ಜಗತ್ತಿನ ಎಲ್ಲ ವಸ್ತುಗಳು ಆಗುವವು ಅಣುಗಳಿಂದ
ಕಾಣಲಸಾಧ್ಯ ಅಣುಗಳನು ಕಣ್ಣುಗಳಿಂದ
ಅಲ್ಲಾಡುವವು, ಸರಿದಾಡುವವು, ಓಡುವವು ವಸ್ತುಗಳಲಿ
ಆದರೂ ಕಾಣವು, ಸಿಗವು ಕೈಗಳಲಿ
ಅಣುಗಳ ಜೋಡಣೆ ಬದಲಾದಂತೆ ವಸ್ತುಗಳಲಿ
ಆಗುವವು ಸ್ಥಿತಿಗಳ ಬದಲಾವಣೆ ವಸ್ತುಗಳಲಿ
ಒಂದು ಕಾಗದವನ್ನು ಚೂರು ಚೂರು ಮಾಡುತ್ತಾ ಹೋದರೆ ಅದು ಚಿಕ್ಕ ಕಾಗದದ ತುಂಡು ಆಗುತ್ತದೆ. ಆ ಚಿಕ್ಕ ಕಾಗದದ ತುಂಡನ್ನು ಸಾವಿರ ಅಥವಾ ಲಕ್ಷ ಸಾರಿ ತುಂಡು ಮಾಡಿದರೆ ಅದು ನಮ್ಮ ಕಣ್ಣಿಗೆ ಕಾಣಿಸುವುದೇ? ಹೀಗೆ ತುಂಡು ಮಾಡುತ್ತಾ ಹೋದಾಗ ದೊರೆಯುವ ಕಣ್ಣಿಗೆ ಕಾಣಿಸಲು ಅಸಾಧ್ಯವಾದ ಕಾಗದದ ತುಂಡು ಅಥವ ಕಣವನ್ನು ‘ಕಾಗದದ ಅಣು’ ಎನ್ನುತ್ತೇವೆ. ಅಂದರೆ ಒಂದು ಕಾಗದದ ತುಂಡು ಲಕ್ಷಾಂತರ ಅಥವಾ ಕೋಟ್ಯಂತರ ಕಾಗದದ ಅಣುಗಳಿಂದ ಜೋಡಿಸಿದೆ.ಕಾಗದದ ತುಂಡು ಕಾಗದದ ಅಣುಗಳಿಂದ ಜೋಡಿಸಿದ್ದಾದರೆ ಮರದ ತುಂಡು ಯಾವುದರಿಂದ ಜೋಡಿಸಿದೆ? ಪ್ಲಾಸ್ಟಿಕ್ ತುಂಡು ಯಾವುದರಿಂದ ಜೋಡಿಸಿದೆ? ಗಾಜಿನ ಲೋಟ ಯಾವುದರಿಂದ ಜೋಡಿಸಿದೆ? ನೀರು ನೀರಿನ ಅಣುಗಳಿಂದ ಜೋಡಿಸಿದ್ದಾದರೆ ಗಾಳಿಯು ಗಾಳಿಯ ಅಣುಗಳಿಂದ ಜೋಡಿಸಿದೆ ‘ಎಲ್ಲಾ ವಸ್ತುಗಳು ಬೇರೆ ಬೇರೆ ಅಣುಗಳಿಂದ ಜೋಡಿಸಿರುತ್ತವೆ’ ಎಂಬ ಅಂಶವನ್ನು ಸ್ವಷ್ಟಪಡಿಸಬಹುದು.
ಪ್ರಯೋಗ -ಘನ ವಸ್ತುಗಳಲ್ಲಿ ಅಣುಗಳ ಜೋಡಣೆ ಹೇಗಿರುತ್ತದೆ?
ಸಾಮಗ್ರಿಗಳು: ಮಕ್ಕಳು, ಸೀಮೆಸುಣ್ಣ
ವಿಧಾನ: ಮಕ್ಕಳನ್ನು ಒಂದೊಂದು ಅಣುಗಳಾಗಿ ಭಾವಿಸಿ ಈ ಪ್ರಯೋಗವನ್ನು ಮಾಡಬೇಕು. ಆದರೆ ಅಣುಗಳು ನಮ್ಮ ಕಣ್ಣಿಗೆ ಕಾಣದಿರುವುದರಿಂದ ಮಕ್ಕಳು ಅಣುಗಳಾಗಲು ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು.
ಸೀಮೆಸುಣ್ಣದಿಂದ ಒಂದು ಚೌಕಾಕೃತಿಯನ್ನು ಬರೆದು ಅದರಲ್ಲಿ ಮಕ್ಕಳನ್ನು ಒಬ್ಬರ ಪಕ್ಕ ಒಬ್ಬರನ್ನು ಕ್ರಮಬದ್ಧವಾಗಿ ನಿಲ್ಲಿಸಿ. ಮಕ್ಕಳು ಒಬ್ಬರ ಕೈಯನ್ನು ಒಬ್ಬರು ಬಿಗಿಯಾಗಿ ಹಿಡಿದಿಟ್ಟುಕೊಂಡಿರಬೇಕು ಮತ್ತು ನಿಂತಲ್ಲಿಯೇ ಅಲ್ಲಾಡುವಂತೆ ಹೇಳಿ.
ಚಿತ್ರ -೧
ಘನ ವಸ್ತುಗಳಲ್ಲಿ ಅಣುಗಳು ಈ ರೀತಿಯಾಗಿ ಒತ್ತೊತ್ತಾಗಿ ಕ್ರಮಬದ್ಧವಾಗಿ (ಚಿತ್ರ – ೧) ಜೋಡಿಸಿರುತ್ತದೆ ಮತ್ತು ಅಣುಗಳ ನಡುವೆ ಬಂಧನ ಹೆಚ್ಚಾಗಿರುತ್ತದೆ, ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಅಣುಗಳು ಸ್ವತಂತ್ರವಾಗಿ ಚಲಿಸಲು ಆಗುವುದಿಲ್ಲ. ಆದರೆ ಅಣುಗಳು ನಿಂತಲ್ಲಿಯೇ ಅಲ್ಲಾಡುತ್ತಿರುತ್ತದೆ. ಪ್ರತಿಯೊಂದು ಅಣುವೂ ತನ್ನದೇ ಆದ ಜಾಗವನ್ನು ಹೊಂದಿರುತ್ತದೆ. ಈ ರೀತಿಯ ಜೋಡಣೆಯಿಂದಾಗಿ ಘನಸ್ಥಿತಿಯಲ್ಲಿರುವ ವಸ್ತುಗಳು ನಿರ್ದಿಷ್ಟ ಆಕಾರವನ್ನು ಪಡೆದಿರುತ್ತವೆ. ಉದಾಹರಣೆಗೆ – ಕಲ್ಲು, ಕಾಗದ, ತಟ್ಟೆ, ಮರ ಇವುಗಳಲ್ಲಿ ಅಣುಗಳ ಜೋಡಣೆ ಈ ರೀತಿ ಇರುತ್ತವೆ.
ಪ್ರಯೋಗ: ದ್ರವ ವಸ್ತುಗಳಲ್ಲಿ ಅಣುಗಳ ಜೋಡಣೆ ಹೇಗಿರುತ್ತದೆ?
ವಿಧಾನ: ಈ ಜೋಡಣೆಯಲ್ಲಿ ಮಕ್ಕಳನ್ನು ಕ್ರಮವಿಲ್ಲದೆ ನಿಲ್ಲಿಸುವುದು. ಮಕ್ಕಳು ಒಬ್ಬರ ಕೈಯನ್ನು ಒಬ್ಬರು ಸ್ವಲ್ಪ ಸಡಿಲವಾಗಿ ಹಿಡಿದಿಟ್ಟುಕೊಂಡಿರಬೇಕು ಮತ್ತು ಒಬ್ಬರ ಜಾಗದಿಂದ ಇನ್ನೊಬ್ಬರ ಜಾಗಕ್ಕೆ ಚಲಿಸಲು ಸಾಧ್ಯವಿರಬೇಕು.
(ಚಿತ್ರ – ೨) ಈ ರೀತಿಯಾಗಿ ದ್ರವ ವಸ್ತುಗಳಲ್ಲಿ ಅಣುಗಳು ಸ್ವಲ್ಪ ಸಡಿಲವಾಗಿ ಜೋಡಿಸಿರುತ್ತವೆ ಮತ್ತು ಅಣುಗಳ ನಡುವಿನ ಬಂಧನ ಸ್ವಲ್ಪ ಕಡಮೆಯಿರುತ್ತದೆ. ಅಣುಗಳು ಸ್ವಲ್ಪ ಸಡಿಲವಾಗಿರುವುದರಿಂದ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಅಣುಗಳು ಸ್ವತಂತ್ರವಾಗಿ ಚಲಿಸುತ್ತವೆ. ಈ ರೀತಿಯ ಜೋಡಣೆಯಿಂದಾಗಿ ದ್ರವಸ್ಥಿತಿಯಲ್ಲಿರುವ ವಸ್ತುಗಳಿಗೆ ಪ್ರವಹಿಸುವ ಗುಣವಿರುತ್ತದೆ. ಉದಾಹರಣೆಗೆ – ನೀರು, ಎಣ್ಣೆ, ರಕ್ತ ಇವುಗಳಲ್ಲಿ ಅಣುಗಳ ಜೋಡಣೆ ಈ ರೀತಿ ಇರುತ್ತವೆ.
ಪ್ರಯೋಗ: ಅನಿಲ ವಸ್ತುಗಳಲ್ಲಿ ಅಣುಗಳ ಜೋಡಣೆ ಹೇಗಿರುತ್ತದೆ?
ವಿಧಾನ: ಕೆಲವೇ ಮಕ್ಕಳನ್ನು ಅದೇ ಚೌಕಾಕೃತಿಯಲ್ಲಿ ಜೋರಾಗಿ ಓಡುವಂತೆ ಹೇಳಿ.
ಈ ರೀತಿಯಾಗಿ ಅನಿಲ ವಸ್ತುಗಳಲ್ಲಿ ಅಣುಗಳು ತುಂಬಾ ವಿರಳವಾಗಿರುತ್ತದೆ ಮತ್ತು ಅಣುಗಳ ನಡುವಿನ ಬಂಧನ ಬಹಳ ಕಡಮೆ. ಅಣುಗಳು ತುಂಬಾ ವಿರಳವಾಗಿರುತ್ತದೆ ಮತ್ತು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಅಣುಗಳು ವೇಗವಾಗಿ ಚಲಿಸುತ್ತವೆ. ಈ ರೀತಿಯ ಜೋಡಣೆಯಿಂದಾಗಿ ಅನಿಲಸ್ಥಿತಿಯಲ್ಲಿರುವ ವಸ್ತುಗಳಿಗೆ ಹರಡುವ ಗುಣವಿರುತ್ತದೆ. ಉದಾಹರಣೆಗೆ – ಗಾಳಿ, ಹೊಗೆ, ವಾಸನೆ ಇವುಗಳಲ್ಲಿ ಅಣುಗಳ ಜೋಡಣೆ ಈ ರೀತಿ ಇರುತ್ತವೆ.
ಸ್ಥಿತಿ ಬದಲಾವಣೆ
ಮಂಜುಗಡ್ಡೆ ಯಾವ ಸ್ಥಿತಿಯಲ್ಲಿದೆ ಎಂದಾಗ ಅದರ ಆಕಾರ ಮತ್ತು ಗಾತ್ರದ ಅಂಶಗಳನ್ನು ಗಮನಿಸಬೇಕು.
ನಿರ್ದಿಷ್ಟ ಆಕಾರ ಮತ್ತು ನಿರ್ದಿಷ್ಟ ಗಾತ್ರ ಇರುವುದರಿಂದ ಮಂಜುಗಡ್ಡೆಯು ಘನಸ್ಥಿತಿಯಲ್ಲಿದೆ ಎಂದು ತೀರ್ಮಾನಿಸಬಹುದು.
ತಟ್ಟೆಯಲ್ಲಿ ಮಂಜುಗಡ್ಡೆಯನ್ನು ಇಟ್ಟು ಮೇಣದಬತ್ತಿಯ ಮೇಲೆ ಕಾಯಿಸಿ. ಕಾಯಿಸಿದಾಗ ಮಂಜುಗಡ್ಡೆ ಕರಗಿ ನೀರಾಗುವುದು ಕಾಣಬಹುದು. ಮೇಣದಬತ್ತಿಯ ಶಾಖದಿಂದ ಘನಸ್ಥಿತಿಯಲ್ಲ್ಲಿರುವ ಮಂಜುಗಡ್ಡೆಯ ಅಣುಗಳ ಜೋಡಣೆ ಬದಲಾಗಿ ದ್ರವಸ್ಥಿತಿಯಲ್ಲಿರುವ ನೀರಾಗಿ ಪರಿವರ್ತಿಸುತ್ತದೆ.
ಕಾಯಿಸಿದಾಗ ನೀರು ನೀರಾವಿಯಾಗುವುದು ಕಾಣಬಹುದು. ದ್ರವ ಸ್ಥಿತಿಯಲ್ಲಿರುವ ನೀರನ್ನು ಇನ್ನೂ ಹೆಚ್ಚು ಕಾಯಿಸಿದಾಗ ಮತ್ತಷ್ಟು ಶಾಖದಿಂದ ನೀರಿನಲ್ಲಿರುವ ಅಣುಗಳ ಜೋಡಣೆ ಇನ್ನೂ ವಿರಳವಾಗಿ ಚಲನೆ ವೇಗವಾಗಿ ಅನಿಲಸ್ಥಿತಿಯಲ್ಲಿರುವ ನೀರಾವಿಯಾಗಿ ಪರಿವರ್ತಿಸುತ್ತದೆ.
ಈ ರೀತಿಯಾಗಿ ವಸ್ತುಗಳು ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ಬದಲಾಗುವುದನ್ನು [ಘನದಿಂದ-ದ್ರವಕ್ಕೆ, ದ್ರವದಿಂದ-ಅನಿಲಕ್ಕೆ, ಘನದಿಂದ-ಅನಿಲಕ್ಕೆ, ಅನಿಲದಿಂದ-ದ್ರವಕ್ಕೆ, ದ್ರವದಿಂದ-ಘನಕ್ಕೆ] ‘ಸ್ಥಿತಿ ಬದಲಾವಣೆ’ ಎನ್ನುವರು.
ದಿನನಿತ್ಯದ ಜೀವನದಲ್ಲಿ ಶಾಖ ನೀಡಿದಾಗ ಆಗುವ ಕೆಲವು ವಸ್ತುಗಳ ಸ್ಥಿತಿ ಬದಲಾವಣೆಯನ್ನು ಗಮನಿಸೋಣ.
ಘನದಿಂದ – ದ್ರವಕ್ಕೆ: ಮಂಜುಗಡ್ಡೆ – ನೀರು.
ಘನದಿಂದ – ಅನಿಲಕ್ಕೆ: ಕರ್ಪೂರ.
ದ್ರವದಿಂದ – ಅನಿಲಕ್ಕೆ: ನೀರು – ನೀರಾವಿ, ಬಾಟಲಿನಲ್ಲಿರುವ ಸುಗಂಧ ದ್ರವ್ಯ ಹೊರಬಂದಾಗ.