ಪರೀಕ್ಷೆಗಳು ನಿರಂತರ ನಡೆಯುತ್ತಿರುತ್ತವೆ ಅವುಗಳಲ್ಲಿ ಪಾಸಾಗಬೇಕು ನಿಜ! ಪಾಸಾಗಲೇಬೇಕು ಆ ಕಾರಣಕ್ಕೆ ನಾವು ಏನನ್ನೂ ಮಾಡುತ್ತೇವೆ ಎನ್ನುವುದು ದುಂಡಾವರ್ತನೆ. ಪಾಸೋ–ನಪಾಸೋ ಪರೀಕ್ಷೆಗಳು ನಮ್ಮ ಮನಸ್ಸನ್ನು ಪಕ್ವಗೊಳಿಸುತ್ತವೆ. ಮುಂದಿನ ಹೋರಾಟದ ಹಾದಿಯನ್ನು ಸುಗಮ ಮಾಡಿಕೊಡುತ್ತವೆ. ಕನಕದಾಸರ ಕಥೆಯಲ್ಲಿ ಗುರುಗಳ ಆಜ್ಞೆಯಂತೆ ಬಾಳೆಹಣ್ಣು ತಿನ್ನುವ ಕಥೆಯಲ್ಲಿ ಗುರುಗಳು ಹೇಳಿದಂತೆ ಮಾಡಬೇಕು ಎನ್ನುವ ಕಾರಣಕ್ಕೆ ಇತರ ಶಿಷ್ಯರು ಗೆದ್ದರು. ಆದರೆ ಗುರುಗಳ ಪ್ರಶ್ನೆಯನ್ನು ನಿಜವಾಗಿ ಅರ್ಥಮಾಡಿಕೊಂಡ ಕನಕನಿಗೆ ಯಾರೂ ಇಲ್ಲದ ಜಾಗ ದೊರೆಯಲೇ ಇಲ್ಲ! ಅವನು ವಸ್ತುಶಃ ಪರೀಕ್ಷೆಯಲ್ಲಿ ಸೋತರೂ ಅಂತರ್ದೃಷ್ಟಿಯಿಂದ ಗೆಲ್ಲುತ್ತಾನೆ. ಧೌಮ್ಯ ಮಹರ್ಷಿಗಳು ಉದ್ದಾಲಕನಿಗೆ ಪರೀಕ್ಷೆ ಒಡ್ಡುವುದೂ ತನ್ನ ಶಿಷ್ಯನ ಪ್ರಾಮಾಣಿಕತೆಯನ್ನು ಒರೆಗೆ ಹಚ್ಚಲು. ಅಂದರೆ ಪರೀಕ್ಷೆ ಪ್ರಾಮಾಣಿಕತೆಗೆ ಎಂದಾಯಿತಲ್ಲವೇ?
ಈ ಸಮಯ ಪರೀಕ್ಷಾಮಯ?… ಸಂದಿಗ್ಧಮಯ. ಈಗಂತೂ ಮುಂದೋಡುತ್ತಿರುವ, ಮುಂದೂಡುತ್ತಿರುವ ಮುನ್ನಡೆಯುತ್ತಿರುವ, ರದ್ದಾಗುತ್ತಿರುವ ಪರೀಕ್ಷೆಗಳದ್ದೇ ಕಾಲ. ಶೈಕ್ಷಣಿಕ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆ, ರಕ್ತ, ಕಫ, ಕೊರೊನಾ ಪರೀಕ್ಷೆ, ವಧುಪರೀಕ್ಷೆ, ವರಪರೀಕ್ಷೆ, ವರಮಾನ ಪರೀಕ್ಷೆ ಇತ್ಯಾದಿ ಇತ್ಯಾದಿ? ಅಡುಗೆರುಚಿ ಇದೆಯೋ? ಇಲ್ಲವೋ? ವ್ಯಕ್ತಿಯಲ್ಲಿ ನಿಷ್ಠೆ ಇದೆಯೋ? ಇಲ್ಲವೋ? ಎಂಬ ಅನೇಕ ಪ್ರಶ್ನೆಗಳು ನಮ್ಮತ್ತ ತೂರಿ ಬರುತ್ತವೆ. ಅಂದಹಾಗೆ ಪ್ರಶ್ನೆಗಳನ್ನು ಒಡ್ಡುವುದೇ ಪರೀಕ್ಷೆಗಳನ್ನು ನಡೆಸಲು. ಪರೀಕ್ಷೆಯ ಮುಖ್ಯ ಉದ್ದೇಶವೇ ಮಾನವರ ಆರೋಗ್ಯ, ವಿದ್ಯಾರ್ಥಿಯ ಬುದ್ಧಿಮತ್ತೆಯ ಪರಾಮರ್ಶೆ. ಶೈಕ್ಷಣಿಕವಾಗಿ ವಿದ್ಯಾರ್ಥಿಗಳ ಜ್ಞಾನ, ಕೌಶಲ, ಸಾಮರ್ಥ್ಯ, ದೈಹಿಕ ಅರ್ಹತೆ ಇತ್ಯಾದಿಗಳು. ಈಗ ಪರೀಕ್ಷೆಗಳು ಕಾಗದ, ಗಣಕಯಂತ್ರ, ತೆರೆದ ಪುಸ್ತಕ ಇತ್ಯಾದಿಗಳ ಮೂಲಕವೂ ನಡೆಯುತ್ತವೆ. ವೈದ್ಯಕೀಯ ಪರೀಕ್ಷೆಗಳಲ್ಲಿ ಪಾಸಿಟಿವ್ ಬಂದರೆ ಸಂಕಷ್ಟ; ನೆಗೆಟಿವ್ ಬಂದರೆ ಖುಷಿ. ಆದರೆ ಲೋಕ-ಲೇಖ ಪರೀಕ್ಷೆಗಳಲ್ಲಿ ನೆಗೆಟಿವ್ ಬರಬಾರದು, ಪಾಸಿಟಿವ್ ಬರಬೇಕು.
ಜಿ.ಪಿ. ರಾಜರತ್ನಂ ರತ್ನನ ಪದಗಳಲ್ಲಿ “ಪರ್ ಗಿರುಕ್ಸೆ ಮಾಡ್ತಾನ್ ಅವ್ನು ಭಕ್ತನ್ ಮೇಲೆ ಅವ್ನ ಕಣ್ಣು” ಎನ್ನುತ್ತಾರೆ. ಇಲ್ಲಿ ರಾಜರತ್ನಂ ಪ್ರಕಾರ ಅವರು ಕನ್ನಡದ ಭಕ್ತ ಅವರನ್ನು ದೇವರು ಪರೀಕ್ಷೆ ಮಾಡಲು ಬರುತ್ತಾನೆ. ಆ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುತ್ತೇನೆ ಎನ್ನುತ್ತಾರೆ. ಶಿವನೂ ಕೂಡ ಅರವತ್ತಮೂರು ಪುರಾತನರನ್ನೂ ಕೂಡ ಪರೀಕ್ಷೆ ಮಾಡಿಯೇ ತನ್ನ ಗಣಧರರನ್ನಾಗಿ, ರುದ್ರಕನ್ನಿಕೆಯರನ್ನಾಗಿ ಮಾಡಿಕೊಂಡಿದ್ದಾನೆ ಎನ್ನುವುದನ್ನು ಹರಿಹರನ ರಗಳೆಗಳು ಹೇಳುತ್ತವೆ. ಇದು ಪರೀಕ್ಷೆಯ ಕಾಲವೇ ಎಂಥದ್ದು ಎಂದರೆ ಜ್ವರ ಪರೀಕ್ಷೆಯ ಕಾಲ ಅಲಕ್ಷಿಸಿದರೆ ಜವರಾಯನೆಡಗೇ ಪ್ರಯಾಣ ಕಟ್ಟಿಟ್ಟ ಬುತ್ತಿ. ಇನ್ನೊಂದು ಜ್ವರದ ಬಗ್ಗೆ ಮಾತನಾಡೋಣ! ಅದುವೆ ಶೈಕ್ಷಣಿಕಾ ಪರೀಕ್ಷಾ ಜ್ವರ. ಕೊರೊನಾ ಕಾರಣಕ್ಕೆ ಪರೀಕ್ಷೆಗಳು ಮುಂದೋಡುತ್ತಿವೆ, ಮುಂದೂಡಲ್ಪಡುತ್ತಿವೆ, ರದ್ದೂ ಆಗುತ್ತಿವೆ. ಈ ಹಿಂದೆ ನಡೆದ ಪರೀಕ್ಷೆಗಳ ನೆನಪು ಈ ಬರೆಹದಲ್ಲಿದೆ.
ಪರೀಕ್ಷೆ ಎಂದ ಕೂಡಲೆ ವಿದ್ಯಾರ್ಥಿಗಳು ಗಡಿಬಿಡಿಯಿಂದ ಬರುವುದು ಹಾಲ್ ಟಿಕೇಟ್ ಸರಿಯಾಗಿ ನೋಡದೆ, ನಂಬರ್ ಸರಿಯಾಗಿ ಗಮನಿಸದೆ ಇನ್ಯಾರದ್ದೋ ನಂಬರಿನಲ್ಲಿ ಬಂದು ಕೂರುವುದು ಮಾಡುತ್ತಾರೆ. ತಪ್ಪುತಪ್ಪಾಗಿ ನಂಬರ್ ಬರೆದು ವೈಟ್ನರ್ಗಾಗಿ ಚಡಪಡಿಸುತ್ತಿರುತ್ತಾರೆ. ರೂಮ್ ಸೂಪರ್ವೈಸರ್ಗಳು “ಸಹಿ ಹಾಕಿ” ಎಂದರೆ ಇನ್ಯಾರದ್ದೋ ನಂಬರಿನ ಎದುರು ಸಹಿ ಮಾಡಿ ಅವರನ್ನೇ ಪೇಚಿಗೆ ಸಿಲುಕಿಸುತ್ತಾರೆ. ತಪ್ಪು ಎಂಟ್ರಿ ಮಾಡಿ ಪರೀಕ್ಷಕರಿಗೇ ಪರೀಕ್ಷೆ ಕೊಡುತ್ತಾರೆ. ನಮ್ಮ ಕಾಲದಲ್ಲಿ ಉಪಯೋಗ ಇತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ಪರೀಕ್ಷಾ ಕೊಠಡಿಗೆ ಹೋಗುವವರೆಗೂ ಓದುತ್ತಿದ್ದೆವು. ಈಗ ಪರೀಕ್ಷಾರ್ಥಿಗಳೂ ಆರಾಮಾಗಿ ಬರುತ್ತಾರೆ. ಹಾಲ್ ಟಿಕೆಟ್ ಐಡಿ ಕಾರ್ಡ್ ಕಡ್ಡಾಯ ಎಂದು ತಿಳಿದಿದ್ದರೂ “ಅವೆಲ್ಲಾ ಬೇಕೇ ಬೇಕಾ!’’ ಎನ್ನುವ ಹಾಗೆ ಮುಖಮಾಡಿಕೊಂಡಿರುತ್ತಾರೆ. ಮೊಬೈಲ್ ತಂದು ಸ್ವಲ್ಪವೂ ಅಂಜಿಕೆ ಇಲ್ಲದೆ ಉಪನ್ಯಾಸಕರ ಬಳಿ “ಜಾಗ್ರತೆ” ಎನ್ನುವ ಆಂಗಿಕ ಭಾಷೆಯಲ್ಲಿಯೇ ಕೊಡುತ್ತಾರೆ. ಇನ್ನುಕೆಲವರು ನಾಲ್ಕೈದು ಪೆನ್ ತಂದಿರುತ್ತಾರೆ ಒಂದು ಪೆನ್ನಿನಲ್ಲೂ ಸರಿಯಾಗಿ ಬರೆಯುವುದಿಲ್ಲ. ಇನ್ನುಕೆಲವರು ಟೈಮ್ ನೋಡಲು ಬೇಕಾಗಿ ವಾಚನ್ನು ಬಲಗೈಗೆ ಕಟ್ಟಿಕೊಂಡಿರುತ್ತಾರೆ. ಇನ್ನು ಕೆಲವರು ಅವಕಾಶವಿದ್ದರೆ ಎದುರುಬೆಂಚಿಗೆ ವಾಚನ್ನು ಕಟ್ಟಿಬಿಡುತ್ತಾರೆ. ಯಾರಾದರೂ ಸಹಾಯಕ್ಕೆ ಬರಬಹುದೇ ಎಂದು ವಾಚ್ ಮಾಡುತ್ತಾರೆ… ಹುಡುಗ-ಹುಡುಗಿ ಎನ್ನುವ ಭೇದ ಹೊರಗೆ ಮಾಡಿಕೊಂಡರೂ ಮಾಡಬಹುದು ಪರೀಕ್ಷಾ ಕೊಠಡಿಯಲ್ಲಂತೂ ಹುಡುಗ-ಹುಡುಗಿಯರು ಎನ್ನುವ ಭೇದವಿಲ್ಲದೆ ಸನ್ಮಿತ್ರರೇ ಆಗಿರುತ್ತಾರೆ. ಎಷ್ಟೋ ವರ್ಷದ ನಂಟಸ್ತಿಕೆ ಎಂಬಂತೆ ಉತ್ತರ ಕೊಡುವ-ತಗೆದುಕೊಳ್ಳುವ ವಿನಿಮಯ ಚತುರರಾಗಿರುತ್ತಾರೆ.
‘ಸಂಜ್ಞಾ ಸಿದ್ಧಾಂತ’ ಯಾವ ಸಿದ್ಧಾಂತ ಇದು? ಯಾವ ಪುಸ್ತಕದಲ್ಲಿದೆ? ಎನ್ನಬೇಡಿ, ಹುಡುಕಬೇಡಿ! ಇದೊಂದು ರೀತಿಯ ನನ್ನ ಅನುಭವ ಸಿದ್ದಾಂತ. “ಕಣ್ಣೂ ಕಣ್ಣೂ ಕಲೆತಾಗ…’’ ಎನ್ನುವಂತೆ ಕಣ್ಣುಗಳ ಮೂಲಕ, ಕೈಗಳ ಮೂಲಕ, ಕೈಬೆರಳುಗಳ ಮೂಲಕ, ಕರೆದು, ಕಾಲಿನಿಂದ ಮುಂದಿರುವವರನ್ನು ಸ್ಪರ್ಶಿಸಿ ತಮ್ಮತ್ತ ಸೆಳೆಯುವ ಮೂಲಕ – ಹೀಗೆ ಉತ್ತರ ಪಡೆಯುವ ಹತ್ತಾರು ತಂತ್ರಗಾರಿಕೆಗಳನ್ನು ನಡೆಸುತ್ತಿರುತ್ತಾರೆ. ಪಿಸಿ ಪಿಸಿ ಮಾತುಗಳು ಎಂದೇ ಜೋರಾಗಿಯೇ ಮಾತನಾಡುತ್ತಿರುತ್ತಾರೆ. ಇದು ರೂಮ್ ಸೂಪರ್ವೈಸರ್ಗಳಿಗೆ ಪಿಸು ಮಾತಲ್ಲ ಪೇಸು-ಹೇಸು ಮಾತು ಅನ್ನಿಸುತ್ತಿರುತ್ತದೆ. ಪರೀಕ್ಷಾರ್ಥಿಗಳು ಉತ್ತರ ಪತ್ರಿಕೆಗಳನ್ನು ಬದಲಾಯಿಸಬಹುದು, ಇಲ್ಲವೇ ಬೇರೊಬ್ಬರ ಉತ್ತರ ಪತ್ರಿಕೆಗೆ ಇನ್ನೊಬ್ಬರು ಬರೆದುಕೊಡಬಹುದು ಇತ್ಯಾದಿ ಹೊಸ ಹೊಸ ತಂತ್ರಗಾರಿಕೆಗಳನ್ನು ಮಾಡುತ್ತಿರುತ್ತಾರೆ. ಮುನ್ನಾ ಬಾಯಿ ಎಂಬಿಬಿಎಸ್ ಸಿನೆಮಾ ಇಲ್ಲಿ ನೆನಪಿಗೆ ಬರಬಹುದು. ಕೊರೊನಾ ನಿಮಿತ್ತ ಮಾಸ್ಕ್ ಕಡ್ಡಾಯವಾದಾಗ ಅದರಲ್ಲಿಯೇ ಮೈಕ್ರೋ ಡಿವೈಸ್ಗಳನ್ನು ಅಳವಡಿಸಿ ಕಾಪಿ ಹೊಡೆಯುವ ಪ್ರಯತ್ನ ಮಾಡಿ ಕೆಲವರು ಬುದ್ಧಿವಂತರಾಗ ಹೊರಟ ವಿಷಯ ಎಲ್ಲರಿಗೂ ತಿಳಿದಿರುವಂತಹದ್ದೆ. ಅಂಥ ಅನ್ಯಾಯದ ಮಾಸ್ಕನ್ನೂ ಕಳಚಿ ಬುದ್ಧಿವಂತ ಹುಡುಗರಿಗೆ ಅನ್ಯಾಯ ಮಾಡುತ್ತಿದ್ದ ದುರುಳರ ಮಾಸ್ಕ್ ಕಳಚಿದವರು ಅದಕ್ಕಿಂತ ಬುದ್ಧಿವಂತರೇ ಸರಿ!
ಇನ್ನು ಕೆಲವರಿಗೆ ಪರೀಕ್ಷೆಗೆ ಬಂದಾಗಲೇ ವಿಪರೀತ ದಾಹ, ನೀರು ಕುಡಿಯುವ ಅಭ್ಯಾಸ. ಬೇಕೋ ಬೇಡವೋ ನೀರು ಬೇಕು! ಮೇಲ್ವಿಚಾರಕರ ಗಮನವನ್ನು ಬೇರೆಡೆ ಸೆಳೆಯಬೇಕು ಅವರುಗಳಿಗೆ. ಪರೀಕ್ಷೆ ಮುಗಿಯುವಷ್ಟರಲ್ಲಿ ಮೇಲ್ವಿಚಾರಕರು “ಸದ್ಯ ಮುಗಿಯಿತಲ್ಲ ಡ್ಯೂಟಿ” ಎನ್ನುತ್ತಾ ನೀರು ಕುಡಿಯಬೇಕು ಅಷ್ಟೆ! ಕೆಲವೊಮ್ಮೆ ಮೇಲ್ವಿಚಾರಕರು ಕುಳಿತುಕೊಳ್ಳಲು ಕುರ್ಚಿ ಹಾಕಿರುವುದಿಲ್ಲ ತಿರುಗಾಡುತ್ತಲೇ ಇರಬೇಕು. ಹಾಗೆ ಶತಪಥ ತಿರುಗುವಾಗ ಮುಂದೆ ಹೋದರೆ ಹಿಂದೆ. ಹಿಂದೆ ಹೋದರೆ ಮುಂದಿನ ವಿದ್ಯಾರ್ಥಿಗಳು ಕೇಳಿ ಬರೆಯುವ ಪ್ರಯತ್ನ ಮಾಡುತ್ತಾರೆ. ಮೇಲ್ವಿಚಾರಕರು ಮೆತ್ತಗಿದ್ದರೆ ಎಲ್ಲಿಂದ ಎಲ್ಲಿಗೆ ಬೇಕಾದರೂ ಉತ್ತರಗಳು ತಲಪಬಹುದು. ಆ ಸೈಕಲ್ ಗ್ಯಾಪ್ನ ಉತ್ತರ ವಿನಿಮಯ ವಿಶ್ವಾಮಿತ್ರರ ಹೆಂಡತಿಯ ಹೆಸರು “ಮೇನಕಾದಿಂದ… ಏನಕ್ಕಾ” ಆಗಿ ಬಲವಾಗಿ ಮ್ಯುಟೆಂಟ್ ಆಗಿರುತ್ತದೆ. ರಬ್ಬರ್, ಸ್ಕೇಲ್, ಪೆನ್ಸಿಲ್ ಕೊಡುವ ಕೇಳುವ ನೆಪ, ಕಾಲ್ಕ್ಯುಲೇಟರ್ ಕೊಡುವ ನೆಪದಲ್ಲಿ ಉತ್ತರವನ್ನು ತೋರಿಸುವುದು ಸಾಮಾನ್ಯ ಬಿಡಿ. ಪರೀಕ್ಷಾ ಕಾರ್ಯಕ್ಕೆ ತೆರಳಿದ ಶಿಕ್ಷಕರು ಶಥಪಥ ತಿರುಗಿ ಇನ್ನೇನು ಕುಳಿತುಕೊಳ್ಳಬೇಕು ಎನ್ನುವಾಗ ಬೇಕಂತಲೇ ಹೆಚ್ಚುವರಿ ಹಾಳೆ ಕೇಳುವ ಜಾಣರು. ಅವರ ಬಳಿ ಹೋದಾಗ ಸುಮ್ಮನಿದ್ದು ಬೇರೆ ಕಡೆ ಹೋದಾಗ ಮತ್ತೆ ಹೆಚ್ಚುವರಿ ಉತ್ತರ ಹಾಳೆಗಳನ್ನು ಕೇಳುವವರೂ ಇಲ್ಲದಿಲ್ಲ. “ನಂಬರ್, ತಾರೀಖು, ಸಹಿ, ಪ್ರಶ್ನೆ ಸಂಖ್ಯೆ, ಕ್ಯೂಪಿ ಕೋಡ್ ಎಲ್ಲಾ ಸರಿಯಾಗಿದೆಯಾ ನೋಡಿ ಉತ್ತರಪತ್ರಿಕೆಗೆ ಮೂರುಗಂಟು ಹಾಕ್ರಪ್ಪ” ಎಂದು ಎಷ್ಟು ಬಾರಿ ಹೇಳಿದರೂ ಕಡೆಗೆ ಉಳಿಸಿಕೊಳ್ಳುವ ಭೂಪರು ಅದೆಷ್ಟೋ? ಉತ್ತರಪತ್ರಿಕೆಗಳನ್ನು ಕಟ್ಟಲು ದಾರ ಕೊಡುವಾಗ ಕೆಲವರು ಗಮನಿಸದೆ “ಹಗ್ಗ ಕೊಡಿ” (ನೂಲಿಗೂ, ದಾರಕ್ಕೂ ಹಗ್ಗಕ್ಕೂ ಇರುವ ವ್ಯತ್ಯಾಸ ಅನೇಕರಿಗೆ ತಿಳಿದಿಲ್ಲ) ಎಂದು ಕೇಳುತ್ತಿದ್ದ ವಿದ್ವಜ್ಜನರೂ ಇದ್ದಾರೆ. ಇದನ್ನು ತಪ್ಪಿಸಲೆಂದೇ ಪರೀಕ್ಷಾ ಮಂಡಳಿಯವರೇ ಮೇನ್ ಆನ್ಸರ್ ಸ್ಕ್ರಿಪ್ಟಿನ ಹಾಳೆಗಳನ್ನು ಹೆಚ್ಚು ಮಾಡಿದ್ದಾರೆ. ಮ್ಯಾಪ್, ಗ್ರಾಫ್ ಹಾಳೆಗಳನ್ನು ಯದ್ವಾತದ್ವಾ ಕಟ್ಟುವುದು. ಎಷ್ಟು ಹಾಳೆಗಳನ್ನು ಉಪಯೋಗಿಸಿದ್ದೇವೆ ಎನ್ನುವುದನ್ನು ಬರೆಯದೆ ಮರೆತುಹೋಗಿ ಕಡೆಗೆ ಮೇಲ್ವಿಚಾರಕರಿಗೆ ತಲೆಬಿಸಿ ಮಾಡುತ್ತಾರೆ. ಇನ್ನು ಕೆಲವರು ಮಹಾನ್ ಪಂಡಿತರು ಎನ್ನುವ ಹಾಗೆ ಕಡೆಯ ಐದು ನಿಮಿಷಗಳಲ್ಲಿ ಅನಗತ್ಯ ಉತ್ತರ ಬರೆಯುವ ವೇಗವನ್ನು ಹೆಚ್ಚಿಸಿಕೊಳ್ಳುತ್ತಾರೆ. ಯಾವ ಪರೀಕ್ಷಾ ಕಾರ್ಯಕ್ಕೆ ಹೋದರೂ ಗಣಿತ ಮತ್ತು ಕನ್ನಡ ಭಾಷೆ ಪರೀಕ್ಷೆಗೆ ಸೂಪರ್ವೈಸರ್ಗಳಾಗಿ ಹೋಗಬಾರದು. ಎಡಿಶಿನಲ್ ಶೀಟ್ ಕೇಳಿ ಕೇಳೀ ಸುಸ್ತು ಮಾಡಿಸುತ್ತಾರೆ.
ಪರೀಕ್ಷಾ ಅವಧಿಯ ಕಡೆಯ ಬೆಲ್ ಆದ ನಂತರವೂ ಪ್ಲೀಸ್… ಪ್ಲೀಸ್ ಎನ್ನುತ್ತಾ ಶಿಕ್ಷಕರು ಉತ್ತರಪತ್ರಿಕೆ ಕಸಿಯುವವರೆಗೆ ಬರೆಯುತ್ತಲೇ ಇರುತ್ತಾರೆ. ಆದರೆ ನಿಜವಾಗಿಯೂ ಅಧ್ಯಯನ ಮಾಡಿ ಬರೆಯುವವರು, ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ವರ್ತನೆಯಲ್ಲಾಗಲೀ, ಉತ್ತರಪತ್ರಿಕೆಗಳನ್ನು ನೀಡುವಲ್ಲಿಯಾಗಲೀ ಯಾವುದೇ ಗೊಂದಲಗಳಿರುವುದಿಲ್ಲ.
ಇನ್ನು ಪ್ರಶ್ನೆಪತ್ರಿಕೆ ಓದುವ ಉತ್ಸಾಹ ಬರೆಯುವುದರಲ್ಲಿ ಕೆಲವರಿಗೆ ಇರುವುದಿಲ್ಲ. “ಪರೀಕ್ಷೆ ಎನ್ನುವುದೊಂದು ಯುದ್ಧ” ಎಂದಂತೆ ಎಕ್ಸಾಂ ಹಾಲ್ನಲ್ಲಿ ಮೊದಲ ಅರ್ಧ ಗಂಟೆ ಸರಿ ಸುಮಾರು ಗದ್ದಲ ಗೋಜಲು ಹೆಚ್ಚು. ಕಾರಣ ಆ ಸಮಯ ಪರೀಕ್ಷಾ ಮೇಲ್ವಿಚಾರಕರು ಹಾಲ್ ಟಿಕೇಟ್, ಐಡಿ ಕಾರ್ಡ್ ನೋಡುವ, ಸಹಿ ತೆಗೆದುಕೊಳ್ಳುವುದರಲ್ಲಿ ವ್ಯಸ್ತವಾಗಿರುತ್ತಾರೆ. ಅನಂತರದ ಒಂದು ಗಂಟೆ ಶಾಂತಮಯವಾಗಿರುತ್ತದೆ. ನಂತರೆ ಇಬ್ಬರಿಗೂ ಗಡಿಬಿಡಿ. ಹೆಚ್ಚುವರಿ ಹಾಳೆಗಳನ್ನು ನೀಡುವ ಸಮಯ – ತೆಗೆದುಕೊಳ್ಳುವ ಸಮಯ. ಕಡೆಯ ಅರ್ಧ ಗಂಟೆ “ಮಾಡು ಇಲ್ಲವೆ ಮಡಿ” ಸಂದರ್ಭ. “ಕೇಳಿ ಬರೆಯಲೇಬೇಕು” ಎನ್ನುವ ಹಠಕ್ಕೆ ಪರೀಕ್ಷಾರ್ಥಿಗಳು ಬಿದ್ದರೆ ಇವರ ಹಠವನ್ನು ಮುರಿಯಲೇಬೇಕು ಎಂಬಂತೆ ಮೇಲ್ವಿಚಾರಕರೂ ಇರುತ್ತಾರೆ. “ಮಾತನಾಡಬೇಡಿ” ಎಂದರೆ ನಮ್ಮನ್ನೆ ಸುಟ್ಟುರಿಯುವಂತೆ ಕೆಲ ಪರೀಕ್ಷಾರ್ಥಿಗಳು ಗುರಾಯಿಸುತ್ತಾರೆ. ಇನ್ನು ಡೈರಿ ತುಂಬಿಸುವ ಕೆಲಸ ಮೇಲ್ಚಿಚಾರಕರ ಪಾಲಿಗೆ ಪರೀಕ್ಷೆ ಇದ್ದಂತೆ. ಯಾರಾದರೂ ಉತ್ತರಪತ್ರಿಕೆ ಹಾಗೆ ತೆಗೆದುಕೊಂಡು ಹೋದರೆ ಅನ್ನುವ ಭಯವೋ ಭಯ. ಒಟ್ಟು ಶಿಕ್ಷಕರಿಗೆ ಮೂರು ಮೂರುವರೆಗಂಟೆ ಪರೀಕ್ಷಾ ಕಾರ್ಯ ಮುಗಿಸಿದರೆ ಸಾಕು ಎನ್ನುವ ಹಾಗಾಗಿರುತ್ತದೆ. ಚೀಟಿಗಳೇನಾದರೂ ಇದ್ದರೆ ಕೊಡಿ ಎಂದರೆ ಕೊಡದವರು “ಸ್ಲ್ವಾಡ್ ಬಂದಿದೆ” ಎಂದು ಹೆದರಿಸಿದ ಕೂಡಲೆ ಮೇಲಿಂದ ಮೇಲೆ ಚೀಟಿಗಳನ್ನು ಮೇಲ್ವಿಚಾರಕರ ಕೈಯಲ್ಲಿ ತುರುಕಿದ ಉದಾಹರಣೆಗಳು ಇವೆ. ಇವೆಲ್ಲಾ ಏಕೆ?
ಈಗಿನ ವಿದ್ಯಾರ್ಥಿಗಳು ಮೊದಲೆ ಮ್ಯಾಚ್ ಫಿಕ್ಸಿಂಗ್ ಅನ್ನುವ ಹಾಗೆ ಸಿಲಬಸ್ಗಳನ್ನು ಹಂಚಿಕೊAಡು ಓದಿಬಂದು ಬರೆಯುವವರೂ ಇರುತ್ತಾರೆ. ಇನ್ನು ಪ್ರಶ್ನೆಪತ್ರಿಕೆಗಳನ್ನು ಪಡೆಯುತ್ತೇವೆ ಎಂದು ಯಾವುದೋ ನಕಲಿ ಪ್ರಶ್ನೆಪತ್ರಿಕೆಗಳನ್ನು ಪಡೆದು ಪರೀಕ್ಷಾ ಕೊಠಡಿಗೆ ಬಂದು ಮೋಸ ಹೋಗಿದ್ದೇವೆ ಎಂದು ತಿಳಿಯುತ್ತಲೇ ತಲೆಸುತ್ತಿ ಬೀಳುವ ನಿದರ್ಶನಗಳು ಇರುತ್ತವೆ. ಶಿಸ್ತಿನ ಮೇಲ್ವಿಚಾರಕರೇನಾದರೂ ಬಂದರೆ ಕೂಡಲೆ ಪೆಚ್ಚಾಗುವವರು ಅನೇಕರು. ಇನ್ನು ನಮ್ಮ ಬ್ಯುಸಿನೆಸ್ ನಡೆಯದು ಎಂದು ಜೋರಾಗಿ “ಈ ಯಮ್ಮ ನಾ ಅಲ್ಗಾಡಕ್ ಬಿಡಲ್ಲ ಕಣ್ಲ!’’ ಎಂದು “ಓ”ಕಾರ “ಊ”… ಕಾರ ಹಾಕುತ್ತಾರೆ. ಇನ್ನು ಕೆಲವರು ಕಾಪಿ ಚೀಟಿ ಏನೂ ತಂದಿರುವುದಿಲ್ಲ, ಆದರೂ ವಿಚಿತ್ರವಾಗಿ ವರ್ತಿಸತ್ತಾರೆ. ಆಚೆ ಬನ್ನಿ ಒಂದು ಕೈ ನೋಡಿಕೊಳ್ಳುತ್ತೇವೆ ಎಂದೇ ಆರೋಗೆಂಟ್ ಆಗಿ ಬಿಹೇವ್ ಮಾಡುವ ವಿದ್ಯಾರ್ಥಿ ಮಹಾಶಯರೂ ಇರುತ್ತಾರೆ. ಕೆಲ ಹುಂಬ ವಿದ್ಯಾರ್ಥಿಗಳು ಕಡೆ ಬೆಲ್ ಆಗುವುದೇ ತಡ ಉತ್ತರಪತ್ರಿಕೆಗಳನ್ನು ಹಿಡಿದು ಪರಾರಿಯಾಗುತ್ತಾರೆ. ತಕ್ಷಣ ಎಚ್ಚೆತ್ತ ಉಪನ್ಯಾಸಕರು ಬೈಕ್ನಲ್ಲಿ ಚೇಸ್ ಮಾಡಿ ಉತ್ತರ ಪತ್ರಿಕೆಗಳನ್ನು ಏದುಸಿರುಬಿಡುತ್ತಾ ತಂದ ಉದಾಹರಣೆಗಳೂ, ವಿದ್ಯಾರ್ಥಿಗಳ ಈ ರೀತಿಯ ಹುಡುಗಾಟಿಕೆಯಿಂದ ಕೋರ್ಟ್ ಮೆಟ್ಟಿಲೇರಿದ ಅನೇಕ ಶಿಕ್ಷಕರ ವ್ಯಥೆಗಳೂ ಇಲ್ಲದಿಲ್ಲ.
ಇಷ್ಟು ಭಯ-ಮುಜುಗರ ಪಡುವ ವಿದ್ಯಾರ್ಥಿಗಳಿಗೆ ಒಂದು ಕಿವಿ ಮಾತು. ಕಾಲೇಜಿನ ತರಗತಿಯೊಂದಕ್ಕೆ ನೀವು ದಾಖಲಾಗಿ ರೋಲ್ ನಂಬರ್ ಕೊಟ್ರೆ ಮುಗಿಯಿತು ಪರೀಕ್ಷೆಗೆ ರಿಜಿಸ್ಟರ್ ನಂಬರ್ ಬರುತ್ತದೆ ಎಂಬುದು ಗ್ಯಾರಂಟಿ. ಹೀಗಿರುವಾಗ ಮೊದಲ ದಿನದಿಂದ ಅಲ್ಲದೆ ಇದ್ದರೂ ಪರೀಕ್ಷೆಗೆ ಸಾಕಷ್ಟು ದಿನ ಮುಂಚಿತವಾಗಿ ತಯಾರಿ ಮಾಡಿಕೊಳ್ಳಬೇಕು. ಬೇಕಾಗಿದ್ದನ್ನು ಮಾಡದೆ ಕಾಪಿ ಚೀಟಿ ಬರೆಯುವ, ಮೈಕ್ರೋ ಜೆರಾಕ್ಸ್ ಮಾಡುವ ಭಂಡಾಟಕ್ಕೆ ಏಕೆ ಇಳಿಯಬೇಕು? ವಿದ್ಯಾರ್ಥಿಗಳಿಗೆ ಕಾಪಿ ಹೊಡೆಯಬೇಕು ಹಾಗೆ ಬರೆಯಬೇಕು ಎನ್ನುವ ಹಠವಿದ್ದರೆ ರೂಮ್ ಸೂಪರ್ವೈಸರ್ಗಳಿಗೆ ಕಾಪಿ ಹೊಡೆಯುವವರನ್ನು ಶಿಕ್ಷೆಗೆ ಒಳಪಡಿಸುವಂತೆ ಶಿಫಾರಸು ಮಾಡುವ ಅವಕಾಶವಿರುತ್ತದೆ. ಯಾವುದೇ ರೀತಿಯ ಮಾಲ್ಪ್ರಾಕ್ಟಿಸನ್ನು ಮಾಡುವ ಹಾಗಿಲ್ಲ. ಅದರ ವಿರುದ್ಧ ಎಲ್ಲ ಕಾನೂನುಗಳು ಶಿಕ್ಷಕರ ಪರವಾಗಿಯೇ ಇರುತ್ತವೆ. ಎಲ್ಲ ತಿಳಿಯುವ ವಿದ್ಯಾರ್ಥಿಗಳಿಗೆ ಇದೊಂದು ವಿಚಾರದಲ್ಲಿ ಜಾಣ ಕಿವುಡು-ಕುರುಡು ಯಾಕೋ ಗೊತ್ತಿಲ್ಲ! ಉತ್ತರಪತ್ರಿಕೆ ಏನೂ ಬರೆಯದೆ ಖಾಲಿ ಇದ್ದರೆ ಸಮಸ್ಯೆಯಿಲ್ಲ.
ಪರೀಕ್ಷಾರ್ಥಿಗಳು ಅದರ ಮೇಲೆ ರಿಜಸ್ಟರ್ ನಂಬರ್ ಒಮ್ಮೆ ನಮೂದು ಮಾಡಿದರೆ ಮುಗಿದುಹೋಯಿತು; ಅದಕ್ಕೆ ಉತ್ತರಗಳಿದ್ದರೂ ಬೆಲೆ ಉತ್ತರವಿಲ್ಲದಿದ್ದರೂ ಬೆಲೆ. ಹೀಗೆ ಒಮ್ಮೆ ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಯೊಬ್ಬನ ಜೇಬಿನಲ್ಲಿ ಮುರುಮುರು ಶಬ್ದ ಕೇಳಿಸುತ್ತಿತ್ತು. “ಏನಿದೆ ಜೇಬಿನಲ್ಲಿ?’’ ಎಂದು ಗದರಿಸಿದಾಗ ಶ್ಯಾಂಪೂ ಸ್ಯಾಚೆಟ್ ಒಂದನ್ನು ತೆಗೆದುಕೊಟ್ಟ ತಕ್ಷಣವೇ “ಪರೀಕ್ಷೆ ಬರೆದ ಮೇಲೆ ಸದ್ಯ ಮುಗಿಯಿತು ಅಂತ ತಲೆತೊಳೆದುಕೊಳ್ಳೋಕೆ” ಎಂದೆ. ಅವನೂ ಹ್ಞೂಂ.. ಅನ್ನುವಂತೆ ತಲೆಯಾಡಿಸಿ ನಗುತ್ತಲೇ ತನ್ನ ಸ್ನೇಹಿತರನ್ನು ನೋಡಿದ. ಪರೀಕ್ಷೆ ಭಾರ ಅನ್ನಿಸಿದರೆ ಈ ತೆರನಾದ ಸನ್ನಿವೇಶಗಳು ಬರುತ್ತವೆ.
ಇನ್ನು ಕೆಲವರು ಎಚ್ಚರವಿದ್ದರೂ ಪರೀಕ್ಷಾ ಕೊಠಡಿಯಲ್ಲಿ ಒಂದು ರೀತಿಯ ಭ್ರಾಮಕಾವಸ್ಥೆಯಲ್ಲಿ ಇದ್ದಂತೆ ತೋರುತ್ತದೆ. ಅಪರಾತ್ರಿಯ ಓದು ಕೆಲವೊಮ್ಮೆ ಹಾಗೆ ಮಾಡಿರುತ್ತದೆ. ಕಣ್ಣುಗಳು ಕೆಂಪಿನ ರಂಗಿಗೇರಿರುತ್ತವೆ ಹತ್ತಿರ ಹೋದರೆ ಜಂಡು, ವಿಕ್ಸ್ ವಾಸನೆ ಬರುತ್ತಿರುತ್ತಾರೆ. ಅದೇಕೋ ಗೊತ್ತಿಲ್ಲ, ಪರೀಕ್ಷಾ ಕೊಠಡಿಗೆ ಬಂದರೆ ಪರೀಕ್ಷಾರ್ಥಿಗಳ ಸೊಂಟಕ್ಕೆ ಬಲವೆ ಇರೊದಿಲ್ವೊ? ಏನೋ? ಆ ಕಡೆ ಈ ಕಡೆ ನುಲಿಯುತ್ತಾರಲ್ಲ! ಎಂಬ ಸಂಶಯ ಬರುತ್ತದೆ. ಪರೀಕ್ಷೆ ಮುಗಿದ ಮೆಲೆ ಗಾಡಿಗೆ ಕೀ ಹಾಕಿ ಸ್ಟಾರ್ಟ್ ಮಾಡುವುದೊಂದೇ ಕಾಣಿಸುತ್ತದೇ ಕಣ್ಣುಮುಚ್ಚಿ ಕಣ್ಣುಬಿಡುವಷ್ಟರಲ್ಲಿ ಮುಂದೇ ಎಲ್ಲಿಯೋ ಇರುತ್ತಾರೆ. ಹೀಗೆ ಅವರಸರದಲ್ಲಿ ರಸ್ತೆಯಲ್ಲಿ ಮುಂದೋಡುವ ಬದಲು ಶೈಕ್ಷಣಿಕ ಪರೀಕ್ಷೆಗಳಲ್ಲಿ ಮುಂದೋಡಿದರೆ ಜೀವನ ಪರೀಕ್ಷೆಯಲ್ಲೂ ಮುಂದೋಡುತ್ತಲೇ ಇರಬಹುದು ಎಂಬ ಅರಿವು ನಮ್ಮ ವಿದ್ಯಾರ್ಥಿಗಳಿಗೆ ಮನದಟ್ಟಾಗಬೇಕು.
ಪರೀಕ್ಷೆಗಳು ನಿರಂತರ ನಡೆಯುತ್ತಿರುತ್ತವೆ ಅವುಗಳಲ್ಲಿ ಪಾಸಾಗಬೇಕು ನಿಜ! ಪಾಸಾಗಲೇಬೇಕು ಆ ಕಾರಣಕ್ಕೆ ನಾವು ಏನನ್ನೂ ಮಾಡುತ್ತೇವೆ ಎನ್ನುವುದು ದುಂಡಾವರ್ತನೆ. ಪಾಸೋ-ನಪಾಸೋ ಪರೀಕ್ಷೆಗಳು ನಮ್ಮ ಮನಸ್ಸನ್ನು ಪಕ್ವಗೊಳಿಸುತ್ತವೆ. ಮುಂದಿನ ಹೋರಾಟದ ಹಾದಿಯನ್ನು ಸುಗಮ ಮಾಡಿಕೊಡುತ್ತವೆ. ಕನಕದಾಸರ ಕಥೆಯಲ್ಲಿ ಗುರುಗಳ ಆಜ್ಞೆಯಂತೆ ಬಾಳೆಹಣ್ಣು ತಿನ್ನುವ ಕಥೆಯಲ್ಲಿ ಗುರುಗಳು ಹೇಳಿದಂತೆ ಮಾಡಬೇಕು ಎನ್ನುವ ಕಾರಣಕ್ಕೆ ಇತರ ಶಿಷ್ಯರು ಗೆದ್ದರು. ಆದರೆ ಗುರುಗಳ ಪ್ರಶ್ನೆಯನ್ನು ನಿಜವಾಗಿ ಅರ್ಥಮಾಡಿಕೊಂಡ ಕನಕನಿಗೆ ಯಾರೂ ಇಲ್ಲದ ಜಾಗ ದೊರೆಯಲೇ ಇಲ್ಲ. ಅವನು ವಸ್ತುಶಃ ಪರೀಕ್ಷೆಯಲ್ಲಿ ಸೋತರೂ ಅಂತರ್ದೃಷ್ಟಿಯಿಂದ ಗೆಲ್ಲುತ್ತಾನೆ. ಧೌಮ್ಯ ಮಹರ್ಷಿಗಳು ಉದ್ದಾಲಕನಿಗೆ ಪರೀಕ್ಷೆ ಒಡ್ಡುವುದೂ ತನ್ನ ಶಿಷ್ಯನ ಪ್ರಾಮಾಣಿಕತೆಯನ್ನು ಒರೆಗೆ ಹಚ್ಚಲು. ಅಂದರೆ ಪರೀಕ್ಷೆ ಪ್ರಾಮಾಣಿಕತೆಗೆ ಎಂದಾಯಿತಲ್ಲವೆ?
ಪರೀಕ್ಷೆಯ ವಿಧಗಳು ಒತ್ತಟ್ಟಿಗಿರಿಸಿ, ಕೇವಲ ಪರೀಕ್ಷೆ ಎಂಬ ಪದವನ್ನು ಮಾತ್ರ ತೆಗೆದುಕೊಂಡರೆ ಶೈಕ್ಷಣಿಕ ಮಾತ್ರವಲ್ಲದೆ ಸಾಮಾಜಿಕ ಜೀವನದ ಮಟ್ಟವನ್ನು ತೋರಿಸುತ್ತದೆ. ಬಿಳಿಹಾಳೆಯ ಹಾಗೆ ನಮ್ಮ ಜೀವನ ಇರಬೇಕು. ಉತ್ತೀರ್ಣರಾಗಲೇಬೇಕು ಎನ್ನುವ ಕುಪ್ರಯತ್ನದಲ್ಲಿ ತೊಡಗಿದರೆ ತಪ್ಪು ಬರೆದು ಚಿತ್ತು ಮಾಡಿದ ಹಾಳೆಯಂತೆ ಅಸ್ತವ್ಯಸ್ತವಾಗಿ ಕಾಣುತ್ತದೆ, ಜೀವನ. ಹಿಂದೆ ರಾಜನೊಬ್ಬ ತನ್ನ ಪ್ರಜೆಗಳ ಪ್ರಾಮಾಣಿಕತೆ ಅಳೆಯಲು ಹಂಡೆಯೊಂದನ್ನು ಇರಿಸಿ ಶುಭ್ರವಾದ ಹಾಲನ್ನು ಹಾಕಲು ಹೇಳಿದರೆ ಪ್ರಜೆಗಳು ಎಲ್ಲರೂ ಹಾಲು ಹಾಕಿ ನಾನೊಬ್ಬ ನೀರು ಹಾಕಿದರೆ ತೊಂದರೆ ಇಲ್ಲವೆಂದು ಎಲ್ಲರೂ ನೀರನ್ನೇ ಹಾಕಿ ಅವರ ವಂಚನಾ ಮನಃಸ್ಥಿತಿಯನ್ನು ಅವರೇ ತೋರಿಸಿಬಿಡುತ್ತಾರೆ. ಹೀಗಾಗಬಾರದು ಅಷ್ಟೇ!
ನಾವು ಪದವಿ ತರಗತಿಯಲ್ಲಿರುವಾಗಲೂ ಸಪ್ರೈಜ್ ಟೆಸ್ಟ್ ಎಂದು ಉಪನ್ಯಾಸಕರೊಬ್ಬರು ಪ್ರಶ್ನೆಗಳನ್ನು ಕೊಟ್ಟರೆ ಕೆಲವರು ಪ್ರಾಮಾಣಿಕವಾಗಿ ಬರೆದರೆ, ಇನ್ನು ಕೆಲವರು ಸುಮ್ಮನೆ ಕುಳಿತ್ತಿದ್ದರು, ಇನ್ನು ಕೆಲವರು ನೋಡಿ ಬರೆಯುತ್ತಿದ್ದರು. ನಮ್ಮ ಉಪನ್ಯಾಸಕರು ಅದನ್ನು ಗಮನಿಸಿ ಅವಧಿ ಮುಗಿದ ಬಳಿಕ ನಮ್ಮ ಉತ್ತರ ಪತ್ರಿಕೆಗಳನ್ನು ಕೇಳುತ್ತಾರೆ ಎಂದರೆ ಅವರು ಕೇಳಲೇ ಇಲ್ಲ. Ok! Keep it up with you only evaluate ಎಂದುಬಿಟ್ಟರು. ನಿಜವಾಗಿ ಬರೆದವರಿಗೆ ಅಯ್ಯೋ! ಎಂದಾದರೆ ಸುಮ್ಮನೆ ಕುಳಿತವರಿಗೆ ಖುಷಿಯಾದರೆ, ನೋಡಿ ಬರೆದವರಿಗೆ ಅವಮಾನವಾಯಿತು. ಪರೀಕ್ಷೆ ಎಂದ ಮೇಲೆ ಅದನ್ನು ಎದುರಿಸಿದವರಿಗಿಂತ ಬೇರೆ ಯಾರಿಗೂ ಅದನ್ನು ಮೌಲ್ಯಮಾಪನ ಮಾಡುವುದು ಅಷ್ಟು ಸುಲಭವಲ್ಲ.
ನಾನೂ ತರಗತಿಯಲ್ಲಿ ಕೆಲವೊಮ್ಮೆ ಪರೀಕ್ಷೆ ಕೊಟ್ಟರೆ ಹಾಗೆ ಮಾಡುತ್ತೇನೆ. ಇಲ್ಲವಾದರೆ ಸಮಯ ಏಕೆ ವ್ಯರ್ಥ ಮಾಡುವುದು ಎನ್ನುತ್ತಲೇ ಪ್ರಶ್ನೆಗಳನ್ನು ನೀಡಿ ಉತ್ತರ ಬರೆಯಿಸುತ್ತೇನೆ. ಓಪನ್ ಬುಕ್ ಎಕ್ಸಾಂ ಎನ್ನುವಂತೆ. ಏನೇ ಆಗಲಿ ಪ್ರಾಮಾಣಿಕತೆ ಮುಖ್ಯ. ಪ್ರಾಮಾಣಿಕತೆ ನಮ್ಮ ಮನೋಬಲವನ್ನು ಇಮ್ಮಡಿಗೊಳಿಸುತ್ತದೆ. ಅದರಿಂದ ನಾವು ಅರಾಮಾಗಿರುತ್ತೇವೆ. ಇಲ್ಲವಾದರೆ ನಮ್ಮ ಮನಸ್ಸಿಗೇ ಕಸಿವಿಸಿ, ಮುಜುಗರ, ಅಸಹನೆ ಇತ್ಯಾದಿಗಳು ಆಗುತ್ತಿರುತ್ತವೆ. ಕೆಲವರು ನಿರಂತರ ನಾನಾ ಪರೀಕ್ಷೆಗೆ ಒಳಗಾಗುತ್ತಿರುತ್ತಾರೆ, ಸೋಲು-ಗೆಲವು ಇದ್ದೇ ಇರುತ್ತದೆ. ಆದರೆ ನಾವುಗಳು ಸ್ವಯಂಪರೀಕ್ಷೆಗೆ ಒಳಗಾಗಬೇಕು, self assessment ಎನ್ನುತ್ತಾರಲ್ಲ ಹಾಗೆ. ನಮ್ಮನ್ನು ನಾವು ಮೌಲ್ಯಮಾಪನ ಮಾಡಿಕೊಂಡಾಗಲೇ ನಾವು ಮೌಲಿಕವಾಗುವುದು.
ಹರ ತನ್ನ ಭಕತರನ್ನು ತಿರಿವಂತೆ ಮಾಡುವ
ಒರೆದು ನೋಡುವ ಮಿಸುನಿಯ ಚಿನ್ನದಂತೆ
ಅರೆದು ನೋಡುವ ಚಂದನದಂತೆ
ಅರಿದು ನೋಡುವ ಕಬ್ಬಿನ ಕೋಲಿನಂತೆ
ಬೆದರದೆ ಬೆಚ್ಚದೆ ಇರ್ದಡೆ
ಕರವಿಡಿದೆತ್ತಿಕೊಂಬ, ನಮ್ಮ ರಾಮನಾಥನು
ಎಂಬ ಜೇಡರ ದಾಸಿಮಯ್ಯನ ವಚನ ಎಷ್ಟು ಮಾರ್ಮಿಕವಾಗಿದೆಯಲ್ಲವೆ? ಪ್ರಾಮಾಣಿಕತೆ ಎನ್ನುವ ಫಾರ್ಮುಲಾವನ್ನು ಅಳವಡಿಸಿಕೊಂಡರೆ ನಾವು ಎಂಥ ಪರೀಕ್ಷೆಯನ್ನೂ ಎದುರಿಸಬಹುದು ಗೆಲ್ಲಬಹುದು.
ಎಲ್ಲರೂ ಪೇಪರ್-ಪೆನ್ ಪರೀಕ್ಷೆಯನ್ನು ಎದುರಿಸುತ್ತೇವೋ ಇಲ್ಲವೋ, ಆದರೆ ಪ್ರಾಮಾಣಿಕತೆಯ ಪರೀಕ್ಷೆಯನ್ನು ಎದುರಿಸಿಯೇ ಎದುರಿಸುತ್ತೇವೆ. ಆತ ತಾನು ಅಳವಡಿಸಿಕೊಂಡ ಜೀವನಮೌಲ್ಯಗಳಿಂದಲೇ ಮೌಲ್ಯಮಾಪನಕ್ಕೊಳಪಡುತ್ತಾನೆ. ಪೇಪರ್-ಪೆನ್ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ಸಿಗುತ್ತದೆ. ಆದರೆ ವ್ಯಕ್ತಿತ್ವ ಪರೀಕ್ಷೆ ಒಮ್ಮೆ ಮಾತ್ರ ಬರುವುದು. ಇದೊಂದು ರೀತಿಯ ಒಟಿಪಿ ಇದ್ದಂತೆ! ಮತ್ತೆ ಮತ್ತೆ ಉಪಯೋಗಿಸುವ ಪಿನ್ ನಂಬರಿನಂತೆ ಮರಳಿ ಯತ್ನ ಮಾಡಲಾಗದು. ಒಟ್ಟು ಮನುಷ್ಯನಿಗೆ ಲೋಕಪರೀಕ್ಷೆ-ಲೇಖಪರೀಕ್ಷೆ ಎಂಬ ಎರಡೂ ಪರೀಕ್ಷೆಗಳು ಬರುತ್ತವೆ. ಎದುರಿಸಬೇಕು! ಗೆಲ್ಲಬೇಕು!