ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಫ಼ೆಬ್ರವರಿ 2015 > ಆವಂತೀ ಸುಕುಮಾರ

ಆವಂತೀ ಸುಕುಮಾರ

ವಡ್ಡಾರಾಧನೆಯಲ್ಲಿ ಬರುವ ಸುಕುಮಾರ ಸ್ವಾಮಿಯ ಕಥೆ ಒಂದು ಕಥಾಗೊಂಚಲು; ಕಥೆಯೊಳಗೆ ಕಥೆ, ಆ ಕಥೆಯೊಳಗೆ ಕಥೆ, ಅದರೊಳಗೆ ಇನ್ನೊಂದು ಕಥೆ – ಹೀಗೆ ಅವುಗಳಲ್ಲಿ ಒಂದೊಂದು ಕಥೆಯನ್ನೂ ಬಿಡಿಸುತ್ತಾ ಹೋಗಬಹುದು. ಅಷ್ಟೊಂದು ಕಥೆ, ಉಪಕಥೆಗಳು ಅದರಲ್ಲಿ ನೇಯ್ದುಕೊಂಡಿವೆ. ‘ಉತ್ಥಾನ’ವನ್ನು ಓದುವ, ಮುದ್ದು ಪುಟಾಣಿಗಳಿಗಾಗಿಯೇ ನಾಡಿನ ಹಿರಿಯ ಲೇಖಕಿ, ನಾಡೋಜ ಪ್ರೊಫೆಸರ್ ಕಮಲಾ ಹಂಪನಾ ಅವರು ಈ ಸಂಚಿಕೆಯಿಂದ, ಧಾರಾವಾಹಿಯಾಗಿ, ಸುಕುಮಾರ ಸ್ವಾಮಿಯ ಕಥೆಯನ್ನು ಬರೆಯುತ್ತಾರೆ…..

ಮಧ್ಯಾಹ್ನ ಹನ್ನೆರಡೂವರೆ, ಶಾಲೆಯಿಂದ ಬಂದ ಮೊಮ್ಮಗಳು ಅನ್ವಿತಿಯ ಮೊದಲ ಬೇಡಿಕೆ, ಅಜ್ಜಿ, ಒಂದು ಕಥೆ ಹೇಳಿ ಅಜ್ಜಿ. ಅಜ್ಜಿ ಕಮಲಮ್ಮ ಅವಳಿಗಾಗಿ ಒಂದು ಕಥೆಯನ್ನು ನೆನಪಿಸಿಕೊಂಡು ಹೇಳಲು ಸಿದ್ಧರಾಗಿರಬೇಕು. ಅಪರೂಪದ ಮೊಮ್ಮಗಳ ಆಸೆಯಾದರೂ ಅಜ್ಜಿಗೂ ಅದು ಪ್ರಿಯವೆ! ಕಥೆ ಕೇಳುವುದು ಎಷ್ಟು ಸಂತಸವೋ ಕಥೆ ಹೇಳುವುದು ಅಜ್ಜಿಗೂ ಅಷ್ಟೇ ಪ್ರಿಯ.

ಮೊಮ್ಮಗಳು ಅನ್ವಿತಿಗೆ ಈಗಾಗಲೇ ರಾಮಾಯಣ, ಮಹಾಭಾರತ, ಭಾಗವತ, ಶಿವಪುರಾಣ, ಜಿನಪುರಾಣದ ಕಥೆಗಳು ಮುಗಿದಿದ್ದವು. ಈಸೋಪನ ನೀತಿಕಥೆಗಳ ಪಂಚತಂತ್ರದ ಕಥೆಗಳ ಕಣಜ ಮುಗಿದಿತ್ತು. ಜಾನಪದ ಕಥೆಗಳು ಖಾಲಿಯಾಗಿದ್ದವು. ಇಂದು ಕಮಲಜ್ಜಿ ಮೊಮ್ಮಗಳ ಕಥೆಯ ಬಗೆಯೇ ಯೋಚಿಸುತ್ತಿದ್ದರು. ಹೇಳಿದ ಕಥೆಯನ್ನು ಅಲ್ಪ ಸ್ವಲ್ಪ ತಿರುಗು ಮುರುಗು ಮಾಡಿ ಹೇಳಲು ಪ್ರಾರಂಭಿಸಿದರೆ ಸೂಕ್ಷ್ಮಮತಿಯಾದ ಆ ಮೊಮ್ಮಗಳು ತಕ್ಷಣವೇ ಗುರುತಿಸುತ್ತಿದ್ದಳು. ಹೋಗಿ ಅಜ್ಜಿ, ಈ ಕಥೆ ನನಗೆ ಗೊತ್ತು. ನೀವು ಹಿಂದೇನೇ ಹೇಳಿದ್ದೀರಿ ಎಂದು ಮುಂದಿನ ಕಥೆಯನ್ನು ಅವಳೇ ಹೇಳಿಬಿಡುತ್ತಿದ್ದಳು. ಇಂದು ಕಮಲಜ್ಜಿಯ ಕಥೆಗಳ ನೆನಪಿನ ಬತ್ತಳಿಕೆ ಬರಿದಾಗಿತ್ತು. ಯಾವ ಕಥೆಯೂ ನೆನಪಿಗೆ ಬರುತ್ತಿಲ್ಲ. ಏನು ಮಾಡುವುದು ಎಂದು ಯೋಚಿಸತೊಡಗಿದರು.
ಅಷ್ಟರಲ್ಲಿ ಮೊಮ್ಮಗಳು ಹಾಜರಾದಳು. ಶಾಲೆಯಿಂದ ಬಂದು ಪಾದರಕ್ಷೆ, ಸಮವಸ್ತ್ರ ಕಳಚಿ, ಮನೆಯ ಬಟ್ಟೆ  avanthi kumarತೊಟ್ಟು ಕೈಕಾಲು ಮುಖತೊಳೆದು ಅಡುಗೆ ಮನೆಗೆ ಬಂದಳು. ಆ ವೇಳೆಗೆ ಅಜ್ಜಿ ಊಟಕ್ಕೆ ಸಿದ್ಧ ಮಾಡುತ್ತಿದ್ದರು. ಊಟದ ಮೊದಲ ತುತ್ತಿಗೆ `ಅಜ್ಜಿ…. ಕಥೆ’ ಎಂದಳು. ಕಮಲಜ್ಜಿಗೆ ಇದ್ದಕ್ಕಿದ್ದ ಹಾಗೆ ವಡ್ಡಾರಾಧನೆಯಲ್ಲಿ ಬರುವ ಸುಕುಮಾರ ಸ್ವಾಮಿಯ ಕಥೆ ನೆನಪಾಯಿತು. ತಕ್ಷಣವೇ ಅಜ್ಜಿಗೆ ಒಂದು ಕಥಾಭಂಡಾರವೇ ದೊರೆತಂತಾಯಿತು. ಕಮಲಮ್ಮ ತುಂಬಾ ಉಲ್ಲಸಿತರಾದರು. ಕಾರಣ ಸುಕುಮಾರ ಸ್ವಾಮಿಯ ಕಥೆ, ಅದೊಂದು ಕಥಾ ಗೊಂಚಲು, ಕಥೆಯೊಳಗೆ ಕಥೆ, ಕಥೆಯೊಳಗೆ ಕಥೆ ಅವುಗಳಲ್ಲಿ ಒಂದೊಂದು ಕಥೆಯನ್ನೂ ಬಿಡಿಸಿ ಹೇಳುತ್ತಾ ಹೋಗಬಹುದು. ಒಂದು ತಿಂಗಳಿಗಾಗುವ ಕಥೆ, ಉಪಕಥೆಗಳು ಅದರಲ್ಲಿ ನೇಯ್ದುಕೊಂಡಿವೆ. ಜೊತೆಗೆ ಶಾಂತಿನಾಥನ ಸುಕುಮಾರ ಚರಿತೆಯನ್ನೂ ಸೇರಿಸಿಕೊಂಡರೆ ಮತ್ತೂ ಕೆಲವು ಘಟನೆಗಳು ಕಥೆಯ ರೂಪ ಪಡೆಯುತ್ತವೆ. ಘಟನೆಗಳನ್ನೂ, ಸನ್ನಿವೇಶಗಳನ್ನೂ, ಕಥೆಗಳಾಗಿ ನೇಯುವ ಕಲೆ ಕಮಲಜ್ಜಿಗೆ ಕರಗತವಾಗಿತ್ತು. ಮೊಮ್ಮಗಳ ಪ್ರಶ್ನೆ ಬರುತ್ತಿದ್ದಂತೆಯೇ ಅವಂತೀ ಸುಕುಮಾರನ ಒಂದು ಜನ್ಮದ ನಾಗಶ್ರೀ ಕಥೆಯನ್ನು ಪ್ರಾರಂಭಿಸಿಯೇ ಬಿಟ್ಟರು.
ಅನ್ವಿತಿ ಗಮನ ಇಟ್ಟು ಕೇಳು ಅಜ್ಜಿ ಕಥೆ ಪ್ರಾರಂಭಿಸಿದರು.
ಒಂದು ಊರಿತ್ತು. ಆ ಊರಿನ ಹೆಸರು ಚಂಪಾನಗರ. ಅದನ್ನು ಒಬ್ಬ ರಾಜ ಆಳುತ್ತಿದ್ದನು. ಅವನ ಹೆಸರು ಚಂದ್ರವಾಹನ. ಅವನ ಬಳಿ ನಾಗಶರ್ಮ ಎನ್ನುವ ರಾಜಪುರೋಹಿತನೊಬ್ಬನು ಇದ್ದನು. ನಾಗಶರ್ಮನ ಹೆಂಡತಿಯ ಹೆಸರು ತ್ರಿವೇದಿ. ಆ ದಂಪತಿಗಳಿಗೆ ಬಹಳಕಾಲ ಮಕ್ಕಳಾಗಲಿಲ್ಲ. ಅನೇಕ ದೇವರಿಗೆ ಹರಕೆಹೊತ್ತರು. ವೈದ್ಯರುಗಳಿಂದ ಔಷಧೋಪಚಾರಕ್ಕೆ ಒಳಗಾದರು. ಏನು ಮಾಡಿದರೂ ಅವರಿಗೆ ಮಕ್ಕಳಾಗಲಿಲ್ಲ.
ಕಡೆಗೆ ಒಂದು ದಿವಸ ಅವರ ಮನೆಗೆ ಹಿರಿಯ ಬಂಧುಗಳೊಬ್ಬರು ಬಂದರು. ಊಟೋಪಚಾರದ ನಂತರ ಮಾತುಕತೆ ಆಡುತ್ತಾ ಕುಳಿತರು. ಆಗ ನಾಗಶರ್ಮ ದಂಪತಿಗಳು ತಮಗೆ ಮಕ್ಕಳಿಲ್ಲದ ನೋವನ್ನು ಅವರ ಬಳಿ ತೋಡಿಕೊಂಡರು.
ಆ ಬಂಧುಗಳು ಒಂದು ಕ್ಷಣ ಗಂಭೀರವಾಗಿ ಯೋಚಿಸಿ ಆ ದಂಪತಿಗಳಿಗೆ ಹೀಗೆ ಹೇಳಿದರು: ಈ ಊರ ಹೊರಗೆ ಒಂದು ಮಾವಿನ ತೋಪಿದೆ. ಅಲ್ಲಿ ನಾಗಮಂಟಪವಿದೆ. ನಾಗರಿಗೆ ಪೂಜೆ ಮಾಡಿ, ಭಕ್ತಿಯಿಂದ ಪ್ರಾರ್ಥನೆ ಮಾಡಿ ಎಂದರು. ಮಾರನೆಯ ದಿವಸವೇ ಮಂಗಳವಾದ್ಯಗಳು ಮೊಳಗಿದವು. ಪೂಜಾಸಾಮಗ್ರಿಗಳ ಸಮೇತ ನಾಗಶರ್ಮ ಮತ್ತು ತ್ರಿವೇದಿ ನಾಗಠಾಣಕ್ಕೆ ಹೋದರು. ಭಕ್ತಿಯಿಂದ ಪೂಜಿಸಿದರು. ತಮಗೆ ಒಂದು ಮಗುವನ್ನು ಕರುಣಿಸು ತಂದೆ ಎಂದು ನಾಗದೇವರನ್ನು ಶ್ರದ್ಧೆಯಿಂದ ಪ್ರಾರ್ಥಿಸಿದರು.
ಕೆಲವು ತಿಂಗಳು ಕಳೆದವು. ತ್ರಿವೇದಿ ಗರ್ಭವತಿಯಾದಳು. ದಂಪತಿಗಳಿಗೂ, ಬಂಧುಬಳಗಕ್ಕೂ ಮುದ ಉಂಟಾಯಿತು. ತ್ರಿವೇದಿಗೆ ಒಂಭತ್ತು ತಿಂಗಳು ತುಂಬಿದವು. ಒಂದು ದಿವಸ ಮಂಗಳ ಮುಹೂರ್ತದಲ್ಲಿ ಆಕೆಗೆ ಒಂದು ಹೆಣ್ಣುಮಗುವಿನ ಜನನವಾಯಿತು. ಆ ಮಗು ನಾಗರ ಅನುಗ್ರಹದಿಂದ ಹುಟ್ಟಿತ್ತು. ಆದುದರಿಂದ ಅದಕ್ಕೆ ನಾಗಶ್ರೀ ಎಂದು ನಾಮಕರಣ ಮಾಡಿದರು. ನಾಗಶ್ರೀ ದಿನೇ ದಿನೇ ಶುಕ್ಲ ಪಕ್ಷದ ಚಂದ್ರನಂತೆ ಬೆಳೆದಳು. ಅಂಬೆಗಾಲಿಟ್ಟು ಮನೆ ತುಂಬಾ ಓಡಾಡಿದಳು. ಅನಂತರ ಇನ್ನೂ ಸ್ವಲ್ಪ ಬೆಳೆದು ಪುಟ್ಟಪುಟ್ಟ ಅಡಿ ಇಟ್ಟು ನಡೆದಾಡಿದಳು. ದುಂಡಾದ ಕಾಲುಗಳಿಗೆ ತೊಡಿಸಿದ್ದ ಕಾಲುಗೆಜ್ಜೆಯ ಉಲಿ ಕಿವಿಗಳಿಗೆ ಇಂಪಾಗಿತ್ತು. ತಂದೆ ತಾಯಿಗಳಿಗಂತೂ ಮಗಳ ಲೀಲಾವಿನೋದಗಳನ್ನು ನೋಡುವುದರಲ್ಲಿ ಸಮಯ ಸರಿಯುತ್ತಿದ್ದುದೇ ತಿಳಿಯುತ್ತಿರಲಿಲ್ಲ. ಹೀಗೆ ನಾಗಶ್ರೀ ನೋಡುವವರ ಕಣ್ಣಿಗೆ ಆನಂದದಾಯಿಯಾಗಿ ಬೆಳೆದಳು.
ಅನ್ವಿತಿಯ ಊಟ ಮುಗಿದಿತ್ತು. ಅಜ್ಜಿಯ ಕತೆ ಅಲ್ಲಿಗೆ ನಿಂತಿತು. ಕತೆ ಕೇಳುತ್ತಲೇ ಅನ್ವಿತಿ ಮಧ್ಯಾಹ್ನ ನಿದ್ದೆಗೆ ಸರಿದಿದ್ದಳು. ನಿದ್ದೆ ಮುಗಿಸಿ ಎದ್ದ ಅನ್ವಿತಿ, ಅವಳ ಪಾಠ, ಹೋಂವರ್ಕ್, ಸಂಜೆಯ ಪಾಠ ಮುಗಿಸಿದಳು. ರಾತ್ರಿಯೂ ಮುಗಿಯಿತು. ಮಾರನೆಯ ದಿನ ಎಂದಿನಂತೆ ಕಾರ್ಯಕ್ರಮ ಪ್ರಾರಂಭವಾಯಿತು. ಶಾಲೆ ಮುಗಿದು ಮನೆಗೆ ಬರುತ್ತಿದ್ದಂತೆಯೇ ಅವಳ ಊಟದ ಜತೆಯಲ್ಲಿಯೇ ಅಜ್ಜಿಯ ಕಥೆಯೂ ಪ್ರಾರಂಭವಾಗಬೇಕು. ‘ನಾಗಶ್ರೀ ಕಥೆ’ಯನ್ನು ಮುಂದಕ್ಕೆ ಹೇಳಿ ಅಜ್ಜಿ ಎಂದಳು.
ಎಲ್ಲಿಯವರೆಗೂ ಹೇಳಿದ್ದೆ?
ಅಜ್ಜಿಯ ಪ್ರಶ್ನೆಗೆ ಥಟ್ಟನೆ ಉತ್ತರ ಬಂತು, `ನಾಗಶ್ರೀ ಬೆಳೆದು ದೊಡ್ಡವಳಾದಳು, ಮುಂದಕ್ಕೆ ಹೇಳಿ ಅಜ್ಜಿ.
ನಾಗಶ್ರೀ ತಿದ್ದಿ ತೀಡಿದ ಮುದ್ದುಬೊಂಬೆಯಂತೆ ಚೆಲುವಿನ ಗಣಿಯಾದಳು. ಶ್ರೀಮಂತರ ಮನೆಯ ಹುಡುಗಿ, ಲಾವಣ್ಯವತಿಯಾದ ನಾಗಶ್ರೀಯ ಸೇವೆಗೆ ಚೆಲುವೆಯರಾದ ಹತ್ತಾರು ಜನ ಸೇವಕಿಯರು ಯಾವಾಗಲೂ ಜೊತೆಯಲ್ಲಿ ಇರುತ್ತಿದ್ದರು.
ರಾಜಪುರೋಹಿತರ ಮಗಳು, ರಾಜಕುಮಾರಿಯಂತೆಯೇ ಬೆಳೆದಳು. ಒಂದು ದಿನ ಪಂಚಮಿಯ ಪೂಜೆಗಾಗಿ ನಾಗರಠಾಣಕ್ಕೆ ನಾಗಶ್ರೀ ಹೊರಟಳು. ಅವಳ ಜೊತೆಯಲ್ಲಿ ಮಂತ್ರಿಗಳ, ರಾಜವರ್ತಕರ, ಹೆಗ್ಗಡೆಗಳ ಮನೆಯ ಹೆಣ್ಣುಮಕ್ಕಳು, ಸಖಿಯರೂ ಹೊರಟರು. ನಾಗಪೂಜೆಯನ್ನು ಮುಗಿಸಿಕೊಂಡು ಹಿಂದಿರುಗಬೇಕು, ಅಷ್ಟರಲ್ಲಿ ಹತ್ತಿರದಲ್ಲಿಯೇ ಕುಳಿತಿದ್ದ ಇಬ್ಬರು ಮುನಿಗಳನ್ನು ನಾಗಶ್ರೀ ನೋಡಿದಳು. ಅವರಿಬ್ಬರ ಬಗೆಗೆ ಅವಳಲ್ಲಿ ಭಕ್ತಿಭಾವ ಮೂಡಿ ಬಂದಿತು. ಅವರನ್ನು ಸಮೀಪಿಸಿ ಇಬ್ಬರಿಗೂ ನಮಿಸಿ ಅವರ ಬಳಿ ಕುಳಿತಳು.
ಆ ಇಬ್ಬರೂ ಯತಿಗಳಲ್ಲಿ ಹಿರಿಯ ಯತಿಗಳ ಹೆಸರು ಸೂರ್ಯಮಿತ್ರಚಾರ್ಯರು. ಕಿರಿಯ ಯತಿಗಳ ಹೆಸರು ಅಗ್ನಿಭೂತಿ. ಅಗ್ನಿಭೂತಿ ಯತಿಗಳಿಗೆ, ಅವರು ಯತಿಗಳಾದರೂ ನಾಗಶ್ರೀಯನ್ನು ನೋಡಿದೊಡನೆ ತನ್ನ ಸಮೀಪದ ಬಂಧುವನ್ನು ಕಂಡರೆ ಆಗುವಂತಹ ವಾತ್ಸಲ್ಯ ಮೂಡಿತು. ನಾಗಶ್ರೀಗೂ ತನ್ನ ಹಿಂದಿನ ಜನ್ಮದಲ್ಲಿ ತನ್ನನ್ನು ಉದ್ಧಾರ ಮಾಡಿದ ಮಹಾತ್ಮರು ಇವರೇ ಎಂದು ಗುರುತಿಸುವಂತಾಯಿತು. ಕಾರಣ ಆಕೆಗೆ ಮುನಿಗಳ ಮುಖದರ್ಶನದಿಂದಲೇ ತನ್ನ ಹಿಂದಿನ ಜನ್ಮದ ನೆನಪು ಮೂಡಿತ್ತು.
ಹಿಂದಿನ ಜನ್ಮದಲ್ಲಿ ನಾಗಶ್ರೀ ಏನಾಗಿದ್ದಳು ಅಜ್ಜಿ ಅನ್ವಿತಿ ಮಧ್ಯದಲ್ಲಿಯೇ ಬಾಯಿ ಹಾಕಿದಳು. ಅದನ್ನು ಆಮೇಲೆ ವಿವರವಾಗಿ ಹೇಳುತ್ತೇನೆ. ಈಗ ಈ ಜನ್ಮದ ಕಥೆಯನ್ನು ಮುಂದುವರಿಸುತ್ತೇನೆ,
ಸರಿ ಅಜ್ಜಿ, ಹೇಳಿ ಮುಂದೇನಾಯಿತು?
ಕೇಳು ಎಂದರು ಅಜ್ಜಿ.
ಕಿರಿಯ ಯತಿಗಳು ಸದ್ಗುರುವೆ, ಈ ಕನ್ಯೆಯನ್ನು ನೋಡಿ ನನ್ನ ಮನಸ್ಸು ವಾತ್ಸಲ್ಯದಿಂದ ಮಿಡಿಯುತ್ತಿದೆ. ಕಾರಣ ಏನು? ಎಂದು ಹಿರಿಯ ಯತಿಗಳಾದ ಸೂರ್ಯಮಿತ್ರರನ್ನು ಕೇಳಿದರು. ವತ್ಸ, ಅಗ್ನಿಭೂತಿ, ಈ ನಾಗಶ್ರೀ, ಅನೇಕ ಜನ್ಮಗಳ ಹಿಂದೆ ನಿನ್ನ ತಮ್ಮನಾಗಿದ್ದ ವಾಯುಭೂತಿ. ನಾಗಶ್ರೀಗೆ ತನ್ನ ಹಿಂದಿನ ಜನ್ಮದ ಘಟನೆಗಳೆಲ್ಲಾ ನೆನಪಿಗೆ ಬಂದವು. ಅವಳ ಹೃದಯ ಭಕ್ತಿಯಿಂದ ತುಂಬಿಹೋಯಿತು. ಅವಳಿಗೆ ಈಗ ಧರ್ಮದಾಹ ಉಂಟಾಯಿತು. ಒಡನೆಯೇ ಮುನಿಗಳಿಗೆ ಎರಗಿ ನನಗೆ ಉದ್ಧಾರದ ಒಂದು ವ್ರತವನ್ನು ದಯಪಾಲಿಸಿ ಎಂದು ಬೇಡಿಕೊಂಡಳು. ಆಗ ಸೂರ್ಯಮಿತ್ರಾಚಾರ್ಯರು ‘ಪಂಚಅಣುವ್ರತಗಳು’ ಎಂಬ ವ್ರತವನ್ನು ಉಪದೇಶಿಸಿದರು.
`ಅಣುವ್ರತ’ ಎಂದರೆ ಏನು, ಅಜ್ಜಿ? ಅನ್ವಿತಿಯು ತಕ್ಷಣವೇ ಪ್ರಶ್ನಿಸಿದಳು.
ಅಣುವ್ರತ ಎಂದರೆ ಚಿಕ್ಕ ವ್ರತಗಳು ಎಂದು ಅರ್ಥ. ಅವು ಐದು ಸೇರಿ ಪಂಚಾಣುವ್ರತಗಳು ಆಗುತ್ತವೆ. ಕೊಲ್ಲದ, ಸುಳ್ಳಾಡದ, ಕಳ್ಳತನ ಮಾಡದ, ಪರಸ್ತ್ರೀ ಪರಪುರುಷರನ್ನು ಸೋದರಿ ಸೋದರರಂತೆ ಕಾಣುವ ಬ್ರಹ್ಮಚರ್ಯವ್ರತ, ತನಗಾಗಿ ಹೆಚ್ಚಿನ ವಸ್ತುಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳದ ಅಪರಿಗ್ರಹವ್ರತ ಈ ವ್ರತಗಳನ್ನು ನಾಗಶ್ರೀಗೆ ಉಪದೇಶಿಸಿದರು. ನಾಗಶ್ರೀ ಸಂತೋಷದಿಂದ ವ್ರತಗಳನ್ನು ಸ್ವೀಕರಿಸಿದಳು. ಅನಂತರ ಸೂರ್ಯಮಿತ್ರಾಚಾರ್ಯರು, ನಾಗಶ್ರೀ ನಿನ್ನ ತಂದೆ ಒಂದು ವೇಳೆ ಈ ವ್ರತಗಳನ್ನು ಬಿಟ್ಟುಬಿಡು ಎಂದು ಒತ್ತಾಯಿಸಿದರೆ ನೀನು ನಮ್ಮ ಬಳಿಯೇ ಬಂದು ಇವುಗಳನ್ನು ಬಿಡಬೇಕು. ಒಳ್ಳೆಯದಾಗಲಿ, ಹೋಗಿ ಬಾ ಮಗಳೆ ಎಂದು ಹರಸಿದರು.
ತಡವಾಗಿ ಮನೆಗೆ ಹಿಂದಿರುಗಿದ ಮಗಳನ್ನು ನಾಗಶರ್ಮ ಪ್ರಶ್ನಿಸಿದನು. ಆಗ ನಾಗಶ್ರೀಯ ಗೆಳತಿಯರು, ನಾಗಶ್ರೀ ಜೈನಮುನಿಗಳನ್ನು ಕಂಡಿದ್ದು, ಅವರಿಗೆ ನಮಿಸಿ ಅವರಿಂದ ಪಂಚಾಣುವ್ರತಗಳನ್ನು ಸ್ವೀಕರಿಸಿದ್ದು, ಇದನ್ನೆಲ್ಲಾ ವಿವರಿಸಿದರು. ನಾಗಶರ್ಮನಿಗೆ ತುಂಬಾ ಕೋಪ ಬಂದಿತು.
ನಮ್ಮ ಪವಿತ್ರ ಕುಲವನ್ನು ಬಿಟ್ಟು ಆ ಸವಣ (ಜೈನಸಂನ್ಯಾಸಿ)ನಿಗೆ ನಮಿಸಿ ಅಣುವ್ರತಗಳನ್ನು ಸ್ವೀಕರಿಸಬಹುದೇ? ನಮ್ಮ ಕುಲವನ್ನು ಹಾಳು ಮಾಡಿದೆ. ಆ ವ್ರತಗಳನ್ನು ಆಚರಿಸದೆ ಬಿಟ್ಟುಬಿಡು ಎಂದು ನಾಗಶರ್ಮ ಕೋಪದಿಂದ ನುಡಿದನು. ಆಗ ನಾಗಶ್ರೀ ಆ ವ್ರತಗಳನ್ನು ಬಿಡಲಾರೆ ಅಪ್ಪ. ಹಾಗೆ ಬಿಡಲೇ ಬೇಕಾದರೆ ಮುನಿಗಳ ಬಳಿಗೆ ಹೋಗಿ ಒಪ್ಪಿಸಿ ಬರೋಣ ಎಂದು ತಿಳಿಸಿದಳು. ನಾಗಶರ್ಮ ಅದಕ್ಕೆ ಒಪ್ಪಿ ನಾಗಶ್ರೀ ಜೊತೆ ಮುನಿಗಳು ಇಳಿದುಕೊಂಡಿದ್ದ ನಾಗರಠಾಣಕ್ಕೆ ಹೊರಟರು.
ತಂದೆ ಮಗಳು ಹೋಗುತ್ತಾ ಇದ್ದರು. ಸ್ವಲ್ಪ ದೂರ ಹೋದ ನಂತರ ದಾರಿಯಲ್ಲಿ ಜನರು ಗುಂಪುಗೂಡಿ ಗಲಾಟೆ ಮಾಡುತ್ತಿದ್ದರು. ಆ ಜನರ ಮಧ್ಯದಲ್ಲಿ ಒಬ್ಬನ ಕೈಯನ್ನು ಹಿಂದಕ್ಕೆ ಕಟ್ಟಲಾಗಿತ್ತು. ನಾಗಶ್ರೀ ತಂದೆಯನ್ನು ಇದೇನೆಂದು ಕೆಳಿದಳು. ನಾಗಶರ್ಮನು ಜನರ ಗುಂಪಿನ ಬಳಿಗೆ ಹೋಗಿ ವಿಷಯ ತಿಳಿದುಬಂದನು. ನಾಗಶ್ರೀಗೆ ಆ ಘಟನೆಯನ್ನು ವಿವರಿಸಿದನು. ಕೈಯನ್ನು ಹಿಂದಕ್ಕೆ ಕಟ್ಟಿದೆಯಲ್ಲಾ, ಅವನ ಹೆಸರು ನಯಸೇನ, ಅವನು ಆ ಊರಿನ ಶ್ರೀಮಂತ ವರ್ತಕ ಸುದತ್ತ ಎಂಬುವನ ಮಗ. ನಯಸೇನ ಅಕ್ಷಧೂರ್ತ ಎನ್ನುವ ಅವನ ಗೆಳೆಯರೊಡನೆ ಜೂಜಿನ ಆಟ ಆಡಿದನು. ಲಕ್ಷದ್ರವ್ಯ (ರೂಪಾಯಿ ಹಣ)ವನ್ನು ಸೋತನು. ಅಕ್ಷಧೂರ್ತನು ‘ಹಣವನ್ನು ಕೊಡು ಇಲ್ಲದಿದ್ದರೆ ಇಲ್ಲಿಂದ ಹೋಗಲು ನಿನ್ನನ್ನು ಬಿಡುವುದಿಲ್ಲ’ ಎಂದು ನಯಸೇನನನ್ನು ತಡೆದನು. ಇಬ್ಬರೂ ಹೊಡೆದಾಡಿದರು. ಆಗ ಈ ನಯಸೇನ ಅಕ್ಷಧೂರ್ತನನ್ನು ಕೊಂದುಹಾಕಿದನು. ದೂರು ದೊರೆಗೆ ತಲಪಿತು. ಈಗ ದೊರೆಯ ಆಜ್ಞೆಯಾಗಿದೆ; ಆದ್ದರಿಂದ ಅವನನ್ನು ಕೊಲ್ಲಲು ಕರೆದುಕೊಂಡು ಹೋಗುತ್ತಿದ್ದಾರೆ ಎಂದನು.
ಇದನ್ನು ಕೇಳಿ ನಾಗಶ್ರೀ ಮುನಿಗಳು ಕೊಟ್ಟಿರುವ ಕೊಲ್ಲದ ವ್ರತವನ್ನು ನಾನು ಹಿಂತಿರುಗಿಸಿದರೆ ನಾನು ಪ್ರಾಣಿಗಳನ್ನು ಮನುಷ್ಯರನ್ನು ಕೊಲ್ಲಬಹುದು. ಆಗ ನನಗೂ ಇಂತಹ ಮರಣ ಬರಬಹುದು ಎಂದಳು. `ಕೊಲ್ಲದ ವ್ರತವೊಂದನ್ನು ನೀನು ಇಟ್ಟುಕೋ, ಉಳಿದ ವ್ರತಗಳನ್ನು ಕೊಟ್ಟು ಬರೋಣ ನಡೆ ಎಂದು ಮುಂದಕ್ಕೆ ಹೊರಟರು.
ಸ್ವಲ್ಪ ದೂರ ಹೋದರು. ಅಷ್ಟರಲ್ಲಿ ಜನರ ಮತ್ತೊಂದು ಗುಂಪು ಎದುರಿಗೆ ಕಾಣಿಸಿಕೊಂಡಿತು. ನಾಗಶ್ರೀ ಪುನಃ ತನ್ನ ತಂದೆಯನ್ನು ಆ ಗುಂಪು, ಗದ್ದಲ ಏನೆಂದು ಕೇಳಿದಳು. ನಾಗಶರ್ಮ ವಿವರ ತಿಳಿದು ಬಂದು ಮಗಳಿಗೆ ಹೇಳಿದನು.
ವಜ್ರಾಯುಧ ಎನ್ನುವವನು ವಂಗದೇಶದ ದೊರೆ, ಆತ ಇಲ್ಲಿಯ ರಾಜ ಚಂದ್ರವಾಹನನ ಮೇಲೆ ದಂಡೆತ್ತಿ ಯುದ್ಧಕ್ಕೆ ಬಂದನು. ರಾಜ, ವಜ್ರಾಯುಧನನ್ನು ಸೋಲಿಸಲು ತನ್ನ ಸೇನಾಪತಿಯೊಡನೆ ತನ್ನ ಚತುರಂಗ ಸೈನ್ಯವನ್ನು ಕಳುಹಿಸಿದನು. ಸೈನಿಕರು ಸೇನಾಪತಿಯ ನೇತೃತ್ವದಲ್ಲಿ ವಿರಾವೇಶದಿಂದ ಹೋರಾಡಿದರು. ವಜ್ರಾಯುಧ ಸೋತು ಓಡಿಹೋದನು. ಚಂದ್ರವಾಹನ ದೊರೆಗೆ ಜಯವಾಗಿತ್ತು. ಆದರೆ ತಕ್ಷಕನೆಂಬ ಒಬ್ಬ ಸೇನಾನಿ, ಯುದ್ಧ ಮಾಡಲು ಹೆದರಿ ಓಡಿದ್ದವನು ಹಿಂದಕ್ಕೆ ಓಡಿ ಬಂದನು. ರಾಜ ಚಂದ್ರವಾಹನನ್ನು ಕಂಡು ತಮ್ಮ ಸೈನ್ಯ ಸೋತುಹೋಯಿತೆಂದು ಸುಳ್ಳು ಹೇಳಿದನು. ಅದನ್ನು ಕೇಳಿ ರಾಜನು ದುಃಖದಿಂದ ತಲೆ ತಗ್ಗಿಸಿದನು. ಆದರೆ ಸ್ವಲ್ಪ ಹೊತ್ತಿನಲ್ಲಿಯೇ ಸೇನಾಪತಿ ಹಿಂದಿರುಗಿ ಬಂದನು. ತಮಗೆ ಜಯ ದೊರೆತ ಸುದ್ದಿಯನ್ನು ಸಂತಸದಿಂದ ರಾಜನಿಗೆ ತಿಳಿಸಿದನು. ರಾಜನೂ ಇಮ್ಮಡಿಯಾಗಿ ಆನಂದಗೊಂಡನು.
ಆದರೆ ಮೊದಲು ಬಂದು ಸುಳ್ಳು ಹೇಳಿ ಮನಸ್ಸಿಗೆ ನೋವು ಉಂಟು ಮಾಡಿ ರಾಜ ಚಂದ್ರವಾಹನನ್ನು ಅಪಮಾನದಿಂದ ತಲೆತಗ್ಗಿಸುವಂತೆ ಮಾಡಿದ್ದ ತಕ್ಷಕನನ್ನು ಕರೆಸಿಕೊಂಡನು, ಸುಳ್ಳು ಹೇಳಿದ ಅಪರಾಧಕ್ಕಾಗಿ ಅವನ ತಲೆಯನ್ನು ತೆಗೆಯಿರಿ ಎಂದು ಆಜ್ಞೆ ಮಾಡಿದನು. ಈಗ ಆ ತಕ್ಷಕನ್ನು ಕೊಲ್ಲಲು ಕರೆದುಕೊಂಡು ಹೋಗುತ್ತಿದ್ದಾರೆ ಎಂದನು. ಇದನ್ನು ಕೇಳಿದ ನಾಗಶ್ರೀ ಸುಳ್ಳು ಹೇಳದಿರುವ ವ್ರತವನ್ನು ನಾನು ಸ್ವೀಕರಿಸಿದ್ದೇನೆ. ಈಗ ಏನು ಮಾಡಲಿ’ ಎನ್ನುವಳು. ಅಗ ನಾಗಶರ್ಮ ಆ ವ್ರತವನ್ನು ಇಟ್ಟುಕೊ. ಉಳಿದುದುನ್ನು ಕೊಟ್ಟು ಬರೋಣ, ನಡಿ’ ಎಂದು ಹೇಳಿ ಮುಂದೆ ಹೊರಟರು.
ಕಮಲಜ್ಜಿ ಕಥೆ ನಿಲ್ಲಿಸಿದರು. `ಇಂದು ಕೊಲ್ಲಬಾರದು, ಸುಳ್ಳು ಹೇಳಬಾರದು’ ಈ ಎರಡು ವ್ರತಗಳ ಕಥೆ ಕೇಳಿದೆವು ಅಜ್ಜಿ, ಕತೆಗಳು ತುಂಬಾ ಚೆನ್ನಾಗಿವೆ ಎಂದಳು ಶ್ರೇಯಾ. ಇನ್ನೂ ಹೇಳಿ ಅಜ್ಜಿ ದುಂಬಾಲು ಬಿದ್ದಳು ಅನ್ವಿತಿ. ಆದರೆ ಅಜ್ಜಿ ಮಾತ್ರ ಮುಂದಿನ ಕಥೆಯನ್ನು ಮುಂದಿನ ದಿನಕ್ಕೆ ಮುಂದೂಡಿದರು.

…ಮುಂದುವರಿಯುವುದು

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : utthana1965@gmail.com

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ


vulkan vegas, vulkan casino, vulkan vegas casino, vulkan vegas login, vulkan vegas deutschland, vulkan vegas bonus code, vulkan vegas promo code, vulkan vegas österreich, vulkan vegas erfahrung, vulkan vegas bonus code 50 freispiele, 1win, 1 win, 1win az, 1win giriş, 1win aviator, 1 win az, 1win azerbaycan, 1win yukle, pin up, pinup, pin up casino, pin-up, pinup az, pin-up casino giriş, pin-up casino, pin-up kazino, pin up azerbaycan, pin up az, mostbet, mostbet uz, mostbet skachat, mostbet apk, mostbet uz kirish, mostbet online, mostbet casino, mostbet o'ynash, mostbet uz online, most bet, mostbet, mostbet az, mostbet giriş, mostbet yukle, mostbet indir, mostbet aviator, mostbet casino, mostbet azerbaycan, mostbet yükle, mostbet qeydiyyat