ಯುವಜನರು ಮಾತ್ರ ವಾಯುವಿಹಾರಕ್ಕೆ ಒಂಟಿಯಾಗಿಯೇ ಬರುವುದು. ಕಿವಿಯಲ್ಲಿ ಇಯರ್ ಫೋನ್ ಸಿಕ್ಕಿಸಿಕೊಂಡು, ಗಾಳಿಯ ಜೊತೆ ಗುದ್ದಾಡುವವರಂತೆ ತಾಸುಗಟ್ಟಲೆ ಹರಟುತ್ತ ಸುತ್ತು ಹೊಡೆಯುತ್ತಿರುತ್ತಾರೆ. ಇನ್ನು ಕೆಲವರು ಮೂಲೆಯೊಂದನ್ನು ಆಯ್ದುಕೊಂಡು ಮೊಬೈಲ್ ತೀಡುತ್ತ ಕುಳಿತಿರುತ್ತಾರೆ. ಎಷ್ಟೋ ಪ್ರೀತಿಗಳು ವಾಯುವಿಹಾರದಲ್ಲಿಯೇ ಅರಳಿ ಅಲ್ಲಿಯೇ ಮುರುಟಿಹೋಗುತ್ತವೆ. ಇವರ ಹಿಂದೆಮುಂದೆ ಸಂಚರಿಸುವ ವಿಹಾರಿಗಳು ಕೆಟ್ಟ ಕುತೂಹಲದಿಂದ ಇವರತ್ತ ಕಿವಿಗೊಟ್ಟರೆ ಇವರ ಮಾತುಕತೆ ಎರಡೂ ಅರ್ಥವಾಗುವುದಿಲ್ಲ. ಬರೀ ಎಸ್, ನೋ, ಐ ಸ್ವೇರ್, ಪ್ರಾಮಿಸ್ ಇಂಥವೇ ಶಬ್ದಗಳು ಕೇಳುತ್ತವೆಯೇ ಹೊರತಾಗಿ ವಾಕ್ಯಗಳಂತೂ ಒಂದೂ ಇಲ್ಲ. ಬರಬರುತ್ತ ಯುವಜನರಲ್ಲಿ ಮಾತು ಎಷ್ಟೊಂದು ದುಬಾರಿಯಾಗುತ್ತಿದೆ ಎನ್ನಿಸುತ್ತದೆ.
ಸಂಜೆಯ ವಾಯುವಿಹಾರಕ್ಕಾಗಿ ಹೊರಟು ನಿಂತಾಗ “ಅಮ್ಮಾ, ಇಯರ್ ಫೋನ್ ಹಾಕ್ಕೊಂಡು, ಮ್ಯೂಸಿಕ್ ಕೇಳ್ತಾ ವಾಕ್ ಮಾಡು. ಅಂದರೆ ವಾಕ್ ಮೇಲೆ ಕಾನ್ಸಂಟ್ರೇಟ್ ಮಾಡಬಹುದು” ಎಂದಳು ಮಗಳು. ಎರಡೂ ಕಿವಿಗಳನ್ನು ಬಂದ್ ಮಾಡಿಕೊಂಡು ಸುತ್ತಮುತ್ತ ನಡೆಯುವ ಆಗುಹೋಗುಗಳನ್ನು ನೋಡಬಹುದು, ಆದರೆ ಕೇಳಿಸಿಕೊಳ್ಳಲು ಸಾಧ್ಯವಾ? ಇದೊಂದು ತರಹ ಮೂಕಿಚಿತ್ರಗಳನ್ನು ವೀಕ್ಷಿಸಿದ ಹಾಗೆ ಆಡಿಯೋ ಇಲ್ಲದ ವೀಡಿಯೋ ನೋಡಿದ ಹಾಗೆ. ಬೆಳಗ್ಗೆ, ಸಂಜೆ ವಾಯುವಿಹಾರಕ್ಕೆ ಹೋದಾಗ ಚಿಳ್ಳೆ-ಮಿಳ್ಳೆಗಳಿಂದ ಹಿಡಿದು ಸಾಕಪ್ಪ ಸಾಕು ಈ ಬದುಕು ಎಂದು ದಿನಗಳನ್ನು ಎದುರು ನೋಡುವವರೂ ಕಾಣಸಿಗುತ್ತಾರೆ. ಒಬ್ಬೊಬ್ಬರ ವಿಹಾರ ಒಂದೊಂದು ಬಗೆ. ಕೈ-ಬಾಯಿಗೆ ಕೆಲಸ ಕೊಡದೆ ವಾಯುವಿಹಾರವನ್ನು ಮಾಡುವವರು ಕಾಣಸಿಗುವುದೇ ಅಪರೂಪ. ಅವರವರ ಅನುಭವ, ಸುಖ-ದುಃಖ, ಬದುಕಿನ ಬವಣೆಗಳೆಲ್ಲವನ್ನೂ ಸಾದರ ಸ್ವೀಕಾರ ಮಾಡುವ ನೆಚ್ಚಿನ ತಾಣವೇ ಪಾರ್ಕು ಹಾಗೂ ಆಟದ ಮೈದಾನಗಳು. ನಿತ್ಯವೂ ಬಗೆಬಗೆಯ ಮನೋರಂಜನೆಯನ್ನು ಉಣಬಡಿಸುತ್ತಿರುತ್ತವೆ ವಾಯುವಿಹಾರದ ಜಾಗಗಳು. ಈ ಎಲ್ಲ ಆಗುಹೋಗುಗಳನ್ನು ಕಿವಿಯಿಂದ ಕೇಳಿ ಸವಿಯದಿದ್ದರೆ ಅದೆಂಥ ವಾಯುವಿಹಾರ?
ಮಾತನಾಡದೆ ಏಕತಾನತೆಯಿಂದ ವಾಯುವಿಹಾರವನ್ನು ಮಾಡಿದರೆ ಹೆಚ್ಚು ಪರಿಣಾಮಕಾರಿ ಎಂದು ಹೇಳುತ್ತಾರೆ. ಆದರೆ ಮೌನವಾಗಿ ವಾಕ್ ಮಾಡುವ ಯಾರನ್ನೂ ಇಲ್ಲಿಯವರಗೆ ನಾನು ಕಂಡಿಲ್ಲ. ವಾಕ್ ವಿತ್ ಟಾಕ್ಗೆ ಅಂಟಿಕೊಂಡವರನ್ನೇ ನೋಡಿರುವುದು. ಇಂಥವರ ಹಿಂದೆ-ಮುಂದೆ, ಅಕ್ಕ-ಪಕ್ಕ ವಿಹಾರವನ್ನು ಮಾಡುತ್ತಿದ್ದರೆ ಮನೋರಂಜನೆಯೂ ಆಯ್ತು, ಬರೆಯಲೊಂದಿಷ್ಟು ಸರಕೂ ಸಿಗುತ್ತದೆ. ಕೆಲವರು ಟಾಕುಟೀಕಾಗಿ ವಾಯುವಿಹಾರದ ವೇಷಭೂಷಣಗಳನ್ನು ಧರಿಸಿ ವಿಹಾರಕ್ಕೆ ಬರುತ್ತಾರೇನೋ ಸರಿ. ಆದರೆ ಅರ್ಧಗಂಟೆಯಲ್ಲಿನ ಅರ್ಧಭಾಗವನ್ನು ಮಾತನಾಡುತ್ತ ನಡೆದರೆ, ಇನ್ನರ್ಧವನ್ನು ಅಲ್ಲಿರುವ ಬೆಂಚಿನ ಮೇಲೋ, ಹುಲ್ಲುಹಾಸಿನ ಮೇಲೋ ಕುಳಿತು ಹರಟುತ್ತಿರುತ್ತಾರೆ. ಕೆಲವೊಂದು ಚಿಳ್ಳೆಮಿಳ್ಳೆಗಳು ಚಳಿಗಾಲ, ಮಳೆಗಾಲ ಯಾವುದನ್ನೂ ಲೆಕ್ಕಿಸದೆ ಹೊತ್ತು ಮೂಡುವ ಮುನ್ನವೇ ಹಾಸಿಗೆಯಿಂದ ಎದ್ದುಬಿಡುತ್ತವೆ. ದೊಡ್ಡವರೋ ಈ ಅಲಾರಾಂ ಯಾಕಾದರೂ ಆಗುತ್ತದೆಯೋ ಎಂದುಕೊಳ್ಳುತ್ತ ಊಳಿಡುವ ಅದರ ಕಿವಿ ಹಿಂಡಿ ಮತ್ತೊಂದು ಅರ್ಧಗಂಟೆ ಅತ್ತಿಂದಿತ್ತ ಕೆಸರಿನಲ್ಲಿ ಹೊರಳಾಡುವ ಹಂದಿಯಂತೆ ಹೊರಳಾಡಿ ನಂತರ ಹಾಸಿಗೆಯನ್ನು ಬಿಟ್ಟೇಳುತ್ತೇವೆ. ಕೆಲವು ಪಾಲಕರು ತಮ್ಮ ಮಕ್ಕಳಲ್ಲಿ ಭವಿಷ್ಯದ ಪಿ.ವಿ. ಸಿಂಧುನನ್ನೋ, ಸಚಿನ್ ತೆಂಡೂಲ್ಕರ್ನನ್ನೋ ಕಂಡು ಆ ನಿಟ್ಟಿನಲ್ಲಿ ಅವರನ್ನು ತಯಾರು ಮಾಡಲು ನಿತ್ಯ ಪಾರ್ಕಿಗೋ, ಆಟದ ಮೈದಾನಗಳಿಗೋ ಕರೆದು ತರುತ್ತಾರೆ. ಕೆಲವು ಮಕ್ಕಳು ಉತ್ಸಾಹದಿಂದ ಓಡುವುದನ್ನು ಆಡುವುದನ್ನು ಮಾಡಿದರೆ ಇನ್ನು ಕೆಲ ಮಕ್ಕಳನ್ನು ಕಂಡು ಅಯ್ಯೋ ಎನ್ನಿಸುತ್ತದೆ. ಚಳಿಗಾಲದಲ್ಲಿ ಗುಬ್ಬಚ್ಚಿ ಮರಿಗಳಂತೆ ಮುದುಡಿಕೊಂಡು, ನಿಂತರೆ ಎಲ್ಲಿ ಬೆನ್ನಿಗೆ ಗುದ್ದು ಬೀಳುತ್ತದೆಯೋ ಎಂಬ ಭಯದಲ್ಲಿ ಏದುಸಿರುಬಿಡುತ್ತ, ಅಲ್ಲಲ್ಲಿ ನಿಲ್ಲುತ್ತ ಓಡುತ್ತಿರುತ್ತಾರೆ.
ಈ ಯುವಜನರು ಮಾತ್ರ ವಾಯುವಿಹಾರಕ್ಕೆ ಒಂಟಿಯಾಗಿಯೇ ಬರುವುದು. ಕಿವಿಯಲ್ಲಿ ಇಯರ್ ಫೋನ್ ಸಿಕ್ಕಿಸಿಕೊಂಡು, ಗಾಳಿಯ ಜೊತೆ ಗುದ್ದಾಡುವವರಂತೆ ತಾಸುಗಟ್ಟಲೆ ಹರಟುತ್ತ ಸುತ್ತು ಹೊಡೆಯುತ್ತಿರುತ್ತಾರೆ. ಇನ್ನು ಕೆಲವರು ಮೂಲೆಯೊಂದನ್ನು ಆಯ್ದುಕೊಂಡು ಮೊಬೈಲ್ ತೀಡುತ್ತ ಕುಳಿತಿರುತ್ತಾರೆ. ಎಷ್ಟೋ ಪ್ರೀತಿಗಳು ವಾಯುವಿಹಾರದಲ್ಲಿಯೇ ಅರಳಿ ಅಲ್ಲಿಯೇ ಮುರುಟಿಹೋಗುತ್ತವೆ. ಇವರ ಹಿಂದೆಮುಂದೆ ಸಂಚರಿಸುವ ವಿಹಾರಿಗಳು ಕೆಟ್ಟ ಕುತೂಹಲದಿಂದ ಇವರತ್ತ ಕಿವಿಗೊಟ್ಟರೆ ಇವರ ಮಾತುಕತೆ ಎರಡೂ ಅರ್ಥವಾಗುವುದಿಲ್ಲ. ಬರೀ ಎಸ್, ನೋ, ಐ ಸ್ವೇರ್, ಪ್ರಾಮಿಸ್ ಇಂಥವೇ ಶಬ್ದಗಳು ಕೇಳುತ್ತವೆಯೇ ಹೊರತಾಗಿ ವಾಕ್ಯಗಳಂತೂ ಒಂದೂ ಇಲ್ಲ. ಬರಬರುತ್ತ ಯುವಜನರಲ್ಲಿ ಮಾತು ಎಷ್ಟೊಂದು ದುಬಾರಿಯಾಗುತ್ತಿದೆ ಎನ್ನಿಸುತ್ತದೆ.
ಇನ್ನು ಈ ಮಧ್ಯವಯಸ್ಕ ಗಂಡಸರು ಕಾಡಿನ ಆನೆಗಳಂತೆ. ಎಂದೂ ಹಿಂಡನ್ನಗಲಿ ಇರಲಾರರು. ಇವರು ತಮ್ಮದೇ ಆದ ಸಮಾನಮನಸ್ಕರ ಗುಂಪೊಂದನ್ನು ಕಟ್ಟಿಕೊಂಡಿರುತ್ತಾರೆ. ಇವರದು ನಾನ್ಸ್ಟಾಪ್ ಹರಟೆಗಳು. ಪ್ರಚಲಿತ ಸುದ್ದಿಗಳು, ರಾಜಕೀಯ, ಕ್ರಿಕೆಟ್ ತಮ್ಮ ತಮ್ಮ ಆಫೀಸಿಗೆ ಸಂಬಂಧಿಸಿದ ಸಂಗತಿಗಳು, ಸಂಬಳ, ಟ್ಯಾಕ್ಸು, ಇನ್ಕ್ರಿಮೆಂಟು, ಬೋನಸ್ಸು ಇವುಗಳ ಸುತ್ತಲೇ ಇವರ ಹರಟೆಗಳು ಗಿರಕಿ ಹೊಡೆಯುತ್ತಿರುತ್ತವೆ.
ಇನ್ನು ಈ ನಿವೃತ್ತಿ ಹೊಂದಿ ಎಲ್ಲ ಜವಾಬ್ದಾರಿಗಳಿಂದ ಮುಕ್ತರಾದ ಗಂಡಸರ ಗುಂಪೊಂದು ಇರುತ್ತದೆ. ಇವರದು ಧಾವಂತದ ಬದುಕಲ್ಲ. ಒಂದೆರಡು ಸುತ್ತು ಹಾಕಿ ಬೆಂಚಿನ ಮೇಲೆ ವಿರಾಜಮಾನರಾದರೆ ಮುಗಿಯಿತು. ಸರ್ಯ ನೆತ್ತಿಯ ಮೇಲೆ ಬಂದಾಗಲೇ ಮನೆ ನೆನಪಾಗುವುದು. ಯಾಕೆಂದರೆ ಮನೆಯ ಸದಸ್ಯರು ಆಫೀಸು, ಶಾಲೆ, ಕಾಲೇಜು ಎಂದು ಒತ್ತಡದಲ್ಲಿ ಓಡಾಡುವ ಹೊತ್ತು. ಹಾಗಾಗಿ ಅವರೆಲ್ಲ ಮನೆಯಿಂದ ಹೊರಹೋದ ಮೇಲೆಯೇ ಇವರು ಮನೆ ಸೇರುವುದು. ಇವರದು ಒಂದು ರೀತಿ ಸ್ಲೋ ಮೋಷನ್ ನಡಿಗೆ. ಜೀವನವೂ ಅಷ್ಟೇ. ಯಾವ ಗಡಿಬಿಡಿಯೂ ಇಲ್ಲ. ಎಲ್ಲವೂ ನಿಂತ ನೀರಿನಂತೆ ಶಾಂತಚಿತ್ತ. ಇವರ ಗುಂಪಿನಿಂದ ಬರೀ ದೂರುಗಳು, ರಗಳೆಗಳು, ನಮ್ಮ ಕಾಲದಲ್ಲಿ ಹಾಗಿತ್ತು, ಇದು ಹೀಗಿತ್ತು, ಈಗ ಒಂದೂ ಇಲ್ಲ ಎಂಬಂತಹ ಮಾತುಗಳು ಕೇಳಿಬರುತ್ತವೆ. ಬಿ.ಪಿ. ಶುರ್ರು, ಮೈ ಕೈ ನೋವು, ಹೃದಯದ ಕಾಯಿಲೆ, ಸ್ಟಂಟು, ಆಸ್ಪತ್ರೆ, ಮಾತ್ರೆ – ಇವೇ ಇವರ ಹರಟೆಯ ಸರಕುಗಳು. ಕೆಲವೊಮ್ಮೆ ಹತ್ತಿರದಲ್ಲಿರುವ ಹೊಟೇಲಿಗೆ ನುಗ್ಗಿ ತಮ್ಮಿಷ್ಟದ ಸಿಹಿಯನ್ನೋ ಇಲ್ಲ, ಮಸಾಲೆ ದೋಸೆಯ ರುಚಿಯನ್ನು ಸವಿದು ಮನೆಗೆ ಹೋಗುತ್ತಾರೆ. ಏಕೆಂದರೆ ಮನೆಯಲ್ಲಿ ಕೇವಲ ಡಯಟ್ ಫುಡ್ ಮಾತ್ರ ತಿನ್ನಲು ಅವಕಾಶವಿರುತ್ತದೆ.
ನನಗೆ ಎಲ್ಲಕ್ಕಿಂತ ಅಚ್ಚುಮೆಚ್ಚಾಗುವುದು ಈ ಮಧ್ಯವಯಸ್ಕ ಹೆಂಗಳೆಯರ ಬಳಗ. ನಾನು ನನ್ನ ವಾಯುವಿಹಾರವನ್ನು ಮುಗಿಸಿ ಆದಷ್ಟು ಹೆಂಗಳೆಯರ ಗುಂಪಿನ ಅಕ್ಕ-ಪಕ್ಕದಲ್ಲಿಯೇ ವಿರಾಜಮಾನಳಾಗುವುದು. ಇಲ್ಲಿ ಕರ್ಣಾನಂದಕರವಾದ ಮನರಂಜನೀಯ ಹರಟೆಗಳು ಪುಂಖಾನುಪುಂಖವಾಗಿ ಕೇಳಿ ಬರುತ್ತವೆ. ಇವರ ಹಿಡನ್ ಅಜೆಂಡಾದಲ್ಲಿ ಏನುಂಟು ಏನಿಲ್ಲ? ವಿಷಯಗಳು ಹಳತಾಗಿದ್ದರೂ ಅವೆಂದೂ ನೀರಸವೆನ್ನಿಸುವುದಿಲ್ಲ. ಇವರ ಮಾತುಗಳು ಒಂದು ರೀತಿ ಅಕ್ಷಯಪಾತ್ರೆಗಳಿದ್ದಂತೆ. ಇವರು ಬೆಳಗಿನ ವಿಹಾರಕ್ಕೆ ಬಂದವರು ಸಂಜೆಯ ವಿಹಾರದವರೆಗೆ ಕೂಡ ಹರಟಬಲ್ಲರು. ಒಂದು ರೀತಿ ಸುದ್ದಿ ಚಾನೆಲ್ಗಳಿದ್ದ ಹಾಗೆ. ಒಂದಾದರೂ ದಿನ ಈ ಚಾನೆಲ್ನವರು ‘ಅಯ್ಯೋ! ನಮಗಿಂದು ಬಿತ್ತರಿಸಲು ಯಾವುದೇ ವಿಷಯವಿಲ್ಲ’ ಎಂದು ತಲೆಗೆ ಕೈ ಹಚ್ಚಿಕೊಂಡು ಕುಳಿತಿರುವುದನ್ನು ನೋಡಿದ್ದೀರಾ? ಜಗತ್ತು ಶಾಂತವಾಗಿದ್ದರೂ ಬ್ರೇಕಿಂಗ್ ನ್ಯೂಸ್, ಪ್ರಳಯವಾದರೂ ಬ್ರೇಕಿಂಗ್ ನ್ಯೂಸ್. “ಏನು ತಿಂಡಿ?” ಎನ್ನುವ ಎರಡೇ ಪದಗಳಿಂದ ಆರಂಭವಾಗುವ ಹೆಂಗಳೆಯರ ಹರಟೆ ಅಲ್ಲಿಂದ ಎಳೆಎಳೆಯಾಗಿ ಬಿಚ್ಚಿಕೊಳ್ಳುತ್ತ, ಸುತ್ತಿ ಸುಳಿದು, ಹಿಗ್ಗಿ, ತಿರುವು ಪಡೆದು, ಇಳಿಜಾರಿನಗುಂಟ ಹರಿಯುವ ನೀರಿನಂತೆ. ಕೆಲವೊಮ್ಮೆ ಶಾಂತವಾಗಿ ಜಲಲ ಜಲಲ ಜಲಧಾರೆಯಾದರೆ ಇನ್ನೊಮ್ಮೆ ಭೋರ್ಗರೆಯುವ ಜಲಪಾತದಂತೆ. ಸೊಸೆ ಹೀಗೆಂದು ಜರೆದಳು ಎಂದು ಒಬ್ಬ ಪುಣ್ಯಕೋಟಿಯಂತಹ ಅತ್ತೆ ಅಲವತ್ತುಕೊಂಡಾಗ, ಇನ್ನೊಬ್ಬರು ತನ್ನ ಸೊಸೆಯನ್ನು ಹೇಗೆ ಮೂಗುದಾರ ಹಾಕಿ ಬಂದೋಬಸ್ತಿನಲ್ಲಿ ಇಟ್ಟುಕೊಂಡಿರುವೆ ಎಂಬುದನ್ನು ವಿವರಿಸುತ್ತಾರೆ. ಇವರೆಲ್ಲ ಒಂದೆಡೆ ಸೇರಿದರೆ ಅಲ್ಲಿ ಕಿಡಿಯೊಂದು ಪಟಾಕಿ ಸರಕ್ಕೆ ಅಂಟಿಕೊಂಡಂತಹ ವಾತಾವರಣ ನಿರ್ಮಾಣವಾಗುತ್ತದೆ. ಈ ಗುಂಪು ಒಂದು ರೀತಿ ಟೀಚಿಂಗ್ ಫ್ಯಾಕಲ್ಟಿ ಇದ್ದಂತೆ. ಗಂಟುಗಳಾಗದಂತೆ ಮುದ್ದೆಯನ್ನು ತಿರುವುವುದು ಹೇಗೆ? ಬಸಳೆ ಸೊಪ್ಪಿನ ಸಾರು ಲೋಳೆಯಾಗದಂತೆ ಮಾಡುವುದು ಹೇಗೆ? ಪೂರಿ ಉಬ್ಬಿ ಬರುವಂತೆ ಕರಿಯುವುದು ಹೇಗೆ? ಹೊಟೇಲ್ ದೋಸೆಯಂತೆ ಗಮ್ಮೆಂದು ದೋಸೆಯನ್ನು ಹೇಗೆ ಮಾಡುವುದು? ಕೆಮ್ಮಾದರೆ, ಹೊಟ್ಟೆ ಉಬ್ಬರಿಸಿದರೆ, ಕೂದಲು ಉದುರುತ್ತಿದ್ದರೆ… ಒಂದಾ? ಎರಡಾ? ಇವರಲ್ಲಿ ಎಲ್ಲದಕ್ಕೂ ಪರಿಹಾರವಿದೆ. ಇವರಿಂದಲೇ ನಾನು ಎಷ್ಟೋ ಅಡುಗೆಗಳನ್ನು ಕಲಿತು ನಮ್ಮವರಿಂದ ಹೊಗಳಿಸಿಕೊಂಡದ್ದಿದೆ. ಕೆಲವೊಮ್ಮೆ ಇವರ ಹಾಟ್ ಡಿಸ್ಕಷನ್ ಕೇಳುತ್ತ ಮೈಮರೆತು ಕುಳಿತುಬಿಟ್ಟಿರುತ್ತೇನೆ. ಮನೆಯವರು ಫೋನಾಯಿಸಿ “ಎಲ್ಲಿರುವೆ?” ಎಂದಾಗಲೇ ಎಚ್ಚರವಾಗಿ ಎದ್ದುಬಿದ್ದು ಮನೆಗೆ ಓಡುವುದು. ಒಂದು ತಿಂಗಳು ಈ ಹೆಂಗಳೆಯರ ಗುಂಪಿಗೆ ಕಿವಿಯಾಗಿಬಿಟ್ಟರೆ ಒಂದು ಎನ್ಸೈಕ್ಲೋಪೀಡಿಯಾನೇ ತಯಾರಾಗಿಬಿಡುತ್ತದೆ.
ಇನ್ನು ಇವರ ಅಚ್ಚುಮೆಚ್ಚಿನ ಇನ್ನೊಂದು ವಿಷಯವೆಂದರೆ ಸಂಜೆ ಪ್ರಸಾರವಾಗುವ ಧಾರಾವಾಹಿಗಳು. ಈ ಟಾಪಿಕ್ನ್ನು ಇವರು ಎತ್ತಿಕೊಂಡುಬಿಟ್ಟರೆ ನನಗೆ ಪುಕುಪುಕು ಆರಂಭವಾಗಿಬಿಡುತ್ತದೆ. ಏಕೆಂದರೆ ಮಧ್ಯಾಹ್ನ ಪ್ರಸಾರವಾಗುವ ಧಾರಾವಾಹಿಗಳಿಂದ ಆರಂಭಿಸಿ ರಾತ್ರಿಯ ಕೊನೆಯ ಕತೆಯವರೆಗೂ ವಿಮರ್ಶೆಗಳು ಪ್ರಾರಂಭವಾಗಿಬಿಡುತ್ತವೆ. ಅವೆಲ್ಲ ತಮ್ಮದೇ ಮನೆಯ ಕತೆಗಳಂತೆ ಅದರಲ್ಲಿ ತಲ್ಲೀನರಾಗಿ ಬಿಡುತ್ತಾರೆ. ತಾವು ಮನೆಯ ಇರವನ್ನು ಮರೆಯುವುದಲ್ಲದೆ ನಮ್ಮದನ್ನೂ ಮರೆಸಿಬಿಡುತ್ತಾರೆ.
ವಾಯುವಿಹಾರಕ್ಕೆ ಹೋಗಿ ನನ್ನ ದೇಹದ ಭಾರ ಎಷ್ಟು ಕಡಮೆಯಾಗಿದೆಯೋ ಇಲ್ಲವೋ ಗೊತ್ತಿಲ್ಲ! ಆದರೆ ನಿತ್ಯ ಜಂಜಾಟದ ಬದುಕಿಗೊಂದಿಷ್ಟು ಆಹ್ಲಾದ ಕತೆಯಂತೂ ಸಿಕ್ಕಿದೆ. ಹಾಗಾಗಿ ದಿನದ ಎರಡೂ ಹೊತ್ತಿನ ವಿಹಾರವನ್ನು ನಾನು ಸುತಾರಾಂ ತಪ್ಪಿಸಿಕೊಳ್ಳುವುದೇ ಇಲ್ಲ.