ಒಂದು ಕಾಲದಲ್ಲಿ ಅಂದರೆ ೧೨ನೆಯ ಶತಮಾನದಲ್ಲಿ ಬಸವಣ್ಣ, ಅಕ್ಕಮಹಾದೇವಿ, ಮಾದರಸ, ಉರಿಲಿಂಗದೇವ, ಮೋಳಿಗಿ ಮಾರಯ್ಯ, ಜೇಡರ ದಾಸಿಮಯ್ಯ, ಅಂಬಿಗರ ಚೌಡಯ್ಯ ಮುಂತಾದವರೆಲ್ಲರೂ ಸಮಾಜದಲ್ಲಿ ಜಾಗೃತಿ ಮೂಡಿಸಲು ವಚನಗಳ ಮೂಲಕ ಕ್ರಾಂತಿಯನ್ನೇ ಉಂಟುಮಾಡಿದರು. ಹೀಗೆ ವಚನಗಳನ್ನು ಬರೆದವರೆಲ್ಲರೂ ವಚನದ ಕಡೆಯ ಸಾಲಿನಲ್ಲಿ ತಮ್ಮ ಹೆಸರು ಅಥವಾ ಆರಾಧ್ಯದೈವದ ಹೆಸರನ್ನು ಸೂಚಿಸದಿದ್ದರೆ ಖಂಡಿತ ಇಂದು ನಾವು ಅವುಗಳನ್ನು ಯಾರು ಬರೆದರೆಂದು ಸಂಶೋಧನೆ ನಡೆಸುವಲ್ಲೇ ಇಡೀ ಜೀವನವೇ ವ್ಯರ್ಥವಾಗಿ ವಚನದ ಆಶಯವನ್ನು ಅರ್ಥಮಾಡಿಕೊಳ್ಳುವುದರಿಂದ ಖಂಡಿತ ವಂಚಿತರಾಗುತ್ತಿದ್ದೆವೆಂದೇ ನನ್ನ ಅನಿಸಿಕೆ.
ಅಂದು ವಚನಗಳನ್ನು ರಚಿಸಿದವರೂ ಎಂತಹ ಬುದ್ಧಿವಂತ ಮಂದಿ. ವಚನದಲ್ಲೇ ತಮ್ಮ ಹೆಸರನ್ನು ಹುದುಗಿಸಿ ವಚನಗಳನ್ನು ಅಜರಾಮರಗೊಳಿಸಿರುವುದನ್ನು ಕಂಡಾಗ ಅವರ ಬುದ್ಧಿವಂತಿಕೆಗೆ ತಲೆಬಾಗಲೇ ಬೇಕಾಗುತ್ತದೆ. ಯಾವ ಮಾದರಿಯೂ ಇಲ್ಲದೆ ಇಂತಹ ಒಂದು ಐಡಿಯಾ ಅವರಿಗೆ ಹೊಳೆದಿದ್ದಾದರೂ ಹೇಗೆ?
ಸಾಮಾನ್ಯವಾಗಿ ನಾನು ರಾತ್ರಿ ಮಲಗುವ ಮುಂಚೆ ಹತ್ತು-ಹದಿನೈದು ನಿಮಿಷ ಯಾವುದಾದರೊಂದು ಭಾವಗೀತೆ ಕೇಳುತ್ತ ಮಲಗುವ ಅಭ್ಯಾಸ. ನಿಶ್ಶಬ್ದ ವಾತಾವರಣದಲ್ಲಿ, ಮಬ್ಬು ಬೆಳಕಿನಲ್ಲಿ, ಮನಸ್ಸಿನ ಮೇಲೆ ಯಾವ ಯೋಚನೆಯನ್ನೂ ತಂದುಕೊಳ್ಳದೆ ಹಾಯಾಗಿ ಮಲಗಿ ಕೇಳುವುದಿದೆಯಲ್ಲ್ಲ – ಇದು ಮನಸ್ಸಿಗೆ ಎಂತಹ ಆಹ್ಲಾದತೆಯನ್ನು ತಂದುಕೊಡುತ್ತದೆಂದರೆ ಈ ಸುಖವನ್ನು ಅನುಭವಿಸಿದವರಿಗೇ ಗೊತ್ತು.
ಇನ್ನೇನು ಮೊಬೈಲ್ ಆರಿಸಿ ಪಕ್ಕಕ್ಕೆ ತಿರುಗಿ ಮಲಗಬೇಕು ಎನ್ನುವಾಗ ನನ್ನವಳ ಪ್ರಶ್ನೆ ತೂರಿಬರುತ್ತದೆ – “ಈ ಹಾಡು ಚೆನ್ನಾಗಿತ್ತಲ್ವ? ಸಾಹಿತ್ಯ, ಸಂಗೀತ ಎರಡೂ ಫೈನ್. ಹಾಡು ಯಾರು ಬರೆದದ್ದು?” ಯಾರು ಬರೆದದ್ದು? ನನ್ನೊಳಗೇ ನಾನು ಪ್ರಶ್ನಿಸಿಕೊಳ್ಳುತ್ತೇನೆ. ಇಲ್ಲೇ ನನಗೆ ಕನ್ಫ್ಯೂಷನ್ ಶುರುವಾಗುವುದು. ಇದುವರೆಗೂ ಕೇಳಿದ ಹಾಡು,
“ಇಲ್ಲೇ ಇದ್ದವು ಪುಟ್ಟ ಹಕ್ಕಿಗಳು…”
ಬರೆದದ್ದು ಯಾರು? ಒಂದೆಡೆ ನನಗೆ ನಿದ್ರೆ ಎಳೆಯುತ್ತಿದ್ದರೆ ನನ್ನವಳಿಗೆ ಇಂತಹ ಮಧುರವಾದ ಹಾಡನ್ನು ಬರೆದವರು ಯಾರೆಂದು ತಿಳಿಯುವ ಘನಘೋರ ಕುತೂಹಲ!
ನಿದ್ದೆಗಣ್ಣಿನಲ್ಲಿ ಎಚ್ಚೆಸ್ವಿಯೋ, ಜಿಎಸ್ಸೆಸ್ಸೋ ಎಂದು ಏನೋ ಒಂದು ಹೇಳಿ ಪಾರಾಗಿ ನಿದ್ರೆಯಾಳಕ್ಕಿಳಿಯುತ್ತೇನೆ.
ಬೆಳಗಾಗೇಳುತ್ತಿದ್ದಂತೆ ಒಂದೊಂದು ಸಾರಿ ಜ್ಞಾಪಕಕ್ಕೆ ಬಂದಾಗ ಅರೆ, ನಿನ್ನೆ ರಾತ್ರಿ ಕೇಳಿದ ಹಾಡು ಎಚ್ಚೆಸ್ವಿಯವರದ್ದೂ ಅಲ್ಲ ಜಿಎಸ್ಸೆಸ್ ಅವರದ್ದೂ ಅಲ್ಲ. ಅದು ಸಂತೋಷ ಚೊಕ್ಕಾಡಿಯವರ ಹಾಡು ಎಂದು ತಿದ್ದುಪಡಿ ಮಾಡಿಸುತ್ತೇನೆ.
ಹೀಗೆ ಹಾಡುಗಳನ್ನು ಕೇಳಿದನಂತರ
“ಪ್ರಾಯ ಹೋಗುತ್ತಾ ಬಂತು…” ಬರೆದದ್ದು ಯಾರು? “ಗುಡಿಸಲಿನಲ್ಲಿ ಅರಳಿದ ಗುಲಾಬಿ…” ಬರೆದದ್ದು ಯಾರು? “ಹಕ್ಕಿಯೊಂದು ಹಾರಿ ಬಂದು…” ಬರೆದದ್ದು ಯಾರು? “ತಪ್ಪಿ ಹೋಯಿತಲ್ಲೆ ಚುಕ್ಕಿ…” ಬರೆದದ್ದು ಯಾರು? – ಹೀಗೆ ಸಂಶಯಗಳ ಮೆರವಣಿಗೆಯೆ ಪ್ರಾರಂಭವಾಗುತ್ತದೆ. ವರ್ಷಕ್ಕೆ ನೂರಾರು ಕವನಗಳು, ಭಾವಗೀತೆಗಳನ್ನು ಕವಿಗಳು ಬರೆದು ಬರೆದೂ ಬಿಸಾಡುತ್ತಿರುತ್ತಾರೆ.
ಅದನ್ನೆಲ್ಲ ಒಟ್ಟುಗೂಡಿಸಿಕೊಂಡ ರಾಗಸಂಯೋಜಕರು ರಾಗಹಾಕಿ ‘ಹಾಡಿಗೆ’ ಪ್ರಸಿದ್ಧಿ ತಂದುಕೊಡುತ್ತಾರೆ. ‘ಹಾಡಿಗೆ’ ಎಂದರೆ ಕವಿಗೆ ಸಿಕ್ಕ ರಾಜಮರ್ಯಾದೆಯೆ ಅಲ್ಲವೆ?
ಇಂಥವನ್ನೆಲ್ಲ ಮಾಲ್ಗಳಲ್ಲೋ, ಪುಸ್ತಕದ ಅಂಗಡಿಗಳಲ್ಲೋ, ಹೋಟೆಲುಗಳಲ್ಲೋ ಕೇಳಿ ಆನಂದಿಸಿದಾಗ ನನಗೆ ಗೊಂದಲ ಪ್ರಾರಂಭವಾಗುತ್ತದೆ. ಅರೆ, ಎಷ್ಟು ಚೆನ್ನಾಗಿದೆ ಸಾಹಿತ್ಯ, ಸಂಗೀತವೂ ಚೆನ್ನಾಗಿದೆ. ಆದರೆ ಬರೆದವರ ಹೆಸರು ಆ ಕ್ಷಣಕ್ಕೆ ಹೊಳೆಯುವುದಾದರೂ ಹೇಗೆ? ತಿಳಿಯುವುದಾದರೂ ಹೇಗೆ?
ಒಂದು ಕಾಲದಲ್ಲಿ ಅಂದರೆ ೧೨ನೆಯ ಶತಮಾನದಲ್ಲಿ ಬಸವಣ್ಣ, ಅಕ್ಕಮಹಾದೇವಿ, ಮಾದರಸ, ಉರಿಲಿಂಗದೇವ, ಮೋಳಿಗಿ ಮಾರಯ್ಯ, ಜೇಡರ ದಾಸಿಮಯ್ಯ, ಅಂಬಿಗರ ಚೌಡಯ್ಯ ಮುಂತಾದವರೆಲ್ಲರೂ ಸಮಾಜದಲ್ಲಿ ಜಾಗೃತಿ ಮೂಡಿಸಲು ವಚನಗಳ ಮೂಲಕ ಕ್ರಾಂತಿಯನ್ನೇ ಉಂಟುಮಾಡಿದರು.
ಹೀಗೆ ವಚನಗಳನ್ನು ಬರೆದವರೆಲ್ಲರೂ ವಚನದ ಕಡೆಯ ಸಾಲಿನಲ್ಲಿ ತಮ್ಮ ಹೆಸರು ಅಥವಾ ಆರಾಧ್ಯದೈವದ ಹೆಸರನ್ನು ಸೂಚಿಸದಿದ್ದರೆ ಖಂಡಿತ ಇಂದು ನಾವು ಅವುಗಳನ್ನು ಯಾರು ಬರೆದರೆಂದು ಸಂಶೋಧನೆ ನಡೆಸುವಲ್ಲೇ ಇಡೀ ಜೀವನವೇ ವ್ಯರ್ಥವಾಗಿ ವಚನದ ಆಶಯವನ್ನು ಅರ್ಥಮಾಡಿಕೊಳ್ಳುವುದರಿಂದ ಖಂಡಿತ ವಂಚಿತರಾಗುತ್ತಿದ್ದವೆಂದೇ ನನ್ನ ಅನಿಸಿಕೆ.
ಅಂದು ವಚನಗಳನ್ನು ರಚಿಸಿದವರೂ ಎಂತಹ ಬುದ್ಧಿವಂತ ಮಂದಿ. ವಚನದಲ್ಲೇ ತಮ್ಮ ಹೆಸರನ್ನು ಹುದುಗಿಸಿ ವಚನಗಳನ್ನು ಅಜರಾಮರಗೊಳಿಸಿರುವುದನ್ನು ಕಂಡಾಗ ಅವರ ಬುದ್ಧಿವಂತಿಕೆಗೆ ತಲೆಬಾಗಲೇ ಬೇಕಾಗುತ್ತದೆ. ಯಾವ ಮಾದರಿಯೂ ಇಲ್ಲದೆ ಇಂತಹ ಒಂದು ಐಡಿಯಾ ಅವರಿಗೆ ಹೊಳೆದಿದ್ದಾದರೂ ಹೇಗೆ?
ಈಗ ನೋಡಿ,
ಕರಿ ಘನ ಅಂಕುಶ ಕಿರಿದೆನ್ನಬಹುದೆ
ಬಾರದಯ್ಯಾ
ಗಿರಿ ಘನ ವಜ್ರ ಕಿರಿದೆನ್ನಬಹುದೆ ಬಾರದಯ್ಯ,
ತಮಂಧ ಘನ ಜ್ಯೋತಿ ಕಿರಿದೆನ್ನಬಹುದೆ
ಬಾರದಯ್ಯಾ
ಮರಹು ಘನ ನಿಮ್ಮ ನೆನೆವ ಮನದ
ಕಿರಿದೆನ್ನಬಹುದೆ ಬಾರದಯ್ಯಾ
ಕೂಡಲಸಂಗಮದೇವಾ
ನೋಡಿದಿರಾ, ಹೈಸ್ಕೂಲು, ಮಿಡ್ಲು ಸ್ಕೂಲುಗಳಲ್ಲಿ ವಚನಗಳನ್ನು ಕೊಂಚ ಓದಿದ್ದರೂ ಇದು ಬಸವಣ್ಣನವರ ವಚನವೆಂದು ಯಾರಿಗಾದರೂ ಹೊಳೆದೀತು.
ಇನ್ನೊಂದು,
ಆರು ಇಲ್ಲವೆಂದು ಆಳಿಗೊಳಲುಬೇಡ ಕಂಡೆಯಾ
ಏನ ಮಾಡಿದಡೂ ಆನಂಜುವಳಲ್ಲ
ತರಗೆಲೆಯ ಮೆಲಿದು ಆನಿಹೆನು
ಸರಿಯ ಮೇಲೊರಗಿ ಆನಿಹೆನು
ಚೆನ್ನಮಲ್ಲಿಕಾರ್ಜುನಯ್ಯಾ
ನೋಡಿದಿರಾ. ಇಲ್ಲಿ ಚೆನ್ನಮಲ್ಲಿಕಾರ್ಜುನ ಎಂದ ಮೇಲೆ ಇದು ಅಕ್ಕಮಹಾದೇವಿಯ ವಚನವೇ ಎಂದು ಯಾರಾದರೂ ಹೇಳಿಯಾರು.
ಎಮ್ಮ ನಲ್ಲನ ಕೂಡಿದ ಕೂಟ
ಇದಿರಿಗೆ ಹೇಳಬಾರದವ್ವ
ನೀವೆಲ್ಲ ನಿಮ್ಮ ನಲ್ಲನ ಕೂಡಿದ ಸುಖವ
ಬಲ್ಲಂತೆ ಹೇಳಿ
ಉರಿಲಿಂಗದೇವ ಬಂದು
ನಿರಿಗೆಯ ಸೆರಗ ಸಡಿಲಿಸಲೊಡನೆ
ನಾನೋ ತಾನೋ ಏನೆಂದರಿಯೆನು
ನೋಡಿದಿರಾ ಇಲ್ಲು ಕೂಡ ಇದು ಉರಿಲಿಂಗ ದೇವನ ವಚನವೆಂದು ಖಂಡಿತಾ ಹೇಳಿಬಿಡುತ್ತೀರಾ. ಇನ್ನೂ ಕೊಂಚ ಸ್ಪಷ್ಟವಾಗಿ ಹೇಳಬೇಕೆಂದರೆ,
ಕೆಂಡದ ಗಿರಿಯ ಮೇಲೊಂದು
ಅರಗಿನ ಕಂಭವಿಧ್ದಿತು
ನೋಡಾ ಅಯ್ಯಾ
ಅರಗಿನ ಕಂಭದ ಮೇಲೊಂದು
ಹಂಸೆ ಇದ್ದಿತ್ತು
ಕಂಭ ಬೆಂದಿತ್ತು ಹಂಸೆ ಹಾರಿತ್ತು
ಗುಹೇಶ್ವರಾ
ನೋಡಿದಿರಾ, ಆಗಲೇ ನಿಮಗೆ ಹೊಳೆದುಬಿಟ್ಟಿದೆ ಇದು ಅಲ್ಲಮನ ವಚನವೆಂದು.
ಹೀಗೆ ನೀವು ಯಾವುದೇ ವಚನಕಾರರ ವಚನಗಳನ್ನು ತೆಗೆದುಕೊಂಡರೂ ಇಂಥವರದ್ದೇ ಎಂದು ಸುಮಾರಾಗಿ ಹೇಳಿಬಿಡಬಹುದು. (ವಚನಗಳ ಸ್ವಲ್ಪ ಪರಿಚಯವಿದ್ದರೆ.)
ಇದರಂತೆಯೇ ಸುಮಾರು ೧೪ನೆಯ ಶತಮಾನದಲ್ಲಿ ಬಾಳಿ ಬದುಕಿದ ಹರಿದಾಸರುಗಳೂ ಸಹ ಸಮಾಜದ ಡೊಂಕನ್ನು ತಿದ್ದುವುದರ ಜೊತೆಗೆ ಕರ್ನಾಟಕ ಸಾಹಿತ್ಯ, ಸಂಗೀತ, ಸಂಸ್ಕೃತಿಗಳು ಸಮೃದ್ಧಿಯಾಗಿ ಬೆಳೆಯುವಂತೆ ಮಾಡುವುದರಲ್ಲಿಯೂ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ವಚನ ಕರ್ತೃಗಳಂತೆ ತಾವು ರಚಿಸಿದ ಕೀರ್ತನೆಗಳಿಗೆ ಅಂಕಿತ ರೂಪದಲ್ಲಿ ತಮ್ಮ ಹೆಸರಿನ ಮುದ್ರೆಯೊತ್ತಿದ್ದಾರೆ.
ಕನಸುಕಂಡೆನೆ ಮನದಲಿ ಕಳವಳಗೊಂಡೆನೆ
ಏನು ಹೇಳಲಿ ತಂಗಿ ತಿಮ್ಮಯ್ಯನ
ಪಾದವನು ಕಂಡೆ
……………………….
……………………….
ಪುರಂದರವಿಠಲನ ಕೂಡಿದೇನೆ
ಕಡೆಯ ಸಾಲನ್ನು ಓದುತ್ತಿದ್ದಂತೆ ಇದು ಪುರಂದರ ದಾಸರ ರಚನೆ ಎಂದು ಅರ್ಥವಾಗುತ್ತದೆ ಅಲ್ಲವೆ?
ಇನ್ನು,
ನಿನ್ನೆ ನಾನೇನೆಂದೆನೋ ವೆಂಕಟರಾಯ
ಎನ್ನ ನೀ ಸಲಹಬೇಕೊ
……………………….
……………………….
ಮತ್ತೆ ಪುಟ್ಟದನೆಂದೆನೆ ಆದಿಕೇಶವ
ಭಕ್ತವತ್ಸಲನೆಂದು ಪೊಗಳಿದೆನಲ್ಲದೆ
ಇಲ್ಲಿ ಆದಿಕೇಶವ ಎಂಬ ಪದ ಕಂಡೊಡನೆಯೇ ಇದು ಕನಕದಾಸರದ್ದು ಎಂದು ನಿರ್ಧರಿಸಿಬಿಟ್ಟರಿ ಅಲ್ಲವಾ?
ಎಂದು ಕಾಂಬೆನು ಎನ್ನ ಸಲಹುವ
ಬಂಧು ಬಳಗ ನಮ್ಮಪ್ಪನ ತಿರುಪತಿಯಲಿಪ್ಪನ
……………………….
ನೇಮವ ಮಾಡುವೆ ಪುಣ್ಯಕ್ಷೇತ್ರವ
ನೋಡುವೆ ಹಯವದನನ ಕೊಂಡಾಡುವೆ
ಹಯವದನ ಎಂದು ಬಂದಾಗಲೇ ನಿಮಗೆ ವಾದಿರಾಜರದೆಂದು ಅರ್ಥವಾಗಿಬಿಟ್ಟಿದೆ.
ನೋಡಿದೆ ಗಿರಿಯ ತಿರ್ಮಲನ ನಿತ್ಯ
ಮೂಡಲದಿಕ್ಕಿನಲಿಪ್ಪ ನಿರ್ಮಲನ
……………………….
……………………….
ನೀರೆ ಗತಿಯ ಮಾಡಿದೆನಾ ನಮ್ಮ
ನೀರಜಾದ್ರಿ ತಿಮ್ಮ ವಿಜಯವಿಠ್ಠಲನ
ಇದು ವಿಜಯದಾಸರದೆಂದು ಯಾರು ಬೇಕಾದರೂ ಹೇಳಿಯಾರು.
ಹೀಗೆ ಹರಿದಾಸರೆಲ್ಲರೂ ಗುರುಗಳಿಂದ, ಸ್ವಪ್ನದರುಶನದಿಂದ ಅಂಕಿತ ಪಡೆದಿರುವರೆಂದು ಕೇಳಿದ್ದೇವೆ.
ಶ್ರೀಪಾದರಾಜರು – ರಂಗವಿಠಲ;
ವ್ಯಾಸರಾಯರು – ಕೃಷ್ಣ, ಶ್ರೀಕೃಷ್ಣ, ಸಿರಿಕೃಷ್ಣ;
ವಾದಿರಾಜರು – ಹಯವದನ;
ಪುರಂದರದಾಸರು – ಪುರಂದರವಿಠಲ;
ಕನಕದಾಸರು – ಆದಿಕೇಶವ;
ವಿಜಯದಾಸರು – ವಿಜಯವಿಠ್ಠಲ;
ಗೋಪಾಲದಾಸರು – ಗೋಪಾಲವಿಠಲ
ಮುಂತಾದ ಅಂಕಿತಗಳಿಂದ ಪ್ರೋಕ್ತರಾದವರೆ. ಇವುಗಳನ್ನೆಲ್ಲ ನೋಡಿದ ನಂತರ ನನ್ನ ಮನಸ್ಸನ್ನು ಕಾಡುತ್ತಿರುವ ಪ್ರಶ್ನೆ ಎಂದರೆ ಭಾವಗೀತೆಗಳಿಗೆ, ಕವನಗಳಿಗೆ ನಮ್ಮ ಇಂದಿನ ಕವಿಗಳೇಕೆ ಅಂಕಿತದ ಮುದ್ರೆ ಒತ್ತಬಾರದು? ಇದರಿಂದ ಕವನ/ಭಾವಗೀತೆಗಳನ್ನು ಕೇಳುಗ ಸುಲಭವಾಗಿ ಗುರುತಿಸಬಹುದಲ್ಲ? ಗುರುತಿಸುವುದರ ಜೊತೆಗೆ ನಮಗಿಷ್ಟಬಂದವರ ಕವನ/ಭಾವಗೀತೆಗಳನ್ನು ಹುಡುಕಿ ಹೆಚ್ಚು ಹೆಚ್ಚು ಆಸ್ವಾದಿಸಲು ಅನುಕೂಲವಾಗುವುದರ ಜೊತೆಗೆ ಅಂಕಿತವಿಲ್ಲದಿದ್ದಾಗ ಯಾರೋ ಬರೆದುದನ್ನು ಇನ್ನಾರೊ ಬರೆದರೆಂದು ತಪ್ಪಾಗಿ ಅರ್ಥೈಸುವ; ಕೃತಿಚೌರ್ಯ ಮಾಡುವ – ಮುಂತಾದವುಗಳಿಗೆ ಎಡೆಯಿಲ್ಲದಂತೆ ಮಾಡಬಹುದಲ್ಲವಾ?
ಸಕಲ ಚರಾಚರ ವಸ್ತುಗಳೂ ಒಂದೊಂದು ಹೆಸರಿನಿಂದ ಗುರುತಿಸಲ್ಪಡುತ್ತಿರುವಾಗ ಧ್ಯಾನಸ್ಥಸ್ಥಿತಿ ತಲಪಿ ರಚಿಸಿದ ಸಾಹಿತ್ಯ ಕೃತಿಗಳಾದ ಕವನ/ಭಾವಗೀತೆಗಳಿಗೆ ಅಂಕಿತವೇ ಇಲ್ಲವೆಂದರೆ ಇದೊಂದು ಸೋಜಿಗದ ಸಂಗತಿ ಎಂದು ನಿಮಗನ್ನಿಸುವುದಿಲ್ಲವೆ?
ನಿಮ್ಮ ವಾದ ಚೆನ್ನಾಗಿದೆ. ಕೃತಿಯಷ್ಟೇ ಕೃತಿ ರಚನಕಾರನೂ ಓದುಗರಿಗೆ ತಿಳಿಯಬೇಕಾದ್ದೆ. ಇದರಲ್ಲಿ ಎರಡು ಮಾತಿಲ್ಲ. ಆದರೆ ಇವರಿಗೆಲ್ಲ ಅಂಕಿತ ಕೊಡುವವರು ಯಾರು? ತಮಗೆ ತಾವೇ ಕೊಟ್ಟುಕೊಂಡರೆ ಅದು ಓದುಗರಿಗೆ ತಿಳಿಯುವುದಾದರೂ ಹೇಗೆ? ಪುಸ್ತಕ ಬರೆದಾತ ಓದುಗರಿಗೆ ತಲಪಿಸಲು ಪುಸ್ತಕ ಬಿಡುಗಡೆ ಸಮಾರಂಭ ಏರ್ಪಡಿಸಿದಂತೆ ಇದಕ್ಕೂ ಒಂದು ಮುಹೂರ್ತ, ಕಾರ್ಯಕ್ರಮ, ಇರಲೇಬೇಕಲ್ಲವೇ? – ಎಂದು ನೀವು ಕೇಳಬಹುದು.
ನಿಮ್ಮ ಮನಸ್ಸಿನಲ್ಲಿ ಉದ್ಭವಿಸಿರುವ ಪ್ರಶ್ನೆ ನೂರಕ್ಕೆ ನೂರು ಸರಿ. ಆದರೆ ವಚನಕಾರರಿಗೆ ಅಂಕಿತ ಕೊಟ್ಟವರು ಯಾರೋ ತಿಳಿಯದು. ಗುರುಮುಖೇನ ದೀಕ್ಷೆ ತೆಗೆದುಕೊಂಡು ಅವರೇನು ವಚನಗಳ ರಚನೆ ಪ್ರಾರಂಭಿಸಿದಂತೆ ಕಾಣೆ. ಆದರೆ ಮುಂದುವರಿದ ರಚನೆಗಳಲ್ಲಿ ಅಂದರೆ ದಾಸರುಗಳು ರಚನೆಗಳನ್ನು ಪ್ರಾರಂಭಿಸಲು ಅವರು ಗುರುಮುಖೇನ ಅಂಕಿತ ಪಡೆದೇ ರಚಿಸಲು ಪ್ರಾರಂಭಿಸಿದರು ಎಂಬುದನ್ನು ಅಲ್ಲಲ್ಲಿ ಓದಿಯೇ ಇದ್ದೇವೆ.
ಇಲ್ಲಿ ಅಂಕಿತ ಪಡೆಯುವುದೆಂದರೆ ಹೆಸರಿನ ಮುಂದೆ ಸುಮ್ಮನೆ ಅಂಕಿತ ಕೂಡಿಸಿಕೊಂಡು ಬಿಡುವುದಲ್ಲ. ಇದಕ್ಕೂ ಒಂದು ವಿಧಿ-ವಿಧಾನ ಉಂಟು, ಪರಂಪರೆಯಿದೆ. ಪರಂಪರೆಯಿಂದ ಬಂದವರೇ ಅಂಕಿತ ನೀಡುವಂತಹ ಗೌರವಯುತ ಕೆಲಸ ಮಾಡುವವರು. ದೈವಸನ್ನಿಧಿಯಲ್ಲಿ ಸಂಪ್ರದಾಯ ಬದ್ಧರಾಗಿ ದೈವಪೂಜೆ, ಗುರುಪೂಜೆ ಮುಗಿಸಿದನಂತರ ಗುರುವಿಗೆ ಸಾಷ್ಟಾಂಗವೆರಗಿ ಹರಿದಾಸ ದೀಕ್ಷೆ ಸ್ವೀಕರಿಸಬೇಕು.
ದೀಕ್ಷೆಯೆಂದರೆ ಗುರುವು, ಶಿಷ್ಯನಿಗೆ ಅನುಗ್ರಹಿಸುವ ಮನಸ್ಸಂಸ್ಕಾರ ವಿಶೇಷ. ಸುಮ್ಮನೆ ದೀಕ್ಷೆ ಪಡೆಯುವುದಲ್ಲ. ದೀಕ್ಷೆ ಪಡೆದವ ಕಾಯಾ, ವಾಚಾ, ಮನಸಾ ಶುಭ್ರನಿರುತ್ತೇನೆ. ಸಮಾಜದ ಒಳಿತಿಗಾಗಿ ದುಡಿಯುತ್ತೇನೆ. ಯಾಯವಾರ ಮಾಡಿ ಜೀವಿಸುತ್ತೇನೆ. ಸದಾ ಹರಿಸಂಕೀರ್ತನೆ ಮಾಡುತ್ತ್ತ, ಸಂಕೀರ್ತನ ಸಮಾರಂಭಗಳಲ್ಲಿ ಭಾಗವಹಿಸುತ್ತೇನೆ” ಎಂದು ದೃಢ ಮನಸ್ಸು ತಾಳಬೇಕು. ಇಂಥವರಿಗೆ ಗುರುಗಳು ಅವರಿಚ್ಛಿಸುವ ದೈವದ ಹೆಸರಿನಲ್ಲಿ ಕಿರು ಕೀರ್ತನೆಯೊಂದನ್ನು ರಚಿಸಿ ಅಂಕಿತ ನೀಡುತ್ತಾರೆ.
ಇನ್ನು ಕವಿಗಳಿಗೂ ಅಂಕಿತ ಕೊಡೋಣವೆಂದರೆ ದೀಕ್ಷೆ ಕೊಡುವವರು ಯಾರು? ಹರಿದಾಸ ದೀಕ್ಷೆ ನೀಡಿದಂತೆ ಇಂದಿನ ಕವಿಗಳಿಗೆ ಕವಿದಾಸ ದೀಕ್ಷೆ ಕೊಡಲಾದೀತೆ? ಕೊಡುವವರಿಗೂ ಅರ್ಹತೆ ಬೇಡವೆ? ಪಡೆಯುವಾತನ ಯೋಗ್ಯತೆ, ಅರ್ಹತೆ, ವಿದ್ಯೆಗೆ ತಕ್ಕಂತೆ ಸ್ಕೂಲು, ಕಾಲೇಜು ಅಧ್ಯಾಪಕರುಗಳು ಕೊಡಬಹುದೆ? ಪವಿತ್ರಸ್ಥಳದಲ್ಲೇ ಕೊಡಬೇಕೆಂದಾಗ ಕೆಲವು ಕುಹಕಿಗಳು ಪಬ್ಬು, ಬಾರುಗಳಲ್ಲಿ ಏಕಾಗಬಾರದು ಎಂದು ಪ್ರಶ್ನಿಸುವುದಿಲ್ಲವೆ? ಒಂದು ವೇಳೆ ಕೊಟ್ಟರೂ ಹರಿದಾಸರಂತೆ ಕಾಯಾ, ವಾಚಾ, ಮನಸಾ ಶುದ್ಧವಿರುತ್ತೇವೆಂದು ದೀಕ್ಷೆ ಪಡೆದ ಕೆಲವರು ಹೇಳುತ್ತಿದ್ದಂತೆ ನಗೆಪಾಟಲಿಗೀಡಾಗುವುದು ಖಂಡಿತ. ಹರಿದಾಸರುಗಳಿಗೆ ಅನ್ವಯಿಸಿದ ಎಲ್ಲ ಕಲಂಗಳನ್ನು ಕವಿದಾಸರಿಗೆ ಅನ್ವಯಿಸದಿದ್ದರೂ ಕವಿ ಎನಿಸಿಕೊಂಡವರು ಕೆಲ ನಿಬಂಧನೆಗಳಿಗೆ ಒಳಪಡುವುದೇ ಲೇಸು.
ಸಾಹಿತಿಯಾದವರು ಋಜುಮಾರ್ಗವನ್ನು ಅನುಸರಿಸಿಬೇಕೆಂದು ಬಹುಹಿಂದೆಯೇ ಜಿ.ಪಿ. ರಾಜರತ್ನಂರವರು “ಸಾಹಿತ್ಯ ಶಾಸನ ಸಪ್ತಕ” ಎಂಬ ಸಪ್ತಸೂತ್ರಗಳನ್ನು ಸೂಚಿಸಿದ್ದಾರೆ.
ಕಳಬೇಡ
ಕೃತಿ ಚೌರ್ಯ ಮಾಡದಿರುವುದು.
ಕೊಲಬೇಡ
ಸುಲಭ ಖ್ಯಾತಿಗಾಗಿ ಮೂಲಕೃತಿಯನ್ನು
ವಿರೂಪಗೊಳಿಸದಿರುವುದು.
ಹುಸಿಯ ನುಡಿಯಲು ಬೇಡ
ಅನುಭವಕ್ಕೆ ಬಾರದ ವಿಷಯ ಹೇಳದಿರುವುದು.
ಮುನಿಯಬೇಡ
ತನ್ನ ಕೃತಿ ಚೌರ್ಯವಾಗಲಿ, ವಿಕಟಾನುವಾದವಾಗಲಿ, ಫಲಿಸಲಿಲ್ಲವೆಂದು ಕೋಪಿಸಕೊಳ್ಳದಿರುವುದು.
ಅನ್ಯರಿಗೆ ಅಸಹ್ಯ ಪಡಬೇಡ
ಇತರರೂ ಬಗ್ಗೆ ಅಸಹನೆ ಪಡದಿರುವುದು.
ತನ್ನ ಬಣ್ಣಿಸಬೇಡ
ಆತ್ಮ ಪ್ರಶಂಸೆ ಮಾಡಿಕೊಳ್ಳದಿರುವುದು.
ಇದಿರಹಳಿಯಲುಬೇಡ
ಇತರರ ಬಗ್ಗೆ ನಿಂದಿಸದೆ ಇರುವುದು.
ಖ್ಯಾತಿ, ಲಾಭ, ಪೂಜೆಗಳ ಆಮಿಷವುಳ್ಳ ಸಾಹಿತ್ಯಕರ್ಮದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ಸಾತ್ತಿ÷್ವಕ ಮಾರ್ಗ ಅತ್ಯವಶ್ಯಕ. ಈ ಗುಣಗಳನ್ನೆಲ್ಲ ರೂಢಿಸಿಕೊಳ್ಳುತ್ತೇನೆಂದು ಭರವಸೆ ಕೊಡುವವರಿಗೆ ಬಹುಶಃ ಕವಿದಾಸ ದೀಕ್ಷೆ ಕೊಡಬಹುದೇನೋ!
ಆದರೆ ಇಂದಿನ ಕವಿಗಳು ಇವಕ್ಕೆಲ್ಲ ಒಪ್ಪುತ್ತಾರೆಯೆ? ಅದೇ ಸಂಶಯ. ಇವೆಲ್ಲವನ್ನೂ ಪರಾಮರ್ಶಿಸಿದಾಗ, ಶೇಷಗಿರಿರಾಯರೆಂಬ ಹರಿದಾಸರು ರಘುರಾಮ ವಿಠಲ ಎಂಬ ಅಂಕಿತದಲ್ಲಿ ಬರೆದಿರುವ ಕೀರ್ತನೆಯೊಂದು ಜ್ಞಾಪಕಕ್ಕೆ ಬರುತ್ತಿದೆ.
“ಅಂಕಿತವಿಲ್ಲದ ಮನುಜರ ಸಂಗದಿ ಸಂಕಟಪಡಬೇಡ” ಎಂದು ಹರಿದಾಸರೇ ಹಾಡಿರುವಾಗ ಯಾವ ಉಪದ್ವ್ಯಾಪಕ್ಕೂ ಹೋಗದೆ ಸುಮ್ಮನಾಗಿಬಿಡುವುದೇ ಲೇಸೆಂದು ಕಾಣುತ್ತದೆ.