ರೈಲಿನ ಪ್ರಯಾಣಕ್ಕೂ ಜೀವನದ ಪ್ರಯಾಣಕ್ಕೂ ಬಹಳ ಸಾಮ್ಯತೆ ಇದೆ. ಜೀವನದಲ್ಲಿದ್ದಂತೆ ರೈಲಿನಲ್ಲಿಯೂ ಅನೇಕರು ನಮ್ಮೊಂದಿಗೆ ಪಯಣಿಸುತ್ತಾರೆ. ಕೆಲವರು ಯಾರೊಂದಿಗೂ ಬೆರೆಯದೇ ಗಾಂಭೀರ್ಯದಿಂದ ಇದ್ದು ಕೊನೆಯವರೆಗೂ ನಮಗೆ ಅಪರಿಚಿತರಾಗಿಯೇ ಉಳಿಯುತ್ತಾರೆ. ಇನ್ನು ಕೆಲವರು ನಮಗೆ ಆತ್ಮೀಯರಾಗುತ್ತಾರೆ. ಒಂದು ಮುಗುಳ್ನಗೆಯೊಂದಿಗೆ ಪ್ರಾರಂಭವಾದ ಪರಿಚಯ ಎಷ್ಟೋ ವರ್ಷಗಳ ಪರಿಚಯದಂತೆ ಭಾಸವಾಗಿಬಿಡುತ್ತದೆ!
ನೀವೇನೇ ಹೇಳಿ ಬಸ್ಸು, ವಿಮಾನ, ಕಾರು ನೀವು ಯಾವುದರಲ್ಲಿ ಪ್ರಯಾಣ ಮಾಡಿದ್ದರೂ ಅದು ರೈಲು ಪ್ರಯಾಣಕ್ಕೆ ಸರಿಸಮನಲ್ಲ. ನೀವೊಮ್ಮೆ ಆರ್ಡಿನರಿ ಬೋಗಿಯಲ್ಲಿ ಕುಳಿತು ಪ್ರಯಾಣಿಸಿ ನೋಡಿ, ಅಲ್ಲಿ ನಿಮಗೊಂದು ಮಿನಿ ಪ್ರಪಂಚವೇ ಕಾಣಸಿಗುತ್ತದೆ. ಬೇರೆ ಬೇರೆ ಭಾಷೆ, ಉಡುಗೆ-ತೊಡುಗೆ ಹಾಗೂ ವಿಭಿನ್ನ ವ್ಯಕ್ತಿತ್ವದ ಜನ ಕಾಣಸಿಗುತ್ತಾರೆ. ಆದರೆ ಆ ಭಿನ್ನಭಿನ್ನ ವ್ಯಕ್ತಿತ್ವದ ಜನರೊಂದಿಗೆ ಕೆಲ ಘಂಟೆಗಳ ಕಾಲವಾದರೂ ಒಂದೇ ಮನೆಯವರಂತೆ ಒಟ್ಟಿಗೆ ಕುಳಿತು ಪಯಣಿಸುವ ಭಾಗ್ಯ ನಮಗೆ ರೈಲಿನಲ್ಲೇ ಸಿಗುವುದು.
ಬಸ್ಸಿನಲ್ಲಿ ಆದರೆ ಒಬ್ಬರ ಮುಖ ಒಬ್ಬರು ನೋಡುತ್ತಾ ಕುಳಿತುಕೊಳ್ಳುವ ಅವಶ್ಯಕತೆಯಿಲ್ಲ. ಈಗಿನ ಸ್ಲೀಪರ್ ಕೋಚ್ ಬಸ್ಗಳಲ್ಲಂತೂ ಐಸೋಲೇಟೆಡ್ ರೂಂ ತರಹ ಅವರವರ ಸೀಟಿನಲ್ಲಿ ಹೋಗಿ ಕುಳಿತು ಪರದೆ ಸರಿಸಿದರೆಂದರೆ ಯಾರು ಯಾವ ಊರಿನಲ್ಲಿ ಹತ್ತಿದರೋ, ಯಾವ ಊರಿನಲ್ಲಿ ಇಳಿದರೋ ಯಾರಿಗೂ ಗೊತ್ತಾಗುವುದಿಲ್ಲ. ಬಹುಶಃ ಯಾರಿಗೂ ಅದು ಬೇಕಾಗಿಯೂ ಇಲ್ಲ. ಟ್ರೈನ್ ಹಾಗಲ್ಲ, ಅಲ್ಲಿ ನಮ್ಮ ಎದುರುಗಡೆ, ಮೇಲೆ, ಅಕ್ಕಪಕ್ಕ ಕೂತವರು ಎಲ್ಲರೂ ಒಬ್ಬರನ್ನೊಬ್ಬರು ಬೇಕಾಗಿಯೋ ಬೇಡವಾಗಿಯೋ ನೋಡಲೇಬೇಕಾಗುತ್ತದೆ!
ಹಾಗೆ ನೋಡಿದರೆ ರೈಲಿನ ಪ್ರಯಾಣಕ್ಕೂ ಜೀವನದ ಪ್ರಯಾಣಕ್ಕೂ ಬಹಳ ಸಾಮ್ಯತೆ ಇದೆ. ಜೀವನದಲ್ಲಿದ್ದಂತೆ ರೈಲಿನಲ್ಲಿಯೂ ಅನೇಕರು ನಮ್ಮೊಂದಿಗೆ ಪಯಣಿಸುತ್ತಾರೆ. ಕೆಲವರು ಯಾರೊಂದಿಗೂ ಬೆರೆಯದೇ ಗಾಂಭೀರ್ಯದಿAದ ಇದ್ದು ಕೊನೆಯವರೆಗೂ ನಮಗೆ ಅಪರಿಚಿತರಾಗಿಯೇ ಉಳಿಯುತ್ತಾರೆ. ಇನ್ನು ಕೆಲವರು ನಮಗೆ ಆತ್ಮೀಯರಾಗುತ್ತಾರೆ. ಒಂದು ಮುಗುಳ್ನಗೆಯೊಂದಿಗೆ ಪ್ರಾರಂಭವಾದ ಪರಿಚಯ ಎಷ್ಟೋ ವರ್ಷಗಳ ಪರಿಚಯದಂತೆ ಭಾಸವಾಗಿಬಿಡುತ್ತದೆ! ಅಂಥವರು ನಮಗಿಂತ ಮುಂಚೆಯೇ ತಮ್ಮ ಊರು ಬಂದು ಇಳಿದು ಹೋದಾಗ ಮನಸ್ಸಿಗೆ ಬೇಸರವಾಗುತ್ತದೆ. ‘ಅಯ್ಯೋ ಅವರು ಇನ್ನೂ ಸ್ವಲ್ಪ ಹೊತ್ತು ಇರಬಾರದಾಗಿತ್ತೆ?’ ಎಂದು ಮನಸ್ಸು ಯೋಚಿಸುತ್ತದೆ. ನಿಜಜೀವನದಲ್ಲಿಯೂ ಹೀಗೆ ಅಲ್ಲವೇ? ನಮಗೆ ಆಪ್ತರಾದವರನ್ನು ಕಳೆದುಕೊಂಡಾಗ ಮನಸ್ಸು ವಿಲಿವಿಲಿ ಒದ್ದಾಡುತ್ತದೆ. ಅವರು ಇನ್ನೂ ಕೆಲ ವರ್ಷ ಬದುಕಬೇಕಾಗಿತ್ತು ಎನಿಸುತ್ತದೆ ಅಲ್ಲವೇ?. ರೈಲುಪ್ರಯಾಣದಲ್ಲಿ ನಮ್ಮ ನಿರ್ಗಮನ ಪೂರ್ವ ನಿರ್ಧರಿತವಾಗಿರುತ್ತದೆ. ಆದರೆ ಜೀವನದ ಪ್ರಯಾಣದಲ್ಲಿ ನಮ್ಮ ನಿಲ್ದಾಣ ಯಾವಾಗ ಬರುತ್ತದೆ ಎಂದು ಯಾರೂ ಅರಿತಿರುವುದಿಲ್ಲ!
ನನ್ನ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರೆ ಮೊದಲಿಗೆ ಕಣ್ಣಿಗೆ ಕಟ್ಟುವುದು ಅಜ್ಜನ ಮನೆಗೆ ಹೋಗುವಾಗ ನಾವು ಮಾಡುತ್ತಿದ್ದ ರೈಲು ಪ್ರಯಾಣ! ನಾವಿದ್ದದ್ದು ವಿಜಯಪುರದಲ್ಲಿ. ನನ್ನ ತಾಯಿಯ ತವರು ಮನೆ ಗದಗ. ನಾವು ರಜೆ ಬಂದಾಗಲೆಲ್ಲ ಗದಗಿಗೆ ರೈಲಿನಲ್ಲಿ ಹೋಗುತ್ತಿದ್ದೆವು. ಇದರಲ್ಲಿ ಇನ್ನೊಂದು ಸ್ವಾರಸ್ಯದ ಸಂಗತಿ ಇದೆ. ರೈಲು ಹೊರಟ ಕೂಡಲೇ ಗದಗ್ ಗದಗ್ ಗದಗ್ ಗದಗ್ ಎಂದು ಶಬ್ದ ಮಾಡುತ್ತಿದ್ದರೆ ನನ್ನ ಬಾಲಿಶ ಮನಸ್ಸಿಗೆ ಆಶ್ಚರ್ಯವಾಗುತ್ತಿತ್ತು! ಅರೆ! ನಾವು ಗದಗಿಗೆ ಹೋಗುತ್ತಿದ್ದೇವೆ ಎಂದು ಈ ರೈಲಿಗೆ ಹೇಗೆ ತಿಳಿಯಿತು ಎಂದು ನಾನು ಯೋಚಿಸುತ್ತಿದ್ದೆ. ರೈಲು ಮಾಡುವ ಶಬ್ದವೇ ಹೀಗೆ ಎಂದು ಸ್ವಲ್ಪ ದೊಡ್ಡವಳಾದ ಮೇಲೆ ತಿಳಿದಾಗ ನನ್ನ ಯೋಚನೆಗೆ ನಾನೇ ನಕ್ಕಿದ್ದೆ!
ಅಪ್ಪನೂ ನಮ್ಮೊಡನೆ ಹೊರಟರೆ ನಮಗೆ ತುಂಬಾ ಖುಷಿ. ದಾರಿಯಲ್ಲಿ ಟ್ರೈನಿನಲ್ಲಿ ಸಿಗುತ್ತಿದ್ದ ತಿನಿಸುಗಳನ್ನು ಅಪ್ಪ ಮಾತ್ರ ಕೊಡಿಸುತ್ತಿದ್ದರು. ಅಮ್ಮ ಕಾಸು ಬಿಚ್ಚುತ್ತಿರಲಿಲ್ಲ!
ರೈಲ್ವೇ ಟಿಕೆಟ್ ತೆಗೆದುಕೊಂಡು ನಾವೆಲ್ಲ ನಿಗದಿಯಾದ ಪ್ಲಾಟ್ಫಾರ್ಮ್ನಲ್ಲಿ ನಿಂತ ಕೂಡಲೇ ನಮಗೆ ಎಷ್ಟೊತ್ತಿಗೆ ಟ್ರೈನ್ ಬರುತ್ತದೆ ಎಂಬ ಒಂದೇ ತವಕ. ಅಷ್ಟರಲ್ಲಿ ಅಪ್ಪ ದಿನಪತ್ರಿಕೆಯನ್ನು ಮತ್ತು ಯಾವುದಾದರೊಂದು ಮ್ಯಾಗಜೀನ್ನನ್ನು ಪ್ಲಾಟ್ಫಾರ್ಮ್ನಲ್ಲಿನ ಬುಕ್ ಸ್ಟಾಲ್ನಿಂದ ಕೊಂಡು ತರುತ್ತಿದ್ದರು. ಆದರೆ ರೈಲಿನಲ್ಲಿ ಮಾತ್ರ ಆ ದಿನಪತ್ರಿಕೆ ಕಂಪಾರ್ಟ್ಮೆಂಟ್ನಲ್ಲಿದ್ದ ಎಲ್ಲರಿಗೂ ಹರಿದುಹಂಚಿ ಹೋಗುತ್ತಿತ್ತು. ಏಕೆಂದರೆ ಪತ್ರಿಕೆಗಳನ್ನು ಕೊಂಡು ಓದುವುದಕ್ಕಿಂತ ಬಿಟ್ಟಿ ಓದಲು ಇಚ್ಚಿಸುವವರೆ ಹೆಚ್ಚು!
“ಒಂದ್ ಶೀಟ್ ಕೊಡ್ರಿ..” ಎಂದು ಒಬ್ಬರು ತೆಗೆದುಕೊಂಡರೆ, ಅವರದ್ದು ಮುಗಿಯುತ್ತಲೆ ಪೇಪರ್ ಅವರ ಪಕ್ಕದವರಿಗೆ ರವಾನೆಯಾಗಿರುತ್ತಿತ್ತು. ಕೊನೆಯಲ್ಲಿ ಅದು ಇಡಿಯಾಗಿ ನಮಗೆ ವಾಪಾಸ್ ದೊರೆತರೆ ಅದು ನಮ್ಮ ಪುಣ್ಯ!
ಇನ್ನು ರೈಲು ಬಂದಕೂಡಲೇ ನಮ್ಮದು ಹತ್ತುವ ತರಾತುರಿ. ಬಸ್ಸಿನಂತೆ ಸುಲಭವಲ್ಲ ಚಿಕ್ಕವರು ರೈಲು ಹತ್ತುವುದು. ಏಕೆಂದರೆ ಅದರ ಮೆಟ್ಟಿಲು ಒಳಮುಖವಾಗಿ ಇರುತ್ತದೆ. ಅಮ್ಮ ಯಾವಾಗಲೊ ಒಮ್ಮೆ ಹೇಳಿದ ನೆನಪು. ಬಿಜಾಪುರದಿಂದ ನನ್ನ ತಂದೆಯ ಸ್ನೇಹಿತರೊಬ್ಬರು ತಮ್ಮ ಮೊದಲ ದೀಪಾವಳಿಗೆ ಅಳಿಯತನಕ್ಕೆ ಬಂದವರು ರೈಲು ಪೂರ್ತಿ ನಿಲ್ಲುವ ಮೊದಲೇ ಪ್ಲಾಟ್ಫಾರ್ಮ್ನಲ್ಲಿ ನಿಂತಿದ್ದ ಹೆಂಡತಿಯನ್ನು ಸೇರುವ ಅವಸರದಲ್ಲಿ ಇಳಿಯಲು ಹೋಗಿ ರೈಲಿನಡಿ ಸಿಕ್ಕಿ ಅಪ್ಪಚ್ಚಿಯಾಗಿ ಕೊನೆಯುಸಿರೆಳೆದಿದ್ದರು ಎಂದು!
ರೈಲು ಹತ್ತಿದ ಮೇಲೆ ನಮ್ಮದು ಕಿಟಕಿಯ ಪಕ್ಕ ಕುಳಿತುಕೊಳ್ಳಲು ಜಗಳ. ಅಂತೂ ಇಂತೂ ಹೇಗೋ ಕಾಂಪ್ರಮೈಸ್ ಮಾಡಿಕೊಂಡು ಕೂತ ಮೇಲೆ ನಮ್ಮ ವಿವಿಧ ರೀತಿಯ ಆಟಗಳು ಶುರು. ಮೊದಲಿಗೆ ಹಾಡಿನ ಬಂಡಿ, ನಂತರ ಹೆಸರಿನ ಬಂಡಿ.. ಹೀಗೆ ಕುಳಿತಲ್ಲೇ ಆಡುವ ಆಟಗಳು. ನಮ್ಮ ಆಟದಲ್ಲಿ ನಮ್ಮ ಅಕ್ಕಪಕ್ಕ ಕೂತ ಅಪರಿಚಿತ ಮಕ್ಕಳನ್ನೂ ಸೇರಿಸಿಕೊಳ್ಳುತ್ತಿದ್ದೆವು. ಹೀಗಾಗಿ ನಮ್ಮ ಪ್ರಯಾಣ ಮುಗಿಯುವುದರೊಳಗೆ ಅವರೊಂದಿಗೆ ಒಂದು ತರಹ ಸ್ನೇಹಭಾವ ಬೆಳೆದು ಬಿಡುತ್ತಿತ್ತು. ಆದರೆ ಮೊದಮೊದಲಿಗೆ ಇದ್ದ ಹುರುಪು ಕೊನೆಕೊನೆಗೆ ಬೇಜಾರಾಗಿ ಆಟ ಅಲ್ಲಿಗೇ ನಿಂತು ಏನಾದರೂ ತಿನ್ನುವ ಚಪಲ ಹುಟ್ಟುತ್ತಿತ್ತು. ಬಿಸ್ಕೆಟ್, ಚಾಕ್ಲೇಟ್, ಚಕ್ಕುಲಿ – ಹೀಗೆ ಏನಾದರೊಂದು ತಿಂಡಿಯನ್ನು ನಮ್ಮ ಚೀಲದಿಂದ ಒಂದೊಂದೇ ಹೊರತೆಗೆಯುತ್ತಾ ಎದುರುಗಡೆ ಕೂತ ಮಕ್ಕಳಿಗೂ ಹಂಚಿ ನಾವೂ ತಿಂದು ಖುಷಿಪಡುತ್ತಿದ್ದೆವು.
ಟ್ರೈನ್ ಒಂದೊಂದೇ ಸ್ಟೇಷನ್ನಿನಲ್ಲಿ ನಿಂತಾಗ ಆ ಊರುಗಳ ಹೆಸರುಗಳನ್ನು ಒಂದು ಸಣ್ಣ ಬುಕ್ಕಿನಲ್ಲಿ ಬರೆದುಕೊಳ್ಳುವ ಅಭ್ಯಾಸವಿದ್ದಿತ್ತು ನನಗೆ. ವಂದಾಲ್, ಜುಮನಾಳ, ಸೋಮನಹಳ್ಳಿ, ಮುಳವಾಡ, ಬಸವನಬಾಗೇವಾಡಿ, ಬಾಗಲಕೋಟೆ, ಆಲಮಟ್ಟಿ, ಸೀತಿಮನಿ, ಕಡ್ಲಿಮಟ್ಟಿ…. ಹೀಗೆ ಊರುಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಮಧ್ಯೆ ಒಂದೆರಡು ಸಲ ರೈಲುಗಳ ಕ್ರಾಸಿಂಗ್ ಇರುತ್ತಿತ್ತು. ಆಗೆಲ್ಲ ಇನ್ನೊಂದು ರೈಲಿಗಾಗಿ ಈ ರೈಲು ಏಕೆ ಕಾಯಬೇಕು ಎಂದು ಸಿಟ್ಟು ಬರುತ್ತಿತ್ತು. ಜೊತೆಗೆ ಕೊನೆಗೆ ಬಂದ ರೈಲು ನಮ್ಮ ರೈಲಿಗಿಂತ ಮುಂಚೆ ಹೋದಾಗ ಮತ್ತಷ್ಟು ಕುದ್ದು ಹೋಗುತ್ತಿದ್ದೆ! ಆದರೆ ಹಾಗೆ ಆ ರೈಲು ಹೊರಟಾಗ ಕಿಟಕಿಯಿಂದ ಅದರಲ್ಲಿದ್ದವರ ಮುಖ ಪಟಪಟನೆ ಚಿತ್ರದಂತೆ ಸರಿದು ಹೋಗುವುದನ್ನು ನೋಡುವುದೆಂದರೆ ಏನೋ ಮಜಾ!
ಇನ್ನು ರೈಲಿನ ಕಿಟಕಿಯಿಂದ ಹೊರಗೆ ಕಾಣುವ ದೃಶ್ಯಗಳು ಮನಕ್ಕೆ ಮುದ ನೀಡುತ್ತಿದ್ದವು. ದೂರದಲ್ಲೆಲ್ಲೋ ಕಾಣುವ ಎತ್ತರವಾದ ಕೆಂಪು ಗುಡ್ಡಗಳು, ಹೊಲದ ತುಂಬೆಲ್ಲ ಹೂಬಿಟ್ಟ ಸೂರ್ಯಕಾಂತಿಯ ಗಿಡಗಳು, ಜೋಳ/ಗೋಧಿಯ ತೆನೆಗಳು, ಮಳೆ ಬಾರದೇ ಇದ್ದಾಗ ಬಿರುಬೇಸಿಗೆಯಲ್ಲಿ ಕೆಲವೊಮ್ಮೆ ಖಾಲಿಬಿಟ್ಟ ಹೊಲಗಳು, ಅದರಲ್ಲಿ ಕಾಣುವ ಬಿರುಕುಬಿಟ್ಟ ಕಪ್ಪುಮಣ್ಣಿನ ನೆಲ, ಅಲ್ಲೊಂದಿಲ್ಲೊಂದು ಗುಡಿಸಲುಗಳು, ಸಣ್ಣಪುಟ್ಟ ತಗಡು ಹೊದಿಸಿದ ಮನೆಗಳು, ಬರಿಗಾಲಲ್ಲೇ ತಿರುಗುತ್ತ ಕೈಯಲ್ಲೊಂದು ಕೋಲು, ಟಯರ್ ಹಿಡಿದುಕೊಂಡು ಆಡುವ ಚಿಕ್ಕಪುಟ್ಟ ಮಕ್ಕಳು, ಎತ್ತಿನ ಬಂಡಿಗಳು. ರೈಲಿನ ಕಿಟಕಿಯಿಂದ ತೋರುತ್ತಿದ್ದ ಅಪರಿಚಿತ ಮುಖಗಳಿಗೆ ಟಾಟಾ ಮಾಡುತ್ತಿದ್ದ ಹಳ್ಳಿಯ ಮುಗ್ಧ ಮಕ್ಕಳು! ಯಾರಾದರೂ ಅದ್ಭುತವಾದ ಚಿತ್ರಕಲಾವಿದ ಆ ಟ್ರೈನಿನಲ್ಲಿ ಪ್ರಯಾಣ ಮಾಡುತ್ತಿದ್ದಿದ್ದರೆ ಖಂಡಿತಾ ರೈಲಿನ ಚೈನು ಎಳೆದು ರೈಲನ್ನು ನಿಲ್ಲಿಸಿ ಅಲ್ಲಿಯೇ ಇಳಿದು ತನ್ನ ಕುಂಚಹಿಡಿದು ಚಿತ್ರ ಬಿಡಿಸಲು ತೊಡಗುತ್ತಿದ್ದ! ಆಲಮಟ್ಟಿಯಲ್ಲಿ ತುಂಬಿ ಹರಿಯುವ ಕೃಷ್ಣಾ ನದಿ. ಆದರೆ ಕೆಲವೊಮ್ಮೆ ಮಳೆ ಸರಿಯಾಗಿ ಬರದೇ ಇದ್ದಾಗ ನದಿಯ ನೀರು ತಳ ಸೇರಿ ನದಿಯೊಳಗೆ ಚಿಕ್ಕದೊಂದು ಎಂದೋ ಮುಳುಗಿಹೋದ ದೇವಸ್ಥಾನದ ಗೋಪುರವೂ ಕಾಣುತ್ತಿತ್ತು.
ಟ್ರೈನ್ ಒಂದೊAದೇ ಸ್ಟೇಷನ್ನಿನಲ್ಲಿ ನಿಂತಾಗ ಹೊಸದಾಗಿ ಬರುವ ಪ್ರಯಾಣಿಕರು ಸೀಟಿಗಾಗಿ ಬೋಗಿಯನ್ನೆಲ್ಲ ಸುತ್ತುತ್ತಿದ್ದರು. ಆದರೆ ಈಗಾಗಲೇ ಕುಳಿತ ಕೆಲವರು ಬೇರೆಯವರು ತಮ್ಮ ಪಕ್ಕ ಬಂದು ಕುಳಿತುಕೊಳ್ಳಬಾರದೆಂಬ ಸ್ವಾರ್ಥದಿಂದ ತಮ್ಮ ಮಕ್ಕಳನ್ನು ಖಾಲಿ ಸೀಟಿನಲ್ಲಿ ಮಲಗಿಸಿಬಿಡುತ್ತಿದ್ದರು.
ಬಂದವರು ಪಾಪದವರಾದಲ್ಲಿ ಸುಮ್ಮನೆ ಹೋಗುತ್ತಿದ್ದರು. ಆದರೆ ಕೆಲವರು “ಏ, ಎಬ್ಬಸ್ರಿ ನಿಮ್ ಹುಡುಗನ್ನ. ಮನೀಗ್ ಹೋದಮ್ಯಾಲ ಮೊಕ್ಕೊಳಾಕ ಹೇಳ್ರಿ. ಟ್ರೈನ್ ಇರೋದು ಕುಂದರಲಿಕ್ಕೆ. ಮೊಕ್ಕೊಳ್ಳಾಕ್ ಅಲ್ಲ”ಎಂದು ಬೆದರಿಸಿದಾಗ ಇವರು ಪೆಚ್ಚಗಾಗಿ, ಮಲಗಿದಂತೆ ನಟಿಸಿದ ಹುಡುಗನನ್ನು ಎಬ್ಬಿಸುವ ನಾಟಕವಾಡುತ್ತಿದ್ದರು.
ಅಷ್ಟರಲ್ಲಿ “ಐ, ಶೇಂಗಾ ರೀ, ಶೇಂಗಾ, ಟೈಂ ಪಾಸ್ ಶೇಂಗಾ. ಮಸಾಲಿ ಕಡ್ಲೀರಿ….” ಎಂದು ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಕೂಗುತ್ತಾ ಹಿಡಿಕೆ ಇರುವ ಬಿದಿರಿನ ಬುಟ್ಟಿಯಲ್ಲಿ ಶೇಂಗಾ ಕಾಳು, ಉಪ್ಪು ಕಡಲೆ, ಜೊತೆಗೆ ಸಣ್ಣಗೆ ಹೆಚ್ಚಿದ ನೀರುಳ್ಳಿ, ಕೊತ್ತಂಬರಿ ಸೊಪ್ಪು, ನಿಂಬೆ ಹೋಳುಗಳು ಇವನ್ನೆಲ್ಲ ಇಟ್ಟುಕೊಂಡು ಯುವಕನೊಬ್ಬ ಮಾರಲು ಬರುತ್ತಿದ್ದ. ಒಂದು ಪುಡಿಕೆಗೆ ೧೦ ಪೈಸೆಯೊ, ನಾಲ್ಕಾಣೆಯೊ ಇದ್ದ ಕಾಲವದು. ಆಹಾ ಎಂತಹ ರುಚಿ ಅಂತೀರಿ! ಅದೇ ರೀತಿ ನಾವು ಮನೆಯಲ್ಲಿ ಮಾಡಿ ಸವಿದರೆ ಆ ರುಚಿ ಬರುತ್ತಲೇ ಇರಲಿಲ್ಲ. ಹಾಗೆಯೇ ಬಾಗಲಕೋಟ್ ಸ್ಟೇಷನ್ನಿನಲ್ಲಿ ಬಿಸಿಬಿಸಿ ಇಡ್ಲಿ-ವಡೆ, ಬಜಿ ಮಾರಲು ಬರುತ್ತಿದ್ದವರು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಕೂಗುವ ರೀತಿಗೆ ನಮ್ಮ ಬಾಯಲ್ಲಿ ನೀರೂರಿ ಒಂದು ಪ್ಲೇಟ್ ಬಜಿಯೋ/ವಡೆಯೊ ಏನಾದರೊಂದು ಇಳಿಸುತ್ತಿದ್ದೆವು.
ರೈಲು ಪ್ರಯಾಣದಲ್ಲಿ ನನ್ನ ನೆನಪಿನ ಬುತ್ತಿಯಲ್ಲಿ ಚಿರಸ್ಥಾಯಿಯಾಗಿ ಉಳಿದವರೆಂದರೆ ಇಬ್ಬರು ದೃಷ್ಟಿಹೀನರು! ಅದರಲ್ಲಿ ಒಬ್ಬಾತ ಬಹಳ ಅದ್ಭುತವಾಗಿ ಹಾಡುತ್ತಿದ್ದ. ತನ್ನ ಕೈಯಲ್ಲಿದ್ದ ಕೋಲಿನಿಂದ ಟಕ್ ಟಕ್ ಎಂದು ಶಬ್ದ ‘ಶಿವಪ್ಪ ಕಾಯೋ ತಂದೆ…’, ‘ಈ ದೇಹ ಮೂರು ದಿನ ಅಲ್ಲವೇನೊ…’ ಎಂದು ಹಾಡುತ್ತಾ ತನ್ನ ಕೈಯಲ್ಲಿದ್ದ ಚಿಲ್ಲರೆಯಿಂದ ಶಬ್ದಮಾಡುತ್ತ ಎಲ್ಲರ ಮುಂದೆ ಕೈ ಚಾಚುತ್ತಾ “ಯಪ್ಪಾ ಧರ್ಮ ಮಾಡ್ರಪ್ಪ. ಎರಡೂ ಕಣ್ಣು ಕಾಣಂಗಿಲ್ಲ. ಶಿವನ ಹೆಸರಾಗ ಧರ್ಮ ಮಾಡ್ರಿ…” ಎಂದು ಬೇಡಿದಾಗ ಒಬ್ಬರೊ, ಇಬ್ಬರೊ ೫ ಅಥವಾ ೧೦ ಪೈಸೆ ಹಾಕುತ್ತಿದ್ದರು. ರಾಣು ಮಂಡಲ್ ಥರ ಸ್ಟೇಷನ್ನಲ್ಲಿ ಹಾಡುವಾಗ ಯಾರಾದರೂ ಅವನ ಪ್ರತಿಭೆಯನ್ನು ಗುರುತಿಸಿ ಸಂಗೀತ ನಿರ್ದೇಶಕರಿಗೆ ಅವನ ಪರಿಚಯ ಮಾಡಿಸಿದ್ದಿದ್ದರೆ, ಅವನ ಹಣೆಬರಹವೇ ಬದಲಾಗುತ್ತಿತ್ತೇನೊ ಎಂದು ಈಗ ಒಮ್ಮೊಮ್ಮೆ ನನಗೆ ಅನಿಸುತ್ತದೆ.
ಇನ್ನು, ಸಹ ಪ್ರಯಾಣಿಕರೊಂದಿಗೆ ನನ್ನಮ್ಮನ ಮಾತುಕತೆ. “ಯಾವರ್ರಿ ನಿಮ್ಮದು? ಎಲ್ಲಿಗೆ ಹೊಂಟೀರಿ?” ಎಂದು ಶುರುವಾಗುವ ಅವರ ಮಾತುಕತೆ ಕೊನೆಗೆ ಅವರ ಸಂಸಾರದ ಕಥೆಗಳು, ಸಮಸ್ಯೆಗಳು ಎಲ್ಲವೂ ಅವರ ಮಾತಿನಲ್ಲಿ ಬಂದು, ಹೋಗುವಾಗ ಇವಳಿಂದ ಯಾವುದಾದರೊಂದು ಪರಿಹಾರ ಸಿಕ್ಕು ಸಂತೋಷದಿಂದ “ನಿಮ್ಮ ಜೋಡಿ ಮಾತಾಡಿ ಭಾಳ ಖುಷಿ ಆತು ನೋಡ್ರೀ ಅಕ್ಕೋರ …” ಎಂದು ವಿದಾಯ ಹೇಳಿ ಹೋಗುತ್ತಿದ್ದರು. ಆ ಭೇಟಿ ಮೊದಲ ಹಾಗೂ ಕೊನೆಯ ಭೇಟಿಯಾಗಿರುತ್ತಿತ್ತು. ಮತ್ತೆ ಅವರನ್ನು ಸಂಪರ್ಕಿಸಲು ಈಗಿನ ಹಾಗೆ ಆಗ ಮೊಬೈಲ್, ವಾಟ್ಸಾಪ್ ಯಾವುದೂ ಇರಲಿಲ್ಲ! ರೈಲು ಪ್ರಯಾಣದಲ್ಲಿ ಒಮ್ಮೆ ಸಿಕ್ಕವರು ಮತ್ತೆ ಸಿಕ್ಕ ನೆನಪಂತೂ ನನಗಿಲ್ಲ! ಅಪರಿಚಿತರನ್ನು ನೋಡಿ ನಗಲೂ ಯೋಚಿಸುವ ಈಗಿನ ಕಾಲದಲ್ಲಿ ಆಗಿನವರ ಆತ್ಮೀಯತೆ ಕಾಣಲು ಸಾಧ್ಯವೇ?
ಜೊತೆಗೆ ಸೀಟ್ ಇಲ್ಲದಿದ್ದರೆ ನೆಲದ ಮೇಲೆ ಆರಾಮಾಗಿ ಕುಳಿತು ಪ್ರಯಾಣಿಸುತ್ತಿದ್ದ ಇಳಕಲ್ ಸೀರೆ ಉಟ್ಟ ತಲೆತುಂಬಾ ಸೆರಗು ಹೊದ್ದ, ದೊಡ್ಡದೊಡ್ಡ ಬುಟ್ಟಿಗಳಲ್ಲಿ ಹಣ್ಣುಗಳನ್ನು, ತರಕಾರಿಗಳನ್ನು ಪಕ್ಕದ ಹಳ್ಳಿಗಳಿಗೆ ಮಾರಲೆಂದು ಟ್ರೈನಿನಲ್ಲಿ ಪ್ರಯಾಣಿಸುತ್ತಿದ್ದ ಮುಗ್ಧ ಹಳ್ಳಿಯ ಹೆಂಗಸರು, ದೋತರ ಜುಬ್ಬಾ ಹಾಕಿಕೊಂಡ ತಮ್ಮ ಹಾಲಿನ ಕ್ಯಾನಿನೊಂದಿಗೆ ಪಯಣಿಸುತ್ತಿದ್ದ ಹಳ್ಳಿಗರು… ಇವರನ್ನೆಲ್ಲ ನೋಡುವುದು, ಅವರ ಮಾತುಕತೆ ಕೇಳುವುದೇ ಚಂದ!
ರೈಲೆಂದರೆ ಒಂದು ಪುಟ್ಟ ಪ್ರಪಂಚವೆಂಬ ನನ್ನ ಮಾತನ್ನು ಒಪ್ಪುತ್ತೀರಿ ತಾನೆ?