ದಾಲ್ ಸರೋವರದ ಮತ್ತೊಂದು ಆಕರ್ಷಣೆ ಎಂದರೆ ಇಲ್ಲಿರುವ ದೋಣಿಮನೆಗಳು. ಸ್ನಾನಗೃಹಗಳುಳ್ಳ ಎರಡರಿಂದ ನಾಲ್ಕು ಕೋಣೆಗಳನ್ನು ಹೊಂದಿರುವ ಈ ದೋಣಿಮನೆಗಳು ಅಡುಗೆಕೋಣೆ, ಊಟದ ಮನೆಗಳನ್ನೂ ಒಳಗೊಂಡಿರುತ್ತವೆ. ಪರ್ಷಿಯನ್ ನೆಲಹಾಸುಗಳು, ಅಮೂಲ್ಯ ಕಾಶ್ಮೀರೀ ಕಲಾಕೃತಿಗಳಿಂದ ವೈಭವೋಪೇತವಾಗಿ ಅಲಂಕರಿಸಲ್ಪಟ್ಟ ಈ ದೋಣಿಮನೆಗಳಲ್ಲಿ ಉಳಿಯುವುದು ಒಂದು ವಿಶಿಷ್ಟ ಅನುಭವ. ಸಾಮಾನ್ಯವಾಗಿ ಒಂದು ಸಾವಿರದಿಂದ ಹಿಡಿದು ಹತ್ತು ಸಾವಿರದವರೆಗೂ ಈ ಕೋಣೆಗಳ ಬಾಡಿಗೆ ಇರುತ್ತದೆ.
ಜಮ್ಮು-ಕಾಶ್ಮೀರದ ಬೇಸಿಗೆಯ ರಾಜಧಾನಿ ಶ್ರೀನಗರ ಸಮುದ್ರ ಮಟ್ಟದಿಂದ ೧,೭೩೦ ಮೀಟರ್ (ಸುಮಾರು ೫,೭೦೦ ಅಡಿ) ಎತ್ತರವಿರುವ ವಿಶ್ವ ಪ್ರಸಿದ್ಧ ಗಿರಿಧಾಮ. ಹಿಮಾಲಯ ಪರ್ವತ ಶ್ರೇಣಿಯ ಮಡಿಲಲ್ಲಿರುವ ಈ ಮನಮೋಹಕ ನಗರವು ಝೇಲಂ ನದಿಯ ಎರಡೂ ಬದಿಯಲ್ಲಿ ವಿಸ್ತರಿಸಿಕೊಂಡಿದೆ. ಸರೋವರಗಳು ಹಾಗೂ ಉದ್ಯಾನವನಗಳಿಂದ ಕಂಗೊಳಿಸುವ ಶ್ರೀನಗರ ಪೂರ್ವದ ವೆನಿಸ್ ಎಂದು ಕರೆಯಲ್ಪಡುತ್ತದೆ. ಈ ನಗರದ ಸೌಂದರ್ಯಕ್ಕೆ ಎಣೆಯೇ ಇಲ್ಲ ಎಂದರೆ ತಪ್ಪಾಗಲಾರದು.
ದಾಲ್ ಸರೋವರ ಶ್ರೀನಗರದ ಪ್ರಮುಖ ಆಕರ್ಷಣೆಗಳಲ್ಲೊಂದು. ಶ್ರೀನಗರದ ಕೇಂದ್ರಬಿಂದುವಾಗಿರುವ ೬x೩ ಕಿ.ಮೀ. ಉದ್ದಗಲವಿರುವ ದಾಲ್ ಸರೋವರ ನಾಲ್ಕು ಭಾಗಗಳಾಗಿ ವಿಂಗಡಿಸಲ್ಪಟ್ಟಿದೆ. ಅವನ್ನು ಗಾಗ್ರಿಬಾಲ್, ಲೋಕುಟ್ದಾಲ್, ಬೋದ್ದಾಲ್ ಮತ್ತು ನಾಗಿನ್ ಎಂದು ಗುರುತಿಸಲಾಗುತ್ತದೆ. ಇವುಗಳಲ್ಲಿ ಶ್ರೀಧರಪರ್ವತದ (ಝಬರ್ವಾನ್ ಎಂದೂ ಕರೆಯುತ್ತಾರೆ) ಪಾದದಲ್ಲಿರುವ ನಾಗಿನ್ ಸರೋವರ ಅತ್ಯಂತ ಸುಂದರವಾದುದು ಮತ್ತು ಪ್ರವಾಸಿಗರನ್ನು ಸೆಳೆಯುವ ಚಟುವಟಿಕೆಯ ತಾಣ. ಈ ಸರೋವರದ ಸುತ್ತಲೂ ಹಸಿರಿನ ಸಾಮ್ರಾಜ್ಯವಿದ್ದು, ಎತ್ತರೆತ್ತರದ ಮರಗಳು ನೋಡುಗರ ಮನ ತಣಿಸುತ್ತವೆ. ಒಂದು ಬದಿಯಲ್ಲಿ ಎತ್ತರಕ್ಕೆ ಚಿಮ್ಮುವ ನೀರ ಕಾರಂಜಿಗಳಿವೆ. ಶ್ರೀಧರಪರ್ವತ, ಅದರ ಹಿಂದೆ ದೂರದಲ್ಲಿ ಕಾಣುವ ಹಿಮಾಚ್ಛಾದಿತ ಶಿಖರಗಳು – ಇವನ್ನೆಲ್ಲ ಎಷ್ಟು ನೋಡಿದರೂ ಸಾಲದು.
ಇಡೀ ಕಾಶ್ಮೀರ ಕಣಿವೆಯೇ ಪ್ರವಾಸೋದ್ಯಮದ ಮೇಲೆ ನಿಂತಿರುವಾಗ ದಾಲ್ ಸರೋವರ ಅದಕ್ಕೆ ಹೊರತಾಗುವುದು ಹೇಗೆ ಸಾಧ್ಯ? ಸರೋವರದ ದಂಡೆಗೆ ಬಂದೊಡನೆಯೇ ನಮ್ಮನ್ನು ಹಲವಾರು ಮಂದಿ ಮುತ್ತಿಕೊಳ್ಳುತ್ತಾರೆ. ಸ್ವೆಟರ್, ಶಾಲು, ವುಲ್ಲನ್ಕೋಟು, ಬಗೆಬಗೆಯ ಕೈಚೀಲಗಳು, ತಂಪು ಕನ್ನಡಕ, ಕೃತಕ ಆಭರಣಗಳು – ಒಂದೇ ಎರಡೇ! ಸೈಕಲ್ಲುಗಳಲ್ಲಿ, ಸ್ಕೂಟರುಗಳಲ್ಲಿ, ಕಾರುಗಳಲ್ಲಿ ಹೇರಿಕೊಂಡು ಬಂದ ಮಾರಾಟಗಾರರು ದುಂಬಾಲು ಬೀಳುತ್ತಾರೆ. ಇವರ ಮಧ್ಯೆ ಸರೋವರದಲ್ಲಿ ದೋಣಿ ವಿಹಾರ ಮಾಡಿಸಲೇಬೇಕೆಂದು ತುದಿಗಾಲಲ್ಲಿ ನಿಂತಿರುವ ಅನೇಕರು ಹಿಡಿದೆಳೆಯುವುದೊಂದು ಬಾಕಿ. ಶಿಕಾರಗಳೆಂದು ಕರೆಯುವ ಪುಟ್ಟ ದೋಣಿಗಳಲ್ಲಿ ಕುಳಿತು ಸರೋವರದ ನೀರಿನಲ್ಲಿ ವಿಹರಿಸುವುದು ಖುಷಿಕೊಡುತ್ತದೆ. ನಾಲ್ಕು ಜನ ಕೂರುವಂತಹ ಈ ಶಿಕಾರಗಳ ಬಾಡಿಗೆ ಒಂದು ಗಂಟೆಯ ವಿಹಾರಕ್ಕೆ ೨೦೧೫ರಲ್ಲಿ ಆರು ನೂರು ರೂಪಾಯಿ ಇದ್ದುದು, ಇತ್ತೀಚೆಗೆ ನಾವು ಭೇಟಿ ಕೊಟ್ಟಾಗ ಒಂದು ಸಾವಿರ ರೂಪಾಯಿ ಆಗಿತ್ತು. ಇದು ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ. ದೋಣಿ ನಡೆಸುವವರ ಸಂಘ ಒಮ್ಮತದಿಂದ ತೀರ್ಮಾನಿಸಿರುವುದರಿಂದ ಚೌಕಾಸಿ ನಡೆಯುವುದಿಲ್ಲ. ನಮ್ಮ ಶಿಕಾರದ ಚಾಲಕ ಒಂದು ಗಂಟೆಯ ಬದಲು ಒಂದೂವರೆ ಗಂಟೆ ಸುತ್ತಾಡಿಸಿದ.
ನಮ್ಮ ಪ್ರಯಾಣ ಆರಂಭವಾಗಿ ಕೆಲವೇ ನಿಮಿಷಗಳಾಗಿತ್ತಷ್ಟೆ. ಪುಟ್ಟ ದೋಣಿಯೊಂದು ಬಂದು ನಮ್ಮ ಶಿಕಾರದ ಪಕ್ಕದಲ್ಲೇ ನಿಂತುಬಿಟ್ಟಿತು. ಫೋಟೊ ಸರ್ವೀಸ್ ಎಂದು ಅದರ ಮೇಲೆ ಬರೆದಿತ್ತು. ಶುರುವಾಯಿತು ಅವರ ಪ್ರಚಾರ – ‘ಕಾಶ್ಮೀರದ ಪೋಷಾಕಿನಲ್ಲಿ ಫೋಟೊ ತೆಗೆದುಕೊಡುತ್ತೇವೆ. ಒಂದು ಪ್ರತಿಗೆ ಕೇವಲ ನೂರೈವತ್ತು ರೂಪಾಯಿ. ನೀವು ನಿಮ್ಮ ದೋಣಿಯಾನ ಮುಗಿಸಿ ಬರುವಷ್ಟರಲ್ಲೇ ತಯಾರಾಗಿರುತ್ತದೆ, ನೀವು ಅಡ್ವಾನ್ಸ್ ಕೂಡಾ ಕೊಡುವುದು ಬೇಡ ಇತ್ಯಾದಿ ಪುಸಲಾಯಿಸುವ ಮಾತುಗಳು. ಜೊತೆಗೆ ಅವನು ತೆಗೆದ ಫೋಟೋಗಳ ಆಲ್ಬಂ ಪ್ರದರ್ಶನ. ಬೇಡ ಎಂದರೂ ಕೇಳಲೊಲ್ಲ. ಜೊತೆಗೆ ನಮ್ಮ ದೋಣಿ ನಡೆಸುವವನ ವಶೀಲಿಬಾಜಿ ಬೇರೆ. ನಾವು ಬೇಡ ಎಂದೆವು. ನಮ್ಮ ಶಿಕಾರದಲ್ಲಿ ಕುಳಿತ ಇನ್ನೊಂದು ಜೋಡಿಯ ಹೆಣ್ಣುಮಗಳಿಗೆ ಫೋಟೊ ತೆಗೆಸಿಕೊಳ್ಳುವಾಸೆ. ಗಂಡ ಬೇಡ ಎಂದರೂ ಹಟಹಿಡಿದು ಮನವೊಲಿಸಿದಳಾಕೆ. ಫೋಟೋದವನು ಅವರನ್ನು ತನ್ನ ದೋಣಿಗೆ ವರ್ಗಾಯಿಸಿಕೊಂಡ. ಅವರು ಹಾಕಿದ್ದ ಬಟ್ಟೆಯ ಮೇಲೆಯೇ ಕಾಶ್ಮೀರದ ಪೋಷಾಕನ್ನು ತೊಡಿಸಿ, ವಿವಿಧ ವಸ್ತುಗಳನ್ನು ಹಿಡಿದುಕೊಳ್ಳುವಂತೆ ಹೇಳಿ ನಾನಾ ಪೋಸುಗಳಲ್ಲಿ ಫೋಟೋ ತೆಗೆದ. ಇದರಲ್ಲಿ ಚೆನ್ನಾಗಿರುವುದನ್ನು ಆರಿಸಿ ಪ್ರಿಂಟ್ ಹಾಕಿಸಿ ಇಟ್ಟಿರುತ್ತೇನೆ ಎಂದ. ಇವರು ನೆನಪಿಗಾಗಿ ಒಂದು ಫೋಟೋ ಸಾಕು ಎಂದುಕೊಂಡಿದ್ದರು. ಕೊನೆಗೆ ಅವನ ಕಾಟ ತಾಳಲಾರದೆ ಐದು ಫೋಟೊಗೆ ಒಪ್ಪಿಕೊಂಡರು.
ಹತ್ತು ನಿಮಿಷ ಕಳೆದಿರಬಹುದು, ಮತ್ತೊಂದು ದೋಣಿ ಹತ್ತಿರ ಬಂತು. ಅವನು ತನ್ನ ಒಂದು ಕಾಲನ್ನು ನಮ್ಮ ದೋಣಿಯ ಮೇಲೆ ಹಾಕಿ ಎರಡೂ ದೋಣಿಗಳು ಪರಸ್ಪರ ಅಂಟಿಕೊಳ್ಳುವಂತೆ ಮಾಡಿದ. ಅವನು ಮಾರಲು ತಂದದ್ದು ಕೇಸರಿಯಂತೆ. ಅದರ ಬಗ್ಗೆ ಹೊಗಳಿ ಅಸಲಿ ಮತ್ತು ನಕಲಿ ಕೇಸರಿಯನ್ನು ಗುರುತಿಸುವ ಬಗೆಗೆ ಒಂದು ಭಾಷಣ ಮತ್ತು ಪ್ರಾತ್ಯಕ್ಷಿಕೆ ಕೊಟ್ಟ. ‘ಬೇರೆಲ್ಲರೂ ನಕಲಿ ಮಾಲು ಮಾರುತ್ತಾರೆ, ತಾನು ಬೆಳೆಗಾರ. ಅಸಲಿ ಮಾಲನ್ನು ಮಾತ್ರ ಮಾರುತ್ತೇನೆ’ ಎನ್ನುವುದಕ್ಕೆ ಪುರಾವೆಯಾಗಿ ಕೇಸರಿ ಗಿಡಗಳ ನಡುವೆ ಅವನು ನಿಂತಿರುವ ಫೋಟೋ ಕೂಡಾ ತೋರಿಸಿದ! ಒಂದು ಗ್ರಾಂ ಕೇಸರಿಯಿರುವ ಡಬ್ಬಿಗೆ ಇನ್ನೂರು ರೂಪಾಯಿ ಹೇಳಿದವನು ಕಡೆಗೆ ಐವತ್ತು ರೂಪಾಯಿಗೆ ಕೊಟ್ಟ. ಊರಿಗೆ ಮರಳಿದ ಮೇಲೆ ತಿಳಿಯಿತು, ಅದು ಕೇಸರಿಯೇ ಅಲ್ಲ ಎಂದು! ನಿಜವಾದ ಕೇಸರಿಯ ದರ ಗ್ರಾಮಿಗೆ ಇನ್ನೂರೈವತ್ತರಿಂದ ಆರಂಭವಾಗುತ್ತದೆಯಂತೆ.
ಶಿಕಾರ ನಿಧಾನವಾಗಿ ಚಲಿಸುತ್ತಿತ್ತು. ಮತ್ತೊಂದು ಮಗದೊಂದು ಪುಟಾಣಿ ದೋಣಿಗಳು ಹತ್ತಿರ ಬರುವುದು, ಏನೇನೋ ಮಾರಾಟ ಮಾಡಲು ಪ್ರಯತ್ನಿಸುವುದು ನಡೆದೇ ಇತ್ತು. ಕಾಶ್ಮೀರಕ್ಕೆ ಸಂಬಂಧಿಸಿದ ಸ್ಮರಣಿಕೆಗಳು, ಸರ, ಬಳೆ, ಕೀ ಚೈನ್ ಇತ್ಯಾದಿ ವಸ್ತುಗಳನ್ನು ಮಾರುವವರು ಬಳಿ ಬಂದು ಕೇಳುವುದು ನಡೆದೇ ಇತ್ತು. ಸರೋವರದ ಆಚೆ ದಡದಿಂದ ಈ ಬದಿಗೆ ಬರಲು ಚಿಕ್ಕ ಚಿಕ್ಕ ದೋಣಿಗಳನ್ನೇ ಬಳಸುತ್ತಾರೆ. ಶಾಲೆಗೆ ಹೋಗುವ ಮಕ್ಕಳು, ಮಾರಾಟಕ್ಕೆ ವಸ್ತುಗಳನ್ನು ಕೊಂಡೊಯ್ಯುವವರು – ಹೀಗೆ ಹಲವು ರೀತಿಯ ಜನರು ನಮ್ಮ ಶಿಕಾರದ ಹತ್ತಿರದಲ್ಲಿ ಹಾದುಹೋದರು. ಚಲಿಸುವ ಹಣ್ಣು, ತರಕಾರಿ, ಹೂಗಳ ಅಂಗಡಿಗಳು ಕೂಡಾ ನೋಡಲು ಸಿಕ್ಕವು.
ಪಕ್ಕದಲ್ಲಿ ಜುಂಯ್ ಎನ್ನುತ್ತಾ ವಾಟರ್ ಸ್ಕೂಟರ್ ಒಂದು ಹಾದುಹೋಯಿತು. ನಮ್ಮದೇ ಪ್ರವಾಸಿ ತಂಡದ ಯುವಕನೊಬ್ಬ ಮೈ ಜುಮ್ಮೆನಿಸುವ ಅನುಭವಕ್ಕಾಗಿ ಅದನ್ನು ಓಡಿಸುತ್ತಿದ್ದ. ಅವನ ಹಿಂದೆ ಒಬ್ಬ ಟ್ರೈನರ್ ಕೂಡಾ ಇದ್ದ.
‘ಇಲ್ಲಿ ಒಳ್ಳೆಯ ಕಾಫಿ ಸಿಗುತ್ತದೆ, ಸಾಬ್’ ಎಂದು ಒಂದು ದೋಣಿ ಅಂಗಡಿಯ ಮುಂದೆ ನಿಲ್ಲಿಸಿದ, ನಮ್ಮ ಸಾಹೇಬ. ನಮ್ಮ ಮಾತುಕತೆಗಳಿಂದಲೇ ನಮ್ಮನ್ನು ದಕ್ಷಿಣ ಭಾರತದವರೆಂದು ಅವನು ಕಂಡುಕೊಂಡಿದ್ದ. ‘ಬೇಡಪ್ಪಾ, ಕಾಶ್ಮಿರೀ ಕಾವಾ ಕುಡಿಯೋಣ’ ಎಂದೆವು. ಅದೊಂದು ರೀತಿಯ ಕಷಾಯ. ಸಕ್ಕರೆಯದಾದರೆ ನಲವತ್ತು, ಜೇನು ಬೆರೆಸಿದ್ದು ಅರವತ್ತು ರೂಪಾಯಿ ಒಂದು ಕಪ್ಪಿಗೆ. ಆದರದು ನಮ್ಮ ನಾಲಿಗೆಗೆ ಹಿತವಾಗಲೇ ಇಲ್ಲ. ಪಕ್ಕದಲ್ಲೇ ಕಾಶ್ಮೀರಿ ಶಾಲುಗಳು, ಸ್ವೆಟರ್, ಡ್ರೆಸ್ಸುಗಳನ್ನು ಮಾರುವ ಒಂದು ಅಂಗಡಿ. ಅಲ್ಲಿಗೆ ತಂದು ನಿಲ್ಲಿಸಿ ‘ಶಾಪಿಂಗ್ ಮಾಡ್ತೀರಾ?’ ಎಂದು ಕೇಳಿದ ನಮ್ಮ ದೋಣಿಯಾತ. ಅಂಗಡಿಯವರೂ ‘ನೋಡೋದಕ್ಕೇನೂ ಚಾರ್ಜಿಲ್ಲ, ಬನ್ನಿ ಬನ್ನಿ’ ಎಂದು ಬಲವಂತ ಮಾಡತೊಡಗಿದರು. ನಮಗೆ ಬೇಡವಾಗಿತ್ತು. ಆದರೆ ಅವರೆಲ್ಲ ಪರಸ್ಪರರ ಮೇಲೆ ಅವಲಂಬಿತರಾಗಿರುವುದನ್ನು ನೋಡಿ ಸಂತೋಷವೂ ಆಯಿತು. ಈ ವೇಳೆಗೆ ಒಂದು ಗಂಟೆ ಕಳೆದಿತ್ತು, “ದಡ ಸೇರಿಸು ಮಾರಾಯಾ” ಎಂದು ಹೇಳಿದೆವು.
ದಾಲ್ ಸರೋವರದ ಮತ್ತೊಂದು ಆಕರ್ಷಣೆ ಎಂದರೆ ಇಲ್ಲಿರುವ ದೋಣಿಮನೆಗಳು. ಸ್ನಾನಗೃಹಗಳುಳ್ಳ ಎರಡರಿಂದ ನಾಲ್ಕು ಕೋಣೆಗಳನ್ನು ಹೊಂದಿರುವ ಈ ದೋಣಿಮನೆಗಳು ಅಡುಗೆಕೋಣೆ, ಊಟದ ಮನೆಗಳನ್ನೂ ಒಳಗೊಂಡಿರುತ್ತವೆ. ಪರ್ಷಿಯನ್ ನೆಲಹಾಸುಗಳು, ಅಮೂಲ್ಯ ಕಾಶ್ಮೀರೀ ಕಲಾಕೃತಿಗಳಿಂದ ವೈಭವೋಪೇತವಾಗಿ ಅಲಂಕರಿಸಲ್ಪಟ್ಟ ಈ ದೋಣಿಮನೆಗಳಲ್ಲಿ ಉಳಿಯುವುದು ಒಂದು ವಿಶಿಷ್ಟ ಅನುಭವ. ಸಾಮಾನ್ಯವಾಗಿ ಒಂದು ಸಾವಿರದಿಂದ ಹಿಡಿದು ಹತ್ತು ಸಾವಿರದವರೆಗೂ ಈ ಕೋಣೆಗಳ ಬಾಡಿಗೆ ಇರುತ್ತದೆ. ಬೇರೆ ಬೇರೆ ಋತುವಿಗೆ ಅನುಗುಣವಾಗಿ ಬಾಡಿಗೆಯೂ ಬದಲಾಗುತ್ತದೆ. ದೋಣಿಮನೆಗಳಿಗೆ ಮೂವ್ವತ್ತು-ನಲವತ್ತು ಲಕ್ಷಗಳಿಂದ ಒಂದು ಕೋಟಿ ರೂಪಾಯಿಯವರೆಗೂ ವೆಚ್ಚ ಮಾಡಿರುತ್ತಾರಂತೆ. ಇವು ಹೆಸರಿಗೆ ಮಾತ್ರ ದೋಣಿಮನೆಗಳು. ಆದರೆ ಇವು ಸರೋವರದಲ್ಲಿ ತೇಲುವುದಿಲ್ಲ! ದಡಕ್ಕೆ ಹೊಂದಿಕೊಂಡಂತಿದ್ದು, ಈ ದೋಣಿಮನೆಗಳನ್ನು ತಲಪಲು ಚಿಕ್ಕ ಶಿಕಾರಗಳನ್ನು ಅವಲಂಬಿಸಬೇಕಾಗುತ್ತದೆ.
ದಾಲ್ ಸರೋವರ ಕೇವಲ ಒಂದು ಸರೋವರವಲ್ಲ, ಅದು ಬೇರೊಂದು ಪ್ರಪಂಚ. ಏನುಂಟು ಏನಿಲ್ಲ ಎನ್ನುವಂತಿಲ್ಲ. ಪ್ರವಾಸೊದ್ಯಮವನ್ನೇ ಹಾಸಿ ಹೊದೆಯುವ ಕಾಶ್ಮೀರೀ ಜನರ ನಿಜದರ್ಶನ ಇಲ್ಲಿ ನಮಗಾಗುತ್ತದೆ. ಬಹಳಕಾಲ ನೆನಪಿನಲ್ಲಿ ಉಳಿಯುವಂತಹ ಅನುಭವವನ್ನು ದಾಲ್ ಸರೋವರದ ಭೇಟಿ ನಮಗೆ ನೀಡುತ್ತದೆ.
ತಲಪುವುದು: ಶ್ರೀನಗರವನ್ನು ವಿಮಾನ, ರೈಲು ಹಾಗೂ ರಸ್ತೆಯ ಮೂಲಕ ತಲಪಬಹುದು. ಶ್ರೀನಗರದಲ್ಲಿಯೇ ವಿಮಾನ ನಿಲ್ದಾಣವಿದೆ. ಹತ್ತಿರದ ರೈಲು ನಿಲ್ದಾಣ ಜಮ್ಮು ತಾವಿ. ಜಮ್ಮುವಿಗೆ ದೇಶದ ನಾನಾ ಭಾಗಗಳಿಂದ ನೇರ ರೈಲು ಸಂಪರ್ಕವಿದೆ. ರಾಷ್ಟ್ರೀಯ ಹೆದ್ದಾರಿ ೧ಎ ಮೂಲಕವೂ ಶ್ರೀನಗರವನ್ನು ತಲಪಬಹುದು. ಶ್ರೀನಗರವನ್ನು ಸಂದರ್ಶಿಸಲು ಫೆಬ್ರುವರಿಯಿಂದ ಜುಲೈ ಸೂಕ್ತಕಾಲ. ಹಿಮಪಾತದ ಅನುಭವವನ್ನು ಪಡೆಯಬಯಸುವವರು ಚಳಿಗಾಲದಲ್ಲಿಯೂ ಹೋಗಬಹುದು. ಆದರೆ ಆಗ ದಾಲ್ ಸರೋವರ ಹೆಪ್ಪುಗಟ್ಟಿರುವುದರಿಂದ ದೋಣಿ ವಿಹಾರದ ಅನುಭವ ಪಡೆಯುವುದು ಸಾಧ್ಯವಿಲ್ಲ.