ದ್ರವ್ಯರಾಶಿ ಹೆಚ್ಚಿದಂತೆ ಹೆಚ್ಚುವುದು ಸಾಂದ್ರತೆ ಕೇವಲ ಗಾತ್ರ ಸಮವಿದ್ದಲ್ಲಿ ಗಾತ್ರ ಹೆಚ್ಚಿದಂತೆ ತಗ್ಗುವುದು ಸಾಂದ್ರತೆ ಕೇವಲ ದ್ರವ್ಯರಾಶಿ ಸಮವಿದ್ದಲ್ಲಿ ಗಾತ್ರ, ದ್ರವ್ಯರಾಶಿಗಳೆರಡನ್ನು ಅವಲಂಬಿಸಿದೆ ಸಾಂದ್ರತೆ
ಎರಡು ವಸ್ತುಗಳ ಗಾತ್ರ, ದ್ರವ್ಯರಾಶಿ ಸಮವಿಲ್ಲದಿದ್ದರೆ ವಸ್ತುವಿನ ಸಾಂದ್ರತೆಯನ್ನು ಹೇಗೆ ಕಂಡುಹಿಡಿಯುವುದೆಂದು ಈಗಾಗಲೇ ಹಿಂದಿನ ಸಂಚಿಕೆಯಲ್ಲಿ ಓದಿ ತಿಳಿದಿದ್ದೇವೆ.
ಮುಂದಿನ ಸವಾಲೆಂದರೆ, ಎರಡು ಸಮಗಾತ್ರದ ವಸ್ತುಗಳನ್ನು (ಮರದ ತುಂಡು ಮತ್ತು ಕಬ್ಬಿಣದ ತುಂಡು) ಕೊಟ್ಟಾಗ ಯಾವುದರ ಸಾಂದ್ರತೆ ಹೆಚ್ಚು ಯಾವುದರ ಸಾಂದ್ರತೆ ಕಡಮೆ ಎಂದು ಹೇಗೆ ಹೇಳುವಿರಿ?
ಎರಡು ವಸ್ತುಗಳ ಗಾತ್ರ ಹಾಗೂ ದ್ರವ್ಯರಾಶಿಯನ್ನು ಮೊದಲು ಕಂಡುಹಿಡಿದು ಅನಂತರ ಸೂತ್ರವನ್ನು ಉಪಯೋಗಿಸಿ ಸಾಂದ್ರತೆಯನ್ನು ಕಂಡುಹಿಡಿದು ಹೋಲಿಸಿ ಹೇಳುವ ವಿಧಾನವೇನೋ ಸರಿ. ಆದರೆ ಅದಕ್ಕಿಂತ ಸುಲಭವಾಗಿ ಯಾವುದರ ಸಾಂದ್ರತೆ ಹೆಚ್ಚು ಎಂದು ಹೇಳುವುದು ಹೇಗೆ?
ಇಲ್ಲಿ ಎರಡು ವಸ್ತುಗಳ ಗಾತ್ರ ಸಮ ಆಗಿರುವುದರಿಂದ ನಾವು ಈ ಎರಡು ವಸ್ತುಗಳಲ್ಲಿ ಏನನ್ನು ಅಳತೆ ಮಾಡಬೇಕು?
ಆ ಎರಡು ವಸ್ತುಗಳ ದ್ರವ್ಯರಾಶಿಯನ್ನು ಅಳತೆ ಮಾಡಿದಾಗ ಯಾವುದರ ದ್ರವ್ಯರಾಶಿ ಹೆಚ್ಚು ಬರುವುದೋ ಅದರ ಸಾಂದ್ರತೆ ಹೆಚ್ಚು, ಯಾವುದರ ದ್ರವ್ಯರಾಶಿ ಕಡಮೆ ಬರುವುದೊ ಅದರ ಸಾಂದ್ರತೆ ಕಡಮೆ ಎಂದು ಹೇಳಬಹುದಲ್ಲವೇ? ಆದ್ದರಿಂದ ಮರದ ತುಂಡಿನ ದ್ರವ್ಯರಾಶಿ ಕಬ್ಬಿಣದ ತುಂಡಿನ ದ್ರವ್ಯರಾಶಿಗಿಂತ ಕಡಮೆ ಇರುವುದರಿಂದ ಕಬ್ಬಿಣದ ಸಾಂದ್ರತೆ ಹೆಚ್ಚು.
ಎರಡು ಸಮದ್ರವ್ಯರಾಶಿ ಇರುವ ವಸ್ತುಗಳನ್ನು ತೆಗೆದುಕೊಂಡಾಗ ಯಾವುದರ ಸಾಂದ್ರತೆ ಹೆಚ್ಚು ಯಾವುದರ ಸಾಂದ್ರತೆ ಕಡಮೆ ಎಂದು ಹೇಗೆ ಹೇಳುವಿರಿ?
ಉದಾಹರಣೆ:
೫೦ ಗ್ರಾಂ ದ್ರವ್ಯರಾಶಿ ಇರುವ ಕಬ್ಬಿಣದ ಬೊಟ್ಟು ಮತ್ತು ೫೦ ಗ್ರಾಂ ದ್ರವ್ಯರಾಶಿ ಇರುವ ಥರ್ಮೊಕೋಲ್ ಹಲಗೆಯನ್ನು ಉದಾಹರಣೆಯಾಗಿ ತೆಗೆದುಕೊಳ್ಳಿ. ಇಲ್ಲಿ ಎರಡು ವಸ್ತುಗಳ ದ್ರವ್ಯರಾಶಿ ಸಮ ಆಗಿರುವುದರಿಂದ ನಾವು ಈ ಎರಡು ವಸ್ತುಗಳಲ್ಲಿ ಏನನ್ನು ಅಳತೆ ಮಾಡಬೇಕು?
ಬಹುಷಃ ಗಾತ್ರವನ್ನು…. ಆದರೆ ಗಾತ್ರವನ್ನು ಅಳೆಯುವ ಆವಶ್ಯಕತೆ ಇದೆಯೇ?
ಯಾವುದು ದೊಡ್ಡದಾಗಿ ಕಾಣುತ್ತದೆಯೋ ಅದರ ಗಾತ್ರ ಹೆಚ್ಚು ಎಂದು ಹೇಳಬಹುದಲ್ಲವೇ?
ಎರಡು ವಸ್ತುಗಳಲ್ಲಿ ಯಾವುದರ ಗಾತ್ರ ಚಿಕ್ಕದಾಗಿರುತ್ತದೊ ಅದರ ಸಾಂದ್ರತೆ ಹೆಚ್ಚು ಮತ್ತು ಯಾವುದರ ಗಾತ್ರ ದೊಡ್ಡದಾಗಿರುತ್ತದೊ ಅದರ ಸಾಂದ್ರತೆ ಕಡಮೆ ಎಂದು ಹೇಳಬಹುದು.
ಆದ್ದರಿಂದ ಥರ್ಮೊಕೋಲ್ ಹಲಗೆಯ ಗಾತ್ರ ಕಬ್ಬಿಣದ ಬೊಟ್ಟಿನ ಗಾತ್ರಕ್ಕಿಂತ ಹೆಚ್ಚು ಇರುವುದರಿಂದ ಕಬ್ಬಿಣದ ಬೊಟ್ಟಿನ ಸಾಂದ್ರತೆ ಹೆಚ್ಚು.
ಭಾರ ಇರುವ ವಸ್ತುಗಳು ಮುಳುಗುತ್ತವೆ, ಹಗುರ ಇರುವ ವಸ್ತುಗಳು ತೇಲುತ್ತವೆ. ಇದು ಸರಿಯೇ?
ಒಂದು ಕಲ್ಲು ಮತ್ತು ಮರದ ತುಂಡನ್ನು ನೀರಿನಲ್ಲಿ ಹಾಕಿದರೆ ಯಾವುದು ಮುಳುಗುತ್ತದೆ ಯಾವುದು ತೇಲುತ್ತದೆ?
ಕಲ್ಲು ಮುಳುಗಲು, ಮರದ ತುಂಡು ತೇಲಲು ಕಾರಣವೇನು?
ಕಲ್ಲು ಭಾರ ಇರುವುದರಿಂದ ಮುಳುಗಿತು ಮತ್ತು ಮರದ ತುಂಡು ಹಗುರ ಇರುವುದರಿಂದ ತೇಲಿತು ಎನ್ನಬಹುದೇ?
ಅತಿ ಸಣ್ಣಕಲ್ಲು ಮತ್ತು ದೊಡ್ಡ ಮರದ ತುಂಡು (ಇಲ್ಲಿ ಸಣ್ಣಕಲ್ಲಿಗಿಂತ ಮರದ ತುಂಡು ಭಾರವಿರುತ್ತದೆ) ನೀರಿನಲ್ಲಿ ಹಾಕಿದಾಗ ಏನಾಗುತ್ತದೆ?
ಆಗಲೂ ಸಹ ಸಣ್ಣಕಲ್ಲು ಮುಳುಗುತ್ತದೆ ಮತ್ತು ದೊಡ್ಡ ಮರದ ತುಂಡು ತೇಲುತ್ತದೆ.
ನಾವು ಇಲ್ಲಿ ಗಮನಿಸಬೇಕಾದ ಮಖ್ಯ ಅಂಶವೇನೆಂದರೆ “ಭಾರ ಮತ್ತು ಹಗುರ ಇರುವುದರಿಂದ ವಸ್ತುಗಳು ಮುಳುಗುತ್ತದೆ, ತೇಲುತ್ತದೆ ಎಂಬುದು ತಪ್ಪು.”
ವಸ್ತುಗಳು ಯಾವುದಾದರೂ ದ್ರವದಲ್ಲಿ ತೇಲುತ್ತದೆಯೇ ಅಥವಾ ಮುಳುಗುತ್ತದೆಯೇ ಹೇಳುವುದು ಹೇಗೆ? ಇದನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ…..