ನೀವು ಮನೆಯಲ್ಲಿ ಕೊಳ್ಳುವ ಒಂದು ಲೀಟರ್ ಎಣ್ಣೆಯ ಪ್ಯಾಕೆಟ್ ಹಿಂಭಾಗದಲ್ಲಿ ಎಷ್ಟು ದ್ರವ್ಯರಾಶಿಯೆಂದು ಬರೆದಿರುವುದನ್ನು ಗಮನಿಸಿದ್ದೀರಾ? ಗಮನಿಸಿಲ್ಲದಿದ್ದರೆ ಖಂಡಿತ ಗಮನಿಸಿ.
ಒಂ ದೇ ಗಾತ್ರದ ಮೂರು ಲೋಟಗಳನ್ನು ತೆಗೆದುಕೊಂಡು ಒಂದು ಲೋಟದಲ್ಲಿ ಕಲ್ಲು, ಒಂದು ಲೋಟದಲ್ಲಿ ನೀರು, ಒಂದು ಖಾಲಿ ಲೋಟ (ಲೋಟ ನಿಜವಾಗಿಯೂ ಖಾಲಿ ಇದೆಯೇ?). ಆ ಲೋಟದಲ್ಲಿ ಗಾಳಿ ಇರುತ್ತದೆ.
ಈ ಮೂರು ಲೋಟಗಳಲ್ಲಿ ಯಾವುದರ ದ್ರವ್ಯರಾಶಿ ಹೆಚ್ಚು?
ಅಳೆಯುವುದಕ್ಕೆ ಮುಂಚೆಯೇ ಕಲ್ಲಿನ ಲೋಟದ ದ್ರವ್ಯರಾಶಿ ನೀರಿನ ಲೋಟದ ದ್ರವ್ಯರಾಶಿಗಿಂತ ಹೆಚ್ಚು ಎಂಬ ಉತ್ತರವನ್ನು ನಿರೀಕ್ಷಿಸಬಹುದು. ಆದರೆ ಕಲ್ಲಿನ ಲೋಟದ ದ್ರವ್ಯರಾಶಿ ನೀರಿನ ಲೋಟದ ದ್ರವ್ಯರಾಶಿಗಿಂತ ಹೆಚ್ಚು ಎಂದರೆ ಅದಕ್ಕೆ ಕಾರಣವೇನಿರಬಹುದು?
ಕಲ್ಲು ಘನ ಸ್ಥಿತಿಯಲ್ಲಿದೆ ಮತ್ತು ನೀರು ದ್ರವ ಸ್ಥಿತಿಯಲ್ಲಿದೆ ಎಂಬುದು ಈಗಾಗಲೇ ತಿಳಿದಿರುವ ವಿಷಯ.
ಹಿಂದಿನ ಸಂಚಿಕೆಯಲ್ಲಿ ಘನ, ದ್ರವ, ಅನಿಲ ಸ್ಥಿತಿಗಳಲ್ಲಿ ಅಣುಗಳ ಜೋಡಣೆಯ ಬಗ್ಗೆಯೂ ತಿಳಿದಿದ್ದೇವೆ.
ಕಲ್ಲಿನಲ್ಲಿ ಅಣುಗಳ ಜೋಡಣೆಯು ಒತ್ತೊತ್ತಾಗಿರುವುದರಿಂದ ಮತ್ತು ನೀರಿನಲ್ಲಿ ಅಣುಗಳ ಜೋಡಣೆಯು ಸ್ವಲ್ಪ ವಿರಳವಾಗಿರುವುದರಿಂದ ಕಲ್ಲು ಮತ್ತು ನೀರನ್ನು ಒಂದೇ ಗಾತ್ರದಲ್ಲಿ ತೆಗೆದುಕೊಂಡಾಗ ಕಲ್ಲಿನಲ್ಲಿರುವ ಅಣುಗಳ ಸಂಖ್ಯೆ ನೀರಿನ ಅಣುಗಳ ಸಂಖ್ಯೆಗಿಂತ ಹೆಚ್ಚಾಗಿರಲು ಸಾಧ್ಯವಿರಬಹುದು. ಅಣುಗಳ ಸಂಖ್ಯೆಯಲ್ಲಿ ಬರುವ ವ್ಯತ್ಯಾಸ ಕಲ್ಲಿನ ದ್ರವ್ಯರಾಶಿಯು ನೀರಿನ ದ್ರವ್ಯರಾಶಿಗಿಂತ ಹೆಚ್ಚಾಗಿ ಬರುವುದಕ್ಕೆ ಕಾರಣವಿರಬಹುದೇ?
ಅದೇ ರೀತಿ ಗಾಳಿಯ ಅಣುಗಳಿಗಿಂತ ನೀರಿನಲ್ಲಿ ಅಣುಗಳ ಸಂಖ್ಯೆ ಹೆಚ್ಚಾಗಿರುವುದರಿಂದ ನೀರಿನ ಲೋಟದ ದ್ರವ್ಯರಾಶಿ ಗಾಳಿಯ ಲೋಟದ ದ್ರವ್ಯರಾಶಿಗಿಂತ ಹೆಚ್ಚು ಎಂದು ಹೇಳಬಹುದಲ್ಲವೇ?
ಸಮಗಾತ್ರದ ಒಂದು ಲೋಹದ ತುಂಡು ಮತ್ತು ಒಂದು ಮರದ ತುಂಡು ತೆಗೆದುಕೊಂಡಾಗ ಯಾವುದರ ದ್ರವ್ಯರಾಶಿ ಹೆಚ್ಚು ಯಾವುದರ ದ್ರವ್ಯರಾಶಿ ಕಡಮೆ ಎಂದು ಕೇಳಿದಾಗ ಅನುಭವದಿಂದ ಬರುವುದು ಉತ್ತರ ತಟ್ಟನೆ ಲೋಹದ ತುಂಡಿನ ದ್ರವ್ಯರಾಶಿಯೆಂದು. ಆದರೆ ಎರಡೂ ವಸ್ತುಗಳೂ ಘನಸ್ಥಿತಿಯಲ್ಲಿ ಇರುವುದರಿಂದ ಎರಡರಲ್ಲೂ ಅಣುಗಳ ಜೋಡಣೆ ಒತ್ತೊತ್ತಾಗಿರುವುದರಿಂದ ಅಣುಗಳ ಸಂಖ್ಯೆಯಲ್ಲಿ ವ್ಯತ್ಯಾಸವಿರಬಹುದೆಂದು ತೀರ್ಮಾನಿಸಲು ಸಾಧ್ಯವಿಲ್ಲ.
ಭಿನ್ನ ವಸ್ತುಗಳ ದ್ರವ್ಯರಾಶಿಯ ವ್ಯತ್ಯಾಸಕ್ಕೆ ಒಂದೊಂದು ಅಣುವಿನ ರಾಶಿಯೂ ಕಾರಣವೇ?
ನಾವು ಇಲ್ಲಿ ಎರಡು ಉದಾಹರಣೆಗಳನ್ನು ನೋಡೋಣ.
ಉದಾಹರಣೆಗೆ: ಸಮಗಾತ್ರದ ಲೆದರ್ ಚೆಂಡುಗಳನ್ನು ಮತ್ತು ಪ್ಲಾಸ್ಟಿಕ್ ಚೆಂಡುಗಳನ್ನು ತೆಗೆದುಕೊಳ್ಳಿ. ಸಮಗಾತ್ರದ ಎರಡು ಚೀಲಗಳನ್ನು ತೆಗೆದುಕೊಂಡು ಒಂದರಲ್ಲಿ ಲೆದರ್ ಚೆಂಡುಗಳನ್ನು ಮತ್ತೊಂದರಲ್ಲಿ ಪ್ಲಾಸ್ಟಿಕ್ ಚೆಂಡುಗಳನ್ನು ತುಂಬಿ ಅಳತೆ ಮಾಡಿದಾಗ ಯಾವುದರ ದ್ರವ್ಯರಾಶಿ ಹೆಚ್ಚಾಗಿರಬಹುದು? ಕಾರಣವೇನು?
ಒಂದು ಲೆದರ್ ಚೆಂಡಿನ ದ್ರವ್ಯರಾಶಿ ಒಂದು ಪ್ಲಾಸ್ಟಿಕ್ ಚೆಂಡಿನ ದ್ರವ್ಯರಾಶಿಗಿಂತ ಹೆಚ್ಚಾಗಿರುವುದರಿಂದ ಲೆದರ್ ಚೆಂಡುಗಳ ಚೀಲದ ದ್ರವ್ಯರಾಶಿ ಹೆಚ್ಚು ಎಂಬ ಉತ್ತರ ನಿರೀಕ್ಷಿಸಬಹುದು.
ಉದಾಹರಣೆಗೆ: ಸಮಗಾತ್ರದ ಎರಡು ಚೀಲಗಳನ್ನು ತೆಗೆದುಕೊಂಡು ಒಂದರಲ್ಲಿ ಗೋಧಿಯನ್ನು ಮತ್ತೊಂದರಲ್ಲಿ ಪುರಿಯನ್ನು ತುಂಬಿ ಅಳತೆ ಮಾಡಿದಾಗ ಯಾವುದರ ದ್ರವ್ಯರಾಶಿ ಹೆಚ್ಚು? ಒಂದು ಗೋಧಿಯ ಕಾಳಿನ ದ್ರವ್ಯರಾಶಿ ಒಂದು ಪುರಿಯ ಕಾಳಿನ ದ್ರವ್ಯರಾಶಿಗಿಂತ ಹೆಚ್ಚಾಗಿರಬಹುದು ಮತ್ತು ಗೋಧಿಯ ಚೀಲದಲ್ಲಿರುವ ಗೋಧಿಯ ಕಾಳುಗಳ ಸಂಖ್ಯೆಯು ಪುರಿಯ ಚೀಲದಲ್ಲಿರುವ ಪುರಿಯ ಕಾಳುಗಳ ಸಂಖ್ಯೆಗಿಂತ ಹೆಚ್ಚಾಗಿರಬಹುದು. ಆದ್ದರಿಂದ ಗೋಧಿಯ ದ್ರವ್ಯರಾಶಿ ಹೆಚ್ಚು ಬರುತ್ತದೆ ಎಂದು ಭಾವಿಸಬಹುದು.
ಲೋಹದ ತುಂಡಿನಲ್ಲಿರುವ ಒಂದೊಂದು ಅಣುವಿನ ದ್ರವ್ಯರಾಶಿ ಮರದ ತುಂಡಿನಲ್ಲಿರುವ ಒಂದೊಂದು ಅಣುವಿನ ದ್ರವ್ಯರಾಶಿಗಿಂತ ಹೆಚ್ಚಾಗಿರಬಹುದು. ಇದರಿಂದ ಲೋಹದ ದ್ರವ್ಯರಾಶಿ ಮರದ ತುಂಡಿನ ದ್ರವ್ಯರಾಶಿಗಿಂತ ಹೆಚ್ಚಾಗಿರಬಹುದು. ಹಾಗೆಯೇ ಲೋಹದ ತುಂಡಿನಲ್ಲಿರುವ ಅಣುಗಳ ಸಂಖ್ಯೆ ಮರದ ತುಂಡಿನಲ್ಲಿರುವ ಅಣುಗಳ ಸಂಖ್ಯೆಗಿಂತ ಹೆಚ್ಚಾಗಿರಬಹುದು.
ಅಂದರೆ ದ್ರವ್ಯರಾಶಿಯು ಒಂದು ವಸ್ತುವಿನಲ್ಲಿರುವ ಅಣುಗಳ ಸಂಖ್ಯೆ ಮತ್ತು ಆ ವಸ್ತುವಿನಲ್ಲಿರುವ ಒಂದೊಂದು ಅಣುವಿನ ರಾಶಿಯ ಮೇಲೂ ಅವಲಂಬಿತವಾಗಿರುತ್ತದೆ.
ಎರಡು ಸಮಗಾತ್ರದ ಬಾಟಲುಗಳಲ್ಲಿ ಎಣ್ಣೆ ಮತ್ತು ನೀರನ್ನು ತೆಗೆದುಕೊಂಡು ಇವೆರಡರಲ್ಲಿ ಯಾವುದರ ದ್ರವ್ಯರಾಶಿ ಹೆಚ್ಚು ಎಂದರೆ ಕೂಡಲೆ ಉತ್ತರ ಬರುವುದು ಎಣ್ಣೆಯ ದ್ರವ್ಯರಾಶಿ ಹೆಚ್ಚು ಎಂದು.
ಆದರೆ ನಾವು ಅವೆರಡರ ದ್ರವ್ಯರಾಶಿಯನ್ನು ಅಳತೆ ಮಾಡಿದಾಗ ನಮಗಾಗುವ ಆಶ್ಚರ್ಯ ಎಂದರೆ ನೀರಿನ ದ್ರವ್ಯರಾಶಿ ಎಣ್ಣೆಯ ದ್ರವ್ಯರಾಶಿಗಿಂತ ಹೆಚ್ಚಾಗಿರುತ್ತದೆ. ಕಾರಣವೇನು?
ಎಣ್ಣೆ ಮತ್ತು ನೀರು ಎರಡು ವಸ್ತುಗಳು ಯಾವ ಸ್ಥಿತಿಯಲ್ಲಿದೆ?
ಎರಡು ದ್ರವ ವಸ್ತುಗಳೇ ಆಗಿದ್ದರೂ ಮತ್ತು ಎರಡು ಸಮಪ್ರಮಾಣದಲ್ಲೇ ಇದ್ದರೂ ನೀರಿನ ದ್ರವ್ಯರಾಶಿ ಹೆಚ್ಚು ಬರಲು ಕಾರಣವೇನು?
ನೀರಿನ ಒಂದೊಂದು ಅಣುವಿನ ರಾಶಿಯು ಎಣ್ಣೆಯ ಒಂದೊಂದು ಅಣುವಿನ ರಾಶಿಗಿಂತ ಹೆಚ್ಚಾಗಿರಬಹುದು ಅಥವಾ ನೀರಿನಲ್ಲಿರುವ ಅಣುಗಳ ಸಂಖ್ಯೆಯು ಎಣ್ಣೆಯಲ್ಲಿರುವ ಅಣುಗಳ ಸಂಖ್ಯೆಗಿಂತ ಹೆಚ್ಚಾಗಿರಬಹುದು. ಕಾರಣ ಎರಡೂ ಇರಬಹುದು ಅಥವಾ ಯಾವುದಾದರೂ ಒಂದು ಇರಬಹುದು.
ನೀವು ಮನೆಯಲ್ಲಿ ಕೊಳ್ಳುವ ಒಂದು ಲೀಟರ್ ಎಣ್ಣೆಯ ಪ್ಯಾಕೆಟ್ ಹಿಂಭಾಗದಲ್ಲಿ ಎಷ್ಟು ದ್ರವ್ಯರಾಶಿಯೆಂದು ಬರೆದಿರುವುದನ್ನು ಗಮನಿಸಿದ್ದೀರಾ? ಗಮನಿಸಿಲ್ಲದಿದ್ದರೆ ಖಂಡಿತ ಗಮನಿಸಿ.