“ಇಲ್ಲಿಗೆ ಸುಕುಮಾರನ ಕಥೆ ಮುಕ್ತಾಯವಾಯಿತು” ಎಂದರು ಅಜ್ಜಿ.
ಸುಕುಮಾರನ ಸುಕಥೆಯ ಕಡೆಯ ದಿವಸಕ್ಕೆ ಅನ್ವಿತಿಯ ಗೆಳತಿಯರ ಸಂಖ್ಯೆ ಇನ್ನೂ ಹೆಚ್ಚಿತ್ತು. ಅಜ್ಜಿ ಹೇಳಿದ ಕಥೆ ಗೆಳತಿಯರ ಬಾಯಿಂದ ಬಾಯಿಗೆ ತಲಪಿತ್ತು. ಅವರೆಲ್ಲರೂ ಕಡೇಘಟ್ಟದ ಕಥೆಯನ್ನು ಅಜ್ಜಿಯ ಬಾಯಿಂದಲೇ ಕೇಳಬೇಕೆಂದು ಬಂದಿದ್ದರು. ಅದಕ್ಕೆ ಸರಿಯಾಗಿ ಅಜ್ಜ್ಜಿ ಅವರೆಲ್ಲರಿಗೂ ವಿಶೇಷವಾಗಿ ಲಡ್ಡು ಮಾಡಿಸಿ ಇಟ್ಟಿದ್ದರು.
ಅವಂತೀ ಸುಕುಮಾರ ಮುಂದೆ ಏನು ಮಾಡಿದ ಅಜ್ಜಿ? ಎಂದು ಅನ್ವಿತಿ ಕೇಳಿದಳು. ಅವಂತಿ? ಸುಕುಮಾರ, ಅವನ ತಾಯಿ ಯಶೋಭದ್ರೆ ಹಾಗೂ ಅವನ ಮೂವತ್ತೆರಡು ಮಂದಿ ಮಡದಿಯರು ಎಲ್ಲರೂ ಸುಖವಾಗಿ ಇದ್ದರು. ಕಾಲ ಹೀಗೆ ಕಳೆಯಿತು. ಒಮ್ಮೆ ಯಶೋಭದ್ರ ಸ್ವಾಮಿಗಳೆಂಬವರು, ಸುಕುಮಾರನ ಮನೆಯ ಸಮೀಪವೇ ಇದ್ದ ಉದ್ಯಾನವನದಲ್ಲಿ ಬಂದು ತಂಗುವರು. ಇದನ್ನು ತಿಳಿದು ಯಶೋಭದ್ರೆ ಚಿಂತಿತಳಾಗಿ ಮುನಿಗಳ ಬಳಿ ಬಂದು ಭಕ್ತಿಗೌರವಗಳಿಂದ ಪೂಜಿಸಿ-ನಮಿಸಿ, “ಭಟರೇ ನೀವು ಇಲ್ಲಿ ನಿಲ್ಲಬೇಡಿ. ನಿಮಗೆ ಊರ ಹೊರಗಿನ ವನದಲ್ಲಿ ಎಲ್ಲ ವ್ಯವಸ್ಥೆ ಮಾಡಿಸುವೆನು. ತಾವು ದಯಮಾಡಿ ಅಲ್ಲಿ ಇರಿ” ಎಂದು ಪ್ರಾರ್ಥಿಸಿದಳು. ಆದರೆ ಚಾರ್ತುಮಾಸದ ಯೋಗದಲ್ಲಿದ್ದ ಮುನಿ ಆ ಸ್ಥಳ ಬಿಟ್ಟು ನಾಲ್ಕು ತಿಂಗಳು ಕದಲಲು ಆಗದು ಎನ್ನುವರು.
ಚಾತುರ್ಮಾಸ ಅಂದರೆ, ಮಳೆಗಾಲದ ನಾಲ್ಕು ತಿಂಗಳಲ್ಲಿ ಋಷಿ-ಮುನಿ, ಆಚಾರ್ಯರುಗಳು ಒಂದೇ ಕಡೆ ನಿಂತು ತಮ್ಮ ಯೋಗಸಾಧನೆ ಮಾಡುವರು. ಮೊನ್ನೆ ನಮ್ಮ ಶ್ರವಣಬೆಳಗೊಳದ ಪೂಜ್ಯ ಚಾರುಕೀರ್ತಿ ಭಟ್ಟಾರಕರು ಯೋಗವನ್ನು ಕೈಗೊಂಡರಲ್ಲ ಹಾಗೆ ಅನ್ವಿತಿಗೆ ಕಮಲಜ್ಜಿ ನೆನಪು ಮಾಡಿದರು. ಇತರ ಮಕ್ಕಳಿಗೂ ಚಾತುರ್ಮಾಸ ಯೋಗವೆಂದರೆ ಅರ್ಥವಾಗಲಿ ಎಂದು ವಿವರಿಸಿದರು.
ಯಶೋಭದ್ರೆಗೆ ಏನು ಮಾಡಲು ತೋಚದಾಯಿತು. ಎಲ್ಲಿ ಮುನಿಗಳ ದರ್ಶನವಾಗಿ ಮಗ ಸುಕುಮಾರ ಸಂನ್ಯಾಸಿಯಾಗಿ ಹೊರಟುಬಿಡುವನೋ ಎನ್ನುವ ಚಿಂತೆ ಅವಳನ್ನು ಕಾಡಿತು. ಬೇರೆ ದಾರಿ ಕಾಣಲಿಲ್ಲ. ಕಡೆಗೆ ಪೂಜ್ಯರೇ, ಈ ನಾಲ್ಕು ತಿಂಗಳುಗಳೂ ತಾವು ಮೌನವಾಗಿ ನಿಮ್ಮ ಯೋಗವನ್ನು ನಡೆಸಿ ಎಂದು ಯಾಚಿಸಿ ಹಿಂತಿರುಗಿದಳು. ಮಗ ಅಪ್ಪಿ-ತಪ್ಪಿ ಉದ್ಯಾನದ ಕಡೆ ನೋಡದಂತೆ, ಮುನಿಗಳ ದರ್ಶನವಾಗದಂತೆ ಸೇವಕರನ್ನು ಕಾವಲಿರಿಸಿ ಕಟ್ಟೆಚ್ಚರವಹಿಸಿದಳು.
ನಾಲ್ಕು ತಿಂಗಳ ವ್ರತ ಮುಗಿಯಿತು. ಮುನಿ ಮೌನ ಮುರಿದು ಬೆಳಗಿನ ಜಾವದಲ್ಲಿ ಧರ್ಮದ ಹಿರಿಮೆಯನ್ನು ಕುರಿತು ಸ್ತೋತ್ರ ಹಾಡಲು ಪ್ರಾರಂಭಿಸಿದರು. ನಿದ್ರೆಯಲ್ಲಿದ್ದ ಸುಕುಮಾರಿನಿಗೆ ಆ ಧ್ವನಿಯನ್ನು ಕೇಳಿ ಎಚ್ಚರವಾಗುವುದು, ಆ ಧರ್ಮೋನ್ನತಿಯ ಸ್ತುತಿಯನ್ನು ಆನಂದದಿಂದ ಕೇಳುವನು. ಹಾಗೆ ಕೇಳುತ್ತಾ, ಕೇಳುತ್ತಾ ಸ್ವಲ್ಪ ಸಮಯದಲ್ಲಿಯೇ ಅವನಿಗೆ ತನ್ನ ಹಿಂದಿನ ಜನ್ಮಗಳ ನೆನಪಾಗುವುದು. ಒಡನೆಯೇ ವೈರಾಗ್ಯ ಉದಿಸಿ ಉದ್ಯಾನವನಕ್ಕೆ ಆಗಮಿಸುವನು. ಮುನಿಗಳಿಗೆ ವಂದಿಸಿ ದೀಕ್ಷೆ ಬೇಡುವನು. ಅವಧಿಜ್ಞಾನದಿಂದ ಇವನ ಪೂರ್ವೋತ್ತರಗಳನ್ನು ಅರಿತ ಮುನಿಗಳು ಹೀಗೆನ್ನುವರು – ನಿನಗೆ ಇನ್ನು ಮೂರು ದಿವಸ ಮಾತ್ರ ಆಯುಸ್ಸಿದೆ, ನಿನ್ನ ಉದ್ಧಾರದ ಮಾರ್ಗವನ್ನು ನೋಡಿಕೋ ಎಂದು ದೀಕ್ಷೆ ಕೊಡುವರು. ತನ್ನ ಭೋಗ ಜೀವನ, ಸುಖ-ಸಂಪತ್ತು, ಸಂಸಾರ – ಎಲ್ಲವನ್ನೂ ಕ್ಷಣಮಾತ್ರದಲ್ಲಿ ಸುಕುಮಾರ ತೊರೆಯುವನು. ಮತ್ತೊಮ್ಮೆ ಧರ್ಮ ಬೋಧನೆಯನ್ನು ಕೇಳಿ ಬೆಳಕು ಹರಿಯಲು ಅಲ್ಲಿಂದ ಹೊರಡುವನು.
ಸುಕುಮಾರನಿಗೆ ಕಲ್ಲು-ಮಣ್ಣಿನ ನೆಲದಲ್ಲಿ ನಡೆದು ಅಭ್ಯಾಸವಿರಲಿಲ್ಲ. ಕಾಲುಗಳಿಂದ ರಕ್ತ ಸೋರಲಾರಂಭಿಸುವುದು. ಆ ದಿವಸವೆಲ್ಲ ಬಹುದೂರ ನಡೆದು ಸಂಜೆ ವೇಳೆಗೆ ತಪಸ್ಸಿಗೆ ಕುಳಿತುಕೊಳ್ಳುವನು. ಅವನ ವಾಯುಭೂತಿಯ ಜನ್ಮದಲ್ಲಿ ಅತ್ತಿಗೆಯಾಗಿದ್ದ ಸೋಮದತ್ತೆ ಹಾಗೂ ಅವಳ ಇಬ್ಬರು ಮಕ್ಕಳು ಹೆಣ್ಣು ನರಿಗಳಾಗಿ ಹುಟ್ಟಿರುತ್ತಾರೆ. ಅವುಗಳು ಆಹಾರ ಹುಡುಕುತ್ತಾ ಬರುತ್ತವೆ. ಸುಕುಮಾರನ ಕಾಲಿನಿಂದ ಸುರಿದ ರಕ್ತದ ವಾಸನೆ ಹಿಡಿದು ಹುಡುಕುತ್ತಾ ಬರುತ್ತವೆ. ನಿಶ್ಚಲವಾಗಿ ತಪಸ್ಸಿಗೆ ಕುಳಿತಿದ್ದವನನ್ನು ಶವವೆಂದು ಭಾವಿಸಿ ಅವನ ಕಾಲುಗಳನ್ನು ತಿನ್ನುತ್ತವೆ. ಜೀವ-ಶರೀರ ಬೇರೆ ಬೇರೆ ಎಂದು ತಿಳಿದಿದ್ದ ಸುಕುಮಾರ ಆ ನೋವನ್ನು ಸಹಿಸಿಕೊಳ್ಳುತ್ತಾನೆ. ತನ್ನ ಅತ್ತಿಗೆಯನ್ನು ಮಕ್ಕಳನ್ನು ವಾಯುಭೂತಿ ಭವದಲ್ಲಿ ತಾನು ಕಾಲುಗಳಿಂದ ಒದ್ದಿದ್ದ ನೆನಪು ಬಂದು ದುಃಖಿಸಿ ಪಶ್ಚಾತ್ತಾಪಗೊಳ್ಳುತ್ತಾನೆ. ತಪಸ್ಸಿನಲ್ಲಿ ಮನವನ್ನು ಕೇಂದ್ರೀಕರಿಸಿ, ಧ್ಯಾನಿಸುತ್ತಾ ಮಾರನೆಯ ದಿವಸ ಮರಣಿಸುವನು. ಮೋಕ್ಷದ ನೆರೆಮನೆಯಾದ ಸರ್ವಾರ್ಥ ಸಿದ್ಧಿಯಲ್ಲಿ ಅಹಮಿಂದ್ರನಾಗಿ ಜನಿಸುವನು. ಇತ್ತ ಕಡೆ ಅರಮನೆಯಲ್ಲಿ ಅಲ್ಲೋಲ-ಕಲ್ಲೋಲವಾಗುತ್ತದೆ. ಎತ್ತ ಹುಡುಕಿದರೂ ಸುಕುಮಾರನ ಸುಳುವಿಲ್ಲ. ಆಳುಗಳೊಡನೆ ಮಗನನ್ನು ಯಶೋಭದ್ರೆ ತಾನೇ ಹುಡುಕುವಳು. ಕಟ್ಟಕಡೆಗೆ ಜೀವವಿಲ್ಲದೆ, ನರಿಗಳಿಂದ ಛಿದ್ರಗೊಂಡಿದ್ದ ಸುಕುಮಾರನ ಶರೀರವನ್ನು ನೋಡುವಳು. ಮೂರ್ಛೆಗೆ ಸಂದ ಅವಳನ್ನು ಉಪಚರಿಸಿ ಎಚ್ಚರಗೊಳಿಸಲಾಗುವುದು. ಬದುಕಿನ ನಶ್ವರತೆಗೆ ಹೇಸಿದ ಯಶೋಭದ್ರೆ ತನ್ನ ಮುವ್ವತ್ತೆರಡು ಜನ ಸೊಸೆಯರಲ್ಲಿ ಗರ್ಭಿಣಿಯರನ್ನು ಹೊರತುಪಡಿಸಿ, ಉಳಿದವರೊಡನೆ ದೀಕ್ಷೆ ಪಡೆಯುವಳು.
ಇಲ್ಲಿಗೆ ಸುಕುಮಾರನ ಕಥೆ ಮುಕ್ತಾಯವಾಯಿತು ಎಂದರು ಅಜ್ಜಿ.
ಒಂದೇ ಒಂದು ಕಥೆಯಲ್ಲಿ, ಅದೆಷ್ಟು ಕಥೆಗಳು ಇದ್ದವು ಅಜ್ಜಿ ಅನ್ವಿತಿ ಬೆರಗುಗಣ್ಣುಗಳಿಂದ ಅಜ್ಜಿಯನ್ನು ನೋಡುತ್ತಾ ಆಶ್ಚರ್ಯಸೂಚಿಸಿದಳು.
ಹೌದು ಅನ್ವಿತಿ, ಜೈನಧರ್ಮದಲ್ಲಿ ಜನ್ಮ-ಜನ್ಮಾಂತರದ ಕಥೆಗಳು ಇರುವುದರಿಂದ ಅವು ಕಥೆಗಳ ಗೊಂಚಲಾಗಿಯೇ ಕಾಣುತ್ತವೆ. ಒಂದು ಅಥವಾ ಹಲವು ಜೀವ ಕರ್ಮಗಳನ್ನು ಕಳೆದುಕೊಂಡು ಮೋಕ್ಷ ಪದವಿಯನ್ನು ಪಡೆಯುವುದು ಜೈನಕಥೆಗಳ ಸಾರಾಂಶ. ಇಲ್ಲಿ ವಾಯುಭೂತಿ, ಸುಕುಮಾರನಾಗಿ ಮೋಕ್ಷದ ಸನಿಹಕ್ಕೆ ಸರಿಯುವವರೆಗೂ ಬಂದ ಕಥೆಗಳ ಸ್ವಾರಸ್ಯ ಮಿಗಿಲಾದುದು ಎಂದರು ಕಮಲಜ್ಜಿ.
ಹೌದು ಅಜ್ಜಿ, ಕಥೆಗಳು ತುಂಬಾ ಚೆನ್ನಾಗಿದ್ದವು. ಪಂಚಾಣುವ್ರತಗಳಂತೂ ನಾವು ದಿನನಿತ್ಯ ಪಾಲಿಸಬೇಕಾದ ನಿಯಮಗಳು ಎಂದರು ಮಕ್ಕಳು. ಅದನ್ನು ಕೇಳಿ ಅಜ್ಜಿಗೂ ಸಂತೋಷವಾಯಿತು. ಮಕ್ಕಳು ಲಡ್ಡು ತಿಂದು ಬಾಯನ್ನು ಸಿಹಿ ಮಾಡಿಕೊಂಡರು. ನಾಳೆ ಯಾವ ಕಥೆ ಪ್ರಾರಂಭಿಸುವಿರಿ ಅಜ್ಜಿ – ಎಂದು ಕೇಳಿದ ಮಕ್ಕಳಿಗೆ ನಾಳೆ ಬನ್ನಿ, ಹೊಸ ಕಥೆ ಕೇಳುವಿರಂತೆ – ಎಂದು ಹೇಳಿ ಮುಗುಳ್ನಕ್ಕರು.
ಅಂದ ಹಾಗೆ, ಈ ಕಮಲಜ್ಜಿ ಸಾಮಾನ್ಯ ಅಜ್ಜಿಯಲ್ಲ! ಮಹಿಳಾ ಕಾಲೇಜ್ನಲ್ಲಿ ದೊಡ್ಡ ಪ್ರಾಧ್ಯಾಪಕರಾಗಿ ನಿವೃತ್ತರಾದವರು. ಬೇಕಾದಷ್ಟು ದೊಡ್ಡ ಗ್ರಂಥಗಳನ್ನು ಓದಿದವರು. ಹೀಗಾಗಿ ಅವರಿಗೆ ಎಲ್ಲ ಕಾಲದ ಕಥೆಗಳೂ ಗೊತ್ತು!
(ಮುಗಿಯಿತು)
Comments are closed.