ಅಮ್ಮಾ, ಮಾವಿನಹಣ್ಣು ಆಗಿದೆಯಾ?”
“ಆಗಿದೇ….”
“ಗೇರುಹಣ್ಣು?”
“ಅದೂ ಉಂಟಲ್ಲ….”
“ಹಲಸಿನಹಣ್ಣು….”
“ಅದೂ ಇಲ್ಲಾಂತ ಆಗುವುದುಂಟೇ, ಯಾವಾಗ ಮನೆಗೆ ಬರ್ತೀಯಾ?”
“ಅಮ್ಮಾ, ಇಲ್ಲಿ ಇಪ್ಪತ್ತು ರುಪಾಯಿ ಕೊಟ್ಟು ಹಲಸಿನಹಣ್ಣು ತಿಂದೆ ಗೊತ್ತಾ, ಸಿಹಿಯಾಗಿ ಇತ್ತು.”
“ಹೌದಾ, ಹಂಗಿದ್ರೆ ಬೆಂಗಳೂರಲ್ಲೂ ಹಲಸಿನಹಣ್ಣು ಬೇಕಾದ ಹಾಗೆ ಸಿಗುತ್ತೇ….”
“ಅಯ್ಯೋ, ಅದು ಮನೆಯ ಹಣ್ಣು ಅಲ್ವಲ್ಲ…. ನಾನು ಮುಂದಿನ ವಾರ ಬರ್ತೇನೇ…” ಅಂದ ಮಧು.
“ಅಣ್ಣ ಬರ್ತಾನಂತೆ ಮುಂದಿನವಾರ, ನೀನೂ ಬರುತ್ತೀಯಾ ಹೇಗೆ?” ಮಗಳ ಬಳಿ ಕೇಳದಿದ್ದರಾದೀತೇ. ಅವಳೂ ವಾರಕ್ಕೊಮ್ಮೆ ಹೇಗೂ ಬರುವುದಿದೆ, ಈ ಬಾರಿ ಖಂಡಿತವಾಗಿಯೂ ಬರುತ್ತಾಳೆ. ಮಕ್ಕಳ ಆಗಮನಕ್ಕೆ ಸಿದ್ಧತೆಯೂ ಆಗಬೇಡವೇ?
“ಅವನು ಬಂದು ಹಣ್ಣಿನ ಎರಡು ಸೊಳೆ ತಿಂದು, ಸಾಕು ಅನ್ನಲಿಕ್ಕುಂಟು. ನೀನು ಯಾಕೆ ಕುಣಿತಿಯಾ….” ನಮ್ಮೆಜಮಾನ್ರು ಹಂಗಿಸದೆ ಬಿಡಲಿಲ್ಲ.
ಏನೇ ಆಗ್ಲೀ, ಹಲಸಿನಕಾಯಿ ಕೊಯ್ದು ಇಡಬೇಕಲ್ಲ. ಕೆಲಸದ ಆಳು ಚೆನ್ನಪ್ಪ ಕೊಯ್ದು ಇಟ್ಟ. ತರುವಾಗಲೇ ಹಣ್ಣಾಗಿತ್ತು. ಒಂದಲ್ಲ, ಎರಡಲ್ಲ, ನಾಲ್ಕು ಹಣ್ಣುಗಳು ಬಂದವು. ಮಕ್ಕಳು ಬರುವುದು ಮುಂದಿನವಾರಕ್ಕೆ, ಈ ಹಣ್ಣುಗಳನ್ನು ಏನು ಮಾಡುವುದೆಂದು ತೋಚದೇ ಕುಳಿತಿದ್ದಂತೆ ಒಂದು ಹಣ್ಣನ್ನು ನಾವಿಬ್ಬರು ತಿಂದು ಮುಗಿಸಿದೆವು; ನಾವೂ ತಿನ್ಬೇಕಲ್ಲ, ಅದೂ ವರ್ಷದ ಮೊದಲ ಫಲ. ಚೆನ್ನಪ್ಪ ಮುಂದೆ ನಾಲ್ಕೈದು ದಿನ ಬರಲೂ ಇಲ್ಲ. ನಮ್ಮ ಕಣ್ಣು ತಪ್ಪಿಸಿ ಒಳ ಬಂದ ದನ ಒಂದು ಹಣ್ಣನ್ನು ಎಳೆದು ಎಳೆದು ಹೇಗೋ ತಿಂದಿತು. ಇಂತಹ ಘನ ಹಣ್ಣುಗಳನ್ನು ಮನೆಯ ಒಳಗೆ ಇಟ್ಟುಕೊಳ್ಳಲಿಕ್ಕಿಲ್ಲ, ಹೊರಾಂಗಣದಲ್ಲೇ ಇದ್ದುದರಿಂದ ಈ ಅನಾಹುತವಾಯಿತು.
ಮಾರನೇ ದಿನ ಶ್ಯಾಮ ಅದ್ಯಾಕೋ ಬಂದ, ಮನೆಯಲ್ಲೇನೋ ಪೂಜೆ, ಬನ್ನೀಂತ ಆಮಂತ್ರಣ ಕೊಡಲಿಕ್ಕೆ. ಹಲಸಿನಹಣ್ಣಿನ ಕಮ್ಮನೆ ಅವನ ಮೂಗಿಗೂ ಬಡಿಯಿತು.
“ಚಿಕ್ಕಮ್ಮಾ, ಹಲಸಿನಹಣ್ಣು ಉಂಟಾ….”
“ಹೂಂ, ಬೇಕಿದ್ರೆ ತೆಗೆದುಕೊಂಡು ಹೋಗು, ಕೆಂಪು ಕೆಂಪು ಸೊಳೆ, ಭಾರೀ ಸಿಹಿ…. ಕೊಟ್ಟಿಗೆ ಮಾಡಿ ತಿನ್ನು” ಅಂತೂ ಹಲಸಿನಹಣ್ಣುಗಳು ಮುಗಿದವು.
ಶುಕ್ರವಾರ ಬೆಳಗ್ಗೆಯೇ ಮಗನ ಕರೆ ಬಂದಿತು. “ಹಲಸಿನಹಣ್ಣು ಉಂಟಲ್ಲ….”
ಇಲ್ಲಾ….. ಅನ್ನುವುದಕ್ಕಾಗುತ್ತದೆಯೇ, “ಇದೆ….”
ಚೆನ್ನಪ್ಪನ ಪತ್ತೆಯಿಲ್ಲ. ನಮ್ಮವರೇ ಮರದ ಬುಡಕ್ಕೆ ಹೋಗಿ ಎರಡು ಹಣ್ಣುಗಳನ್ನು ತಂದಿಟ್ಟರು. “ಒಳಗೇ ಇಡೋಣ, ದನಗಿನ ಬಂದೀತು….” ಒಂದು ಗೋಣೀತಾಟಿನ ಮೇಲೆ ಹಲಸಿನಹಣ್ಣುಗಳು ಜೋಪಾನವಾಗಿ ಬಿದ್ದುಕೊಂಡವು.
ರಾತ್ರಿ ಗಂಟೆ ಹತ್ತೂವರೆ ಆಗ್ಬೇಕಾದ್ರೇ “ಅಮ್ಮಾ, ಬಸ್ಸು ಹತ್ತಿ ಆಯ್ತು” ಅಂದ ಮಧು.
“ಸರಿ, ಹಲಸಿನಹಣ್ಣು ಕೊಯ್ದು ಇಟ್ಟಾಗಿದೆ” ಅಂದೆ.
ಬೆಳಗ್ಗೆ ಕಾಫಿ ಹೊತ್ತಿಗೆ ಮನೆ ತಲಪಿದ ಮಗನನ್ನು “ಮೊದಲು ಸ್ನಾನ ಮಾಡ್ಕೋ ಹೋಗು, ಮತ್ತೆ ನಿನ್ನ ಫೇವರಿಟ್ ಸಜ್ಜಿಗೆ-ಅವಲಕ್ಕಿ ತಿನ್ನುವಿಯಂತೆ” ಅನ್ನುತ್ತಾ ತಿಂಡಿಯ ಸಿದ್ಧತೆ. ತಿಂಡಿ ಮುಗಿಸಿ, ರಾತ್ರಿಪ್ರಯಾಣದ ಆಯಾಸ ಪರಿಹಾರಕ್ಕಾಗಿ ಮಲಗಿ ಎದ್ದ ಮಧು, ಚಹಾ ಕುಡಿಯುವ ವೇಳೆಗೆ ಅಪ್ಪ-ಮಗ ಸೇರಿ ಹಲಸಿನಹಣ್ಣು ಬಿಡಿಸುವ ಸಾಹಸದಲ್ಲಿ, ಅರ್ಥಾತ್ `ಹಲಸಿನ ಹಣ್ಣಿನ ಕಾಳಗ’ದಲ್ಲಿ ಮಗ್ನರಾದರು. “ಈ ಹಣ್ಣು ಎಲ್ಲಿಗೂ ಸಾಲದು, ನಾನು ಕೊಟ್ಟಿಗೆ ತಿನ್ಬೇಕು, ಬೆಂಗಳೂರಿಗೂ ಆಗ್ಬೇಕು, ಫ್ರೆಂಡ್ಸ್ ಕಾಯ್ತಿರ್ತಾರೆ ತಿನ್ನಲಿಕ್ಕೆ….” ತಗಾದೆ ಶುರುವಾಗ್ಬಿಟ್ಟಿತು. ಹಾಗಿದ್ದರೆ ಕಳಂದೂರು ಮನೆಗೆ (ನಮ್ಮ ನೆರೆಮನೆ) ಹೋಗಿ ಹಲಸಿನಹಣ್ಣು ತರುವುದೆಂದು ತೀರ್ಮಾನಕ್ಕೆ ಬಂದ ಅಪ್ಪ-ಮಗ ಬೈಕ್ ಹತ್ತಿ ಹೊರಟರು. ಕರಾವಳಿಯ ಹಳ್ಳಿಮನೆಗಳು ನೆರೆಕರೆಯಾದರೂ ಮೈಲು ದೂರದಲ್ಲಿರುತ್ತವೆ.
ಹಲಸಿನಹಣ್ಣೂ ಬಂದಿತು, ಸಂಜೆಯವೇಳೆಗೆ ಮಗಳೂ ಆಗಮಿಸಿದಳು. “ಅಮ್ಮಾ, ಕೊಟ್ಟಿಗೆ ನನಗೂ ಬೇಕು, ರೂಮಿನಲ್ಲಿ ತಿನ್ನಲಿಕ್ಕೆ” ಅಂದಳು.
“ನೀನು ಯಾವಾಗ ಹೋಗ್ತೀಯಾ….”
“ಸೋಮವಾರ ಬೆಳಗ್ಗೆ ಫಸ್ಟ್ ಬಸ್ಸಿಗೆ….”
“ಸರಿ…..” ಅವನು ಭಾನುವಾರ ಹೋಗೋದು ಅಂತಿದ್ರೆ ಇವಳು ಸೋಮವಾರ ಅಂತಿದ್ದಾಳೆ. ಇಬ್ಬರಿಗೂ ಸೂಕ್ತವಾಗುವ ಸಮಯದ ಹೊಂದಾಣಿಕೆಯೊಂದಿಗೆ ಹಲಸಿನಹಣ್ಣು ಬೇಯಬೇಕಾಗಿದೆ. ಭಾನುವಾರ ಸಂಜೆಗೆ ಬಿಸಿ ಬಿಸಿ ಕೊಟ್ಟಿಗೆ ಮಾಡಿಬಿಡೋಣ.
ಮಗಳು ತೋಟದಿಂದ ಬಾಳೆಎಲೆ ತಂದಳು. ಹಲಸಿನಹಣ್ಣು ಯಜಮಾನ್ರಿಂದ ಬಿಡಿಸಲ್ಪಟ್ಟಿತು. ಮಧು ಬಿಡಿಸೊಳೆಗಳನ್ನು ಆಯ್ದು, ಅಂದ್ರೆ ಬೇಳೆ, ಸಾರೆ, ಪೊದುಂಕುಳುಗಳಿಂದ ಹಣ್ಣುಗಳನ್ನು ಬೇರ್ಪಡಿಸಿ ನನ್ನೆದುರು ತಂದಿಟ್ಟ.
ಬಾಳೆಎಲೆಗಳನ್ನು ಒಂದೇ ಗಾತ್ರದಲ್ಲಿ ಹೊಂದಿಸಿ, ಬಾಡಿಸಿ ಇಡಬೇಕು. ಬಾಡಿಸಿದ ನಂತರ ಬಟ್ಟೆಯಲ್ಲಿ ಒರೆಸಿದರೆ ಉತ್ತಮ.
ಬಾಳೆ ಎಲೆಗಳನ್ನು ಬಾಡಿಸುವುದು ಹೇಗೆ?
ಹಿಂದೆಲ್ಲಾ ಅಟ್ಟುಂಬೊಳದ ಕಟ್ಟಿಗೆ ಒಲೆಯಲ್ಲಿ, ಬಚ್ಚಲುಮನೆಯ ಒಲೆಯಲ್ಲಿ ನಿಗಿನಿಗಿ ಕೆಂಡ ಸಿದ್ಧವಾಗಿರುವ ಹೊತ್ತಿಗೆ ಬಾಳೆ ಬಾಡಿಸಿ ಇಟ್ಟುಕೊಳ್ಳುತ್ತಿದ್ದರು. ಈಗೇನಿದ್ದರೂ ಯಂತ್ರತಂತ್ರಗಳು ನಮ್ಮ ಕೆಲಸಗಳನ್ನು “ಊಫ್…. ಇಷ್ಟೇನಾ” ಅನ್ನುತ್ತಲಿವೆ. ಮೈಕ್ರೋವೇವ್ ಅವೆನ್ ಇದ್ದಲ್ಲಿ ಅದರೊಳಗೆ ತುರುಕಿದರಾಯಿತು, ಬಾಡಿಸಿ ಕೊಡುತ್ತದೆ. ಬಾಳೆಎಲೆಗಳನ್ನು ಸುರುಳಿ ಸುತ್ತಿ ಕುದಿಯುವ ನೀರಿಗೆ ಹಾಕಿದರೂ ಬಾಡಿದ ಬಾಳೆಲೆ ಸಿಗುವುದು. ಗ್ಯಾಸ್ಜ್ವಾಲೆಯ ಮೇಲೆ ಒಂದೊಂದೇ ಎಲೆಯನ್ನು ಉರಿಗೆ ಹಿಡಿದು ಬಾಡಿಸಿಕೊಳ್ಳಬೇಕಾಗುತ್ತದೆ.
ಅತಿ ವೇಗವಾಗಿ ಅರೆಯುವ ಕೆಲಸ ಆಗಬೇಕಾಗಿದೆ, ವಿದ್ಯುತ್ತಿನ ಕಣ್ಣುಮುಚ್ಚಾಲೆಯಾಟ ಎಲ್ಲರಿಗೂ ತಿಳಿದಿರುವ ವಿಷಯ. ಮೂರು ಪಾವು ಅಂದ್ರೇ ಮೂರು ಕಪ್ ಅಂತಿಟ್ಕೊಳ್ಳಿ, ಅಕ್ಕಿತರಿ ನೀರೆರದು ಇಟ್ಟಿದ್ದಾಯ್ತು, ಅರೆಯುವ ಕೆಲಸ ಉಳಿತಾಯ.
ಹಲಸಿನಹಣ್ಣು ಮಿಕ್ಸೀ ಯಂತ್ರದಲ್ಲಿ ತಿರುಗಿ ಮುದ್ದೆಯಾಯಿತು. ಅಕ್ಕಿಯ ತರಿ ಅಥವಾ ನುಚ್ಚಕ್ಕಿ, ನಮ್ಮೂರಿನ ಪರಿಭಾಷೆಯಲ್ಲಿ ಕಡಿಯಕ್ಕಿ ಅನ್ನಿ, ಹಣ್ಣಿನೊಂದಿಗೆ ರುಬ್ಬಲ್ಪಟ್ಟಿತು. ಹಣ್ಣು ಹೆಚ್ಚಾದರೆ ಕೊಟ್ಟಿಗೆ ಮೆತ್ತಗಾಗಿ ಬಿಡುತ್ತದೆ. ಅಕ್ಕಿ ಹೆಚ್ಚಾಯಿತೋ, ಕೊಟ್ಟಿಗೆ ಕಲ್ಲಿನಂತಾದೀತು. ಸಮಪ್ರಮಾಣದಲ್ಲಿದ್ದರೆ ಕ್ಷೇಮ. ರುಚಿಗೆ ಉಪ್ಪು ಸೇರಿತು. ಸಿಹಿ ಜಾಸ್ತಿ ಬೇಕಿದ್ದರೆ ಬೆಲ್ಲದ ಪುಡಿ ಸೇರಿಸಿಕೊಳ್ಳತಕ್ಕದ್ದು. ಇಂತಹ ರಸಭರಿತ ಹಣ್ಣುಗಳನ್ನು ಅರೆಯುವಾಗ ನೀರು ಕೂಡಿಸಲಿಕ್ಕಿಲ್ಲ. ಈ ಮಾದರಿಯ ಹಲಸಿನಹಣ್ಣಿನ ಕೊಟ್ಟಿಗೆ ಯಾ ಕಡುಬು ನಮ್ಮೂರಿನ ಜನಸಾಮಾನ್ಯರ ಆಡುಭಾಷೆ ತುಳುವಿನಲ್ಲಿ `ಪೆಲಕ್ಕಾಯ್ತ ಗಟ್ಟಿ’ ಎಂದು ಹೆಸರುವಾಸಿಯಾಗಿರುತ್ತದೆ.
ಅಟ್ಟಿನಳಗೆಯಲ್ಲಿ ನೀರು ಕುದಿಯುತ್ತಿರಲಿ. ಒಂದೊಂದೇ ಸೌಟು ಹಿಟ್ಟನ್ನು ಬಾಳೆಯೆಲೆಯೊಳಗೆ ಹರಡಿ, ಮಡಚಿಟ್ಟು ಅಟ್ಟಿನಳಗೆಯೊಳಗೆ ಇಡುತ್ತಾ ಬನ್ನಿ. ಭದ್ರವಾಗಿ ಮುಚ್ಚಿ ಇಪ್ಪತ್ತು ನಿಮಿಷಗಳ ಕಾಲ ಉಗಿಯಲ್ಲಿ ಬೆಂದಾಗ ಹಲಸಿನಹಣ್ಣಿನ ಕೊಟ್ಟಿಗೆ ಸಿದ್ಧ. ಬಿಸಿಬಿಸಿಯಾದ ಕೊಟ್ಟಿಗೆಗೆ ತೆಂಗಿನೆಣ್ಣೆ ಕೂಡಿಕೊಂಡು ತಿನ್ನಲು ಬಯಸುವವರೇ ಅಧಿಕ. ಇನ್ನಷ್ಟು ರುಚಿಕರವಾದ ಚಟ್ಣಿಯೂ ಇದ್ದಲ್ಲಿ ಸ್ವರ್ಗಕ್ಕೆ ಮೂರೇ ಗೇಣು!
ಅಂತಹ ಚಟ್ಣಿ ಮಾಡುವುದು ಹೇಗೆ?: ಮಾಮೂಲಿ ನೀರುಳ್ಳಿ
ಅಥವಾ ಬೆಳ್ಳುಳ್ಳಿ ಚಟ್ಣಿ ಈ ಕೊಟ್ಟಿಗೆಯೊಂದಿಗೆ ಹೊಂದಿ ಬರುವುದಿಲ್ಲ. ಶುಂಠಿ ಚಟ್ಣಿ ವಾಡಿಕೆಯದು. ಆದರೆ, ನನ್ನ ಬಳಿ ಶುಂಠಿ ಇದ್ದಿರಲಿಲ್ಲ. ಮಾವಿನ ಶುಂಠಿ ಇತ್ತು. ಮಗಳು ತೋಟದಿಂದ ಗಾಂಧಾರಿ ಮೆಣಸು ತಂದಳು.
ಹಸಿ ಕಾಯಿತುರಿ, ಮಾಂಙನಾರಿ, ನಾಲ್ಕಾರು ಗಾಂಧಾರಿ ಮೆಣಸು, ಚೂರು ಹುಳಿ, ಉಪ್ಪು ಎಲ್ಲ ಸೇರಿ ಚಟ್ಣಿ ಆಯಿತು, ಕರಿಬೇವಿನ ಒಗ್ಗರಣೆಯೂ ಬಿದ್ದಿತು. ಈ ಚಟ್ಣಿ ಈಗ ನಾಳೆ ತನಕ ಕೆಡದಿರಬೇಕು, ಬೆಂಗಳೂರು ತಲಪಬೇಕಾಗಿದೆಯಲ್ಲ! ಸರಿ, ಅದಕ್ಕಾಗಿ ಚಟ್ಣಿಗೆ ನೀರು ಸೇರಿಸದೇ ಅರೆಯಲಾಯಿತು. ಇಂಡಕ್ಷನ್ ಒಲೆಯ ಮೇಲೆ ಒಂದಷ್ಟು ಹೊತ್ತು ಕೂತಿದ್ದು ಚಟ್ಣಿ ಕೆಳಗಿಳಿಯಿತು!