ಹೂವಿನ ತಟ್ಟೆಗಳನ್ನು ನೋಡಬಹುದು. ಬೆಳಗ್ಗಿನ ಹೊತ್ತು ಬಾಲಿಯಲ್ಲಿ ತಿರುಗಾಡುತ್ತಿದ್ದರೆ ಹೂವಿನ ತಟ್ಟೆಗಳನ್ನು ಅಂಗಡಿಯ ಹೊರಗಿಟ್ಟು, ಅಗರಬತ್ತಿ ಹಚ್ಚಿ, ಮಣಮಣ ಮಂತ್ರ ಹೇಳುವವರನ್ನು ನೋಡಬಹುದು. ಕೆಲವೊಮ್ಮೆ ತಟ್ಟೆಯಲ್ಲಿ ಸಿಹಿ ತಿಂಡಿ ಮತ್ತು ಸಿಗರೇಟ್ ಸಹ ಇಟ್ಟಿರುತ್ತಾರೆ. ಇದು ಸಂಪತ್ತು, ಸುಖ, ಶಾಂತಿ ಕೊಟ್ಟ ದೇವರಿಗೆ ಕೃತಜ್ಞತಾಪೂರ್ವಕವಾಗಿ ಕೊಡುವ ಸಮರ್ಪಣೆಯಂತೆ. ಇದನ್ನು ‘ಕನಂಗ್ ಸರಿ’ ಎನ್ನುತ್ತಾರೆ. ದಾರಿ ಬದಿಯ ಅಂಗಡಿಗಳಲ್ಲಿ ಮಾರಾಟಕ್ಕಿಟ್ಟ ದೇವರ ಮೂರ್ತಿಗಳು, ಮಂಟಪಗಳನ್ನು ನೋಡುವಾಗ ಭಾರತದಲ್ಲೆಲ್ಲೋ ಅಡ್ಡಾಡಿದಂತೆ ಕಂಡರೂ ಜನರ ಭಾಷೆ, ಆಚರಣೆಯಿಂದಾಗಿ ನಮ್ಮಿಂದ ಭಿನ್ನವಾಗಿ ನಿಲ್ಲುತ್ತಾರೆ. ನಮ್ಮ ಗೈಡ್ ತಪ್ಪಿಲ್ಲದೆ ಪಟಪಟನೆ ಗಾಯತ್ರಿ ಮಂತ್ರ ಹೇಳುತ್ತಾನೆ. ಅಂದ ಹಾಗೆ ನಮ್ಮ ಗೈಡ್ನ ಹೆಸರು ಸೂರ್ಯ.
ಬಾಲಿಯ ಜನಸಂಖ್ಯೆಯಲ್ಲಿ ೮೫% ಹಿಂದುಗಳು. ರಾಮಾಯಣ, ಮಹಾಭಾರತ ಎಲ್ಲರಿಗೂ ಗೊತ್ತಿದೆ. ವಿಷ್ಣು, ಗಣಪತಿ ಮೆಚ್ಚಿನ ದೇವರು. ಆದರೆ ಪೂಜೆ, ಪುನಸ್ಕಾರ, ರೀತಿರಿವಾಜಿನಲ್ಲಿ ನಮಗೂ ಅವರಿಗೂ ಬಹಳಷ್ಟು ವ್ಯತ್ಯಾಸವಿದೆ. ಬಾಲಿಯಲ್ಲಿ ಇಸ್ಕಾನ್ನವರ ಶಾಖೆ ಇದೆ.
ದ್ವೀಪ ರಾಜ್ಯ ಬಾಲಿಯಿಂದ ಸಮುದ್ರವನ್ನು ಬೇರ್ಪಡಿಸುವಂತಿಲ್ಲ. ಹೆದ್ದಾರಿಯ ಒಂದು ಪಕ್ಕದಲ್ಲಿ ನೀಲಸಾಗರ ಸದಾ ಅಣಕುತ್ತಿರುತ್ತದೆ, ಅದಕ್ಕೆ ಸಾಥ್ ನೀಡುವ ಬಿಳಿ ಮೋಡದ ನೀಲ ಆಕಾಶ ಮತ್ತು ಚದುರಿದ ಮೋಡಗಳು. ಸಮುದ್ರತೀರದಲ್ಲಿ ಅಲ್ಲಲ್ಲಿ ಏನೋ ಬುಟ್ಟಿ ಇಟ್ಟುಕೊಂಡು ಪೂಜೆ ಮಾಡುವ ಜನರ ಗುಂಪು ಕಾಣಿಸುತ್ತದೆ. ಅದು ಕುಟುಂಬದವರು ಸತ್ತಾಗ ಅವರ ಬೂದಿಯನ್ನು ಸಮುದ್ರಕ್ಕೆ ಹಾಕುವಾಗ ನಡೆಯುವ ಸಂಪ್ರದಾಯವೆಂದು ನಮ್ಮ ಗೈಡ್ ಹೇಳಿದರು. ಅಂದಹಾಗೆ ಬಾಲಿಯಲ್ಲಿ ಸತ್ತಾಗ ನಡೆಯುವ ಅಪರ ಕರ್ಮಾಂಗಗಳು ವಿಪರೀತ ಖರ್ಚಿನದ್ದು. ಆ ಕ್ರಮಗಳನ್ನು ಅನುಸರಿಸದಿದ್ದರೆ ಮನುಷ್ಯನಿಗೆ ಮುಕ್ತಿ ಇಲ್ಲ ಎನ್ನುವ ನಂಬಿಕೆಯೂ ಇದೆ. ಹಾಗಾಗಿ ಕುಟುಂಬದವರು ಸತ್ತಾಗ ಹಣದ ಮುಗ್ಗಟ್ಟಿದ್ದರೆ ತಾತ್ಕಾಲಿಕವಾಗಿ ಹುಗಿದು, ಮತ್ತೆ ಹಣ ಒಟ್ಟಾದಾಗ ಹುಗಿದ ಶವವನ್ನು ಮೇಲೆತ್ತಿ, ಸುಟ್ಟು ಮಾಡಬೇಕಾದ ಕ್ರಮವನ್ನು ಪಾಲಿಸುತ್ತಾರೆ, ಸರಕಾರವೂ ೫ ವರ್ಷಕ್ಕೊಮ್ಮೆ ಸಾರ್ವಜನಿಕ ದಹನ ಕಾರ್ಯಕ್ರಮ ನಡೆಸುತ್ತಿದ್ದು, ಆ ಸಮಯದಲ್ಲಿ ಶವವನ್ನು ಮೇಲೆತ್ತಿ ದಹನ ಮಾಡುತ್ತಾರೆ. ಇದು ವಿಚಿತ್ರವಾಗಿ ಕಂಡರೂ ಈ ಪದ್ಧತಿ ಇನ್ನೂ ಆಚರಣೆಯಲ್ಲಿದೆ. ಉಬುದ ಮಂಕಿ ಫಾರೆಸ್ಟ್ ಸಂದರ್ಶಿಸಿದಾಗ ಅಲ್ಲಿನ ‘ಪುರ ಪ್ರಜಾಪತಿ’ ಬ್ರಹ್ಮನ ಮಂದಿರದ ಪಕ್ಕದಲ್ಲಿ ಸಾರ್ವಜನಿಕ ತಾತ್ಕಾಲಿಕ ಸಮಾಧಿ ಸ್ಥಳವಿತ್ತು.
ಬಾಲಿಯಲ್ಲಿ ಹಿಂದೂಧರ್ಮ ಭಾರತದಿಂದ ಬಂದ ವ್ಯಾಪಾರಿಗಳ ಮೂಲಕ ಹರಡಿತಂತೆ. ಕಾಲ ಕಳೆದಂತೆ ಹಲವಾರು ಬದಲಾವಣೆಗಳೂ ಆಯಿತು. ಇಲ್ಲಿನ ಹಿಂದೂಧರ್ಮದಲ್ಲಿ ಪ್ರಕೃತಿ ಪೂಜೆ ಮತ್ತು ಹಿರಿಯರ ಆತ್ಮದ ಪೂಜೆ ಧಾರಾಳವಾಗಿ ಕಂಡುಬರುತ್ತದೆ. ಬಾಲಿ ಪ್ರವಾಸದಲ್ಲಿ ಕೆಲವು ಮಂದಿರಗಳನ್ನು ಹೊರಗಿನಿಂದ ನೋಡಿದೆವು, ಮಂದಿರವನ್ನು ವಿದೇಶೀಯರು ಪ್ರವೇಶಿಸುವಂತಿಲ್ಲ. ಹಾಗೆ ಪ್ರವೇಶಿಸುವುದಾದರೆ ಮೊದಲೇ ಅನುಮತಿ ಪಡೆದಿರಬೇಕು ಹಾಗೂ ಅವರ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟಿರಬೇಕು.
ಪುರ ಉಲುನ್ ದಾನು ಬ್ರತಾನ್
ಇಲ್ಲಿ ಪುರವೆಂದರೆ ಮಂದಿರವೆಂದರ್ಥ. ಇದು ಬ್ರತಾನ್ ಸರೋವರದ ದಂಡೆಯ ಮೇಲಿದೆ. ಇದು ೫ ಮಂದಿರಗಳ ಸಂಕೀರ್ಣ. ಇವು ಶಿವ ಮತ್ತು ದೇವಿ ದಾನುವಿನ ಮಂದಿರಗಳು, ೧೨ ಮಹಡಿಯ ‘ಮೆರು ಪೆಲಿಂಗಃ’ ಅಂದರೆ ‘ಮೆರು ಪರ್ವತ’ವೇ ಮುಖ್ಯ ಮಂದಿರ. ಮಂದಿರಗಳ ಪಕ್ಕದಲ್ಲೇ ಬುದ್ಧ ಸ್ತೂಪವಿರುವುದು ಕುತೂಹಲದ ಸಂಗತಿ. ಇದು ಹಿಂದೂ, ಬೌದ್ಧ ಧರ್ಮಗಳೆರಡೂ ಒಟ್ಟಿಗೆ ಅನುಸರಿಸಲ್ಪಟ್ಟಿತು ಸಹಬಾಳ್ವೆಯಲ್ಲಿತ್ತು ಎನ್ನುವುದನ್ನು ತೋರಿಸುತ್ತದೆ. ಬಾಲಿಯಲ್ಲಿ ಬೇಸಾಯವೇ ಜನರ ಮುಖ್ಯ ಕಸುಬು. ಉತ್ತಮ ಮಳೆ, ಬೆಳೆ, ನೆಲದ ಫಲವತ್ತತೆಗಾಗಿ ಹಾಗೂ ಪ್ರಾಕೃತಿಕ ಅವಘಡಗಳನ್ನು ದೂರವಿಡಲು ಪ್ರಾರ್ಥಿಸುತ್ತಾರೆ ಈ ಮಂದಿರದಲ್ಲಿ. ಬಾಲಿಗೆ ಹೋದವರು ಇದನ್ನು ನೋಡದೆ ಬಾರರು ಎನ್ನುವಷ್ಟು ಸುಂದರ. ಮಂದಿರಗಳಲ್ಲದೆ ಲತಾಮಂಟಪಗಳು, ಕೊಳಕೊಳದಲ್ಲಿ ನೀರು ಉಗುಳುವ ಮೀನಿನ ಶಿಲ್ಪ, ಹೂವು ಹಣ್ಣಿನ ತೋಟ, ತೋಟದ ಮಧ್ಯದಲ್ಲಿ ನಿಲ್ಲಿಸಿರುವ ಸುಂದರ ನರ್ತಕಿಯರ ಶಿಲ್ಪಗಳಿವೆ. ಒಟ್ಟಿನಲ್ಲಿ ಬಾಲಿ ಜನರಿಗೆ ಭಕ್ತರನ್ನು, ಪ್ರವಾಸಿಗರನ್ನು ಆಕರ್ಷಿಸುವುದು ಹೇಗೆಂದು ಗೊತ್ತು. ನಾವು ಅಲ್ಲಿದ್ದಾಗ ಸಾಂಪ್ರದಾಯಿಕ ಆಚರಣೆಯೊಂದು ನಡೆಯುತ್ತಿತ್ತು, ಬಾಲಿಯ ಸಾಂಪ್ರದಾಯಿಕ ಬಟ್ಟೆ ತೊಟ್ಟು, ತಲೆಯ ಮೇಲೆ ಹಣ್ಣು, ಹೂವು ಮತ್ತು ತಿಂಡಿಯ ಬುಟ್ಟಿ ಹೊತ್ತುಕೊಂಡು ಮಹಿಳೆಯರ ಗುಂಪು ಸಾಗುತ್ತಿರಬೇಕಾದರೆ, ವಾದ್ಯದವರು, ಬಣ್ಣಬಣ್ಣದ ಪತಾಕೆ ಹಿಡಿದುಕೊಂಡ ಗಂಡಸರು ಅವರಿಗೆ ಸಾಥ್ ನೀಡುತ್ತಿದ್ದರು, ಅವರ ಹಿಂದೆ ‘ಬರೋಂಗ್’ ವೇಷಧಾರಿ (ಬರೋಂಗ್ ಬಾಲಿಯ ಸಾಂಪ್ರದಾಯಿಕ ನೃತ್ಯ). ಸಮುದ್ರದ ಹಿನ್ನೆಲೆಯಲ್ಲಿ ನಡೆಯುತ್ತಿದ್ದ ಈ ಆಚರಣೆ ಅತ್ಯಂತ ಸುಂದರ, ಬಾಲಿಯ ಜನರು ಪ್ರಕೃತಿಯೊಂದಿಗೆ ಸಂಪ್ರದಾಯವನ್ನು ಬೆಸೆಯುತ್ತಾರೆ.
ಮಂದಿರದ ಆವರಣದೊಳಗೆ ಪೂಜಾರಿ ಎಲ್ಲರ ಹಣೆಗೆ ಅಕ್ಕಿ ಕಾಳುಗಳನ್ನು ಅಂಟಿಸಿ ತಿನ್ನಲು ಪ್ರಸಾದ ಕೊಡುತ್ತಿದ್ದ. ಅಲ್ಲಿನ ಆಚರಣೆಯಲ್ಲಿ ಭಾಗವಹಿಸಬೇಕೆನ್ನಿಸಿತು, ನಮ್ಮ ಗೈಡ್ ತಡೆದ. ಮತ್ತೊಂದು ಕಡೆ ಹುಡುಗ, ಹುಡುಗಿಯ ಜೋಡಿಯನ್ನು ವಜ್ರಾಸನದಲ್ಲಿ ಕೂರಿಸಿ ಏನೋ ಮಂತ್ರ ಹೇಳುತ್ತಿದ್ದರು. ಅದು ಅಲ್ಲಿ ನಡೆಯುತ್ತಿರುವ ನಿಶ್ಚಿತಾರ್ಥವೆಂದು ತಿಳಿಯಿತು.
ಗರುಡ ವಿಷ್ಣು ಕೆಂಚನ ಮೂರ್ತಿ
ಇಲ್ಲಿ ಕೆಂಚನ ಎಂದರೆ ಕಿರೀಟ. ಗರುಡನ ಮೇಲೆ ಕೂತಿರುವ ಕಿರೀಟಧಾರಿ ವಿಷ್ಣುವಿನ ಕಂಚಿನ ಮೂರ್ತಿ. ಇದು ಇತ್ತೀಚಿನ ಸ್ಥಾಪನೆ. ಇದು ಅಮೆರಿಕದ ಸ್ಟಾಚ್ಯೂ ಆಫ್ ಲಿಬರ್ಟಿಗಿಂತ ಎತ್ತರವಿದೆಯಂತೆ. ಸುತ್ತ ಇರುವ ಸುಣ್ಣದ ಬೆಟ್ಟವನ್ನೇ ಕಡಿದು ನಡುವಿನಲ್ಲಿ ಒಂದು ಕಟ್ಟಡದ ಮೇಲೆ ಮೂರ್ತಿಯನ್ನು ಸ್ಥಾಪಿಸಿದ್ದಾರೆ. ಮೂರ್ತಿಯ ಕೆಳಗಿರುವ ಕಟ್ಟಡದಲ್ಲಿ ಮ್ಯೂಸಿಯಮ್ ಇದೆ. ದೇಶ, ವಿದೇಶೀ ಪ್ರವಾಸಿಗರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಸ್ಥಾಪಿಸಿದ್ದು ಇದು. ಮೂರ್ತಿ ಅತ್ಯಂತ ಆಕರ್ಷಕ ಎನ್ನುವಂತಿಲ್ಲದಿದ್ದರೂ ಪ್ರವಾಸಿಗರಿಗಾಗಿ ಮಾಡಿದ ವ್ಯವಸ್ಥೆ ಗಮನಸೆಳೆಯುತ್ತದೆ. ಸ್ವಲ್ಪ ದೂರದಲ್ಲಿ ವಿಷ್ಣು ಮತ್ತು ಗರುಡನ ದೊಡ್ಡದೊಡ್ಡ ಎರಡು ಮೂರ್ತಿಗಳಿವೆ. ಪಕ್ಕದಲ್ಲಿ ಸುಂದರವಾದ ಪಾರ್ಕ್, ಫೌಂಟನ್, ಕೆಫಿಟೇರಿಯಾ, ಬಾಲಿ ಸ್ಪೆಶಲ್ ಬಟ್ಟೆಗಳನ್ನು ಮಾರುವ ಅಂಗಡಿಗಳಿವೆ.
ಪುರ ಲೆಂಪ್ಯೂಂಗ್ ಲುಹುರ್
ಲೆಂಪ್ಯೂಂಗ್ ಬೆಟ್ಟದ ತುದಿಯಲ್ಲಿರುವ ಮಂದಿರವಿದು. ಇದು ಬಾಲಿಯಲ್ಲಿರುವ ಹಿಂದುಗಳಿಗೆ ಅತ್ಯಂತ ಪವಿತ್ರವಾದ ಆರು ಸ್ಥಳಗಳಲ್ಲೊಂದಾದರೆ, ಪ್ರವಾಸಿಗರಿಗೆ ಪ್ರಕೃತಿ ಸೌಂದರ್ಯದ ಖಣಿ. ಬೆಟ್ಟದ ಬುಡದವರೆಗೆ ಟ್ಯಾಕ್ಸಿ ಬರುತ್ತಿದ್ದು ಸ್ವಲ್ಪ ದೂರ ಕಾಲುನಡಿಗೆಯಲ್ಲಿ ಬೆಟ್ಟ ಹತ್ತಬೇಕು. ಬಾಲಿಯಲ್ಲಿ ಧಾರಾಳವಾಗಿ ಸಸ್ಯ ಸಂಪತ್ತಿದೆ. ಸುತ್ತ ಇರುವ ಮರ ಗಿಡಗಳು, ಬೀಸುವ ತಂಗಾಳಿ ಅನಿರ್ವಚನೀಯ ಆನಂದ ಕೊಡುತ್ತದೆ. ಅಲ್ಲದೆ, ಬೆಟ್ಟದ ಹಲವು ಸ್ತರಗಳಲ್ಲಿ ಹಲವು ಮಂದಿರಗಳಿವೆ. ಇದು ಶಿವನ ಮಂದಿರವಾಗಿದ್ದು ಎದುರಿಗೆ ‘ಸ್ವರ್ಗದ ಬಾಗಿಲು’ ಎಂದೇ ಪ್ರಸಿದ್ಧವಾದ ಇಬ್ಭಾಗವಾದ ಗೇಟಿನ ವಾಸ್ತುಶಿಲ್ಪವೂ ಇದೆ. ಮಂದಿರ ಹತ್ತಲು ಮೂರು ಡ್ರಾಗನ್ ಮೆಟ್ಟಿಲುಗಳಿವೆ. ಮಂದಿರದ ಒಳಗೆ ಪ್ರವೇಶವಿಲ್ಲ. ಇಲ್ಲಿಂದ ಲಾವಾ ಉಕ್ಕುವ ‘ಅಗುಂಗ್’ ಬೆಟ್ಟದ ತುದಿಯನ್ನು ಕಾಣಬಹುದು. ಇಲ್ಲಿಗೆ ಬಂದಾಗ ಮಂದಿರ ನೋಡುವ ಬದಲು ಪ್ರವಾಸಿಗರು ಸ್ವರ್ಗದ ಬಾಗಿಲಿನಲ್ಲಿ ನಿಂತು ಪ್ರಕೃತಿ ಸೌಂದರ್ಯದೊಂದಿಗೆ ಫೋಟೋ ತೆಗೆದುಕೊಳ್ಳುವ ಗಡಿಬಿಡಿ. ಅದಕ್ಕಾಗಿಯೇ ಇಲ್ಲಿ ನುರಿತ ಫೋಟೋಗ್ರಾಫರ್ಗಳು ಸಹ ಇರುತ್ತಾರೆ. ಮಂದಿರದ ಕಾಂಪೌಂಡಿನ ಒಳಗೆ ಹೋಗುವಾಗ ಅಲ್ಲಿನವರ ಸಾಂಪ್ರದಾಯಿಕ ಉಡುಗೆಯಾದ ಬಣ್ಣದ ಲುಂಗಿಯನ್ನು ಉಡಬೇಕು.
ಪುರ ತನಾಹ್ ಲಾಟ್ ಮತ್ತು ಬತು ಬೊಲೊಂಗ್
ಸಮುದ್ರ ದೇವನಿಗಾಗಿ ಇರುವ ವಿಶೇಷ ಮಂದಿರವಿದು. ಇದನ್ನು ೧೬ನೇ ಶತಮಾನದಲ್ಲಿ ‘ಡಂಗಯಾಂಗ್ ನಿರಾತ’ ಎಂಬ ಸಂತನೊಬ್ಬ ಕಂಡ ಕನಸಿನ ಪ್ರಕಾರ ಸ್ಥಳೀಯ ಮೀನುಗಾರರು ಕಟ್ಟಿದ್ದು. ದಡದಿಂದ ಸುಮಾರು ೩೦ ಅಡಿ ದೂರದಲ್ಲಿ ಸಮುದ್ರದ ಮಧ್ಯದಲ್ಲೊಂದು ದೊಡ್ಡ ಕರಿ ಬಂಡೆ ಇದ್ದು, ಅದರ ತುದಿಯಲ್ಲಿರುವ ಮಂದಿರವೇ ‘ಪುರ ತನಾಹ್ ಲಾಟ್’. ತನಾಹ್ ಲಾಟ್ ಪಕ್ಕದಲ್ಲೇ ಇದೆ ಮತ್ತೊಂದು ಬಂಡೆ ಅದೇ ‘ಬತು ಬೊಲೊಂಗ್’. ಆ ಬಂಡೆಯ ಮೇಲೆಯೂ ಮಂದಿರವಿದೆ. ಈ ಬಂಡೆಯ ವಿಶೇಷವೆಂದರೆ ಮಧ್ಯದಲ್ಲಿರುವ ರಂಧ್ರ. ಇದರ ಮೂಲಕ ಸಣ್ಣ ದೋಣಿ ಹಾದುಹೋಗಬಹುದು. ತನಾಹ್ ಲಾಟ್ ಮತ್ತು ಬತು ಬೊಲೊಂಗ್ ಎರಡೂ ಬಾಲಿಯ ಹೆಗ್ಗುರುತು. ಹಲವು ಚಿತ್ರಗಳಲ್ಲಿ ಇವೆರಡನ್ನು ನೋಡಬಹುದು. ತನಾಹ್ ಲಾಟ್ನಲ್ಲಿನ ಸೂರ್ಯಾಸ್ತದ ವೀಕ್ಷಣೆ ಬಹಳ ಪ್ರಸಿದ್ಧಿ, ಉಕ್ಕಿಉಕ್ಕಿ ಬರುವ ಸಮುದ್ರ, ಮಧ್ಯದಲ್ಲಿ ಕರಿ ಬಂಡೆ, ಮೇಲೊಂದು ಮಂದಿರ, ಬಾನೆಲ್ಲ್ಲ ಕೆಂಪಾಗಿಸುತ್ತಲೇ ನಿಧಾನವಾಗಿ ಸಮುದ್ರದಲ್ಲಿ ಮುಳುಗುವ ಸೂರ್ಯ – ಇದನ್ನು ವೀಕ್ಷಿಸಲು ಪ್ರತಿ ದಿನ ಸಾವಿರಾರು ಜನರು ಜಮಾಯಿಸುತ್ತಾರೆ.
ರಾಮ, ಸೀತೆಯ ಮರದ ಬೊಂಬೆ ಇಲ್ಲಿನ ವಿಶೇಷ. ಇಲ್ಲಿಗೆ ಪ್ರವಾಸ ಬಂದವರು ಈ ಬೊಂಬೆಗಳನ್ನು ತೆಗೆದುಕೊಂಡು ಹೋಗುವುದು ವಾಡಿಕೆಯಂತೆ.
ಒಟ್ಟಿನಲ್ಲಿ ಬಾಲಿನಲ್ಲಿ ತಿರುಗಾಡುತ್ತಿದ್ದರೆ ಅಲ್ಲಿನ ಪ್ರಕೃತಿ ಸೌಂದರ್ಯ ಹಾಗೂ ಜನರು ಆಚರಿಸುತ್ತಿರುವ ಹಿಂದೂ ಧರ್ಮ ಕಣ್ಣಿಗೆ ಕಟ್ಟುತ್ತದೆ.