಯೇ ರೂಪುಗೊಂಡಂತೆ ಕೋಪಿಸದೆ ಸಮಾನಚಿತ್ತರಾಗಿದ್ದ ಸೂರ್ಯಮಿತ್ರ ಮುನಿಗಳು ಅಲ್ಲಿಂದ ಮುಂದೆ ಹೊರಡುತ್ತಾರೆ.
ಅಗ್ನಭೂತಿಗಾದರೊ ತನ್ನ ತಮ್ಮನ ನಡತೆ ಸ್ವಲ್ಪವೂ ಸರಿ ಬರಲಿಲ್ಲ. ತುಂಬಾ ದುಃಖಿತನಾಗಿ ಗುರುವನ್ನೇ ಹಿಂಬಾಲಿಸಿ ನಡೆಯುತ್ತಾನೆ. “ನನ್ನ ದೆಸೆಯಿಂದ ನಿಮಗೆ ಅಪಮಾನವಾಯಿತು, ಇದಕ್ಕೆ ಯಾವ ಪ್ರಾಯಶ್ಚಿತ್ತವಿದೆ? ದಯಮಾಡಿ ನನಗೂ ದೀಕ್ಷೆನೀಡಿ” ಎಂದು ಬೇಡುತ್ತಾನೆ. ಸೂರ್ಯಮಿತ್ರರು ಅಗ್ನಿಭೂತಿಯು ಆಸನ್ನಭವ್ಯನೆಂದು ಅಂದರೆ, ಬೇಗನೇ ಮೋಕ್ಷ ಪಡೆಯವವನು ಎಂದು ತಿಳಿದು, ಒಂದು ಶುಭ ಮುಹೂರ್ತದಲ್ಲಿ ದೀಕ್ಷೆ ಕೊಡುತ್ತಾರೆ. ಮುಂದೆ ಅವರಿಬ್ಬರೂ ಹೊರಟು ದೇಶ ಸುತ್ತುತ್ತಾ ಚಂಪಾನಗರವನ್ನು ಪ್ರವೇಶಿಸಿ ನಾಗಮಂಟಪದಲ್ಲಿರುತ್ತಾರೆ.
“ಆ ನಾಗಮಂಟಪಕ್ಕೆ ಅಲ್ಲವೇ ಅಜ್ಜಿ, ನಾಗಶ್ರೀ ಬರುವುದು, ವ್ರತಗಳನ್ನು ಸ್ವೀಕರಿಸುವುದು” ಎಂದು ಕೇಳುವಳು ಅನ್ವಿತಿ. “ಹೌದು ಮರಿ, ಸರಿಯಾಗಿ ಹೇಳಿದೆ, ಆದರೆ ವಾಯುಭೂತಿ ಸತ್ತು, ನಾಗಶ್ರೀ ಜನ್ಮಕ್ಕೆ ಬರುವ ಮಧ್ಯದಲ್ಲಿ ಇನ್ನೂ ಸ್ವಲ್ಪ ಕಥೆ ಇದೆ” ಎಂದರು ಅಜ್ಜಿ.
“ಹೇಳಿ ಅಜ್ಜಿ ಮತ್ತೆ…..”
“ಹೇಳುತ್ತೇನೆ, ನಾಳೆಗೆ ಕಥೆ ಬೇಕಲ್ಲವೇ? ಇಂದು ಸಾಕು ಹೋಗಿ ಓದಿಕೊಳ್ಳಿ ಎಂದು ಹೇಳಿದರು. ಅಜ್ಜಿ ಕಥೆ ನಿಲ್ಲಿಸಿದ ಮೇಲೆ ಮುಗಿಯಿತು. ಗೋಗರೆದರೂ ಇಲ್ಲ. ಗೋಳಾಡಿದರೂ ಇಲ್ಲ. ತುಂಬಾ ಶಿಸ್ತಿನ ಅಜ್ಜಿ ಅವರು. ಇದನ್ನು ಅರಿತಿದ್ದ ಅನ್ವಿತಿ ಹಾಗೂ ಅವಳ ಗೆಳತಿಯರು ಎದ್ದು ನಡೆದರು.
ಮಾರನೆಯ ದಿವಸ ಕಮಲಜ್ಜಿ ಎಲ್ಲಿಗೋ ಹೋಗಿದ್ದರು. ಬರುವುದು ಸ್ವಲ್ಪ ತಡವಾಯಿತು. ಆ ವೇಳೆಗೆ ಕಥೆ ಕೇಳುವ ವಿದ್ಯಾರ್ಥಿಗಳೆಲ್ಲ ಒಟ್ಟು ಸೇರಿ ಕಾಯುತ್ತಿದ್ದರು. ಅಜ್ಜಿಯನ್ನು ನೋಡಿದ್ದೇ ತಡ, ಎಲ್ಲರೂ ಅವರನ್ನು ಮುತ್ತಿಕೊಂಡರು. ಅಜ್ಜಿಯನ್ನು ಸುಧಾರಿಸಿಕೊಳ್ಳಲೂ ಬಿಡದ ಆತುರ ಅವರಿಗೆ. ಅಜ್ಜಿಯೂ ಅಷ್ಟೇ ಉತ್ಸಾಹದಿಂದ ಕಥೆ ಪ್ರಾರಂಭಿಸಿದರು.
ವಾಯುಭೂತಿ ತನ್ನ ಸೋದರಮಾವನೂ, ಗುರುವೂ ಆದ ಸೂರ್ಯಮಿತ್ರಾಚಾರ್ಯರನ್ನು ಗರ್ವದಿಂದ ಅವಮಾನಿಸಿದ ಏಳು ದಿವಸಗಳಲ್ಲಿ ಕುಷ್ಟರೋಗಪೀಡಿತನಾಗಿ, ಬಡತನದಿಂದ ನವೆದು ಸಾಯುತ್ತಾನೆ. ಅನಂತರ ಹೋತನಾಗಿ, ಪ್ರಾಣಿಜನ್ಮ ಹೊಂದಿ, ಹುಟ್ಟಿ, ಯಾತನೆಯನ್ನು ಅನುಭವಿಸಿ ಸಾಯುತ್ತಾನೆ. ಮತ್ತೆ ಹಂದಿಯಾಗಿ, ಅನಂತರ ನಾಯಿಯಾಗಿ ಜನಿಸುತ್ತಾನೆ. ಕಡೆಗೆ ಚಂಪಾನಗರದಲ್ಲಿ ಕೆಳಜಾತಿ ದಂಪತಿಗಳಿಗೆ ಕುರುಡಿಯಾಗಿ ಹುಟ್ಟುತ್ತಾನೆ.
ನಾಗಮಂಟಪದಲ್ಲಿ ನೆಲೆಸಿದ್ದ ಅಗ್ನಿಭೂತಿ ಚರಿಗೆಗಾಗಿ (ಭಿಕ್ಷೆ) ಹೊರಡುತ್ತಾನೆ. ಮಧ್ಯದಲ್ಲಿ ಹಸಿವಿನಿಂದ ದುಃಖಿತೆಯಾಗಿರುವ ಹುಟ್ಟುಗುರುಡಿ ಮಾತಂಗಿ ಬಾಲಕಿಯನ್ನು ಕಾಣುತ್ತಾನೆ. ಅವಳ ತಲೆಗೂದಲು ಜಡೆಗಟ್ಟಿ ಹೇನು ತುಂಬಿಕೊಂಡಿದೆ. ಮೈಯೆಲ್ಲ ಬಾತುಕೊಂಡು ದುರ್ವಾಸನೆಯಿಂದ ಕೂಡಿದೆ. ನೋಡಲು ಅಸಹ್ಯವಾಗಿದ್ದಳು. ಆ ಹುಡುಗಿ ನೇರಳೆ ಮರದ ಕೆಳಗೆ ಕುಳಿತಿದ್ದಳು. ದಾರಿಯಲ್ಲಿ ಇತರರು ತಿಂದು ಎಸೆದಿದ್ದ ಎಂಜಲಿನ ನೇರಳೆಹಣ್ಣುಗಳನ್ನು ಕೈಯಲ್ಲಿ ತಡವಿ, ತಡವಿ ಆರಿಸಿಕೊಂಡು ತಿನ್ನುತ್ತಿದ್ದಳು. ಇದನ್ನು ಕಂಡು ಅಗ್ನಿಭೂತಿಯ ಮನಸ್ಸು ಕರಗಿತು. ತನ್ನ ಕೈಯಲ್ಲಿದ್ದ ಪಿಂಚದಿಂದ (ಜೈನ ಸಂನ್ಯಾಸಿಗಳ ಕೈಯಲ್ಲಿರುವ ಹಕ್ಕಿಗಳ ರೆಕ್ಕೆಗಳಿಂದ ಮಾಡಿದ ಗೊಂಚಲು) ಅವಳ ಮುಂದಕ್ಕೆ ಹಣ್ಣುಗಳನ್ನು ದೂಡುವನು. ಮಧ್ಯಾಹ್ನ ಕಳೆಯಿತು. ಹೊತ್ತು ಮಿರಿಹೋಯಿತು, ಭಿಕ್ಷೆಯಿಲ್ಲದೆ ಬರಿಗೈಯಲ್ಲಿ ಹಿಂತಿರುಗಿದ ಅಗ್ನಿಭೂತಿ ಮುನಿ. ಗುರು ಸೂರ್ಯಮಿತ್ರರಿಗೂ, ಅಗ್ನಿಭೂತಿ ಆಹಾರವಿಲ್ಲದೆ, ಅವರಿಗೆ ಅಂದು ಉಪವಾಸವೇ ಊಟವಾಯಿತು.
ನಡೆದುದೆಲ್ಲವನ್ನೂ ಸೂರ್ಯಮಿತ್ರಾಚಾರ್ಯರು ತಮ್ಮ ಅವಧಿಜ್ಞಾನದಿಂದ ಅರಿತುಕೊಂಡರು. ಅದೇ ವೇಳೆಗೆ ಅಗ್ನಿಭೂತಿ ಗುರುವಿಗೆ ಕೈಮುಗಿದು “ಗುರುವರ್ಯ, ಚರಿಗೆಗೆ ನಾನು ಹೋಗುತ್ತಿದ್ದಾಗ ನೋವಿಗೀಡಾಗಿದ್ದ ಕುರುಡಿ ಬಾಲಕಿಯನ್ನು ಕಂಡೆ. ನನ್ನ ಅರಿವಿಲ್ಲದೆ ದುಃಖದಿಂದ ಕಣ್ಣೀರು ಹರಿಯಿತು. ಕಾರಣ ತಿಳಿಯದು. ಆ ಮಗುವಿನ ಮೇಲೆ ನನಗೆ ಇಂಥ ವ್ಯಾಮೋಹ, ವಾತ್ಸಲ್ಯ ಏಕೆ ಉಂಟಾಯಿತು? ದಯಮಾಡಿ ತಿಳಿಸಿ ಗುರುವರ್ಯ ಎಂದು ಬೇಡಿದನು.
“ಆ ಹುಡುಗಿ ಹಿಂದೆ ನಿಮ್ಮ ತಮ್ಮನಾಗಿದ್ದ ವಾಯುಭೂತಿ, ಗುರುನಿಂದೆಯು ಪಾಪಫಲದಿಂದ ಅನೇಕ ಪ್ರಾಣಿ ಜನ್ಮಗಳನ್ನೆತ್ತಿ, ಈ ಚಂಪಾನಗರದಲ್ಲಿ ಬಡ ದಂಪತಿಗಳಿಗೆ ಹುಟ್ಟು ಕುರುಡಿಯಾಗಿ ಜನಿಸಿದ್ದಾನೆ. ಆತ ನನ್ನ ನಿಂದೆಯನ್ನಷ್ಟೇ ಮಾಡಲಿಲ್ಲ. ನಿಮ್ಮ ಹೆಂಡತಿ ಸೋಮದತ್ತೆಯನ್ನೂ ಹಿಂಸಿಸಿದನು. ಅಂದು, ನೀವೇನೋ ನಿರ್ವೇಗ ಹೊಂದಿ ದೀಕ್ಷೆ ಪಡೆದು ನನ್ನ ಜೊತೆ ಹೊರಟು ಬಂದಿರಿ. ಆದರೆ ನಿಮ್ಮ ಪತ್ನಿ ಸೋಮದತ್ತೆ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ವಾಯುಭೂತಿಯ ಮನೆಗೆ ಹೋಗಿ “ಮೈದುನಾ, ನೀನು ಹೀಗೆ ನನ್ನ ಪತಿಯನ್ನೂ ತಪೋಧನರಾದ ಆ ಯತಿಗಳನ್ನು ಅವಮಾನಿಸಿದ್ದು ಸರಿಯೇ? ಇದರ ಪಾಪದ ಫಲ ನಿನಗೆ ತಗಲುವುದಿಲ್ಲವೇ? ನಿನ್ನಿಂದ ನನ್ನ ಪತಿ ಸಂಸಾರ ತ್ಯಜಿಸಿ ಸಂನ್ಯಾಸಿಯಾಗಿ ಹೋದನು. ಈಗ ನಾನೇನು ಮಾಡಲಿ” ಎಂದು ರೋದಿಸಿದಳು. “ನಿನ್ನ ಗಂಡನು ಎಲ್ಲಿಗೆ ಹೋದನೋ ಅಲ್ಲಿಗೆ ನೀನು ಹೋಗು, ತೊಲಗಾಚೆ” ಎಂದು ಹೀನಾಯವಾಗಿ ನುಡಿದು ಕಾಲಿನಿಂದ ಒದ್ದು ಅತ್ತಿಗೆ, ಮಕ್ಕಳನ್ನು ಆಚೆಗೆ ನೂಕಿದನು. ವ್ಯಗ್ರಳಾದ ಸೋಮದತ್ತೆ, ತನಗೂ ಮಕ್ಕಳಿಗೂ ಆದ ಅವಮಾನ ಸಹಿಸದೆ “ಎಲೆ ದುಷ್ಟ, ನನ್ನನ್ನು ಅಹಂಕಾರದಿಂದ ಒದ್ದ ನಿನ್ನ ಕಾಲುಗಳನ್ನು ನಾನೂ ನನ್ನ ಮಕ್ಕಳು ನರಿಯಾಗಿಯಾದರೂ ಹುಟ್ಟಿ ತಿನ್ನುತ್ತೇವೆ” ಎಂದು ಹೇಳಿ ಊರು ಬಿಟ್ಟು ಹೊರಟುಹೋದಳು. ಆ ಪತಿವ್ರತೆಯ ಶಾಪ ಅಗ್ನಿಸದೃಶವಾದುದು. ಶಾಪದ ಫಲವೇ, ವಾಯುಭುತಿ ಅನೇಕ ಭವಾವಳಿಗಳಲ್ಲಿ ಸುತ್ತಿ ಈಗ ಮಾತಂಗಿಯಾಗಿ ಹುಟ್ಟಿದ್ದಾನೆ. ಆ ಮಾತಂಗಿಯೇ ನಿನ್ನ ತಮ್ಮನಾಗಿರುವುದರಿಂದ ನಿನಗೆ ಅರಿವಿಲ್ಲದೆ ಅಂಥ ಅಕ್ಕರೆ ಮೂಡಿದೆ” – ಎಂದು ತಿಳಿಸಿದರು.
ಸ್ವಲ್ಪ ಸಮಯದ ನಂತರ ಸೂರ್ಯಮಿತ್ರಚಾರ್ಯರು “ಅಗ್ನಿಭೂತಿ, ಕಾಲ ಮಿಂಚಿಲ್ಲ. ಈಗಲೇ ನೀವು ಹೋಗಿ ಆ ಮಾತಂಗಿಗೆ, ವಾಯುಭೂತಿ ಜನ್ಮದ ಹಾಗೂ ನಂತರದ ಭಾವಾವಳಿಗಳನ್ನು ತಿಳಿಸಿ ಪಂಚ ನಮಸ್ಕಾರಗಳನ್ನು ಉಪದೇಶಿಸಿ ಬನ್ನಿ” ಎಂದು ಹೇಳಿದರು. ಅಗ್ನಿಭೂತಿ ಮರಳಿ ಮಾತಂಗಿ ಕೂಸಿನ ಬಳಿ ಬಂದನು. ಆ ವೇಳೆಗೆ ಮೈಮೇಲಿನ ಗಾಯಗಳಿಂದ ರಕ್ತ ಸುರಿಯುತ್ತಿತ್ತು. ಆ ವಾಸನೆಗೆ ಹಾಯ್ದು ಬಂದ ಕಾಗೆ ಹದ್ದುಗಳು ಕುರುಡಿಯನ್ನು ಕುಕ್ಕಿಕುಕ್ಕಿ ಹಿಂಸಿಸುತ್ತಿದ್ದವು. ನೋವಿನಿಂದ ಚೀರುತ್ತಿದ್ದ ಆ ಬಾಲಕಿಯನ್ನು ಕಂಡು ಹತ್ತಿರಕ್ಕೆ ಅಗ್ನಿಭೂತಿ ಧಾವಿಸಿದನು. ಅಗ್ನಿಭೂತಿ ಸಮೀಪಿಸುತ್ತಿದ್ದಂತಯೇ ಹಕ್ಕಿ ಹದ್ದುಗಳು ದೂರ ಹಾರಿದವು. ಮಾತಂಗಿಯನ್ನು ಸಮಾಧಾನ ಪಡಿಸಿದನು. ಮಾತಂಗಿಯ ಹಿಂದಿನ ಭಾವಗಳನ್ನು ತಿಳಿಸುತ್ತಾ ಬಂದನು. ಮಾತಂಗಿಗೆ ಜ್ಞಾನೋದಯವಾಯಿತು. ಅವಳಿಗೆ ಪಂಚನಮಸ್ಕಾರಗಳನ್ನು ಉಪದೇಶಿಸಿ, “ಮಂತ್ರಗಳನ್ನು ಪಠಿಸುತ್ತಿರು, ಸದ್ಗತಿ ದೊರೆಯುತ್ತದೆ” ಎಂದು ಹೇಳಿ ಅಗ್ನಿಭೂತಿ ತೆರಳಿದನು. ಮಂತ್ರ ಜಪಿಸುತ್ತಿದ್ದ ಮಾತಂಗಿಗೆ ಇದ್ದಕ್ಕಿದ್ದಂತೆ ಮಂಗಳ ವಾದ್ಯಗಳ ನಿನಾದ ಕೇಳಿ ಬಂತು. ಹೂವುಗಳ ಸುಗಂಧ ಮೂಗಿಗೆ ತಟ್ಟಿತು. ಅದೇನೆಂದು ಕೇಳಲು ಒಡನಾಡಿಗಳು “ಈ ಊರಿನ ರಾಜನಾದ ಚಂದ್ರವಾಹನನ ಪುರೋಹಿತ ನಾಗಶರ್ಮನೂ ಅವನ ಪತ್ನಿ ತ್ರಿವೇದಿಯೂ ಮಕ್ಕಳನ್ನು ಪಡೆಯಲು, ನಾಗರಪೂಜೆಗಾಗಿ ಹೋಗುತ್ತಿದ್ದಾರೆ” ಎನ್ನುವರು. ಅದನ್ನು ಕೇಳಿದ ಆ ಕುರುಡಿ ಪಂಚಾಣುವ್ರತಗಳನ್ನು ಸ್ವೀಕರಿಸಿದ್ದಕ್ಕೆ ನಾನು ಅವರಿಗಾದರೂ ಮಗುವಾಗಿ ಹುಟ್ಟಬಾರದೆ? ಎಂದು ಬಯಸಿದಳು. ಆ ವೇಳೆಗೆ ಸರಿಯಾಗಿ ಒಂದು ಹಾವು ಅವಳನ್ನು ಕಚ್ಚುವುದು, ಒಡನೆಯೇ ಸಾವಿಗೀಡಾಗುವಳು. ಅವಳ ಜೀವ, ತ್ರಿವೇದಿ ಗರ್ಭ ಪ್ರವೇಶಿಸಿ ನಾಗಶರ್ಮ ದಂಪತಿಗಳಿಗೆ ಮಗಳಾಗಿ ಹುಟ್ಟುವುದು.
‘ಅವಳೇ ನಾಗಶ್ರೀ ಅಲ್ಲವೇ? ಅಜ್ಜಿ’
“ಹೌದು, ಅವಳೇ ನಾಗಶ್ರೀ! ಮುಂದಿನ ವರುಷಗಳಲ್ಲಿ ಬೆಳೆದು ಪಂಚಾಣುವ್ರತಗಳನ್ನು ಸೂರ್ಯಮಿತ್ರಾಚಾರ್ಯರಿಂದ ಸ್ವೀಕರಿಸುವವಳು. ನಾಗಶ್ರೀಯ ಜನ್ಮದ ಕತೆ ನಿಮಗೆ ತಿಳಿದಿದೆ, ಆಗಲೇ ಹೇಳಿದ್ದೇನೆ ಅಲ್ಲವೇ?”
“ಆಮೇಲೆ ನಾಗಶ್ರೀ ಏನಾಗುತ್ತಾಳೆ ಅಜ್ಜಿ?”
ಇಲ್ಲಿಯವರೆಗೂ ನೀವು ಕೇಳಿದ ಕಥೆಗಳು ನಾಗಶ್ರೀ ಹಾಗೂ ಆಕೆಯ ಹಿಂದಿನ ಜನ್ಮದ ಕಥೆಗಳು. ನಾಳೆಯಿಂದ, ಮುಂದಿನ ಜನ್ಮದ ಕಥೆಯನ್ನು ಕೇಳುವಿರಂತೆ, ಈಗ ಕಥೆ ಸಾಕು ಎಂದರು ಕಮಲಜ್ಜಿ, ಅಂದಿನ ಕಥೆ ಹೇಳುವ-ಕೇಳುವ ಕಾರ್ಯಕ್ರಮ ಮುಗಿದಿತ್ತು.
(ಸಶೇಷ)