ಬಹುಶಃ ನವಶಿಲಾಯುಗದ ಮಾನವ ಇದನ್ನು ನಿರ್ಮಿಸುತ್ತಿದ್ದಾಗ ಇಪ್ಪತ್ತೊಂದನೆಯ ಶತಮಾನದಲ್ಲೂ ಅವನ ನಿರ್ಮಾಣವನ್ನು ವೀಕ್ಷಿಸಿ ಅಚ್ಚರಿಗೊಳ್ಳಲು ಪ್ರತಿವರ್ಷ ಸುಮಾರು ಒಂದು ದಶಲಕ್ಷದಷ್ಟು ಪ್ರವಾಸಿಗರು ಬರಬಹುದೆಂದು ಊಹಿಸಿರಲಿಕ್ಕಿಲ್ಲ!
ವಿಜ್ಞಾನ, ತಂತ್ರಜ್ಞಾನಗಳ ವೇಗವಾದ ಬೆಳವಣಿಗೆ ಇಂದಿನ ಮಾನವ ಆಕಾಶ ಮುಟ್ಟುವಂತಹ ಕಟ್ಟಡಗಳನ್ನು ನಿರ್ಮಿಸುವಂತೆ ಮಾಡಿದೆ. ಈ ದಿನ ಮಾನವನಿಗಿರುವ ಆಧುನಿಕ ಸಲಕರಣೆ, ಯಂತ್ರಗಳು ಕೇವಲ ಭವ್ಯವಾದ ನಿರ್ಮಾಣಗಳನ್ನು ನಿರ್ಮಿಸುವುದಷ್ಟೇ ಅಲ್ಲ ಕೆಲವೇ ನಿಮಿಷಗಳಲ್ಲಿ ಅವುಗಳನ್ನು ನೆಲಸಮ ಮಾಡಲೂ ಸಾಧ್ಯವಾಗಿಸಿವೆ. ಆದರೆ ಮಾನವನ ಈ ಬಗೆಯ ಬೆಳವಣಿಗೆಗೆ ತನ್ನದೇ ಆದ ವಿಕಾಸದ ಹಾದಿಯಿದೆ ಮತ್ತು ಆ ಹಾದಿಯಲ್ಲಿ ಅನೇಕ ಹಂತಗಳಿವೆ. ತನ್ನ ವಿಕಾಸದ ಪಯಣದಲ್ಲಿ ಮಾನವ ಅನೇಕ ಅಚ್ಚರಿಮೂಡಿಸುವಂತಹ ಅನ್ವೇಷಣೆಗಳನ್ನು ಮಾಡಿದ್ದಾನೆ, ಸ್ಮಾರಕಗಳನ್ನು ನಿರ್ಮಿಸಿದ್ದಾನೆ. ಯಾವುದೇ ಬಗೆಯ ಆಧುನಿಕ ಸಲಕರಣೆಗಳು, ಯಂತ್ರಗಳಿಲ್ಲದ ಕಾಲದಲ್ಲಿ ಅಂದಿನ ಮಾನವ ನಿರ್ಮಿಸಿದ ಒಂದು ಅದ್ಭುತ ಸ್ಮಾರಕ ಸ್ಟೋನ್ಹೆಂಜ್. ಇದು ಪೂರ್ವಿಕರಲ್ಲಿದ್ದ ಶಿಲ್ಪವಿಜ್ಞಾನದ ಉತ್ಕೃಷ್ಟ ಉದಾಹರಣೆ.
ಇತಿಹಾಸಪೂರ್ವಕಾಲದ ಈ ಸ್ಮಾರಕ ದಕ್ಷಿಣ ಇಂಗ್ಲೆಂಡ್ನ ವಿಲ್ಟ್ಶೈರ್ ಕೌಂಟಿಯಲ್ಲಿದೆ. ಹಸಿರು ಹುಲ್ಲುಗಾವಲಿನ ಚಾಪೆಯಂತಿರುವ ಸುಮಾರು ಎರಡು ಸಾವಿರ ಎಕರೆ ಬಯಲುಪ್ರದೇಶದ ನಡುವೆ ನಿಂತಿರುವ ಈ ಕಲ್ಲುಗಳ ಸಮೂಹವನ್ನು ವೀಕ್ಷಿಸಿದರೆ ಇತಿಹಾಸಪೂರ್ವ ಕಾಲದ ಮಾನವನ ಶಿಲ್ಪಜ್ಞಾನದ ಬಗ್ಗೆ ಮೆಚ್ಚುಗೆ ಮೂಡುವುದರಲ್ಲಿ ಸಂಶಯವಿಲ್ಲ. ಸ್ಟೋನ್ಹೆಂಜ್ ನಿರ್ಮಾಣದ ಬಗ್ಗೆ ಮತ್ತು ಇದರ ನಿರ್ಮಾಣದ ಹಿಂದಿದ್ದ ಉದ್ದೇಶದ ಬಗ್ಗೆ ಈವರೆಗೂ ಯಾವುದೇ ನಿಖರವಾದ ಮಾಹಿತಿ ಲಭ್ಯವಿಲ್ಲ. ಆದರೆ ಇತಿಹಾಸಕಾರರು ಹಾಗೂ ಪುರಾತತ್ವಶಾಸ್ತ್ರಜ್ಞರು ಕಾಲಕ್ರಮೇಣ ನಡೆಸಿರುವ ಅಧ್ಯಯನಗಳಿಂದ ಈ ಜಾಗದ ಕುರಿತು ಕೆಲ ವಿಷಯಗಳು ಬೆಳಕಿಗೆ ಬಂದಿವೆ.
ಸ್ಟೋನ್ಹೆಂಜ್ ಎಂದರೆ ಭಾರವಾದ ಕಲ್ಲುಗಂಬಗಳ ವೃತ್ತಾಕಾರದ ರಚನೆ ಎಂದೇ ಹೇಳಬಹುದು. ಸುಮಾರು ೧೫೦ ಕಲ್ಲುಗಳನ್ನು ಒಳಗೊಂಡ ಇದರ ಮೂಲವಿನ್ಯಾಸ ಕಲ್ಲುಗಳ ಮೂರು ಪದರ ಅಥವಾ ಸ್ತರಗಳನ್ನು ಹೊಂದಿತ್ತು. ಅತ್ಯಂತ ಒಳಭಾಗದಲ್ಲಿ ಸಾರ್ಸನ್ ಕಲ್ಲುಗಳ ಲಾಳಾಕಾರದ ಜೋಡಣೆ, ನಂತರದ ಪದರದಲ್ಲಿ ಲಾಳಾಕಾರ ಅಥವಾ ವೃತ್ತಾಕಾರದ ಬ್ಲೂ ಸ್ಟೋನ್ಸ್ನ ಜೋಡಣೆ ಮತ್ತು ಇದರ ಸುತ್ತ ಮೂರನೆಯ ಪದರವಾಗಿ ಸಾರ್ಸನ್ ಕಲ್ಲುಗಳ ದೊಡ್ಡ ಹೊರವೃತ್ತವನ್ನು ರಚಿಸಲಾಗಿತ್ತು. ಅಂದಿನ ಮಾನವ ಈ ಕಲ್ಲುಗಳನ್ನು ಅನೇಕ ಬಾರಿ ವಿವಿಧ ಬಗೆಯಲ್ಲಿ ಜೋಡಿಸಿದ್ದಾನೆ ಎಂದು ಹೇಳಲಾಗಿದೆ. ಹಾಗೆಯೇ ಈ ಸ್ಮಾರಕದ ನಿರ್ಮಾಣ ಅನೇಕ ಹಂತಗಳಲ್ಲಿ ಆಗಿದ್ದೆಂದೂ ಹೇಳಲಾಗಿದೆ. ವಿವಿಧ ಹಂತಗಳಲ್ಲಿ ಇದರ ಸಂಪೂರ್ಣ ನಿರ್ಮಾಣವನ್ನು ಮಾಡಲು ನವಶಿಲಾಯುಗ ಕಾಲದ ಜನರಿಗೆ ಸುಮಾರು ೧೫೦೦ ವರ್ಷಗಳು ಬೇಕಾಯಿತಂತೆ. ಸುಮಾರು ಐದು ಸಾವಿರ ವರ್ಷಗಳ ಹಿಂದೆ ಈ ಜಾಗವನ್ನು ಕೇವಲ ಶವಗಳನ್ನು ಹೂಳಲು ಬಳಸಲಾಗುತ್ತಿತ್ತು. ನಂತರದ ಕಾಲದಲ್ಲಿ ಇಲ್ಲಿ ಹಲವಾರು ಕಲ್ಲುಗಳನ್ನು ತಂದು ಸ್ಥಾಪಿಸಲಾಯಿತು ಎಂದು ಹೇಳಲಾಗಿದೆ.
ಇತಿಹಾಸ ಮತ್ತು ನಿರ್ಮಾಣ
ಹದಿನೇಳನೆಯ ಶತಮಾನದಲ್ಲಿ ಈ ಜಾಗದಲ್ಲಿ ಪತ್ತೆಯಾದ ಕೆಲ ಪ್ರಾಚೀನ ಸಮಾಧಿಗಳಿಂದ ಈ ಸ್ಮಾರಕವನ್ನು ಯೂರೋಪಿನಲ್ಲಿ ಕಬ್ಬಿಣಯುಗದಲ್ಲಿದ್ದ ಕೆಲ್ಟಿಕ್ ಜನಾಂಗದ ಪುರೋಹಿತ ವರ್ಗದವರಾದ ಡ್ರೂಯಿಡ್ಡರು (Druids) ತಮ್ಮ ಪೂಜೆ, ಧಾರ್ಮಿಕ ಆಚರಣೆಗಳಿಗಾಗಿ ನಿರ್ಮಿಸಿರಬಹುದೆಂಬ ಊಹೆ ಮಾಡಲಾಯಿತು. ಈ ಜಾಗವನ್ನು ಡ್ರೂಯಿಡ್ಡರು ತಮ್ಮ ದೇವತೆಗಳಿಗೆ ಬಲಿ ಅರ್ಪಿಸುವ ಜಾಗವನ್ನಾಗಿ ಬಳಸುತ್ತಿದ್ದರೆಂದೂ ಊಹಿಸಲಾಯಿತು. ಈ ವಾದವನ್ನು ಮೂರು ಶತಮಾನಗಳವರೆಗೆ ಸತ್ಯವೆಂದೆ ನಂಬಲಾಯಿತು. ಆದರೆ ಇಪ್ಪತ್ತನೆಯ ಶತಮಾನದಲ್ಲಿ ನಡೆಸಲಾದ ರೇಡಿಯೋಕಾರ್ಬನ್ ಡೇಟಿಂಗ್ ಅಧ್ಯಯನದಿಂದ ಸ್ಟೋನ್ಹೆಂಜ್ ಡ್ರೂಯಿಡ್ಡರು ನೆಲೆಸಿದ್ದ ಕಾಲಕ್ಕಿಂತಲೂ ಸಾವಿರಾರು ವರ್ಷಗಳಷ್ಟು ಹಿಂದಿನದೆಂದು ತಿಳಿದಿದೆ. ಹಾಗಾಗಿ ಈ ಸ್ಮಾರಕವನ್ನು ಕಬ್ಬಿಣಯುಗದ ಡ್ರೂಯಿಡ್ಡರು ನಿರ್ಮಿಸಿಲ್ಲವೆಂದು ಸಾಬೀತಾಯಿತಲ್ಲದೆ ಇದರ ನಿರ್ಮಾಣ ಕಬ್ಬಿಣಯುಗಕ್ಕೂ ಪೂರ್ವದ ನವಶಿಲಾಯುಗದ ಮನುಷ್ಯರಿಂದ ಆಗಿದ್ದೆಂದು ತಿಳಿದುಬಂದಿತು.
ಕಾರ್ಬನ್ ಡೇಟಿಂಗ್ನ ಮೂಲಕ ಸ್ಟೋನ್ಹೆಂಜ್ ಕುರಿತು ಹೊಸ ಅಧ್ಯಯನ ಮಾಡಲು ಸಾಧ್ಯವಾಗಿ ಇದರ ನಿರ್ಮಾಣ ಯಾವ ಕಾಲದಲ್ಲಿ ಮತ್ತು ಹೇಗಾಗಿರಬಹುದೆಂಬ ಬಗ್ಗೆ ಮತ್ತಷ್ಟು ಅಂಶಗಳು ಬೆಳಕಿಗೆ ಬಂದವು. ಸ್ಟೋನ್ಹೆಂಜ್ನ ಮೊದಲನೆಯ ಹಂತದ ನಿರ್ಮಾಣ ಪ್ರಾರಂಭವಾಗಿದ್ದು ನವಶಿಲಾಯುಗದ ಕಾಲ ಅಂದರೆ ಕ್ರಿ.ಪೂ. ೨೫೦೦ ಅಥವಾ ಅದಕ್ಕೂ ಮೊದಲು. ಈ ಹಂತದಲ್ಲಿ ಅಂದಿನ ಮಾನವ ಜಿಂಕೆಗಳ ಕೊಂಬುಗಳಿಂದ ಭೂಮಿಯನ್ನು ಅಗೆದು ಅಲ್ಲಲ್ಲಿ ಹಳ್ಳಗಳನ್ನು ತೋಡಿದ್ದ. ಈ ದಟ್ಟವಾದ ಹಳ್ಳ ಅಥವಾ ಗುಂಡಿಗಳ ಸುತ್ತ ಸುಣ್ಣದ ಕಲ್ಲುಗಳನ್ನು ಇಟ್ಟು ದಡದಂತೆ ಕಟ್ಟಿದ್ದ. ಈ ಬಗೆಯ ಗುಂಡಿಗಳು ಸ್ಟೋನ್ಹೆಂಜ್ ಜಾಗದಲ್ಲಿ ನೂರಾರು ವರ್ಷಗಳು ಹಾಗೆಯೇ ಇದ್ದವು. ಸ್ಟೋನ್ಹೆಂಜ್ನ ಒಳಭಾಗದಲ್ಲಿ ಇಂದಿಗೂ ಕೆಲ ಆಳವಾದ ರಂಧ್ರಗಳು ಕಂಡುಬರುತ್ತವೆ. ಇವುಗಳಿಗೆ ಆಬ್ರಿ ರಂಧ್ರಗಳೆಂದೇ ಹೆಸರು. ಈ ರಂಧ್ರಗಳನ್ನು ಕಂಡುಹಿಡಿದ ಜಾನ್ ಆಬ್ರಿ ಎಂಬ ಹದಿನೇಳನೆಯ ಶತಮಾನದ ಪುರಾತತ್ವಶಾಸ್ತ್ರಜ್ಞನ ಹೆಸರನ್ನು ಇವುಗಳಿಗೆ ಇಡಲಾಗಿದೆ. ಆ ಕಾಲದಲ್ಲಿ ಈ ರಂಧ್ರಗಳು ಮರದ ಕಂಬಗಳನ್ನು ಹಿಡಿದಿಟ್ಟುಕೊಂಡಿರಬಹುದು ಎಂದು ಕೆಲ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ರಂಧ್ರಗಳ ಸುತ್ತ ಶವಗಳನ್ನು ಸುಡಲಾಗುತ್ತಿತ್ತು ಎಂಬ ಅನಿಸಿಕೆಯೂ ಇದೆ.
ಎರಡನೆಯ ಹಂತದ ನಿರ್ಮಾಣ ನೂರಾರು ವರ್ಷಗಳ ನಂತರ ನಡೆದದ್ದು. ಈ ಹಂತದಲ್ಲಿ ಸುಮಾರು ೮೦ ವಿದೇಶಿ ಕಲ್ಲುಗಳನ್ನು ಸ್ಯಾಲಿಸ್ಬರಿ ಬಯಲುಪ್ರದೇಶದ ಸ್ಟೋನ್ಹೆಂಜ್ ಸ್ಮಾರಕದ ಜಾಗದಲ್ಲಿ ಲಂಬವಾಗಿ ನಿಲ್ಲುವಂತೆ (vertical position) ಸ್ಥಾಪಿಸಲಾಯಿತು. ಈ ಕಲ್ಲುಗಳಿಗೆ `ಬ್ಲೂ ಸ್ಟೋನ್ಸ್’ (Blue Stones = ನೀಲಿಕಲ್ಲುಗಳು) ಎಂದು ಕರೆಯಲಾಗುತ್ತದೆ. ಹಾಗೆಂದ ಮಾತ್ರಕ್ಕೆ ಈ ಕಲ್ಲುಗಳು ನೀಲಿ ಬಣ್ಣದಲ್ಲಿಲ್ಲ. ಬ್ಲೂ ಸ್ಟೋನ್ಸ್ ಎಂಬುದು ಯೂರೋಪಿನಲ್ಲಿ ದೊರೆಯುವ ಡಾಲರೈಟ್ ಎಂಬ ಕಲ್ಲುಬಂಡೆಗಳಿಗಿರುವ ಒಂದು ವ್ಯಾವಹಾರಿಕ ಹೆಸರು ಮಾತ್ರ. ಸ್ಮಾರಕದ ಜಾಗದಲ್ಲಿ ಈ ದಿನ ಕೇವಲ ೪೩ ಬ್ಲೂ ಸ್ಟೋನ್ಗಳು ಮಾತ್ರ ಉಳಿದಿವೆ. ಈ ಕಲ್ಲುಗಳು ಚಿಕ್ಕ ಗಾತ್ರದವಾಗಿದ್ದು ಒಂದೊಂದು ಕಲ್ಲು ಸುಮಾರು ನಾಲ್ಕು ಟನ್ನುಗಳಷ್ಟು ಭಾರದ್ದಾಗಿವೆ. ಈ ಕಲ್ಲುಗಳನ್ನು ಕಂಬಗಳಂತೆ ಲಂಬವಾಗಿ ವೃತ್ತಾಕಾರದಲ್ಲಿ ಸ್ಥಾಪಿಸಲಾಗಿದೆ. ಅಚ್ಚರಿಯ ವಿಷಯವೆಂದರೆ ಈ ಒಳಭಾಗದ ರಚನೆಗೆ ಬಳಸಲಾಗಿರುವ ಬ್ಲೂ ಸ್ಟೋನ್ಗಳು ಸ್ಥಳೀಯ ಕಲ್ಲುಗಳಾಗಿರದೆ ಸ್ಟೋನ್ಹೆಂಜ್ನಿಂದ ಸುಮಾರು ಮುನ್ನೂರು ಕಿಲೋಮೀಟರ್ ದೂರದಲ್ಲಿರುವ ವೇಲ್ಸ್ ಪ್ರಾಂತದಲ್ಲಿರುವ ಪ್ರೆಸೆಲಿ ಬೆಟ್ಟಗಳಿಂದ ತಂದದ್ದಾಗಿವೆ.
ನಿರ್ಮಾಣದ ಮೂರನೆಯ ಹಂತದಲ್ಲಿ ಅಂದರೆ ಕ್ರಿ.ಪೂ. ೨೦೦೦ದ ಸುಮಾರಿನಲ್ಲಿ `ಸಾರ್ಸನ್’ ಎಂಬ ಬೃಹದಾಕಾರದ ಮರಳುಗಲ್ಲುಗಳನ್ನು ಬ್ಲೂ ಸ್ಟೋನ್ಗಳ ಸುತ್ತಲೂ ಹೊರವೃತ್ತದಂತೆ ಸ್ಥಾಪಿಸಲಾಯಿತು. ಈ ಸಾರ್ಸನ್ ಕಲ್ಲುಗಳು ನಿಜಕ್ಕೂ ಭಾರೀ ಗಾತ್ರದವಾಗಿದ್ದು, ಕಲ್ಲಿನ ಆಕಾರ ಮತ್ತು ಗಾತ್ರದ ಆಧಾರದ ಮೇಲೆ ಒಂದೊಂದು ಕಲ್ಲು ಸುಮಾರು ಇಪ್ಪತ್ತರಿಂದ ನಲವತ್ತು ಟನ್ನುಗಳಷ್ಟು ತೂಕ ಹೊಂದಿವೆ. ಅತಿ ಉದ್ದದ ಸಾರ್ಸನ್ ಕಲ್ಲು ೨೪ ಅಡಿ ಎತ್ತರದ್ದಾಗಿದೆ. ಈ ಕಲ್ಲುಗಳನ್ನು ಸ್ಟೋನ್ಹೆಂಜ್ನ ಜಾಗದಿಂದ ಸುಮಾರು ನಲವತ್ತು ಕಿಲೋಮೀಟರ್ ದೂರದಲ್ಲಿರುವ ಕಲ್ಲುಗಣಿಗಳಿಂದ ಹೊತ್ತು ತಂದು ಇಲ್ಲಿ ಸ್ಥಾಪಿಸಲಾಗಿದೆ. ಈ ದಿನ ಸುಮಾರು ಐವತ್ತು ಸಾರ್ಸನ್ ಕಲ್ಲುಗಳನ್ನು ಸ್ಟೋನ್ಹೆಂಜ್ನಲ್ಲಿ ಕಾಣಬಹುದು. ಆದರೆ ಇದರ ನಿರ್ಮಾಣ ಕಾಲದಲ್ಲಿ ಇದಕ್ಕೂ ಹೆಚ್ಚು ಕಲ್ಲುಗಳನ್ನು ಸ್ಟೋನ್ಹೆಂಜ್ನ ವಿನ್ಯಾಸದಲ್ಲಿ ಬಳಸಲಾಗಿತ್ತೆಂದು ಹೇಳಲಾಗಿದೆ.
ಈ ಸಾರ್ಸನ್ ಕಲ್ಲುಗಳನ್ನು ಎರಡು ಬಗೆಯ ವಿನ್ಯಾಸಗಳಲ್ಲಿ ಸ್ಥಾಪಿಸಲಾಗಿದೆ. ಮೊದಲನೆಯ ರಚನೆ ಹಲವು ಸಾರ್ಸನ್ ಕಲ್ಲುಗಳನ್ನು ಬ್ಲೂ ಸ್ಟೋನ್ಗಳ ಸುತ್ತ ವೃತ್ತಾಕಾರದಲ್ಲಿ ಜೋಡಿಸಿರುವುದು. ಇಲ್ಲಿ ವಿವಿಧ ಸಾರ್ಸನ್ ಕಲ್ಲುಗಳನ್ನು ವೃತ್ತಾಕಾರದಲ್ಲಿ ಲಂಬವಾಗಿ ನಿಲ್ಲಿಸಿ ಅವುಗಳ ಮೇಲೆ ಒಂದೊಂದು ಸಾರ್ಸನ್ ಕಲ್ಲನ್ನು ಹಾಸುಗಲ್ಲಿನಂತೆ ಇಡಲಾಗಿದೆ. ಈ ಮೇಲಿನ ಹಾಸುಗಲ್ಲುಗಳನ್ನು ಸಹ ಕೆಳಗಿನ ಲಂಬವಾಗಿರಿಸಿದ ಕಲ್ಲುಗಳಿಗೆ ವಿಶೇಷ ಜೋಡಣೆಗಳಿಂದ ಭದ್ರವಾಗಿ ಜೋಡಿಸಲಾಗಿದೆ. ಸಾಮಾನ್ಯವಾಗಿ ಮರದ ಕೆಲಸಗಳಲ್ಲಿ ಮಾಡುವ `ಗೂಟ ಮತ್ತು ಕುಳಿ’ (Tenon and Mortise Joints)ಗಳಂತಹ ಜೋಡಣೆಗಳನ್ನು ಇಲ್ಲಿ ಕಾಣಬಹುದಾಗಿದೆ. ನಿಂತಿರುವ ಕಲ್ಲಿನಲ್ಲಿ ಗೂಟವನ್ನು ಕೊರೆದು ಹಾಸುಗಲ್ಲಿನಲ್ಲಿ ಈ ಗೂಟಗಳಿಗೆ ಸರಿಹೊಂದುವಂತಹ ಕುಳಿಗಳನ್ನು ರಚಿಸಿ ಈ ಎರಡೂ ಕಲ್ಲುಗಳು ಒಂದಕ್ಕೊಂದು ಭದ್ರವಾಗಿ ಜೋಡಣೆಯಾಗುವಂತೆ ಮಾಡಲಾಗಿದೆ. ಇದಲ್ಲದೆ ಅಕ್ಕಪಕ್ಕವಿರುವ ಮೇಲಿನ ಹಾಸುಗಲ್ಲುಗಳಲ್ಲಿಯೂ ಸಹ ಒಂದರಲ್ಲಿ ಆಯತಾಕಾರದ ರಂಧ್ರವನ್ನು ಕೊರೆದು ಪಕ್ಕದ ಕಲ್ಲಿನಲ್ಲಿ ಅದಕ್ಕೆ ಸರಿಹೊಂದುವಂತೆ ಗೂಟವನ್ನು ಮಾಡಿ ಎರಡು ಕಲ್ಲುಗಳು ಒಂದರೊಳಗೊಂದು ತಳಕುಹಾಕಿಕೊಳ್ಳುವಂತೆ ಮಾಡಲಾಗಿದೆ.
ಸಾರ್ಸನ್ ಕಲ್ಲುಗಳ ಎರಡನೆಯ ರಚನೆ ಬ್ಲೂ ಸ್ಟೋನ್ಗಳ ಒಳಗೆ ಮಾಡಿರುವ ಲಾಳಾಕಾರದ (Horseshoe shape) ರಚನೆ. ಈ ರಚನೆಯಲ್ಲಿ ಮೂರು ಕಲ್ಲುಗಳ ಜೋಡಣೆಯನ್ನು ಮಾಡಿ ಲಾಳಾಕಾರದ ರಚನೆಯ ಒಂದು ಭಾಗವನ್ನಾಗಿ ಬಳಸಲಾಗಿದೆ. ಈ ಮೂರು ಕಲ್ಲುಗಳ ಜೋಡಣೆಗೆ ಟ್ರಿಲಿಥಾನ್ (ಎರಡು ಲಂಬವಾಗಿ ನಿಂತಿರುವ ಕಲ್ಲುಗಳ ಮೇಲೆ ಒಂದು ಕಲ್ಲನ್ನು ಸಮತಲವಾಗಿ ಹಾಸುವ ಜೋಡಣೆ) ಎಂದು ಕರೆಯುತ್ತಾರೆ. ಹಲವು ಪ್ರತ್ಯೇಕ ಟ್ರಿಲಿಥಾನ್ಗಳನ್ನು ಲಾಳಾಕಾರದಲ್ಲಿ ಸ್ಥಾಪಿಸಿ ಈ ರಚನೆ ಸ್ಮಾರಕದ ಮಧ್ಯೆ ಇರುವಂತೆ ಮಾಡಲಾಗಿದೆ.
ಸುಮಾರು ಇದೇ ಕಾಲದಲ್ಲಿ ಸ್ಟೋನ್ಹೆಂಜ್ ಸ್ಮಾರಕದ ಹೊರಗೆ ಅಂದರೆ ದ್ವಾರದ ಜಾಗದಲ್ಲಿ ಒಂದು ಬೃಹದಾಕಾರದ ಸಾರ್ಸನ್ ಕಲ್ಲನ್ನೂ ಸ್ಥಾಪಿಸಲಾಗಿದೆ. ಈ ಕಲ್ಲಿಗೆ `ಹೀಲ್ಸ್ಟೋನ್’ (Heel (Stone = ಹಿಮ್ಮಡಿ ಕಲ್ಲು) ಎಂದು ಕರೆಯುತ್ತಾರೆ. ಸಂಕ್ರಾಂತಿಯ ದಿನದಂದು ಉದಯಿಸುವ ಸೂರ್ಯನ ದಿಕ್ಕು ಮತ್ತು ಸ್ಥಾನವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ದಿಷ್ಟ ಜಾಗದಲ್ಲಿಯೆ ಈ ಕಲ್ಲನ್ನು ಸ್ಥಾಪಿಸಿದ್ದರೆಂದು ಊಹಿಸಲಾಗಿದೆ.
ಇತ್ತೀಚೆಗೆ ಅಂದರೆ ೧೯೫೦ರಲ್ಲಿ ನಡೆಸಿದ ಉತ್ಖನನದಿಂದ ಸ್ಟೋನ್ಹೆಂಜ್ನ ಕಲ್ಲುಗಂಬಗಳ ರಚನೆಯ ಕೇಂದ್ರಭಾಗದಲ್ಲಿ ಒಂದು ಬೃಹದಾಕಾರದ ಮಂದ ಹಸಿರು ಬಣ್ಣದ ಮರಳುಗಲ್ಲು ಪತ್ತೆಯಾಗಿದೆ. ಈ ಕಲ್ಲಿಗೆ `ಆಲ್ಟರ್ ಸ್ಟೋನ್’ (ಬಲಿಪೀಠ ಶಿಲೆ) ಎಂದು ಕರೆಯುತ್ತಾರೆ. ಈ ಕಲ್ಲು ಸಾರ್ಸನ್ ಮತ್ತು ಬ್ಲೂ ಸ್ಟೋನ್ಗಳ ನಡುವೆ ಅಡ್ಡವಾಗಿ ಮಲಗಿದೆ. ಆದರೆ ಸ್ಟೋನ್ಹೆಂಜ್ ನಿರ್ಮಾಣ ಕಾಲದಲ್ಲಿ ಈ ಕಲ್ಲನ್ನು ವೃತ್ತದ ನಡುವೆ ಅಂದರೆ ವಿನ್ಯಾಸದ ಮಧ್ಯಭಾಗದಲ್ಲಿ ನಿಲ್ಲಿಸಲಾಗಿತ್ತೆಂದು ಹೇಳಲಾಗಿದೆ. ಈ ಕಲ್ಲಿನ ಮೇಲ್ಮೈ ಕಾಗೆಬಂಗಾರ (Mica)ದ ಚೂರುಗಳಿಂದ ಕೂಡಿದ್ದು ಬ್ಲೂ ಸ್ಟೋನ್ಗಳಂತೆ ಈ ಕಲ್ಲನ್ನು ಸಹ ನೂರಾರು ಕಿಲೋಮೀಟರು ದೂರವಿರುವ ವೇಲ್ಸ್ನ ಪಶ್ಚಿಮ ಮತ್ತು ದಕ್ಷಿಣ ಭಾಗಗಳಿಂದ ತರಲಾಗಿದೆಯೆಂದು ಹೇಳಲಾಗಿದೆ.
ಮೊದಲೇ ತಿಳಿಸಿದಂತೆ ಮೊದಲನೆಯ ಹಂತದ ನಿರ್ಮಾಣದಲ್ಲಿ ತಂದಿರಿಸಿದ್ದ ಬ್ಲೂಸ್ಟೋನ್ಗಳನ್ನು ಕಾಲಕಾಲಕ್ಕೆ ಹಲವಾರು ಬಾರಿ ವಿವಿಧ ಬಗೆಯಲ್ಲಿ ಮರುಜೋಡಣೆ ಮಾಡಲಾಗುತ್ತಿತ್ತೆಂದು ಹೇಳಲಾಗಿದೆ. ವೃತ್ತಾಕಾರದಲ್ಲಿದ್ದ ಕಲ್ಲುಗಳನ್ನು ಕೆಲ ವರ್ಷಗಳ ನಂತರ ಲಾಳಾಕಾರದಲ್ಲಿ ಜೋಡಿಸಲಾಯಿತೆಂದು ತಿಳಿದುಬಂದಿದೆ.
ಸಾಗಣೆ
ಯಾವುದೇ ಬಗೆಯ ಆಧುನಿಕ ಯಂತ್ರಗಳು, ವಾಹನ ಸೌಕರ್ಯಗಳಿಲ್ಲದ ನವಶಿಲಾಯುಗದಲ್ಲಿ ಇಂತಹ ಭಾರೀ ಕಲ್ಲುಗಳನ್ನು ನೂರಾರು ಕಿಲೋಮೀಟರುಗಳಿಂದ ಸ್ಟೋನ್ಹೆಂಜ್ನ ಜಾಗಕ್ಕೆ ಅಂದಿನ ಮಾನವ ಸಾಗಿಸಿದ್ದಾದರೂ ಹೇಗೆ ಎಂಬುದೇ ಕುತೂಹಲಕಾರಿ ವಿಷಯ. ಇದಕ್ಕೂ ಕೆಲವು ಊಹೆಗಳನ್ನು ಮಾಡಲಾಗಿದೆ. ಹಿಮಯುಗದ ಕಾಲದಲ್ಲಿಯೆ ಹಿಮನದಿಗಳು ಭಾರೀ ಕಲ್ಲುಗಳನ್ನು ವೇಲ್ಸ್ ಪ್ರದೇಶದಿಂದ ಸ್ಯಾಲಿಸ್ಬರಿಯ ಸುತ್ತಣ ಪ್ರದೇಶದ ಕಡೆಗೆ ಸಾಗಿಸಿವೆ ಎಂಬುದು ವಿಜ್ಞಾನಿಗಳ ವಾದ. ಆದರೆ ಸ್ಟೋನ್ಹೆಂಜ್ ನಿರ್ಮಾಣಕ್ಕೆ ಅಗತ್ಯವಾಗಿದ್ದ ಕಲ್ಲುಗಳನ್ನು ನಿಖರವಾದ ಪ್ರಮಾಣದಲ್ಲಿ ಹಿಮರಾಶಿಯೇ ಸಾಗಿಸಿರಲು ಸಾಧ್ಯವಿಲ್ಲವೆಂದೂ, ಇದು ಮನುಷ್ಯನ ದೈಹಿಕ ಬಲದಿಂದ ಮಾತ್ರ ಆಗಿರಬಹುದೆಂದೂ ಪುರಾತತ್ವಶಾಸ್ತ್ರಜ್ಞರ ನಿಲವು.
ಬಹುತೇಕ ಇತಿಹಾಸಕಾರರು ಮತ್ತು ಪುರಾತತ್ವಶಾಸ್ತ್ರಜ್ಞರು ಒಪ್ಪಿಕೊಳ್ಳುವ ವಾದವೆಂದರೆ ದೂರದ ವೇಲ್ಸ್ನಿಂದ ಬ್ಲೂಸ್ಟೋನ್ಗಳನ್ನು ಮೊದಲು ಜಲಮಾರ್ಗದಿಂದ ಅನಂತರ ಭೂಮಾರ್ಗದಿಂದ ಸಾಗಿಸಿರಬಹುದೆನ್ನುವುದು. ಸ್ಟೋನ್ಹೆಂಜ್ನ ನಿರ್ಮಾಪಕರು ಮರಗಳ ಕಾಂಡಗಳಿಂದ ಉರುಳುದಿಂಡುಗಳನ್ನು ಮತ್ತು ಜಾರುಬಂಡಿಗಳನ್ನು ತಯಾರಿಸಿ ಪ್ರೆಸೆಲಿ ಬೆಟ್ಟದಲ್ಲಿನ ಬ್ಲೂಸ್ಟೋನ್ಗಳನ್ನು ಎಳೆದು ನೀರಿನಲ್ಲಿರುವ ತೆಪ್ಪಗಳಿಗೆ ಸ್ಥಾನಾಂತರಿಸಿದರು. ವೇಲ್ಸ್ ಕಡಲತೀರದಿಂದ ಅಲ್ಲಿಯ ಏವಾನ್ ನದಿಯಲ್ಲಿ ತೇಲಿಸಿಕೊಂಡು ಇಂಗ್ಲಂಡಿನ ಸ್ಯಾಲಿಸ್ಬರಿ ಪ್ರದೇಶದೆಡೆಗೆ ಸಾಗಿಸಿದರು. ನದಿಯಲ್ಲಿ ತೇಲಿಸಿದ ಕಲ್ಲುಗಳನ್ನು ಹಲವು ನಾವೆಗಳಿಂದ ಎಳೆದಿರಲೂಬಹುದು. ಇತ್ತೀಚಿನ ಒಂದು ವರದಿಯ ಪ್ರಕಾರ, ಕೊರಕಲು ಹಾಕಿ ತಯಾರಿಸಿದ ಉದ್ದವಾದ ಮರದ ಹಲಗೆಗಳ ಮೇಲೆ ನೀಲಿಕಲ್ಲುಗಳನ್ನು ಇರಿಸಿ ಕೊರಕಲುಗಳಲ್ಲಿ ಹೊರಳುಗುಂಡುಗಳನ್ನು ಬಳಸಿಕೊಂಡು ದನಗಳಿಂದ ಎಳೆದು ಸಾಗಿಸಿದ್ದರು ಎಂದು ಹೇಳಲಾಗಿದೆ.
ಕಲ್ಲುಗಳನ್ನು ಉರುಳಿಸಿದ್ದರೂ, ಎಳೆದಿದ್ದರೂ, ಜಲಮಾರ್ಗ ದಿಂದ ತಂದಿದ್ದರೂ ಆ ದಿನಗಳಲ್ಲಿ ನೂರಾರು ಕಿಲೋಮೀಟರು ದೂರದಿಂದ ಇಂತಹ ಬೃಹದಾಕಾರದ ಕಲ್ಲುಗಳನ್ನು ರವಾನೆ ಮಾಡಿರುವುದು ಅದ್ಭುತ ಸಾಹಸವೇ ಸರಿ. ಈ ಕಲ್ಲುಸಾಗಣೆಯ ಹಿಂದೆ ಇರಬಹುದಾದ ಮಾನವನ ಶ್ರಮ, ಸತತ ಪ್ರಯತ್ನ ಹಾಗೂ ಮಾಡಿರಬಹುದಾದ ಯೋಜನೆ ಮತ್ತು ಪೂರ್ವಸಿದ್ಧತೆಗಳು ಪ್ರಶಂಸನೀಯವಾಗಿವೆ.
ಸ್ಟೋನ್ಹೆಂಜ್ನ ನಿರ್ಮಾಣ ಏಕಾಗಿರಬಹುದು?
ಈ ರಹಸ್ಯಮಯ ಸ್ಮಾರಕದ ನಿರ್ಮಾಣದ ಕುರಿತು ಪತ್ತೆ ಹಚ್ಚಿರುವ ವಿಷಯಗಳು ಕೆಲವಾದರೆ ಕಟ್ಟಿರುವ ಕಥೆಗಳು, ಊಹಾಪೋಹಗಳು ಅನೇಕ! ಸ್ಟೋನ್ಹೆಂಜ್ ನವಶಿಲಾಯುಗ ಕಾಲದ ಆಸ್ಪತ್ರೆಯಾಗಿತ್ತು ಎಂದು ಹೇಳುವ ಕೆಲವರು, ಅಂದಿನ ಮಾನವ ಈ ಜಾಗದಲ್ಲಿ ತನ್ನ ರೋಗರುಜಿನಗಳಿಗೆ ಚಿಕಿತ್ಸೆ ಪಡೆಯಲು ಬರುತ್ತಿದ್ದ ಎಂದು ಕಥೆ ಹೇಳುತ್ತಾರೆ. ಈ ಜಾಗ ಆತ್ಮಗಳ ದೇವಾಲಯವಾಗಿತ್ತು ಎಂದು ಹೇಳುವ ಜನರಿಗೂ ಕಮ್ಮಿಯಿಲ್ಲ. ಅಂದಿನ ಜನ ಇಲ್ಲಿಗೆ ಬಂದು ಸತ್ತು ಹೋದ ತಮ್ಮ ಬಂಧು-ಬಾಂಧವರ ಆತ್ಮಗಳೊಡನೆ ಸಂಭಾಷಣೆ ನಡೆಸುತ್ತಿದ್ದರಂತೆ (ಒಂದಾನೊಂದು ಕಾಲದಲ್ಲಿ ಈ ಜಾಗವನ್ನು ಸ್ಮಶಾನವನ್ನಾಗಿ ಉಪಯೋಗಿಸುತ್ತಿದ್ದರು ಎಂಬ ಕಾರಣಕ್ಕಾಗಿ ಈ ಕಥೆ ಹುಟ್ಟಿರಬಹುದು)! ಇನ್ನು ಕೆಲವರಂತೂ ಈ ಪ್ರದೇಶ ಅನ್ಯಲೋಕ ಜೀವಿಗಳ ನಿಲುಗಡೆಯ ತಾಣವಾಗಿತ್ತು ಎಂದು ಪ್ರತಿಪಾದಿಸುತ್ತಾರೆ.
ಕಥೆಗಳು ಏನೇ ಹೇಳಿದರೂ ಇತಿಹಾಸಶಾಸ್ತ್ರಜ್ಞರು ತಮ್ಮ ಸಂಶೋಧನೆಗಳ ಆಧಾರದ ಮೇಲೆ ಹೇಳುವುದೇ ಬೇರೆ. ಅವರ ಪ್ರಕಾರ ಸ್ಟೋನ್ಹೆಂಜ್ ಖಗೋಳಶಾಸ್ತ್ರಕ್ಕೆ ಸಂಬಂಧಪಟ್ಟಿರುವ ಜಾಗ. ಇಲ್ಲಿ ಜೋಡಿಸಿರುವ ಕಲ್ಲುಗಳನ್ನು ಸಹ ಆಕಾಶಕಾಯಗಳ ಚಲನೆಯನ್ನು ಗಮನದಲ್ಲಿಟ್ಟುಕೊಂಡು ನಿರ್ದಿಷ್ಟ ಸ್ಥಾನಗಳಲ್ಲಿ ಸ್ಥಾಪಿಸಲಾಗಿದೆ. ಈ ಜಾಗ ಇತಿಹಾಸಪೂರ್ವಕಾಲದಲ್ಲಿ ಖಗೋಳಶಾಸ್ತ್ರದ ಪಂಚಾಂಗವಾಗಿ ಕಾರ್ಯನಿರ್ವಹಿಸಿತ್ತು. ಸ್ಟೋನ್ಹೆಂಜ್ನ ಕಲ್ಲುಗಂಬಗಳನ್ನು ಚಂದ್ರನ ಸಂಚಲನ ಮತ್ತು ಸೂರ್ಯೋದಯದ ಕಾಲವನ್ನು ಆಧರಿಸಿ ನಿರ್ದಿಷ್ಟ ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ. ಈ ಕಲ್ಲುಗಳ ವಿಶೇಷ ವಿನ್ಯಾಸದಿಂದ ಅಂದಿನ ಮಾನವ ಚಂದ್ರಗ್ರಹಣ ಹಾಗು ಸೂರ್ಯಗ್ರಹಣಗಳನ್ನು ಪತ್ತೆಹಚ್ಚುತ್ತಿದ್ದ.
ಈ ಸ್ಮಾರಕದ ನಿರ್ಮಾಣ ಮಾಡಿದವರಿಗೆ ಸೂರ್ಯನ ಪಥದ ಅರಿವು ಸಹ ಚೆನ್ನಾಗಿ ಇದ್ದಿರಬೇಕು. ಏಕೆಂದರೆ ಸೂರ್ಯ ತನ್ನ ಪಥದಲ್ಲಿ ಸಾಗುವಾಗ ಭೂಮಿಯ ಕಾಲ್ಪನಿಕ ಅಕ್ಷಾಂಶರೇಖೆಗಳ ಮೇಲೆ ಹಾದು ಹೋಗುತ್ತಾನೆ. ಸೂರ್ಯ ಭೂಮಿಯ ಕರ್ಕಾಟಕ ಸಂಕ್ರಾಂತಿ ವೃತ್ತದ ಮೇಲೆ ನೇರವಾಗಿ ಬಂದಾಗ ಉಂಟಾಗುವ ಕರ್ಕಾಟಕಸಂಕ್ರಾಂತಿ ಹಾಗೂ ಸೂರ್ಯ ಭೂಮಿಯ ಮಕರಸಂಕ್ರಾಂತಿ ವೃತ್ತದ ಮೇಲೆ ನೇರವಾಗಿ ಬಂದಾಗ ಉಂಟಾಗುವ ಮಕರಸಂಕ್ರಾಂತಿ (winter solstice)ಗಳನ್ನು ವೀಕ್ಷಿಸಲೆಂದೇ ಸ್ಟೋನ್ಹೆಂಜ್ನಲ್ಲಿ ಕೆಲ ವಿಶಿಷ್ಟ ಜಾಗಗಳು ಸೀಮಿತವಾಗಿವೆ. ಹಾಗೆಯೇ ಸೂರ್ಯ ಭೂಮಿಯ ಸಮಭಾಜಕ ವೃತ್ತದ ಮೇಲೆ ಬಂದಾಗ ಉಂಟಾಗುವ ವಿಷುವತ್ಸಂಕ್ರಾಂತಿ (equinox)ಯನ್ನು ಸಹ ಸ್ಟೋನ್ಹೆಂಜ್ನ ಕಲ್ಲುಗಂಬಗಳ ಮೂಲಕ ನಿಖರವಾಗಿ ವೀಕ್ಷಿಸಬಹುದು. ಕರ್ಕಾಟಕ ಸಂಕ್ರಾಂತಿಯ ದಿನ (ಉತ್ತರ ಗೋಳಾರ್ಧದಲ್ಲಿ ವರ್ಷದಲ್ಲಿಯೇ ಅತಿದೀರ್ಘಕಾಲದ ದಿನ) ಹುಟ್ಟುವ ಸೂರ್ಯನನ್ನು ಸ್ಟೋನ್ಹೆಂಜ್ನ ಮಧ್ಯಭಾಗದಲ್ಲಿ ನಿಂತು ವೀಕ್ಷಿಸಿದರೆ ವೃತ್ತದ ಈಶಾನ್ಯ ದಿಕ್ಕಿಗಿರುವ ಹೀಲ್ಸ್ಟೋನ್ನ ಮೇಲೆ ನಿರ್ದಿಷ್ಟವಾದ ಜಾಗದಲ್ಲಿ ಸೂರ್ಯ ಉದಯಿಸುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಉದಯಿಸಿದ ಸೂರ್ಯನ ಕಿರಣಗಳು ಸ್ಟೋನ್ಹೆಂಜ್ನ ಕಲ್ಲುಗಂಬಗಳ ಮಧ್ಯದಲ್ಲಿ ಹಾದುಹೋಗುವುದನ್ನು ಕಾಣಬಹುದು.
ಇದಲ್ಲದೆ ಕಲ್ಲುವೃತ್ತದ ಕೇಂದ್ರದಲ್ಲಿರುವ ಮೈಕಾ ಚೂರುಗಳಿಂದ ಕೂಡಿರುವ ಆಲ್ಟರ್ ಸ್ಟೋನ್ ಸೂರ್ಯನ ಬಿಸಿಲನ್ನು ಪ್ರತಿಫಲಿಸಿ ಕರ್ಕಾಟಕಸಂಕ್ರಾಂತಿಯ ಸೂರ್ಯೋದಯದ ಸೊಬಗನ್ನು ಮತ್ತಷ್ಟು ಅಧಿಕಗೊಳಿಸುತ್ತಿತ್ತು ಎಂದೂ ಪ್ರತಿಪಾದಿಸಲಾಗಿದೆ. ಸ್ಟೋನ್ಹೆಂಜ್ ನಿರ್ಮಾಣದ ಮೊದಲನೆಯ ಹಂತದಲ್ಲಿಯೆ ವೃತ್ತದ ಹೊರಗೆ ಆಯತಾಕಾರದಲ್ಲಿ ನಾಲ್ಕು ಕಲ್ಲುಗಳನ್ನು ಹೂಳಲಾಗಿದ್ದು ಇಂದಿಗೆ ಎರಡು ಮಾತ್ರ ಉಳಿದಿವೆ. ಈ ಕಲ್ಲುಗಳಿಗೆ ಸ್ಟೇಷನ್ ಸ್ಟೋನ್ಸ್ ಎಂದು ಕರೆಯಲಾಗಿದೆ. ಈ ಕಲ್ಲುಗಳು ಉಂಟುಮಾಡುವ ಕಾಲ್ಪನಿಕ ಆಯತಾಕಾರದ ಒಂದು ಬದಿ ಕರ್ಕಾಟಕ ಸಂಕ್ರಾಂತಿಯ ದಿನದ ಸೂರ್ಯೋದಯದ ಸ್ಥಳವನ್ನು ಬಿಂಬಿಸಿದರೆ, ಮತ್ತೊಂದು ಬದಿ ಮಕರ ಸಂಕ್ರಾಂತಿಯ ಸೂರ್ಯಾಸ್ತದ ಸ್ಥಳವನ್ನು ಬಿಂಬಿಸುತ್ತದೆ ಮತ್ತು ಈ ಆಯತಾಕಾರದ ಕರ್ಣರೇಖೆಗಳು ಚಂದ್ರ ಹುಟ್ಟುವ ಉತ್ತರದ ತುತ್ತತುದಿ ಮತ್ತು ದಕ್ಷಿಣದ ತುತ್ತತುದಿಗಳನ್ನು ತಿಳಿಸುತ್ತವೆ ಎಂದೂ ಹೇಳಲಾಗಿದೆ.
ಮೇಲಿನ ಕಾರಣಗಳಿಂದ ನವಶಿಲಾಯುಗದ ಮಾನವ ಸ್ಟೋನ್ಹೆಂಜ್ನಲ್ಲಿ ನಿಂತು ಬಾಹ್ಯಾಕಾಶದ ಆಗುಹೋಗುಗಳನ್ನು ಗಮನಿಸುತ್ತಿದ್ದ ಮತ್ತು ಅವುಗಳ ಬಗ್ಗೆ ಕುತೂಹಲವನ್ನು ಹೊಂದಿದ್ದ ಎಂಬುದು ಸ್ಪಷ್ಟವಾಗುತ್ತದೆ. ಹಾಗಾಗಿ ಸ್ಟೋನ್ಹೆಂಜ್ ನವಶಿಲಾಯುಗದ ಖಗೋಲ ವೀಕ್ಷಣಾಲಯವಾಗಿತ್ತೆಂದು ಹೇಳಬಹುದಾಗಿದೆ.
ಅಂದಿನ ಮಾನವನಿಗೆ ಸೂರ್ಯೋದಯ ಸೂರ್ಯಾಸ್ತಗಳ ಬಗ್ಗೆ ಆಸಕ್ತಿ ಇರಲು ಮತ್ತೊಂದು ಮುಖ್ಯ ಕಾರಣವೂ ಇರಬಹುದು. ಆ ಕಾಲದ ಮಾನವನಿಗೆ ಒಂದು ದಿನವನ್ನು ವರ್ಷದ ಪ್ರಾರಂಭದ ದಿನವನ್ನಾಗಿ ಗುರುತುಹಾಕಲು ಒಂದು ವಿಶೇಷ ದಿನದ ಆವಶ್ಯಕತೆ ಇತ್ತು. ಹೀಗಾಗಿ ಕರ್ಕಾಟಕಸಂಕ್ರಾಂತಿ ದಿನದ ಸೂರ್ಯೋದಯ ಆತನಿಗೆ ಬಹು ಮುಖ್ಯವಾಗಿತ್ತೆಂದು ತೋರುತ್ತದೆ. ಇದರ ಮೂಲಕ ಆತ ತನ್ನ ಕ್ಯಾಲೆಂಡರ್ನ್ನು ತಯಾರಿಸಿಕೊಳ್ಳುತ್ತಿದ್ದ ಎನ್ನಬಹುದು. ವರ್ಷದ ಪ್ರಾರಂಭವನ್ನು ಗುರುತಿಸುವುದರಿಂದ ಈ ವಿಶೇಷ ದಿನದ ನಂತರ ಬರಬಹುದಾದ ಋತುಗಳನ್ನು ಅಂದಿನ ಮಾನವ ಪತ್ತೆ ಹಚ್ಚುತ್ತಿದ್ದಿರಬಹುದು. ಇದರಿಂದ ಯಾವ ಕಾಲ ಬೆಳೆಗಳನ್ನು ಬಿತ್ತಲು ಸೂಕ್ತವಾದ ಕಾಲ ಎಂದು ಆತ ಕಂಡುಹಿಡಿಯುವುದು ಸುಲಭವಾಗುತ್ತಿತ್ತು ಮತ್ತು ಆತ ತನ್ನ ಕೆಲಸ-ಕಾರ್ಯಗಳನ್ನು ಆಯಾ ಕಾಲಕ್ಕೆ ತಕ್ಕಂತೆ ಯೋಜಿಸುವುದೂ ಸಾಧ್ಯವಾಗುತ್ತಿತ್ತು.
ಇಂದಿಗೂ ಕರ್ಕಾಟಕಸಂಕ್ರಾಂತಿ ಹಾಗೂ ಮಕರಸಂಕ್ರಾಂತಿ ದಿನಗಳಂದು ಸಾಕಷ್ಟು ಆಸಕ್ತರು ಇಲ್ಲಿಗೆ ಬಂದು ಸೂರ್ಯೋದಯ, ಸೂರ್ಯಾಸ್ತಗಳನ್ನು ವೀಕ್ಷಿಸುತ್ತಾರೆ. ವಿಶೇಷವೆಂದರೆ ಈ ದಿನಗಳಂದು ಡ್ರೂಯಿಡ್ಡರ ವಂಶಜರು ಎಂದೇ ಹೇಳಿಕೊಳ್ಳುವ ಸಾವಿರಾರು ಡ್ರೂಯಿಡ್ ಜನಾಂಗದವರು ಮತ್ತು ನಿಸರ್ಗ ಆರಾಧಕರಾಗಿರುವ ಪೇಗನ್ನರು ಸ್ಟೋನ್ಹೆಂಜ್ ಜಾಗಕ್ಕೆ ಆಗಮಿಸಿ ಸೂರ್ಯೋದಯವನ್ನು ವೀಕ್ಷಿಸಿ ಈ ದಿನಗಳನ್ನು ಹಬ್ಬಗಳಂತೆ ಇಲ್ಲಿ ಆಚರಿಸುತ್ತಾರೆ.
ಈಗ ಇಂಗ್ಲಿಷ್ ಹೆರಿಟೇಜ್ ಎಂಬ ನೋಂದಾಯಿತ ಖಾಸಗಿ ಸಂಸ್ಥೆ ಸ್ಟೋನ್ಹೆಂಜ್ನ ನಿರ್ವಹಣೆಯನ್ನು ಮಾಡುತ್ತಿದೆ. ತನ್ನ ವಿಶೇಷ ನಿರ್ಮಾಣ, ಶಿಲ್ಪವಿನ್ಯಾಸ ಮತ್ತು ಐತಿಹಾಸಿಕ ಕಾರಣಗಳಿಂದ ಪ್ರಾಮುಖ್ಯತೆ ಪಡೆದಿರುವ ಸ್ಟೋನ್ಹೆಂಜ್ ೧೯೮೬ರಲ್ಲಿ ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ (UNESCO world heritage site) ಪಟ್ಟಿಯಲ್ಲಿ ಸೇರ್ಪಡೆಯಾಯಿತು. ಬಹುಶಃ ನವಶಿಲಾಯುಗದ ಮಾನವ ಇದನ್ನು ನಿರ್ಮಿಸುತ್ತಿದ್ದಾಗ ಇಪ್ಪತ್ತೊಂದನೆಯ ಶತಮಾನದಲ್ಲೂ ಅವನ ನಿರ್ಮಾಣವನ್ನು ವೀಕ್ಷಿಸಿ ಅಚ್ಚರಿಗೊಳ್ಳಲು ಪ್ರತಿವರ್ಷ ಸುಮಾರು ಒಂದು ಮಿಲಿಯನ್ನಷ್ಟು ಪ್ರವಾಸಿಗರು ಬರಬಹುದೆಂದು ಊಹಿಸಿರಲಿಕ್ಕಿಲ್ಲ! ಸಾವಿರಾರು ವರ್ಷಗಳಿಂದ ಮೌನವಾಗಿ ನಿಂತಿರುವ ಈ ಕಲ್ಲುಗಳ ಕಥೆಯನ್ನು ಕೇಳಲು ಇವುಗಳ ಬಳಿ ನಾವು ಹೋಗಲೇಬೇಕು.