ಹೆಸರು ಹೇಳು
ಉಪಾಧ್ಯಾಯರು: ಗುಂಡ, ರೈಟ್ ಸಹೋದರರು ವಿಮಾನ ಕಂಡುಹಿಡಿಯುವುದಕ್ಕೆ ಮುಂಚೆ ಹಲವಾರು ಮಂದಿ ವಿಮಾನವನ್ನು ಕಂಡುಹಿಡಿಯಲು ಪ್ರಯತ್ನಪಟ್ಟಿದ್ದರು. ಅವರ ಹೆಸರು ಹೇಳು.
ಗುಂಡ: ರಾಂಗ್ ಸಹೋದರರು, ಸರ್.
ಅರ್ಥವಾಗದಿದ್ದರೆ
ಸೂಪರ್ವೈಸರ್: ಯಾಕಮ್ಮಾ ರೀಟಾ, ಕಣ್ಣುಮುಚ್ಚಿಕೊಂಡು ಕುಳಿತಿದ್ದೀಯಾ?
ರೀಟ: ಪ್ರಶ್ನೆ ಅರ್ಥವಾಗದಿದ್ದರೆ ಪರೀಕ್ಷೆಹಾಲ್ನಲ್ಲಿ ಕಣ್ಕಣ್ಬಿಡುತ್ತ ಕೂರಬೇಡ ಎಂದು ನಮ್ಮಪ್ಪ ಹೇಳಿದ್ದರು, ಅದಕ್ಕೆ.
ಯಾರ ಹೆಸರಿಗೆ?
ಪೂಜಾರಿ: ಮಂಗಳಾರತಿ ಯಾರ ಹೆಸರಿಗೆ ಮಾಡಲಿ?
ಗುಂಡ: ನನ್ನ ಹೆಂಡತಿಯ ಹೆಸರಿಗೆ ಮಾಡಿ.
ಪೂಜಾರಿ: ಯಾಕೆ ನಿಮ್ಮ ಹೆಸರಿಗೆ ಬೇಡವಾ, ಸರ್?
ಗುಂಡ: ಬೇಡ, ಈಗಾಗಲೇ ಅದು ಮನೆಯಲ್ಲಿ ಆಗಿದೆ.
ಸದುಪಯೋಗ
ಶಿಕ್ಷಕಿ: ಲೋ ಗುಂಡ, ಸ್ಕೂಲಿಗೆ ಯಾಕೆ ನಡೆದುಕೊಂಡೇ ಬರ್ತಾ ಇದ್ದೀಯ; ಸರ್ಕಾರ ಕೊಟ್ಟ ಸೈಕಲ್ ಏನಾಯ್ತು?
ಗುಂಡ: ನಾಲ್ಕು ಜನರಿಗೆ ಉಪಯೋಗವಾಗಲಿ ಎಂದು ಬಾಡಿಗೆಗೆ ಬಿಟ್ಟಿದ್ದೇನೆ, ಮೇಡಂ.
ಗೊತ್ತಿಲ್ಲದ್ದು
ನಾಣಿ: ಏನಯ್ಯಾ ಗುಂಡ, ಸಿಗರೇಟು ಸೇದಿದರೆ ಕ್ಯಾನ್ಸರ್ ಬರುತ್ತದಂತೆ, ಹೌದಾ?
ಗುಂಡ: ಅದೇನೋ ನನಗೆ ಗೊತ್ತಿಲ್ಲಪ್ಪ; ನಾನು ಸಿಗರೇಟು ಸೇದುವಾಗಲೆಲ್ಲ ಬರಿ ಹೊಗೆಯಷ್ಟೆ ಬರುತ್ತದೆ.
ಕಾಯಿಲೆಗಳ ತವರುಮನೆ
ಆ ಸುಂದರಿ ಸಂದುನೋವಿನಿಂದ ನರಳುತ್ತಿದ್ದಳು. ವೈದ್ಯರು ಆಕೆಯನ್ನು ಪರೀಕ್ಷಿಸಿ – ಇದು ನಿಮ್ಮ ಹಲ್ಲುಗಳಿಂದಾಗಿದೆ ಎಂದರು.
ಅದು ಹೇಗೆ ಸಾಧ್ಯ? ನನ್ನ ಹಲ್ಲುಗಳಿಗೆ ಯಾವುದೇ ತೊಂದರೆಯಿಲ್ಲ. ಟೂತ್ಪೇಸ್ಟ್ ಕಂಪೆನಿಗಳು ಜಾಹಿರಾತಿಗಾಗಿ ನನ್ನನ್ನೇ ಆರಿಸಿಕೊಳ್ಳುತ್ತವೆ.
ನಿಮ್ಮ ಹಲ್ಲುಗಳು ಹೆಚ್ಚು ಹೆಚ್ಚು ಆಹಾರ ಜಗಿಯುತ್ತ ಹೋದಂತೆ ನಿಮ್ಮ ದೇಹದಲ್ಲಿ ಕೊಬ್ಬಿನ ಪದರ ದಪ್ಪವಾಗುತ್ತ ಹೋಗುವುದು. ನಿಮ್ಮ ಹೆಚ್ಚುತ್ತಿರುವ ಭಾರ ಇತರ ಕಾಯಿಲೆಗಳಿಗೆ ಆಮಂತ್ರಣ ನೀಡುತ್ತದೆ. ಇದೀಗ ಸಂದುನೋವು…..ಮುಂದೆ ಎದೆನೋವು…..
ಆ ಮಹಿಳೆ ಮುಗುಳ್ನಕ್ಕಳು. ಅವಳ ತುಟಿಗಳ ಮೇಲೆ ಅರಳಿದ ಮಂದಹಾಸ ಕಂಡು ವೈದ್ಯರಿಗೆ ತಮ್ಮ ಎದೆಬಡಿತ ವೃದ್ಧಿಸಿದಂತೆ ಭಾಸವಾಯಿತು. ಆಗ ಅವರು ಹೇಳಿದರು-
ನೋಡಿ ನಿಮ್ಮ ಹಲ್ಲು ಮತ್ತು ಈ ಮಂದಹಾಸ – ಎರಡೂ ಕಾಯಿಲೆಗಳ ತವರುಮನೆ. ಹಲ್ಲುಗಳಿಂದ ನೀವು ಕಾಯಿಲೆಬಿದ್ದರೆ, ಮಂದಹಾಸದಿಂದ ಇತರರು ಕಾಯಿಲೆಬೀಳುತ್ತಾರೆ.
ಗೆದ್ದರೆ
ನಾಣಿ: ಚುನಾವಣೆಯಲ್ಲಿ ಸೋತರೆ ಏನು ಮಾಡುತ್ತೀಯಾ?
ಗುಂಡ: ಗೆದ್ದರೆ ಏನು ಮಾಡುವುದು ಎಂದು ಯೋಚಿಸುತ್ತಿದ್ದೇನೆ.