ತೊಂಡೆಚಪ್ಪರ ಮನೆಯ ಹಿತ್ತಲಿಗೆ ಅಲಂಕಾರ ಅಥವಾ ಭೂಷಣ ಅಂದರೂ ಸರಿ. ನನ್ನ ಅತ್ತೆ ಮರತೊಂಡೆ ಬಳ್ಳಿಯನ್ನು ಸಾಕಿ ಸಲಹಿದ್ದರು. ಅದಕ್ಕೊಂದು ವಿಶಾಲವಾದ ಚಪ್ಪರ. ಮನೆಕೆಲಸಕ್ಕೆ ನಾಲ್ಕಾರು ಹೆಣ್ಣಾಳುಗಳು ಇದ್ದರೂ, ದಿನಾ ತೊಂಡೆ ಬುಡಕ್ಕೆ ನೀರು ಹರಿದುಹೋಗುವಂತೆ ಪಾತ್ರೆಗಳನ್ನು ತೊಳೆಯುವುದೇನು; ಕಟ್ಟಿಗೆಯ ಒಲೆಯಲ್ಲಿ ಮಸಿಹಿಡಿದ ಹಿತ್ತಾಳೆಯ ಪಾತ್ರೆಗಳು, ತಿಕ್ಕಿ ತೊಳೆಯಲಿಕ್ಕೆ ಒಲೆಯ ಬೂದಿ ಹಾಗೂ ತೆಂಗಿನಕಾಯಿ ಸಿಪ್ಪೆ. “ಅಕ್ಕಿತೊಳೆದ ನೀರು ಬಹಳ ಒಳ್ಳೆಯದು” ಅನ್ನುತ್ತಾ ಅಕ್ಕಿ ತೊಳೆಯುವುದೇನು; ಆ ದಿನಗಳಲ್ಲಿ ನಮ್ಮ ಮನೆಖರ್ಚಿಗೆ ಮೂರು ಸೇರಕ್ಕಿ ಬೇಕಾಗುತ್ತಾ ಇತ್ತು.
ಇಂತಹ ತೊಂಡೆಚಪ್ಪರವನ್ನು ನಾನೂ ಉಳಿಸಿಕೊಂಡು ಸಾಕುತ್ತಾ ಬಂದಿದ್ದೆ. ಆದರೂ ಈಗ ಕೆಲವು ವರ್ಷಗಳಿಂದ ತೊಂಡೆಗೆ ಚಪ್ಪರಹಾಕುವವರಿಲ್ಲದೆ ತೊಂಡೆಕಾಯಿಗೂ ಪೇಟೆಗೆ ಹೋಗುವ ಪರಿಸ್ಥಿತಿ ಬಂದಿತ್ತು.
ಈ ಬಾರಿ ಮಳೆಗಾಲದ ಅವತರಣ ಬಹುಬೇಗನೆ ಆಗಿರುವುದರಿಂದ, ಬಿಡಬಾರದೆಂಬ ಹಟದಿಂದ, ಚೆನ್ನಪ್ಪ ಬಂದಿದ್ದಾಗ, ತೊಂಡೆಕಾಯಿಗೂ ಗತಿಯಿಲ್ಲದ ಕಾಲ ಬಂದಿದ್ದನ್ನು ವರ್ಣಿಸಿದಾಗ, ಮಾರನೇ ದಿನವೇ ತೊಂಡೆಬಳ್ಳಿಗಳೊಂದಿಗೆ ಚೆನ್ನಪ್ಪ ಪ್ರತ್ಯಕ್ಷನಾದ.
ತೊಂಡೆ ನಾಟಿ ಹೇಗೆ?
ಚಚ್ಚೌಕನೆಯ ಗುಂಡಿ ತೋಡುವುದು, ನೀರು ಸರಾಗವಾಗಿ ಹರಿದು ಬರುವ ಸ್ಥಳಕ್ಕೆ ಆದ್ಯತೆ. ಬಲಿಷ್ಠವಾದ ತೊಂಡೆಬಳ್ಳಿಗಳು, ೨ ಅಡಿ ಉದ್ದದ ನಾಲ್ಕು ಬಳ್ಳಿಗಳು ಬೇಕಾಗುತ್ತವೆ. ತೊಂಡೆಬಳ್ಳಿಗಳನ್ನು ಗುಳಿಯಲ್ಲಿ ಓರೆಯಾಗಿ ಮಲಗಿಸುವುದು, ಮೇಲಿಂದ ಮಣ್ಣು ಮುಚ್ಚುವುದು. ಬಿದಿರಿನ ಕಡ್ಡಿಗಳನ್ನು ಆಧಾರ ಕೊಡುವುದು. ಬುಡಕ್ಕೆ ಹಸಿರೆಲೆಗಳನ್ನು ಹರಡುವುದು.
ತೊಂಡೆಬಳ್ಳಿ ಚಿಗುರಿತು. ಈಗ ಚೆನ್ನಪ್ಪ ನೆಟ್ಟಿದ್ದು ಎಲ್ಲ ಕಡೆಯೂ, ಅಂದರೆ ಮಾರುಕಟ್ಟೆಯಲ್ಲಿಯೂ ಸಿಗುವಂತಹ ಊರತೊಂಡೆಯಾಗಿತ್ತು. ಇದು ಹೆಚ್ಚಿನ ಆರೈಕೆಯನ್ನೂ, ನಿರ್ವಹಣೆಯನ್ನೂ ಬಯಸುವಂತಹದ್ದು. ಮರತೊಂಡೆಗೆ ಸಮಸ್ಯೆಗಳಿಲ್ಲ; ರೋಗಬಾಧೆಯೂ ಇಲ್ಲ. ಬಹುಶಃ ಕಾಡು ಜಾತಿಯಿರಬೇಕು. ರುಚಿಗೇನೂ ಮೋಸವಿಲ್ಲದ ಮರತೊಂಡೆ ಬಳ್ಳಿಯ ಬುಡ ಇದೆಯೋ ಎಂದು ಈ ಮೊದಲು ಇದ್ದಲ್ಲಿ ಹುಡುಕಾಡಿದಾಗ ಸಿಕ್ಕಿಯೇಬಿಟ್ಟಿತು. ಮಳೆ ಬಂದು ಹಸನಾದ ನೆಲದಲ್ಲಿ, ಯಾರೂ ಕೇಳುವವರಿಲ್ಲದಿದ್ದರೂ ಮರತೊಂಡೆಯ ಬಳ್ಳಿ ಚಿಗುರಿ ಸುತ್ತಮುತ್ತ ಇದ್ದ ರಥಪುಷ್ಪಗಳ ಪೊದರನ್ನು ಹಬ್ಬಲು ಹವಣಿಸುತ್ತಾ ಇತ್ತು.
“ನೋಡೂ, ಮರತೊಂಡೆಯ ಬಳ್ಳಿ ಇಲ್ಲಿದೆ. ಇದನ್ನೇನು ಮಾಡುವುದು?”
“ಅದಕ್ಕೂ ಒಂದು ಚಪ್ಪರ ಹಾಕುವಾ.”
“ಹೌದಾ, ಮನೆಯಲ್ಲಿ ಎರಡೆರಡು ಚಪ್ಪರ ಹಾಕ್ಬಾರದೂಂತ ಶಾಸ್ತ್ರ ಇದೆಯಲ್ಲ…..”
“ಹಂಗೇನಿಲ್ಲ. ನನ್ನದೂ ನಾಲ್ಕು ಚಪ್ಪರ ಮನೆಯಲ್ಲಿ ಉಂಟಲ್ಲ.”
“ತೊಂಡೆಕಾಯಿ ಮಾರಾಟವೂ ಉಂಟು ಹಾಗಾದ್ರೆ…..”
“ಹೂಂ, ಆಚೀಚೆ ಮನೆಯವ್ರು ಕೊಯ್ದುಕೊಡ್ತಾರೆ…..”
“ಸರಿ. ಹಾಗಿದ್ರೆ ಈ ಮರತೊಂಡೆಗೂ ಒಂದು ಚಪ್ಪರ ಹೊದೆಸಿಬಿಡು.”
ಮರತೊಂಡೆಯೂ ಚಪ್ಪರದಲ್ಲಿ ಹಬ್ಬಿ ಹೂವರಳಿಸಿಯೇ ಬಿಟ್ಟಿತು. ತೊಂಡೆಬಳ್ಳಿಯಲ್ಲಿ ಅರಳಿದ ಹೂ, ಕಾಯಿ ಆದ ಹಾಗೇ ಲೆಕ್ಕ. ಹಲಕೆಲವು ತರಕಾರಿ ಸಸ್ಯಗಳು ಮೊದಲು ಫಲ ನೀಡದೆ ಹೂಗಳನ್ನು ತೋರಿಸಿ ನಮ್ಮನ್ನು ಮರುಳು ಮಾಡುವವುಗಳಾಗಿರುತ್ತವೆ. ಇಂತಹ ಹೂವುಗಳನ್ನು `ಮರುಳು ಹೂವು’ ಎಂದೇ ಹೇಳುವ ವಾಡಿಕೆ. “ತೊಂಡೆಚಪ್ಪರದಿ ಅರಳಿದ ಹೂವ ಕಂಡಿರೇ….” ಗುಣುಗುಣಿಸುತ್ತ ಫೋಟೋ ತೆಗೆದೂ ಆಯಿತು.
ಮೊದಲ ಬಾರಿ ಕೊಯ್ಯಲು ಸಿಕ್ಕಿದ್ದು ಹತ್ತು-ಹನ್ನೆರಡು ಕಾಯಿಗಳಾದರೂ, ಬೀಟ್ರೂಟ್ ಗೆಡ್ಡೆಯ ಜೊತೆಗೂಡಿ ಪಲ್ಯ ಸಿದ್ಧವಾಯಿತು. ಅನ್ನದೊಂದಿಗೆ ಪಲ್ಯದ ಆವಶ್ಯಕತೆ ಇದೆ. ಹಸಿರುತರಕಾರಿಯನ್ನು ರುಚಿಗೆ ಉಪ್ಪು ಹಾಗೂ ಒಗ್ಗರಣೆಯೊಂದಿಗೆ ಬೇಯಿಸಿ. ಕಾಯಿತುರಿಯ ಅಲಂಕರಣ. ಹಾಂ… ತೆಂಗಿನತುರಿಯೂ ತರಕಾರಿ ಹೌದೆಂದು ತಿಳಿಯಿರಿ. ತೆಂಗಿನತುರಿಯನ್ನು ಪಲ್ಯಗಳಿಗೆ ಧಾರಾಳವಾಗಿ ಬಳಸಿರಿ. ಒಗ್ಗರಿಸಲೂ ತೆಂಗಿನೆಣ್ಣೆ ಅತ್ಯುತ್ತಮ. ಪಲ್ಯಗಳನ್ನು ದೇಹಕ್ಕೆ ಬೇಕಾದ ಶಕ್ತಿ, ವಿಟಮಿನ್, ಖನಿಜಾಂಶಗಳಿಂದ ಕೂಡಿದ ತರಕಾರಿ, ಸೊಪ್ಪು, ಗೆಡ್ಡೆಗೆಣಸು, ಬೇಳೆಕಾಳುಗಳನ್ನು ಬಳಸಿ ಮಾಡಬಹುದಾಗಿದೆ. ನಮ್ಮ ಊಟದ ಅವಿಭಾಜ್ಯ ಅಂಗವಾಗಿರುವ ತರಕಾರಿಗಳನ್ನು ಅಧಿಕವಾಗಿ ಸೇವಿಸಬೇಕೆಂದೇ ವೈದ್ಯರು ಹೇಳುತ್ತಿರುತ್ತಾರೆ. ಅದು ಪಲ್ಯದ ರೂಪದಲ್ಲಿದ್ದರೆ ಉತ್ತಮ.
ಇದು ನಿಮಗೆ ಗೊತ್ತೇ?
ತೊಂಡೆಕಾಯಿ ನಿಸ್ಸಂಶಯವಾಗಿ ಭಾರತದ ವಿಸ್ಮಯಕಾರಿ ಸಸ್ಯ. ಮಧುಮೇಹ ನಿಯಂತ್ರಕ, ಅಥವಾ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಹತೋಟಿಗೆ ತರಬಲ್ಲ ತೊಂಡೆಯ ರಸಸಾರವನ್ನು ಹೋಮಿಯೋಪತಿ ಚಿಕಿತ್ಸೆಯಲ್ಲಿ ಬಳಸಲಾಗುವುದು. ಬಹುಶಃ ಆಯುರ್ವೇದ ವೈದ್ಯಕೀಯ ಪದ್ಧತಿ ಇದರ ಮೂಲವಾಗಿರಬಹುದು. ಬಾಯಿಹುಣ್ಣು ಆದಾಗ ಹಸಿ ತೊಂಡೆಕಾಯಿಗಳನ್ನು ಅಗಿದು ತಿನ್ನುವುದೂ ಒಂದು ಮನೆಮದ್ದು. ಎಲೆಗಳನ್ನು ಜಜ್ಜಿ ತಯಾರಿಸಿದ ಮುಲಾಮು ಚರ್ಮದ ಬೊಕ್ಕೆ, ಉರಿಯೂತ, ತುರಿಕಜ್ಜಿ, ಸಾಮಾನ್ಯವಾಗಿ ಸೆಕೆಕಾಲದ ಪೀಡೆಗಳಿಗೆ ಔಷಧಿಯಾಗಿದೆ.
ತೊಂಡೆಕಾಯಿ ಕಫನಿವಾರಕ, ಅಲ್ಪಪ್ರಮಾಣದ ಸಂಧಿವಾತ ಪರಿಹಾರಕ. ತೊಂಡೆಕಾಯಿ ಎಲೆಗಳ ರಸ ಸೇವನೆಯಿಂದ ಮೂತ್ರಪಿಂಡದ ಸಮಸ್ಯೆ ಬಲುದೂರಕ್ಕೆ ಹೋದೀತು. ಕೆಲವಾರು ಲೈಂಗಿಕ ರೋಗಗಳಿಗೂ ರಾಮಬಾಣ ಈ ತೊಂಡೆ. ಊಟವಾದ ಮೇಲೆ ಎಳೆಯ ತೊಂಡೆಕಾಯಿಗಳನ್ನು ಅಗಿದು ತಿನ್ನಿ. ಜೀರ್ಣಾಂಗಗಳು ಚುರುಕಾಗಿರುವುದು ಹಾಗೂ ಮಲಬದ್ಧತೆಯ ಸಮಸ್ಯೆ ಕಾಡದು.
“ಹೌದಲ್ಲ, ಹಸೀ ತೊಂಡೇಕಾಯಿ ತಿನ್ನುವುದು ಹೇಗೇಂತ ಬೇಕಲ್ಲ!”
ಎಳೆಯ ತೊಂಡೇಕಾಯಿಗಳ ಸಲಾಡ್ ಮಾಡಿ ತಿನ್ನಬಹುದು. ಇನ್ನಿತರ ತರಕಾರಿಗಳ ಒಟ್ಟಿಗೆ ಸೇರಿಸಿದ ಉಪ್ಪಿನಕಾಯಿ ಕೂಡಾ ಚೆನ್ನಾಗಿರುತ್ತದೆ.
“ಆಯ್ತು. ಸೊಪ್ಪು ತಿನ್ನುವುದು ಹೇಗೆ?”
ಎಳೆಯ ಕುಡಿಗಳ ತಂಬುಳಿ ಮಾಡಿದರಾಯ್ತು. ತೆಂಗಿನತುರಿ, ದಪ್ಪ ಮಜ್ಜಿಗೆ, ಎಳೇ ಕುಡಿಗಳು, ಜೀರಿಗೆ ಹಾಗೂ ತಕ್ಕಷ್ಟು ಉಪ್ಪು, ನುಣ್ಣಗೆ ಅರೆದು ಅವಶ್ಯವಾದಷ್ಟು ನೀರು ಕೂಡಿಸುವಲ್ಲಿಗೆ ತಂಬುಳಿ ಸಿದ್ಧವಾದಂತೆ.
ತೊಂಡೆಕಾಯಿ ಮಜ್ಜಿಗೆಹುಳಿ
ಸಾಕಷ್ಟು ತೊಂಡೆಕಾಯಿ ಹೋಳುಗಳು, ಒಂದು ತೆಂಗಿನಕಾಯಿಯಿಂದ ನುಣ್ಣಗೆ ಅರೆದ ಅರಪ್ಪು, ದಪ್ಪ ಸಿಹಿ ಮಜ್ಜಿಗೆ, ರುಚಿಗೆ ಸಾಕಷ್ಟು ಉಪ್ಪು, ಚಿಟಿಕೆ ಅರಸಿಣ, ಒಗ್ಗರಣೆ ಸಾಹಿತ್ಯ: ಕರಿ ಬೇವು, ಎಣ್ಣೆ ಇತ್ಯಾದಿ…
ತೊಂಡೆಕಾಯಿ ಹೋಳುಗಳು ರುಚಿಗೆ ಉಪ್ಪು ಕೂಡಿ ಬೇಯಲಿ. ಹೋಳು ಹೆಚ್ಚು ಬೇಯಬಾರದು, ಸತ್ತ್ವಹೀನವಾಗುತ್ತವೆ ಹಾಗೂ ರುಚಿಯೂ ಇರುವುದಿಲ್ಲ. ತೆಂಗಿನಕಾಯಿ ಅರಪ್ಪು ಕೂಡಿಸಿ ಮಜ್ಜಿಗೆ ಎರೆದು ಕುದಿಸಿ ಒಗ್ಗರಣೆ ಕೊಟ್ಟರಾಯಿತು. ಸಿಹಿ ಬೇಕಿದ್ದರೆ ಬೆಲ್ಲ, ಖಾರ ಬೇಕೂಂತಿದ್ರೆ ಎರಡು ಹಸಿ ಮೆಣಸು ಸಿಗಿದು ಹಾಕಬೇಕು.
ತೊಂಡೆಕಾಯಿ ಹುಳಿಮೆಣಸು
ಚಪ್ಪರದಿಂದ ಕೊಯ್ದ ಕಾಯಿಗಳು ಹಣ್ಣೂ ಆಗಿರುವುದಿದೆ. ವಿಪರೀತ ಹಣ್ಣಾದದ್ದು ಬೇಡ. ಗುಂಡುಕಲ್ಲಿನಲ್ಲಿ ತುಸು ಜಜ್ಜಿ ಅಥವಾ ಚೂರಿಯಲ್ಲಿ ಗೀರು ಹಾಕಿ, ರುಚಿಗೆ ಉಪ್ಪು ಕೂಡಿಸಿ, ಅಗತ್ಯದ ನೀರೆರೆದು ಬೇಯಿಸಿ. ತೊಗರೀಬೇಳೆಯ ಆವಶ್ಯಕತೆ ಇಲ್ಲಿಲ್ಲ. ಮಸಾಲೆ ಸಾಮಗ್ರಿಗಳು ಕೂಡಾ ಬೇಡ.
“ಮತ್ತೇನನ್ನು ಹಾಕಬೇಕು…?”
ತೆಂಗಿನತುರಿ, ನಾಲ್ಕಾರು ಒಣಮೆಣಸು, ಹುಳಿ, ಚಿಟಿಕೆ ಅರಸಿಣದೊಂದಿಗೆ ನುಣ್ಣಗೆ ಅರೆಯಿರಿ. ಅರೆದ ತೆಂಗಿನ ಅರಪ್ಪು, ಬೆಂದ ತರಕಾರಿಯೊಂದಿಗೆ ಕೂಡಿ ಕುದಿಯಲಿ, ಬೆಳ್ಳುಳ್ಳಿ ಒಗ್ಗರಣೆ ಮರೆಯದಿರಲಿ. ಬೆಳ್ಳುಳ್ಳಿ ಹಿತವಾಗದವರಿಗೆ ತೆಂಗಿನಕಾಯಿ ಅರೆಯುವಾಗ ತುಸು ಕೊತ್ತಂಬ್ರಿ ಹಾಕಿಕೊಳ್ಳುವುದು. ಒಣಮೆಣಸು ಕೂಡಾ ಹುರಿಯಬೇಕಾಗಿಲ್ಲ, ಹಾಂ…. ಅರೆಯುವ ಮೊದಲು ನೀರಲ್ಲಿ ಹಾಕಿಟ್ಟಿರಾದರೆ ಅರೆಯುವ ಕಾಯಕ ಸುಲಭವಾದೀತು.
ಅವಿಯಲ್
ವಿಧವಿಧವಾದ ತರಕಾರಿಗಳೊಡನೆ ತೆಂಗಿನ ಅರಪ್ಪು ಕೂಡಿದ ಅವಿಯಲ್ ಅಥವಾ ಅವಿಲು ಗೊತ್ತಲ್ಲ, ಇದಕ್ಕೂ ತೊಂಡೆಕಾಯಿ ಇಲ್ಲದಿದ್ದರಾದೀತೇ? ಈ ವ್ಯಂಜನ ಮಜ್ಜಿಗೆಯನ್ನು ಬಯಸದು; ಬದಲಾಗಿ ಮಾವಿನಕಾಯಿ, ಅಂಬಟೆಯಂತಹ ಹುಳಿ ಇರುವ ತರಕಾರಿಗಳನ್ನು ಬಳಸಬೇಕು. ಖಾರಕ್ಕಾಗಿ ಹಸಿಮೆಣಸು ಮಾತ್ರ ಹಾಕಬೇಕು; ಮಸಾಲೆ ಹುಡಿ ಯಾವುದೂ ಹಾಕಬೇಕಾಗಿಲ್ಲ. ಕರಿಬೇವು ಒಗ್ಗರಣೆ ಕಡ್ಡಾಯ.
ಚಪ್ಪರದಲ್ಲಿ ತುಂಬಿ ತುಳುಕುತ್ತಿರುವ ತೊಂಡೆಕಾಯಿಗಳನ್ನು ತಿಂದು ಮುಗಿಸಲಾಗದಿದ್ದರೆ ಮಾರಾಟ ಮಾಡಿ ಹಣ ಗಳಿಸಬಹುದು. “ಮಾರಾಟ ಮಾಡಿ ಏನಾಗ್ಬೇಕಾಗಿದೆ….” ಅಂತೀರಾ? ಅದಕ್ಕೂ ಉಪಾಯವಿದೆ.
ತೊಂಡೆಕಾಯಿಗಳನ್ನು ಬೇಕಾದ ಆಕೃತಿಯಲ್ಲಿ ಸಿಗಿದು ಉಪ್ಪು ಬೆರೆಸಿ, ಬಿಸಿಲಿಗೆ ಇಟ್ಟು ಒಣಗಿಸಿ. ಚೆನ್ನಾಗಿ ಒಣಗಿದ ನಂತರ ಡಬ್ಬದಲ್ಲಿ ತುಂಬಿಸಿ ದಾಸ್ತಾನು ಇಡಬಹುದು. ಬೇಕಿದ್ದಾಗ ಎಣ್ಣೆಯಲ್ಲಿ ಕರಿದು, ತೊಂಡೆಯ ಬಾಳ್ಕ ಅನ್ನಿ, ಸಾರು ಅನ್ನದೊಂದಿಗೆ ಮಳೆಗಾಲದಲ್ಲಿ ತಿನ್ನಲು ರುಚಿ.