ವಾಸ್ತುಶಿಲ್ಪ ಮತ್ತು ಚಿತ್ರಕಲೆಗಳಿಗೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆ, ಹಿಂದೂಪುರ ತಾಲೂಕಿನಲ್ಲಿರುವ ಲೇಪಾಕ್ಷಿ ಜಗತ್ಪ್ರಸಿದ್ದವಾದುದು. ಕರ್ನಾಟಕದ ಗಡಿಯಂಚಿನಲ್ಲಿರುವ ಲೇಪಾಕ್ಷಿ ಗ್ರಾಮ ಹಿಂದೂಪುರಕ್ಕೆ ಕೇವಲ ೧೪ ಕಿ.ಮೀ. ಪೂರ್ವದಿಕ್ಕಿನಲ್ಲಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ೯೮ ಕಿ.ಮೀ. ದೂರ ಮತ್ತು ಗೌರಿಬಿದನೂರಿನಿಂದ ಕೂಗಳತೆ ದೂರದಲ್ಲಿದೆ. ಲೇಪಾಕ್ಷಿಯನ್ನು ತಲಪಲು ರೈಲು ಮಾರ್ಗದ ಜೊತೆಯಲ್ಲಿ ಧಾರಾಳವಾಗಿ ರಸ್ತೆ ಮಾರ್ಗಗಳಿವೆ. ಹಿಂದೂಪುರದ ರೈಲ್ವೇನಿಲ್ದಾಣದಲ್ಲಿ ಇಳಿದು ರಸ್ತೆ ಮಾರ್ಗದಲ್ಲಿ ೧೪ ಕಿ.ಮೀ. ಪ್ರಯಾಣ ಮುಂದುವರೆಸಿದರೆ ಕೈಗೆಟಕುವ ಲೇಪಾಕ್ಷಿಗೆ ಆಂಧ್ರಪ್ರದೇಶ ಮತ್ತು ಕರ್ನಾಟಕದ ರಾಜ್ಯ ಸರ್ಕಾರಿ ಬಸ್ಗಳ ಸೌಲಭ್ಯ ಯಥೇಚ್ಛವಾಗಿದೆ.
ಕೆಲವು ಶತಮಾನಗಳ ಹಿಂದೆ ಭಾರೀ ವೈಭವದಿಂದ ಕೂಡಿದ್ದು ಇಂದು ಪುಟ್ಟ ಗ್ರಾಮದಂತೆ ತೋರುವ ಲೇಪಾಕ್ಷಿಯ ದಕ್ಷಿಣ ದಿಕ್ಕಿನಲ್ಲಿರುವ ಕೂರ್ಮಶೈಲ ಎಂಬ ಪುಟ್ಟ ಗುಡ್ಡದ ಮೇಲೆ ನೆಲೆಸಿರುವ ಪಾಪನಾಶೇಶ್ವರ, ರಘುನಾಥೇಶ್ವರ, ವೀರಭದ್ರ ಸ್ವಾಮಿ ದೇವಾಲಯಗಳೊಂದಿಗೆ ಬೃಹದಾಕಾರದ ದೇವಾಲಯಗಳ ನಿರ್ಮಾಣ ಕಾರ್ಯ ಇಲ್ಲಿ ನಡೆದಿದೆ. ಕ್ರಿ.ಶ. ೧೫-೧೬ನೇ ಶತಮಾನದಲ್ಲಿ ಇದು ಪ್ರಮುಖ ಶೈವಕ್ಷೇತ್ರವಾಗಿದ್ದರ ಜೊತೆಯಲ್ಲಿ ವ್ಯಾಪಾರೀ ಕೇಂದ್ರವಾಗಿ ಹೆಸರು ಪಡೆದಿತ್ತು.
“ಲೇಪಾಕ್ಷ್ಯಾಂ ಪಾಪನಾಶನಃ” ಎಂದು ಸ್ಕಂದಪುರಾಣದಲ್ಲಿ ಉಲ್ಲೇಖಿತವಾಗಿದೆ. ವಿಜಯನಗರದ ಅರಸರಾಗಿದ್ದ ಶ್ರೀಕೃ?ದೇವರಾಯರ ಸೋದರ ಅಚ್ಯುತ ದೇವರಾಯರು (ಕ್ರಿ.ಶ. ೧೫೨೯-೪೨) ರಾಜ್ಯವನ್ನು ಆಳಿದ ಕಾಲದಲ್ಲಿ ಪೆನುಗೊಂಡೆ ಸಂಸ್ಥಾನದ ಕೋಶಾಧಿಕಾರಿ ಆಗಿದ್ದ ವಿರುಪಣ್ಣ ಲೇಪಾಕ್ಷಿ ದೇವಾಲಯಗಳ ಸಮುಚ್ಛಯವನ್ನು ನಿರ್ಮಾಣ ಮಾಡಿಸಿದ್ದಾರೆಂಬುದಕ್ಕೆ ಇಲ್ಲಿನ ಕನ್ನಡ ಮತ್ತು ತೆಲುಗು ಶಾಸನಗಳು
ಲೇಪಾಕ್ಷಿ ಗ್ರಾಮದ ನಂದಿ ಲಕ್ಕಪ್ಪ ಶೆಟ್ಟಿಯವರ ಮಕ್ಕಳಾದ ವಿರುಪಣ್ಣ, ವೀರಣ್ಣ ಅವರು ಇಲ್ಲಿನ ದೇವಾಲಯದ ರೂವಾರಿಗಳು. ವಿರುಪಣ್ಣ ಬಾಲ್ಯದಿಂದಲೇ ಕಲಾಭಿರುಚಿ ಬೆಳೆಸಿಕೊಂಡಿದ್ದ ದೈವಭಕ್ತಿ ಪರಾಯಣ. ಈತನ ತಮ್ಮ ವೀರಣ್ಣ ರಾಮನಿಗೆ ಲಕ್ಷ್ಮಣನಿದ್ದಂತೆ ಅನ್ಯೋನ್ಯ ಭ್ರಾತೃಪ್ರೇಮವನ್ನು ಬೆಳೆಸಿಕೊಂಡಿದ್ದವನು. ವಿರುಪಣ್ಣ ಧರ್ಮಬದ್ದನಾಗಿ ಉದ್ಯೋಗ ಧರ್ಮವನ್ನು ಪಾಲಿಸುತ್ತಿದ್ದನು. ಕೆರೆಗಳು, ಕುಂಟೆಗಳು, ಬಾವಿಗಳನ್ನು ನಿರ್ಮಿಸಿ ಕೃಷಿ ಅಭಿವೃದ್ದಿಗೆ ಸಹಕರಿಸಿದನು. ವರ್ತಕ, ವ್ಯಾಪಾರಿಗಳ ಸಂಘಗಳನ್ನು ರಚಿಸಿ ವ್ಯಾಪಾರವನ್ನು ಅಭಿವೃದ್ದಿ ಮಾಡಿದನು. ವೀರಶೈವ ಜನಾಂಗದ ವಿರುಪಣ್ಣ ಮೂಕನಾದ ತನ್ನ ಮಗನಿಗೆ ಮಾತು ಬಂದಿದ್ದರಿಂದ ಹರ್ಷಚಿತ್ತನಾಗಿ ತಮ್ಮ ಕುಲದೈವ ವೀರಭದ್ರನಿಗೆ ದೇವಾಲಯ ನಿರ್ಮಾಣ ಮಾಡಲು ಬಯಸಿದನು. ಆಲಯ ನಿರ್ಮಾಣಕ್ಕೆ ತನ್ನ ಸ್ವಂತ ಹಣವನ್ನು ಖರ್ಚು ಮಾಡಿದ್ದರ ಜೊತೆಯಲ್ಲಿ ಜನರಿಂದಲೂ ದೇಣಿಗೆ ಸಂಗ್ರಹಿಸಿದನು.
ಕರ್ನಾಟಕದ ಬೇಲೂರಿನಲ್ಲಿ ವಿಶ್ವವಿಖ್ಯಾತವಾಗಿರುವ ಶ್ರೀ ಚೆನ್ನಕೇಶವ ಆಲಯವನ್ನು ನಕ್ಷತ್ರಾಕಾರದ ಜಗಲಿಯ ಮೇಲೆ ಅತ್ಯಂತ ಸುಂದರ ಮತ್ತು ಕಲಾತ್ಮಕವಾಗಿ ನಿರ್ಮಾಣ ಮಾಡಿದ ಜಕ್ಕಣಾಚಾರಿ, ಢಕ್ಕಣಾಚಾರಿಯವರನ್ನು ಲೇಪಾಕ್ಷಿಗೆ ಆಹ್ವಾನಿಸಿ ಅವರೊಡನೆ ದೇವಾಲಯ ನಿರ್ಮಾಣದ ವಿಚಾರವಾಗಿ ಚರ್ಚಿಸಿದನು. ಆಲಯ ನಿರ್ಮಾಣಕ್ಕೆ ಗ್ರಾಮಕ್ಕೆ ದಕ್ಷಿಣ ದಿಕ್ಕಿನಲ್ಲಿರುವ ಕೂರ್ಮಶೈಲ ಸೂಕ್ತ ಪ್ರದೇಶವೆಂದು ತೀರ್ಮಾನಿಸಲಾಯಿತು. ಅಂದಿನ ಕಾಲಕ್ಕೆ ಈ ಗುಡ್ಡದ ಮೇಲೆ ಪುಟ್ಟಪುಟ್ಟ ದೇವಾಲಯಗಳು ಜೀರ್ಣಾವಸ್ಥೆಯಲ್ಲಿದ್ದವು. ಸಾಳುವ ನರಸಿಂಹರಾಯ ಈ ದೇವಾಲಯಗಳನ್ನು ಜೀರ್ಣೋದ್ದಾರ ಮಾಡಿಸಿದ್ದನು. ಈ ದೇವಾಲಯಗಳನ್ನು ಒಳಗೊಂಡ ಆಲಯಗಳ ಸಮುಚ್ಛಯವನ್ನು ನಿರ್ಮಾಣ ಮಾಡಲು ನಿರ್ಧರಿಸಿದ್ದರ ಫಲವಾಗಿಯೇ ಕ್ರಿ.ಶ. ೧೫೩೩ರ ಸುಮಾರಿಗೆ ಅಪರೂಪದ ಶಿಲ್ಪಕಲೆಯಿಂದ ಕೂಡಿದ ಈ ನಯನ ಮನೋಹರ ದೇವಾಲಯಗಳ ಸಂಕೀರ್ಣ ತಲೆಯೆತ್ತಲು ಸಾಧ್ಯವಾಯಿತು.
ಗರ್ಭಗೃಹ, ಅಂತರಾಳ, ಮುಖಮಂಟಪ, ಪ್ರದಕ್ಷಿಣಾಪಥ ಮುಂತಾದವುಗಳು ಶಾಸ್ತ್ರೋಕ್ತವಾಗಿ ತಲೆಯೆತ್ತಿದ್ದು ವಿಭಿನ್ನವಾದ ಅದ್ಭುತ ದೇವತಾ ಮೂರ್ತಿಗಳನ್ನು ಕೆತ್ತಿರುವ ಸ್ತಂಬಗಳಮೇಲೆ ನಾಟ್ಯ ಮಂಟಪ, ಗರ್ಭಗುಡಿಯ ಮೇಲೆ ಎರಡು ಅಂತಸ್ತಿನ ಶಿಖರವಿದೆ, ಮೇಲ್ಛಾವಣಿ ಮೇಲೆ ಸ್ವಲ್ಪ ಮಾಸಲು ಮಾಸಲಾಗಿರುವ ವರ್ಣ ಚಿತ್ರಗಳಿವೆ. ಈ ಚಿತ್ರಗಳಿಗೆ ಆಗಿ ಕಾಲದಲ್ಲಿ ದೊರೆಯುತ್ತಿದ್ದ ಹಸಿರು ಎಲೆಗಳನ್ನು ಅರೆದು ತಯಾರಿಸಿದ ಬಣ್ಣಗಳನ್ನು ಉಪಯೋಗಿಸಲಾಗಿದೆ.
ಸುಂದರವಾದ ವಿಜಯನಗರ ಶೈಲಿಯಲ್ಲಿ ಶಿಲ್ಪಶಾಸ್ತ್ರದ ಸಂಪ್ರದಾಯದಂತೆ ಕೆತ್ತಿದ ವಿಶಿಷ್ಟ ದೇವತಾ ಮೂರ್ತಿಗಳನ್ನು ಇಲ್ಲಿ ಕಾಣಬಹುದಾಗಿದೆ. ನಾಲ್ಕು ಹಸ್ತಗಳಿರುವ ವೀರಭದ್ರಸ್ವಾಮಿ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದು ಶಿವನ ಅವತಾರವಾದ ಕಲ್ಯಾಣ ಸುಂದರ ಮೂರ್ತಿ, ಕಾಲಾರಿ ಮೂರ್ತಿ, ಗಜಾಸುರ ಸಂಹಾರ ಮೂರ್ತಿ, ಭಿಕ್ಷಾಟನ ಮೂರ್ತಿ, ನಟರಾಜ ಮೂರ್ತಿ, ವಾಸ್ತು ಪುರುಷ, ಗಂಗಾ, ಯಮುನ, ಭೃಂಗಿ, ಲಕ್ಷ್ಮಿ. ಇಂದ್ರ ಮುಂತಾದ ದೇವತಾ ಪ್ರತಿಮೆಗಳು ಇಲ್ಲಿ ಕಡೆಯಲ್ಪಟ್ಟಿವೆ. ಕಟ್ಟ ಕಡೆಯ ವಿಜಯ ಭಕ್ತಿಯದೇ! ಎಂಬ ನೀತಿಯನ್ನು ಸಾರುವ ಭಕ್ತ ಶಿರಿಯಾಳ ಮತ್ತು ಕಿರಾತಾರ್ಜುನೀಯ ಕಥೆಗಳನ್ನು ಶಿಲ್ಪದ ಮೂಲಕ ಸಾರಿ ಹೇಳುವ ಕಥಾನಕ ಚಿತ್ರಗಳ ಭಂಗಿ ಶಿಲ್ಪಿಗಳ ಕೈಚಳಕಕ್ಕೆ ಉದಾಹರಣೆಯಾಗಿದೆ. ದೇವಾಲಯದಲ್ಲಿರುವ ಯಾಳಿ ಮೃಗ(ಸೊಂಡಲಿರುವ ಸಿಂಹಾಕಾರದ ಒಂದು ಕಾಲ್ಪನಿಕ ಪ್ರಾಣಿ)ದ ಕೆತ್ತನೆ ಅತ್ಯಾಕರ್ಷಕವಾಗಿದ್ದು ಯಾತ್ರಿಕರ ಗಮನ ಸೆಳೆಯುತ್ತದೆ.
ಏಳು ಹೆಡೆಯ ನಾಗಲಿಂಗ
ಏಕಶಿಲಾ ನಿರ್ಮಿತವಾದ ಅಪರೂಪದ ನಾಗಸಹಿತ ಲಿಂಗಮೂರ್ತಿ ವೀರಭದ್ರಸ್ವಾಮಿ ದೇವಾಲಯಕ್ಕೆ ನೈಋತ್ಯ ದಿಕ್ಕಿನಲ್ಲಿದೆ. ೫ ಮೀಟರ್ ಎತ್ತರವಿರುವ ಈ ನಾಗಸಹಿತ ಲಿಂಗ ಮೂರ್ತಿ ಲೇಪಾಕ್ಷಿ ದೇವಾಲಯದ ವಾಸ್ತುವಿನ್ಯಾಸಕ್ಕೆ ವಿಶೇ?ತೆಯನ್ನು ನೀಡಿದೆ. ಇಂತಹ ನಾಗಲಿಂಗ ವಿಶ್ವದಲ್ಲಿ ಬೇರೆ ಎಲ್ಲೂ ಇಲ್ಲವೆನ್ನುವ ಹೆಗ್ಗಳಿಕೆಯೂ ಇದರದು. ಇದರ ಕೆತ್ತನೆಯ ಹಿಂದೆ ಒಂದು ಸುಂದರ ಕಥೆಯೂ ಇದೆ. ಲೇಪಾಕ್ಷಿ ದೇವಾಲಯ ಕೆತ್ತನೆಗೆ ಬಂದಿದ್ದ ಶಿಲ್ಪಿಗಳ ಬಿಡಾರದಲ್ಲಿ ಅಡುಗೆ ಕಾರ್ಯ ನಡೆಯುತ್ತಿದ್ದಾಗ ಶಿಲ್ಪಿಗಳು ಸುಮ್ಮನೆ ಕುಳಿತುಕೊಳ್ಳಲು ಬಯಸದೆ ಅಡುಗೆಮನೆಯ ಮುಂದಿದ್ದ ದೊಡ್ಡ ಬಂಡೆಯನ್ನು ಕೆತ್ತಲು ಶುರುಮಾಡಿದರಂತೆ. ಅವರ ತಾಯಿ ಅಡುಗೆಯಾಗಿದೆಯೆಂದು ಹೇಳಲು ಬರುವಷ್ಟರಲ್ಲಿ ಈ ಬೃಹತ್ ಗಾತ್ರದ ನಾಗಲಿಂಗ ಶಿಲ್ಪ ತಲೆಯೆತ್ತಿದ್ದಿತಂತೆ. ಈ ವಿಗ್ರಹಕ್ಕೆ ಸಿಡಿಲು ಬಡಿದಿದ್ದರಿಂದ ಒಂದು ಭಾಗದಲ್ಲಿ ಸ್ವಲ್ಪ ಬಿರುಕು ಮೂಡಿದ್ದು ಅದಕ್ಕೆ ತೇಪೆ ಹಾಕಲಾಗಿದೆ.
ಲೇಪಾಕ್ಷಿ ಬಸವಣ್ಣ
ಏಕಶಿಲಾನಿರ್ಮಿತವಾದ ಲೇಪಾಕ್ಷಿ ಬಸವಣ್ಣ ಎಲ್ಲ ಅವಯವಗಳ ಪರಿಪೂರ್ಣ ಸೌ?ತೆಯನ್ನು ಹೊಂದಿದ್ದು ಸಹಜ ಚೈತನ್ಯ ಮೂರ್ತಿಯಾಗಿ ಕಾಣುತ್ತದೆ. ಹತ್ತು ಮೀ. ಉದ್ದ, ಆರು ಮೀ. ಅಗಲವಿರುವ ಅತ್ಯಂತ ವಿಶಿ?ವಾದ ನಂದಿ ವಿಗ್ರಹವನ್ನು ಸುಲಭವಾಗಿ ವರ್ಣಿಸಲು ಸಾಧ್ಯವಿಲ್ಲ. ನಂದಿಯ ಕತ್ತಿನಲ್ಲಿ ಗಂಟೆಗಳ ಹಾರವಿದೆ, ಈ ಹಾರದಲ್ಲಿ ಒಂದು ಪಥಕದ ಮೇಲೆ ಮೈಸೂರಿನ ರಾಜಲಾಂಛನವಾದ ಗಂಢಭೇರುಂಡ ಪಕ್ಷಿಯನ್ನು ಕೆತ್ತಿದ್ದಾರೆ. ಈ ನಂದಿಯು ಲೇಪಾಕ್ಷಿ ಗ್ರಾಮದ ಹೊರವಲಯದಲ್ಲಿ ಸುಮಾರು ಅರ್ಧ ಕಿ.ಮೀ.ದೂರದಲ್ಲಿದೆ. ಯಾತ್ರಿಕರು ಅದರ ಮುಂದೆ ನಿಂತು ಛಾಯಾಚಿತ್ರವನ್ನು ತೆಗೆಸಿಕೊಳ್ಳದೇ ಹೋದಲ್ಲಿ ತಮ್ಮ ಲೇಪಾಕ್ಷಿ ಪ್ರವಾಸವೇ ಅರ್ಥಹೀನ ಎನ್ನುವ ಭಾವನೆ ಹೊಂದಿದ್ದಾರೆ. ಹಲವಾರು ತೆಲುಗು ಚಲನಚಿತ್ರಗಳಲ್ಲಿ ಈ ನಂದಿಯ ಸುತ್ತಮುತ್ತ ಹಾಡುಗಳ ದೃಶ್ಯೀಕರಣ ನಡೆದಿದೆ.
ವರ್ಣ ಚಿತ್ರಗಳು
ಈ ದೇವಾಲಯದಲ್ಲಿ ನೋಡಬಹುದಾದ ಎರಡು ಪ್ರಮುಖ ಅಂಶಗಳಿವೆ. ಮೊದಲನೆಯದು ಏಕಶಿಲಾ ನಿರ್ಮಿತ ಶಿಲ್ಪಗಳಾದರೆ ಎರಡನೆಯದು ಅತಿ ಸುಂದರವಾದ ವರ್ಣ ಚಿತ್ರಗಳು. ವೀರಭದ್ರ, ರಘುನಾಥ ಆಲಯಗಳ ಗರ್ಭಗೃಹದ ಮೇಲ್ಛಾವಣಿ ಮೇಲೆ, ಮಂಟಪದ ಸ್ತಂಭಗಳ ಮೇಲೆ ಅನೇಕ ಚಿತ್ರಗಳನ್ನು ಬಿಡಿಸಿದ್ದಾರೆ. ಈ ಬಣ್ಣದ ಚಿತ್ರಗಳು ನೈಸರ್ಗಿಕ ವರ್ಣನಾತ್ಮಕವಾಗಿದೆ. ರಾಮಾಯಣ, ಮಹಾಭಾರತ, ಭಾಗವತ ಪುರಾಣಗಳಿಗೆ ಸಂಬಂಧಿಸಿದ ಕಥಾನಕಗಳು, ಕಿರಾತಾರ್ಜುನೀಯ, ಗಿರಿಜಾ ಕಲ್ಯಾಣದ ವೃತ್ತಾಂತಗಳು, ಮನುನೀತಿ ಚೋಳನ ಕಥೆ, ವಿರುಪಣ್ಣ ಜೀವನದಲ್ಲಿನ ಪ್ರಮುಖ ಘಟ್ಟಗಳನ್ನು ಬಣ್ಣಗಳಲ್ಲಿ ಮನೋಜ್ಞವಾಗಿ ಬಿಡಿಸಲಾಗಿದೆ. ಗಿರಿಜಾ ಕಲ್ಯಾಣ ಮಂಟಪದ ಸ್ತಂಬಗಳಲ್ಲಿ ಅಳವಡಿಸಿರುವ ಸುಂದರ ಚಿತ್ತಾರದ ವಿನ್ಯಾಸಗಳನ್ನು ಹಲವಾರು ಪ್ರಸಿದ್ದ ವಸ್ತ್ರತಯಾರಕರು ತಮ್ಮ ಸೀರೆಗಳ ಅಂಚಿನಲ್ಲಿ ಉಪಯೋಗಿಸಿಕೊಳ್ಳುತ್ತಿದ್ದು ಇಂದಿಗೂ ಅವುಗಳನ್ನು ’ಲೇಪಾಕ್ಷಿ ಬಾರ್ಡರ್ ಸೀರೆಗಳು’ ಎಂದೇ ಕರೆಯಲಾಗುತ್ತದೆ.
ವಿಜಯನಗರ ವಾಸ್ತುಶಿಲ್ಪ, ಚಿತ್ರ ಕಲಾಕೃತಿಗಳಿಗೆ ಕೇಂದ್ರಬಿಂದುವಾಗಿರುವ ಲೇಪಾಕ್ಷಿ ಪ್ರಕೃತಿ ವೈಪರೀತ್ಯಗಳಿಗೆ, ಕಾಲಘಟ್ಟಗಳ ಅಗ್ನಿಪರೀಕ್ಷೆಗಳನ್ನು ಮೆಟ್ಟಿ ಇತಿಹಾಸದ ಅಂದಿನ ಸಾಮಾಜಿಕ ಪರಿಸ್ಥಿತಿಗಳಿಗೆ ಸಾಕ್ಷೀಭೂತವಾಗಿ ನಿಂತಿದೆ.
ಕಲ್ಯಾಣ ಮಂಟಪ, ನಾಟ್ಯ ಮಂಟಪಗಳು, ಅಪೂರ್ವ ಶಿಲ್ಪ ಸಂಪತ್ತು, ಪವಿತ್ರ ದೇಗುಲಗಳು, ಅಲಂಕೃತ ಸ್ಥಂಬ ಸಮುದಾಯ, ದೇವತಾಮೂರ್ತಿಗಳು, ವರ್ಣಚಿತ್ರಗಳು, ಏಕಶಿಲಾ ನಿರ್ಮಿತ ಬಸವಣ್ಣ, ನಾಗಲಿಂಗ,ವಿರುಪಣ್ಣನ ವಿಷಾದ ಇತಿಹಾಸಗಳು ಲೇಪಾಕ್ಷಿಗೆ ನಶಿಸದ, ಅಳಿಸಿಹೋಗದ ಖ್ಯಾತಿಯನ್ನು ನೀಡಿದೆ. ಲೇಪಾಕ್ಷಿಯನ್ನು ಒಂದು ಬಾರಿ ನೋಡಿದರೆ ತೃಪ್ತಿಯಾಗುವುದಿಲ್ಲ. ಪದೇಪದೇ ಅಲ್ಲಿಗೆ ತೆರಳುವ, ಅಲ್ಲಿನ ಸುಂದರ ಕಲಾತ್ಮಕ ಶಿಲ್ಪಗಳ ಮಡಿಲಲ್ಲಿ ಕುಳಿತುಕೊಳ್ಳುವ ಹಂಬಲ ನಮ್ಮನ್ನು ಕಾಡುತ್ತಲೇ ಇರುತ್ತದೆ.
(ವಿವಿಧ ಮೂಲಗಳಿಂದ)