ಮಕ್ಕಳಿಗೆ ಮನೆಯಲ್ಲಿ ಅಮ್ಮನೇ ಕಲಿಸಬೇಕಾದ ಸಂಸ್ಕಾರ, ಶಿಕ್ಷಣ ಸಾಕಷ್ಟಿದೆ. ಆದರೆ ಶಾಲೆಯಲ್ಲಿ ಕಲಿಸಬೇಕಾಗಿದ್ದನ್ನೂ ಮನೆಯಲ್ಲಿ ಅಮ್ಮನೋ, ಅಪ್ಪನೋ ಕಲಿಸಬೇಕು ಅಂತಾದರೆ ಅಷ್ಟೊಂದು ಫೀಸ್ ಕೊಟ್ಟು ಶಾಲೆಗೆ ಕಳುಹಿಸುವ ಅಗತ್ಯವಾದರೂ ಏನಿದೆ? ಈಗೆಲ್ಲ ಮಕ್ಕಳ ಹೋಂವರ್ಕ್ನ್ನು ಶಾಲೆಯವರು ಮಕ್ಕಳಿಗಾಗಿ ಕೊಡುವುದಿಲ್ಲ. ಬದಲಾಗಿ ಅವರ ಅಮ್ಮಂದಿರಿಗಾಗಿ ಕೊಡುತ್ತಾರೆ. ಮನೆ ಕೆಲಸ, ಆಫೀಸ್ ಕೆಲಸವನ್ನೆಲ್ಲ ಮಾಡಿ, ಮಕ್ಕಳನ್ನು ನೋಡಿಕೊಂಡ ನಂತರವೂ ತಾಯಂದಿರ ತಾಳ್ಮೆ ಎಷ್ಟಿರುತ್ತದೆ ಎನ್ನುವುದರ ಪರೀಕ್ಷೆಗಾಗಿ ಈ ಹೋಂವರ್ಕಗಳು!
೧೯೯೫ರ ಜೂನ್ ತಿಂಗಳು. ಕಳೆದ ವಾರವಷ್ಟೇ ಕೊಂಡಿದ್ದ ಪಾಟೀಚೀಲ, ಉದ್ದದ ಛತ್ರಿ, ಹೊಸ ಚಪ್ಪಲಿ ತೊಟ್ಟು, ಮೊದಲ ಬಾರಿಗೆ ಶಾಲೆಯ ಯೂನಿಫಾರ್ಮ್ ಧರಿಸಿ ಜಿಟಿಜಿಟಿ ಮಳೆಯಲ್ಲಿ ಹೊರಟಾಗ ಏನೋ ಸಾಧಿಸಿದಷ್ಟು ಸಂಭ್ರಮ. ಜೊತೆಯಲ್ಲಿ ಅಕ್ಕಪಕ್ಕದ ಮನೆಯ ಸಹಪಾಠಿಗಳನ್ನು ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ನೈಟಿ ಮೇಲೊಂದು ಟವಲ್ ಹಾಕಿಕೊಂಡು ಒಂದು ಕೈಲಿ ನನ್ನ ಸ್ಕೂಲ್ಬ್ಯಾಗ್, ಇನ್ನೊಂದು ಕೈಲಿ ನನ್ನ ಊಟದ ಚೀಲ ಹಿಡ್ಕೊಂಡು, ಆಟೋವರೆಗೆ ಬಂದು ಕಣ್ತುಂಬ್ಕೊಂಡು ಕೈಬೀಸೋದಕ್ಕೆ ಅಮ್ಮನೂ ಬರಲಿಲ್ಲ. ಆಫೀಸಿಗೆ ಹೊರಟು ಬೈಕ್ನಲ್ಲಿ ನನಗಾಗಿಯೇ ಕಾಯುತ್ತ ಅಪ್ಪನೂ ಕೂತಿರಲಿಲ್ಲ.
ಎಲ್ಲಕ್ಕಿಂತ ಹೆಚ್ಚಾಗಿ ಹತ್ತೂರಿಗಿದ್ದ ಒಂದೇ ಶಾಲೆಗೆ ಹೋಗುತ್ತಿದ್ದ ನನಗೆ ಒಂದು ರೂಪಾಯಿಯೂ ಫೀಸೇ ಇರಲಿಲ್ಲ!
ನನ್ನ ಬ್ಯಾಗನ್ನು ನಾನೇ ತುಂಬಿಕೊಂಡು, ನನ್ನ ಬಾಕ್ಸ್ ಅನ್ನು ನಾನೇ ರೆಡಿಮಾಡಿಕೊಂಡು, ಅವುಗಳನ್ನು ನಾನೇ ಹೊತ್ತುಕೊಂಡು ಶಾಲೆಗೆ ಹೊರಟಿದ್ದೆ. ಮೊದಲ ದಿನ ಮಗಳು ಶಾಲೆಗೆ ಹೊರಟಿದ್ದಾಳೆ ಅಂತ ಅಮ್ಮನ ಕಣ್ಣಾಲಿಯೇನು ತುಂಬಲಿಲ್ಲ. “ಹರ್ ಫಸ್ಟ್ ಡೇ ಆಫ್ ಸ್ಕೂಲ್’’ ಅಂತ ಅಮ್ಮನ ವಾಟ್ಸಾಪ್ ಸ್ಟೇಟಸ್ ಅಪ್ಡೇಟ್ ಆಗಲಿಲ್ಲ. ಯಾಕಂದ್ರೆ ಆಗ ವಾಟ್ಸಾಪ್ ಇರಲ್ಲಿಲ್ಲ! ಸ್ಮಾರ್ಟ್ಫೋನೂ ಬಂದಿರಲಿಲ್ಲ!
ನನ್ನ ಮೊದಲ ದಿನದ ಸ್ಕೂಲು ಎನ್ನುವುದು ಅಪ್ಪ ಅಮ್ಮ ಉಸಿರು ಬಿಗಿಹಿಡಿದು ಕಾಯುವಷ್ಟು ಉದ್ವೇಗದ ವಿಷಯವೂ ಆಗಿರಲಿಲ್ಲ. ಯಾಕಂದ್ರೆ ಅಪ್ಪ ಅಮ್ಮ ಇಬ್ಬರಿಗೂ ಗೊತ್ತಿತ್ತು – ಮಕ್ಕಳು ಶಾಲೆಗೆ ಹೋಗೋದು ಒಂದು ಅನಿವಾರ್ಯ ಮತ್ತು ಅತ್ಯಗತ್ಯ ಪ್ರಕ್ರಿಯೆ ಎಂದು. ಹಾಗೆಯೇ ನನ್ನ ಬ್ಯಾಗ್ ತುಂಬೋದು, ನನ್ನ ಟಿಫಿನ್ ಬಾಕ್ಸ್ ರೆಡಿ ಮಾಡೋದು, ನನ್ನ ಹೊಂವರ್ಕ್ ಮಾಡೋದು, ನನ್ನ ಪರೀಕ್ಷೆಗೆ ತಯಾರಿ ನಡೆಸೋದು ಅಪ್ಪ ಅಮ್ಮನ ಕೆಲಸವಲ್ಲ; ಅದು ನನ್ನದೇ ಜವಾಬ್ದಾರಿ ಎನ್ನುವ ಅರಿವು ನನಗೂ ಇತ್ತು.
ನನಗೆ ಪರೀಕ್ಷೆ ಇದ್ದಾಗ ಅಮ್ಮನ ಬಿಪಿ ಜಾಸ್ತಿಯಾಗುತ್ತಿರಲಿಲ್ಲ, ಅಪ್ಪ ಆಫೀಸಿಗೆ ರಜಾ ಹಾಕಬೇಕೆಂದಿರಲಿಲ್ಲ! ಪಕ್ಕದ ಮನೆಯ ಸಹಪಾಠಿಗಿಂತ ನನಗೆ ಕಡಮೆ ಮಾರ್ಕ್ಸ್ ಬಂತೆಂದು ಅಮ್ಮನ ಹೊಟ್ಟೆಯಲ್ಲಿ ಉರಿಬೀಳುತ್ತಿರಲಿಲ್ಲ. ಗಣಿತ ನನ್ನ ತಲೆಗೆ ಹತ್ತುತ್ತಿಲ್ಲವೆಂದು ಅಪ್ಪನ ಕಾಫಿ ಗ್ಲಾಸ್ ಒಡೆಯುತ್ತಿರಲಿಲ್ಲ! ನನ್ನ ಕಂಪಾಸಿನಲ್ಲಿರುತ್ತಿದ್ದ ‘ನಟರಾಜ’ ಪೆನ್ಸಿಲ್ ಅಪ್ಪನ ಸ್ಟೇಟಸ್ ಕಮ್ಮಿ ಮಾಡುತ್ತಿರಲಿಲ್ಲ!
ಶಾಲೆಯಲ್ಲಿ ಮಾಡಿದ ತರಲೆ ಕೆಲಸಕ್ಕೆ ಮೇಷ್ಟ್ರು ಕೊಟ್ಟ ಬೆತ್ತದ ಏಟಿನ ಬರೆ ಸ್ಕೂಲಿನ ಮುಂದೆ ಮುಷ್ಕರ ಏಳಿಸುತ್ತಿರಲಿಲ್ಲ! ಏಕೆಂದರೆ ಆ ಕಾಲದಲ್ಲಿ ಶಾಲೆ ಎನ್ನುವುದು ಔಪಚಾರಿಕ ಶಿಕ್ಷಣ, ಅನೌಪಚಾರಿಕವಾಗಿ ಸಿಗುವ ಸಂಸ್ಕಾರ, ಪಠ್ಯೇತರ ಚಟುವಟಿಕೆಗಳ ತರಬೇತಿ, ವಿದ್ಯಾರ್ಥಿಗಳೊಳಗೆ ಪಠ್ಯವನ್ನು ಬಿಟ್ಟೂ ಇರಬಹುದಾದ ಬೇರೆ ಪ್ರತಿಭೆಗಳ ಅನ್ವೇಷಣೆ ಮತ್ತು ಅದರ ಪ್ರೋತ್ಸಾಹದ ಕೇಂದ್ರವಾಗಿತ್ತು. ಶಾಲೆ ಎನ್ನುವುದು ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಇರುವ ಒಂದು ಪ್ಲಾಟ್ಫಾರ್ಮ್ ಆಗಿತ್ತೇ ವಿನಃ ಅದು ವ್ಯಕ್ತಿಯ ವ್ಯಕ್ತಿತ್ವದ ಮೌಲ್ಯಮಾಪನದ ಕೇಂದ್ರವಾಗಿರಲಿಲ್ಲ. ಶಿಕ್ಷಣವೆನ್ನುವುದು ಹಣಗಳಿಕೆಯ ಒಂದು ಸಾಧನವೂ ಆಗಿರಲಿಲ್ಲ.
ಮೊನ್ನೆ ಎರಡೂವರೆ ವರ್ಷದ ನನ್ನ ಪುಟ್ಟ ಮಗನನ್ನು ಮುಂದಿನ ವರ್ಷ ‘ಪ್ರೀ ಕೆಜಿ’ಗೆ ಸೇರಿಸಬೇಕೆಂದು ಪಟ್ಟ ಪಡಿಪಾಟಲನ್ನು ನೋಡಿ ನಮ್ಮೆಲ್ಲರ ಬಾಲ್ಯ ಹೇಗಿತ್ತು? – ಎಂಬ ಯೋಚನೆ ಬಂತು. ನಾವೆಲ್ಲ ಡಿಗ್ರಿಯನ್ನೂ ಮುಗಿಸಿದ ಒಟ್ಟು ಹಣದಲ್ಲಿ ಈಗಿನ ಮಕ್ಕಳ ಪ್ರೀ ಕೆಜಿ ಫೀಸನ್ನು ತುಂಬುವುದಕ್ಕೆ ಸಾಧ್ಯವಿಲ್ಲ! – ಎನ್ನುವುದು ವಿಪರ್ಯಾಸವಾದರೂ ಸತ್ಯ.
ಪ್ರೀ ಕೆಜಿಗೆ ಲಕ್ಷಾಂತರ ರೂಪಾಯಿ ಶುಲ್ಕವೆನ್ನುವುದನ್ನು ನೋಡಿ ಮೂರು ಮೂರೂವರೆ ವರ್ಷದ ಮಕ್ಕಳಿಗೆ ಶಾಲೆಯಲ್ಲಿ ಅಂಥಹದ್ದೇನನ್ನು ಕಲಿಸಬಹುದು – ಎಂಬ ಯೋಚನೆ ಬರುವುದು ಸಹಜ. ಶೇಪ್ಸ್ (ಚಿಹ್ನೆಗಳು), ಕಲರ್ಸ್ (ಬಣ್ಣಗಳು), ಆಲ್ಫಾಬೆಟ್ಸ್, ನಂಬರ್ಸ್, ಒಂದಷ್ಟು ರೈಮ್ಸ್ – ಇವು ಸಿಲೇಬಸ್. “ಮೇಡಂ, ಮಕ್ಳು ಸ್ಕೂಲಲ್ಲಿ ಎಲ್ಲಾನೂ ಕಲ್ಯಲ್ಲಾ. ಮಕ್ಳು ಜಾಸ್ತಿ ಇರ್ತಾರಲ್ವಾ, ನಮ್ಗೂ ಒನ್ ಟು ಒನ್ ಅಟೆನ್ಷನ್ ಕೊಡೋದ್ ಕಷ್ಟಾ. ನೀವು ಮನೇಲೂ ಪ್ರಾಕ್ಟೀಸ್ ಮಾಡ್ಸ್ಬೇಕಾಗತ್ತೆ” – ಅಡ್ಮಿಶನ್ಗೆ ಹೋದಾಗ ಟೀಚರ್ಗಳು ಮರೆಯದೇ ಹೇಳಿಕಳಿಸುವ ವಿಷಯ ಇದು!
ಮಕ್ಕಳಿಗೆ ಮನೆಯಲ್ಲಿ ಅಮ್ಮನೇ ಕಲಿಸಬೇಕಾದ ಸಂಸ್ಕಾರ, ಶಿಕ್ಷಣ ಸಾಕಷ್ಟಿದೆ. ಆದರೆ ಶಾಲೆಯಲ್ಲಿ ಕಲಿಸಬೇಕಾಗಿದ್ದನ್ನೂ ಮನೆಯಲ್ಲಿ ಅಮ್ಮನೋ, ಅಪ್ಪನೋ ಕಲಿಸಬೇಕು ಅಂತಾದರೆ ಅಷ್ಟೊಂದು ಫೀಸ್ ಕೊಟ್ಟು ಶಾಲೆಗೆ ಕಳುಹಿಸುವ ಅಗತ್ಯವಾದರೂ ಏನಿದೆ? ಈಗೆಲ್ಲ ಮಕ್ಕಳ ಹೋಂವರ್ಕ್ನ್ನು ಶಾಲೆಯವರು ಮಕ್ಕಳಿಗಾಗಿ ಕೊಡುವುದಿಲ್ಲ. ಬದಲಾಗಿ ಅವರ ಅಮ್ಮಂದಿರಿಗಾಗಿ ಕೊಡುತ್ತಾರೆ. ಮನೆ ಕೆಲಸ, ಆಫೀಸ್ ಕೆಲಸವನ್ನೆಲ್ಲ ಮಾಡಿ, ಮಕ್ಕಳನ್ನು ನೋಡಿಕೊಂಡ ನಂತರವೂ ತಾಯಂದಿರ ತಾಳ್ಮೆ ಎಷ್ಟಿರುತ್ತದೆ ಎನ್ನುವುದರ ಪರೀಕ್ಷೆಗಾಗಿ ಈ ಹೋಂವರ್ಕ್ಗಳು!
ನಾವು ಶಾಲೆಗೆ ಹೋಗುವ ಕಾಲದಲ್ಲಿ ಹಿಂದಿನ ವರ್ಷದ ಕ್ಯಾಲೆಂಡರ್ಗಳನ್ನು ಜೋಪಾನವಾಗಿ ಎತ್ತಿಟ್ಟು ಆ ವರ್ಷದ ಪುಸ್ತಕಗಳಿಗೆ ಅದನ್ನೇ ಬೈಂಡಿಂಗ್ ಮಾಡುತ್ತಿದ್ದೆವು. ಅದೊಂದು ಸಂಭ್ರಮದ ಕೆಲಸ. ಅಪ್ಪ ಅಮ್ಮ, ಅಜ್ಜ ಅಜ್ಜಿ ಎಲ್ಲರೂ ಕೂತು ಆ ಹೊಸ ಪುಸ್ತಕದ ಘಮವನ್ನು ಸವಿಯುತ್ತ ಹಳೆ ಕ್ಯಾಲೆಂಡರ್ಗಳನ್ನೋ, ದೇವರದ್ದೋ, ನೆಚ್ಚಿನ ನಟರದ್ದೊ, ಕ್ರಿಕೆಟ್ ಆಟಗಾರರದ್ದೋ ಫೋಟೋ ಇರುವ ನ್ಯೂಸ್ಪೇಪರ್ಗಳನ್ನು ಕತ್ತರಿಸಿ ಬೈಂಡ್ ಹಾಕುವುದು. ರಾತ್ರಿ ಬೈಂಡಿಗ್ ಮಾಡಿ ಆ ಪುಸ್ತಕಗಳನ್ನೆಲ್ಲ ಒಂದರ ಮೇಲೊಂದು ನೀಟಾಗಿ ಜೋಡಿಸಿ, ಮೇಲೊಂದು ಭಾರದ ವಸ್ತುಇಟ್ಟರೆ ಬೆಳಗ್ಗೆಯಷ್ಟರಲ್ಲಿ ಐರನ್ ಮಾಡಿದಂತೆ ಬೈಡಿಂಗ್ ರೆಡಿಯಾಗಿರುತ್ತಿತ್ತು.
ಈಗೆಲ್ಲ ಶಾಲೆಗಳೇ ಬೈಡಿಂಗ್ ಪೇಪರ್ಗಳನ್ನು ಕೊಡುತ್ತವೆ. ಅದನ್ನು ಬಿಟ್ಟು ಬೇರೆ ಬೈಡಿಂಗ್ ಹಾಕುವಂತಿಲ್ಲ. ಹೊಸ ಬೈಡಿಂಗ್ನ ಗಲಾಟೆ ಮಧ್ಯೆ ಹಳೇ ಕ್ಯಾಲೆಂಡರ್ ಬಿಕ್ಕುವುದನ್ನು ಕೇಳಿಸಿಕೊಳ್ಳುವ ವ್ಯವಧಾನ ಯಾರಿಗಿದೆ? ಈ ಬೈಂಡಿಂಗ್ ಪೇಪರ್ ಮೇಲೆ ಮಕ್ಕಳ ಹೆಸರು ಬರೆಯುವುದಕ್ಕೆ ಇರುವ ಸ್ಟಿಕ್ಕರ್ನಿಂದ ಹಿಡಿದು ನೋಟ್ ಬುಕ್ಕು, ವರ್ಕ್ ಬುಕ್ಕು, ಯೂನಿಫಾರ್ಮ್, ಸ್ವೆರ್ರು, ಶೂ – ಎಲ್ಲವನ್ನೂ ಸ್ಕೂಲಿನವರೇ ಕೊಡುತ್ತಾರೆ. ಮಕ್ಕಳು ಮತ್ತು ದುಡ್ಡು ಮಾತ್ರ ನಮ್ಮವಷ್ಟೇ!
ಆಗೆಲ್ಲ ದೀಪಾವಳಿಯಲ್ಲಿ ಹೊಸಬಟ್ಟೆ ತಂದಾಗ ಬಟ್ಟೆಯಂಗಡಿಯಲ್ಲಿ ಕೊಟ್ಟ ಪ್ಲಾಸ್ಟಿಕ್ ಕವರನ್ನು ನೀಟ್ ಆಗಿ ಎತ್ತಿಟ್ಟು, ಮುಂದಿನ ವರ್ಷ ಅದರಲ್ಲೇ ಪುಸ್ತಕಗಳನ್ನೆಲ್ಲ ಹಾಕಿಕೊಂಡು ಅದನ್ನು ತಲೆಮೇಲೆ ಹೊತ್ತುಕೊಂಡು ಶಾಲೆಗೆ ಹೋಗುತ್ತಿದ್ದ ದಿನಗಳೂ ಇದ್ದವು. ಆ ವರ್ಷ ಬೆಳೆಸಾಲ ಸಿಗುವುದು ಸ್ವಲ್ಪ ತಡವಾದರೆ ಪ್ಲಾಸ್ಟಿಕ್ ಕವರೇ ಬ್ಯಾಗು, ಬರಿಗಾಲಲ್ಲೇ ಶಾಲೆಗೆ ಪಾದಯಾತ್ರೆ! ಅನುಕೂಲವೇ ಇಲ್ಲದ ಕಾಲದಲ್ಲೂ ಯಥೇಚ್ಛವಾಗಿ ಇದ್ದಿದ್ದು ‘ಸಂಭ್ರಮ’ವೊಂದೆ! ಆದರೆ ಈಗ, ಯಥೇಚ್ಛವಾಗಿ ಅನುಕೂಲವೇನೋ ಇದೆ! ಸಂಭ್ರಮ? ದುಬಾರಿ ಶಾಲೆಗೆ ಮಕ್ಕಳನ್ನು ಸೇರಿಸುವುದು ಅಪ್ಪ ಅಮ್ಮನಿಗೆ ಪ್ರತಿಷ್ಠೆಯ ವಿಷಯವಾಗಿರುವಾಗ ಸಂಭ್ರಮದ ಮಾತು ಗೌಣವೇ.
ಜೂನ್ ತಿಂಗಳಲ್ಲಿ ಮಕ್ಕಳನ್ನು ಪ್ರೀ ಕೆಜಿಗೆ ಸೇರಿಸಬೇಕು ಅಂದ್ರೆ ಅದಕ್ಕಿಂತ ಮುಂಚಿನ ಶೈಕ್ಷಣಿಕ ವರ್ಷದ ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲೇ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು. ಸಬ್ಮಿಟ್ ಮಾಡುವುದಕ್ಕೆ ಒಂದು ನಿಗದಿತ ಸಮಯ ಬೇರೆ! ಅದೇ ಟೈಮ್ನಲ್ಲಿ ಕೂತು ಸಬ್ಮಿಟ್ ಬಟನ್ ಪ್ರೆಸ್ ಮಾಡಬೇಕು. ಒಂದು ಸೆಕೆಂಡ್ ತಡವಾದರೂ ‘’ಭರ್ತಿಯಾಗಿದೆ” ಎನ್ನುವ ಮೆಸೇಜ್!
ಇಷ್ಟು ಚಿಕ್ಕಮಕ್ಕಳಿಗೆ ಲಕ್ಷಾಂತರ ರೂಪಾಯಿ ಫೀಸ್ ತೆಗೆದುಕೊಂಡು ಕಲಿಸುವಂತಹ ಶಿಕ್ಷಣ ಏನಿದೆ? ಎಂದು ಯಾವ ಪಾಲಕರೂ ಯಾಕೆ ಶಾಲೆಗಳನ್ನು ಪ್ರಶ್ನೆ ಮಾಡುವುದಿಲ್ಲ. ಈ ಫೀಸ್ ಪ್ರತಿವರ್ಷವೂ ಆ ವರ್ಷದ ಹಣದುಬ್ಬರದ ಪ್ರಮಾಣಕ್ಕೆ ತಕ್ಕಂತೆ ಕನಿಷ್ಠ ೫ ಪ್ರತಿಶತ ಹೆಚ್ಚಾಗುತ್ತದೆ. ಮಕ್ಕಳು ಪಿಯುಸಿಗೆ ಹೋಗುವ ಮುನ್ನ ತಂದೆತಾಯಿಯರು ಅವರ ಶಿಕ್ಷಣಕ್ಕೆಂದೇ ಕನಿಷ್ಠ ೧೫ರಿಂದ ೨೦ ಲಕ್ಷ ರೂಪಾಯಿ ಎತ್ತಿಡಬೇಕು. ಯಾವುದಾದರೂ ಶಾಲೆ ಒಳ್ಳೆಯ ಗುಣಮಟ್ಟ ಹೊಂದಿದ್ದರೂ, ಅದು ಕಡಮೆ ಶುಲ್ಕ ತೆಗೆದುಕೊಳ್ಳುತ್ತದೆ ಎಂದಾದರೆ ಅಂಥ ಶಾಲೆಗೆ ಯಾರೂ ತಮ್ಮ ಮಕ್ಕಳನ್ನು ಕಳುಹಿಸುವುದಕ್ಕೆ ಸಿದ್ಧವಿರುವುದಿಲ್ಲ. ಯಾಕಂದ್ರೆ ಆಯಾ ಶಾಲೆ ತೆಗೆದುಕೊಳ್ಳುವ ಫೀಸಿನ ಆಧಾರದ ಮೇಲೆ ಅದರ ಗುಣಮಣ್ಣವನ್ನು ಅಳೆಯುವ ಕಾಲಘಟ್ಟದಲ್ಲಿ ನಾವಿದ್ದೇವೆ! ಇಲ್ಲಿ ತಪ್ಪು ಯಾರದ್ದು? ದೋಚುವ ಶಾಲೆಗಳದ್ದೋ? ದೋಚುವುದನ್ನು ಪ್ರೋತ್ಸಾಹಿಸುತ್ತಿರುವ ಪಾಲಕರದ್ದೋ?
ಎಲ್ಲೆಂದರಲ್ಲಿ ತಲೆಎತ್ತಿರುವ ಕೆಲ ಕ್ರಿಶ್ಚಿಯನ್ ಶಾಲೆಗಳು ಇತರ ಶಾಲೆಗಳೂ ತಮ್ಮನ್ನೇ ಅನುಸರಿಸುವಂತಹ ಸನ್ನಿವೇಶವನ್ನು ಸೃಷ್ಟಿ ಮಾಡುತ್ತಿವೆ. ಮೌಲ್ಯಯುತ ಶಿಕ್ಷಣಕ್ಕಿಂತ ಹೆಚ್ಚಾಗಿ ಮಕ್ಕಳಲ್ಲಿ ‘ಮೆಟಿರಿಯಲಿಸ್ಟಿಕ್’ ಮನೋಭಾವನೆಯನ್ನೇ ಬಿತ್ತಲಾಗುತ್ತಿದೆ.
ಸೆಪ್ಟೆಂಬರ್ ೫ರಂದು ಶಿಕ್ಷಕರ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸುವ ಎಷ್ಟೋ ಶಿಕ್ಷಕರಿಗೆ ಸರ್ವಪಳ್ಳಿ ರಾಧಾಕೃಷ್ಣನ್ ಅವರು ಶಿಕ್ಷಣದ ಬಗ್ಗೆ ಎಂತಹ ಅಭಿಪ್ರಾಯ ಹೊಂದಿದ್ದರು ಎನ್ನುವ ಅರಿವು ಇರಲಿಕ್ಕಿಲ್ಲ. “ಯಾವ ಶಿಕ್ಷಣ ಹೃದಯ ಮತ್ತು ಆತ್ಮವನ್ನು ನಿರ್ಲಕ್ಷ್ಯ ಮಾಡುತ್ತದೋ, ಅದು ಪೂರ್ಣ ಶಿಕ್ಷಣ ಎಂದು ಕರೆಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ” ಎಂದು ರಾಧಾಕೃಷ್ಣನ್ ಅವರು ಹಲವು ಬಾರಿ ಹೇಳಿದ್ದರು. ಇಂದಿನ ಯಾವ ಶಾಲೆ ಮಕ್ಕಳಲ್ಲಿ ಅಂತಹ ಶಿಕ್ಷಣವನ್ನು ಬಿತ್ತುತ್ತದೆ? ಇಂದಿನ ಎಷ್ಟು ಪಾಲಕರು ಶಾಲೆಗಳಿಂದ ಇಂತಹ ಶಿಕ್ಷಣವನ್ನು ನಿರೀಕ್ಷೆ ಮಾಡುತ್ತಿದ್ದಾರೆ? ಡಾಕ್ಟರ್ ಆಗು, ಇಂಜಿನಿಯರ್ ಆಗು, ಬಿಸಿನೆಸ್ಮ್ಯಾನ್ ಆಗು – ಎಂದು ಕಣ್ಕ್ರಾಪು ಹಾಕಿ ಮಕ್ಕಳು ಬೇರೆ ಯಾವುದರ ಬಗ್ಗೆಯೂ ಯೋಚನೆಯನ್ನೇ ಮಾಡುವುದಕ್ಕೆ ಕೊಡದೆ ಅವರನ್ನು ಓದುವ ಯಂತ್ರವನ್ನಾಗಿ ಮಾಡುತ್ತಿದ್ದೇವೆ. ಇವೆಲ್ಲ ಆಗುವ ಮುನ್ನ “ಮನುಷ್ಯನಾಗು” ಎಂದು ಹೇಳಿಕೊಡುವ ಶಾಲೆ, ಶಿಕ್ಷಕರು ಮತ್ತು ಪಾಲಕರು ಇಂದಿನ ಅಗತ್ಯ ಎಂದು ಅನ್ನಿಸುವುದಿಲ್ಲವೇ?