ತಂಬುಳಿ ಮಾಡಬಹುದಾದದ್ದು ಚಟ್ನಿಗೂ ಆಗುತ್ತದೆ. ಮಾಮೂಲು ಉದ್ದಿನ ದೋಸೆಗೆ ನೀರುಳ್ಳಿ ಬೆಳ್ಳುಳ್ಳಿಗಳ ಚಟ್ನಿ ಮಾಮೂಲಲ್ವೇ… ನಾವೀಗ ಚಿತ್ತುಪುಳಿ ಸಿಪ್ಪೆಯ ಚಟ್ನಿ ತಯಾರಿಸೋಣ….
ಕಿತ್ತಳೆ ಹಣ್ಣು ತಂದಿದ್ದೀರಿ, ತಿಂದಿದ್ದೀರಿ, ಸಿಪ್ಪೆ ಆಚೆ ಎಸೆಯುತ್ತೀರಿ. ಹ್ಞಾಂ! ಅದೊಂದು ಮಾತ್ರ ಮಾಡದಿರಿ. ನಮ್ಮ ಸ್ವಚ್ಛಭಾರತ ಅಭಿಯಾನದಲ್ಲಿ ಹಣ್ಣಿನ ಸಿಪ್ಪೆ ಎಲ್ಲೆಂದರಲ್ಲಿ ಬಿಸಾಡುವಂತಿಲ್ಲ. ಕಿತ್ತಳೆ ಸಿಪ್ಪೆ ಇಟ್ಕೊಳ್ಳಿ. ಕೇವಲ ಎರಡು ಚೂರು ಸಿಪ್ಪೆ ಸಾಕು, ನೀರಿನಲ್ಲಿ ಕುದಿಸಿ ಇಟ್ಕೊಳ್ಳಿ. ಜತೆಗೆ ಕಾಯಿ ತುರಿದಿಟ್ಕೊಳ್ಳಿ.
೨-೩ ಒಣಮೆಣಸು, ೨ ಚಮಚ ಕೊತ್ತಂಬ್ರಿ, ಕಾಳಿನಷ್ಟು ಇಂಗು, ೧ ಚಮಚ ಉದ್ದಿನಬೇಳೆ, ೨ ಚಮಚ ಎಳ್ಳು, ಒಂದೆಸಳು ಕರಿಬೇವು ಎಣ್ಣೆಪಸೆಯಲ್ಲಿ ಹುರಿದಿಟ್ಕೊಳ್ಳಿ. ಕಾಯಿತುರಿಯೊಂದಿಗೆ ಹುರಿದ ಮಸಾಲೆ ಸಾಮಗ್ರಿಗಳನ್ನು ಅರೆಯಿರಿ. ಅರೆಯುವಾಗಲೇ ಹುಣಸೆ ಹಾಕಿಕೊಳ್ಳಿ (ಬೀಂಬುಳಿ ಇದ್ದರೆ ಅದೇ ಆದೀತು). ಹ್ಞಾಂ! ಬೇಯಿಸಿಟ್ಟ ಕಿತ್ತಳೆ ಸಿಪ್ಪೆಯನ್ನೂ ಅರೆಯುವಾಗ ಕೂಡಿಸಿಕೊಳ್ಳಿ. ಅರೆದ ಅರಪ್ಪ(ಮಸಾಲೆ)ನ್ನು ತೆಗೆದಿರಿಸಿ. ಬಾಣಲೆಯಲ್ಲಿ ಒಗ್ಗರಣೆಗಿಟ್ಟಿರಾ? ಸಾಸಿವೆ ಸಿಡಿದಾಗ ಕರಿಬೇವು ಬೀಳಲಿ.
೨ ಹಸಿಮೆಣಸು ಸಿಗಿದು ಹಾಕಿ, ಬಾಡಲಿ.
ಕಿತ್ತಳೆ ಸಿಪ್ಪೆ ಬೇಯಿಸಿದ ನೀರು ಇಟ್ಕೊಂಡಿದ್ದೀರಿ ತಾನೇ? ಒಗ್ಗರಣೆ ಸಹಿತವಾಗಿ ಅರೆದಿಟ್ಟ ಮಸಾಲೆ (ಅರಪ್ಪು) ಕೂಡಿಸಿ. ರುಚಿಯಾಗುವಂತೆ ಬೆಲ್ಲ ಬೆರೆಯಲಿ. ಉಪ್ಪು ಮರೆಯದಿರಿ. ಅನ್ನದೊಂದಿಗೆ ಸವಿಯಿರಿ. “ಈ ಗೊಜ್ಜು ಚೆನ್ನ” ಅಂತ ಹೇಳಿಯೇ ಹೇಳ್ತೀರಾ. ಹೊತ್ತುಹೊತ್ತಿಗೆ ಕುದಿಸಿಟ್ಟುಕೊಂಡಲ್ಲಿ ಮುಗಿಯುವ ತನಕ ಸವಿದೇ ಸವಿಯುತ್ತೀರಾ.
ಹಣ್ಣಿಗಿಂತ ಅಂದರೆ ಕಿತ್ತಳೆ ತೊಳೆಗಿಂತಲೂ ಹೆಚ್ಚು ನಾರು ಹೊಂದಿರುವಂಥ ಕಿತ್ತಳೆ ಸಿಪ್ಪೆಯಲ್ಲಿ ಇರುವ tangeretin ಮತ್ತು nobiletin ರಸ ಪದಾರ್ಥಗಳು ಕ್ಯಾನ್ಸರ್ ವಿರುದ್ಧ ಹೋರಾಡುವ ಪ್ರಬಲ ಶಕ್ತಿಯನ್ನು ಪಡೆದಿವೆ.
ಕಿತ್ತಳೆ ಸಿಪ್ಪೆಯಲ್ಲಿ ಇನ್ನೂ ಏನೇನಿವೆ ನೋಡೋಣ. ಸುಮಾರಾಗಿ ೧೦೦ ಗ್ರಾಂ. ಕಿತ್ತಳೆ ಸಿಪ್ಪೆಯಲ್ಲಿ ನಾರು ಮಾತ್ರವಲ್ಲದೆ ಸಿಟ್ರಸ್ ಎಣ್ಣೆ ಅಲ್ಪ ಪ್ರಮಾಣದಲ್ಲಿರುತ್ತದೆ. ಪ್ರೊಟೀನ್ಯುಕ್ತ ಹಾಗೂ ವಿಟಮಿನ್ ಬಿ, ವಿಟಮಿನ್ ಸಿ ಗಳಿಂದ ಕೂಡಿರುವ ಕಿತ್ತಳೆ ಸಿಪ್ಪೆ ಖನಿಜಾಂಶಗಳಿಂದ ಸಮೃದ್ಧವಾಗಿದೆ.
ಒಂದು ಅಧ್ಯಯನದ ಪ್ರಕಾರ ನಿಯಮಿತವಾಗಿ ಕಿತ್ತಳೆ ಸಿಪ್ಪೆ ತಿನ್ನುವ ಅಭ್ಯಾಸ ಇರುವವರಿಗೆ ಚರ್ಮದ ಯಾ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆ ಇಲ್ಲ. ಕೊಲೆಸ್ಟರಾಲ್ ಮಟ್ಟವನ್ನೂ ಕುಗ್ಗಿಸುವ ಶಕ್ತಿ ಸಿಪ್ಪೆಯಲ್ಲಿದೆ. ಅತಿಯಾದ ದೇಹತೂಕ ಹೊಂದಿರುವವರಿಗೆ ಇಲ್ಲಿ ಸಂತಸ ತರುವ ಸುದ್ದಿ ಇದೆ! ದಿನವೂ ಕಿತ್ತಳೆ ಸಿಪ್ಪೆ ತಿನ್ನಿ, ತೂಕ ಇಳಿಸಿ. ತೂಕ ಇಳಿದು ನಿತ್ರಾಣಿಗಳಾದೇವೆಂಬ ಭಯ ಬೇಡ. ಶರೀರದ ಮೆಟಬಾಲಿಸಮ್, ಅಂದರೆ ಜೀವರಾಸಾಯನಿಕ ಕ್ರಿಯೆಯನ್ನು ಸುವ್ಯವಸ್ಥಿತವಾಗಿರಿಸುವುದಲ್ಲದೆ ಅತಿಯಾದ ಬೊಜ್ಜು ಕರಗಿಯೇ ಹೋಗುವುದು.
ಎಸಿಡಿಟಿಯಿಂದಾಗಿ ಎದೆಉರಿ ಏಳುವುದಿದೆ, ತಂಪುಗುಣ ಹೊಂದಿರುವ ಕಿತ್ತಳೆ ಸಿಪ್ಪೆ ಸಣ್ಣಪುಟ್ಟ ಎಸಿಡಿಟಿ ತೊಂದರೆಗಳ ಪರಿಹಾರಕ. ಪಚನಾಂಗಗಳ ಕಾರ್ಯವೂ ಸುಲಲಿತವಾಗಿರುವುದು, ಅಜೀರ್ಣವ್ಯಾಧಿ ಬಾಧಿಸದು, ಪೆಕ್ಟಿನ್ ಎಂಬ ರಸದ್ರವ್ಯದ ಇರುವಿಕೆಯಿಂದಾಗಿ ಮಲಬದ್ಧತೆಯ ಕಿರಿಕಿರಿಯೂ ಇರದು. ವಿಟಮಿನ್ ಸಿ ಹಾಗೂ ಎ ಅನ್ನಾಂಗಗಳಿಂದ ತುಂಬಿದ ಕಿತ್ತಳೆ ಸಿಪ್ಪೆ ಒಂದು ನೈಸರ್ಗಿಕ ಆಂಟಿಓಕ್ಸಿಡೆಂಟ್ ಆಗಿರುತ್ತದೆ, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಂಥದ್ದು.
ಎಷ್ಟೇ ಹಲ್ಲುಜ್ಜಿದರೂ ಬಾಯಿ ದುರ್ನಾತ ಬೀರುತ್ತಿದೆಯಾದಲ್ಲಿ ಕಿತ್ತಳೆ ಸಿಪ್ಪೆಯನ್ನು ಅಗಿಯಿರಿ. ದುರ್ವಾಸನೆ ತಡೆಗಟ್ಟಿ, ದಂತಕುಳಿಗಳೊಡನೆ ಹೋರಾಡಿ ಗೆಲ್ಲುವುದೀ ಸಿಪ್ಪೆ. ಆದರೆ ದಂತವೈದ್ಯರನ್ನು ಭೇಟಿಯಾಗಲು ಮರೆಯದಿರಿ!
ಆಯ್ತು, ಕಿತ್ತಳೆ ಸಿಪ್ಪೆ ತಿನ್ನೋದು ಹೇಗೆ?
ರಸ್ತೆ ಬದಿಯಲ್ಲಿ ಕಿತ್ತಳೆ ಹಣ್ಣು ಖರೀದಿಸಿದ್ದೀರಾ, ಸಿಪ್ಪೆಯನ್ನು ತೊಳೆಯಲೇಬೇಕು. ನೀರಿನ ಪಸೆ ಆರಿದ ನಂತರ ಚಿಕ್ಕದಾಗಿ ಕತ್ತರಿಸಿ, ನಮ್ಮ ಅಡುಗೆಮನೆಯ ಯಂತ್ರ ಮಿಕ್ಸಿ ಕೂಡಾ ಪುಡಿ ಮಾಡಿ ಕೊಡುತ್ತದೆ. ಡಬ್ಬದಲ್ಲಿ ಇಟ್ಟು ಉಪಯೋಗಿಸುವುದಾದರೆ ಹಪ್ಪಳ ಒಣಗಿದಂತಿರಬೇಕು. ಬಿಸಿಲಿಗಿಟ್ಟು ಒಣಗಿಸಿ, ಬಿಸಿಲಿಲ್ಲವೇ, ಮೈಕ್ರೋವೇವ್ ಅವೆನ್ ಇದೆಯಾ, ಒಣಗಿಸಲಿಕ್ಕೆ ಅದೂ ಆದೀತು. ಶೀತ, ಕೆಮ್ಮು, ಬಾಯಿರುಚಿ ಕೆಟ್ಟಾಗ ಬಿಸಿಬಿಸಿಯಾಗಿ ಚಹಾ ಕುಡೀತೀರಾ, ಮರೆಯದೆ ಕಿತ್ತಳೆ ಸಿಪ್ಪೆ ಹಾಕಿಯೇ ನೀರು ಕುದಿಸಿ, ತಕ್ಷಣದ ಉಪಶಮನ ಪಡೆಯಿರಿ.
ಕೇವಲ ಸಿಪ್ಪೆಯನ್ನು ಹತ್ತು ಹದಿನೈದು ನಿಮಿಷ ಕುದಿಸಿ ಕಷಾಯದಂತೆ ಕುಡಿಯುವುದರಿಂದಲೂ ಜಡತನವನ್ನು ತೊಲಗಿಸಬಹುದು.
ಸಾವಯವ ಪದ್ಧತಿಯಲ್ಲಿ ಬೆಳೆದ ಹಣ್ಣುಗಳನ್ನು ಹುಡುಕಿ ಖರೀದಿಸಬೇಕಾಗಿದೆ. ಕಿತ್ತಳೆಹಣ್ಣು ವಾಣಿಜ್ಯಬೆಳೆ ಆಗಿರುವುದರಿಂದ ಹೆಚ್ಚಿನ ಇಳುವರಿ ಪಡೆಯಲು ಕೃಷಿಕರು ರಸಗೊಬ್ಬರಗಳನ್ನೂ ಕೀಟನಾಶಕಗಳನ್ನೂ ಬಳಸ ದಿರುತ್ತಾರೆಯೇ? ಮಾರುಕಟ್ಟೆಗೆ ಬಂದ ಹಣ್ಣು ಕೆಡದಂತಿರಲು, ತಾಜಾತನ ಉಳಿಸಿಕೊಳ್ಳಲು ಇನ್ನಷ್ಟು ಪ್ರಯೋಗಗಳಿಗೆ ಬಲಿಪಶುವಾಗಿ ಕೊನೆಗೆ ಗ್ರಾಹಕರ ಕೈ ಸೇರುವ ಕಿತ್ತಳೆ, ಸಿಪ್ಪೆ ಹೇಗೆ ತಿನ್ನಲಿ ಎಂದು ಕೇಳಲೆ…
ನಾನು ಕಲೆಹಾಕಿದ್ದ ಕಿತ್ತಳೆ ಸಿಪ್ಪೆಯ ಮಾಹಿತಿಗಳನ್ನು ಯಜಮಾನ್ರು ಓದಿಕೊಂಡಿದ್ರೂಂತ ಕಾಣುತ್ತೆ, ಪೇಟೆಯಿಂದ ಬರುವಾಗ ಚೀಲ ತುಂಬಾ ಚಿತ್ತುಪುಳಿ(ಕಿತ್ತಳೆಯದ್ದೇ ಇನ್ನೊಂದು ತಳಿ)ಹಣ್ಣುಗಳನ್ನು ತಂದಿದ್ದರು. “ಇದರ ಸಿಪ್ಪೆ ಅಡುಗೆ ಮಾಡ್ಬೋದು, ನಮ್ಮ ಊರಿಂದೇ ಹಣ್ಣಲ್ವೇ..”
“ಆದೀತೇನೋ…”
“ಬೆಂಗ್ಳೂರಿಗೆ ಹೋಗಿದ್ವಲ್ಲ, ಮಡಿಕೇರಿ ರಸ್ತೆಯಲ್ಲಿ ರಾಶಿ ರಾಶಿ ಮಾರಾಟ ಆಗ್ತಾ ಇದ್ದಿದ್ದು ನೆನಪಿದ್ಯಾ …”
ಚಿತ್ತುಪುಳಿ ಕಿತ್ತಳೆಯಷ್ಟು ಸಿಹಿ ಇರುವುದಿಲ್ಲ, ತುಸು ಹುಳಿ, ಗಾತ್ರದಲ್ಲೂ ಪುಟ್ಟದು. ಸಿಪ್ಪೆಯಂತೂ ಘಮ ಘಮ. ಅಂತೂ ನಮ್ಮೆಜಮಾನ್ರು ಹೇಳಿದಂತೆ ಚಿತ್ತುಪುಳಿ ಸಿಪ್ಪೆಗಳನ್ನು ಬಿಸಿಲಿಗಿಟ್ಟು ಒಣಗಿಸುವ ತಯಾರಿಯೂ ನಡೆಯಿತು. ಹಿಂದೆ ಮೈಕ್ರೋವೇವ್ ಅವೆನ್ ಇದ್ದಾಗ ಅದರೊಳಗಿಟ್ಟು ಒಣಗಿಸಿದ್ದೂ ನೆನಪಾಯಿತು. ಹಾಗೆ ಒಣಗಿಸಿದ್ದು ಮಾತ್ರವಲ್ಲದೆ ನುಣ್ಣಗೆ ಪುಡಿ ಮಾಡಿ ಇಟ್ಕೊಂಡಿದ್ದೆ. ಜಾಡಿ ತುಂಬ ಇದ್ದ ಕಿತ್ತಳೆ ಪುಡಿಯನ್ನು ನೋಡಿ ನನ್ನಮ್ಮ “ಸ್ವಲ್ಪ ನಂಗೂ ಕೊಟ್ಟಿರು, ಐಸ್ ಕ್ರೀಂ ಮಾಡಲಿಕ್ಕೂ ಆಗ್ತದೆ..” ಅಂದಿದ್ದೂ ನೆನಪಾಯಿತು.
ಈ ದಿನ ಹಸಿ ಸಿಪ್ಪೆಯಿಂದ ತಂಪುಹುಳಿ ಮಾಡೋಣ.
ಒಂದು ಚಿಕ್ಕ ತುಂಡು ಹಸಿ ಸಿಪ್ಪೆಯನ್ನು ಕುದಿಯುವ ನೀರಿನಲ್ಲಿ ಹಾಕಿಟ್ಟಿರಿ. ನಾನ್-ಸ್ಟಿಕ್ ತವಾದಲ್ಲಿ ಹುರಿದುಕೊಂಡರೂ ಆದೀತು. ತುಸು ಹಸಿ ಕಾಯಿತುರಿ, ಸಿಹಿಮಜ್ಜಿಗೆಯೊಂದಿಗೆ ಅರೆಯಿರಿ. ರುಚಿಗೆ ತಕ್ಕಷ್ಟು ಉಪ್ಪು ಕೂಡಿಸಿ. ಸುವಾಸನೆ ಹೊಂದಿರುವ ಈ ತಂಬುಳಿಗೆ ಜೀರಿಗೆ ಇತ್ಯಾದಿ ಹಾಕಬೇಕಾಗಿಲ್ಲ. ನೀರು ಎರೆದು ತೆಳ್ಳಗೆ ಮಾಡಿದರೆ ಉತ್ತಮ. ಊಟದ ಕೊನೆಗೆ ಮಜ್ಜಿಗೆ ನೀರು ಕುಡಿಯುತ್ತೀರಾ? ಹಾಗಿದ್ದರೆ ಮಜ್ಜಿಗೆ ನೀರಿಗೆ ಸಿಪ್ಪೆಯ ಪುಡಿ ಉದುರಿಸಿ, ಕುಡಿಯಿರಿ. ತಂಬುಳಿ ಆಯ್ತಲ್ಲ, ಊಟದ ಸಿದ್ಧತೆ ನಡೆಯಿತು. ತಂಬುಳಿ ಉಣ್ಣಲು ಚೆನ್ನಪ್ಪನೂ ಅಡಿಕೆ ಹಾಳೆಯ ಬಟ್ಟಲು ಮಾಡಿಟ್ಟು ಕೂತಿದ್ದ. ಅನ್ನ ವ್ಯಂಜನಾದಿಗಳನ್ನು ಬಡಿಸುತ್ತ “ಚಿತ್ತುಪುಳಿ ಸಿಪ್ಪೆಗೆ ಔಷಧಿ ಬಿಡ್ತಾರೇನೋ…” ಎಂದು ಅವನನ್ನು ಕೆಣಕಲಾಗಿ “ಎಂಥದು ಅಕ್ಕ ನೀವು ಕೇಳೂದು, ಮದ್ದು ಹಾಕದಿದ್ದರೆ ಈಗ ಯಾವ್ದೂ ಆಗೂದಿಲ್ಲ” ಹೇಳುತ್ತಾ ಚೆನ್ನಪ್ಪನೂ ತಂಬುಳಿಯನ್ನೇ ಸವಿದು ಉಂಡ ಅನ್ನಿ.
ತಂಬುಳಿ ಮಾಡಬಹುದಾದದ್ದು ಚಟ್ನಿಗೂ ಆಗುತ್ತದೆ. ಮಾಮೂಲು ಉದ್ದಿನ ದೋಸೆಗೆ ನೀರುಳ್ಳಿ ಬೆಳ್ಳುಳ್ಳಿಗಳ ಚಟ್ನಿ ಮಾಮೂಲಲ್ವೇ… ನಾವೀಗ ಚಿತ್ತುಪುಳಿ ಸಿಪ್ಪೆಯ ಚಟ್ನಿ ತಯಾರಿಸೋಣ. ಹಸಿಮೆಣಸು, ಕಾಯಿತುರಿ, ಹುರಿದ ಅಥವಾ ಕುದಿನೀರಿನಲ್ಲಿ ನೆನೆದ ಸಿಪ್ಪೆ, ಹುಣಸೇ ಬೀಜದ ಗಾತ್ರದಷ್ಟು ಹುಳಿ, ರುಚಿಗೆ ಉಪ್ಪು ಕೂಡಿಕೊಂಡಲ್ಲಿ ಚಟ್ನಿ ಸಿದ್ಧಪಡಿಸಲು ಎಷ್ಟು ಹೊತ್ತು? ಅದೂ ಕರೆಂಟ್ ಇದ್ದರೆ!
ಇನ್ನಷ್ಟು ಚಿತ್ತುಪುಳಿ ಸಿಪ್ಪೆಗಳು ಚೆನ್ನಾಗಿ ಹುರಿಯಲ್ಪಟ್ಟವು. ಒಂದೆರಡು ಚಮಚ ಕಾಳುಮೆಣಸು ಕೂಡಾ ಹುರಿಯಲಾಯಿತು. ನಾನ್-ಸ್ಟಿಕ್ ತವಾ ಇದೆ, ಇಂಡಕ್ಷನ್ ಒಲೆಯೂ ಇರುವಾಗ ಎಲ್ಲವೂ ಲೀಲಾಜಾಲ. ರುಚಿಗೆ ಉಪ್ಪು ಹುಳಿ ಕೂಡಿಸಿ ನುಣ್ಣಗೆ ಪುಡಿ ಮಾಡಿ ಇಟ್ಟುಕೊಳ್ಳತಕ್ಕದ್ದು. ಜಾಡಿಯಲ್ಲಿ ಈ ಚಟ್ನಿಪುಡಿ ಭದ್ರವಾಗಿಡಿ. “ಹೌದೂ, ಈ ಚಟ್ನಿಪುಡಿ ಯಾಕಾಗಿ?”
ಐಯ್ಯಂಗಾರ್ ಪುಳಿಯೋಗರೆ ಅಂತ ಮಾಡೋದಿದೆಯಲ್ಲ, ಜೊತೆಗೆ ಈ ಪುಡಿಯೂ ಕೂಡಿದಲ್ಲಿ ಪುಳಿಯೋಗರೆಯ ಸುಗಂಧಿತ ಸ್ವಾದ ಮನೆಮಂದಿಯನ್ನು ಅಡುಗೆಮನೆಯೊಳಗೆ ಓಡಿ ಬರುವಂತೆ ಮಾಡೀತು!
ಬೇಕಾದಾಗ ಉಪ್ಪು, ಹುಳಿ, ಬೆಲ್ಲಗಳ ದ್ರಾವಣ ಮಾಡಿ ಈ ಚಟ್ನಿಪುಡಿ ಅಗತ್ಯವಿದ್ದಷ್ಟು ಹಾಕಿ ಗೊಜ್ಜು ಮಾಡಬಹುದು, ಇದೂ ಒಂದುಥರ ಪುಳಿಂಜಿಯ ಹಾಗೇ ಅನ್ನಿ. ಈ ಮೊದಲೇ ಹೇಳಿದಂತೆ ಮಜ್ಜಿಗೆ ನೀರಿಗೆ ಹಾಕಬಹುದಲ್ಲ, ಹೊಸರುಚಿಯ ನೀರುಮಜ್ಜಿಗೆ ಕುಡಿಯಬಹುದಲ್ಲ!
ಇನ್ನಷ್ಟು ವಿಚಾರಗಳನ್ನು ಹಂಚಿಕೊಳ್ಳಲು ಕುಂಬ್ಳೆಯಲ್ಲಿರುವ ತಂಗಿಗೆ ದೂರವಾಣಿ ಕರೆ ಮಾಡಿದೆ.
“ಏನಕ್ಕಾ ಸುದ್ದೀ….?”
“ಕಿತ್ತಳೆ ಸಿಪ್ಪೇದು…..” ರಾಗ ತೆಗೆದೆ.
“ನಾನು ಒಂದ್ಸಾರಿ ಕಿತ್ತಳೆ ಸಿಪ್ಪೆ ಒಳ್ಳೇದೂಂತ ಮುಖಕ್ಕೆ ಉಜ್ಜಿದ್ದೂ, ತುರಿಸಲಿಕ್ಕೇ ಶುರುವಾಯ್ತು… ಹಾಳಾದ್ದು ಅದರ ಸುದ್ದಿ ತೆಗೀಬೇಡ” ಅನ್ನೋದೇ, ನನ್ ಕರ್ಮ….!?