ರಾಜಸ್ಥಾನದ ಉದಯಪುರದ ಅರಮನೆ ಅಂದರೆ ಅದೊಂದು ನಾನಾ ಕಾಲಘಟ್ಟಗಳಲ್ಲಿ ಆಳಿದ ನಾನಾ ರಾಜರುಗಳಿಂದ ಕಟ್ಟಿಸಲ್ಪಟ್ಟ, ಪರಸ್ಪರ ಹೊಂದಿಕೊಂಡಂತಿರುವ, ಅರಮನೆಗಳ ಬೃಹತ್ ಸಂಕೀರ್ಣ. ಮೊಗಲ್ ಚಕ್ರವರ್ತಿ ಅಕ್ಬರ್ನೊಂದಿಗೆ ನಡೆದ ಯುದ್ಧದಲ್ಲಿ ಸೋಲುಂಡ ನಂತರ ರಾಜಾ ಉದಯಸಿಂಗ್ ಈ ಸ್ಥಳಕ್ಕೆ ಬಂದು ೧೫೫೯ರಲ್ಲಿ ಅರಮನೆ ಕಟ್ಟಿಸಿ ಮೊದಲಿಗೆ ನೆಲೆ ನಿಂತ ಅನ್ನುವುದು ಚರಿತ್ರೆ. ಪಿಚೋಲಾ ಸರೋವರದ ದಡದಲ್ಲಿರುವ ಅರಮನೆ ಸಂಕೀರ್ಣಕ್ಕೆ ಸುತ್ತಲಿನ ಪ್ರಕೃತಿ ವೈಭವ ಅನ್ಯಾದೃಶ ಸೊಬಗನ್ನು ಕೊಡಮಾಡಿದೆ. ಸುತ್ತುವರಿದಿರುವ ಸರೋವರಗಳು, ಕಾಡುಗಳು, ಅರಾವಳಿ ಪರ್ವತಮಾಲೆ ಪ್ರತಿಯೊಂದೂ ನಯನ ಮನೋಹರ. ರಾಣಾ ಉದಯಸಿಂಗ್ನ ಸಾವಿನ ನಂತರ ಅವನ ಮಗ ರಾಣಾ ಪ್ರತಾಪ್ ‘ಹಲ್ದಿಘಾಟಿ’ ಯುದ್ಧದಲ್ಲಿ ಅಕ್ಬರ್ನನ್ನು ಸೋಲಿಸಿದ ನಂತರದ ಕಾಲ ಅರಮನೆಗಳ ನಿರ್ಮಾಣದ ಸುವರ್ಣಯುಗ. ಸ್ವಾತಂತ್ರ್ಯಾನಂತರ ೧೯೪೯ರಲ್ಲಿ ರಾಜರ ಆಳ್ವಿಕೆ ಕೊನೆಗೊಂಡು ಮೇವಾರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಲೀನವಾಯಿತು. ಅರಮನೆಯ ಅತಿಥಿಗೃಹಗಳು, ಸರೋವರದ ನಡುಗಡ್ಡೆಗಳಲ್ಲಿ ಕಟ್ಟಿಸಿದ ಬೇಸಿಗೆಯ ಅರಮನೆಗಳೂ ಸೇರಿದಂತೆ ಕೆಲವು ಅರಮನೆಗಳು ಪಾರಂಪರಿಕ ಹೋಟೆಲುಗಳಾಗಿ ಪರಿವರ್ತನೆಗೊಂಡವು. ೬೦ ದಾಟಿದ ಈಗಿನ ಮಹಾರಾಜ ಮಹೇಂದ್ರಸಿಂಗ್ ಮೇವಾರ ಅವರು ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧವಿರುವ ಸಮೀಪದ ಮತ್ತೊಂದು ಅರಮನೆಯಲ್ಲಿ ವಾಸಮಾಡುತ್ತಿರುವ ಮಾಹಿತಿಯೊಂದಿಗೆ ಹಿಂದಿ ನಟ ಅಕ್ಷಯ ಕುಮಾರ್ ನಡೆಸಿಕೊಟ್ಟ ‘ಮಾಸ್ಟರ್ ಚೆಫ್’ ಅಡುಗೆ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಗೆದ್ದ ಅಭ್ಯರ್ಥಿ ತಯಾರಿಸಿದ ವಿಶೇಷ ಅಡುಗೆಗಳನ್ನು ಮಹಾರಾಜರು ರುಚಿ ನೋಡಿದ್ದರ ಕುರಿತು ನಮ್ಮ ಗೈಡ್ ಉತ್ಸಾಹದಿಂದ ವರ್ಣಿಸುವಾಗ ಆ ಕಾರ್ಯಕ್ರಮದಲ್ಲಿ ಮಹಾರಾಜರನ್ನು ನೋಡಿದ ಅರೆಬರೆ ನೆನಪು ಮೀಟಿದಂತಾಗಿ ‘ಮಹಾರಾಜರು ಹೀಗಿದ್ದಾರೆ’ ಅನ್ನುವ ನೆನವರಿಕೆಯೊಡನೆ ‘ಇಲ್ಲಿಯೇ ಇದ್ದಾರೆ’ ಎನ್ನುವುದರ ಕುರಿತು ವಿವರ ಸಿಕ್ಕಿತು. ರಾಜಕುಮಾರಿಯ ವಿವಾಹಕ್ಕೆಂದು ಇತ್ತೀಚಿನ ಕೆಲ ವರ್ಷಗಳ ಹಿಂದೆ ಸಜ್ಜುಗೊಂಡಿದ್ದ ಅರಮನೆಯ ಆವರಣ ಸಾರ್ವಜನಿಕರಿಗೂ ಬಾಡಿಗೆಗೆ ಲಭ್ಯವೆಂಬ ಮಾಹಿತಿಯೂ ತಿಳಿಯಿತು.
ಅರಮನೆಯ ಎದುರುಭಾಗದಲ್ಲಿ ಮನರಂಜನೆಗೆಂದು ಆನೆಗಳ ಕಾಳಗ ಏರ್ಪಡಿಸುತ್ತಿದ್ದ ಸ್ಥಳ, ರಾಣಿವಾಸದವರು ಈ ಸಂಭ್ರಮವನ್ನು ನೋಡಲು ಕುಳಿತುಕೊಳ್ಳುತ್ತಿದ್ದ ಮೇಲ್ಮಹಡಿಯ ಜಾಲಂಧ್ರಗಳ ಹಿಂಬದಿಯ ಜಾಗ, ಮಹಾರಾಜರ ಪ್ರತ್ಯೇಕ ಸ್ಥಾನ ಎಂದು ಬೆಟ್ಟು ಮಾಡುತ್ತಾ ಅರಮನೆಯ ಮುಖ್ಯದ್ವಾರದ ಪ್ರವೇಶದ ನಂತರ ಆರಂಭವಾದ ಗೈಡ್ನ ವಿವರಣೆ ಅರಮನೆ ಸಂಕೀರ್ಣದೊಳಗೆ ಕಳೆಗಟ್ಟಿತು. ಉದಯಪುರದ ಅರಮನೆಗಳ ಸಂಕೀರ್ಣ ಅಂದರೆ ಬರವಣಿಗೆಗೆ ನಿಲುಕದ ಅದ್ಭುತ. ಸಂಪೂರ್ಣವಾಗಿ ಗ್ರಾನೈಟ್ ಮತ್ತು ಅಮೃತಶಿಲೆಗಳಿಂದ ಕಟ್ಟಲಾದ ಅರಮನೆ ಸಂಕೀರ್ಣ ದೊಡ್ಡ ದೊಡ್ಡ ದಿವಾನಖಾನೆಗಳು, ಸೂಕ್ಷ್ಮಾತಿಸೂಕ್ಷ್ಮ ಕುಸುರಿಗೆಲಸದ ಕಂಬಗಳು, ಕಿಟಕಿಬಾಗಿಲುಗಳು, ಗುಂಬಜುಗಳು, ಕಮಾನುಗಳಿಂದ ಕೂಡಿದ್ದು; ಮೊಗಲ್, ರಾಜಸ್ಥಾನಿ, ಚೈನಾ ಮತ್ತು ಯೂರೋಪಿಯನ್ ಶೈಲಿಯ ವಾಸ್ತುಶಿಲ್ಪಗಳ ಸಮ್ಮಿಶ್ರಣದ ರಚನೆ. ರಂಗುರಂಗಿನ ಗಾಜುಗಳನ್ನು, ಕನ್ನಡಿಗಳನ್ನು ಅಳವಡಿಸಿದ ಮಾಯಾಲೋಕ ಶೀಷಮಹಲ್, ರಾಧಾಕೃಷ್ಣರ ಲೀಲೆಗಳನ್ನು ಚಿತ್ರಿಸಿರುವ ಭೀಮವಿಲಾಸ್, ನವಿಲಿನ ಕೆತ್ತನೆಗಳಿಂದ ಕಣ್ಸೆಳೆವ ಮೋರ್ ಚೌಕ್, ದಿಲ್ ಖುಷ್ ಮಹಲ್, ಮೋತಿ ಮಹಲ್, ಕೃಷ್ಣ ವಿಲಾಸ, ೯೦ ಅಡಿ ಎತ್ತರದ ಪ್ರಾಕೃತಿಕ ಬಂಡೆಯ ಮೇಲೆ ನಿರ್ಮಾಣಗೊಂಡ ಬಡಾ ಮಹಲ್, ಮಾಣಿಕ್ ಮಹಲ್, ಹೀಗೆ ಒಂದೊಂದರ ಸೊಬಗು ಒಂದೊಂದು ವಿಧ. ಅರಮನೆಯ ಬಾಲ್ಕನಿಗಳಿಂದ ಉದಯಪುರ ಪಟ್ಟಣ, ಲೇಕ್ ಪ್ಯಾಲೆಸ್ ಹೋಟೆಲ್, ಜಗ್ ಮಂದಿರ್ ದೇವಾಲಯ ಮುಂತಾದ ಸ್ಥಳಗಳನ್ನು ವೀಕ್ಷಿಸುವುದು ಒಂದು ಅಪರೂಪದ ಅನುಭವ. ರಾಣಾ ಪ್ರತಾಪ್ ಸಿಂಗ್ನ ಪ್ರೀತಿಯ ಕುದುರೆ, ಚಾರಿತ್ರಿಕವಾಗಿ ಉಲ್ಲೇಖಿಸಲ್ಪಟ್ಟಿರುವ ಚೇತಕ್ನ ಪ್ರತಿಕೃತಿ ಅರಮನೆಯ ಮತ್ತೊಂದು ಆಕರ್ಷಣೆ. ಸಾಮಾನ್ಯ ಕುದುರೆಗಳಿಗಿಂತ ಎತ್ತರಕ್ಕೆ ಸುಪುಷ್ಟವಾಗಿದ್ದ ಚೇತಕ್ನ ಮೂತಿಗೆ ಆನೆ ಸೊಂಡಿಲಿನಂಥ ರಚನೆಯನ್ನು ಜೋಡಿಸಿ ಶತ್ರುಪಾಳೆಯದ ಆನೆಗಳ ಹಿಂದೆ ಬಿಟ್ಟರೆ ಆನೆಗಳು ಅದನ್ನು ತಮ್ಮ ಮರಿಯೆಂದೇ ಭ್ರಮಿಸುತ್ತಿದ್ದುವಂತೆ ಎನ್ನುವ ಕಥೆ ಹೇಳಿದ ಗೈಡ್ ಕುದುರೆಯ ಮೂತಿಗೆ ಆನೆ ಸೊಂಡಿಲನ್ನು ಜೋಡಿಸಿದ್ದರ ಕುರಿತು ವಿವರಣೆ ಕೊಟ್ಟರು. ಆ ಕಾಲದ ಮಹಾರಾಜರುಗಳು ಬಳಸುತ್ತಿದ್ದ ನಾನಾ ವಿಧದ ಕೆತ್ತನೆ ಕೆಲಸದ ಪೀಠೋಪಕರಣಗಳು, ಯುದ್ಧೋಪಕರಣಗಳು, ವಸ್ತುವೈವಿಧ್ಯಗಳು, ಅಡುಗೆಗೆ ಬಳಸುತ್ತಿದ್ದ ಬೃಹದ್ಗಾತ್ರದ ಪಾತ್ರೆಪಡಗಗಳು, ಅಪರೂಪದ ಕಲಾಕೃತಿಗಳು, ಅಂದಿನ ಜೀವನಶೈಲಿಯ ಕುರಿತಾದ ಕಲ್ಪನೆಗೆ ಪ್ರೇರಕವಾಗುವಂತಿವೆ. ರಾಣಿವಾಸದವರ ಜನಾನಾ ಮಹಲ್ ಈಗ ಮ್ಯೂಸಿಯಂ ಆಗಿ ಪರಿವರ್ತನೆಗೊಂಡಿದೆ. ಪತಿ ತೀರಿಕೊಂಡ ನಂತರ ಸ್ವಯಂಪಾಕ ಮಾಡಿಕೊಂಡು ಕೃಷ್ಣನಿಗೆ ಅರ್ಪಿಸಿ ನಂತರ ತಾನು ಭುಂಜಿಸುತ್ತಿದ್ದ ರಾಣಿಯೊಬ್ಬಳು ಬಳಸುತ್ತಿದ್ದ ಅಡುಗೆ ಒಲೆ, ಪಾತ್ರೆಗಳು ಮುಂತಾದುವನ್ನು ಕಾಪಿಟ್ಟಿದ್ದು ಸಾಮಾನ್ಯರಲ್ಲಿ ಸಾಮಾನ್ಯಳಂತೆ ರಾಣಿಯೊಬ್ಬಳು ಸರಳ ಜೀವನ ನಡೆಸುತ್ತಿದ್ದುದರ ಕುರಿತು ಕೌತುಕವಾಗುತ್ತದೆ.
(ಫೋಟೋಗಳು: ರಾಘವೇಂದ್ರ ಉಡುಪ.)
ಉದಯಪುರದ ಅರಮನೆ ಸಂಕೀರ್ಣ ಅಂದರೆ ನೋಡಿ ಮುಗಿಸಲಾಗದ ಸೊಬಗು, ನೋಡಿದಷ್ಟನ್ನೂ ನೆನಪಿಟ್ಟುಕೊಂಡು ಹಂಚಿಕೊಳ್ಳಲಾಗದ ಬೆರಗು ಅನ್ನುವಾಗ ಮತ್ತೊಂದು ಸಂಗತಿ ನೆನಪಾಗುತ್ತಿದೆ. ಅರಮನೆಯೊಂದರ ಮೇಲ್ಮಹಡಿಯೊಳಗೆ, ಬಹುಶಃ ಮೂರನೇ ಮಹಡಿಯಲ್ಲಿ ದೊಡ್ಡ ಮರವೊಂದು ಬೆಳೆದು ನಿಂತಿದ್ದನ್ನು ತೋರಿಸಿದ ಗೈಡ್ ಅದನ್ನು ಇಷ್ಟೆತ್ತರದಲ್ಲಿ ಬೆಳೆಸಿದ್ದು ಹೇಗೆ ಎನ್ನುವ ಪ್ರಶ್ನೆ ಮುಂದಿಟ್ಟರು. ಉತ್ತರವನ್ನೂ ಹೇಳಿದರು. ಬೆಟ್ಟದ ಮೇಲಿನ ಆ ಮರವನ್ನು ಹಾಗೇ ಉಳಿಸಿ ಸುತ್ತ ತಳಭಾಗದಿಂದ ಕಟ್ಟಡ ಎಬ್ಬಿಸಿದ್ದು ಆ ಮರ ಸಹಜವಾಗಿ ಮೇಲ್ಮಹಡಿಯಲ್ಲಿ ನೆಟ್ಟು ಬೆಳೆಸಿದಂತೆ ಕಾಣುತ್ತಿದೆ.
ಹಿಂದೊಂದು ಕಾಲದ ರಾಜಮಹಾರಾಜರ ಜೀವನಶೈಲಿಯ ಕುರಿತಾದ ಕುತೂಹಲವನ್ನು ತಣಿಸುವಲ್ಲಿ ಅರಮನೆಗಳ ಪಾತ್ರ ಹಿರಿದು ಅಂದರೆ ಉತ್ಪ್ರೇಕ್ಷೆಯಾಗಲಿಕ್ಕಿಲ್ಲ.