ನಾವು ನೀರುದೋಸೆ ಪ್ರಿಯರು, ಮಕ್ಕಳಿಗೂ ಬೆಲ್ಲಸುಳಿ ಬೆರೆಸಿ ದೋಸೆ ತಿನ್ನುವ ಹಂಬಲ. ಆದರೂ ಮೂರೋ ನಾಲ್ಕೋ ದೋಸೆ ಉಳಿಯಿತು. ಹೇಗೂ ಮಕ್ಕಳಿಬ್ಬರೂ ಮನೆಯಲ್ಲಿ ಇದ್ದಾರೆ. ಉಳಿದ ದೋಸೆಗಳನ್ನೇ ಪಾಯಸವನ್ನಾಗಿ ಪರಿವರ್ತಿಸೋಣ.ಒಂದು ಹಸಿ ತೆಂಗಿನಕಾಯಿ, ಕಾಯಿ ಅರೆದು ದಪ್ಪ ಹಾಲು ತೆಗೆದಿರಿಸಿ. ಕಾಯಿ ಚರಟಕ್ಕೆ ಇನ್ನೂ ಎರಡು ಬಾರಿ ನೀರೆರೆದಾಗ ನೀರುಕಾಯಿಹಾಲು ಲಭ್ಯ.
೨ ಅಚ್ಚು ಬೆಲ್ಲ, ನೀರುಕಾಯಿಹಾಲಿನಲ್ಲಿ ಕರಗಿ ಕುದಿಯಲಿ.
ಕುದಿಯುತ್ತಿರುವ ಬೆಲ್ಲದ ದ್ರಾವಣಕ್ಕೆ ದೋಸೆಗಳನ್ನು ಹಾಕಿರಿ. ದೋಸೆಸಹಿತವಾಗಿ ಕುದಿಯುತ್ತಿರುವ ಹಾಗೇನೇ ದಪ್ಪ ಕಾಯಿಹಾಲು ಎರೆಯಿರಿ. ಚಿಟಿಕೆ ಏಲಕ್ಕಿಪುಡಿ ಉದುರಿಸಿ. ಇನ್ನೊಂದು ಕುದಿ ಬಂದಾಗ ಕೆಳಗಿಳಿಸಿ, ಪಾಯಸ ಸಿದ್ಧ. ಅನಾವಶ್ಯಕವಾಗಿ ಸೌಟಿನಲ್ಲಿ ಕಲಕದಿರಿ, ದೋಸೆಗಳನ್ನು ಬಟ್ಟಲಿಗೆ ಹಾಕಿಕೊಳ್ಳುವಾಗಲೂ ಹರಿಯದಂತೆ ಜಾಗ್ರತೆ ವಹಿಸುವ ಅಗತ್ಯವಿದೆ.
ಈ ಪಾಯಸವನ್ನು ಮಕ್ಕಳೊಂದಿಗೆ ಸವಿಯುತ್ತಿದ್ದಂತೆ `ಓಡುಪ್ಪಳೆ’ ಎಂಬ ಸಿಹಿತಿನಿಸು ನೆನಪಾಯಿತು. ಓಡುಪ್ಪಳೆಯನ್ನು ನಾನು ಬಾಲ್ಯದಲ್ಲಿ ತಿಂದಿದ್ದೇ ಇಲ್ಲ. ಹೀಗೊಂದು ತಿಂಡಿ ಇದೆ ಅಂತ ಗೊತ್ತೂ ಇರಲಿಲ್ಲ ಅನ್ನಿ. ನಮ್ಮಮ್ಮ ಮಾಡಿದ್ರೆ ತಾನೇ ಗೊತ್ತಾಗಿರೋದು! ಮದುವೆ ಆದ ನಂತರವೂ ನಮ್ಮ ಮನೆಯಲ್ಲಿ ಓಡುಪ್ಪಳೆ ಮಾಡಿದ್ದನ್ನು ಕಂಡಿಲ್ಲ.
ಯಾವಾಗ ನನ್ನ ಕೆಲಸಗಾರ್ತಿಯರೆಲ್ಲ ಸರ್ಕಾರಿ ರೋಜ್ಗಾರ್ ಯೋಜನೆಯಲ್ಲಿ ತೊಡಗಿಸಿಕೊಂಡರೋ ಅವಾಗ ನಮ್ಮ ಅಡಿಕೆತೋಟದೊಳಗೆ ಕಾರ್ಮಿಕರ ಅಭಾವ ಕಾಡಲುತೊಡಗಿತು.
“ಸರ್ಕಾರಿ ಸಂಬಳ ನಾವೂ ಕೊಟ್ಟು ಕೆಲಸ ಮಾಡ್ಸೋಣ” ಅಂತ ನಮ್ಮೆಜಮಾನ್ರು ಅಂದ್ಬಿಟ್ಟು ನಾಲ್ಕಾರು ಹೆಣ್ಣಾಳುಗಳು ಬರುವ ಏರ್ಪಾಡಾಯಿತು.
“ನೋಡೂ…. ಹೇಗೂ ಗವರ್ಮೆಂಟ್ ಸಂಬಳಾನೇ ಕೊಡ್ಬೇಕು, ಊಟ ಚಹ ಕೊಡಲಿಕ್ಕಿಲ್ಲ ತಿಳೀತಾ…. ಅವ್ರೇ ತರ್ತಾರೆ” ಅಂದಿದ್ದು ನಮ್ಮವರು.
“ಆಗ್ಲೀ, ಇದೂ ಒಳ್ಳೆಯದೆ.”
ಹಾಳೆಮುಟ್ಟಾಳೆ ಧರಿಸಿ ಬಂದ ಕೆಲಸಗಾರ್ತಿಯರು ನನಗೆ ಪರಿಚಿತರೇ ಆಗಿದ್ದುದರಿಂದ “ಚಹ ಜೊತೆ ಏನು ತಿಂಡಿ ತಂದಿದ್ದೀರಾ…..” ತುಳುವಿನಲ್ಲಿ ವಿಚಾರಣೆ ನನ್ನದು.
“ಓಡುಪ್ಪಳೆ ಅಕ್ಕಾ…..” ಈಗ ಓಡುಪ್ಪಳೆ ನನ್ನ ಕಿವಿಗೆ ಬಿತ್ತು.
“ಹೌದಾ….. ಹ್ಯಾಗಿರುತ್ತೇ ಓಡುಪ್ಪಳೆ?” ಅವಳೋ ಟಿಫಿನ್ಬಾಕ್ಸ್ ಬಿಡಿಸಿ ತೋರಿಸಿದ್ದೂ ಆಯಿತು. ಅದು ಮಾಮೂಲಿ ದೋಸೆ ಥರಾನೇ ಇದ್ದಿತು.
“ಹೇಗೇ ಮಾಡಿದ್ದು?”
“ಬೆಳ್ತಿಗೆ ಅಕ್ಕಿ ನುಣ್ಣಗೆ ಅರೆದು, ಅದಕ್ಕೆ ಅನ್ನ ಹಾಕಿ ಪುನಃ ಅರೆಯುವುದು, ಮಣ್ಣಿನ ಓಡು (ಮಣ್ಣಿನ ಬಾಣಲೆ) ಉಂಟಲ್ಲ, ಅದರಲ್ಲಿ ಎರೆದು….”
“ಓ, ಹಾಗೆಯಾ….” ಇದೂ ಅನ್ನದ ದೋಸೆ ಅನ್ನದೆ ವಿಧಿಯಿಲ್ಲ. ಮಣ್ಣಿನ ಕಾವಲಿ ಬೇರೆ ಆಗಬೇಕು, ನನ್ನಂಥವರಿಗಲ್ಲ ಎಂದು ಸುಮ್ಮನಾಗಬೇಕಾಯಿತು. ಆದರೂ ನಮ್ಮ ಪಾಕತಜ್ಞೆ ಕಡಂಬಿಲ ಸರಸ್ವತಿ ಏನು ಬರೆದಿದ್ದಾರೇಂತ ಓದಿಕೊಂಡೆ. ಬೆಳ್ತಿಗೆ ಅಕ್ಕಿ ಹಾಗೂ ಕುಚ್ಚಿಲು ಅಕ್ಕಿ ಸಮಪ್ರಮಾಣದಲ್ಲಿ ನುಣ್ಣಗೆ ಅರೆದು, ಬಾಣಲೆಯಲ್ಲಿ ಎರೆದು…. ಅಂತ. ಅನ್ನ ಹಾಕುವ ಪ್ರಸ್ತಾವ ಇಲ್ಲಿಲ್ಲ. ನೀರು ದೋಸೆ ಥರಾನೇ ಇದು ಅಂತಾಯ್ತು. ಮಾಮೂಲಿ ಕಾವಲಿಯಲ್ಲಿ ತೆಳ್ಳಗೆ ಎರೆಯುವ ಬದಲು ದಪ್ಪನಾಗಿ ಬೇಯಿಸುವಲ್ಲಿಗೆ ಇದು ಓಡುಪ್ಪಳೆ. ಅದರಲ್ಲೂ ಮಣ್ಣಿನ ಬಾಣಲೆಯಾದರೆ ಒಂದು ತೆರನಾದ ಮಣ್ಣಿನ ಸುವಾಸನೆ.
ಈ ಥರ ದೋಸೆಗಳನ್ನು ಮಾಡಿಟ್ಟು ಬೆಲ್ಲ ಹಾಕಿದ ತೆಂಗಿನಕಾಯಿಹಾಲಿನಲ್ಲಿ ನೆನೆಸಿಟ್ಟು ಸಿಹಿ ಓಡುಪ್ಪಳೆಗಳನ್ನು ತಿನ್ನಲು ರುಚಿಕರ. ಸಿಹಿ ಬೇಕಿಲ್ಲದವರು ರಸಂ, ಕೂಟು, ಸಾರು, ಕೊದ್ದೆಲ್ ಇತ್ಯಾದಿ ವ್ಯಂಜನಗಳನ್ನು ಬಳಸಬಹುದಾಗಿದೆ.
ಒಂದು ನಾಲಕ್ಕು ದಿನ ಕಳೆದಾಗ ನಮ್ಮತ್ತಿಗೆ ಊರಿಗೆ ಬಂದರು. ಅವರೋ ಹಳೇಕ್ರಮದ ಅಡುಗೆಗಳನ್ನು ಬಲ್ಲವರು.
“ಅಯ್ಯೋ, ಓಡುಪ್ಪಳೆ ಗೊತ್ತಿಲ್ವಾ ನಿನಗೆ? ಮುಂಚೆ ಅಪ್ಪಂಗೆ ದಿನಾ ಸಂಜೆ ಕಾಫಿಗೆ ಓಡುಪ್ಪಳೆಯೇ ಆಗ್ಬೇಕಿತ್ತು ಗೊತ್ತಾ….”
“ಹೌದಾ, ನನಗೊತ್ತೇ ಇಲ್ಲ….”
ಯಾವುದಕ್ಕೂ ನಮ್ಮತ್ತೆ ಮಣ್ಣಿನ ಪಾತ್ರೆಪರಡಿಗಳನ್ನು ನನ್ಕೈಲಿ ಮುಟ್ಟೋದಿಕ್ಕೆ ಬಿಟ್ರೆ ತಾನೇ….
ಬೆಲ್ಲದ ಕಾಯಿಹಾಲು ಹಾಕಿ ಓಡುಪ್ಪಳೆ ತಿನ್ನುವ ಗೌಜಿ…. ಅತ್ತಿಗೆ ಭಾವುಕರಾದರು. ನಾನು ಬಂದಾಗಲೇ ಮಾವ ಷುಗರ್ ಪೇಶೆಂಟ್ ಅಂತ ಹಾರಾಡ್ತಿದ್ರು. ಯಾಕಾದ್ರೂ ನಾನು ಬೆಲ್ಲ ಹಾಕಿದ ಸಿಹಿತಿಂಡಿಗಳನ್ನು ಮಾಡಿ ಅವರ ಎದುರಿಗಿಡಲಿ? ಮಾಡಲಿಕ್ಕೆ ಕಲಿಯದಿದ್ದುದೇ ಒಳ್ಳೆಯದಾಯಿತು.
ಹೊಸದಾಗಿ ಓಡುಪ್ಪಳೆ ಮಾಡಬಯಸುವವರಿಗೆ ಪುಕ್ಕಟೆ ಸಲಹೆ ಇಲ್ಲಿದೆ:
ಹೊಸದಾದ ಮಣ್ಣಿನ ಬಾಣಲೆ ಖರೀದಿಸಿದ್ದೀರಾ, ಅಟ್ಟದಿಂದ ಕೆಳಗಿಳಿಸಿದ್ದೀರಾ, ಏನೇ ಆಗಿರಲಿ, ಚೆನ್ನಾಗಿ ತೊಳೆಯಿರಿ. ಅಡುಗೆಎಣ್ಣೆ ಸವರಿ ಒಲೆಯ ಮೇಲೇರಿಸಿ ನೀರು ಕುದಿಸಿ. ಇದು ಸ್ವಚ್ಛಗೊಳಿಸುವ ಕ್ರಿಯೆ. ಒಂದೆರಡು ಬಾರಿ ಈ ಥರ ಮಾಡಿದಿರಾದರೆ ಈ ಮಣ್ಣಿನ ಕಾವಲಿ ಉಪಯೋಗಿಸಲು ಸಿದ್ಧ.
ಹಿಟ್ಟನ್ನು ಅರ್ಧ ಸೌಟು ಎರೆದು, ಮುಚ್ಚಿ ಬೇಯಿಸಿ. ಬೆಂದಾಗ ಬದಿಯಿಂದ ಏಳುತ್ತಾ ಬರುತ್ತದೆ. ಇದನ್ನು ಕವುಚಿ ಮಗುಚಿ ಹಾಕಲಿಕ್ಕಿಲ್ಲ, ಎಣ್ಣೆ ಯಾ ತುಪ್ಪ ಎರೆಯಲಿಕ್ಕೂ ಇಲ್ಲ. ಬೆಂದ ಓಡುಪ್ಪಳೆಯನ್ನು ಬೆಲ್ಲ ಹಾಕಿದ ತೆಂಗಿನಕಾಯಿಹಾಲಿಗೆ ಹಾಕಿ ಬಿಡಬೇಕು. ಅರ್ಧ ಘಂಟೆ ಬಿಟ್ಟು ತಿನ್ನಬೇಕು.