ಎಂದಿನಿಂದಲೋ ನಮ್ಮ ಮಾತಿನಲ್ಲಿ ‘ಪೈ’ ಅಂಬೋದು ಜೈಕಾರದೊಂದಿಗೆ ಸ್ವೀಕಾರಗೊಂಡದ್ದು, ಈಗ ಪೈ ಸರಿಸಿ ಪೈಲಿಗೆ ವಾಲಿದೆ; ಮೂಲೆಗುಂಪಾಗಲಿದೆ. ಪೈ ಹೋಯ್ತು, ರೂಪಾಯಿ ಸ್ಥಿರಗೊಂಡಿದೆ. ಪೈಜಾಮ ಹೋಯ್ತು; ಬದಲಿಗೆ ಷರಾಯಿ, ಪ್ಯಾಂಟು ಟೆಂಟು ಹಾಕಿವೆ. ಪೈರಣ ಹೋಗಿ ಅಂಗಿ, ಷರ್ಟು ಅಂಗೀಕೃತಗೊಂಡು ಜಂಗೀ ಜನಪ್ರಿಯವಾಗಿವೆ. ಇದರರ್ಥವೇನೆಂದರೆ ‘ಪೈ’ದ ಪೈಕಕ್ಕೆ ಯಾನೇ ಪರಿವಾರಕ್ಕೆ ಪೈತ್ಯಜ್ವರ ಬಡಕೊಂಡು ಇಷ್ಟರಲ್ಲಿಯೇ ಪೈತೃಕಕ್ಕೆ ಅಂದರೆ ಶ್ರಾದ್ಧಕ್ಕೆ ಸಜ್ಜಾಗಿದೆ.
ಅಯ್; ಬೆಳಗು ಹರಿಯೂದ್ರಾಗsರ್ತಾ ಇದ್ದಾರೆ ನೋಡ್ರಿ ಗುಂಡೂಭಾವ!” ಎಂದು ನನ್ನ ಮಡದಿ ಉದ್ಗರಿಸಿದೊಡನೆ ನಾನು ಪತ್ರಿಕೆಯೊಳಗಿಂದ ನನ್ನ ತಲೆ ಎತ್ತಿ ನೋಡಿದೆ, ತಲೆಬಾಗಿಲಿನ ಕಡೆಗೆ. ಗುಂಡಣ್ಣ ನನ್ನೆಡೆಗೆ ನೋಡುತ್ತ,
“‘ಐ’ದಲ್ಲಿ ಐತಾ ಐಬು?” ಎಂದು ಪೀಠಿಕೆ ಹಾಕಿದ. ಬಹುಶಃ ನನ್ನ ಮಡದಿಯ ಬಾಯಲ್ಲಿ ಬಂದ ‘ಅಯ್’ ಎಂಬ ಉದ್ಗಾರವು ಆತನ ಕಿವಿಯ ಮೇಲೆ ಬಿದ್ದಿತ್ತೇನೋ ಎಂಬ ಸಂದೇಹ ನನಗೆ ಬಂದಿತು.
“ಬಾ ಗುಂಡಣ್ಣ ಬಾ. ಇಂಗ್ಲಿಷಿನಲ್ಲಿ ‘ನಾನು’ ಅಂಬೂದಕ್ಕ ‘ಐ’ ಅಂತಾರಲ್ಲs! ಈ ‘ಐ’ದ ಐಸಿರಿಯು ಐಲುಪೈಲಾಗಿ ಫೈಲಾಸೇದ. ಐಸತಿ; ಐದೇರ ಬಾಯಲ್ಲಿ ಅದರ ಐಲು ಐಶಾರಾಮಾಗಿ ಒತ್ತರಿಸ್ತದ ಐರಾವತಧಾಂಗ” ಎಂದು ಗುಂಡಣ್ಣನಿಗೆ ಸಮಾಧಾನವಾಗುವಂತೆ ಸಮಜಾಯಿಷಿ ನೀಡುತ್ತ ಸ್ವಾಗತಿಸಿದೆ.
ಗುಂಡಣ್ಣ ಐಸುಪೈಸಾಗಿ ಸೋಫಾದಲ್ಲಿ ಮಂಡಿಸಿದ. ಆತನ ಮನದಲ್ಲಿ ಯಾವುದೋ ನೂತನ ಯೋಚನೆ ಕೊತಕೊತನೆ ಕುದಿಯುತ್ತಿದ್ದುದು ಸ್ಪಷ್ಟವಿತ್ತು. ಆತ ಅದರ ಸೂತೋವಾಚ ಮಾಡಿದ:
“ರಾಮಣ್ಣ, ಈ ತಿಂಗಳೊಂದೇ ‘ಐ’ಕಾರದಿಂದ ಅಂತ್ಯಗೊಳ್ತದಲ್ಲ; ವರ್ಷದ ಹನ್ನೆರಡು ತಿಂಗಳುಗಳಲ್ಲಿ? ಜುಲೈ! ಮತ್ತs ಇತ್ತ ಮುಂಬೈದಾಗ ಈ ಜುಲೈದಾಗ ಮೂರು ಬಾಂಬು ಸ್ಫೋಟಗಳಾದವು. ‘ಬಾಂಬೇ’ಯನ್ನು ‘ಮುಂಬೈ’ ಮಾಡಿದ್ರೂ ಬಾಂಬಿನ ಹಾವಳಿ ತಪ್ಪವಲ್ಲದು. ಆತಂಕವಾದಿಗಳು ತಮ್ಮ ಉಗ್ರವಾದಕ್ಕೆ ಯಾವಾಗ ‘ಗುಡ್ಬೈ’ ಹೇಳ್ತಾರೆ ಅಂಬೂದು ಹೇಳಲ್ಲವಲ್ಲ…” ಎಂದು ಆತಂಕದಿಂದ ನಿಡುಸುಯ್ದ.
ಗುಂಡಣ್ಣನೀಗ ಸುಟಿಯಾದ ‘ಐ’ ಎಂಬ ಒಂಟಿ ಅಕ್ಷರದ ಗೊಡವೆ ಬಿಟ್ಟು ‘ಐ’ ಕಾರಾಂತದ ಜುಲೈ, ಮುಂಬೈ, ಗುಡ್ಬೈ ಮುಂತಾದ ಪದಗಳ ಕಡೆಗೆ ಹೊರಳಿದಾಗ ಆತನ ಮಾತಿನ ಬಂಡಿ ರಾಜಮಾರ್ಗದ ‘ಬೈಪಾಸ್’ ತಿರುವಿನೆಡೆ ತಿರುಗಿದಂತಾಯಿತು.
“ಬೈಕೊಂಡರೂ ಇಲ್ಲ, ಬಡ್ಕೊಂಡರೂ ಇಲ್ಲ; ಕ್ರೂರಕರ್ಮಿ ಉಗ್ರವಾದಿಗಳಿಗೆ ಕಿಂಚಿತ್ತೂ ದಯವಿಲ್ಲ” – ನಾನು ವ್ಯಗ್ರವಾಗಿ ನುಡಿದೆ. ನಮ್ಮ ಪ್ರತಿಕ್ರಿಯೆ ಎಂದರೆ ಉಗ್ರವಾದಿಗಳ ಚಳಕದೆದುರು ವ್ಯಗ್ರಗೊಂಡು ಜಳಕ ಮಾಡೋದೊಂದೇ ತಾನೆ!
“ಅದಷ್ಟೇ ಸೈ! ಈ ಜುಲೈದಾಗ ‘ಐ’ ಕಾರಾಂತ ಪದಗಳಿಗೆ ಪ್ರಾಮುಖ್ಯ, ಪ್ರಸಿದ್ಧಿ ದೊರಕಿದೆಂಬುದನ್ನು ಗಮನಿಸಿದ್ದೀ ಏನು? ಆದಿಯಲ್ಲಿಯೇ ‘ಪೈ’ ಬಗ್ಗೆ ಎಂಥಾಪರಿ ಕುತೂಹಲಕಾರಕ ಸುದ್ದಿ ಹರಡಿತ್ತಲ್ಲs …….” ಗುಂಡಣ್ಣನ ಮಾತಿನ ವರಸೆ ಬೇರೆ ಹಾದಿ ಹಿಡಿದಿತ್ತು.
“ಪೈ?! ಯಾವ ಪೈ ಮಹಾಶಯರ ಬಗ್ಗೆ ಹೇಳುತ್ತೀಯೋ ಮಾರಾಯ; ಅನಂತ ಪೈ, ಜಗದೀಶ ಪೈ…..” ನಾನು ಗೊಂದಲಗೊಂಡು ಬಡಬಡಿಸಿದೆ.
“ಮಹಾಶಯರೂ ಅಲ್ಲs; ಮಹಾರಾಜರೂ ಅಲ್ಲ! ಭೂಮಿತಿಯಲ್ಲಿಯ ಪೈ ಕುರಿತು ಹೇಳ್ತಾ ಇದ್ದೀನಿ. ವರ್ತುಲದ ಪರಿಘ ಇಪ್ಪತ್ತೆರಡು ಅಡಿ ಆಗಿದ್ರs ಅದರ ವ್ಯಾಸ ಏಳಡಿ ರ್ತದ. ವರ್ತುಲದ ಕ್ಷೇತ್ರಫಲವನ್ನು ಕಂಡುಹಿಡಿಯಬೇಕಾದ್ರ ‘ಪೈ’ ವರ್ಗಕ್ಕ ಶರಣು ಆಗಬೇಕಾಗ್ತದ. ಇಪ್ಪತ್ತೆರಡು ಏಳಾಂಶಕ್ಕ ಪೈ…….”
ಆತನ ಮಾತಿನಲ್ಲಿ ಭೂಮಿತಿಯ ವಿಷಯ ಥಕ್ ಥೈ ಎಂದು ಕುಣಿಯತೊಡಗಿದಾಗ ನಾನು ಕೈಚೆಲ್ಲಿ ಮಣಿಯಬೇಕಾಯ್ತು. ಗಣಿತ, ಬೀಜಗಣಿತ, ರೇಖಾಗಣಿತಗಳಿಂದಾಗಿ ನನ್ನ ಕೈ ಮೇಲೆ ನಮ್ಮ ಶಿಕ್ಷಕರಿಂದ ಸಾಕಷ್ಟು ಬೆತ್ತ ಪ್ರಹಾರವಾದುದು ನನ್ನ ಚಿತ್ತದಲ್ಲಿ ಈಗಲೂ ಕುತ್ತಿದೆ. ನಾನಂದೆ,
“ಏ ಜೋಕುಮಾರ, ಜಾಮೆಟ್ರಿ ಗೀಮೆಟ್ರಿ ಈಗೆಲ್ಲಿ ನೆನಪಾಗ್ತದನೋ ಮಾರಾಯ? ಈಗೇನೆಂದರ ಪೈ, ರುಪೈಗಳ ಧ್ಯಾಸವೇ ಸೈ. ಈಗಂತೂ ಪೈ, ಪೈಸೆಗಳs ಮಾಯಾ ಆಗ್ಯಾವ…”
“ಅದೇನೋ ಖರೇ! ಪರಂತು ‘ಐ’ದ ಕುರಿತು ಫೈಸಲಾ ಮಾಡೂವಾಗ ಇಷ್ಟರಮಟ್ಟಿಗೆ ‘ಪೈ ಥೇರಿ’ ಉಳಿದಿತ್ತು. ಇನ್ಮುಂದ ‘ಪೈ’ಗೆ ಖೋ ಕೊಟ್ಟು ‘ತೌ’ ಥೇರಿ ತೆರೆದುಕೊಂಡಿದೆಯಂತೆ. ವ್ಯಾಸದ ಬದಲು ತ್ರಿಜ್ಯಕ್ಕ ಜೋತುಬೀಳೋದಂದ್ರ ವ್ಯಾಸಕ್ಕ ನೀರುಬಿಟ್ಟು ಯಾನೇ ಅರ್ಘ್ಯ ನೀಡಿ ತ್ರಿಜ್ಯಕ್ಕ ಆಜ್ಯ ಹುಯ್ಯೋದು………….”
ಗುಂಡಣ್ಣನ ಮಾತಿನಿಂದಾಗಿ ನನಗೆ ವ್ಯಾಸರು ನೆನಪಾದರು. ಜುಲೈ ಮಾಸದಾಗs ವ್ಯಾಸಪೌರ್ಣಿಮೆ ಬಂದಿತ್ತಲ್ಲs! ವ್ಯಾಸದ ಮಹತ್ತ್ವಕ್ಕ ಚ್ಯುತಿ ಬಂದು ತ್ರಿಜ್ಯಕ್ಕs ರಾಜ್ಯದ ಪಟ್ಟ ದಕ್ಕಿಧಾಂಗಾಗೇದ ಭೂಮಿತಿಯಲ್ಲಿ ಅಂಬೂದನ್ನು ಗುಂಡಣ್ಣ, ‘ಗುರುವಿಗೆ ಅರ್ಘ್ಯ, ತ್ರಿಜ್ಯಕ್ಕೆ ಆಜ್ಯ’ ಎಂದು ಸೂತ್ರೀಕರಿಸಿದ್ದು ಮಾತ್ರ ಪಟಾಯಿಸಿತು.
ಎಂದಿನಿಂದಲೋ ನಮ್ಮ ಮಾತಿನಲ್ಲಿ ‘ಪೈ’ ಅಂಬೋದು ಜೈಕಾರದೊಂದಿಗೆ ಸ್ವೀಕಾರಗೊಂಡದ್ದು, ಈಗ ಪೈ ಸರಿಸಿ ಪೈಲಿಗೆ ವಾಲಿದೆ; ಮೂಲೆಗುಂಪಾಗಲಿದೆ. ಪೈ ಹೋಯ್ತು, ರೂಪಾಯಿ ಸ್ಥಿರಗೊಂಡಿದೆ. ಪೈಜಾಮ ಹೋಯ್ತು; ಬದಲಿಗೆ ಷರಾಯಿ, ಪ್ಯಾಂಟು ಟೆಂಟು ಹಾಕಿವೆ. ಪೈರಣ ಹೋಗಿ ಅಂಗಿ, ಷರ್ಟು ಅಂಗೀಕೃತಗೊಂಡು ಜಂಗೀ ಜನಪ್ರಿಯವಾಗಿವೆ. ಇದರರ್ಥವೇನೆಂದರೆ ‘ಪೈ’ದ ಪೈಕಕ್ಕೆ ಯಾನೇ ಪರಿವಾರಕ್ಕೆ ಪೈತ್ಯಜ್ವರ ಬಡಕೊಂಡು ಇಷ್ಟರಲ್ಲಿಯೇ ಪೈತೃಕಕ್ಕೆ ಅಂದರೆ ಶ್ರಾದ್ಧಕ್ಕೆ ಸಜ್ಜಾಗಿದೆ. ಪೈಗೆ ಒದಗಿರುವ ದುಃಸ್ಥಿತಿಯಿಂದಾಗಿ ದುಃಖಿತನಾದ ಗುಂಡಣ್ಣನಿಗೆ ಹೇಗಾದರೂ ಸೈ, ಸಾಂತ್ವನಗೊಳಿಸಲೋಸುಗ ನಾನಂದೆ:
“ಗುಂಡಣ್ಣ, ‘ಪೈ’ ಹೋಗುವಂತಾಗಿದ್ದರೂ ಇದs ಜುಲೈದಾಗ ಫೈ ಗರಿಗೆದರಿದೆಯಲ್ಲs……!” ಈಗ ಗುಂಡಣ್ಣನ ಸರದಿ; ಗಡಿಬಿಡಿ, ಗೊಂದಲದಲ್ಲಿ ಬೀಳೋದು! ಆತ ನನ್ನೆಡೆಗೆ ಅಚ್ಚರಿಯ ದಿಟ್ಟಿ ಬೀರಿ,
“ಫೈ! ಓ ಕ್ಯಾ ಹೈ ಭೈ?” ಎಂದು ಕೇಳುವಂತಹನಾದ. ಆತನ ಮಿದುಳಿನಲ್ಲಿ ಗೊಂದಲ ಗೂಡುಕಟ್ಟಿದಾಗ ನಾಲಗೆ ಹಿಂದೂಸ್ತಾನೀ ಭಾಷೆಗೆ ವಾಲುತ್ತದೆ.
“ಅರೇರೇss ನಿನಗೆ ಫೈ ಗೊತ್ತಿಲ್ಲವೇ? ಅವನ ಸುದ್ದಿಯೂ ಜುಲೈದ ಕಡೇ ವಾರದಾಗ ಹರಡೇದಲ್ಲ ವಿಶ್ವದಾದ್ಯಂತ! ಗುಲಾಮ್ ನಬೀ ಫೈ ಎಂಬವ ಕಾಶ್ಮೀರ ಪ್ರತ್ಯೇಕತಾವಾದಿಯು ಭಾರತದ ವಿರುದ್ಧ ಅಮೆರಿಕಾದಲ್ಲಿ, ನಮ್ಮ ಕಾಶ್ಮೀರ್ ನೀತಿಯನ್ನು ಖಂಡಿಸಲೋಸುಗ ಅಪಪ್ರಚಾರದ ತಂತ್ರ ನಡೆಸ್ಯಾನಂತ. ಅಲ್ಲಿ ಭಾರತದಿಂದ ತಥಾಕಥಿತ ಪ್ರಸಿದ್ಧ ಬುದ್ಧಿವಾದಿಗಳನ್ನು, ಮಹಾಚಿಂತಕರನ್ನು ಆಹ್ವಾನಿಸಿ ವಿಚಾರಸಂಕಿರಣ, ಚರ್ಚೆ ಮುಂತಾದ ಕರ್ಯಕ್ರಮಗಳನ್ನು ಭರ್ಜರಿ ಪಂಚತಾರಾಂಕಿತ ಹೊಟೇಲ್ಗಳಲ್ಲಿ, ಸಭಾಗೃಹಗಳಲ್ಲಿ ಏರ್ಪಡಿಸ್ತಾನೆ. ಆತನ ಉದಾರ ಮತ್ತು ವೈಭೋಗದ ಆತಿಥ್ಯಕ್ಕ ಮರುಳಾದ ಈ ಅವಕಾಶವಾದಿಗಳು ಭಾರತದ ನೀತಿಯ ವಿರುದ್ಧ ತಮ್ಮ ವಿಚಾರ ಮಂಡಿಸಿದ್ದು ಪಾಶ್ಚಾತ್ಯ ಮಾಧ್ಯಮಗಳಲ್ಲಿ ಮೆರೀತದಂತ. ಫೈನಿಗೆ ಪಾಕಿಸ್ತಾನೀ ಗೂಢಚಾರ ಸಂಸ್ಥೆ ಐ.ಎಸ್.ಐ.ದಿಂದ ಹಣದ ಮಹಾಪೂರವೇ ಒದಗ್ತದಂತ. ತಮಾಷೆ ಎಂದರೆ, ಅಮೆರಿಕೆಯ ಗೂಢಚಾರ ಸಂಸ್ಥೆ ಹಾಗೂ ಅಲ್ಲಿಯ ಸಿ.ಬಿ.ಐ., ಸಿ.ಐ.ಎ.ದ ಜಾಲದಾಗ ಸಿಕ್ಕಿಹಾಕಿಕೊಂಡಿರುವ ಈ ಫೈಯಿಂದಾಗಿಯೇ ಆತನ ಕಾರಸ್ಥಾನದ ಹೂರಣ ಹೊರಗೆ ಬಂದಂತಾಗಿದೆ……”
“ಐಸೀ ಹೈ ಕ್ಯಾ ಬಾತ್!” ಗುಂಡಣ್ಣ ಉದ್ಗರಿಸಿದ. ಅನಂತರ ‘ಸೈ’ ಎಂದು ಸೈಗುಟ್ಟಿದ. ಆತ ಇಷ್ಟು ಸಲೀಸಾಗಿ ಹೇಗೆ ಸೈಗುಟ್ಟಿದ ಎಂದು ನಾನು ಅಚ್ಚರಿಗೊಂಡಾಗ ಅರ್ಥವಾಯ್ತು ಐ.ಎಸ್.ಐ., ಸಿ.ಐ.ಎ., ಸಿ.ಬಿ.ಐ., ಫೈ ಮುಂತಾದವುಗಳಲ್ಲೆಲ್ಲ ‘ಐ’ದ ಐಸಿರಿ ಐಲುಪೈಲಾಗಿ ಫೈಲಾಸೇದಲ್ಲs! ಇದೇ ಕಾಲಕ್ಕೆ ನನ್ನ ಮಡದಿಯು ಬಿಸ್ಕತ್ತು, ಚಹದ ಬಟ್ಟಲುಗಳುಳ್ಳ ‘ಟ್ರೇ’ ನೀಡಲು ಮುಂಚಾಚಿದಳು ತನ್ನ ಕೈ.
ಕೈಗೆ ಚಹದ ಕಪ್ಪು ಬಂದೊಡನೆ ತಲೆಯಲ್ಲಿಯ ‘ಐ’ ಕಾರಕ್ಕೆ ಹೇಳಿದೆವು ‘ಗುಡ್ಬೈ!’
(ಉತ್ಥಾನ, ಅಕ್ಟೋಬರ್ ೨೦೧೧)