ಗಟ್ಟಿ ಇಲ್ಲದಿದ್ದರೂ ಆಗುವುದು ಇಡ್ಲಿ ಒಂದು ವಸ್ತು
ಹರಿಯುವಂತ್ತಿದ್ದರೂ ಆಗುವುದು ನೀರು ಒಂದು ವಸ್ತು
ಕಾಣದಿದ್ದರೂ ಆಗುವುದು ವಾಸನೆ ಒಂದು ವಸ್ತು
ಎಲ್ಲೆಡೆ ಇರುವ ಶಬ್ದ ಆಗುವುದೇ ಒಂದು ವಸ್ತು
ಎಲ್ಲೆಡೆ ಇರುವ ಬೆಳಕು ಆಗುವುದೇ ಒಂದು ವಸ್ತು
ಹಾಗಾದರೆ ಅನ್ನುವುದು ಯಾವುದನ್ನು ವಸ್ತು?
ನಾವು ದಿನನಿತ್ಯದಲ್ಲಿ ಅನೇಕ ವಸ್ತುಗಳನ್ನು ಉಪಯೋಗಿಸುತೇವೆ, ವಸ್ತುಗಳು ಎಂದರೆ ನಮಗೆ ಸಾಮಾನ್ಯವಾಗಿ ನೆನಪಿಗೆ ಬರುವುದು ಕಲ್ಲು, ಮಣ್ಣು, ಮರ, ಪೆನ್ನು, ಕುರ್ಚಿ, ಬಿಂದಿಗೆ ಮುಂತಾದವು.
ಹಾಗಾದರೆ ಯಾವುದನ್ನು ನಾವು ವಸ್ತು ಎಂದು ಕರೆಯುತ್ತೇವೆ? ಎಂಬ ಪ್ರಶ್ನೆ ಕೇಳಿದರೆ ಮಕ್ಕಳಿಂದ ಬರುವ ಉತ್ತರ ಗಟ್ಟಿಯಾಗಿರುವುದನ್ನು ನಾವು ವಸ್ತು ಎಂದು ಕರೆಯುತ್ತೇವೆ ಅಥವಾ ಕಣ್ಣಿಗೆ ಕಾಣಿಸುವವುಗಳನ್ನು ವಸ್ತು ಎಂದು ಕರೆಯುತ್ತೇವೆ ಎಂದು. ಜಾಗ ಆಕ್ರಮಿಸಿಕೊಳ್ಳುವುದನ್ನೆಲ್ಲಾ ವಸ್ತು ಎಂದು ಕರೆಯುತ್ತೇವೆ ಎಂಬ ಉತ್ತರ ಬಹಳ ಅಪರೂಪ.
ನೀರು ಗಟ್ಟಿಯಾಗಿಲ್ಲ ಎಂದರೆ ಅದು ವಸ್ತು ಅಲ್ಲವೇ? ನೀರು ಗಟ್ಟಿಯಾಗಿರದಿದ್ದರೂ ನೀರಿಗೆ ಜಾಗ ಬೇಕಲ್ಲವೇ? ಆದ್ದರಿಂದ ನೀರನ್ನು ಒಂದು ವಸ್ತು ಎಂದು ಹೇಳಬಹುದಲ್ಲವೆ? ಕಲ್ಲು, ಮಣ್ಣು, ಮರ, ಬಿಂದಿಗೆ, ನೀರು ಇವೆಲ್ಲ ಕಣ್ಣಿಗೆ ಕಾಣಿಸುತ್ತವೆ. ಗಾಳಿ ನಮ್ಮ ಕಣ್ಣಿಗೆ ಕಾಣುವುದಿಲ್ಲ. ಹಾಗಾದರೆ ಗಾಳಿ ಒಂದು ವಸ್ತುವೆ ಅಥವಾ ಅಲ್ಲವೇ?
ಗಾಳಿಗೆ ಜಾಗ ಬೇಕು ಎಂಬುದನ್ನು ಹಿಂದಿನ ಸಂಚಿಕೆಯಲ್ಲಿ ಪ್ರಯೋಗದ ಮೂಲಕ ತಿಳಿದಿದ್ದೇವೆ.
ಅಂದರೆ ಗಾಳಿಯನ್ನು ಒಂದು ವಸ್ತು ಎಂದು ಹೇಳಬಹುದಲ್ಲವೇ?
“ಜಾಗವನ್ನು ಆಕ್ರಮಿಸುವ” ಪ್ರತಿಯೊಂದನ್ನು ನಾವು ವಸ್ತು ಎಂದು ಹೇಳುತ್ತೇವೆ. ವಸ್ತುವನ್ನೇ ವೈಜ್ಞಾನಿಕ ಭಾಷೆಯಲ್ಲಿ ದ್ರವ್ಯ ಎಂದು ಕರೆಯುತ್ತೇವೆ.
ಕೆಳಗಿನ ಚಿತ್ರಗಳನ್ನು ತೋರಿಸಿ ಇವುಗಳು ಯಾವ ಆಕಾರದಲ್ಲಿದೆ ಎಂದು ಕೇಳಿದರೆ ಸುಲಭವಾಗಿ ಹೇಳುತ್ತೀರಾ ಅಲ್ಲವೇ?
ವೃತ್ತ, ಚೌಕ, ಆಯತ ಎಂದು. ಇವುಗಳಿಗೆಲ್ಲಾ ಆಕಾರ ಇದೆ ಎಂದಾದರೆ ಈ ಕೆಳಗಿನ ಚಿತ್ರಗಳಿಗೆ ಆಕಾರ ಇದೆಯೆ?
ಸಾಮಾನ್ಯವಾಗಿ ಬರುವ ಉತ್ತರ ಇಲ್ಲ ಎಂದು. ಹಾಗಾದರೆ ಆಕಾರ ಎಂದರೆ ಏನು? ಒಂದು ಬಾಳೆಹಣ್ಣಿನ ಅಥವಾ ಚಿಟ್ಟೆಯ ಆಕಾರ ಬರೆಯಲು ಹೇಳಿದಾಗ ಚಿತ್ರಬಿಡಿಸುವ ಮುನ್ನ ಆಕಾರದ ಕಲ್ಪನೆಯಾಗುವುದು ಸಹಜ. ಹೇಗೆ ಸಾಧ್ಯವಾಯಿತು?
ಬಾಳೆಹಣ್ಣು ಅಥವಾ ಚಿಟ್ಟೆ ಯಾವ ರೀತಿ ಕಾಣುವುದೋ ಅದೇ ಅವುಗಳ ಆಕಾರ ಎಂದು ಹೇಳಬಹುದು. ಅಂದರೆ ವಸ್ತುಗಳು ಯಾವ ರೀತಿ ಕಾಣಿಸುತ್ತವೆಯೊ ಅದೇ ಅವುಗಳ ಆಕಾರವಾದರೇ ಅಂಕು ಡೊಂಕಿನ ಕಾಗದದ ತುಂಡಿಗೂ ಆಕಾರ ಇದೆಯಲ್ಲವೇ? ಆದರೆ ಆ ಆಕಾರದ ಹೆಸರು ತಿಳಿದಿಲ್ಲ.
ಕಲ್ಲು ಅಥವಾ ಮರದ ತುಂಡಿಗೆ ತನ್ನದೇ ಆದ ಆಕಾರವಿರುತ್ತದೆ ಮತ್ತು ಅದರ ಆಕಾರವು ಬದಲಾವಣೆ ಆಗುತ್ತಿರುವುದಿಲ್ಲ. ಆಕಾರದ ಈ ಗುಣವನ್ನು ನಿರ್ದಿಷ್ಟ ಆಕಾರ ಎನ್ನಬಹುದು.
ನೀರಿಗೆ ನಿರ್ದಿಷ್ಟ ಆಕಾರವಿದೆಯೇ? ಪಾತ್ರೆ ಬದಲಿಸಿದಂತೆಲ್ಲಾ ನೀರಿನ ಆಕಾರ ಬದಲಾಗುತ್ತದೆ.
ಅದರ ಆಕಾರದಲ್ಲಿ ಬದಲಾವಣೆ ಆಯಿತು ಎಂದರೆ ನೀರಿಗೆ ನಿರ್ದಿಷ್ಟ ಆಕಾರವಿರಲು ಸಾದ್ಯವಿಲ್ಲ ಅಲ್ಲವೇ?
ಗಾಳಿಗೆ ನಿರ್ದಿಷ್ಟ ಆಕಾರ ಇದೆಯೇ? ಗಾಳಿಯು ಎಲ್ಲ ದಿಕ್ಕಿನಲ್ಲೂ ಹರಡುವುದರಿಂದ ಅದು ನಿರ್ದಿಷ್ಟ ಆಕಾರವನ್ನು ಹೊಂದಿಲ್ಲ ಎನ್ನಬಹುದಲ್ಲವೇ?
ಒಂದು ವಸ್ತುವಿನ ಗಾತ್ರ ಎಷ್ಟು ಎಂದರೆ ಒಂದು ವಸ್ತುವು ಎಷ್ಟು ಜಾಗವನ್ನು ಆಕ್ರಮಿಸುತ್ತದೊ ಅದೇ ಆ ವಸ್ತುವಿನ ಗಾತ್ರ ಎಂದು ಹೇಳಬಹುದು.. ಒಂದು ವಸ್ತುವಿನ ಆಕಾರ ಬದಲಾಯಿಸಿದರೂ ಗಾತ್ರದಲ್ಲಿ ಬದಲಾವಣೆ ಆಗದೇ ಇದ್ದರೆ ವಸ್ತುವಿಗೆ ನಿರ್ದಿಷ್ಟ ಗಾತ್ರ ಇದೆ ಎನ್ನುತ್ತೇವೆ.
ಕಲ್ಲು, ಮರದತುಂಡು, ಚಮಚ, ಸೀಸದಕಡ್ಡಿ, ಪುಸ್ತಕ ಇತ್ಯಾದಿ ವಸ್ತುಗಳಿಗೆ ನಿರ್ದಿಷ್ಟ ಆಕಾರ ಮತ್ತು ನಿರ್ದಿಷ್ಟ ಗಾತ್ರ ಇದೆ. ಈ ರೀತಿ ನಿರ್ದಿಷ್ಟ ಆಕಾರ ಮತ್ತು ನಿರ್ದಿಷ್ಟ ಗಾತ್ರ ಹೊಂದಿರುವ ವಸ್ತುಗಳು ಘನಸ್ಥಿತಿಯಲ್ಲಿವೆ ಎನ್ನುತ್ತೇವೆ. ಸಾಮಾನ್ಯವಾಗಿ ಇಂತಹ ವಸ್ತುಗಳನ್ನು ಘನವಸ್ತುಗಳು ಎನ್ನುವುದು ಅಭ್ಯಾಸವಾಗಿದೆ.
ನೀರಿಗೆ ನಿರ್ದಿಷ್ಟ ಗಾತ್ರ ಇದೆ ಎನ್ನಬಹುದೇ ಇಲ್ಲವೇ? ಒಂದು ಲೀಟರ್ ನೀರನ್ನು ಒಂದು ಪಾತ್ರೆಗೆ ಹಾಕಿದಾಗ ಅಷ್ಟೇ ನೀರನ್ನು ಚೊಂಬಿಗೆ ಹಾಕಿದಾಗ ಅದರ ಗಾತ್ರದಲ್ಲಿ ಏನಾದರೂ ಬದಲಾವಣೆ ಆಯಿತೇ? ಬದಲಾವಣೆ ಕಂಡುಬಂದಿದ್ದು ಆಕಾರದಲ್ಲೇ ಅಥವಾ ಗಾತ್ರದಲ್ಲೇ?ನೀರು, ಹಾಲು, ಎಣ್ಣೆ ಇತ್ಯಾದಿ ವಸ್ತುಗಳಿಗೆ, ನಿರ್ದಿಷ್ಟ ಆಕಾರ ಇಲ್ಲ ಆದರೆ , ನಿರ್ದಿಷ್ಟ ಗಾತ್ರ ಇದೆ.. ಇಂತಹ ವಸ್ತುಗಳನ್ನು ದ್ರವಸ್ಥಿತಿಯಲ್ಲಿವೆ ಅಥವಾ ದ್ರವವಸ್ತುಗಳು ಎನ್ನುತ್ತೇವೆ.
ಗಾಳಿಗೆ ನಿರ್ದಿಷ್ಟ ಗಾತ್ರ ಇದೆಯೆ? ಇದನ್ನು ಒಂದು ಪ್ರಯೋಗದ ಮೂಲಕ ತಿಳಿಯೋಣ?
ಸಾಮಗ್ರಿಗಳು: ಸಿರಂಜ್
ಪಿಸ್ಟೀನನ್ನು ಹಿಂದಕ್ಕೆ ಎಳೆದಾಗ ಸಿರಂಜಿನಲ್ಲಿ ಏನಿರುತ್ತದೆ?
ಅದರಲ್ಲಿ ಗಾಳಿಯಿರುತ್ತದೆ ಎಂದರೆ ಸಿರಂಜಿನ ಮುಂಭಾಗವನ್ನು ಮುಚ್ಚಿಕೊಂಡು ಪಿಸ್ಟೀನನ್ನು ಮುಂದಕ್ಕೆ ತಳ್ಳಿದಾಗ ಗಾಳಿಯನ್ನು ಸಂಕುಚಿತಗೊಳಿಸಿಂದಾ ಯಿತಲ್ಲವೇ.
ದೊಡ್ಡ ಜಾಗದಲ್ಲಿದ್ದ ಗಾಳಿಯನ್ನು ಚಿಕ್ಕ ಜಾಗದಲ್ಲಿ ಸಂಕುಚಿತಗೊಳಿಸಲು ಸಾದ್ಯವಾಯಿತು ಎಂದರೆ ಗಾಳಿಗೆ ನಿರ್ದಿಷ್ಟ ಗಾತ್ರ ಇರಲು ಸಾಧ್ಯವೇ?
ಗಾಳಿ, ಹೊಗೆ, ವಾಸನೆ ಇತ್ಯಾದಿ ವಸ್ತುಗಳಿಗೆ ನಿರ್ದಿಷ್ಟ ಗಾತ್ರ ಮತ್ತು ನಿರ್ದಿಷ್ಟ ಆಕಾರ ಎರಡೂ ಇಲ್ಲ.
ಈ ರೀತಿಯಾಗಿ ನಿರ್ದಿಷ್ಟ ಗಾತ್ರ ನಿರ್ದಿಷ್ಟ ಆಕಾರ ಇಲ್ಲದೆ ಇರುವ ವಸ್ತುಗಳನ್ನು ಅನಿಲಸ್ಥಿತಿಯಲ್ಲಿವೆ ಅಥವಾ ಅನಿಲವಸ್ತುಗಳು ಎಂದು ಹೇಳುವ ರೂಢಿಯಾಗಿದೆ.?