ಅಣುಗಳ ರಾಶಿಯೆಲ್ಲ ಸೇರಿ ಆಗುವುದು ದ್ರವ್ಯರಾಶಿ
ಗುರುತ್ವ ವೇಗೋತ್ಕರ್ಷ ಸೇರಿ ಆಗುವುದು ತೂಕ
ಅಳೆದಾಗ ಸಿಗುವುದು ದ್ರವ್ಯರಾಶಿ
ಆದರೂ ತಿಳಿಯುವೆವು ತೂಕವೆಂದು
ಸಮನಾಗಿರುವುದು ದ್ರವ್ಯರಾಶಿ ಭೂಮಿಚಂದ್ರನಲಿ
ಅನುಭವಿಸುವೆವು ವ್ಯತ್ಯಾಸ ತೂಕದಲಿ
ಕಲ್ಲು ಒಂದು ದ್ರವ್ಯ ಮತ್ತು ಕಲ್ಲು ಕಲ್ಲಿನ ಅಣುಗಳಿಂದ ಜೋಡಿಸಿದೆ ಎಂದು ಈಗಾಗಲೇ ಹಿಂದಿನ ಸಂಚಿಕೆಯಲ್ಲಿ ತಿಳಿದುಕೊಂಡಿದ್ದೇವೆ. ಒಂದೊಂದು ಕಲ್ಲಿನ ಅಣುವಿಗೂ ರಾಶಿಯಿದೆ. ಹಾಗಾದರೆ ಇಡೀ ಕಲ್ಲಿನ ದ್ರವ್ಯರಾಶಿ ಎಷ್ಟು ಎಂದರೆ ಕಲ್ಲಿನಲ್ಲಿರುವ ಒಟ್ಟು ಕಲ್ಲಿನ ಅಣುಗಳ ರಾಶಿಯ ಮೊತ್ತ ಎನ್ನಬಹುದು.
ಅದೇ ಕಲ್ಲನ್ನು ತಕ್ಕಡಿಯಲ್ಲಿ ಅಳತೆ ಮಾಡಿದಾಗ ನಮಗೆ ದೊರೆಯುವುದು ಕಲ್ಲಿನ ದ್ರವ್ಯರಾಶಿಯಲ್ಲವೇ?
ಆದರೆ ನಾವು ಅದನ್ನು ಕಲ್ಲಿನ ತೂಕ ಎಂದು ಬಳಸುತ್ತೇವೆ. ಹಾಗಾದರೆ ದ್ರವ್ಯರಾಶಿ ಮತ್ತು ತೂಕ ಎರಡೂ ಒಂದೇ ಭೌತಿಕ ಪರಿಮಾಣವನ್ನು ಸೂಚಿಸುವುದೇ ಅಥವಾ ಬೇರೆ ಪರಿಮಾಣಗಳೇ ಎಂಬ ಸಂಶಯ ಹುಟ್ಟುತ್ತದೆ.
ಈ ಸಂಶಯಕ್ಕೆ ಅನುಗುಣವಾಗಿ ಮತ್ತೊಂದು ವಿಷಯವನ್ನು ಸಾಮಾನ್ಯವಾಗಿ ನಾವೆಲ್ಲರೂ ಎಲ್ಲಾದರೂ ಓದಿ ತಿಳಿದಿದ್ದೇವೆ. ಒಂದು ವಸ್ತುವಿನ ದ್ರವ್ಯರಾಶಿ ಭೂಮಿ ಮತ್ತು ಚಂದ್ರನ ಮೇಲೆ ಒಂದೇ ಆಗಿರುತ್ತದೆ; ಆದರೆ ಅದೇ ವಸ್ತುವಿನ ತೂಕ ಭೂಮಿ ಮತ್ತು ಚಂದ್ರನ ಮೇಲೆ ಬೇರೆ ಇರುತ್ತದೆ. ಇದು ಹೇಗೆ? ಹಾಗಾದರೆ ತೂಕ ಎಂಬುದು ದ್ರವ್ಯರಾಶಿಯಲ್ಲ ಎಂದು ಖಚಿತವಾದರೂ ಮತ್ತೇನು ಎಂಬ ಗೊಂದಲ ಉಳಿದೇ ಇದೆ?
ನಾವು ಸಾಮಾನ್ಯವಾಗಿ ಬಳಸುವ ಪದ ತೂಕವಾಗಿದ್ದರೂ ಅದು ಆ ವಸ್ತುವಿನ ದ್ರವ್ಯರಾಶಿ. ಆದರೆ ಆಡುಭಾಷೆಯಲ್ಲಿ ತೂಕ ಎನ್ನುವುದು ರೂಢಿಯಲ್ಲಿದೆ. ಒಂದು ವಸುವಿನ ದ್ರವ್ಯರಾಶಿ ಭೂಮಿಯಲ್ಲಿ ಅಳೆದರೂ ಅಥವ ಚಂದ್ರನಲ್ಲಿ ಅಳೆದರೂ ಒಂದೇ ಸಮವಿರುತ್ತದೆ. ಕಾರಣ ಆ ವಸ್ತುವಿನ ಅಣುಗಳ ಸಂಖ್ಯೆ ಅಥವಾ ಒಂದೊಂದು ಅಣುವಿನ ರಾಶಿ ಬದಲಾಗಲು ಸಾಧ್ಯವಿಲ್ಲ. ಆದ್ದರಿಂದ ವಸ್ತುವಿನ ದ್ರವ್ಯರಾಶಿ ಭೂಮಿ ಮತ್ತು ಚಂದ್ರನ ಮೇಲೆ ಒಂದೇ ಆಗಿರುತ್ತದೆ.
ಈಗ ಉಳಿಯುವ ಪ್ರಶ್ನೆ, ವಸ್ತುವಿನ ತೂಕ ಭೂಮಿ ಮತ್ತು ಚಂದ್ರನ ಮೇಲೆ ವ್ಯತ್ಯಾಸವಿರಲು ಕಾರಣವೇನು?
ಇದು ತಿಳಿಯುವ ಮುಂಚೆ ತೂಕ ಎನ್ನುವ ಭೌತಿಕ ಪರಿಮಾಣದ ಅರ್ಥವನ್ನು ತಿಳಿಯೋಣ.
ಒಂದು ವಸ್ತುವನ್ನು ಕೈಯಲ್ಲಿ ಹಿಡಿದಾಗ ಆ ವಸ್ತುವಿನ ತೂಕವನ್ನು ಇಷ್ಟೇ ಎಂದು ಖಚಿತವಾಗಿ ಹೇಳಲು ಸಾಧ್ಯವಾಗದಿದ್ದರೂ ವಸ್ತುವಿನ ತೂಕವನ್ನು ಅನುಭವಿಸುತ್ತೇವೆ. ಭೂಮಿಯ ಮೇಲೆ ಪ್ರತಿಯೊಂದು ವಸ್ತು ಅಥವಾ ದ್ರವ್ಯ ಭೂಮಿಯ ಗುರುತ್ವಾಕರ್ಷಣ ಬಲಕ್ಕೆ ಒಳಗೊಂಡಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ನಾವು ಒಂದು ವಸ್ತುವನ್ನು ಹಿಡಿದಾಗ ಭೂಮಿಯ ಗುರುತ್ವಾಕರ್ಷಣದ ಬಲಕ್ಕೆ ವಿರುದ್ಧವಾಗಿ ನಾವು ಬಲ ಪ್ರಯೋಗ ಮಾಡಿ ಹಿಡಿದಿದ್ದೇವೆ ಎಂದರೆ ತಪ್ಪಾಗಲಾರದು.
ಹೀಗಿರುವಾಗ ನಾವು ಅನುಭವಿಸುವ ವಸ್ತುವಿನ ತೂಕ ಆ ವಸ್ತುವಿನ ದ್ರವ್ಯರಾಶಿ ಹಾಗೂ ಭೂಮಿಯ ಗುರುತ್ವಾಕರ್ಷಣದ ಬಲ ಎರಡನ್ನೂ ಅವಲಂಬಿಸಿರುತ್ತದೆ.
ಭೂಮಿಯ ಗುರುತ್ವಾಕರ್ಷಣದ ಬಲ ಚಂದ್ರನ ಗುರುತ್ವಾಕರ್ಷಣದ ಬಲ ಎರಡೂ ಬೇರೆ ಬೇರೆ ಎಂಬುದು ನಮಗೆ ತಿಳಿದಿದೆ ಮತ್ತು ಭೂಮಿಯ ಗುರುತ್ವಾಕರ್ಷಣದ ಬಲ ಚಂದ್ರನ ಗುರುತ್ವಾಕರ್ಷಣದ ಬಲಕ್ಕಿಂತ ಹೆಚ್ಚು ಎಂದು ಸಹ ತಿಳಿದಿದ್ದೇವೆ.
ವಸ್ತುವಿನ ದ್ರವ್ಯರಾಶಿ ಭೂಮಿ ಮತ್ತು ಚಂದ್ರನ ಮೇಲೆ ಸಮವಿರುವುದರಿಂದ ಮತ್ತು ಗುರುತ್ವಾಕರ್ಷಣ ಬಲದಲ್ಲಿ ವ್ಯತ್ಯಾಸವಿರುವುದರಿಂದ ವಸ್ತುವಿನ ತೂಕದಲ್ಲಿ ಭೂಮಿ ಮತ್ತು ಚಂದ್ರನ ಮೇಲೆ ವ್ಯತ್ಯಾಸ ಕಂಡುಬರುವುದು ಸಹಜ.
ಒಂದು ವಸ್ತುವನ್ನು ನಾವು ಭೂಮಿಯಲ್ಲಿ ಅಳೆದಾಗ ೧೦ ಕಿಲೋಗ್ರಾಂ ಎಂದರೆ ಆ ವಸ್ತುವಿನ ದ್ರವ್ಯರಾಶಿ ಚಂದ್ರನ ಮೇಲೆ ಎಷ್ಟಿರಬಹುದು? ಮತ್ತು ತೂಕದಲ್ಲಿ ಬರುವ ವ್ಯತ್ಯಾಸವನ್ನು ಹೇಗೆ ಕಂಡುಹಿಡಿಯಬಹುದು?
ವಸ್ತುವಿನ ದ್ರವ್ಯರಾಶಿ ಭೂಮಿಯ ಮೇಲೆ ೧೦ ಕಿ.ಗ್ರಾಂ ಆದರೆ ಚಂದ್ರನ ಮೇಲೂ ೧೦ ಕಿ.ಗ್ರಾಂ ಇರುತ್ತದೆ. ಆದರೆ ಅದೇ ವಸ್ತುವನ್ನು ನಾವು ಭೂಮಿಯಲ್ಲಿ ಹಿಡಿದಾಗ ಅನುಭವಿಸುವ ತೂಕ ಚಂದ್ರನ ಮೇಲೆ ಅನುಭವಿಸುವ ತೂಕಕ್ಕಿಂತ ಹೆಚ್ಚಿರುತ್ತದೆ.
ತೂಕ = ದ್ರವ್ಯರಾಶಿ ಘಿ ಗುರುತ್ವಾಕರ್ಷಣ ಬಲದ ವೇಗ (ಗುರುತ್ವ ವೇಗೋತ್ಕರ್ಷ)?