“ತರಕಾರಿ ಏನೂ ಇಲ್ವಲ್ಲ….”
“ಈಗ ಹೇಳಿದ್ರೆ ತರಲು ನನ್ನಿಂದಾಗದು, ಸಂಜೆಗೆ ಲಿಸ್ಟ್ ಕೊಡು….”
“ಹಾಗಾದ್ರೆ ಬೋಳುಸಾರು ಮಾಡಿದ್ರೆ ಸಾಕಾ….?”
“ಅಲ್ಲಿ ಹಿಂದೆ ಇದೆಯಲ್ಲ ಕರಿಕೆಸವು, ಅದರ ದಂಟು ಹಾಕಿ ಪದಾರ್ಥ ಮಾಡು….”
ನನ್ನ ಯಜಮಾನ್ರು ಹೇಳಿದ್ರೂಂತ ನಾನೇನೂ ಕರಿಕೆಸವಿನ ದಂಟಿನ ಪದಾರ್ಥ ಮಾಡುವ ಉಸಾಬರಿಗೇ ಹೋಗಿರಲಿಲ್ಲ.
ಆದರೆ, ಮಳೆಗಾಲದಲ್ಲಿ ಮಾಡುವಂಥ ಈ ಬೋಳುಹುಳಿಯನ್ನು ಇಂದೇ ಮಾಡುವಂತಾಯಿತು.
ಇದ್ದಕ್ಕಿದ್ದಂತೆ ಮಳೆಗಾಲದ ವಾತಾವರಣ ಸೃಷ್ಟಿಯಾಗಿತ್ತು. ಜೋರು ಮಳೆ ಬೇರೆ, ಅಂಗಳದ ಅಡಿಕೆಯೆಲ್ಲ ಒದ್ದೆ ಒದ್ದೆ. ಈದಿನ ತರಕಾರಿ ಇಲ್ಲ ಎಂದು ಹೇಳುವ ಗೋಜಿಗೇ ಹೋಗದೆ ಕೆಸವಿನ ಎರಡು ದಂಟು ಕತ್ತರಿಸಿ ತಂದೆ; ಅಷ್ಟೇ ಸಾಕು.
ಕರಿಕೆಸವು ತುರಿಸದು. ದಂಟಿನ ನಾರು ಬಿಡಿಸಿ, ಕತ್ತರಿಸಿ ಇಟ್ಟಾಯಿತು. ಬೀಂಬುಳಿ ಇರುವ ಸಮಯದಲ್ಲಿ ನನ್ನ ಅಡುಗೆಗೆ ವಾಟೆಹುಳಿ (ಹುಣಸೆ) ಹಾಕಲಿಕ್ಕಿಲ್ಲ. ೨-೩ ಬೀಂಬುಳಿ ಕತ್ತರಿಸಿದ್ದಾಯಿತು. ಖಾರದ ಬಾಬ್ತು ಎರಡು ಹಸಿಮೆಣಸು ಸಿಗಿದದ್ದಾಯಿತು. ರುಚಿಕರವಾಗಲು ಉಪ್ಪು, ಬೆಲ್ಲ ಕೂಡಿಸಿದ್ದೂ ಆಯಿತು. ಕುಕ್ಕರಿನಲ್ಲಿ ಒಂದು ಸೀಟಿ ಹೊಡೆಸಿದ್ದೂ ಆಯಿತು.
ಹ್ಞಾಂ, ಮರೆತಿದ್ದೆ. ಒಂದು ಹಿಡಿ ತೊಗರಿಬೇಳೆಯೂ ಇರಲಿ, ಶರೀರದ ತ್ರಾಣಕ್ಕೆ (ಪುಷ್ಟಿಗೆ) ಒಳ್ಳೆಯದು. ಉಪ್ಪು, ಹುಳಿ ಸೇರಿಸಿದ ತರಕಾರಿಯೊಂದಿಗೆ ತೊಗರಿಬೇಳೆ ಬೇಯುವುದಿಲ್ಲ; ಆದ್ದರಿಂದ ಬೇಳೆಯನ್ನು ಪ್ರತ್ಯೇಕವಾಗಿಯೇ ಬೇಯಿಸಿಕೊಳ್ಳಿ. ಮರೆತೇಹೋಗಿತ್ತು, ಹಲಸಿನಬೇಳೆ ಗಂಟುಕಟ್ಟಿ ಇಟ್ಟುಕೊಂಡದ್ದು ಇತ್ತು. ಅದನ್ನೇ ಬೇಳೆ ಬದಲಿಗೆ ಜಜ್ಜಿ ಹಾಕಬಹುದಾಗಿತ್ತು. ಹೋಗಲಿ, ಇನ್ನೊಮ್ಮೆ ನೆನಪಾದ್ರೆ ಮಾಡಿದರಾಯ್ತು. ನೆನಪಿರಲಿ, ಊಟದೊಂದಿಗೆ ಬೇರೆ ಕೂಟು, ಕರಿಗಳು ಇದ್ದಲ್ಲಿ ಈ ವಿಧವಾದ ಬೋಳುಹುಳಿಗೆ ತೊಗರಿಬೇಳೆಯನ್ನೂ ಹಾಕಬೇಕಾಗಿಲ್ಲ.
ಈಗ ಬೆಂದ ಬೇಳೆ, ಬೆಂದ ಕೆಸವಿನ ದಂಟುಗಳನ್ನು ತಪಲೆಗೆ ಹಾಕಿಕೊಳ್ಳಿ. ಸಾಕಷ್ಟು ನೀರು ಕೂಡಿಸಿ, ಇನ್ನಷ್ಟು ಉಪ್ಪು, ಹುಳಿ, ಬೆಲ್ಲ ಬೆರೆಸಿ ಚೆನ್ನಾಗಿ ಕುದಿಸಿ. ಕೊನೆಯದಾಗಿ ಬೆಳ್ಳುಳ್ಳಿ ಹಾಗೂ ಕರಿಬೇವು ಒಗ್ಗರಣೆ ಕಡ್ಡಾಯ.
Xanthosoma Sagittifolium ಎಂಬ ವೈಜ್ಞಾನಿಕ ನಾಮಧೇಯವನ್ನು ಈ ಕರಿಕೆಸವು ಹೊಂದಿದೆ. ಫಲವತ್ತಾದ ಮಣ್ಣು ದೊರೆತಲ್ಲಿ ಬೃಹದಾಕಾರದ ಎಲೆಗಳಿಂದ ಕಂಗೊಳಿಸುವ ಇದರ ಗೆಡ್ಡೆ ಕೂಡಾ ಖಾದ್ಯಯೋಗ್ಯವಾಗಿರುತ್ತದೆ. ಮುಂಡಿಗೆಡ್ಡೆಯಂತೆಯೇ ಬೃಹತ್ತಾಗಿ ಬೆಳೆದ ಕರಿಕೆಸವು ಹಿಂದೆ ನಮ್ಮ ಅಡಿಕೆ ತೋಟದೊಳಗೆ ಸಾಮಾನ್ಯವಾಗಿ ಕಾಣಸಿಗುತ್ತಿತ್ತು. ಈಗ ಕಾಣಸಿಗದು. ಹಸಿರು ದಂಟಿನ ಕೆಸವಿಗೆ ತುಸು ತುರಿಕೆಯಿದೆ. ತುರಿಕೆಯಿದ್ದರೂ ಅಡುಗೆ ಮಾಡಲಿಕ್ಕೂ ಬರುತ್ತದೆ. ಚೆನ್ನಾಗಿ ಬೇಯಿಸಿ ಹುಳಿ ತುಸು ಜಾಸ್ತಿ ಬಳಸಿದರಾಯಿತು. ಒಂದು ಬಾರಿ ನಾನೂ ಪತ್ರೊಡೆ ಮಾಡಿ, ತಿನ್ನಲು ಹೊರಟಾಗ ತುರಿಕೆಯ ಅನುಭವ ದೊರೆಯಿತು. ದೊಡ್ಡ ಅಟ್ಟಿನಳಗೆಯಲ್ಲಿ ಮನೆಮಂದಿಗೂ, ಕೆಲಸದಾಳುಗಳಿಗೂ ಸಾಕಾಗುವಷ್ಟಿದ್ದ ಪತ್ರೊಡೆ, ಕಲ್ಯಾಣಿ ಹೊತ್ತೊಯ್ದಳು ತನ್ನ ಮನೆಗೆ. ಮಾರನೆಯ ದಿನ ಅವಳನ್ನು ‘ಪತ್ರೊಡೆ ತುರಿಸಲಿಲ್ಲವೇ’ ಎಂದು ವಿಚಾರಿಸದಿರುತ್ತೇನಾ? ಅದಕ್ಕವಳು “ಏನಿಲ್ಲ ಅಕ್ಕ, ನನ್ನ ಸೊಸೆ ಇನ್ನೂ ಹೆಚ್ಚು ಹೂತ್ತು ಬೇಯಿಸಿದ್ದು ಬಿಟ್ಟರೆ ಬೇರೇನೂ ಮಾಡಲಿಲ್ಲ. ನೀವು ಹಾಕಿದ ಮಸಾಲೆ ಅಚ್ಚುಕಟ್ಟಾಗಿತ್ತು. ನಾವೆಲ್ಲ ಹೊಟ್ಟೆ ತುಂಬ ತಿಂದೆವು” ಅಂದಳು!
ಕರಿಕೆಸವನ್ನು ಸಾಮಾನ್ಯವಾಗಿ ಮನೆಯ ಹಿತ್ತಿಲಲ್ಲಿ ನೆಟ್ಟು ಬೆಳೆದು ಉಪಯೋಗಿಸುವುದು ಪದ್ಧತಿ; ಮಾರುಕಟ್ಟೆಯಲ್ಲಿ ಸಿಗಬಹುದಾದರೂ ತಾಜಾತನ ಇರದು. ಖನಿಜಾಂಶಗಳಿಂದ ಸಮೃದ್ಧವಾಗಿರುವ ಕರಿಕೆಸವಿನಲ್ಲಿ ಜಾತಿವೈವಿಧ್ಯಗಳು ಬಹಳಷ್ಟಿವೆ. ತುರಿಕೆ ಇದ್ದರೂ, ಇಲ್ಲದಿದ್ದರೂ ಹುಳಿ ಹಾಕಿಯೇ ಅಡುಗೆಯಲ್ಲಿ ಬಳಸಬೇಕು. ವಿಶೇಷ ಆರೈಕೆಯನ್ನೇನೂ ಇದು ಬಯಸದು. ತಾಜಾ ತರಕಾರಿಯಾಗಿ ಉಪಯೋಗಿಸಬೇಕಿದ್ದರೆ ಮನೆಯ ಹಿಂದೆ ಅಥವಾ ಜಾಗ ಇದ್ದಲ್ಲಿ ನೆಟ್ಟುಕೊಳ್ಳುವುದು ಉತ್ತಮ. ಕೆಸವಿನ ಗೆಡ್ಡೆ ಕೂಡಾ ರುಚಿಕರ ಆಹಾರ ಪದಾರ್ಥವಾಗಿದೆ. ಬಟಾಟೆಯಂತೆ ಬೇಯಿಸಿ, ಸಿಪ್ಪೆ ತೆಗೆದು, ಹುಳಿ ಸಾಕಷ್ಟು ಹಾಕಿ ಬೇಕಾದ ರೀತಿಯಲ್ಲಿ ಅಡುಗೆ ಮಾಡಬಹುದಾಗಿದೆ.