ಹಗುರವಿದೆಯೆಂದು ತೇಲದು
ಭಾರವಿದೆಯೆಂದು ಮುಳುಗದು ನೀರಿನಲಿ ವಸ್ತುವು
ವಸ್ತುವಿನ ಸಾಂದ್ರತೆ ನೀರಿನ ಸಾಂದ್ರತೆಗಿಂತ
ಹೆಚ್ಚಿದ್ದಲ್ಲಿ ಮುಳುಗುವುದು
ಕಡಮೆಯಿದ್ದಲ್ಲಿ ತೇಲುವುದು ನೀರಿನಲಿ ವಸ್ತುವು
ಭಾರ ಮತ್ತು ಹಗುರ ಇರುವುದರಿಂದ ವಸ್ತುಗಳು ಮುಳುಗುತ್ತದೆ, ತೇಲುತ್ತದೆ ಎಂದರೆ ತಪ್ಪಾಗುತ್ತದೆ ಎಂಬುದು ಈಗಾಗಲೇ ಹಿಂದಿನ ಸಂಚಿಕೆಯಲ್ಲಿ ತಿಳಿದುಕೊಂಡಿದ್ದೇವೆ.
ಹಾಗಾದರೆ ಕೆಲವು ವಸ್ತುಗಳು ನೀರಿನಲ್ಲಿ ಮುಳುಗಲು ಅಥವಾ ತೇಲಲು ಕಾರಣವೇನು ಎಂಬ ಪ್ರಶ್ನೆ ಉಳಿದಿದೆ.
ವಸ್ತುಗಳು ಯಾವುದಾದರೂ ದ್ರವದಲ್ಲಿ ಮುಳುಗುವುದು, ತೇಲುವುದನ್ನು ವಸ್ತುಗಳ ಮತ್ತು ದ್ರವಗಳ ಸಾಂದ್ರತೆಯ ಆಧಾರದ ಮೇಲೆ ನಿರ್ಧರಿಸಬಹುದು. ಅಂದರೆ ಯಾವುದೇ ವಸ್ತುವಿನ ಸಾಂದ್ರತೆ ನೀರಿನ ಸಾಂದ್ರತೆಗಿಂತ ಹೆಚ್ಚಾಗಿದ್ದರೆ ಆ ವಸ್ತುಗಳು ನೀರಿನಲ್ಲಿ ಮುಳುಗುತ್ತದೆ ಮತ್ತು ವಸ್ತುಗಳ ಸಾಂದ್ರತೆ ನೀರಿನ ಸಾಂದ್ರತೆಗಿಂತ ಕಡಮೆಯಿದ್ದರೆ ಆ ವಸ್ತುಗಳು ನೀರಿನಲ್ಲಿ ತೇಲುತ್ತದೆ.
ಕಲ್ಲಿನ ಸಾಂದ್ರತೆ ನೀರಿನ ಸಾಂದ್ರತೆಗಿಂತ ಹೆಚ್ಚಾಗಿರುವುದರಿಂದ ಕಲ್ಲು ನೀರಿನಲ್ಲಿ ಮುಳುಗುತ್ತದೆ ಮತ್ತು ಮರದ ತುಂಡಿನ ಸಾಂದ್ರತೆ ನೀರಿನ ಸಾಂದ್ರತೆಗಿಂತ ಕಡಮೆಯಿರುವುದರಿಂದ ಮರದ ತುಂಡು ನೀರಿನಲ್ಲಿ ತೇಲುತ್ತದೆ. ಎಣ್ಣೆ ನೀರಿನಲ್ಲಿ ತೇಲುವುದಕ್ಕೆ ಮತ್ತು ಜೇನುತುಪ್ಪ ನೀರಿನಲ್ಲಿ ಮುಳುಗುವುದಕ್ಕೆ ಕಾರಣ ಈಗ ನಿಮಗೇ ತಿಳಿದಿದೆ.
ಮೊಟ್ಟೆ ನೀರಿನಲ್ಲಿ ತೇಲುತ್ತದೆಯೇ ಅಥವಾ ಮುಳುಗುತ್ತದೆಯೇ ಎಂಬ ಪ್ರಶ್ನೆ ಕೇಳಿದರೆ ಸಾಮಾನ್ಯವಾಗಿ ತೇಲುತ್ತದೆ ಮತ್ತು ಮುಳುಗುತ್ತದೆ ಎಂಬ ಎರಡೂ ಉತ್ತರಗಳನ್ನು ನಿರೀಕ್ಷಿಸಬಹುದು.
ಲೋಟದಲ್ಲಿ ನೀರನ್ನು ತೆಗೆದುಕೊಂಡು ಮೊಟ್ಟೆಯನ್ನು ಲೋಟದಲ್ಲಿ ಹಾಕಿ ನೋಡಿದರೆ ತಿಳಿಯುತ್ತದೆ ಮುಳುಗುವುದೆಂದು. ಆದರೆ ಮೊಟ್ಟೆ ನೀರಿನಲ್ಲಿ ಮುಳುಗಲುಕಾರಣವೇನು? ಎಂಬ ಪ್ರಶ್ನೆ ಎದುರಾದರೆ ತಟ್ಟನೆ ಬರುವುದು ಉತ್ತರ ಮೊಟ್ಟೆಯ ಸಾಂದ್ರತೆ ನೀರಿನ ಸಾಂದ್ರತೆಗಿಂತ ಹೆಚ್ಚು ಇರುವುದರಿಂದ ಮೊಟ್ಟೆ ನೀರಿನಲ್ಲಿ ಮುಳುಗುತ್ತದೆ.
ಮೊಟ್ಟೆಯನ್ನು ನೀರಿನಿಂದ ಹೊರತೆಗೆದು, ಲೋಟದಲ್ಲಿರುವ ನೀರಿಗೆ ಒಂದು ಚಮಚ ಉಪ್ಪನ್ನು ಹಾಕಿ. ಉಪ್ಪು ನೀರಿನಲ್ಲಿ ಸಂಪೂರ್ಣವಾಗಿ ಕರಗುವ ಹಾಗೆ ಚಮಚದಿಂದ ಚೆನ್ನಾಗಿ ಕಲಕಿ. ಈಗ ಲೋಟದಲ್ಲಿರುವ ಉಪ್ಪು ನೀರಿಗೆ ಮೊಟ್ಟೆಯನ್ನು ಹಾಕಿದರೆ ಮೊಟ್ಟೆ ತೇಲುತ್ತದೆಯೇ ಅಥವಾ ಮುಳುಗುತ್ತದೆಯೇ? ಸಾಮಾನ್ಯ ನೀರಿನಲ್ಲಿ ಮುಳುಗಿರುವುದರಿಂದ ಉಪ್ಪು ಹಾಕಿದ ಮೇಲೆ ಫಲಿತಾಂಶದಲ್ಲಿ ವ್ಯತ್ಯಾಸ ಬರಲೇಬೇಕು ಎನ್ನುವ ನಂಬಿಕೆಯಲ್ಲಿ ಗೊಂದಲ ಹುಟ್ಟಿದರೂ ಹೇಳುವುದು ಮೊಟ್ಟೆ ತೇಲುವುದು ಎಂದು ಆಶ್ಚರ್ಯ ಎಂದರೆ ಮೊಟ್ಟೆ ಉಪ್ಪು ನೀರಿನಲ್ಲೂ ಮುಳುಗುವುದನ್ನು ಕಂಡಾಗ.
ಸ್ವಲ್ಪ ಚಿಂತನೆ ಮಾಡಿದರೆ ತಿಳಿಯುವುದು ನಾವು ಹಾಕಿರುವ ಉಪ್ಪು ಕೇವಲ ಒಂದು ಚಮಚ. ಮೊಟ್ಟೆ ಉಪ್ಪು ನೀರಿನಲ್ಲಿ ತೇಲಲೇಬೇಕು ಎಂದು ನಿಶ್ಚಯವಿದ್ದರೆ ೫ ಅಥವಾ ೬ ಚಮಚ ಉಪ್ಪು ಹಾಕಿ ಪ್ರಯತ್ನಿಸಿ. ಖಂಡಿತ ನಿಮಗೆ ನಿರಾಶೆಯಾಗುವುದಿಲ್ಲ ಈ ಬಾರಿ.
ಉಪ್ಪು ನೀರಿನಲ್ಲಿ ಮೊಟ್ಟೆ ತೇಲಲು ಕಾರಣವೇನು ಎಂದು ಪ್ರಶ್ನೆ ಮಾಡಿದಾಗ ಉಪ್ಪು ನೀರಿನ ಸಾಂದ್ರತೆ ಮೊಟ್ಟೆಯ ಸಾಂದ್ರತೆಗಿಂತ ಹೆಚ್ಚು ಎಂದು ಉತ್ತರ ಹೇಳಿದರೂ ಸಿಕ್ಕಿಹಾಕಿಕೊಳ್ಳುವರು ಉಪ್ಪುನೀರಿನ ಸಾಂದ್ರತೆ ನೀರಿನ ಸಾಂದ್ರತೆಗಿಂತ ಹೇಗೆ ಹೆಚ್ಚಾಯಿತು ಎಂದಾಗ?
ಸಾಮಾನ್ಯ ನೀರು ನೀರಿನ ಅಣುಗಳಿಂದ ಜೋಡಿಸಿದೆ. ಆದರೆ ಉಪ್ಪನ್ನು ನೀರಿನಲ್ಲಿ ಬೆರೆಸಿದಾಗ ನೀರಿನಲ್ಲಿ ಉಪ್ಪು ಕರಗುವುದರಿಂದ ನೀರಿನ ಅಣುಗಳ ಮಧ್ಯೆಯಿರುವ ಜಾಗದಲ್ಲಿ ಉಪ್ಪಿನ ಅಣುಗಳು ಸೇರಿಕೊಂಡು ಉಪ್ಪು ನೀರು ನೀರಿನ ಮತ್ತು ಉಪ್ಪಿನ ಅಣುಗಳೆರಡರಿಂದ ಜೋಡಿಸಿದೆ ಎನ್ನಬಹುದು.
ಅದೇ ಕಾರಣದಿಂದ ಉಪ್ಪನ್ನು ನೀರಿನಲ್ಲಿ ಬೆರೆಸಿದಾಗ ಉಪ್ಪುನೀರಿನ ಗಾತ್ರ ಅಷ್ಟಾಗಿ ಹೆಚ್ಚಾಗದಿದ್ದರೂ ದ್ರವ್ಯರಾಶಿ ಸಾಕಷ್ಟು ಮಟ್ಟಿಗೆ ಹೆಚ್ಚಾಗುತ್ತದೆ.
ಉಪ್ಪುನೀರಿನ ದ್ರವ್ಯರಾಶಿ ಹೆಚ್ಚಾಗುವುದರಿಂದ ನಮಗೆ ಈಗಾಗಲೆ ತಿಳಿದಿರುವ ಸಾಂದ್ರತೆಯ ಸೂತ್ರದ ಆಧಾರದ ಮೇಲೆ ಉಪ್ಪುನೀರಿನ ಸಾಂದ್ರತೆ ನೀರಿನ ಸಾಂದ್ರತೆಗಿಂತ ಹೆಚ್ಚಾಗುತ್ತದೆ ಎಂದು ತೀರ್ಮಾನಿಸಬಹುದು.
ಸಾಂದ್ರತೆ = ದ್ರವ್ಯರಾಶಿ / ಗಾತ್ರ
ಇದೇ ಪ್ರಯೋಗದಲ್ಲಿ ಉಪ್ಪಿನ ಬದಲು ಸಕ್ಕರೆಯನ್ನು ಉಪಯೋಗಿಸಿದಾಗ ಸಕ್ಕರೆನೀರಿನಲ್ಲಿ ಮೊಟ್ಟೆ ಮುಳುಗುತ್ತದೊ ಅಥವಾ ತೇಲುತ್ತದೊ ಎಂದು ನೀವೇ ಹೇಳಿ? ಹಾಗೆಯೇ ಇದೇ ಪ್ರಯೋಗದಲ್ಲಿ ನೀರಿನಲ್ಲಿ ಮರಳನ್ನು ಹಾಕಿದಾಗ ಏನಾಗುತ್ತದೆ ಗಮನಿಸಿ?
ನಾವು ಉಪಯೋಗಿಸಿರುವ ಮೊಟ್ಟೆ ಕೆಟ್ಟಿದ್ದರೆ ಸಾಮಾನ್ಯ ನೀರಿನಲ್ಲೂ ತೇಲುವುದಕ್ಕೆ ಕಾರಣ ಏನೆಂದು ಚಿಂತಿಸಿ.
Comments are closed.