ಟೂನ್ಲೆಸ್ಯಾಪ್, ಮೆಕಾಂಗ್ ನದಿಗಳು ಸೇರುವ ದಂಡೆಯ ಮೇಲಿದೆ ಪಾಮ್ಪೆನ್. ನದಿಯ ತೀರದಲ್ಲಿ ಸಾಗಿದರೆ ಕಾಂಬೋಡಿಯಾದ ಸಂಸ್ಕೃತಿ, ರೀತಿರಿವಾಜು, ಆಧುನಿಕತೆ ನಮ್ಮೆದುರು ತೆರೆದುಕೊಳ್ಳುತ್ತದೆ. ಭಿಕ್ಷುಕರಿಲ್ಲ, ಆದರೆ ಪ್ರವಾಸಿಗರು ಸೇರುವ ಜಾಗದಲ್ಲಿ ಬಾಳೆಹಣ್ಣು ಸುಟ್ಟು ಮಾರುವವರು, ಬಿಡಿಸಿದ ಚಕ್ಕೋತ, ಮಾವು, ಹಲಸಿನ ಹಣ್ಣುಗಳನ್ನು ಮಾರುವವರಿದ್ದಾರೆ. ಕತ್ತಲಾಗುತ್ತಿದ್ದಂತೆ ಪುಟ್ಟಪುಟ್ಟ ಬುದ್ಧನ ಮಂದಿರಗಳೆದುರು ಅಗರಬತ್ತಿ, ದೀಪ ಹಚ್ಚಿ ಪ್ರಾರ್ಥಿಸುವವರು ಒಂದು ಕಡೆಯಾದರೆ, ಜಗಮಗ ದೀಪದ ಮಧ್ಯೆ ಪಾಪ್ ಸಂಗೀತೋತ್ಸವ ಮತ್ತೊಂದು ಕಡೆ. ಹುಳು, ಕೀಟಗಳನ್ನು ಹುರಿದು ತಿನ್ನುವುದೂ ಪ್ರಿಯವೇ ಇಲ್ಲಿನವರಿಗೆ. ಪಾಮ್ಪೆನ್ನಲ್ಲಿ ಸಂದರ್ಶಿಸಲು ಹಲವಾರು ಸ್ಥಳಗಳಿವೆ.
ಆಗ್ನೇಯ ಏಷ್ಯಾ ದೇಶ ಕಾಂಬೋಡಿಯಾ. ಕಾಂಬೋಡಿಯಾದ ಮಧ್ಯದಲ್ಲಿದೆ ರಾಜಧಾನಿ ಪಾಮ್ಪೆನ್. ಪಾಸ್ಪೋರ್ಟ್ ಇದ್ದರೆ ಸಾಕು ವಿದೇಶೀಯರು ಇಲ್ಲಿಗೆ ಪ್ರವಾಸಕ್ಕೆ ಬರಬಹುದು, ವೀಸಾ ಏರ್ಪೋರ್ಟಿನಲ್ಲೇ ಕೊಡಲಾಗುತ್ತದೆ.
ಪಾಮ್ಪೆನ್ನನ್ನು ಒಂದು ಕಾಲದಲ್ಲಿ ‘ಏಷ್ಯಾದ ಮುತ್ತು’ ಎಂದು ಕರೆಯಲಾಗಿತ್ತು. ಇಲ್ಲಿನ ಫ್ರೆಂಚ್ ಶೈಲಿಯ ಕಟ್ಟಡಗಳು, ಐತಿಹಾಸಿಕ ಸ್ಮಾರಕಗಳು, ಪ್ರಕೃತಿಸೌಂದರ್ಯವು ವಿದೇಶೀ ಪ್ರವಾಸಿಗರನ್ನು ಸದಾ ಆಕರ್ಷಿಸುತ್ತಿತ್ತು. 20ನೇ ಶತಮಾನದ ಉತ್ತರಾರ್ಧದಲ್ಲಿ ನಡೆದ ‘ವಿಯೆಟ್ನಾಂ ಯುದ್ಧ’ದಲ್ಲಿ ನಲುಗಿಹೋಯಿತು. ಫೀನಿಕ್ಸ್ ಹಕ್ಕಿಯಂತೆ ಮತ್ತೆ ಎದ್ದ ಪಾಮ್ಪೆನ್ ವಿಶ್ವದ ಅತ್ಯಾಧುನಿಕ ಸೌಲಭ್ಯ ಪಡೆಯುವತ್ತ ಸಾಗಿತು. ಈಗ ಮುಗಿಲು ಚುಂಬಿಸುವ ಅತ್ಯಾಧುನಿಕ ಕಟ್ಟಡಗಳು, ಅತ್ಯುತ್ತಮ ಸಾರಿಗೆ ವ್ಯವಸ್ಥೆ, ಲಕ್ಷುರಿ ಕಾರುಗಳು, ಐಷಾರಾಮಿ ಹೊಟೇಲುಗಳಿದ್ದು, ರಾಜಧಾನಿ ‘ಪಾಮ್ಪೆನ್’ ಶ್ರೀಮಂತವಾಗಿ ಕಾಣಿಸುತ್ತದೆ. ಹಾಗೆಯೇ ವಿದೇಶೀ ಪ್ರವಾಸಿಗರ ಪರ್ಸಿಗೆ ಹೆಚ್ಚು ಭಾರವಾಗದ ಉತ್ತಮದರ್ಜೆಯ ಆಧುನಿಕ ಸೌಲಭ್ಯವಿರುವ ಹೊಟೇಲುಗಳು ಲಭ್ಯ, ಸಂದರ್ಶಿಸಲು ಸಾಕಷ್ಟು ಸ್ಥಳಗಳೂ ಇದೆ.
ಟೂನ್ಲೆಸ್ಯಾಪ್, ಮೆಕಾಂಗ್ ನದಿಗಳು ಸೇರುವ ದಂಡೆಯ ಮೇಲಿದೆ ಪಾಮ್ಪೆನ್. ನದಿಯ ತೀರದಲ್ಲಿ ಸಾಗಿದರೆ ಕಾಂಬೋಡಿಯಾದ ಸಂಸ್ಕೃತಿ, ರೀತಿ-ರಿವಾಜು, ಆಧುನಿಕತೆ ನಮ್ಮೆದುರು ತೆರೆದುಕೊಳ್ಳುತ್ತದೆ. ಭಿಕ್ಷುಕರಿಲ್ಲ, ಆದರೆ ಪ್ರವಾಸಿಗರು ಸೇರುವ ಜಾಗದಲ್ಲಿ ಬಾಳೆಹಣ್ಣು ಸುಟ್ಟು ಮಾರುವವರು, ಬಿಡಿಸಿದ ಚಕ್ಕೋತ, ಮಾವು, ಹಲಸಿನ ಹಣ್ಣುಗಳನ್ನು ಮಾರುವವರಿದ್ದಾರೆ. ಕತ್ತಲಾಗುತ್ತಿದ್ದಂತೆ ಪುಟ್ಟಪುಟ್ಟ ಬುದ್ಧನ ಮಂದಿರಗಳೆದುರು ಅಗರಬತ್ತಿ, ದೀಪ ಹಚ್ಚಿ ಪ್ರಾರ್ಥಿಸುವವರು ಒಂದು ಕಡೆಯಾದರೆ, ಜಗಮಗ ದೀಪದ ಮಧ್ಯೆ ಪಾಪ್ ಸಂಗೀತೋತ್ಸವ ಮತ್ತೊಂದು ಕಡೆ. ಹುಳು, ಕೀಟಗಳನ್ನು ಹುರಿದು ತಿನ್ನುವುದೂ ಪ್ರಿಯವೇ ಇಲ್ಲಿನವರಿಗೆ. ಪಾಮ್ಪೆನ್ನಲ್ಲಿ ಸಂದರ್ಶಿಸಲು ಹಲವಾರು ಸ್ಥಳಗಳಿವೆ, ಅವುಗಳಲ್ಲಿ ಮುಖ್ಯವಾದವು ಕೆಳಗಿನವು.
ರಾಯಲ್ ಪ್ಯಾಲೇಸ್ ಮತ್ತು ಸಿಲ್ವರ್ ಪಗೋಡ: ಪಾಮ್ಪೆನ್ಗೆ ಬರುವ ಪ್ರವಾಸಿಗರ ಪ್ರಮುಖ ಆಕರ್ಷಣೆ ರಾಯಲ್ ಪ್ಯಾಲೇಸ್ ಮತ್ತು ಸಿಲ್ವರ್ ಪಗೋಡ. ಸಾಕಷ್ಟು ವಿಶಾಲವಾದ ಜಾಗದಲ್ಲಿ ಹಲವಾರು ಸುಂದರ ಕಟ್ಟಡಗಳಿವೆ ಹಾಗೂ ಸುಂದರವಾದ ಉದ್ಯಾನವನವಿದೆ. ಕಾಂಬೋಡಿಯಾದ ಏಳುಬೀಳು, ಯುದ್ಧ, ಸ್ನೇಹ, ಕುಟಿಲತೆ ಎಲ್ಲವನ್ನೂ ದಾಖಲಿಸುತ್ತ ಪ್ರಚಲಿತ ವಿದ್ಯಮಾನಕ್ಕೂ ಕನ್ನಡಿ ಹಿಡಿಯುತ್ತಿದೆ. ಇಲ್ಲಿನ ಕಲೆ ಮತ್ತು ಸಂಸ್ಕೃತಿಯ ಸೂಕ್ಷ್ಮ ಪರಿಚಯವನ್ನೂ ಮಾಡಿಸುತ್ತದೆ. ರಾಜನ ಅರಮನೆ, ಅಧಿಕೃತ ಆಫೀಸು ಇದೇ ಆವರಣದಲ್ಲಿದೆ. ಒಟ್ಟಿನಲ್ಲಿ ಬಹಳ ಸುಂದರ, ಗಡಿಬಿಡಿ ಗೊಂದಲಗಳಿಲ್ಲದ ಪ್ರಶಾಂತವಾದ, ಸ್ವಚ್ಛವಾದ ಜಾಗ. ಎಲ್ಲ ಕಟ್ಟಡಗಳ ಬಣ್ಣ, ಶೈಲಿ ಒಂದೇ ತರಹ. ಅಲ್ಲದೆ ಸುತ್ತಮುತ್ತ ತರತರಹದ ಹೂಗಿಡಗಳನ್ನು ಬೆಳೆಸಿದ್ದಾರೆ.
ಖೇಮರ್ ಅರಮನೆ: ರಾಜನ ಅಧಿಕೃತ ಅರಮನೆ, ರಾಜ ಹಾಗೂ ಅವನ ಪರಿವಾರದವರು ವಾಸಿಸುವ ಮನೆಯಿದು. ಇದನ್ನು 1866ರಲ್ಲಿ ಕಟ್ಟಿಸಿದ್ದು ಖೇಮರ್ (ಖ್ಮೇರ್) ಮತ್ತು ಫ್ರೆಂಚ್ ಶೈಲಿಯಲ್ಲಿದೆ. ಪ್ರವಾಸಿಗರು ದೂರದಿಂದ ನೋಡಬಹುದೇ ಹೊರತು ಹತ್ತಿರ ಸುಳಿಯುವಂತಿಲ್ಲ. ಅರಮನೆಯ ಹೊರಗಡೆ ಇರುವ ಧ್ವಜಸ್ತಂಭದಲ್ಲಿ ನೀಲಿಬಣ್ಣದ ಧ್ವಜ ಹಾರಾಡಿಕೊಂಡಿದ್ದರೆ ರಾಜನು ಸ್ವದೇಶದಲ್ಲಿ ಇದ್ದಾನೆ ಎಂದರ್ಥವಂತೆ.
ಸಿಂಹಾಸನದ ಕೋಣೆ: ಇದು ರಾಜನ ದರ್ಬಾರ್ ನಡೆಯುವ ಸ್ಥಳವಾಗಿದ್ದು, ಹಿಂದೆ ರಾಜನ ಆಸ್ಥಾನದವರು ಇಲ್ಲೇ ಕುಳಿತು ರಾಜ್ಯಭಾರದ ಕಾರ್ಯ ನಿಭಾಯಿಸುತ್ತಿದ್ದರು. ರಾಜ ಮುಖ್ಯವಾದ ನಿರ್ಣಯಗಳನ್ನು ಕೈಗೊಳ್ಳುತ್ತಿದ್ದ. ಕಾಲ ಬದಲಾಗಿದೆ, ಕಾಂಬೋಡಿಯದಲ್ಲೀಗ ಸಾಂವಿಧಾನಿಕ ರಾಜಪ್ರಭುತ್ವದ ಆಡಳಿತ. ಹಾಗಾಗಿ ರಾಜನ ಪಟ್ಟಾಭಿಷೇಕ, ರಾಜಪರಿವಾರದವರ ಮದುವೆ, ರಾಜನ ಉಪಸ್ಥಿತಿ ಇರುವ ಸಮಾರಂಭಗಳು, ಧಾರ್ಮಿಕ ಆಚರಣೆಗಳು ಮಾತ್ರ ನಡೆಯುತ್ತವೆ. ಹಾಗೆಯೇ ವಿದೇಶಗಳಿಂದ ಬಂದ ಅತಿಥಿಗಳನ್ನು ರಾಜ ಇಲ್ಲಿಯೇ ಬರಮಾಡಿಕೊಳ್ಳುತ್ತಾನೆ. ನೋಡಲು ಆಕರ್ಷಕವಾಗಿರುವ ಕೋಣೆಗೆ ಪ್ರವಾಸಿಗರಿಗೆ ಪ್ರವೇಶವಿಲ್ಲ. ಒಳಗಿನ ಸೌಂದರ್ಯವನ್ನು ಕಿಟಕಿಯಿಂದ ನೋಡಬಹುದು. ಸಿಂಹಾಸನ, ಆಸನಗಳು, ಅಲಂಕಾರ ಅದ್ಧೂರಿಯಾಗಿವೆ.
ಮೊದಲು ಇದು ಮರದ ಕಟ್ಟಡವಾಗಿದ್ದು 1917ರಲ್ಲಿ ಈಗ ನೋಡುತ್ತಿರುವ ಕಟ್ಟಡವನ್ನು ಕಟ್ಟಿಸಿದರಂತೆ. ಕಟ್ಟಡದ ಬಣ್ಣ ಬಿಳಿ ಮತ್ತು ತಿಳಿಹಳದಿ. ಛಾವಣಿ ಇಳಿಜಾರಾಗಿದ್ದು, ತುದಿಯೂ ಚೂಪಾಗಿದ್ದು ಆಕರ್ಷಕವಾಗಿದೆ. ಛಾವಣಿಯ ಮೇಲೆ ಮೂರು ಶಿಖರಗಳಿವೆ. ಮಧ್ಯದಲ್ಲಿರುವ ಶಿಖರದ ತುದಿಯಲ್ಲಿ ನಾಲ್ಕು ತಲೆಯ ಬ್ರಹ್ಮನ ಮೂರ್ತಿ ಕಾಣಿಸುತ್ತದೆ. ಒಟ್ಟಿನಲ್ಲಿ ಬಹಳ ಆಕರ್ಷಕ ಕಟ್ಟಡ.
ಚಂದ್ರನ ಬೆಳಕಿನ ಹಜಾರ: ಹಜಾರದಲ್ಲಿ ಗೋಡೆಗಳಿಲ್ಲ, ಕೇವಲ ಛಾವಣಿ ಹಾಗೂ ಬಾಲ್ಕನಿಗಳಿವೆ. ಚೆಂದದ ಹಜಾರವು ಆವರಣದ ಒಳಗೆ ಬರುತ್ತಿರಬೇಕಾದರೆ ಎದ್ದುಕಾಣಿಸುತ್ತದೆ. 1913-14ರಲ್ಲಿ ಕಟ್ಟಿಸಲಾದ ಈ ಹಜಾರದಲ್ಲಿ ಖೇಮರ್ ಸಂಪ್ರದಾಯದ ನಾಟ್ಯ, ನಾಟಕಗಳು ನಡೆಯುತ್ತವೆ. ರಾಜ ಪರಿವಾರದವರು ನೀಡುವ ಔತಣಕೂಟಗಳೂ ಇಲ್ಲಿ ನಡೆಯುತ್ತವೆ.
ನೆಪೋಲಿಯನ್ ಹೆಂಡತಿ ಯೂಜಿನಗಾಗಿ ಕಟ್ಟಿದ ‘ನೆಪೋಲಿಯನ್ ಹಜಾರ’, 1912ರಲ್ಲಿ ಕಟ್ಟಿಸಿದ ‘ಪೊಚ್ಚನಿ ಹಜಾರ’ವು ಇಲ್ಲಿದೆ. ಅಲ್ಲದೆ ಇನ್ನೂ ಅನೇಕ ಕಟ್ಟಡಗಳಿವೆ.
ಸಿಲ್ವರ್ ಪಗೋಡ (ಬೆಳ್ಳಿಯ ಪಗೋಡ): ಇದು ರಾಜಮಂದಿರ. ಇಲ್ಲಿನ ಮುಖ್ಯ ಆಕರ್ಷಣೆ ಪಚ್ಚೆಯಿಂದ ಮಾಡಿದ ಬುದ್ಧ ಮತ್ತು 90 ಕೆಜಿ ಚಿನ್ನದಿಂದ ಮಾಡಿದ ಶಾಕ್ಯಮುನಿ ಬುದ್ಧ. ಇದರಲ್ಲಿ 9 ಸಾವಿರಕ್ಕೂ ಅಧಿಕ ವಜ್ರದ ಹರಳುಗಳಿವೆಯಂತೆ. ಇಲ್ಲಿನ ಇನ್ನೊಂದು ಆಕರ್ಷಣೆ ಸುಮಾರು 9 ಸಾವಿರಕ್ಕೂ ಅಧಿಕ ಬೆಳ್ಳಿಯ ಇಟ್ಟಿಗೆಯಿಂದ ಮಾಡಿದ ನೆಲ.
ಇದರ ಹೊರಗಡೆ ಬಿಳಿಯ ಕುದುರೆಯ ಮೇಲೆ ಕೂತ ರಾಜ ‘ನರಡೋಮ್’ನ ಮೂರ್ತಿಯಿದೆ. ಅಲ್ಲದೆ ಲೈಬ್ರರಿ, ಗಂಟೆ ಗೋಪುರ, ಅಂಗ್ಕೋರ್ ವಾಟ್ನ ಪ್ರತಿಕೃತಿ ಇದೆ. ಇಲ್ಲೊಂದು ಗೋಡೆ ಇದ್ದು ಇಲ್ಲಿ ರಾಮಾಯಣದ ಕಥೆಯನ್ನಾಧರಿಸಿದ ‘ರೆಯಂಕರ್’ ಮಹಾಕಾವ್ಯವನ್ನು ಚಿತ್ರಿಸಲಾಗಿದೆ. ಆದರೆ ಸರಿಯಾಗಿ ನೋಡಿಕೊಳ್ಳದೆ, ಚಿತ್ರಗಳ ಕೆಲಭಾಗ ಮಂಕಾಗಿದೆ.
ಒಂದು ಕಡೆಯಲ್ಲಿ ಜಾನಪದ ಸಂಗೀತಗಾರರು ಚಪ್ಪರದಡಿಯಲ್ಲಿ ವಾದ್ಯಗಳೊಂದಿಗೆ ಹಾಡುತ್ತ ವಿದೇಶೀಯರಿಗೆ ತಮ್ಮ ಸಂಸ್ಕೃತಿಯನ್ನು ಪರಿಚಯಿಸುತ್ತಾರೆ. ಮೇಲೆ ಮೋಡಗಳಿಲ್ಲದ ನೀಲಿ ಆಕಾಶವಿದ್ದರಂತೂ ಫೋಟೋ ತೆಗೆದುಕೊಳ್ಳಲು ಸೂಕ್ತ ಜಾಗವಿದು. ವಿಷಾದವೆಂದರೆ ಸಿಲ್ವರ್ ಪಗೋಡ ಬಿಟ್ಟು ಬೇರೆ ಕಟ್ಟಡದೊಳಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ.
ವಾಟ್ ಪಾಮ್: ರಾಜಧಾನಿ ಪಾಮ್ ಪೆನ್ ಸಮತಟ್ಟು ಪ್ರದೇಶವಾಗಿದ್ದು ಇಲ್ಲಿದೆ ಒಂದೇ ಒಂದು ಬೆಟ್ಟ, ಅದರ ತುದಿಯಲ್ಲಿದೆ ‘ವಾಟ್ ಪಾಮ್’ ಬೌದ್ಧಮಂದಿರ. ಇದನ್ನು ಮೊದಲು 14ನೇ ಶತಮಾನದಲ್ಲಿ ಕಟ್ಟಿಸಿದ್ದು ಹಲವು ಸಲ ಜೀರ್ಣೋದ್ಧಾರಗೊಂಡಿತು, ಈಗ ಇರುವ ಮಂದಿರವೂ 1926ರಲ್ಲಿ ಕಟ್ಟಿಸಿದ್ದು.
ಇತಿಹಾಸ: ಆಕರ್ಷಕವಾಗಿರುವ ಮಂದಿರದ ಇತಿಹಾಸವೂ ಸಾಕಷ್ಟು ಕುತೂಹಲ ಕೆರಳಿಸುವಂತಹದ್ದು. ಪೆನ್ಹ ಎಂಬ ಶ್ರೀಮಂತ ವೃದ್ಧೆ ನದಿಯ ದಂಡೆಯಲ್ಲಿ ಸ್ನಾನ ಮಾಡುತ್ತಿರುವಾಗ ಮರದ ತುಂಡೊಂದು ಸಿಕ್ಕಿತಂತೆ, ಅದರೊಳಗೆ ನಾಲ್ಕು ಬುದ್ಧನ ಮೂರ್ತಿಗಳು ಹಾಗೂ ವಿಷ್ಣುವಿನ ಮೂರ್ತಿ ಇತ್ತಂತೆ. ಪೆನ್ಹ ಹಳ್ಳಿಯ ಜನರೊಡನೆ ಬೆಟ್ಟವನ್ನು ಸೃಷ್ಟಿಸಿ ತುದಿಯಲ್ಲಿ ಮಂದಿರವನ್ನು ಕಟ್ಟಲು ಕೇಳಿಕೊಂಡಳಂತೆ. ಅವಳ ಅಪೇಕ್ಷೆಯಂತೆ ಬೌದ್ಧಮಂದಿರ ನಿರ್ಮಾಣ ಮಾಡಿ ಬುದ್ಧನ ಮೂರ್ತಿಯನ್ನು ಅದರಲ್ಲಿ ಪ್ರತಿಷ್ಠಾಪಿಸಲಾಯಿತು.
ಮಂದಿರವನ್ನು ತಲಪಲು ಮೆಟ್ಟಿಲುಗಳಿವೆ. ಮೆಟ್ಟಿಲುಗಳ ಪ್ರಾರಂಭದಲ್ಲಿ ಏಳು ಹೆಡೆಯ ಸರ್ಪ ಮತ್ತು ಕೊನೆಯಲ್ಲಿ ಸಿಂಹದ ಮೂರ್ತಿಗಳಿವೆ. ಬೌದ್ಧಮಂದಿರದಲ್ಲಿ ಕುಳಿತಿರುವ ಭಂಗಿಯಲ್ಲಿರುವ ದೊಡ್ಡ ಬುದ್ಧನ ಮೂರ್ತಿ ಇದೆ. ಸುತ್ತ ಹಲವು ಮರದ ಮೂರ್ತಿಗಳಿವೆ. ಗೋಡೆಗಳಲ್ಲಿ ಉಬ್ಬುಚಿತ್ರಗಳಿವೆ. ಎಲ್ಲವೂ ಬುದ್ಧನ ಬಗೆಗೆ ಇರುವ ಜಾತಕ ಕಥೆಗಳು ಹಾಗೂ ರಾಮಾಯಣದ ಕಥೆಗಳು.
ಮಂದಿರದ ಒಂದು ಪಕ್ಕದಲ್ಲಿ ರಾಜನೊಬ್ಬನ ಚಿತಾಭಸ್ಮವಿರುವ ಸ್ತೂಪವಿದೆ. ಮಂದಿರ ಮತ್ತು ಸ್ತೂಪದ ಮಧ್ಯೆ ಪುಟ್ಟ ಹಜಾರದಲ್ಲಿ ಪೆನ್ಹಳ ಮೂರ್ತಿ ಇದೆ. ಸ್ವಲ್ಪ ಕೆಳಮಟ್ಟದಲ್ಲಿ ‘ಪ್ರೇಹ ಚು’ ಎನ್ನುವ ಭೂತದ ಮಂದಿರವಿದೆ. ಇದು ವಿಯೆಟ್ನಾಂನಿಂದ ಬಂದ ಭೂತವಂತೆ. ಮಂದಿರದ ಹೊರಗೂ ಹಲವು ಭೂತಗಳದ್ದು ಎನ್ನಲಾದ ಮೂರ್ತಿಗಳಿವೆ.
ಮಂದಿರಕ್ಕೆ ವಿದ್ಯಾರ್ಥಿಗಳು ಪರೀಕ್ಷೆ ಹತ್ತಿರ ಬರುತ್ತಿದ್ದಂತೆ, ವ್ಯಾಪಾರಿಗಳು ಹೆಚ್ಚಿನ ಲಾಭಕ್ಕಾಗಿ, ಇಲ್ಲ ಇನಾವುದೋ ಹರಕೆ ತೀರಿಸಲು ಬರುವ ಭಕ್ತಾದಿಗಳ ದಂಡೇ ಇರುತ್ತದೆ. ಇಲ್ಲಿ ಹರಕೆ ತೀರಿಸಲೋ, ಒಳ್ಳೆಯ ಭಾಗ್ಯಕ್ಕಾಗಿಯೊ ಕಲ್ಲಿನ ಸಿಂಹದ ಬಾಯಿಗೆ ಮೊಟ್ಟೆ, ಮಾಂಸ ತುರುಕಿ ನೈವೇದ್ಯ ನಡೆಯುತ್ತದೆ. ಅಗರಬತ್ತಿ, ಮೇಣದಬತ್ತಿ ಹಚ್ಚಿ ಪ್ರಾರ್ಥಿಸುವ ಭಕ್ತಾದಿಗಳೂ ಉಂಟು. ಬುದ್ಧನಿರಲಿ, ಪೇಚೊ ಭೂತವಿರಲಿ ಎಲ್ಲದರ ಎದುರು ಕುಂಡದಲ್ಲಿ ಬಿಳಿ ತಾವರೆಯ ಮೊಗ್ಗುಗಳು, ತರಹತರಹದ ಹಣ್ಣುಗಳನ್ನು ಅಂದವಾಗಿ ಜೋಡಿಸಿಟ್ಟಿರುವುದು ಸಾಮಾನ್ಯ. ಕೆಲವು ಮೂರ್ತಿಗಳಿಗೆ ಸ್ನೋ, ಪೌಡರ್ ಹಚ್ಚಿ ಅಲಂಕಾರ ಮಾಡುತ್ತಾರೆ. ನೋಟುಗಳನ್ನಂತೂ ಮೂರ್ತಿಗಳ ಕೈ, ಕಾಲಿನೆಡೆಗೆ ಸಿಕ್ಕಿಸಿ ಇಡುತ್ತಾರೆ, ಒಂದೊAದು ಕಡೆಯ ಸಂಪ್ರದಾಯ ಒಂದೊಂದು ರೀತಿಯದ್ದು ಎನ್ನಿ.
ಟುಯೋಲ್ ಸ್ಲೆಂಗ್ ಸಂಗ್ರಹಾಲಯ (Tuol Sieng Museum): ಇದು ಒಂದು ಕಾಲದಲ್ಲಿ ಶಾಲಾ ಕಟ್ಟಡವಾಗಿತ್ತು, ಕಡೆಗೆ ಜೈಲಾಗಿ ಮಾರ್ಪಟ್ಟಿತು. ಖೈದಿಗಳಿಗೆ ಚಿತ್ರಹಿಂಸೆ ಕೊಡಲಾಯಿತು, ನರಮೇಧ ನಡೆಯಿತು, ಕಡೆಗೆ ಪರಿಸ್ಥಿತಿ ಬದಲಾದಾಗ ಸಂಗ್ರಹಾಲಯವಾಯಿತು. ಸಂಗ್ರಹಾಲಯದ ಬಗ್ಗೆ ಬರೆಯುವಾಗ ಕಾಂಬೋಡಿಯಾದ ರಾಜಕೀಯ ಪರಿಸ್ಥಿತಿ, ಇತಿಹಾಸದ ಪುಟಗಳನ್ನು ತಿರುಗಿಸಬೇಕಾಗುತ್ತದೆ.
ಇಸವಿ 1975 ಅತ್ಯಂತ ಕೆಟ್ಟ ಕಾಲ. ಕಾಂಬೋಡಿಯಾದಲ್ಲಿ ಆಳ್ವಿಕೆಯಲ್ಲಿದ್ದ ಖ್ಮೇರ್ ರೋಜ್ ಸೈನ್ಯವು ಸರಕಾರದ ವಿರುದ್ಧ ಬಂಡೆದ್ದವರನ್ನೆಲ್ಲ ಜೈಲಿಗೆ ಕಳುಹಿಸಿತು. ಇದರಿಂದ ಹೆಚ್ಚಿನ ಜೈಲುಗಳ ಆವಶ್ಯಕತೆ ಬಿತ್ತು. ನಗರದಲ್ಲಿದ್ದ ಹೆಚ್ಚಿನ ಕಟ್ಟಡಗಳು ಜೈಲುಗಳಾದವು. ಕೊನೆಗೆ ಐದು ಕಟ್ಟಡಗಳಿರುವ ಹೈಸ್ಕೂಲೇ ಜೈಲುಗಳಾಗಿ ಪರಿವರ್ತಿಸಲಾಯಿತು. ಇದಕ್ಕೆ ‘ಸೆಕ್ಯೂರಿಟಿ ಪ್ರಿಸನ್ 21’ ಎಂದು ಹೆಸರಿಡಲಾಯಿತು. ತರಗತಿಗಳನ್ನು ಹಿಂಸೆ ಕೊಡುವ ಕೊಠಡಿಗಳಾಗಿ ಪರಿವರ್ತಿಸಲಾಯಿತು. ಸುತ್ತ ವಿದ್ಯುತ್ ತಂತಿ ಬಂತು. ಬೆಳಕು ಒಳಗೆ ಬಾರದಿರಲು ಹಾಗೂ ಖೈದಿಗಳು ತಪ್ಪಿಸಿಕೊಂಡು ಹೋಗದಿರಲು ಕಿಟಕಿಗಳನ್ನು ಮುಚ್ಚಲಾಯಿತು. ಮುಂದಿನ 3-4 ವರ್ಷಗಳಲ್ಲಿ 20 ಸಾವಿರಕ್ಕೂ ಅಧಿಕ ಖೈದಿಗಳನ್ನು ಇಲ್ಲಿ ತುಂಬಲಾಯಿತು. ಅವರಿಗೆ ಕಠಿಣ ಸಜೆ ಕೊಡಲಾಯಿತು. ಕೊನೆಗೆ ರಾಜಕೀಯದಲ್ಲಿ ಬದಲಾವಣೆ ಬಂತು, ಈ ಜೈಲನ್ನು ಮುಚ್ಚಲಾಯಿತು. 1980ರಲ್ಲಿ ಇದು ಸಂಗ್ರಹಾಲಯವಾಗಿ ತೆರೆದುಕೊಂಡಿತು.
ಈಗ ಸಂಗ್ರಹಾಲಯದಲ್ಲಿ ಹಿಂಸೆ ಕೊಡುತ್ತಿದ್ದ ಪ್ರತಿ ಕೊಠಡಿಯಲ್ಲಿ ತುಕ್ಕುಹಿಡಿದ ಕಬ್ಬಿಣದ ಮಂಚ, ಕೈ, ಕಾಲಿಗೆ ಚೈನ್ ಹಾಕಿದ ಅತ್ಯಂತ ಬರ್ಬರ ಪರಿಸ್ಥಿತಿಯಲ್ಲಿರುವ ಖೈದಿಗಳ ಫೋಟೋ ಪ್ರದರ್ಶನಕ್ಕಿದೆ. ಜೈಲಿಗೆ ಹೋದವರ ಮತ್ತು ಸತ್ತವರ ಫೋಟೋಗಳು ಮತ್ತು ಒಂದಿಷ್ಟು ತಲೆಬುರುಡೆಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಹೊರಗಡೆ ಪುಟ್ಟ ಪಾರ್ಕ್ ಇದೆ. ಜೈಲಿಗೆ ಹೋಗಿ ಬಂದ ಒಂದಿಬ್ಬರು ಪಾರ್ಕಿನಲ್ಲಿ ಪ್ರದರ್ಶನಕ್ಕೆಂಬಂತೆ ಕುಳಿತಿರುತ್ತಾರೆ. ಜಾಗ ಪ್ರಶಾಂತವಾಗಿದ್ದು ಹೈಸ್ಕೂಲಿಗೆ ಹೇಳಿಮಾಡಿಸಿದ ಜಾಗ, ಆದರೆ ಖೈದಿಗಳ ಅನುಭವಿಸಿದ ಸಂಕಷ್ಟವೂ ಕಣ್ಣೆದುರಿಗೆ ಬರುತ್ತದೆ.
ಟ್ರಾವೆಲ್ ಚಾನಲ್ ಒಂದರಲ್ಲಿ ‘ಸಾಯುವ ಮೊದಲು ನೋಡಬೇಕಾದ ಸಾವಿರ ಜಾಗಗಳಲ್ಲಿ ಒಂದು’ ಎಂದು ಗುರುತಿಸಲ್ಪಟ್ಟಿದೆ ಪಾಮ್ ಪೆನ್.