ಜಾಗತಿಕಮಟ್ಟದಲ್ಲಿ ಯೋಗ ನಗರಿಯೆಂದೇ ಪ್ರಖ್ಯಾತಿ ಹೊಂದಿರುವ ಋಷಿಕೇಶ ತನ್ನ ವೈವಿಧ್ಯಮಯ ಗುಡಿ-ಗೋಪುರಗಳು ಹಾಗೂ ಆಶ್ರಮಗಳಿಗೂ ಹೆಸರುವಾಸಿ. ಹಾಗೆ ನೋಡಿದರೆ, ಇಡೀ ನಗರವೇ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಾಧನಾಕೇಂದ್ರಗಳಿಂದ ತುಂಬಿತುಳುಕುತ್ತಿದೆ. ಇಲ್ಲಿ ಹೆಜ್ಜೆಗೊಂದು ಮಂದಿರ ಮತ್ತು ಯೋಗಶಾಲೆ ಕಾಣಸಿಗುವುದು ಸಾಮಾನ್ಯ. ಆದರೆ ನಗರಪ್ರದೇಶದಿಂದ ಒಂದಿಷ್ಟು ದೂರದಲ್ಲಿ ಹರಡಿಕೊಂಡಿರುವ ಶಿವಾಲಿಕ್ ಪರ್ವತಶ್ರೇಣಿಗಳ ವನಸಿರಿಯ ನಡುವೆ ಇರುವ ಕೆಲವೊಂದು ಅಪೂರ್ವ ಗುಹಾಲಯಗಳ ಬಗ್ಗೆ ಹೆಚ್ಚಿನ ಪ್ರವಾಸಿಗರಿಗೆ ತಿಳಿದಿಲ್ಲ.
ಸನಾತನ ಹಿಂದೂಧರ್ಮದ ಶ್ರದ್ಧಾಕೇಂದ್ರಗಳ ಪೈಕಿ ದೇವಸ್ಥಾನಗಳು ಮತ್ತು ಮಂದಿರಗಳಿಗೆ ಇರುವಷ್ಟೆ ಪ್ರಾಮುಖ್ಯ ಮತ್ತು ಪಾವಿತ್ರ್ಯ ಗುಹಾಲಯಗಳಿಗೂ ಇದೆ. ಸಮೃದ್ಧ ಪೌರಾಣಿಕ ಮತ್ತು ಆಧ್ಯಾತ್ಮಿಕ ಹಿನ್ನೆಲೆಯ ಜೊತೆಯಲ್ಲಿ ಐತಿಹಾಸಿಕ ಮಹತ್ತ್ವ ಕೂಡ ಹೊಂದಿರುವ ಗುಹಾಲಯಗಳು ಆಧ್ಯಾತ್ಮಿಕ ಅನುಭೂತಿಯನ್ನುಂಟುಮಾಡುವ ವಿಶಿಷ್ಟ ಮತ್ತು ಪವಿತ್ರ ತಾಣಗಳೆನಿಸಿವೆ.
ಜಾಗತಿಕಮಟ್ಟದಲ್ಲಿ ಯೋಗನಗರಿಯೆಂದೇ ಪ್ರಖ್ಯಾತಿ ಹೊಂದಿರುವ ಋಷಿಕೇಶ ತನ್ನ ವೈವಿಧ್ಯಮಯ ಗುಡಿ-ಗೋಪುರಗಳು ಹಾಗೂ ಆಶ್ರಮಗಳಿಗೆ ಹೆಸರುವಾಸಿ. ಹಾಗೆ ನೋಡಿದರೆ, ಇಡೀ ನಗರವೇ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಾಧನಾಕೇಂದ್ರಗಳಿಂದ ತುಂಬಿತುಳುಕುತ್ತಿದೆ. ಇಲ್ಲಿ ಹೆಜ್ಜೆಗೊಂದು ಮಂದಿರ ಮತ್ತು ಯೋಗಶಾಲೆ ಕಾಣಸಿಗುವುದು ಸಾಮಾನ್ಯ. ಆದರೆ ನಗರಪ್ರದೇಶದಿಂದ ಒಂದಿಷ್ಟು ದೂರದಲ್ಲಿ ಹರಡಿಕೊಂಡಿರುವ ಶಿವಾಲಿಕ್ ಪರ್ವತಶ್ರೇಣಿಗಳ ವನಸಿರಿಯ ನಡುವೆ ಇರುವ ಕೆಲವೊಂದು ಅಪೂರ್ವ ಗುಹಾಲಯಗಳ ಬಗ್ಗೆ ಹೆಚ್ಚಿನ ಪ್ರವಾಸಿಗರಿಗೆ ತಿಳಿದಿಲ್ಲ.
ಜನಜಂಗುಳಿಯಿಂದ ದೂರವಾಗಿ ಹಚ್ಚಹಸಿರಿನ ಪ್ರಕೃತಿಯ ಮಡಿಲಲ್ಲಿ ನೆಲೆನಿಂತಿರುವ ಈ ಗುಹೆಗಳು ಋಷಿಕೇಶದ ವೈಶಿಷ್ಟ್ಯ. ಒಂದಿಷ್ಟು ವಾಹನ ಸವಾರಿಯ ಮತ್ತು ಒಂದಿಷ್ಟು ಕಾಲ್ನಡಿಗೆಯ ಮೂಲಕ ತಲಪಬಹುದಾದ ಈ ಗುಹೆಗಳಿಗೆ ಭೇಟಿ ನೀಡಿ, ಅಲ್ಲಿ ಸಮಯ ಕಳೆದಾಗ ಲಭಿಸುವ ಸಂತಸ, ಮಾನಸಿಕ ನೆಮ್ಮದಿ ಮತ್ತು ಆಧ್ಯಾತ್ಮಿಕ ಅನುಭೂತಿ ವರ್ಣನೆಗೆ ಮೀರಿದ್ದು. ಇಂತಹ ಅನುಭವ-ಅನುಭೂತಿ ಇತರೆಡೆ ಅಲಭ್ಯ. ಅಂತಹ ಕೆಲವು ವಿಶಿಷ್ಟ ಗುಹಾಲಯಗಳ ಬಗ್ಗೆ ತಿಳಿಯೋಣ.
ವಸಿಷ್ಠ ಗುಹೆ
ಋಷಿಕೇಶದ ಅಪೂರ್ವ ಗುಹಾಲಯಗಳ ಪೈಕಿ ಪ್ರಮುಖ ಹಾಗೂ ಜನಪ್ರಿಯ ತಾಣ ವಸಿಷ್ಠ ಗುಹೆ. ನಗರಪ್ರದೇಶದಿಂದ ಸುಮಾರು ಮೂವತ್ತು ಕಿ.ಮೀ. ದೂರದಲ್ಲಿರುವ ಈ ಗುಹೆ ದೇವಪ್ರಯಾಗದತ್ತ ಹೋಗುವ ಹಾದಿಯಲ್ಲಿದೆ. ಬಾನೆತ್ತರದ ವೃಕ್ಷರಾಶಿಯ ನಡುವೆ ಹಾದುಹೋಗುವ ಹಾವಿನಾಕೃತಿಯ ರಸ್ತೆಯ ಮೂಲಕ ಅನತಿದೂರ ಕ್ರಮಿಸಿದರೆ ಒಂದೆಡೆ ತಲೆಯೆತ್ತಿರುವ ಕಮಾನು ನಮ್ಮ ಗಮನ ಸೆಳೆಯುತ್ತದೆ. ಹಿಂದೆ ಈ ಪ್ರದೇಶದಲ್ಲಿ ನೆಲಸಿದ್ದ ಆಧ್ಯಾತ್ಮಿಕ ಸಾಧಕ ಸ್ವಾಮಿ ಪುರುಷೋತ್ತಮಾನಂದ ಅವರ ದ್ವಿಶತಮಾನೋತ್ಸವದ ನೆನಪಿನಲ್ಲಿ ಈ ಕಮಾನನ್ನು ನಿರ್ಮಿಸಲಾಗಿದೆ. ಇಲ್ಲಿಂದಲೇ ವಸಿಷ್ಠ ಗುಹೆಯತ್ತ ಸಾಗುವ ಕಾಲ್ದಾರಿ ಆರಂಭವಾಗುತ್ತದೆ. ಈ ಇಳಿಜಾರು ಹಾದಿಯಲ್ಲಿ ಕಾಲ್ನಡಿಗೆಯಲ್ಲೆ ಸಾಗುತ್ತ ಸುಮಾರು ಅರ್ಧ ಕಿ.ಮೀ. ಕ್ರಮಿಸಿದ ಕೂಡಲೇ ಗುಹೆ ಕಾಣಿಸುತ್ತದೆ. ಬಾನೆತ್ತರದ ಶಿಲಾಪರ್ವತದ ತಳಭಾಗದಲ್ಲಿರುವ ಗುಹೆ ನಮ್ಮನ್ನು ಆಶ್ಚರ್ಯಚಕಿತಗೊಳಿಸುತ್ತದೆ.
ಪ್ರಶಾಂತವಾಗಿ ಹರಿಯುವ ಗಂಗಾನದಿಯ ತಟದಲ್ಲಿ ದಟ್ಟ ಕಾನನದ ನಡುವೆ ಈ ಗುಹೆ ಇದ್ದು, ಸುತ್ತಮುತ್ತಲಿನ ಪ್ರಶಾಂತ ವಾತಾವರಣ ಮೈಮನಗಳನ್ನು ಪುಳಕಿತಗೊಳಿಸುತ್ತದೆ. ಪೌರಾಣಿಕ ಮತ್ತು ಆಧ್ಯಾತ್ಮಿಕ ಮಹತ್ತ್ವ ಹೊಂದಿರುವ ಈ ಗುಹೆಗೆ ರೋಚಕ ಐತಿಹಾಸಿಕ ಹಿನ್ನೆಲೆ ಕೂಡ ಇದೆ.
ಐತಿಹ್ಯಗಳ ಪ್ರಕಾರ ಇದು ಸಪ್ತಋಷಿಗಳ ಪೈಕಿ ಒಬ್ಬರೆನಿಸಿರುವ ವಸಿಷ್ಠ ಮಹರ್ಷಿ ತಪಸ್ಸು ಆಚರಿಸಿದ ಪುಣ್ಯ ಸ್ಥಳ. ಅವರು ತಮ್ಮ ಪತ್ನಿ ಅರುಂಧತಿಯ ಜೊತೆಯಲ್ಲಿ ದೀರ್ಘಕಾಲ ಇಲ್ಲಿ ತಪಸ್ಸನ್ನಾಚರಿಸಿದ್ದರು ಎಂಬುದು ಪ್ರತೀತಿ. ಬ್ರಹ್ಮನ ಪುತ್ರ ಮತ್ತು ಶ್ರೀರಾಮನ ಗುರುವಾಗಿದ್ದ ವಸಿಷ್ಠ-ಅರುಂಧತಿ ದಂಪತಿಗೆ ನೂರು ಮಂದಿ ಪುತ್ರರು. ನಂದಿನಿ ಎಂಬ ವಿಶೇಷ ಹಸುವೊಂದು ವಸಿಷ್ಠರ ಆಶ್ರಮದಲ್ಲಿದ್ದು, ಅದು ಆಶ್ರಮಕ್ಕೆ ಬರುವ ಎಲ್ಲರಿಗೂ ಆಹಾರ ಒದಗಿಸುವ ಸಾಮರ್ಥ್ಯ ಹೊಂದಿತ್ತು.
ಇಂತಹ ಅಪೂರ್ವ ಸಾಮರ್ಥ್ಯವುಳ್ಳ ಹಸು ಒಮ್ಮೆ ರಾಜನಾಗಿದ್ದ ವಿಶ್ವಾಮಿತ್ರನ ಕಣ್ಣಿಗೆ ಬಿತ್ತು ಮತ್ತು ಆತ ಅದನ್ನು ವಶಪಡಿಸಿಕೊಳ್ಳಲು ಹಲವು ಬಾರಿ ವಿಫಲ ಪ್ರಯತ್ನ ನಡೆಸಿದ. ಇದು ಅವರಿಬ್ಬರ ನಡುವೆ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟು, ವಸಿಷ್ಠರು ವಿಶ್ವಾಮಿತ್ರನನ್ನು ಎರಡು ಬಾರಿ ದ್ವಂದ್ವಯುದ್ಧದಲ್ಲಿ ಸೋಲಿಸಿದ್ದರು. ಅದಾದನಂತರ, ವಿಶ್ವಾಮಿತ್ರನು ವಸಿಷ್ಠರ ನೂರುಮಂದಿ ಪುತ್ರರನ್ನು ಮೋಸದಿಂದ ಕೊಲ್ಲುತ್ತಾನೆ. ಪುತ್ರಶೋಕದಿಂದ ಜರ್ಜರಿತರಾದ ವಸಿಷ್ಠರು ಗಂಗಾನದಿಯಲ್ಲಿ ಹಾರಿ ಪ್ರಾಣತ್ಯಾಗಕ್ಕೆ ಪ್ರಯತ್ನಿಸಿದರೂ ಅದು ಸಾಧ್ಯವಾಗುವುದಿಲ್ಲ.
ಹೀಗೆ ಪುತ್ರಶೋಕಪೀಡಿತರಾದ ವಸಿಷ್ಠ-ಅರುಂಧತಿ ದಂಪತಿ ಮನಃಶಾಂತಿ ಪಡೆಯಲು ಇಲ್ಲಿನ ಪ್ರಶಾಂತ ವಾತಾವರಣದಲ್ಲಿ ನೆಲಸಿ ತಪಸ್ಸನ್ನಾಚರಿಸುತ್ತಾರೆ. ಹೀಗೆ ವಸಿಷ್ಠ ಮತ್ತು ಅರುಂಧತಿ ಧ್ಯಾನನಿರತರಾಗಿದ್ದ ಗುಹೆಗಳು ಇಂದು ಅವರಿಬ್ಬರ ಹೆಸರಿನಲ್ಲಿ ಪ್ರಸಿದ್ಧಿ ಪಡೆದಿವೆ.
ವಸಿಷ್ಠ ಗುಹೆ ಸಾಕಷ್ಟು ಎತ್ತರ ಹೊಂದಿರುವ ಕಡಿದಾದ ಶಿಲಾಪರ್ವತದಲ್ಲಿ ಉಂಟಾಗಿರುವ ರಚನೆ. ಗುಹೆಯ ಪ್ರವೇಶದ್ವಾರದಲ್ಲಿ ಕಂಡುಬರುವ ಮಂಟಪ ಮತ್ತು ಬಾಗಿಲು ಇತ್ತೀಚೆಗಿನ ರಚನೆ. ಮೂಲ ಗುಹೆಯು ಪ್ರಕೃತಿನಿರ್ಮಿತ ಎಂದು ನೋಡಿದ ಕೂಡಲೇ ತಿಳಿಯುತ್ತದೆ. ಒಳಗಡೆ ವಸಿಷ್ಠರು ಧ್ಯಾನದಲ್ಲಿ ಕುಳಿತಿದ್ದರು ಎಂದು ಹೇಳಲಾದ ಪೀಠದಲ್ಲಿ ಇಂದು ಶಿವಲಿಂಗವನ್ನು ಸ್ಥಾಪಿಸಿದ್ದು, ನಿತ್ಯವೂ ಪೂಜೆ ಅಭಿಷೇಕ ನಡೆಯುತ್ತದೆ. ಗುಹೆಯೊಳಗೆ ಹೊಕ್ಕು ಒಂದಿಷ್ಟು ನಿಮಿಷಗಳ ಕಾಲ ಧ್ಯಾನ ಮಾಡಿದರೆ ಅಥವಾ ಸುಮ್ಮನೆ ಕಣ್ಮುಚ್ಚಿ ಕುಳಿತರೂ ಕೂಡ ಉಂಟಾಗುವ ಅನುಭೂತಿಯನ್ನು ಅನುಭವಿಸಿಯೇ ತಿಳಿಯಬೇಕು.
ಇಂತಹ ಪುರಾಣಪ್ರಸಿದ್ಧ ತಾಣದ ಕುರಿತು ಆಧುನಿಕ ಯುಗದಲ್ಲಿ ಅಷ್ಟಾಗಿ ತಿಳಿದಿರಲಿಲ್ಲ. ೧೯೩೦ರ ಹೊತ್ತಿಗೆ ಈ ಗುಹೆ ಮತ್ತು ಅದರ ಮಹತ್ತ್ವವನ್ನು ಪತ್ತೆಹಚ್ಚಿದ ಶ್ರೇಯಸ್ಸು ಸ್ವಾಮಿ ಪುರುಷೋತ್ತಮಾನಂದರಿಗೆ ಸಲ್ಲುತ್ತದೆ. ರಾಮಕೃಷ್ಣ ಪರಮಹಂಸರ ನೇರ ಶಿಷ್ಯರಾಗಿದ್ದ ಸ್ವಾಮಿ ಶಿವಾನಂದರ ಶಿಷ್ಯರಾಗಿದ್ದ ಪುರುಷೋತ್ತಮಾನಂದರು ಮೂಲತಃ ಕೇರಳದವರು. ರಾಮಕೃಷ್ಣ ಆಶ್ರಮದಲ್ಲಿ ಹಲವು ವರ್ಷಗಳ ಕಾಲ ಸೇವೆಸಲ್ಲಿಸಿದ್ದ ಅವರು, ಅನಂತರದ ದಿನಗಳಲ್ಲಿ ಆಧ್ಯಾತ್ಮಿಕ ಸಾಧನೆಯಲ್ಲಿ ನಿರತರಾಗುವ ಉದ್ದೇಶದಿಂದ ಋಷಿಕೇಶಕ್ಕೆ ಬಂದಿದ್ದರು.
ಆಗ ಸುತ್ತಾಡುತ್ತ ಈ ಪ್ರದೇಶಕ್ಕೆ ಬಂದಿದ್ದ ಅವರು ವಸಿಷ್ಠ ಗುಹೆಯನ್ನು ಪತ್ತೆಹಚ್ಚಿದ್ದರು ಮತ್ತು ಇಲ್ಲಿಯೇ ನೆಲಸಿ ಸಾಧನೆಯಲ್ಲಿ ತೊಡಗಿದ್ದರು. ರಾಮಕೃಷ್ಣ ಆಶ್ರಮದ ಸಿದ್ಧಾಂತಕ್ಕೆ ಅನುಗುಣವಾಗಿ ಆಧ್ಯಾತ್ಮಿಕ ಸಾಧನೆಯ ಜೊತೆಯಲ್ಲೆ ಇಲ್ಲಿಯ ಜನಸಾಮಾನ್ಯರ ಹಿತದೃಷ್ಟಿಯಿಂದ ಸೇವಾಚಟುವಟಿಕೆಗಳನ್ನು ಹಮ್ಮಿಕೊಂಡಿದ್ದ ಅವರು ಇಲ್ಲಿ ಒಂದು ಚಿಕಿತ್ಸಾಲಯ ಮತ್ತು ಶಿಕ್ಷಣಸಂಸ್ಥೆ ಆರಂಭಿಸಿದ್ದರು. ಇವೆರಡೂ ಸಂಸ್ಥೆಗಳು ಇಂದಿಗೂ ಶಿಕ್ಷಣ ಮತ್ತು ಆರೋಗ್ಯಸೇವೆ ನಡೆಸಿಕೊಂಡು ಬರುತ್ತಿವೆ. ಇಲ್ಲಿಯೇ ಇಹಲೋಕಯಾತ್ರೆ ಮುಗಿಸಿದ ಸ್ವಾಮಿ ಪುರುಷೋತ್ತಮಾನಂದರ ಸಮಾಧಿ ಸ್ಥಳ ಕೂಡ ಇಲ್ಲಿಯೇ ಇದೆ.
ಅರುಂಧತಿ ಗುಹೆ
ಪಕ್ಕದಲ್ಲೇ ಹರಿಯುವ ಗಂಗಾನದಿಯ ತಟದಲ್ಲಿ ಮೆತ್ತಗಿನ ಮರಳು ಮಿಶ್ರಿತ ಮಣ್ಣು ಮತ್ತು ಸಣ್ಣಪುಟ್ಟ ಬಂಡೆ ಕಲ್ಲುಗಳ ನಡುವಿನಿಂದ ಒಂದಿಷ್ಟು ಹೆಜ್ಜೆ ನಡೆದರೆ ಸಿಗುವುದೇ ಅರುಂಧತಿ ಗುಹೆ. ಕಾಡಿನ ಅಂಚಿನಲ್ಲಿರುವ ಈ ಶಿಲಾನಿರ್ಮಿತಿ ಗಂಗಾ ನದಿಗೆ ಇನ್ನಷ್ಟು ಹತ್ತಿರ ಇರುವ ಕಾರಣ ಇಲ್ಲಿ ಹೆಚ್ಚಿನ ಪ್ರಶಾಂತತೆ ನೆಲಸಿದೆ. ಗುಹೆಯು ತನ್ನ ಪ್ರಾಚೀನ ಸ್ವರೂಪವನ್ನು ಹೆಚ್ಚುಕಡಮೆ ಉಳಿಸಿಕೊಂಡಿದೆ. ಈ ಗುಹೆ ತಲಪಬೇಕಾದರೆ ಒಂದಿಷ್ಟು ಮೆಟ್ಟಿಲುಗಳನ್ನು ಏರಬೇಕು. ಅರುಂಧತಿ ಧ್ಯಾನಕ್ಕೆ ಕುಳಿತಿದ್ದ ಸ್ಥಳದಲ್ಲಿ ಇಂದು ಹಲವು ದೇವ-ದೇವಿಯರ ಚಿತ್ರಪಟಗಳು ರಾರಾಜಿಸುತ್ತಿವೆ.
ಉಳಿದೆಡೆ ರಭಸದಿಂದ ಹರಿಯುವ ಗಂಗಾನದಿ ಇಲ್ಲಿ ಪ್ರಶಾಂತವಾಗಿ ಹರಿಯುತ್ತಾಳೆ. ಬೀಸುವ ತಂಗಾಳಿಯ ನಡುವೆ ಇಲ್ಲಿ ಒಂದಿಷ್ಟು ನಿಮಿಷ ಕುಳಿತು ಸುಧೆಯ ಜುಳುಜುಳು ನಿನಾದದ ಮೇಲೆ ಗಮನ ಕೇಂದ್ರೀಕರಿಸಿದರೆ, ಮನಸ್ಸು ತನ್ನಿಂತಾನೆ ಧ್ಯಾನಕ್ಕೆ ಜಾರುತ್ತದೆ. ಅನಂತರ ಸಮಯ ಕಳೆದದ್ದೇ ಗೊತ್ತಾಗಲಾರದು. ಒಟ್ಟಿನಲ್ಲಿ, ಈ ತಾಣ ಪ್ರಾಕೃತಿಕ ಮತ್ತು ಆಧ್ಯಾತ್ಮಿಕ ವಾತಾವರಣ ನೆಲಸಿರುವ ಅದ್ಭುತ ಸ್ಥಳ.
ಅಚ್ಚರಿಯ ಸಂಗತಿಯೆಂದರೆ, ಈ ಗುಹೆಗೆ ಯೇಸುಕ್ರಿಸ್ತ ಭೇಟಿ ನೀಡಿದ್ದ ಎಂಬ ಪ್ರತೀತಿಯು ಇತ್ತೀಚಿನ ದಿನಗಳಲ್ಲಿ ಸಾಮಾಜಿಕಜಾಲತಾಣದಲ್ಲಿ ಮತ್ತು ಕೆಲವೊಂದು ಪುಸ್ತಕಗಳಲ್ಲಿ ಕಾಣಸಿಗುತ್ತದೆ. ಆದರೆ, ಇದು ಇತ್ತೀಚಿನ ದಿನಗಳಲ್ಲಿ ಪ್ರಚಾರಗೊಂಡದ್ದು, ಅದು ಕಪೋಲಕಲ್ಪಿತ ಎಂದು ಪುರುಷೋತ್ತಮಾನಂದ ಟ್ರಸ್ಟ್ ಪದಾಧಿಕಾರಿಗಳು ಸ್ಪಷ್ಟಪಡಿಸಿದರು.
ಝಿಲ್ಮಿಲ್ ಗುಹೆ
ವಿಚಿತ್ರ ಹೆಸರನ್ನು ಹೊಂದಿರುವ ಈ ಗುಹೆಯನ್ನು ಕನ್ನಡದಲ್ಲಿ ‘ಮಿನುಗುವ ಗುಹೆ’ ಎಂದು ಕರೆಯಬಹುದು. ಕತ್ತಲೆ-ಬೆಳಕಿನ ಕಣ್ಣುಮುಚ್ಚಾಲೆ ಆಡುತ್ತಿರುವಂತೆ ಭಾಸವಾಗುವ ಕಾರಣ ಗುಹೆಗೆ ಈ ಹೆಸರು. ಇದು ಪ್ರಸಿದ್ಧ ಯಾತ್ರಾಸ್ಥಳ ನೀಲಕಂಠ ದೇವಾಲಯದಿಂದ ಸುಮಾರು ನಾಲ್ಕು ಕಿ.ಮೀ. ಅಂತರದಲ್ಲಿ ಕಾಡಿನ ನಡುವೆ ಇದೆ. ಇಲ್ಲಿಗೆ ತಲಪಲು ಕಾಡಿನ ನಡುವೆ ಒಂದಿಷ್ಟು ಏರಿಳಿತ ಹೊಂದಿರುವ ಕಚ್ಚಾರಸ್ತೆಯ ಮೂಲಕ ಹಾದುಹೋಗಬೇಕು.
ಮೂರು ಗುಹೆಗಳ ಸಂಕೀರ್ಣದಂತಿರುವ ಈ ರಚನೆ ನಿಜಕ್ಕೂ ಒಂದು ಪ್ರಾಕೃತಿಕ ಅದ್ಭುತ. ಗುಹೆಯ ಮೂಲಭಾಗ ತಲಪಬೇಕಾದರೆ ಮೇಲ್ಮುಖವಾಗಿ ಹೆಜ್ಜೆ ಹಾಕಬೇಕು. ಗುಹೆಯ ಮೇಲ್ಛಾವಣಿಯಲ್ಲಿ ಇರುವ ತೂತಿನ ಮೂಲಕ ಸೂರ್ಯನ ಬೆಳಕು ಗುಹೆಯ ಒಳಗೆ ನುಸುಳುತ್ತಿರುತ್ತದೆ. ಹಾಗಾಗಿ, ಕತ್ತಲು ತುಂಬಿರುವ ಗುಹೆಯ ಒಳಾಂಗಣದಲ್ಲಿ ಒಂದಿಷ್ಟು ಬೆಳಕಿನ ಸಿಂಚನ. ಹೀಗಾಗಿ, ಇದಕ್ಕೆ ಝಿಲ್ಮಿಲ್ ಅಥವಾ ಮಿನುಗುವ ಗುಹೆ ಎಂಬ ಹೆಸರು ಬಂದಿದೆ.
ಮೂರು ಗುಹೆಗಳ ಪೈಕಿ ಒಂದು ಶಿವನ ಆವಾಸ ಎನಿಸಿದರೆ, ಇನ್ನೆರಡು ಗುಹೆಗಳನ್ನು ಹನುಮಾನ್ ಗುಹೆ ಮತ್ತು ನರಸಿಂಹ ಗುಹೆ ಎಂದು ಕರೆಯಲಾಗುತ್ತದೆ. ಬೃಹದಾಕಾರದ ಪ್ರಧಾನ ಗುಹೆಯಲ್ಲಿ ಗೋರಖನಾಥರು ವಾಸವಿದ್ದರು ಎಂಬ ಪ್ರತೀತಿ ಇದ್ದು, ಇಲ್ಲಿ ಅವರ ಆಳೆತ್ತರದ ವಿಗ್ರಹವನ್ನು ಸ್ಥಾಪಿಸಲಾಗಿದೆ. ಇಲ್ಲಿರುವ ಆಳೆತ್ತರ ಪ್ರಾಚೀನ ತ್ರಿಶೂಲ ಗಮನಸೆಳೆಯುತ್ತದೆ. ಒಂದು ಕಾಲದಲ್ಲಿ ತಾಂತ್ರಿಕ ಸಾಧಕರ ನೆಲೆಯಾಗಿರಬೇಕು. ಇಂದಿಗೂ ನಾಥಪಂಥದ ಸಾಧುಗಳು ಇಲ್ಲಿ ವಾಸವಿದ್ದಾರೆ. ಗುಹೆಯ ಒಳಭಾಗದಲ್ಲಿ ಕುಳಿತು ದೀರ್ಘಶ್ವಾಸ ಎಳೆದುಕೊಂಡು ಬಿಡುತ್ತ ಓಂಕಾರ ಧ್ವನಿ ಮಾಡಿದರೆ, ಆ ಧ್ವನಿಯು ಮುಂದಿನ ಕೆಲವು ಕ್ಷಣಗಳ ಕಾಲ ನಮ್ಮ ಮನಸ್ಸಿನೊಳಗೆ ಪ್ರತಿಧ್ವನಿಸುವ ಅನುಭೂತಿಯಾಗುತ್ತದೆ. ಪ್ರಸಿದ್ಧ ನೀಲಕಂಠ ಮಂದಿರದಿAದ ಇಲ್ಲಿಗೆ ಕಾಡಿನ ಮೂಲಕ ಹಾದುಹೋಗುವ ಕಾಲ್ದಾರಿ ಕೂಡ ಇದ್ದು, ಈ ಚಾರಣ ಕೂಡ ಒಂದು ಅದ್ಭುತ ಅನುಭವ.
ಗಣೇಶ ಗುಹೆ
ಋಷಿಕೇಶದ ಗುಹಾಸರಣಿಯ ಕೊನೆಯ ತುದಿಯಲ್ಲಿ ನೆಲೆನಿಂತಿರುವುದು ಗಣೇಶ ಗುಹೆ. ಝಿಲ್ಮಿಲ್ ಗುಹೆಯಿಂದ ಹೆಚ್ಚುಕಡಮೆ ಕಡಿದಾದ ದಾರಿಯ ಮೂಲಕ ತುದಿಯಲ್ಲಿ ಒಂದಿಷ್ಟು ಹೆಜ್ಜೆ ನಡೆದರೆ, ಬೆಟ್ಟವೊಂದರ ತುದಿಯಲ್ಲಿ ಈ ಗುಹೆ ಕಾಣಿಸುತ್ತದೆ. ಬೆಟ್ಟದ ಅಂಚಿನಲ್ಲಿರುವ ಈ ಸ್ಥಳದಿಂದ ಸುತ್ತಮುತ್ತಲಿನ ಹಚ್ಚಹಸಿರಿನ ವಿಹಂಗಮನೋಟ ಸವಿಯಬಹುದು. ಬೀಸುತ್ತಿರುವ ತಂಗಾಳಿ ಮತ್ತು ಇಲ್ಲಿಂದ ವೀಕ್ಷಿಸುವ ಸೂರ್ಯಾಸ್ತದ ದೃಶ್ಯ ನಯನ ಮನೋಹರ ಮತ್ತು ಆಹ್ಲಾದಕರ.
ಒಟ್ಟಿನಲ್ಲಿ ಋಷಿಕೇಶದ ಆಸುಪಾಸಿನಲ್ಲಿರುವ ಈ ಗುಹಾಲಯಗಳು ಈ ಪ್ರದೇಶದ ವೈಶಿಷ್ಟö್ಯ. ಪ್ರವಾಸಿಗರು, ಚಾರಣಿಗರು, ಆಧ್ಯಾತ್ಮಿಕ ಸಾಧಕರು – ಹೀಗೆ ಎಲ್ಲರೂ ಬಹುವಾಗಿ ಮೆಚ್ಚುವ ಮತ್ತು ಆನಂದಿಸುವ ತಾಣಗಳಿವು. ಮೊದಲ ಭೇಟಿಯಲ್ಲೇ ಇಲ್ಲಿ ಉಂಟಾಗುವ ಅದ್ಭುತ ಅನುಭೂತಿ ಬದುಕಿರುವತನಕ ಮರೆಯಲು ಸಾಧ್ಯವಿಲ್ಲ. ಋಷಿಕೇಶ ಯಾತ್ರೆಯ ಸಂದರ್ಭ ಈ ಗುಹೆಗಳನ್ನು ಕೂಡ ಸಂದರ್ಶಿಸಿದರೆ ಯಾತ್ರೆ ಇನ್ನಷ್ಟು ರೋಮಾಂಚಕಾರಿ ಎನಿಸುವಲ್ಲಿ ಯಾವುದೇ ಸಂಶಯವಿಲ್ಲ.