-ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ
ಕಜೆಯವರು ತಮ್ಮ ವೃತ್ತಿಯಲ್ಲಿ ಛಾಲೆಂಜ್ ಹಾಕುವುದು ಬೇರೆಯವರೊಂದಿಗಲ್ಲ, ತನ್ನೊಂದಿಗೇ. ಯಾವುದೇ ಸಂಕ್ಲಿಷ್ಟವಾದ ಕೇಸ್ ಬಂದರೂ ಸವಾಲಾಗಿ ಸ್ವೀಕರಿಸುತ್ತಾರೆ. ಯಶೋಭಾಜನರೂ ಆಗುತ್ತಾರೆ. ಅವರೇ ಹೇಳುವಂತೆ ಆಯುರ್ವೇದ ವೈದ್ಯನಿಗೆ ಚಿಕಿತ್ಸೆಗೆ ರೋಗಸೀಮೆ ಇಲ್ಲ. ಆತ ಸೀಮಾತೀತ. ಎಲ್ಲ ಬಗೆಯ ಎಲ್ಲ ಅವತಾರದ ವ್ಯಾಧಿಗಳಿಗೂ ಆತ ಧನ್ವಂತರಿಯಾಗಬೇಕು. ಕಳೆದ ೨೩ ವರ್ಷಗಳಲ್ಲಿ ಮೂರು ಲಕ್ಷಕ್ಕೂ ಹೆಚ್ಚು ರೋಗಿಗಳು ಇವರಿಂದ ಚಿಕಿತ್ಸೆ ಪಡೆದು ಸಾಂತ್ವನವನ್ನು ಕಂಡುಕೊಂಡಿದ್ದಾರೆ. ಡಾ. ಗಿರಿಧರ ಕಜೆಯವರ ಅವಿರತಕರ್ಮಶೀಲತೆಯ ಪ್ರಧಾನಕಾರಣವೆಂದರೆ ಅವರ ಮುಖದಲ್ಲಿರುವ ನಿತಾಂತ ಪ್ರಸನ್ನತೆ. ಮೊಗದ ಮೇಲಿನ ನಗೆಗೆ ಅವರು ರಜೆಯನ್ನು ಕೊಟ್ಟ ದಾಖಲೆ ಇಲ್ಲ.
ಮನೋವಾಕ್ಕರ್ಮಗಳಲ್ಲಿ ಆಯುರ್ವೇದತ್ವವನ್ನು ಅನುಸಂಧಾನಿಸುವ, ಅನುಪ್ರಾಣಿಸುವ ವೈದ್ಯಾದರ್ಶ, ಡಾ. ಗಿರಿಧರ ಕಜೆ. ಹುಟ್ಟೂರು ದಕ್ಷಿಣಕನ್ನಡದ ಪುತ್ತೂರು. ತಂದೆ, ಶಿವರಾಮ ಕಜೆ. ತಾಯಿ, ಶಾರದಾ ಕಜೆ. ಆಯುರ್ವೇದ ವೈದ್ಯಪದವಿಯ (ಬಿಎಎಂಎಸ್) ಅಧ್ಯಯನ ಮಾಡಿದ್ದು ಉಡುಪಿಯ ಎಸ್ಡಿಎಮ್ ಆಯುರ್ವೇದ ಕಾಲೇಜಿನಲ್ಲಿ. ವಿಶೇಷವ್ಯಾಸಂಗ (ಎಂ.ಡಿ.) ಮಾಡಿದ್ದು ಬೆಂಗಳೂರಿನ ಸರ್ಕಾರೀ ಆಯುರ್ವೇದ ಕಾಲೇಜಿನಲ್ಲಿ.
ವೈದ್ಯವೃತ್ತಿಯನ್ನು ಆರಂಭಿಸಿದ ಮೊತ್ತಮೊದಲ ದಿನದಿಂದಲೂ ರೋಗಚಿಕಿತ್ಸೆಗೆ ಆಯುರ್ವೇದ ಪದ್ಧತಿಯೊಂದನ್ನೇ ಆಧೇಯವಾಗಿರಿಸಿಕೊಂಡದ್ದು ಗಿರಿಧರರ ಪರಂಪರಾನಿಷ್ಠೆ, ಆರ್ಷಗೌರವ. ಆಡುವ ಮೊದಲು ಮಾಡಿ ತೋರಿಸಬೇಕೆಂಬ ಧೀರಪಂಥ ಕಜೆಯವರದು. ತಮ್ಮ ಸಂಸಾರದ ಸ್ವಾಸ್ಥ್ಯಪಾಲನೆಗೆ ಇದುವರೆಗೂ ಆಯುರ್ವೇದವನ್ನಷ್ಟೇ ಆಚರಣೆಯಲ್ಲಿಟ್ಟುಕೊಂಡು ಆತ್ಮಪ್ರತ್ಯಯವನ್ನು ಅನೂನವಾಗಿಸಿಕೊಂಡವರು. ಇವರ ಇಬ್ಬರು ಮಕ್ಕಳು ಚಿರಾಯು, ಹಿತಾಯು – ಈವರೆಗೆ ರೂಢಿಂಗತವಾದ ಕಡ್ಡಾಯವೆನಿಸಿದ ಯಾವುದೇ ಲಸಿಕೆಗಳಿಗೆ ಆಹಾರವಾದವರಲ್ಲ. ಇವರ ಪತ್ನಿ ಅನುರಾಧಾ, ಆಯುರ್ವೇದೇತರವಾದ ಮದ್ದಿನ ರುಚಿಯನ್ನು ಕಂಡವರಲ್ಲ. ಆಯುರ್ವೇದ ಔಷಧ ಅಥವಾ ಚಿಕಿತ್ಸೆಯ ಪಾರಮ್ಯದ ನಿದರ್ಶನಕ್ಕೆ ತಮ್ಮ ಕುಟುಂಬವನ್ನೇ ಪ್ರಯೋಗಕ್ಕೊಡ್ಡಿ ಪ್ರಮೇಯವನ್ನು ಸ್ಥಾಪಿಸಿದ ಪಂಡಿತ, ಡಾ. ಕಜೆ.
ನಿರಂತರ ಪ್ರಯೋಗಶೀಲತೆ, ಶೋಧಗುಣ, ಅಧ್ಯಯನಶೀಲತೆಗಳು ಇವರ ಜೀವನಸ್ಥಾಯಿ. ಸ್ವಾಸ್ಥ್ಯಸಂರಕ್ಷಣೆಗೆ ಆಯುರ್ವೇದವೇ ಸಮಗ್ರ ಪರಿಹಾರ ಎಂಬುದು ಇವರ ಪ್ರಾಮಾಣಿಕ ಪ್ರತಿಪಾದನೆ. ಇದನ್ನು ಜನರಿಗೆ ಮನದಟ್ಟು ಮಾಡಲು ಹಗಲಿರುಳೂ ಇವರ ಶ್ರಮವು ಜಾರಿಯಲ್ಲಿರುತ್ತದೆ. ಅದಕ್ಕಾಗಿ ಎಲ್ಲ ಸಂವಹನಾಂಗಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.
ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಮೂರು ಸಮ್ಮೇಳನಗಳಲ್ಲದೆ ಆಯುರ್ವೇದ ಸಮಾವೇಶ ಸಂಕಿರಣಾದಿ ಕಾರ್ಯಕ್ರಮಗಳನ್ನು ವಿಶ್ವಸ್ತರದಲ್ಲೂ ಸಂಘಟಿಸಿ ಹತ್ತು ಸಾವಿರಕ್ಕೂ ಅಧಿಕ ಸಾರ್ವಜನಿಕರು, ಎರಡು ಸಾವಿರಕ್ಕೂ ಮಿಕ್ಕಿ ವೈದ್ಯರು ಭಾಗವಹಿಸುವಂತೆ ಏರ್ಪಡಿಸಿದ ಕುಶಲ ಆಯೋಜಕ ಡಾ. ಕಜೆ. ಆಯುರ್ವೇದದ ಕುರಿತು ೧,೧೦೦ಕ್ಕೂ ಹೆಚ್ಚು ಭಾಷಣ, ೫೨೫ಕ್ಕೂ ಹೆಚ್ಚು ಟಿ.ವಿ. ಕಾರ್ಯಕ್ರಮ, ವಿಜಯವಾಣಿ ಪತ್ರಿಕೆಯ ಅಂಕಣದಲ್ಲಿ ೫೨೫ಕ್ಕೂ ಹೆಚ್ಚು ಬರಹಗಳು; ಕಜೆ ಆಯುರ್ವೇದ ಚಾರಿಟೇಬಲ್ ಫೌಂಡೇಷನ್ನ ಸಂಸ್ಥಾಪಕ, ವೈದ್ಯೇತರ ಸಂಘಸಂಸ್ಥೆಗಳಲ್ಲೂ ಕಾರ್ಯದರ್ಶಿ, ಅಧ್ಯಕ್ಷ, ನಿರ್ದೇಶಕ ಇತ್ಯಾದಿ ಹುದ್ದೆಗಳಲ್ಲಿ ಸಕ್ರಿಯವಾಗಿರುವ ಸಮಾಜೋತ್ಸಾಹಿಗಳು. ಎರಡು ಮಾಸಪತ್ರಿಕೆಗಳ ಮುಖ್ಯಸಂಪಾದಕರು. ಇವರು ಬರೆದ ಪ್ರೊಫೆಶನಲ್ ಸೀಕ್ರೆಟ್ಸ್ (ಕನ್ನಡ ಹಾಗೂ ಇಂಗ್ಲಿಷ್) ಕೃತಿಯು ಆರು ಮುದ್ರಣಗಳನ್ನು ಕಂಡಿದೆ.
ಡಾ. ಗಿರಿಧರ ಕಜೆಯವರ ಸಾಧನೆ ಹಾಗೂ ಸಿದ್ಧಿಯ ಫಲೌನ್ನತ್ಯವೆಂದರೆ, ಇವರೇ ಸಂಶೋಧಿಸಿ ಅಭಿವೃದ್ಧಿಪಡಿಸಿದ ೧೫೨ ಆಯುರ್ವೇದ ಔಷಧೀಯ ಸೂತ್ರ. ವೈದ್ಯಕೀಯ ಜಗತ್ತಿನಲ್ಲಿ ಅದೊಂದು ಅಚಲಾಯತನ. ತಮ್ಮ ಅಧ್ಯಯನಾನುಭವಸಮೃದ್ಧಿಯ ಮಾರ್ಗದಲ್ಲಿ ೨೦೦ಕ್ಕೂ ಹೆಚ್ಚು ಆಯುರ್ವೇದ ವೈದ್ಯರಿಗೆ ತರಬೇತಿ ನೀಡಿದ್ದಾರೆ.
ಕಜೆಯವರು ತಮ್ಮ ವೃತ್ತಿಯಲ್ಲಿ ಛಾಲೆಂಜ್ ಹಾಕುವುದು ಬೇರೆಯವರೊಂದಿಗಲ್ಲ, ತನ್ನೊಂದಿಗೇ. ಯಾವುದೇ ಸಂಕ್ಲಿಷ್ಟವಾದ ಕೇಸ್ ಬಂದರೂ ಸವಾಲಾಗಿ ಸ್ವೀಕರಿಸುತ್ತಾರೆ. ಯಶೋಭಾಜನರೂ ಆಗುತ್ತಾರೆ. ಅವರೇ ಹೇಳುವಂತೆ ಆಯುರ್ವೇದ ವೈದ್ಯನಿಗೆ ಚಿಕಿತ್ಸೆಗೆ ರೋಗಸೀಮೆ ಇಲ್ಲ. ಆತ ಸೀಮಾತೀತ. ಎಲ್ಲ ಬಗೆಯ ಎಲ್ಲ ಅವತಾರದ ವ್ಯಾಧಿಗಳಿಗೂ ಆತ ಧನ್ವಂತರಿಯಾಗಬೇಕು. ಕಳೆದ ೨೩ ವರ್ಷಗಳಲ್ಲಿ ಮೂರು ಲಕ್ಷಕ್ಕೂ ಹೆಚ್ಚು ರೋಗಿಗಳು ಇವರಿಂದ ಚಿಕಿತ್ಸೆ ಪಡೆದು ಸಾಂತ್ವನವನ್ನು ಕಂಡುಕೊಂಡಿದ್ದಾರೆ. ಡಾ. ಗಿರಿಧರ ಕಜೆಯವರ ಅವಿರತಕರ್ಮಶೀಲತೆಯ ಪ್ರಧಾನಕಾರಣವೆಂದರೆ ಅವರ ಮುಖದಲ್ಲಿರುವ ನಿತಾಂತ ಪ್ರಸನ್ನತೆ. ಮೊಗದ ಮೇಲಿನ ನಗೆಗೆ ಅವರು ರಜೆಯನ್ನು ಕೊಟ್ಟ ದಾಖಲೆ ಇಲ್ಲ.
ಪ್ರಶಾಂತಿ ಆಯುರ್ವೇದಿಕ್ ಸೆಂಟರ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ, ಪ್ರಧಾನ ವೈದ್ಯರು ಡಾ. ಕಜೆ. ಬೆಂಗಳೂರಿನಲ್ಲಿ ಈ ಸಂಸ್ಥೆಯ ೨೧ ಶಾಖೆಗಳು ಇವೆ. ರಾಜಾಜಿನಗರದಲ್ಲಿರುವ ಮುಖ್ಯ ಆಸ್ಪತ್ರೆಯಲ್ಲಿ ಪಂಚಕರ್ಮ ಯೋಗ ಪ್ರಾಣಾಯಾಮಾದಿಗಳ ಜೊತೆಗೆ ಒಳರೋಗಿಗಳ ವಿಭಾಗವೂ ಇದೆ. ಪಥ್ಯ ಎಂಬ ವಿಶಿಷ್ಟಕಲ್ಪನೆಯ ಕ್ಯಾಂಟೀನು, ಸಮಾವೇಶಾಂಗಣ ಇದೆ.
ಕಜೆಯವರು ಸ್ವತಃ ಕಲಾವಿದ. ಯಕ್ಷಗಾನ ನಾಟಕಗಳಲ್ಲಿ ಅಭಿನಿವೇಶನವಿದೆ. ಕರ್ಣಾಟಕ ಸಂಗೀತವನ್ನು ಅಭ್ಯಸಿಸಿದ್ದಾರೆ.
ಕರ್ಣಾಟಕ ಸರಕಾರದ ರಾಜ್ಯಪ್ರಶಸ್ತಿ, ಶಂಕರ ಟಿ.ವಿಯ ಯುಗಾದಿ ಪ್ರಶಸ್ತಿ , ಆರ್ಟ್ ಆಫ್ ಲಿವಿಂಗ್ನ ಭಿಷಕ್ ಶ್ರೀ ಪ್ರಶಸ್ತಿ, ಲಯನ್ಸ್ ಕ್ಲಬ್ನ ದಿ ಲಯನ್ಸ್ ಪ್ರೊಫೆಷನಲ್ ಎಕ್ಸಲೆನ್ಸ್ ಅವಾರ್ಡ್, ವಿಪ್ರೋ ಇನ್ಫ್ರಾಸ್ಟ್ರಕ್ಚರ್ನ ಕಾಯಕಶ್ರೀ _ ಈ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.
ಪ್ರ: ಯಶಸ್ಸಿಗೆ ಅನಿಚ್ಛೆಯೇ ಕಾರಣ ಎಂದು ಹೊಸ ಗಾದೆ ಹೇಳಿದರೆ ತಗಾದೆ ಮಾಡೋಹಾಗಿಲ್ಲ. ಆಯುರ್ವೇದದ ಪದವಿ ಓದಿದ್ದು ಎಲ್ಲಿ?
ಉ: ಉಡುಪಿಯ ಎಸ್ಡಿಎಮ್ ಆಯುರ್ವೇದ ಕಾಲೇಜು. ಆ ಕಾಲದ ಪರೀಕ್ಷೆಗಳಲ್ಲಿ ಮಾರ್ಕ್ಸ್ ಗಗನಕುಸುಮ. ೮೦% ಕೊಟ್ಟರೆ ಪೂರ್ವಪುಣ್ಯ. ಅಂಥಾದ್ದರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸದಲ್ಲಿ ಪ್ರಥಮ ವರ್ಷದ ಬಿಎಎಂಎಸ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನನಗೇ ಮೊದಲ ಬಾರಿ ಬಂದದ್ದು ದೈವಾನುಗ್ರಹ. ಆಗ ಮೊದಲ ರ್ಯಾಂಕ್ ಬಂತು. ಇದರಿಂದ ನನ್ನ ಆಸಕ್ತಿ ಹಾಗೂ ಅವಧಾನ ಆಯುರ್ವೇದದಲ್ಲಿ ಹೆಚ್ಚಾಯಿತು. ಛಲ ಅಚಲವಾಯಿತು. ಆಯುರ್ವೇದದ ಸತ್ತ್ವ ಅಪರಂಪಾರಪಾರಾವಾರ ಅನಿಸಿತು. ಎಂ.ಡಿ. ಮಾಡಿದ್ದು ಬೆಂಗಳೂರಿನ ಆಯುರ್ವೇದ ಕಾಲೇಜಿನಲ್ಲಿ.
ಪ್ರ: ಉಡುಪಿಯಂತಹ ಸಾಮಾನ್ಯ ನಗರದಿಂದ ಬೆಂಗಳೂರಿನಂತಹ ಮಹಾನಗರಕ್ಕೆ ಬಂದಾಗ ದಿಗಿಲಾಗಲಿಲ್ಲವೆ?
ಉ: ನಾನು ಕಳೆದೇ ಹೋಗ್ತೇನಾ ಎಂಬ ಹೆದರಿಕೆ ಇತ್ತು. ಆದರೆ ಬೆಂಗಳೂರಿಗೆ ಬಂದಮೇಲೆ ಅಂತಹ ಹತಾಶಭಾವ ಬರಲೂ ಇಲ್ಲ, ಕಾಡಲೂ ಇಲ್ಲ. ಬೆಂಗಳೂರಿನ ಸೆಳೆತದೊಂದಿಗೆ ಆಯುರ್ವೇದದ ಸೆಳೆತವೂ ಇತೋಪ್ಯಧಿಕವಾಗಿ ದುಪ್ಪಟ್ಟು ಮುಪ್ಪಟ್ಟು ಆಯಿತು. ಜೊತೆ ಜೊತೆಗೆ ಆಯುರ್ವೇದದ ಅಸೀಮ ಸಾಮರ್ಥ್ಯವೂ ಕ್ರಮೇಣ ಅರ್ಥವಾಗುತ್ತಾ ಬಂತು. ಅಂಥ ಮೂಲಸತ್ತ್ವವು ಇರುವುದರಿಂದಲೇ ಆಯುರ್ವೇದ ಈತನಕವೂ ಅಕ್ಷುಣ್ಣವಾಗಿ ಉಳಿದುಕೊಂಡಿದೆ.
ಪ್ರ: ಆದರೆ ಭಾರತದಲ್ಲಿ ಉಳಿದ ಪದ್ಧತಿಗಳೂ ಬಳಕೆಯಲ್ಲಿವೆಯಲ್ಲವೇ?
ಉ: ಗಮನಿಸಬೇಕು, ಅಲೋಪತಿಯು ಸ್ವಾತಂತ್ರ್ಯಕ್ಕಿಂತ ಸುಮಾರು ನೂರು ವರ್ಷ ಮೊದಲು ಬ್ರಿಟಿಷರ ಮೂಲಕ ಭಾರತದ ಗಡಿಗೆರೆಯನ್ನು ದಾಟಿ ಕಾಲಿಟ್ಟದ್ದು. ಮೊಘಲರ ಜೊತೆ ಯುನಾನಿ ಬಂತು. ಆದ್ದರಿಂದ ಸ್ವಾತಂತ್ರ್ಯಾನಂತರ ನ್ಯಾಯವಾಗಿ ಆಯುರ್ವೇದವು ತುಂಬ ಶಕ್ತಿಸಂಪನ್ನವಾಗಬೇಕಿತ್ತಲ್ಲವೆ! ಹಾಗಾಗಲಿಲ್ಲ. ಅದಕ್ಕೆ ಸರ್ಕಾರೀ ವ್ಯವಸ್ಥೆ ಒಂದು ಕಾರಣ. ಉದಾಹರಣೆಗೆ: ಪ್ರಸಕ್ತ ಸರಕಾರದ ಹೆಲ್ತ್ ಬಜೆಟ್ಟನ್ನು ಪರಿಶೀಲಿಸಿದರೆ, ಒಟ್ಟು ಮೀಸಲಿಟ್ಟ ಹಣ ಎರಡುಲಕ್ಷದ ಇಪ್ಪತ್ತುಸಾವಿರ ಕೋಟಿ. ಅದರಲ್ಲಿ ಎರಡುಸಾವಿರದ ಒಂಬೈನೂರು ಕೋಟಿ…
ಪ್ರ: ಆಯುರ್ವೇದಕ್ಕೆ?
ಉ: ಆಯುರ್ವೇದ ಒಂದಕ್ಕೇ ಅಲ್ಲ! ಆಯುರ್ವೇದ ಯುನಾನಿ ಹೋಮಿಯೋಪತಿ ನ್ಯಾಚುರೋಪತಿ ಯೋಗ ಸಿದ್ಧ – ಇಷ್ಟಕ್ಕೂ ಸೇರಿ ಈ ಮೊತ್ತ! ಅಂದರೆ, ಈ ಆರು ಪದ್ಧತಿಗಳಿಗೆ ಮೀಸಲಾದ ಮೊತ್ತ ಕೇವಲ ಒಂದೂಕಾಲು ಪರ್ಸೆಂಟ್! ತೊಂಬತ್ತೆಂಟೂ ಮುಕ್ಕಾಲು ಪರ್ಸೆಂಟ್ ಅಲೋಪತಿಗೆ. ಕಳೆದ ಎಪ್ಪತ್ತು ವರ್ಷಗಳಿಂದಲೂ ಸರಕಾರದ ಕಡೆಯಿಂದ ಕಡೆಗಣಿಸಲ್ಪಟ್ಟ ವೈದ್ಯಕಪದ್ಧತಿ ಅಂದರೆ ಆಯುರ್ವೇದವೇ.
ಪ್ರ: ಆದರೆ ನಾಡಾಡಿಗಳ ನಿತ್ಯಾನುಭವದಲ್ಲಿ ಆಯುರ್ವೇದದ ಭೀಮಪಾದ ಕಾಣುತ್ತಿದೆ ತಾನೆ!
ಉ: ಹೌದೇ ಹೌದು. ಇಷ್ಟು ದೀರ್ಘಕಾಲ ಯಾವುದೇ ಸರ್ಕಾರೀ ಕೃಪಾಪೋಷಿತದ ಅನುಗ್ರಹವಿಲ್ಲದಿದ್ದರೂ ಯಾಕೆ ಬಲಿಷ್ಠವಾಗಿ ನಿಂತುಕೊಂಡಿದೆ? ಮೇಲ್ನೋಟಕ್ಕೆ ಕ್ಷೀಣವಾಗಿದೆ ಎಂದು ಅನಿಸುತ್ತದೆ. ಸ್ಥೂಲಾವಲೋಕನ ಮಾಡಿದರೆ ಗೊತ್ತಾಗುತ್ತದೆ, ಆಯುರ್ವೇದದ ಅಂತರ್ವಹನದ ವ್ಯಾಪಕತೆ. ವೈದ್ಯಕೀಯ ವಿಜ್ಞಾನದ ಮೂಲ ಭಾರತ. ಸನಾತನಧರ್ಮದ ತತ್ತ್ವಗಳು ಹೇಗೆ ಸರ್ವತ್ರವಾಗಿ ಹರಡಿದ್ದಾವೋ, ಹಾಗೆಯೇ ಆರೋಗ್ಯಕ್ಕೆ ಸಂಬಂಧಿಸಿದಂತೆ ಮೂಲವಿಚಾರಗಳು ಭಾರತದಿಂದಲೇ ಎಸಳೊಡೆದದ್ದು. ಧ್ಯಾನವು ಜೆನ್ ಆಯಿತು. ಮರ್ಮಚಿಕಿತ್ಸೆ ಆಕ್ಯುಪ್ರೆಶರ್, ಆಕ್ಯುಪಂಕ್ಚರ್ ಆಯಿತು. ಯೋಗದ ಮೂಲ ಭಾರತ. ಉಳಿದ ಪದ್ಧತಿಗಳೊಂದಿಗೆ ಹೋಲಿಸಿದರೆ, ಆಯುರ್ವೇದವು ಟೈಮ್-ಟೆಸ್ಟೆಡ್, ಟೈಮ್ ಟ್ರಸ್ಟೆಡ್. ಸಾವಿರಾರು ವರ್ಷಗಳಿಂದ ತನ್ನನ್ನು ಲೋಕಜೀವನದೊಂದಿಗೆ ತೇದುಕೊಂಡದ್ದು. ಕಾಲದಿಂದ ನಂಬಲ್ಪಟ್ಟದ್ದು, ಕಾಲದಿಂದ ಪರೀಕ್ಷಿಸಲ್ಪಟ್ಟದ್ದು.
ಪ್ರ: ಆಯುರ್ವೇದ ಅಂದರೆ ಅದೊಂದು ವೈದ್ಯಪದ್ಧತಿ ಎನ್ನಬಹುದೆ?
ಉ: ಅಷ್ಟೇ ಅಲ್ಲ, ಅದು ಉತ್ಕೃಷ್ಟ ಜೀವನಶೈಲಿ. ಚೆನ್ನಾಗಿ ಬದುಕುವುದು ಹೇಗೆ ಎಂಬುದರ ನಿರಂತರ ಅನ್ವೇಷಣವೇ ಆಯುರ್ವೇದದ ಪ್ರಯೋಗಗುಣ. ವೈದ್ಯಕೀಯ ಎಂಬುದು ಅದರ ಒಂದು ಭಾಗ ಅಷ್ಟೆ. ವೈದ್ಯಕೀಯಜ್ಞಾನವು ತುಂಬ ಅಭಿವೃದ್ಧವಾಗಿದೆ ಎನ್ನುತ್ತೇವಲ್ಲ, ಅದೆಲ್ಲ ಟ್ರಯಲ್ ಸೈನ್ಸ್. ಇನ್ನಿನ್ನೂ ಟ್ರಯಲ್ ಮಾಡುತ್ತಾ ಇರುವುದು. ಟ್ರಯಲ್ಲಿನ ಫಲಿತಾಂಶ ಯಾವಾಗ ಬರುತ್ತದೆ ಎಂಬುದು ಗ್ಯಾರಂಟಿ ಇಲ್ಲ. ಹಲವು ವರ್ಷಗಳಿಂದ ಹೇಳಿಕೊಂಡು ಬರುತ್ತಿದ್ದ ಒಂದು ಫಲಿತಾಂಶವೇ ಬೆಳಗಾಗುವುದರೊಳಗೆ ಸುಳ್ಳು ಎಂದು ಘೋಷಿಸಲ್ಪಡಬಹುದು. ವಿಜ್ಞಾನ ಎನ್ನುವ ಹೆಸರಿನಲ್ಲಿ ಜನರಿಗೆ ನಾವು ಕೊಡುವುದು ಪ್ರಮೆಯನ್ನಲ್ಲ, ಪ್ರಮಾದವನ್ನು.
ಪ್ರ: ಆಯುರ್ವೇದದ ಮೂಲಕ ನಿಮ್ಮ ಪ್ರತಿಪಾದನೆಗೆ ಸಮರ್ಥನೆ ಇದೆಯೆ?
ಉ: ಸೂರ್ಯಸ್ಪಷ್ಟವಾಗಿದೆ. ಆಯುರ್ವೇದದಲ್ಲಿ ತ್ರಿದೋಷ ಎಂದು ಹೇಳಿದರು. ವಾತ, ಪಿತ್ತ, ಕಫ. ರಕ್ತ ಎನ್ನುವ ನಾಲ್ಕನೆಯ ದೋಷವು ಇದೆಯೋ ಇಲ್ಲವೋ ಎಂದು ಶಾಸ್ತ್ರಗ್ರಂಥಗಳಲ್ಲಿ ಸುದೀರ್ಘ ಚರ್ಚೆಯಾಗಿದೆ. ಚಿಂತನಾಂತದಲ್ಲಿ ನಾಲ್ಕನೆಯ ದೋಷವೇ ಇಲ್ಲ, ಇರುವುದು ಮೂರು ಮಾತ್ರ ಎಂದು ನಿಃಶಂಕವಾಗಿ ನಿರ್ವಚಿಸಿದ್ದಾರೆ. ಈ ಜಿಜ್ಞಾಸೆ ಆಗಲಿ, ತೀರ್ಮಾನವಾಗಲಿ ಮಾಡಿ ಮುಗಿಸಿ ಎಷ್ಟು ಸಾವಿರ ವರ್ಷ ಕಳೆಯಿತಲ್ಲ! ಇದುವರೆಗೂ ನಾಲ್ಕನೆಯ ದೋಷದ ಸೇರ್ಪಡೆಯೂ ಆಗಲಿಲ್ಲ, ಬೇರ್ಪಡೆಯೂ ಆಗಲಿಲ್ಲ. ಸಾರ್ವಕಾಲಿಕವಾದ ಅಂಥ ವೈದ್ಯಕಜ್ಞಾನವು ಯುಗಮಾನದುದ್ದಕ್ಕೂ ಕೋಟ್ಯಂತರ ಜನರ ಜೀವನಕ್ಕೆ ಬೆಳಕಾಗಿದೆ. ಉದಾಹರಣೆಗೆ ನೋಡಿ, ಆಹಾರದ ಬಗ್ಗೆ ಪೌರಜಾನಪದರಿಗೆ ದೋಷಗುಣಗಳ ಅರಿವು ಶಾಸ್ತ್ರೀಯವಾಗಿ ಇರುವುದಿಲ್ಲ. ಹಾಗಿದ್ದರೂ ಆಯುರ್ವೇದದ ಮೂಲಕ ಪರಂಪರಾಗತವಾಗಿ ನಮ್ಮ ಜನಪದದ ಜೀವನಪದ್ಧತಿಯಲ್ಲಿ ಅದರ ಅನೇಕ ವೈಜ್ಞಾನಿಕ ವಿಚಾರಗಳು ಹಾಸುಹೊಕ್ಕಿರುತ್ತವೆ.
ಪ್ರ: ಆಹಾರದ ಬಗೆಗೆ ಮಾತ್ರ ನಿರ್ದೇಶನವಿರುವುದೋ ಅಥವಾ………
ಉ: ಅಲ್ಲಪ್ಪ. ದಿನಚರ್ಯೆ ಋತುಚರ್ಯೆ ಸದಾಚಾರಾದಿಗಳ ಬಗೆಗೆ ವಿಸ್ತೃತವಾದ ದರ್ಶನವಿದೆ. ನಾವೀಗ ವಾಕಿಂಗ್ ಎನ್ನುತ್ತೇವಲ್ಲ, ಅದಕ್ಕೆ ಆಯುರ್ವೇದದಲ್ಲಿ ಚಂಕ್ರಮಣ ಎಂಬ ಪರಿಭಾಷೆ ಇದೆ. ಚಂಕ್ರಮಣಕಾಲದಲ್ಲಿ ಕೈಯಲ್ಲಿ ಕೋಲು ಹಿಡಿದುಕೊಂಡು ಹೋಗಬೇಕು, ಮುಂಡಾಸು ಕಟ್ಟಿಕೊಳ್ಳಬೇಕು ಎಂದು ಆದೇಶಿಸುತ್ತದೆ. ಹಾಸ್ಯಾಸ್ಪದವಾಗಿ ಕಾಣುತ್ತದಲ್ಲವೇ! ಬೆಂಗಳೂರಿಗೆ ಬನ್ನಿ. ಬೆಳಗಿನ ಜಾವ ಐದು ಗಂಟೆಗೆ ರಸ್ತೆಯ ಬದಿಯಲ್ಲಿ ನಿಂತುಕೊಳ್ಳಿ. ವಾಕ್ ವೀರರನ್ನು ಗಮನಿಸಿ. ಐವತ್ತು ಶೇಕಡಾ ಜನರ ಕೈಯಲ್ಲಿ ಕೋಲು ಇರುತ್ತದೆ. ವಿಲಿಯಂ ಹಾರ್ವೆ ರಕ್ತಪರಿಚಲನೆಯನ್ನು ಕಂಡುಹಿಡಿದ ಎಂದು ಪ್ರವಾದವಿದೆ. ನಮ್ಮ ಶೈಕ್ಷಣಿಕ ಪರಂಪರೆಯೂ ಇದನ್ನೇ ಅಂಗೀಕರಿಸಿದೆ. ಚರಕಾದಿ ಸಂಹಿತೆಗಳಲ್ಲಿ ರಕ್ತಪರಿಚಲನೆಯ ಪರ್ಣ ವಿವರ ಇದೆ. ವಿಚಾರಮಾಡಿ ನೋಡಿ: ಹೃ-ದ-ಯ – ಈ ಶಬ್ದ ನಮ್ಮ ನೆಲದ ನುಡಿಬೆಡಗು. ಹೃದಯವು ವೈದಿಕಶಬ್ದ. ಹರಣ, ದಾನ ಯಾನ, ಕೊಳ್ಳು ಕೊಡು ತಿರುಗು. ಈ ತ್ರೈಕರ್ಮ್ಯದ ಅಧಿಷ್ಠಾನವೇ ಹೃದಯ. ಈ ಶಬ್ದಸ್ವರೂಪದಲ್ಲೇ ರಕ್ತಪರಿಚಲನೆಯ ಅಂತರರ್ಥವು ಅಡಗಿದೆ. ರಕ್ತಪರಿಚಲನೆ ಹೇಗಾಗುತ್ತದೆ ಎಂದು ಚರಕಾದಿಸಂಹಿತೆಗಳಲ್ಲಿ ಹೇಳಿದೆ. ಗರ್ಭಕೋಶದಲ್ಲಿ ಭ್ರೂಣದ ಬೆಳವಣಿಗೆ ಹಂತ ಹಂತವಾಗಿ ಹೇಗೆ ಆಗುತ್ತದೆ ಎನ್ನುವುದರ ವಿವರಣೆಯಿದೆ. ಸುಶ್ರುತಸಂಹಿತೆಯಲ್ಲಿ ತ್ವಚಃ ಸಪ್ತ ಎಂದು ಇತ್ಯಾತ್ಮಕವಾದ ಘೋಷಸೂತ್ರವನ್ನು ಕೊಟ್ಟಿದ್ದಾರೆ. ಚರ್ಮಕ್ಕೆ ಪದರ ಏಳೇ ಎನ್ನುವ ಪರಮಾಂತಿಕ ಸತ್ಯವನ್ನು ಅಂದೇ ಸಾರಿತ್ತು ಆಯುರ್ವೇದ. ಸೂಕ್ಷ್ಮದರ್ಶಕಗಳು ಬಳಕೆಗೆ ಬಂದಮೇಲೆ ಕೆಲವೇ ದಶಕಗಳ ಹಿಂದೆ ಆಧುನಿಕ ವಿಜ್ಞಾನವು ಚರ್ಮಕ್ಕೆ ಪದರ ಏಳು ಎಂದು ಅಂಗೀಕರಿಸಿದೆ. ಶೋಧೋಪಕರಣಗಳ ಸಾಹಾಯ್ಯವಿಲ್ಲದೆಯೇ ಚರ್ಮದ ಪದರಪದರಗಳನ್ನು ಗುರುತಿಸಿ, ಅದಕ್ಕೆ ಹೆಸರಿತ್ತು, ಯಾವ ಯಾವ ಪದರದಿಂದ ಯಾವ ಯಾವ ಕಾಯಿಲೆ ಹುಟ್ಟುತ್ತದೆ ಎಂದು ಸುಶ್ರುತಸಂಹಿತೆಯಲ್ಲಿ ಸೂತ್ರೀಕರಿಸಲಾಗಿದೆಯಲ್ಲ! ಅದು ವಿಜ್ಞಾನವಿಸ್ಮಯವಲ್ಲವೇ? ಅದೆಂಥ ದೂರದರ್ಶಿತ್ವ!
ಆಯುರ್ವೇದದ ಆಕರಗ್ರಂಥಗಳಲ್ಲಿ ಸುಮಾರು ಆರುಸಾವಿರ ಔಷಧಸಸ್ಯಗಳ/ಮೂಲಿಕೆಗಳ ಸಲಕ್ಷಣವಾದ ಉಲ್ಲೇಖವಿದೆ. ಅಲೋಪತಿಯು ಔಷಧಕ್ಕಾಗಿ ಅವಲಂಬಿಸಿರುವುದು ಹೆಚ್ಚೆಂದರೆ ಕೇವಲ ನೂರು ಗಿಡಗಳನ್ನಷ್ಟೆ. ಅದರಿಂದಲೇ ರಸಾಯನವನ್ನು ಸಾಂದ್ರೀಕರಿಸಿ ಔಷಧವನ್ನು ತಯಾರಿಸುತ್ತಾರೆ. ಆದರೆ ಭಾರತೀಯ ಸಸ್ಯಜ್ಞಾನದ ಹರಹು ಅಚ್ಚರಿಯದು. ಪ್ರತಿಯೊಂದು ವನಸ್ಪತಿಗೂ ಸರಿಸುಮಾರು ಐವತ್ತರಿಂದ ನೂರು ಉಪಯೋಗಗಳನ್ನೂ ವಿನಿಯೋಗಗಳನ್ನೂ ಹೇಳಿದೆ. ಅವನ್ನೆಲ್ಲ ಗಣಿತರೀತ್ಯಾ ಅಪವರ್ತಿಸಿದರೆ ಲಕ್ಷಾಂತರವಾಗುತ್ತವೆ. ಒಂದೊಂದು ವಾನಸ್ಪತ್ಯಗುಣಬೋಧವೂ ಸ್ವಯಂಭೂ ಎನಿಸುವ ಮಂಡನೆ. ತುಳಸಿಯು ಚರ್ಮರೋಗದಲ್ಲಿ ಉಪಯೋಗ ಆಗುತ್ತದೆ ಎಂಬುದು ಬೇರೆಯದೇ ಆದ ಸ್ವತಃಸಿದ್ಧಾಂತ. ಅದು ಎಷ್ಟು ನಿರ್ವಿಕಲ್ಪ: ಅಂದರೆ, ಸಾವಿರಾರು ವರ್ಷಗಳು ಗತಿಸಿದರೂ ಅದರ ಲಕ್ಷಣಗ್ರಾಮದಲ್ಲಿ ಒಂದಕ್ಷರವೂ ಜಾರಿಲ್ಲ. ಸಾರ್ವಕಾಲಿಕವಾದ ಲಕ್ಷಣವನ್ನು ನಿರ್ದುಷ್ಟವಾಗಿ ಸೂತ್ರಸ್ಥಗೊಳಿಸಲಾಗಿದೆ. ಆತ್ಮಗುಪ್ತ ಎಂದು ಒಂದು ಸಸ್ಯವಿದೆ. ಕನ್ನಡದಲ್ಲಿ ನಸುಗುನ್ನಿ. ಚುಣ್ಕೆ, ನಾಯಿಚುಣ್ಕೆ ದೇಸೀ ನಾಮ. ಅದರ ಎಲೆಯನ್ನು ಚರ್ಮದ ಮೇಲೆ ಉಜ್ಜಿದರೆ ಸಿಕ್ಕಾಪಟ್ಟೆ ತುರಿಸುತ್ತದೆ. ಈ ಗಿಡವು ಕಂಪವಾತಹರ ಎನ್ನುವ ಶಾಸ್ತ್ರೋಲ್ಲೇಖವಿದೆ. ಅಂದರೆ ನಡುಕುರೋಗ. ಅದೇ ಪಾರ್ಕಿನ್ಸನ್ಸ್ ಡಿಸೀಸ್. ಗಮ್ಮತ್ತು ಎಂದರೆ, ಪಾರ್ಕಿನ್ಸನ್ಸಿಗೆ ಅತ್ಯಂತ ಶ್ರೇಷ್ಠವಾದ, ಇಂದು ಜಗತ್ತಿನೆಲ್ಲೆಡೆ ಮುಂಚೂಣಿಯಲ್ಲಿರುವ ಔಷಧ ಯಾವುದು ಎಂದರೆ, ಇದೇ ಪ್ಲಾಂಟಿನಿಂದ ಸಾರತಃ ಸಂಗ್ರಹಿಸಿದ ರಾಸಾಯನಿಕ – ಸಿಂಡೋಪಾ, ಸಿಂಡೋಪಾ ಪ್ಲಸ್, ಇತ್ಯಾದಿ.
ಪ್ರ: ಈ ಆಧುನಿಕ ಔಷಧವನ್ನು ಆಯುರ್ವೇದೋಕ್ತವಾದ ಆತ್ಮಗುಪ್ತದಿಂದಲೇ ತೆಗೆದುಕೊಂಡಿರಬಹುದೇ?
ಉ: ಅನುಮಾನವೇ ಬೇಡ. ಪ್ರಕೃತಿಯಲ್ಲಿ ಕೋಟ್ಯಂತರ ಸಸ್ಯಗಳಿವೆ. ಅವುಗಳಿಂದ ಇದನ್ನೇ ಹೇಗೆ ಆಯ್ದುಕೊಂಡರು? ಮೂರುಸಾವಿರ ವರ್ಷದ ಹಿಂದೆಯೇ ಕಂಪವಾತವನ್ನು ಗುರುತಿಸಿದ್ದರು, ಆತ್ಮಗುಪ್ತವನ್ನೂ ಯೋಜಿಸಿದ್ದರು. ಹೇಗೆ ಸಾಧ್ಯವಾಯಿತು ಈ ಶೋಧ? ಆಯುರ್ವೇದ ಎಂಬುದು ಕೇವಲ ಮನುಷ್ಯರಿಂದ ಹುಟ್ಟಿಬಂದ ವಿಜ್ಞಾನವಲ್ಲ. ಈ ಜ್ಞಾನವು ದೈವೀಕೃಪೆ ಅಥವಾ ಪ್ರಕೃತಿಪ್ರಸಾದ. ಇನ್ನೂ ಸ್ಪಷ್ಟವಾಗಿ ತಾತ್ತ್ವಿಕವಾಗಿ ಹೇಳುವುದಾದರೆ ಅದೊಂದು ಸ್ಫುರಣ, ದರ್ಶನ.
ಪ್ರ: ಪ್ರಯೋಗಶಾಲೆಯಲ್ಲಿ, ಲ್ಯಾಬ್ನಲ್ಲಿ ಸಿದ್ಧವಾದದ್ದಲ್ಲ ಎನ್ನುವಿರಾ!
ಉ: ಘಂಟಾಘೋಷವಾಗಿ. ಅದಕ್ಕೆ ಇರುವ ಟ್ರಯಲ್ ಸೈನ್ಸ್ ಬೇರೆಯದೇ ಆದುದು.
ಪ್ರ: ಆದರೆ ಪ್ರಯೋಗಸಿದ್ಧವಾಗದ್ದನ್ನು ಪ್ರಮಾಣ ಎಂದು ಆಧುನಿಕ ವಿಜ್ಞಾನಜಗತ್ತು ಒಪ್ಪುವುದಿಲ್ಲವಲ್ಲ.
ಉ: ಆಯುರ್ವೇದ ಗ್ರಂಥಗಳಲ್ಲಿ ಸಾವಿರಾರು ಔಷಧಗಳ ಸಂಗ್ರಹವಿದೆ. ಅವೆಲ್ಲವೂ ಪ್ರಿಪೇರ್ಡ್ ಮೆಡಿಸಿನ್. ಒಂದು ಮೂಲಿಕೆ ಎಂದಲ್ಲ. ಅಮೃತಾರಿಷ್ಟ ಅಶೋಕಾರಿಷ್ಟ ಉಶೀರಾಸವೇತ್ಯಾದಿ ಸಹಸ್ರಾರು ಔಷಧಗಳಿವೆ. ಅವುಗಳಲ್ಲಿ ಇದುತನಕ ಒಂದೇ ಒಂದೂ ಬಹಿಷ್ಕೃತ (ಬ್ಯಾನ್) ಆಗಿಲ್ಲ. ಏಕೆಂದರೆ ಅವುಗಳು ಶಾಸ್ತ್ರೀಯ ಔಷಧಗಳು. ಅದೇ, ಇವತ್ತು ಬರುವ ಮಾಡರ್ನ್ ಮೆಡಿಸಿನ್ನಲ್ಲಿ ಎರಡು ಮೂರು ದಶಕದೊಳಗೆ ಎಷ್ಟೋ ಬ್ಯಾನ್ ಆಗುತ್ತವೆ. ಆ ಔಷಧಗಳು ಬರುವ ಮೊದಲು ಪರೀಕ್ಷಣದ ಒರೆಗಲ್ಲಿಗೊಪ್ಪಿಸಿಕೊಂಡೇ ಬಂದಿರುತ್ತವೆ ತಾನೆ! ಟ್ರಯಲ್ ಸಮಯದಲ್ಲಿ ಸರಿ ಎಂದೆನಿಸಿರುತ್ತದೆ. ಆಮೇಲೆ ಅದರ ವಿಕೃತಿಗಳು ಕ್ರಮೇಣ ಬಯಲಾಗುತ್ತಾ ಹೋಗುತ್ತವೆ. ಏಕೆಂದರೆ, ಸಂಶೋಧನೆಗೆ ಅವರು ತೆಗೆದುಕೊಳ್ಳುವ ಮಾದರಿ ತುಂಬ ಸೀಮಿತವಾದದ್ದು. ಜಗತ್ತಿನ ಜನಸಂಖ್ಯೆ ನೂರಾರು ಕೋಟಿ ಇರುವಾಗ ಕೇವಲ ಬೆರಳೆಣಿಕೆಯ ಜನರಲ್ಲಿ ಪರೀಕ್ಷಣಮಾಡಿ ಬಂದಾಗ, ಅದಕ್ಕೆ ಮೂಲಬಲ ಹೆಚ್ಚಿರುವ ಸಾಧ್ಯತೆ ತೀರಾ ಕಡಮೆ. ಇದರಿಂದಾಗಿ ಟ್ರಯಲ್ ಬೇಸ್ ಎಂದು ಹೇಳಿಕೊಂಡು ಏನು ಮಾಡಿರುತ್ತಾರೆ ಅದು ಸತ್ತ್ವಹೀನವಾಗಿಬಿಡುತ್ತದೆ. ಅಲ್ಲಿ ಇನ್ನೂರು ವರ್ಷಗಳಿಂದಲೂ ಇರುವ ಒಂದು ಔಷಧವನ್ನು ಹೇಳಿ ನೋಡೋಣ. ಒಂದು ಕಾಲಾವಧಿಯು ಮುಗಿಯುತ್ತಿದ್ದ ಹಾಗೆ ಅದರ ಲೋಪದೋಷವೇನೆಂಬುದು, ಒಂದೊಂದಾಗಿ ಬೆಳಕಿಗೆ ಬರುತ್ತದೆ.
ಪ್ರ: ಹಾಗಿದ್ದರೆ ಆಯುರ್ವೇದೀಯ ಔಷಧದಿಂದ ತೊಂದರೆಯೇ ಇಲ್ಲವೆ? ಲೋಪದೋಷಗಳೇ ಇಲ್ಲವೆ?
ಉ: ಇದೆ. ಇದ್ದೇ ಇರುತ್ತೆ. ಅದು ಹೇಗೆ ಎಂದು ಹೇಳುತ್ತೇನೆ. ನಿದರ್ಶನಕ್ಕೆ ನೀರು. ನೀರಿಗೂ ಅನೇಕ ಸೈಡ್ ಎಫೆಕ್ಟ್ ಇದೆ. ಭೇದಿ ಆಗ್ತದೆ. ಸೋಂಕು ತಗಲುತ್ತದೆ. ಆದರೂ ನಾವು ನೀರನ್ನು ಉಪಯೋಗಿಸುತ್ತೇವೆ ತಾನೆ? ಉಪಯೋಗ ಎನ್ನುವುದು ಉಪದ್ರವಕ್ಕಿಂತ ಉಪಟಳಕ್ಕಿಂತ ಜಾಸ್ತಿ ಇದೆ. ಆದ್ದರಿಂದ ಇವತ್ತಿನ ತನಕವೂ ಅದನ್ನು ಅವಲಂಬಿಸಿದ್ದೇವೆ. ಆಯುರ್ವೇದದ ಔಷಧದಲ್ಲಿ ತೊಂದರೆ ಇಲ್ಲವೇ ಇಲ್ಲ ಎಂದಲ್ಲ. ವೈದ್ಯರ ಅನವಧಾನತೆಯಿಂದಲೂ ಅಲ್ಪಸ್ವಲ್ಪ ಏರುಪೇರು ಆಗಬಹುದು. ಆದರೆ ದೊಡ್ಡ ರೀತಿಯಲ್ಲಿ ವಿಪರಿಣಾಮವನ್ನು ಮಾಡದೇ ಇರುವುದರಿಂದ ಆಯುರ್ವೇದೀಯವಾದ ಮದ್ದು ಔಷಧವಾಗಿ ಇವತ್ತಿಗೂ ಉಳಿದುಕೊಂಡಿದೆ. ಸುದೀರ್ಘವಾದ ಕಾಲಯಾನವನ್ನು ಉತ್ತರಿಸಿ ಬಂದಿದೆ.
ಪ್ರ: ಜನರೇಶನ್ ಮೆಡಿಸಿನ್ ಎಂದಿದೆಯಲ್ಲ…?
ಉ: ಅದು ಆಯುರ್ವೇದದಲ್ಲಿ ಅಲ್ಲ. ಈಗ ಮಾಲಿನ್ಯ ಜಾಸ್ತಿ ಇದೆ. ದೇಹಗಳ ಕ್ಷಮತೆ ಕುಗ್ಗಿದೆ. ವಿಷವನ್ನು ತಿಂದರೆ ಮಾತ್ರ ಬದುಕುವ ತುರೀಯಾವಸ್ಥೆ ತಲಪಿದ್ದೇವೆ. ಆ ರೀತಿ ನಮ್ಮ ದೇಹ ಬದಲಾವಣೆಯಾಗಿದೆ. ಆದರೂ ಕೂಡ, ಇವತ್ತಿಗೂ ಅದೇ ಪ್ರಾಚೀನವಾದ ಆಯುರ್ವೇದ ಔಷಧವು ಕೆಲಸಮಾಡುತ್ತದೆ. ಆಧುನಿಕ ವೈದ್ಯಪದ್ಧತಿಯಲ್ಲಿ ಒಂದು ಜೀವಿತಾವಧಿಯಲ್ಲಿ ಹಲವು ಜನರೇಶನ್ ಮೆಡಿಸಿನ್ಗಳನ್ನು ನೋಡುತ್ತೇವೆ. ಫಸ್ಟ್ ಜನರೇಶನ್ ಆಂಟಿಬಯೋಟಿಕ್, ಸೆಕೆಂಡ್ ಜನರೇಶನ್ ಆಂಟಿಬಯೋಟಿಕ್, ಥರ್ಡ್ ಜನರೇಶನ್ ಆಂಟಿಬಯೋಟಿಕ್ – ಹೀಗೆ ಆಂಟಿಬಯಾಟಿಕ್ಗಳು ಜನರೇಶನ್ ಜನರೇಶನ್ ದಾಟಿ ಹೋಗುತ್ತಾ ಇರುವುದನ್ನು ನಮ್ಮ ಒಂದು ತಲೆಮಾರಿನಲ್ಲಿಯೆ ನೋಡುತ್ತಿದ್ದೇವೆ. ಆದರೆ ಸಾವಿರಾರು ಜನರೇಶನ್ನನ್ನು ಹಾದುಬಂದರೂ ಆಯುರ್ವೇದದ ಔಷಧಗಳು ಹಾಗೆಯೇ ಉಳಿದುಕೊಂಡಿವೆ. ಅದರ ಸಿದ್ಧಾಂತ ಅಷ್ಟು ಗಟ್ಟಿ ಇದೆ ಎಂದು ಇದರಿಂದಲೇ ಗೊತ್ತಾಗುತ್ತದೆ. ಆಯುರ್ವೇದವು ಎಂದಿಗೂ ಮುಳುಗಿಹೋಗದ ವೈದ್ಯಕೀಯ ವ್ಯವಸ್ಥೆ. ಅದರ ಶಾಶ್ವತತೆಯು ಆಕಸ್ಮಿಕವಲ್ಲ, ಆಧಾರಭೂತವಾದದ್ದು.
ಪ್ರ: ಇಷ್ಟೆಲ್ಲ ಹೆಗ್ಗಳಿಕೆ ಇದೆ ಎಂದು ಹೇಳಿದಿರಿ. ಆದರೆ ಒಂದು ಪ್ರಶ್ನೆ: ಆಯುರ್ವೇದವನ್ನೇ ಅಧ್ಯಯನಮಾಡಿದವರಿಗೆ ಆಯುರ್ವೇದದಲ್ಲೇ ತಮ್ಮನ್ನು ತೊಡಗಿಸಿಕೊಳ್ಳಬೇಕೆಂಬ ಸ್ವಯಮಾಗ್ರಹವೂ ದೃಢತೆಯೂ ಕಾಣುತ್ತಿಲ್ಲ. ಇಂತಹ ವಿಪರ್ಯಾಸದಲ್ಲೂ ನೀವು ಈ ಕ್ಷೇತ್ರದಲ್ಲಿ ನೆಲೆನಿಂತದ್ದು ವಿಕ್ರಮ ಸಾಧಿಸಿದ್ದು ಹೇಗೆ?
ಉ: ಮೂರುನಾಲ್ಕು ದಶಕಗಳ ಹಿಂದೆ ಎಂಬಿಬಿಎಸ್ ಸೀಟು ಸಿಗಲಿಲ್ಲ, ಡೆಂಟಲ್ ಸಿಗಲಿಲ್ಲ, ಇಂಜಿನಿಯರಿಂಗ್ ಸಿಗಲಿಲ್ಲ, ಲಾದಲ್ಲಿ ಸಿಗಲಿಲ್ಲ, ಎನ್ನುವ ಇಲ್ಲಗಳ ಪರ್ವದಲ್ಲಿ ಆಯುರ್ವೇದದ ಸೀಟು ಇದೆಯಂತೆ ಎಂದು ಒತ್ತಾಯಮಾಡಿ ಮಕ್ಕಳನ್ನು ಸೇರಿಸುತ್ತಿದ್ದರು. ಅಂತಹ ಸಂದರ್ಭಗಳಲ್ಲಿ ಮಕ್ಕಳಲ್ಲಿ ಒಂದು ಅವಜ್ಞೆ ಬೇರೂರಿತು. ನಾವು ಎಲ್ಲೂ ಸಲ್ಲದವರು. ನಮ್ಮ ವೈದ್ಯಪದ್ಧತಿಯು ಕೂಡ ಅಂತಹದೇ ಎನ್ನುವ ಪೂರ್ವಗ್ರಹ ವಿದ್ಯಾರ್ಥಿಗಳಲ್ಲಿ ನಾಟಿತು. ತಮ್ಮನ್ನು ತಪ್ಪಾಗಿ ರಿಲೇಟ್ ಮಾಡಿಕೊಂಡರು. ಆ ರೀತಿಯ ಅಪಕಲ್ಪನೆಯಿಂದಾಗಿ ಅವರು ಎಲ್ಲಕಡೆ ತಮ್ಮ ಅಧ್ಯಯನದ ವಿಷಯವನ್ನು ಹೇಳಿಕೊಳ್ಳಲೂ ಹಿಂಜರಿಯುತ್ತಿದ್ದರು. ತಮ್ಮ ಕಾಲೇಜಿನ ಹೆಸರು ಹೇಳಲಿಕ್ಕೂ ಕೂರ್ಮಾಂಗರಾದರು. ಅಂಥವರೇ ಬಹುಮಂದಿ ಅನಂತರ ಪ್ರಾಧ್ಯಾಪಕರಾಗಿದ್ದಾರೆ. ಅವರಿಗೆ ತಮ್ಮಲ್ಲೇ ಆತ್ಮವಿಶ್ವಾಸವಿಲ್ಲ, ಅಂಥ ಪರ್ಯಾವರಣದಲ್ಲಿ ಕಲಿತವರಿಗೆ ಶಾಸ್ತ್ರಪ್ರತ್ಯಯ ಬಂದೀತಾದರೂ ಹೇಗೆ? ಹೀಗಾಗಿ ಕೆಲವು ದಶಕಗಳಿಂದ ಆಯುರ್ವೇದಕ್ಕೆ ಬಂದವರು ಬಹುತೇಕ ಪ್ರತ್ಯಙ್ಮುಖತೆಗಿಂತ ಪರಾಙ್ಮುಖತೆಯತ್ತ ಜಾರಿದ್ದಾರೆ. ಆಯುರ್ವೇದದ ಬಳಕೆಗೆ ಜನ ಸ್ಪಂದಿಸುವುದಿಲ್ಲ ಎನ್ನುವ ಈ ವರ್ಗದವರ ಹಳಹಳಿಕೆ ಶುದ್ಧಾಂಗ ಸುಳ್ಳು. ಉದಾಹರಣೆಗೆ ಡೆಂಗ್ಯೂ ಜ್ವರ…
ಪ್ರ: ನಾನೇ ಇದ್ದೇನೆಲ್ಲ, ನಿಮ್ಮ ಉಪಚಾರದಿಂದ ಚಿಗುರಿದವನು.
ಉ: ಹೌದಲ್ಲ. ನಿಮ್ಮ ತಂಗಿಗೆ ಡೆಂಗ್ಯೂ ಮತ್ತು ಟೈಫಾಯಿಡ್ ಒಟ್ಟೊಟ್ಟಿಗೆ ಬಂದಿತ್ತಲ್ಲ. ಆ ಸಂದಿಗ್ಧಪ್ರಕೋಪಸನ್ನಿವೇಶದಲ್ಲೂ ಕೇವಲ ಆಯುರ್ವೇದದ ಔಷಧಮಾತ್ರದಿಂದ ಪೂರ್ತಿ ಉಪಶಮನವಾಯಿತಲ್ಲ! ಈ ರೀತಿಯ ಸಾವಿರಾರು ಕೇಸುಗಳು ನನ್ನ ವೃತ್ತಿಯ ಅನುಭವದಲ್ಲಿವೆ. ಜನರಿಗೆ ಮನವರಿಕೆ ಮಾಡಬೇಕಾದ್ದು ಆಯುರ್ವೇದ ವೈದ್ಯರ ಧರ್ಮ. ಔಷಧ ಹೇಗೆ ಕೆಲಸಮಾಡುತ್ತದೆ, ತಾತ್ಕಾಲಿಕ ಉಪಶಮನದ ಪಾರ್ಶ್ವಪರಿಣಾಮವೇನು, ಪೂರ್ತಿ ಹೇಗೆ ಗುಣವಾಗುತ್ತದೆ ಇತ್ಯಾದಿ ವಾಸ್ತವವಿಷಯಗಳನ್ನು ಜನರಿಗೆ ಮನದಟ್ಟುಮಾಡಿ, ಜನರನ್ನು ಜಾಗೃತಗೊಳಿಸಿದರೆ ಜನರು ಆಯುರ್ವೇದವನ್ನು ಬಿಟ್ಟು ಹೋಗುವುದಿಲ್ಲ.
ಪ್ರ: ನಿಮ್ಮ ವೃತ್ತಿಜೀವನದ ಆರಂಭದ ಪರಿಸ್ಥಿತಿ ಹೇಗಿತ್ತು?
ಉ: ೨೩ ವರ್ಷದ ಹಿಂದೆ ಆರಂಭ ಮಾಡಿದ್ದು. ಆಗ ಆಯುರ್ವೇದದ ಪ್ರಾಕ್ಟೀಸ್ ಸುಲಭವಾಗಿರಲಿಲ್ಲ. ನಿನಗೆ ತಲೆ ಕೆಟ್ಟಿದ್ಯಾ? ಎಂದು ಹತ್ತಿರದವರೇ ಕೇಳಿದ್ದರು. ಆ ಕಾಲಘಟ್ಟದಲ್ಲಿ ನನ್ನ ಸುತ್ತಮುತ್ತ ನೋಡಿದಾಗ ಪೂರ್ಣಪ್ರಮಾಣದಲ್ಲಿ ಆಯುರ್ವೇದವನ್ನು ಪಾಲಿಸುವ, ಸ್ಫೂರ್ತಿದಾಯಕರಾದ ಹಿರಿಯ ವೈದ್ಯರು ಬೆರಳೆಣಿಕೆಯಲ್ಲಿದ್ದರೂ ಅನುಕರಣಾರ್ಹರಾದ ವೈದ್ಯರು ಕಣ್ಣಿಗೆ ಬೀಳಲಿಲ್ಲ. ಆಗ ನಾನು ಕೈಗೊಂಡ ದೃಢಸಂಕಲ್ಪ – ಯಾರ ಹತ್ತಿರವೂ ತರಬೇತಿಗೆ ಹೋಗಬಾರದು. ಇಷ್ಟೂ ದಿನಗಳಲ್ಲಿ ಟ್ರೈನಿಂಗಿಗೆ ಯಾವುದೇ ಡಾಕ್ಟರ ಹತ್ತಿರವೂ ನಾನು ಹೋಗಿಲ್ಲ. ನಾನೇ ನೇರವಾಗಿ ಇಲ್ಲಿಗೆ ಲಂಘಿಸಿದ್ದು.
ಪ್ರ: ಲಂಘನಂ ಪರಮೌಷಧಮ್!
ಉ: ಅದು ಸರಳಸೂತ್ರ ನೋಡಿ. ನನ್ನೀ ನಿರ್ಧಾರಕ್ಕೆ ಕಾರಣ, ಎತ್ತ ನೋಡಿದರೂ ಕಾಣುತ್ತಿದ್ದ ಕೊರತೆ. ಅನಾಸಕ್ತವೈದ್ಯರಿಗೆ ನಾನು ನೆರಳಾದರೆ ನಾನೂ ಅವರದೇ ಪಡಿಯಚ್ಚಾಗುತ್ತೇನೆ ಎಂಬ ಅಳ್ಳಂಕವಿತ್ತು. ನನ್ನ ಕಲ್ಪನೆಯ ಪಥರೇಖೆಯಲ್ಲಿ ಸಾಗಬೇಕೆನ್ನುವ ವೀರವ್ರತಸ್ಥನಾದೆ. ಇದು ಅಹಂಕಾರದ ಮಾತಲ್ಲ. ಬೇರೆ ವೈದ್ಯರಿಗಿಂತ ನಾನು ಹೆಚ್ಚು ತಜ್ಞನೆಂಬ ಹುಂಬತನವೂ ಅಲ್ಲ. ಅಂತೂ ನೇರವಾಗಿ ವೃತ್ತಿಯನ್ನು ಆರಂಭಮಾಡಿದೆ. ಶುರುವಾದ ಮೇಲೆ ಗೊತ್ತಾಯಿತು, ಇದು ಬಹಳ ಕಷ್ಟ ಇದೆ ಎಂದು. ಜನರಲ್ಲಿ ಈ ಪದ್ಧತಿಯ ಬಗ್ಗೆ ಜಾಗೃತಿಯೇ ಇಲ್ಲ. ಆಯುರ್ವೇದ ಎಂದರೆ ಏನೆಂದೇ ಗೊತ್ತಿಲ್ಲ. ಅದಕ್ಕೇನು ಪರಿಹಾರ? ಜನರಿಗಾಗಿ ಆಯುರ್ವೇದದ ತರಗತಿಗಳನ್ನು ಮಾಡಲು ನಿರ್ಧರಿಸಿದೆ.
ಪ್ರ: ಏನೇನು ವಿಷಯಗಳನ್ನು ಅಳವಡಿಸಿಕೊಂಡಿದ್ದಿರಿ?
ಉ: ಆಯುರ್ವೇದದ ಮೂಲಸಂಗತಿ (ಬೇಸಿಕ್ಸ್) ತಿಳಿಸುವುದು. ಪಂಚಕರ್ಮಚಿಕಿತ್ಸೆ, ವಿಶೇಷಚಿಕಿತ್ಸೆಗಳ ಮಾಹಿತಿ, ಔಷಧೀಯ ಸಸ್ಯಗಳ ಪರಿಚಯ, ನಾವೇ ಬೆಳೆದುಕೊಳ್ಳುವ ಬಗೆ, ಅದರ ಮೂಲಕ ಮನೆಮದ್ದನ್ನು ಮಾಡಿಕೊಳ್ಳುವ ಸಾಧ್ಯತೆ; ಒಟ್ಟಿನಲ್ಲಿ ಆಯುರ್ವೇದದ ಕುರಿತು ಪಕ್ಷಿನೋಟ. ಜೊತೆಗೊಂದಿಷ್ಟು ಆರೋಗ್ಯಸಂಬಂಧಿಯಾದ ಸಲಹೆ ಸೂಚನೆ. ಸ್ವಸ್ಥಸ್ಯ ಸ್ವಾಸ್ಥ್ಯರಕ್ಷಣಂ ಎಂಬುದು ಆಯುರ್ವೇದದ ಘೋಷವಾಕ್ಯ. ದಿನಚರ್ಯೆ, ರಾತ್ರಿಚರ್ಯೆ, ಋತುಚರ್ಯೆ, ಸದ್ವೃತ್ತ, ಸ್ವಸ್ಥವೃತ್ತ – ಈ ಐದು ಆಯುರ್ವೇದದ ಪ್ರಬಲ ಅಸ್ತ್ರಗಳು. ಈ ಪಂಚಸೂತ್ರಗಳು ಜಗತ್ತಿಗೆ ತಲಪಬೇಕು. ಆಯುರ್ವೇದ ಔಷಧವು ತಲಪುತ್ತದೋ ಬಿಡುತ್ತದೋ, ಅದು ದೊಡ್ಡ ಉದ್ದೇಶವಲ್ಲ. ಔಷಧಗಳು ರೋಗ ಬಂದಾಗ ಮುಟ್ಟಬೇಕಾದವು. ರೋಗವಿಲ್ಲದವರಿಗೆ ಏನು, ರೋಗವು ಬರದೇ ಇರುವ ಹಾಗೆ ತಡೆಯಲು ಏನು, ಎನ್ನುವುದನ್ನು ಆಯುರ್ವೇದವು ವಿವರವಾಗಿ ವಿಸ್ತರಿಸಿದೆ. ಜಗತ್ತಿಗೆ ಇದು ಏಕೈಕ ಕೊಡುಗೆ. ಇವತ್ತು ಜಗತ್ತು ಪ್ರಿವೆನ್ಶನ್ ಕುರಿತು ಆಲೋಚನೆ ಮಾಡುತ್ತಿದೆ. ಆಯುರ್ವೇದವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪ್ರೊಟೆಕ್ಷನ್ ತಿಳಿಸಿತು. ಪ್ರೊಟೆಕ್ಟಿವ್ ಮೆಥಡ್ – ಜೀವರಕ್ಷಣೆಗೆ ಬೇಕಾಗುವ ಉತ್ಕೃಷ್ಟ ವಿಚಾರ. ಅದರ ಕೆಳಗಿನ ಹಂತ ಪ್ರಿವೆಂಟಿವ್ ಮೆಥಡ್ – ರೋಗಪ್ರತಿಬಂಧನ, ರೋಗ ಬರದ ಹಾಗೆ ತಡೆಯುವ ನಿವಾರಣೋಪಾಯ. ಅದರ ಬಳಿಕ ಕ್ಯೂರೆಟಿವ್ ಮೆಥಡ್ – ರೋಗೋಪಚಾರ. ಅನಂತರದ್ದು ಪ್ಯೂರಿಫಿಕೇಶನ್ ಮೆಥಡ್ – ದೇಹವನ್ನು ಶುದ್ಧಿಗೊಳಿಸುವ ವಿಧಾನಗಳು. ಆಮೇಲೆ ರಿಜುವಿನೇಟಿವ್ ಮೆಥಡ್ – ಕಾಯಕಲ್ಪಕ್ಕೆ ಸಂಬಂಧಿಸಿದ್ದು. ಆಯುರ್ವೇದವು ಹೇಳಿದ ಐದು ಅದ್ಭುತ ವಿಚಾರಗಳು ಇವು. ಇದಕ್ಕೆ ಹೋಲಿಕೆಯೇ ಇಲ್ಲ.
ಪ್ರ: ಈ ವಿಚಾರಗಳು ಸರ್ವಾತ್ಮನಾ ಲೋಕಹಿತಕ್ಕಾಗಿ ಇರುವುದರಿಂದ ಇದರಲ್ಲಿ ಸ್ವಾರ್ಥವಿಲ್ಲ. ಆದ್ದರಿಂದ ಇದು ಶುದ್ಧ ವೇದವೆನ್ನುತ್ತೀರಾ?
ಉ: ಸರಿಯಾದ ಗ್ರಹಿಕೆ. ವೇದಗಳಲ್ಲಿ ವೈದ್ಯವಿಜ್ಞಾನವನ್ನು ಹೇಗೆ ಅಂತರ್ಭವಿಸಿದ್ದರು ಎನ್ನುವುದಕ್ಕೆ ಒಂದು ಉದಾಹರಣೆ ಹೇಳುತ್ತೇನೆ. ಶ್ರೀರುದ್ರ ಇದೆಯಲ್ಲ.
ಪ್ರ: ನಮಸ್ತೇ ರುದ್ರ ಮನ್ಯವ ಉತೋತ ಇಷವೇ ನಮಃ.
ಉ: ಹ್ಞಾ. ರುದ್ರದ ಮಂತ್ರಗಳಿಗೆ ಅನ್ಯಾನ್ಯ ಅರ್ಥಗಳಿವೆ. ಗಣಿತೀಯವಾದ ಗೂಢವನ್ನೂ ಹೇಳುವವರಿದ್ದಾರೆ. ಆಧ್ಯಾತ್ಮಿಕ ಅರ್ಥವಂತೂ ಇದ್ದೇ ಇದೆ. ಪ್ರಕೃತಿವರ್ಣನೆ ಇದೆ. ಲೋಕಚರ್ಯೆ ಇದೆ. ಇವೆಲ್ಲಕ್ಕಿಂತ ಹೊರತಾಗಿ, ಕೇರಳದ ಒಬ್ಬ ವಿದ್ವಾಂಸರು ರುದ್ರದ ಮೊದಲ ಋಚೆಯಿಂದ ಕೊನೆಯ ಋಚೆಯ ತನಕ ಅನ್ವಯಾರ್ಥಸಹಿತವಾಗಿ ಆಯುರ್ವೇದೀಯವಾದ ವ್ಯಾಖ್ಯೆಯನ್ನು ಕೊಟ್ಟಿದ್ದಾರೆ. ಸಾಮಾನ್ಯಜ್ವರದಿಂದ ಕ್ಷಯರೋಗದವರೆಗೆ ಎಪ್ಪತ್ತೈದಕ್ಕೂ ಮಿಕ್ಕಿದ ರೋಗಗಳಿಗೆ ಚಿಕಿತ್ಸೆಯ ಸುಳುಹು ಅಲ್ಲಿ ಇದೆ. ನೂರಾರು ವನೌಷಧಗಳ ಪ್ರಸ್ತಾವವಿದೆ. ಚಿಕಿತ್ಸೆಗಳಲ್ಲಿ ಉಪಯೋಗಿಸುವ ದ್ರವ್ಯಗಳ ಉಲ್ಲೇಖವಿದೆ. ಈಗಲೂ ಆ ಪುಸ್ತಕ ಲಭ್ಯವಿದೆ. ತಾತ್ಪರ್ಯತಃ, ಅಂದಿನ ಜಾನಪದರು ಸ್ವಾಸ್ಥ್ಯಕುಶಲಿಗಳಾಗಿದ್ದರು. ಹೆಚ್ಚಿನ ಚಿಕಿತ್ಸೆ ಬೇಕಿದ್ದಲ್ಲಿ ವೈದ್ಯರನ್ನು ಅವಲಂಬಿಸುತ್ತಿದ್ದರು. ಎವಿಡೆನ್ಸ್-ಬೇಸ್ಡ್ ಮೆಡಿಸಿನ್ ಎಂದು ಈಗೇನು ಹೇಳುತ್ತಾರಲ್ಲ, ಆಯುರ್ವೇದಕ್ಕಿಂತ ದೊಡ್ಡ ಎವಿಡೆನ್ಸ್-ಬೇಸ್ಡ್ ಮೆಡಿಸಿನ್ ಸಿಗಲಿಕ್ಕೆ ಸಾಧ್ಯವೇ ಇಲ್ಲ.
ಪ್ರ: ಅಂದರೆ ನಿಮ್ಮ ಆಶಯ, ಆಯುರ್ವೇದ ಮನೆಮನೆಗೂ ಬರಬೇಕು.
ಉ: ಅಷ್ಟೇ ಅಲ್ಲ, ಮನಸ್ಸು ಮನಸ್ಸಿಗೂ ಬರಬೇಕು. ಔಷಧವಾಗಿ ತಲಪಬೇಕಾದ ಅನಿವಾರ್ಯತೆ ಇಲ್ಲ. ಸ್ವಾಸ್ಥ್ಯರಕ್ಷಣೆಗಾಗಿ ತಲಪಬೇಕು. ಅದರ ತತ್ತ್ವ, ಸಿದ್ಧಾಂತ ತಲಪಬೇಕು. ಅದರಿಂದ ಸಾಮಾಜಿಕರಲ್ಲಿ ನೀರೋಗದೃಢಕಾಯತ್ವ ಪ್ರಾಪ್ತವಾಗುತ್ತದೆ. ಇತಿಹಾಸವನ್ನು ಗಮನಿಸಿ. ತಲೆಮಾರಿನಿಂದ ತಲೆಮಾರಿಗೆ ಮನುಷ್ಯರು ದುರ್ಬಲರಾಗುತ್ತಿದ್ದಾರೆ.
ಪ್ರ: ಈ ಅವರೋಹಣಕ್ಕೆ ಪ್ರಮುಖ ಕಾರಣವೇನಿರಬಹುದು?
ಉ: ಔಷಧಪದ್ಧತಿಗಳು ದೇಹವನ್ನು ಗಟ್ಟಿಗೊಳಿಸುತ್ತಿಲ್ಲ. ಔಷಧದ ಸೇವನೆಯಿಂದ ದೇಹ ದೃಢವಾಗುವುದೂ ಇಲ್ಲ. ಆಯುರ್ವೇದದ ಸ್ವಾಸ್ಥ ಸೂತ್ರದಿಂದ ದೈಹಿಕ ಸಾಮರ್ಥ್ಯವನ್ನು ವೃದ್ಧಿಸಬಹುದು. ನಿದ್ರೆಗೊಂದು ಮಾತ್ರೆ, ಏಳಲಿಕ್ಕೊಂದು ಮಾತ್ರೆ, ಮೂತ್ರ ಮಾಡಲಿಕ್ಕೊಂದು ಮಾತ್ರೆ, ಮೂತ್ರ ತಡೆಯಲಿಕ್ಕೆ ಇನ್ನೊಂದು ಮಾತ್ರೆ, ಹಸಿವೆ ಆಗಲಿಕ್ಕೊಂದು ಮಾತ್ರೆ, ಜೀರ್ಣಕ್ಕೊಂದು ಮಾತ್ರೆ, – ಈ ರೀತಿಯಲ್ಲಿ ಔಷಧದ ಅವಲಂಬನೆಯನ್ನು ನೆಚ್ಚುತ್ತಾಹೋದರೆ ದೇಹ ಮತ್ತಷ್ಟು ನಿಃಶಕ್ತವಾಗುತ್ತದೆ. ಆಯುರ್ವೇದದ ನಿಷ್ಪಾಕ್ಷಿಕ ಜನಪೋಷಣದೃಷ್ಟಿ ನೋಡಿ. ಮಾವಿನ ಹಣ್ಣಿನ ಮಿಲ್ಕ್ ಷೇಕ್ ಮಾಡಿದರೆ, ಆಹಾ, ಸ್ವರ್ಗವೇ ರಸನಾಗ್ರವಾಗುತ್ತದೆ. ಆದರೆ ಇಂತಹ ಅಪಮಾರ್ಗದ ಸೌಖ್ಯವನ್ನು ಆಯುರ್ವೇದ ಪುರಸ್ಕರಿಸಲಿಲ್ಲ. ಏಕೆಂದರೆ ಅದು ವಿರುದ್ಧ ಆಹಾರ.
ಪ್ರ: ಜನರು ಆಯುರ್ವೇದ ಎಂದಕೂಡಲೇ ಎರಡು ಹೆಜ್ಜೆ ಹಿಂದಿಡುವುದು ಈ ನಮೂನೆಯ ಪ್ರತಿಬಂಧದ ಪಥ್ಯಗಳಿಗೇ ಅಲ್ಲವೆ?
ಉ: ಪಥ್ಯಾಹಾರ ಅಂದರೆ ರುಚಿಹೀನ ಎಂದಲ್ಲ. ಹಿಂದಿನವರಿಗೆ ರುಚಿಪ್ರಜ್ಞೆ ಇರಲಿಲ್ಲವೆ? ನಮಗಿಂತ ಹೆಚ್ಚು ರಸಜ್ಞತೆ ಇತ್ತು. ಪಥ್ಯಾಹಾರದಲ್ಲಿ ರಸದ ಉತ್ತುಂಗತೆ ಇರುತ್ತದೆ. ಹಿತಕಾರಿಯೂ ಆಗಿರುತ್ತದೆ. ರಸ-ರುಚಿಗಳ ಸಮತೋಲನದಲ್ಲಿ ಚರ್ಯೆಗಳನ್ನು ಹೇಳಿದರು. ಆ ಚಿಂತನೆಗಳೆಲ್ಲ ನಮ್ಮ ಊಹೆಗೂ ನಿಲುಕದ್ದು. ಅದನ್ನೆಲ್ಲ ಪೂರ್ಣಪ್ರಮಾಣದಲ್ಲಿ ಅನುಷ್ಠಾನಕ್ಕೆ ತಂದರೆ ಅದರ ಪರಿಣಾಮದ ಅಗಾಧತೆ ಎಷ್ಟಿದ್ದೀತು!
ಪ್ರ: ಈ ನಿಟ್ಟಿನಲ್ಲಿ ನಿಮ್ಮ ವೃತ್ತಿಜೀವನದಲ್ಲಿ ನೀವು ಕಂಡ ಬದಲಾವಣೆಗಳೇನು?
ಉ: ಆರಂಭದಲ್ಲಿ ನನ್ನ ಹತ್ತಿರ ಬರುತ್ತಿದ್ದ ಪೇಶೆಂಟುಗಳು ಬಹಳ ಅಂದ್ರೆ ಬಹಳ ಕಡಮೆ. ನಾನು ಭಾಷಣ ಮಾಡಬಹುದು, ಸಲಹೆ ನೀಡಬಹುದು, ಎಲ್ಲ ಸರಿ. ಆದರೆ ಪಕ್ಕಾ ರಿಸಲ್ಟ್ ಕೊಡದೇ ಏನೂ ಮಾಡಲು ಆಗುವುದಿಲ್ಲ ಎಂದು ನಿಚ್ಚಳವಾಯಿತು. ಪ್ರಾಕ್ಟಿಕಲ್ ಆಗಿ ಯಾವ ಯಾವ ರೋಗವನ್ನು ಟ್ರೀಟ್ ಮಾಡಿದ್ದೇನೆ ಎಂಬುದೇ ಮಾನದಂಡವಾಗುತ್ತದೆ. ಈ ಕ್ಷೇತ್ರದಲ್ಲಿ ನಾನು ಕೊಟ್ಟ ರಿಸಲ್ಟ್ ಏನು ಎಂಬ ಪ್ರಶ್ನೆ ಎದುರಾಗಿ ತೀವ್ರವಾಗಿ ಕಾಡುತ್ತಿತ್ತು. ಎಮ್ಡಿಗೆ ಸೇರಿದ ಪ್ರಾರಂಭದಲ್ಲೇ ನಾನು ಮಾಡಿದ ಅವಿಕಲ್ಪಸಂಕಲ್ಪ ಎಂದರೆ ನಾನು ಲೆಕ್ಚರರ್ ಆಗಿ ಎಲ್ಲೂ ಸೇರಬಾರದು. ಅದು ನನ್ನ ದಾರಿಯಲ್ಲ. ನನ್ನ ತಲೆಯೊಳಗೆ ರಿಸಲ್ಟ್-ಓರಿಯಂಟೆಡ್ ಪ್ರಾಕ್ಟೀಸಿನ ಸವಾಲು ಕೊರೆಯುತ್ತಿತ್ತಲ್ಲ. ನನ್ನ ನಿಲವಿಗೆ ಬದ್ಧನಾಗಿದ್ದೆ. ಸ್ವತಂತ್ರವಾಗಿ ನೆಲೆ ನಿಲ್ಲುವುದು ಸುಲಭದ ಬಾಬತ್ತಲ್ಲ. ಹಣಕಾಸು, ಸಿಬ್ಬಂದಿ, ಉಪಕರಣ, ಔಷಧ ಒಂದೇ ಎರಡೇ, ಎಲ್ಲವೂ ತೊಡಕಿನ ಮುಡುಕುಗಳೇ. ಒಂದು ಸಣ್ಣ ಉದಾಹರಣೆ ಕೊಡುತ್ತೇನೆ. ಈ ೨೩ ವರ್ಷದ ಸರ್ವಿಸಿನಲ್ಲಿ ಸ್ವರ್ಣಸಂಬಂಧಿತವಾದ ಔಷಧವನ್ನು ಬಳಸಿದ್ದು ತುಂಬ ತುಂಬ ಕಡಮೆ. ಇದಕ್ಕೆ ಮುಖ್ಯಕಾರಣ, ಔಷಧದ ಬೆಲೆಯು ದುಬಾರಿಯಾಗಿ, ಜನರು ಆಯುರ್ವೇದದಿಂದ ವಿಮುಖರಾಗಬಾರದು ಎನ್ನುವುದು. ಜನರಿಗೆ ಅರ್ಥಭಾರವಾಗದ ಪರ್ಯಾಯ ಮಾರ್ಗಗಳ ಅನ್ವೇಷಣೆಯಲ್ಲಿ ನನ್ನ ಶೋಧವನ್ನು ಕೇಂದ್ರೀಕರಿಸಿದೆ. ಇದುವರೆಗೂ ನನ್ನೀ ನಿಲವಿನಲ್ಲಿ ರಾಜಿ ಮಾಡಿಕೊಂಡಿಲ್ಲ.
ಪ್ರ: ಇದನ್ನು ಸಾಧಿಸಲು ನೀವು ಕಂಡುಕೊಂಡ ಮಾರ್ಗವೇನು?
ಉ: ನನ್ನದೇ ಆದ ಫಾರ್ಮುಲಾ ಡೆವಲಪ್ ಮಾಡಿದ್ದೇನೆ. ಒಟ್ಟು ೧೫೨ ಔಷಧ. ಎಲ್ಲವೂ ಟ್ಯಾಬ್ಲೆಟ್ ಫಾರ್ಮಲ್ಲಿವೆ. ವಟಿಕಾರೂಪ ಏಕೆಂದರೆ, ಆಯುರ್ವೇದವನ್ನು ಸಮರ್ಪಕವಾಗಿ ಜನರಿಗೆ ತಲಪಿಸಬೇಕು.
ನಮ್ಮ ಆಸ್ಪತ್ರೆಯಲ್ಲಿ ಕಿಡ್ನಿ ಫೆಯ್ಲ್ಯೂರ್, ಹೃದ್ರೋಗದ ಕೇಸುಗಳನ್ನು ತುಂಬ ಹ್ಯಾಂಡಲ್ ಮಾಡುತ್ತೇವೆ. ಗುಣವೇ ಆಗದ್ದನ್ನು, ಸಿಕ್ಕಾಪಟ್ಟೆ ಖರ್ಚು ಬರುತ್ತದೆ ಎನ್ನುವಂಥದನ್ನು, ಬರೀ ಮೆಡಿಸಿನ್ನಲ್ಲಿ ಉಪಚರಿಸುತ್ತೇವೆ. ಕಿಡ್ನಿಸ್ಟೋನ್, ಪ್ಯಾಂಕ್ರಿಯಾಟೈಟಿಸ್, ಹೃದಯ, ಗರ್ಭಕೋಶದ ಗಡ್ಡೆ, ಸೊಂಟನೋವು ಮುಂತಾದ ಸರ್ಜರಿ ಆಗಬೇಕಾದವುಗಳನ್ನು ಕೇವಲ ಔಷಧದಲ್ಲಿ ಗುಣಪಡಿಸಲು ಸಾಧ್ಯವೆಂದು ತೋರಿಸಿಕೊಟ್ಟರೆ ಜನರಿಗೆ ಸರಿಯಾದ ವ್ಯತ್ಯಾಸ ತಿಳಿಯುತ್ತದೆ, ಒಪ್ಪಿಕೊಳ್ಳುತ್ತಾರೆ.
ಎಮರ್ಜೆನ್ಸಿಗಳನ್ನು ಹೊರತುಪಡಿಸಿ, ಬಹುತೇಕ ರೋಗಸರ್ವಸ್ವವನ್ನೂ ಆಯುರ್ವೇದ ವೈದ್ಯ ಸಂಭಾಳಿಸಬಲ್ಲ. ಯಾವುದೇ ಕಾಯಿಲೆ ಇರಲಿ, ಹಳೆಯದಿರಲಿ ಹೊಸ ವೈರಾಣುವಿರಲಿ, ಹಳೆ ವೈರಾಣುವಿರಲಿ, ನಮ್ಮ ಪದ್ಧತಿಯನ್ನೇ ಅನುಷ್ಠಾನಿಸಿ ರೋಗಮುಕ್ತರಾಗಲಿಕ್ಕೆ ಸಾಧ್ಯವಿರುವ ಅದ್ಭುತ ವೈದ್ಯಕೀಯ ಪದ್ಧತಿ ಅಂದರೆ ಆಯುರ್ವೇದ. ಆದ್ದರಿಂದಲೇ ಪೂರ್ಣಪ್ರಮಾಣದಲ್ಲಿ ಆತ್ಮಸಾಕ್ಷಿಗನುಗುಣವಾಗಿ ಪ್ರಾಕ್ಟೀಸ್ ಮಾಡಲಿಕ್ಕೆ ಆಗುತ್ತದೆ – ಎನ್ನುವುದನ್ನು ನಾನು ಕಂಡುಕೊಂಡಿದ್ದೇನೆ.
ಪ್ರ: ನಿಮ್ಮ ಆರಂಭೋದ್ಯೋಗದ ಸಮಯದಲ್ಲಿ ಯಾವ ಸ್ತರದ ಜನರು ಬರುತ್ತಿದ್ದರು?
ಉ: ವಯಸ್ಸಾದವರು ಬರುತ್ತಿದ್ದರು. ಹಳೆಮಂದಿಗೆ ಇದರಲ್ಲಿ ನಂಬಿಕೆ ಹಾಗೂ ಭರವಸೆ. ಅವರಿಗಿರುವ ಜೀವನಾನುಭವವೇ ಅದಕ್ಕೆ ಕಾರಣ. ಬೇರೆ ಬೇರೆ ಪದ್ಧತಿಗಳಿಂದಾದ ಕಹಿ ಅನುಭವ. ಯಥಾರ್ಥಕ್ಕೂ ವಯೋವೃದ್ಧರ ಉಪಚಾರಕ್ಕೆ ಆಯುರ್ವೇದವೇ ಹೆಚ್ಚು ಸೂಕ್ತ ಎಂಬುದು ಮತ್ತೊಂದು ಕಾರಣ. ಎಂತಹ ಕಹಿ ಔಷಧವನ್ನಾದರೂ ತಗೆದುಕೊಳ್ಳುತ್ತೇವೆ, ಯಾವ ಔಷಧ ಕೊಟ್ಟರೂ ಸೇವಿಸುತ್ತೇನೆ ಎನ್ನುವ ಅವಸ್ಥೆಯೂ ಪರಿಸ್ಥಿತಿಯೂ ಬಂದಾಗ ಅಂತಹವರು ಅಧಿಕಸಂಖ್ಯೆಯಲ್ಲಿ ಬರುತ್ತಿದ್ದರು. ಕ್ರಮೇಣ ನನ್ನ ಜನಸಂಪರ್ಕ ಯೋಜನೆಯ ಪರಿಣಾಮವಾಗಿ ತರುಣರ ಪೀಳಿಗೆಯೂ ಪ್ರಚೋದಿತವಾಯಿತು. ನಮ್ಮ ಚಿಕಿತ್ಸಾಲಯದ ಈಗಿನ ಸನ್ನಿವೇಶ ನೋಡಿ. ಬರುವವರಲ್ಲಿ ಬಹ್ವಧಿಕವಾಗಿ ಯುವಕರೇ ಇರುತ್ತಾರೆ. ಔಷಧಗಳ ಉಪಯೋಗವನ್ನು ಜನಸ್ನೇಹಿಯಾಗಿಸಿದ ಪರಿಣಾಮದಿಂದ ಮಕ್ಕಳೂ ಬಹಳ ಸಂಖ್ಯೆಯಲ್ಲಿ ಬರಲು ಮೊದಲಿಟ್ಟರು. ಪರಿಣಾಮ ಚೆನ್ನಾಗಿದೆ, ಎರಡು ದಿನದ ತೋಳ್ಗೂಸನ್ನು ಕರೆದುಕೊಂಡು ಬರುತ್ತಾರೆ. ಇದಕ್ಕೆಲ್ಲ ಕಾರಣ ಆಯುರ್ವೇದ ಚಿಕಿತ್ಸೆಯು ಜನರಲ್ಲಿ ಮೂಡಿಸಿದ ವಿಶ್ವಾಸ ಎನ್ನುವುದು ನನ್ನ ಶಾಸ್ತ್ರಶ್ರದ್ಧೆ. ಸಂತಾನಸಮಸ್ಯೆಯಂತಹ ಸಂಕೀರ್ಣಪ್ರಕರಣಗಳೂ ಬಂದು ಅವೂ ಫಲಿತಗುಣವನ್ನು ತೋರಿದ ಪರಿಣಾಮವಾಗಿ ಬರುವವರ ಹೆಚ್ಚಳವೂ ಸಹಜವೆಂಬಷ್ಟು ರೂಢವಾಯಿತು. ನಾನು ಕೈಗೊಂಡ ಇನ್ನೊಂದು ಉಪಕ್ರಮವೆಂದರೆ ದಾಖಲೆಗಳ ಶಾಶ್ವತೀಕರಣ.
ಪ್ರ: ಓಹೋ. ಅಡ್ವಾನ್ಸ್ಡ್ ಟೆಕ್ನಾಲಜಿಗೂ ಗುಳಿಗೆ ರುಚಿ ತೋರಿಸಿದ್ದೀರಿ.
ಉ: ಅದಕ್ಕಾಗಿ ಸಾಫ್ಟ್ವೇರ್ ಡೆವಲಪ್ ಮಾಡಿಸಿದೆ. ಮೈಕ್ರೋಸಾಫ್ಟ್ನ ನಿವೃತ್ತ ಇಂಜಿನಿಯರ್ಗಳ ಸಹಾಯವನ್ನು ಪಡೆದೆ. ಈಗ ಸುಮಾರು ೨೫-೩೦ ಲಕ್ಷ ಪ್ರಿಸ್ಕ್ರಿಪ್ಶನ್ಗಳು ನನ್ನ ಭಂಡಾರದಲ್ಲಿವೆ – ಒಂದು ಲಕ್ಷದ ಹದಿಮೂರು ಸಾವಿರ ರೋಗಿಗಳದ್ದು. ೨೦೧೨ರ ಏಪ್ರಿಲ್ ಬಳಿಕ ನನ್ನ ಬಳಿ ಯಾರೆಲ್ಲ ಪೇಶಂಟುಗಳು ಬಂದಿದ್ದಾರೆ ಅವರ ಪ್ರತಿಯೊಂದು ದಾಖಲೆಯೂ ಇದೆ. ಸೈಂಟಿಫಿಕ್ ಆಗಿ ಡಾಟಾ, ರಿಸರ್ಚಿನ ವಿಂಗ್ಗಳು, ಸ್ಟಡಿ ಮೆಟೀರಿಯಲ್, ಡಾಟಾ ಡೆವಲಪ್ ಮಾಡುವಂಥದ್ದು, ಎಲ್ಲ ಪ್ರ್ರೆಸಿಶನ್ನೂ ಇದೆ. ಆಯುರ್ವೇದ ಡಾಕ್ಟರ್ ಎಂದ ತತ್ಕ್ಷಣ ಯಾವುದೋ ಹಳೇಕಾಲದ ಪಂಡಿತರ ಔಷಧಾಲಯ ಎಂದು ಅನ್ನಿಸಬಾರದು. ಆಯುರ್ವೇದವನ್ನು ಪ್ರಸ್ತುತಿ ಮಾಡುವಾಗ ಈಗಿನ ಕಾಲದ ಜ್ಞಾನವಿಸ್ತಾರದ ಸ್ತರಕ್ಕೆ ಹೊಂದುವ ಹಾಗೆಯೇ ಮಾಡಬೇಕು. ಈಗಿನ ಜನರೇಶನ್ನಿಗೆ ತಕ್ಕದಾಗಿ ನಾವು ಇರಬೇಕು. ಬರೇ ಕಷಾಯವನ್ನು ಎರಡು ಚಮಚ ನೀರಿನೊಂದಿಗೆ ಮಧ್ಯಾಹ್ನ ತೆಗೆದುಕೊಳ್ಳಬೇಕು ಎಂದು ಈಗ ಹೇಳಿದರೆ ಯಾರು ಉತ್ಸಾಹ ತೋರಿಸುತ್ತಾರೆ? ಅನುಕೂಲವನ್ನು ಕಲ್ಪಿಸುವತ್ತ ಗಮನ ಕೊಡಬೇಕು. ನಮ್ಮ ವೈದ್ಯಪದ್ಧತಿಯ ಪ್ರಣೇತರ ದೂರದರ್ಶಿತ್ವವು ಹೇಗಿತ್ತೆಂದರೆ, ಸುಮಾರು ಐವತ್ತಕ್ಕೂ ಹೆಚ್ಚಿನ ಔಷಧದ ರೂಪಭೇದಗಳನ್ನು ಉಲ್ಲೇಖಿಸಿದ್ದು ಕಂಡುಬರುತ್ತದೆ. ಅಲೋಪತಿಯಲ್ಲಿರುವುದು ಹದಿನೈದು ದಾಟುವುದಿಲ್ಲ. ಇಂಜೆಕ್ಷನ್ ಸಿರಪ್ ಮಾತ್ರೆ ಇತ್ಯಾದಿ. ನಮ್ಮಲ್ಲಿ ಉರುಟು ಗುಳಿಗೆ, ಚಪ್ಪಟೆ ಗುಳಿಗೆ ಎರಡನ್ನೂ ಹೇಳಿದ್ದಾರೆ – ನುಂಗುವವನ ಸೌಖ್ಯವನ್ನು ಲಕ್ಷ್ಯದಲ್ಲಿರಿಸಿ. ಈಗ ನಾವು ಯೋಚಿಸಬೇಕು, ಕಷಾಯವೋ ಮಾತ್ರೆಯೋ ಎಂದು. ಬೇಗ ರಿಸಲ್ಟ್ ಬರಲಿಕ್ಕೆ ಯಾವ ರೀತಿ, ಯಾವ ರೂಪದಲ್ಲಿ ಔಷಧವನ್ನು ಕೊಡುವುದು ಉತ್ತಮವೆಂದು ಪರಿಶೀಲಿಸಬೇಕು.
ಪ್ರ: ಆಯುರ್ವೇದ ಪ್ರಾಕ್ಟೀಸ್ ಮಾಡುವ ವೈದ್ಯರಿಗೆ ಬೇಕಾದ ಮೂಲದ್ರವ್ಯ ಆತ್ಮಪ್ರತ್ಯಯ ಹಾಗೂ
ಶಾಸ್ತ್ರಪ್ರಭುತ್ವವೆನ್ನುವುದೇನೋ ಒಪ್ಪತಕ್ಕದ್ದೇ. ಅದರ ಜೊತೆಗೆ ಸಂಪಾದನೆಯ ಪ್ರಶ್ನೆಯೂ ಇದೆಯಲ್ಲವೆ?
ಉ: ಈ ಕ್ಷೇತ್ರದಲ್ಲಿ ತುಂಬಾ ಹಣವನ್ನು ಗಳಿಸಬೇಕು ಎನ್ನುವ ಉದ್ದೇಶ ನನಗೆ ಮೊದಲಿಂದಲೂ ಇರಲಿಲ್ಲ. ಈ ಪದ್ಧತಿಯನ್ನು ಸಮಗ್ರವಾಗಿ ವಿಶ್ವದೆಲ್ಲೆಡೆ ಪ್ರಸರಿಸಬೇಕೆಂಬ ಅಪೇಕ್ಷೆ ಈಗಲೂ ಇದೆ. ಅದಕ್ಕೆ ನಿಶ್ಚಿತವಾಗಿ ಹಣ ಬೇಕೇ ಬೇಕು. ಹಣದ ಹಿಂದೆ ನಾವು ಹೋಗದೇ ಇದ್ದರೆ ಹಣವೇ ನಮ್ಮೊಟ್ಟಿಗೆ ಬರುತ್ತದೆ. ಸಂಕಲ್ಪವು ಶುದ್ಧವಾಗಿದ್ದು ಶ್ರೇಷ್ಠವೂ ಆಗಿದ್ದರೆ ಅವಶ್ಯವಿರುವ ಧನಾನುಕೂಲವು ದೈವಾನುಗ್ರಹದಿಂದ ಪ್ರಾಪ್ತವಾಗಿಯೇ ಆಗುತ್ತದೆ. ವಿಶ್ವಸನೀಯವಾದ ಫಲಿತಾಂಶವನ್ನು ಕೊಟ್ಟರೆ ಬರುವ ಪೇಶೆಂಟುಗಳ ಸಂಖ್ಯೆಯೂ ಇಮ್ಮಡಿ ಮುಮ್ಮಡಿಯಾಗುತ್ತದೆ. ಹಣವೂ ಬರುತ್ತದೆ.
ಪ್ರ: ಔಷಧದ ಕಂಪೆನಿಗಳ ವ್ಯವಹಾರದಲ್ಲಿ ವೈದ್ಯರಿಗೆ ಸಂಬಂಧಿಸಿದಂತೆ ಕಮಿಷನ್-ಪರ್ಸೆಂಟೇಜ್ ಇತ್ಯಾದಿ ಹಲವು ಆಮಿಷಗಳಿದ್ದಾವಲ್ಲ. ಅಲ್ಲಿ ಋಜುತೆ ಹೇಗೆ ಸಾಧ್ಯ?
ಉ: ಬೇಕಾದಷ್ಟಲ್ಲ, ಬೇಡದಷ್ಟು ಇವೆ. ಯಾವುದರಲ್ಲಿ ಪರ್ಸೆಂಟೇಜ್ ಜಾಸ್ತಿ ಬರುತ್ತದೆ ಅದನ್ನೇ ಹೆಚ್ಚು ಹೆಚ್ಚು ಶಿಫಾರಸು ಮಾಡುವುದು, ಯಾವ ಲ್ಯಾಬಿನವರು ಎಷ್ಟು ಹೆಚ್ಚು ಕಮಿಷನ್ ಕೊಡುತ್ತಾರೆ ಅವರಿಗೆ ವ್ಯಾಪಾರ ಕುದುರಿಸುವುದು, ಅಂಥವನ್ನೆಲ್ಲ ದೂರವಿಟ್ಟಷ್ಟೂ ಕ್ಷೇಮ. ೨೩ ವರ್ಷಗಳಷ್ಟು ಹಿಂದೆ ಲ್ಯಾಬಿನವರು ನನಗೆ ಕೊಟ್ಟ ಕಮಿಷನಿನ ಚೆಕ್ಕುಗಳು ಈಗಲೂ ನನ್ನ ಹತ್ತಿರ ಬಿದ್ದಿವೆ. ಬ್ಯಾಂಕಿಗೆ ಹಾಕಲೇ ಇಲ್ಲ. ನೀತಿಪಾರಿಶುದ್ಧ್ಯವನ್ನು ಪೂರ್ಣಶಃ ಜಾರಿಯಲ್ಲಿಟ್ಟುಕೊಂಡರೆ ಸುಖ ಸಂತೋಷ ಸಮಾಧಾನಗಳು ಇನ್ನೊಂದು ರೂಪದಲ್ಲಿ ಬಂದೇ ಬರುತ್ತವೆ. ಯಶಸ್ಸಾಗಲಿ ಕೀರ್ತಿಯಾಗಲಿ ಧನವಾಗಲಿ ಸುಲಭದಲ್ಲಿ ಬರುವಂಥದಲ್ಲ. ಪ್ರಯತ್ನವೇ ಪರಮಸೋಪಾನ. ಆಯುರ್ವೇದವನ್ನು ನಾವೇ ಅನುಭವಿಸಬೇಕು. ಆಗ ಅದರ ಲಾಭ ಏನು, ಏಕೆ ಅದು ಪಾವಿತ್ರ್ಯವನ್ನು ಪಡೆದುಕೊಂಡಿದೆ, ಏಕೆ ಶ್ರೇಷ್ಠ, ಏಕೆ ಸಾರ್ವಕಾಲಿಕ, ಎನ್ನುವುದು ಅರ್ಥವಾಗುತ್ತದೆ.
ಪ್ರ: ಆಯುರ್ವೇದ ಶಾಸ್ತ್ರಸಂಹಿತೆಗಳಲ್ಲಿ ಅಸಂಖ್ಯ ರೋಗಗಳ ಅಸಂಖ್ಯ ಸಸ್ಯಾದಿಗಳ ಉಲ್ಲೇಖವಿದೆ ಎಂದು ಹೇಳಿದಿರಿ. ಕುತೂಹಲಕ್ಕೆ ಕೇಳುತ್ತೇನೆ, ಅದನ್ನು ಕಂಡುಹಿಡಿದವರ ಹೆಸರು, ಅವರ ಪ್ರವರಗಳೇನಾದರೂ ತಿಳಿದಿದೆಯೆ?
ಉ: ಸ್ವಾರಸ್ಯದ ಪ್ರಶ್ನೆ. ಎಲ್ಲಿಯೂ ಇಲ್ಲ. ಅದೇ ಆಯುರ್ವೇದದ ಅನನ್ಯತೆ. ಅಲೋಪಥಿಯಲ್ಲಿ ಯಾವ ಡಾಕ್ಟರ್ ಅಥವಾ ಯಾವ ಸಂಶೋಧಕನು ಕಾಯಿಲೆಯನ್ನು ಕಂಡುಹಿಡಿಯುತ್ತಾನೋ ಅವನ ಹೆಸರನ್ನು ಆಯಾ ರೋಗಗಳಿಗೆ ಟಂಕಿಸುತ್ತಾರೆ. ಕಾಯಿಲೆಗಳ ಹೆಸರೇ ಡಾಕ್ಟರದೂ ಆಗಿರುತ್ತದೆ. ಗಿಲ್ಬರ್ಟ್ಸ್ ಸಿಂಡ್ರೋಮ್, ಪಾರ್ಕಿನ್ಸನ್ಸ್ ಡಿಸೀಸ್, ಇತ್ಯಾದಿ. ಪಾರ್ಕಿನ್ಸನ್ ಎಂಬವನಿಗೆ ಆ ಕಾಯಿಲೆ ಇತ್ತೋ ಇಲ್ಲವೋ. ಆದರೆ ಅವರವರ ಹೆಸರಲ್ಲಿ ರೋಗನಾಮಧೇಯವಂತೂ ಚಾಲ್ತಿಯಲ್ಲಿರುತ್ತದೆ. ಅದು ಪಾಶ್ಚಾತ್ಯ ಪದ್ಧತಿ. ಭಾರತೀಯ ಪದ್ಧತಿ ಹೀಗಲ್ಲ. ಚರಕ ಸಂಹಿತೆ ಇರಲಿ, ಸುಶ್ರುತ ಸಂಹಿತೆ ಇರಲಿ, ಅವುಗಳಲ್ಲಿರುವ ರೋಗ ರೋಗೋಪಚಾರ ವನೌಷಧಾದಿಗಳು ಒಬ್ಬರೇ ರಿಸರ್ಚ್ ಮಾಡಿದ್ದೇನೂ ಅಲ್ಲ. ಸಂಹಿತೆಗಳ ನಿರ್ಮಾತೃಗಳು ವೈದ್ಯರು. ಲಕ್ಷಾಂತರ ರೋಗಿಗಳ ಚಿಕಿತ್ಸೆ ಮಾಡಿದ್ದರ ದಾಖಲೆ ಗ್ರಂಥಗಳಲ್ಲಿ ಸಿಗುತ್ತದೆ. ಆ ಮಹಾತ್ಮರು ವೈದ್ಯರಷ್ಟೇ ಅಲ್ಲ, ವಿಜ್ಞಾನಿಗಳೂ ಹೌದು. ಶಾಶ್ವತವಾದ ಸಂಶೋಧನ ಸಿದ್ಧಾಂತಗಳನ್ನು ಕೊಟ್ಟಿದ್ದಾರೆ. ಆ ಮಹನೀಯರು ಋಷಿಗಳೂ ಹೌದು. ಅದಕ್ಕೆ ಅವರಿತ್ತ ಶಾಸ್ತ್ರಗಳೇ ಪ್ರಮಾಣ.
ಪ್ರ: ಋಷಿರ್ದರ್ಶನಾತ್.
ಉ: ಋಷಿಗಳಾಗಿದ್ದರಿಂದಲೇ ಅವರು ನಿಃಸ್ವಾರ್ಥಿಗಳೂ ಸರ್ವಲೋಕಹಿತರತರೂ ಆಗಿದ್ದರು. ಆ ವಂದನೀಯರು ಶಿಷ್ಯರಿಗೆ ಜ್ಞಾನಶಾಖೆಯನ್ನು ಬೋಧಿಸಿದರು, ವರ್ಗಾಯಿಸಿದರು. ಒಂದೊಂದು ಸಂಹಿತೆಗಳನ್ನು ನೋಡಿದರೆ ಅದೆಷ್ಟೊಂದು ಸಾವಿರ ಶ್ಲೋಕಗಳ ಸಂಗ್ರಹ! ಗ್ರಂಥವಿಸ್ತರವನ್ನು ಗಮನಿಸಿದರೆ ಯಾವನೇ ಒಬ್ಬ ವ್ಯಕ್ತಿಯ ಜೀವಮಾನದಲ್ಲಿ ಮಾಡಿ ಮುಗಿಸುವಂಥದಲ್ಲವೆಂದು ತಾನಾಗಿ ಗೊತ್ತಾಗುತ್ತದೆ. ಹಾಗೆಯೇ ಒಬ್ಬನ ಬದುಕಿನ ಅವಧಿಯಲ್ಲಿ ಓದಿ ಅರಗಿಸಿಕೊಳ್ಳಲೂ ಆಗದಿರುವಂಥದ್ದು. ಒಬ್ಬನೇ ಲೇಖಕ ಆ ಪ್ರಮಾಣದಲ್ಲಿ ಬರೆಯಲು ಸಾಧ್ಯವೆ? ಒಬ್ಬನೇ ವೈದ್ಯ ಅಷ್ಟೊಂದು ರೋಗಗಳ ಸಮಗ್ರವಾದ ಮಾಹಿತಿ ಕೊಡಲು ಸಾಧ್ಯವೆ? ಸಂಹಿತೆಗಳ ಕರ್ತೃಗಳು ಕೇವಲ ವೈದ್ಯರಾಗಿದ್ದಿದ್ದರೆ ಆ ಗ್ರಂಥಗಳಿಗೆ ಮಂತ್ರಮೌಲ್ಯ ಇರುತ್ತಿರಲಿಲ್ಲ, ಬರುತ್ತಿರಲಿಲ್ಲ. ಆಯುರ್ವೇದದ ಶೋಧಮೌಲ್ಯದ ಅಗಾಧತೆಯನ್ನೂ ಔನ್ನತ್ಯವನ್ನೂ ಪರಾಂಬರಿಸಿದರೆ ಏಕೆ ಅವರನ್ನು ಗೌರವಿಸಲೇಬೇಕು ಎಂಬುದು ಮನದಟ್ಟಾಗುತ್ತದೆ. ಆಯುರ್ವೇದವು ಶಾಸ್ತ್ರವೋ ವಿಜ್ಞಾನವೋ ಎಂಬ ಜಿಜ್ಞಾಸೆ ವಿದ್ವದ್ವಲಯದಲ್ಲಿ ಇದೆ. ಎರಡೂ ಹೌದು. ಶಾಸ್ತ್ರ ಮತ್ತು ವಿಜ್ಞಾನ ಪರಸ್ಪರ ವಿರೋಧಗುಣ ಉಳ್ಳದ್ದು ಎಂಬುದು ಪ್ರಾತಿಭಾಸಿಕ ಗ್ರಹಿಕೆ. ಜಗತ್ತಿನ ಪ್ರಜಾಲೋಕವು ಕ್ಷೇಮವಾಗಿರಬೇಕೆಂಬ ವೈಶ್ವಿಕಾಶಯದಿಂದ ವೈದ್ಯಕಜ್ಞಾನನಿಧಿಯನ್ನು ಆ ವರೇಣ್ಯರು ನೀಡಿದ್ದಾರೆ. ಕರುಣರಸ ಇಲ್ಲವೆಂದಾಗಿದ್ದರೆ ಯಾವುದೇ ವೈದ್ಯಕೀಯ ಕ್ಷೇತ್ರವಿರುತ್ತಿರಲಿಲ್ಲ. ರೋಗಿಯನ್ನು ಕಂಡಾಗ ವೈದ್ಯನಲ್ಲಿ ಮೊದಲು ಮೂಡಬೇಕಾದದ್ದು ಕಾರುಣ್ಯ. ರಾತ್ರಿಯ ಹೊತ್ತು ಹತ್ತಾಗಲಿ ಹನ್ನೊಂದಾಗಲಿ ರೋಗಿಗಳು ಕಾಯುತ್ತಿದ್ದಾರಾದರೆ ತಾಳ್ಮೆಯಿಂದ ನೋಡಬೇಕು.
ಪ್ರ: ನೀವು ರಸ-ರುಚಿಗಳ ಕುರಿತು ಪ್ರಸ್ತಾವ ಮಾಡಿದಿರಿ. ಈಗ ಕರುಣರಸವನ್ನೂ ಉಲ್ಲೇಖಿಸಿದಿರಿ. ಸಾಮಾನ್ಯವಾಗಿ ರಸಚರ್ಚೆ ಇರುವುದು ಅಲಂಕಾರಶಾಸ್ತ್ರಗಳಲ್ಲಿ. ನಾಟ್ಯಶಾಸ್ತ್ರ ಇದರ ಮಾತೃಕೆ. ಆಯುರ್ವೇದದಲ್ಲಿ ರಸಚಿಂತನೆ ಇದೆಯೇ?
ಉ: ಈ ಕುರಿತು ವ್ಯಾಪಕವಾದ ಚಿಂತನವಿದೆ. ವಿಮರ್ಶೆ ಇದೆ. ಸಿದ್ಧಾಂತವಿದೆ. ಅದು ಋಷಿಗಳ ನಡುವೆ ನಡೆಯುವ ಸಂವಾದಗೋಷ್ಠಿಯ ಸ್ವರೂಪದಲ್ಲಿದೆ. ಸುದೀರ್ಘ ಚರ್ಚೆಯಲ್ಲಿ ಒಂದೊಂದು ರಸವನ್ನು ಕುರಿತ ಮಥನಕ್ರಮ ತುಂಬ ಹೃದ್ಯವಾಗಿದೆ. ಸ್ವಾದು (ಸಿಹಿ) ಎನ್ನುವುದು ಯಾಕೆ ರಸ? ಯಾಕೆ ರಸವಲ್ಲ? ಇದರ ಬಗ್ಗೆ ವಿಸ್ತೃತವಾದ ವಿಚಾರವಿನಿಮಯವಿದೆ. ಚಿಂತನಾಸ್ತರಣದ ಕೊನೆಗೆ ಆರು ರಸಗಳನ್ನು ಒಪ್ಪಿ ಅಂಗೀಕರಿಸಿ ಸಿದ್ಧಾಂತಿಸಿದ್ದಾsರೆ. ಆರಕ್ಕಿಂತ ಭಿನ್ನವಾದವು ಯಾಕೆ ರಸವಲ್ಲ ಎನ್ನುವ ಕುರಿತೂ ಮಂಥನ ನಡೆಸಿದ್ದಾರೆ. ಆ ರಸಗಳು ಯಾವ ಯಾವ ಸಸ್ಯಗಳಲ್ಲಿವೆ, ಯಾವ ಆಹಾರದ್ರವ್ಯಗಳಲ್ಲಿವೆ, ರಸದ ಗುಣ ಏನು, ದೇಹದ ಮೇಲೆ ಅದರ ಪರಿಣಾಮವೇನು? – ಇವೆಲ್ಲದರ ಸಮಗ್ರ ವಿಶ್ಲೇಷಣವಿದೆ. ಭಾರತೀಯ ಕಾವ್ಯಾದಿಗಳಲ್ಲೂ ಷಡ್ರಸೋಪೇತ ಭೋಜನದ ವರ್ಣನೆಗಳು ಢಾಳಾಗಿವೆ. ಕಾವ್ಯವಾಙ್ಮಯದಲ್ಲೂ ಆಯುರ್ವೇದ ಗ್ರಂಥಗಳಲ್ಲೂ ರಸಗಳು ಆರು ಎಂದು ಉದ್ಘುಷ್ಟವಾಗಿದೆ. ಆದರೆ ದುರಂತ ನೋಡಿ. ಇವತ್ತಿನ ನಮ್ಮ ಶೈಕ್ಷಣಿಕ ವ್ಯವಸ್ಥೆಯ ಪರೀಕ್ಷೆಯಲ್ಲಿ ರಸಗಳೆಷ್ಟು? ಎಂಬ ಪ್ರಶ್ನೆಗೆ ನಮ್ಮ ಮಕ್ಕಳು ಬರೆಯಬೇಕಾದ ಉತ್ತರ ನಾಲ್ಕು. ಇದು ಬೌದ್ಧಿಕ ಉನ್ನತಿಯೋ ಅವನತಿಯೋ! ವಿಟಮಿನ್ ಸಿ ಜಾಸ್ತಿ ಇದೆ ಎನ್ನುವ ಕಾರಣಕ್ಕೆ ಆಸ್ತಮಾ ಇರುವಾಗ ಕಿತ್ತಳೆಹಣ್ಣನ್ನು ಸೇವಿಸಬೇಕೆಂದು ಸಲಹೆ ಕೊಡುವುದನ್ನು ನೋಡುತ್ತಾ ಇದ್ದೇವಲ್ಲ. ಅದನ್ನು ಕೊಟ್ಟರೆ ಉಬ್ಬಸ ಉಲ್ಬಣಿಸುತ್ತದೆ. ಆ ಹಣ್ಣಿನ ಗುಣಲಕ್ಷಣವನ್ನು ಹೇಳಿದ್ದು ಆಯುರ್ವೇದ. ಆಲೂಗಡ್ಡೆಯಲ್ಲಿ ಎಷ್ಟು ಕ್ಯಾಲರಿ ಇದೆ, ಕೆಮಿಕಲಿ ಏನಿದೆ, ಇತ್ಯಾದಿ. ಎಲ್ಲವೂ ಸರಿಯೇ. ಆದರೆ ಅದರ ಸೇವನೆಯಿಂದ ದೇಹದ ಮೇಲಾಗುವ ಪರಿಣಾಮವೇನು? ಆಸಿಡಿಟಿ ಬಢಕಾಯಿಸುತ್ತದೆ, ಹೊಟ್ಟೆಯಲ್ಲಿ ವಾಯುಸಂಚಯನವಾಗುತ್ತದೆ – ಎಂಬ ತಥ್ಯವನ್ನು ಹೇಳಿದ್ದು ಆಯುರ್ವೇದ. ಬೀಟ್ರೂಟಿಂದ ಕಬ್ಬಿಣದಂಶ ಹೆಚ್ಚಾಗುತ್ತದೆ ಎನ್ನುವುದು ಪಾರ್ಶ್ವಿಕ ಜ್ಞಾನ. ಉಸಿರಾಟದ ಸಮಸ್ಯೆ, ಕೆಮ್ಮು ಇರುವವರಿಗೆ ಐಸ್ಕ್ರೀಮನ್ನು ಮೂರು ಹೊತ್ತು ಕೊಟ್ಟರೆ ಏನು ಗತಿ? ಪೋಷಕಾಂಶಗಳನ್ನು ಹಾಗೂ ಕ್ಯಾಲರಿಯನ್ನು ಲೆಕ್ಕ ಹಾಕಿ ಮೂರೂ ಹೊತ್ತು ಕೊಟ್ಟು ಬಿಡುವ. ಮರುದಿನವೇ ನ್ಯುಮೋನಿಯಾ ಆಗುತ್ತದೆ. ಕೊಡಬಾರದು ಎಂದು ತಾರ್ಕಿಕವಾಗಿ ಹೇಳುವುದು ಆಯುರ್ವೇದ.
ಪ್ರ: ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದು ಎಂಬ ಆಹಾರನಿಯಮದಲ್ಲಿ ಆಯುರ್ವೇದವು ತುಂಬ ಕಠೋರ, ಬಿಗಿ, ನಿರ್ದಯ ಎನ್ನುವ ಪ್ರಥೆ ಇದೆ. ಅದನ್ನೇ ಪಥ್ಯ ಎನ್ನುತ್ತಾರಲ್ಲವೆ? ಯಾಕೆ ಹಾಗೆ?
ಉ: ಕೆಮ್ಮು ಇರುವ ಒಂದು ಚಿಕ್ಕ ಮಗು ಫ್ರಿಜ್ಜಿನಲ್ಲಿರುವ ಕೋಲ್ಡ್ ವಾಟರ್ ಕುಡಿದರೆ ಹಿರಿಯರು ಬೈಯುತ್ತಾರೆ, ನಿನಗೆ ಕಾಮನ್ಸೆನ್ಸ್ ಇಲ್ವಾ? ಚಿಕ್ಕ ಮಗುವಿಗೆ ಎಂತಹ ಕಾಮನ್ಸೆನ್ಸ್? ಕೋಲ್ಡಿನ ಬಗ್ಗೆ ಇರಬೇಕಾದ ಸಾಮಾನ್ಯಜ್ಞಾನವನ್ನು ನಾವು ಮಗುವಿನಿಂದ ನಿರೀಕ್ಷಿಸುತ್ತೇವೆ. ಆ ಮಗುವಿಗೆ ತಿಳಿವು ಇರಬೇಕೆಂದು ಆಗ್ರಹಿಸುತ್ತೇವೆ. ಅದೇ ಪಥ್ಯ. ಪಥಾನಾಂ ಯತ್ ಹಿತಂ, ಪಥ್ಯಂ. ಪಥಾನಾಂ ಯತ್ ಅಹಿತಂ, ಅಪಥ್ಯಂ. ವಸ್ತುತಃ ಪಥ್ಯ ಯಾವುದು? ಅಪಥ್ಯ ಯಾವುದು? ನಮಗೆ ಗೊತ್ತಿದೆ. ಹಾಗೆಂದು ಪೂರ್ತಿ ಗೊತ್ತಿಲ್ಲ. ಆಪಲ್ ತಿಂದರೆ ಕೀಲುನೋವು ಜಾಸ್ತಿ ಆಗುತ್ತದೆಂದು ಗೊತ್ತಿಲ್ಲ. ಅದು ವಾತವರ್ಧಕವೆಂದು ಗೊತ್ತಿಲ್ಲ. ಹಾಗೆ ನೋಡಿದರೆ ಪಥ್ಯದ ಅಳವಡಿಕೆ ಎಂಬುದು ಕಾಮನ್ಸೆನ್ಸ್! ಆಯುರ್ವೇದವು ಹೇಳಿದ ಆಹಾರವಿಷಯ ಸಮಗ್ರವಾದುದು. ಪಥ್ಯಗಳನ್ನೆಲ್ಲ ಅಳವಡಿಸಿಕೊಂಡರೆ ಸ್ವಯಂ ಆರೋಗ್ಯಪಾಲನೆಯೂ ಸಂವರ್ಧನೆಯೂ ಆಗುತ್ತದೆ. ಆಯುರ್ವೇದವು ಹೆಚ್ಚು ಗೊತ್ತಾದಷ್ಟೂ ಕೌಶಲದಿಂದ ಬದುಕಲಿಕ್ಕೆ ಸಾಧ್ಯವಾಗುತ್ತದೆ. ಎಕ್ಸ್ಪರ್ಟ್ ಲಿವಿಂಗ್ ಆಗಬೇಕಾದರೆ ಆಯುರ್ವೇದ ಬೇಕು.
ಪ್ರ: ರೋಗೋಪಚಾರವನ್ನು ನಿರಾಕರಿಸಿ ಕಾಲಾಂತರದಲ್ಲಿ ಅದೇ ರೋಗಕ್ಕೆ ಚಿಕಿತ್ಸೆಯನ್ನು ನೀಡಿ ಗೆಲವನ್ನು ಕಂಡದ್ದು ನಿಮ್ಮ ಅನುಭವದಲ್ಲಿದೆಯೆ?
ಉ: ಹೌದು, ಬೇಕಾದಷ್ಟಿದೆ. ಮೊದಮೊದಲು ಶುಗರ್ ಲೆವೆಲ್ ೩೫೦ ಇದ್ದರೂ ನನ್ನ ಕೈಯಲ್ಲಿ ಆಗೋದಿಲ್ಲ ಎಂದು ಅಳುಕುತ್ತಿದ್ದೆ. ಈಗ ೬೫೦ ಇದ್ದರೂ ಸ್ವೀಕರಿಸುತ್ತೇನೆ. ನಮ್ಮ ಅನುಭವ ದಟ್ಟವಾಗುತ್ತಿದ್ದಂತೆ ಸಾಮರ್ಥ್ಯವೂ ಆತ್ಮವಿಶ್ವಾಸವೂ ವರ್ಧಿಸುತ್ತದೆ. ನಮ್ಮ ಕ್ಷೇತ್ರ ತೂಗುಮಂಚವಲ್ಲ. ಕುದಿನೀರ ನಡೆ.
ಪ್ರ: ಆಯುರ್ವೇದ ವೈದ್ಯಸಂದೋಹದಲ್ಲಿ ಬಹ್ವಂಶ ಈಗ ಅಲೋಪಥಿ ಪ್ರಾಕ್ಟೀಸ್ ಮಾಡುತ್ತಾರಲ್ಲ. ಅದು ಅನಿವಾರ್ಯವೋ ಔದಾಸೀನ್ಯವೋ?
ಉ: ನಮ್ಮ ಪದ್ಧತಿಯನ್ನು ಬಿಟ್ಟು ಪರಕೀಯವನ್ನು ಆತುಕೊಂಡರೆ ಶ್ರೇಯಸ್ಸಲ್ಲ. ಅನ್ಯಪದ್ಧತಿ ನಮಗೇಕೆ? ಅದಕ್ಕಾಗಿಯೇ ನುರಿತವರು ಕಲಿತವರು ಇದ್ದಾರಲ್ಲ. ಅಲೋಪತಿಯೂ ಘನತ್ವ ಉಳ್ಳ ವೈದ್ಯಶಾಖೆ ಹೌದು. ಆದರೆ ಆಯುರ್ವೇದ ಆಯುರ್ವೇದವೇ, ಅಲೋಪತಿ ಅಲೋಪತಿಯೇ. ಡಾಕ್ಟರಾದವರು ಇಂಜಿನಿಯರ್ ಕೆಲಸ ಮಾಡಬಾರದು. ನೀವು ಪದವಿಯನ್ನು ಆಯುರ್ವೇದದಲ್ಲಿ ಪಡೆದ ಮೇಲೆ ಆಯುರ್ವೇದ ವೈದ್ಯರೇ ಆಗಿ. ಶ್ರೇಷ್ಠವೈದ್ಯರಾಗಿ. ಇದರಲ್ಲಿ ತುಂಬಾ ಅವಕಾಶವಿದೆ. ಇಲ್ಲಿ ಎಂಬಿಬಿಎಸ್ ಮಾಡಿದವರು ಭಾರತದಲ್ಲಷ್ಟೇ ಕೆಲಸ ಮಾಡಿಯಾರು. ಬಿಎಎಮ್ಎಸ್ ಮಾಡಿದವರ ತಾಣ, ಇಡೀ ಜಗತ್ತು. ಅಂತಹ ಅಸೀಮ ವೈಶಾಲ್ಯವಿದೆ. ಇಷ್ಟು ವ್ಯಾಪಕತೆ ಇರುವಾಗ ಇನ್ನೊಬ್ಬರು ಮಾಡುವುದನ್ನು ನಾವೂ ಮಾಡ ಹೊರಟರೆ ನಾವು ಆ ಕ್ಷೇತ್ರದಲ್ಲಿ ತಜ್ಞರೋ ಪ್ರಾಜ್ಞರೋ ಆಗಲು ಸಾಧ್ಯವಿಲ್ಲ. ಜನರೂ ಒಪ್ಪಿಕೊಳ್ಳುವುದಿಲ್ಲ. ಗೌರವವೂ ಸಿಗುವುದಿಲ್ಲ. ನೆಮ್ಮದಿಯೂ ಇರುವುದಿಲ್ಲ.
ಪ್ರ: ಮನೋಗುಣ ಆತ್ಮಗುಣಗಳನ್ನು ಸಂಹಿತೆ ಒಳಗೊಂಡಿದೆ ಎಂದು ಹೇಳಿದಿರಿ. ಹಾಗಾದರೆ ಮನೋಬುದ್ಧಿಶ್ಚಿತ್ತಾಹಂಕಾರಗಳಿಗೂ ಆರೋಗ್ಯಕ್ಕೂ ನೇರಾನೇರ ಸಂಬಂಧವನ್ನು, ಅಂದರೆ ಅಧ್ಯಾತ್ಮಕ್ಕೂ ಆರೋಗ್ಯಕ್ಕೂ ಇರುವ ಸಂಬಂಧನೈಕಟ್ಯವನ್ನು ಆಯುರ್ವೇದ ಪ್ರತಿಪಾದಿಸುತ್ತದೆಯೆ?
ಉ: ಆಧುನಿಕ ವಿಜ್ಞಾನವು ಮನಸ್ತತ್ತ್ವವನ್ನು ಒಪ್ಪಿಕೊಂಡಿದ್ದು ಹಲಕೆಲ ದಶಕಗಳ ಹಿಂದೆ. ಸ್ವಾಸ್ಥ್ಯದ ಸ್ವರೂಪಲಕ್ಷಣ ಹೀಗಿದೆ: ಸಮದೋಷಃ ಸಮಾಗ್ನಿಶ್ಚ ಸಮಧಾತು ಮಲಕ್ರಿಯಾಃ ಪ್ರಸನ್ನಾತ್ಮೇಂದ್ರಿಯಮನಾಃ ಸ್ವಸ್ಥ ಇತ್ಯಭಿಧೀಯತೇ. ಮನುಷ್ಯನು ಮನಃಪ್ರಸನ್ನನಾಗಿರಬೇಕು. ಮನಸ್ಸಲ್ಲಿ ಒತ್ತಡವಿದ್ದರೆ ಆತ ಆರೋಗ್ಯವಂತನಲ್ಲವೆಂಬುದು ಸ್ಪಷ್ಟೋಕ್ತಿ. ಬಹಿರಿಂದ್ರಿಯಗಳ ಪರೀಕ್ಷಣದ ವರದಿಗಳೆಲ್ಲ ನಾರ್ಮಲ್ ಇರಬಹುದು. ಆದರೆ ಮನಸ್ಸಿನ ರಿಪೋರ್ಟ್ ಏನು? ದೈಹಿಕವಾದ ಶಾಂತಿ, ಶಾಂತಿಯಲ್ಲ. ಮನೋಜಂಜಡದ ವ್ಯಕ್ತಿಯೊಬ್ಬರು ಬರುತ್ತಾರೆ – ಜ್ವರದ ತಪಾಸಣೆಗಾಗಿ. ೯೯ ಡಿಗ್ರಿ ಸೆಲ್ಷಿಯಸ್ ಇರಬಹುದು. ರಾತ್ರಿ ಪೂರಾ ಜ್ವರದ್ದೇ ದೊಂಬರಾಟ ಡಾಕ್ಟರೇ. ನನ್ನ ಜೀವಮಾನದಲ್ಲಿ ಈ ನಮೂನೆ ಸುಡುಜ್ವರವನ್ನು ಕಂಡದ್ದಿಲ್ಲ. ಬದುಕೋ ಭರವಸೆಯೇ ಇಲ್ಲ. ನನ್ನನ್ನು ಬದುಕಿಸೋ ಸಾಧ್ಯತೆ ಇದ್ದರೆ, ಅಂಥಾ ಔಷಧ ನಿಮ್ಮಲ್ಲಿದ್ದರೆ ಕೊಡಿ ಎನ್ನುತ್ತಾರೆ. ಅವರಿಗೆ ಜ್ವರ ಕಡಮೆ ಆಗಲಿಕ್ಕೆ ಒಂದು ವಾರ ತಗಲುತ್ತದೆ. ಇನ್ನೊಬ್ಬರು ಧೀರರು ಬರುತ್ತಾರೆ. ೧೦೪ ಡಿಗ್ರಿ ಜ್ವರ ಇರುತ್ತದೆ. ಡಾಕ್ಟರೇ, ಸ್ವಲ್ಪ ಜ್ವರ ಇದೆ. ಬೇಕಾದರೆ ಔಷಧ ಕೊಡಿ ಎನ್ನುತ್ತಾರೆ. ಅವರು ಎರಡೇ ದಿನದಲ್ಲಿ ಹುಷಾರಾಗುತ್ತಾರೆ.
ಪ್ರ: ಮನ ಏವ ಮನುಷ್ಯಾಣಾಂ ಕಾರಣಂ….
ಉ: ಅದು ಯಾಥಾರ್ಥ್ಯ. ನನ್ನ ಅನುಭವದ್ದೇ ನಿದರ್ಶನವನ್ನು ಹೇಳುತ್ತೇನೆ. ಹೊಸನಗರದ ಹತ್ತಿರದವರು ರೋಗಿ. ಆ ತಾಯಿಗೆ ಬ್ರೆಸ್ಟ್ ಕ್ಯಾನ್ಸರ್. ಏಳೆಂಟು ಸೆಂಟಿಮೀಟರಷ್ಟು ದೊಡ್ಡ ಗಡ್ಡೆ. ಬೆಂಗಳೂರು, ಮುಂಬಯಿಯ ಕ್ಯಾನ್ಸರ್ ಆಸ್ಪತ್ರೆಗಳಲ್ಲಿ ಪರೀಕ್ಷೆಗಳೆಲ್ಲ ಮುಗಿದಿದ್ದವು. ಫೈನಲ್ ಸ್ಟೇಜಲ್ಲಿದೆ. ಕೆಲವು ದಿವಸ ಬದುಕಬಹುದಷ್ಟೇ ಎಂದು ಶರಾ ಬರೆದಿದ್ದರು. ಆರ್ಥಿಕವಾಗಿಯೂ ಮಧ್ಯಮವರ್ಗದ ಕುಟುಂಬ. ಆ ತಾಯಿಯು ಮಕ್ಕಳಿಗೆ ಹೇಳಿದರಂತೆ ನಂಗೆ ಯಾವುದೇ ಚಿಕಿತ್ಸೆ ಬೇಡ. ಇದುವರೆಗೂ ಚೆನ್ನಾಗಿ ನೋಡಿಕೊಂಡಿದ್ದೀರಿ. ಟ್ರೀಟ್ಮೆಂಟ್ ತಗೊಳ್ಳೋಕೆ ನಾ ರೆಡಿ ಇಲ್ಲ. ಯಾವುದನ್ನೂ ಮಾಡಲಿಲ್ಲ ಕೂಡ. ಆ ತಾಯಿಯ ಮಕ್ಕಳು ನನ್ನ ಬಳಿ ಬಂದರು. ಅಮ್ಮನ ಕ್ಯಾನ್ಸರಿಗೆ ಚಿಕಿತ್ಸೆ ಕೊಡುತ್ತೀರಾ? ಕೇಳಿದರು. ಇಲ್ಲ. ಫೈನಲ್ ಸ್ಟೇಜ್ ಅಲ್ವಾ. ಕಷ್ಟ ಆಗಬಹುದು ಎಂದೆ. ಮರಳಿದರು. ತಿಂಗಳ ಬಳಿಕ ಪುನಃ ಬಂದರು. ನೀವು ಟ್ರೀಟ್ ಮಾಡುವುದಾದರೆ ತಗೊಳ್ತಾರಂತೆ. ಸ್ವಲ್ಪ ನೋವಿದೆ. ಬೇರೆ ಯಾವುದೇ ಚಿಕಿತ್ಸೆಯನ್ನೂ ಅವರು ಒಪ್ಪುತ್ತಿಲ್ಲ. ನೀವು ಹೂಂ ಅಂದರೆ ಕರೆದುಕೊಂಡು ಬರುತ್ತೇವೆ ಎಂದರು. ಅವರ ಸೌಜನ್ಯಕ್ಕೆ ಒಪ್ಪಿಕೊಂಡೆ. ಆ ತಾಯಿ ಬಂದರು. ೭೫ ವರ್ಷ. ಕ್ಯಾನ್ಸರ್ ಗಡ್ಡೆ ಬರಿಗಣ್ಣಿಗೆ ಉಬ್ಬಿ ಕಾಣುತ್ತಿತ್ತು. ಕೇಸ್ ಹಿಸ್ಟರಿಯ ಫೈಲ್ಗಳನ್ನು ತಾಯಿಯೇ ನನ್ನೆದುರಿಗಿಟ್ಟರು. ನಂಗೆ ಫೈನಲ್ ಸ್ಟೇಜ್ ಕ್ಯಾನ್ಸರ್ ಇದೆ ಎಂದು ಎಲ್ಲ ಡಾಕ್ಟರೂ ಹೇಳುತ್ತಿದ್ದಾರೆ. ಎಲ್ಲ ರಿಪೋರ್ಟ್ಗಳೂ ಹಾಗೇ ಹೇಳುತ್ತಿವೆ. ನಂಗೆ ಕ್ಯಾನ್ಸರ್ ಇದೆ ಎಂದು ನಾನು ನಂಬುವುದಿಲ್ಲ ಡಾಕ್ಟರೇ ಧೀರಗಂಭೀರಧ್ವನಿಯಲ್ಲಿ ಹೇಳಿ ಕೂತರು. ಗಮ್ಮತ್ತು ಅದಲ್ಲ, ನೀವಿನ್ನು ಒಂದು ವಾರವಷ್ಟೇ ಬದುಕಬಹುದು ಎಂದು ಡಾಕ್ಟರು ಅವರಿಗೆ ಹೇಳಿ ೨೪ ವರ್ಷದ ಅನಂತರ ಅವರು ನನ್ನ ಬಳಿಗೆ ಬಂದದ್ದು. ಅದೆಂಥ ಆತ್ಮಸ್ಥೈರ್ಯ! ಒಂದು ವಾರದಿಂದ ಸೊಲೂಪ ನೋವು ಕಾಣಿಸಿಕೊಂಡಿದೆಯಂತೆ. ಮನಸ್ಸಿನ ಅಸಾಧಾರಣ ಊರ್ಜೆಯನ್ನು ಆ ಕೇಸಿನಲ್ಲಿ ನೋಡಿದ್ದು ಮಾತ್ರ ಅಲ್ಲ, ಸ್ತಂಭಿತನಾಗಿಹೋದೆ. ವಸ್ತುತಃ ನಾನು ಕ್ಯಾನ್ಸರಿಗೆ ಚಿಕಿತ್ಸೆಯನ್ನು ಕೊಡುವವನಾಗಿರಲಿಲ್ಲ. ಆದರೂ ಅವರ ಆಗ್ರಹಕ್ಕಾಗಿ ಕೊಟ್ಟೆ. ಮೂರುನಾಲ್ಕು ತಿಂಗಳಲ್ಲಿ ನೋವು ಮಾಯಿತು. ಮತ್ತೆ ಒಂದೂವರೆ ವರ್ಷ ನಿರೌಷಧರಾಗಿ ನಿರ್ಬಾಧರಾಗಿ ಬದುಕಿದ್ದರು. ಅವರ ಮನಸ್ಸೇ ಅವರಿಗೆ ಧನ್ವಂತರಿಯಾಗಿತ್ತು. ಗಮನಾರ್ಹ ಸಂಗತಿ ಅಂದರೆ, ಅವರು ಆಧ್ಯಾತ್ಮಿಕವಾಗಿ ಅತ್ಯಂತ ಸುದೃಢರಾಗಿದ್ದರು. ಇಂತಹವು ನೂರಾರು ಕೇಸುಗಳು ನನ್ನ ದಫ್ತರದಲ್ಲಿವೆ. ರೋಗ ಮತ್ತು ಅಂತಃಕರಣ ಸಂಬಂಧವನ್ನು, ರೋಗ ಮತ್ತು ಅಧ್ಯಾತ್ಮದ ಸಂಬಂಧವನ್ನು ಆಯುರ್ವೇದ ಸ್ಪಷ್ಟವಾಗಿ ಗುರುತಿಸಿದೆ.
ಪ್ರ: ಮಂತ್ರಪುರಶ್ಚರಣೆಯಿಂದ ವ್ಯಾಧಿಯು ಉಪಶಮಿಸುತ್ತದೆ ಎನ್ನುವುದು ನಮ್ಮ ಪಾರಂಪರಿಕ ಶ್ರದ್ಧೆ. ನಿಮ್ಮ ವೃತ್ತಿಯ ಅನುಭವದಲ್ಲಿ ಇದು ಗಮನಕ್ಕೆ ಬಂದಿದೆಯೆ? ಪುರಾವೆ ಸಿಕ್ಕಿದೆಯೆ?
ಉ: ಸಿಕ್ಕಿದೆ. ನಿಶ್ಚಿತವಾಗಿ ಪರಿಣಾಮ ಬೀರುತ್ತದೆ. ಮಂತ್ರದಿಂದ ಮನಸ್ಸು ನಿರುಮ್ಮಳವಾಗುತ್ತದೆ. ಈ ತಂತ್ರದಿಂದ ದೇಹವೂ ದೃಢವಾಗುತ್ತದೆ.
ಪ್ರ: ಔಷಧರಹಿತ ಮಂತ್ರೋಪಾಸನೆಯ ಕುರಿತು ನಾನು ಹೇಳುತ್ತಿರುವುದಲ್ಲ. ಸಮಂತ್ರೌಷಧದ ಪ್ರಯೋಗ.
ಉ: ನಾನೂ ಅದನ್ನೇ ಹೇಳೋದು. ದೆಹಲಿಯಲ್ಲಿ ಕೆಲವು ವರ್ಷಗಳ ಹಿಂದೆ ಒಂದು ಸಂಶೋಧನೆ ಆಯಿತು. ಮಿದುಳನ್ನು ಎಡ ಹಾಗೂ ಬಲದಲ್ಲಿ ನಾಲ್ಕು ವಿಭಾಗವೆಂದು ಪರಿಗಣಿಸಿದರೆ, ಒಂದೊಂದು ಭಾಗವು ಒಂದೊಂದು ವೇದಮಂತ್ರಶ್ರವಣದಿಂದ ಉತ್ತೇಜಿತವಾಗುತ್ತದೆ, ಋಗ್ಯಜುಃಸಾಮಾಥರ್ವಣ ಋಚೆಗಳಿಂದ ನಿರ್ದಿಷ್ಟ ಒಂದು ಭಾಗವು ಮಾತ್ರ ಕ್ರಿಯಾಶೀಲವಾಗುತ್ತದೆ – ಇದು ಸಂಶೋಧನೆಯ ಫಲಿತಾಂಶ. ರೋಗಿಗಳ ದೃಷ್ಟಿಯಿಂದ ಹೇಳುವುದಾದರೆ ರೋಗಿಗಳು ನೆಗೆಟಿವಿಟಿಯಿಂದ ಹೊರಬರಲು ಮಂತ್ರೋಚ್ಚಾರದ ನಾದ ಹಾಗೂ ಲಯ ಖಂಡಿತವಾಗಿ ಪೋಷಕವಾಗುತ್ತದೆ. ನನ್ನ ರೋಗಿಗಳಲ್ಲೇ ಗಮನಿಸಿದ್ದೇನೆ. ತಮಗೆ ಅಂದಿಗರು ಬಂದಿಗರು ಬಂಧುಗಳು ಮಿತ್ರರು ತೀರ ಕಡಮೆ ಇರುವ ರೋಗಿಗಳು ತಮ್ಮ ಏಕಾಂತದಲ್ಲಿ ನಿರಂತರ ಮಂತ್ರೋಚ್ಚಾರದ ಸಾಂಗತ್ಯದಲ್ಲಿರುತ್ತಾರೆ. ಅಂತಃಶಕ್ತಿಯನ್ನು ವೃದ್ಧಿಸಿಕೊಳ್ಳುತ್ತಾರೆ. ಅದು ಭಾವಸಾಂತ್ವನವನ್ನು ಕೊಡುತ್ತದೆ. ಅನಾಥತೆಯನ್ನು ದೂರಮಾಡುತ್ತದೆ. ಸ್ವಾನುಭವದ ನಿದರ್ಶನ ಕೊಡುತ್ತೇನೆ. ನನ್ನ ಹುಟ್ಟೂರಿನ ಮನೆಯಲ್ಲಿ ಸುರುಂಬಡ್ಕ ಅಜ್ಜ ಎಂದಿದ್ದರು, ನನ್ನ ತಂದೆಯ ಸೋದರಮಾವ. ನಾನಾಗ ಹೈಸ್ಕೂಲಿಗೆ ಹೋಗುವ ಹುಡುಗ. ಅವರಿಗೆ ೮೦ ದಾಟಿತ್ತು. ಪ್ರತಿದಿನದ ಗಾಯತ್ರೀಮಂತ್ರದ ಅನುಷ್ಠಾನದ ಅವಧಿ ಅವರದ್ದು ಕನಿಷ್ಠ ಐದು ಗಂಟೆ. ಬೆಳಗ್ಗೆ ತಿಂಡಿ ತಿಂದು ಜಪಕ್ಕೆ ಕೂತರೆ ಏಳುವುದು ಮಧ್ಯಾಹ್ನದ ಊಟಕ್ಕೆ. ಸಂಜೆ ಐದು ಗಂಟೆಯಿಂದ ಮತ್ತೆ ಜಪ ಶುರುವಾದರೆ ರಾತ್ರಿ ಊಟದ ಹೊತ್ತಿನ ತನಕ. ನಮ್ಮ ಮೂಲ ಮನೆ ಕಜೆ. ಅದರ ಅಂಗಳದ ತುದಿಯಂಚಲ್ಲಿ ಕರ್ಗಲ್ಲಲ್ಲಿ ಕಟ್ಟಿದ ತಡೆಗೋಡೆ. ಮನೆ ಬಹಳ ಎತ್ತರದಲ್ಲಿತ್ತು. ಕೆಳಗಿನ ನೆಲಮಟ್ಟದಿಂದ ಬೆಳೆದ ಸುಮಾರು ೭೦ ಅಡಿ ಎತ್ತರದ ಅಡಿಕೆಮರದ ತುದಿಯ ಟೊಂಗೆಯ ಗರಿಯು ಮನೆಯಂಗಳದ ಗೋಡೆಯ ಮೈಸವರುತ್ತಿತ್ತು. ಅಜ್ಜನಿಗೆ ತಾಂಬೂಲಚರ್ವಣ ಪಿತೃಪರಂಪರೆಯಿಂದ ಬಂದದ್ದು. ಒಂದು ದಿವಸ ಕವಳ ಉಗಿಯಲಿಕ್ಕೆ ಅಂಗಳದ ತುದಿಗೆ ಬಂದ ಅಜ್ಜನಿಗೆ ತಲೆಸುತ್ತಿ ಜೋಲಿ ಹೊಡೆದು ಧೊಪ್ಪನೆ ಬಿದ್ದರು. ಅಜ್ಜ ಬಿದ್ದದ್ದು ಯಾರಿಗೂ ಗೊತ್ತಿಲ್ಲ. ಮನೆಮಂದಿ ತೋಟ ಗದ್ದೆ ಹಟ್ಟಿ ಅಡುಗೆಮನೆಗಳಲ್ಲಿ ಚೆದುರಿ ವ್ಯಸ್ತರಾಗಿದ್ದರು. ಪಕ್ಕದ ಮನೆಗೆ ಹೋಗಿದ್ದ ಭಾವ ಆ ಕೆಳತೋಟದ ಒಳಹೊಕ್ಕಾಗ ನಾರಾಯಣಾ ನಾರಾಯಣಾ ಎನ್ನುವ ಮರ್ಮರ ಕೇಳಿಸಿದರೂ ನಿಗಾ ವಹಿಸಲಿಲ್ಲ. ಭಾವ ಸೀದಾ ಮನೆಗೆ ಬಂದರು. ಅಜ್ಜ ಎಲ್ಲೆಂದು ವಿಚಾರಿಸಿದರು. ಎದ್ದುಬಿದ್ದು ಹುಡುಕಿದರು. ಜಾಡು ಸಿಗಲಿಲ್ಲ. ೭೦ ಅಡಿಯ ಆಳದಿಂದ ಕ್ಷೀಣಧ್ವನಿಯ ನರಳಿಕೆಯನ್ನು ಕೇಳಿ ಎಲ್ಲರೂ ಓಡಿದರು. ಅಜ್ಜನನ್ನು ಹೊತ್ತುಕೊಂಡು ಬಂದರು. ದೇಹದಲ್ಲಿ ಒಂದೇ ಒಂದು ಗೀರೂ ಇರಲಿಲ್ಲ! ಮೂಳೆಮುರಿತವಿರಲಿಲ್ಲ. ಎರಡು ಮೂರು ದಿನ ಮೈಕೈ ನೋವು ಎಂದು ಮಲಗಿಕೊಂಡಿದ್ದರು. ಬಾಲ್ಯದಲ್ಲಿ ಕಣ್ಣಾರೆ ಕಂಡ ಘಟನೆ. ಗಾಯತ್ರೀಮಂತ್ರದ ರಕ್ಷೆಯಲ್ಲದೆ ಬೇರಾವ ಕಾರಣವೂ ಅವರ ಪತನೋದ್ಧರಣಕ್ಕೆ ತೋಚುವುದಿಲ್ಲ.
ಪ್ರ: ಮಂತ್ರವಾಙ್ಮಯದಲ್ಲಿ ವಿವಿಧ ರೋಗಗಳಿಗೆ ಜಪಿಸಬಹುದಾದ ಋಙ್ನಿರ್ದೇಶನಗಳಿವೆ. ಉದ್ಯನ್ನದ್ಯ ಮಿತ್ರಮಹಃ, ವಾತ ಆವಾತು ಭೇಷಜಂ, ಅಯಂ ಮೇ ಹಸ್ತೋ ಭಗವಾನ್, ತ್ರ್ಯಂಬಕಂ ಯಜಾಮಹೇ, ಪರಂ ಮೃತ್ಯೋ ಇತ್ಯಾದಿ ಮಂತ್ರಸ್ತೋಮಗಳನ್ನು ಪುರಶ್ಚರಿಸುವ ಪರಿಪಾಟಿಯಿದೆ. ಇದು ರೋಗೋಪಶಮನಕ್ಕೆ ಸಹಕಾರಿಯೆ?
ಉ: ನಿಃಸಂಶಯವಾಗಿ ಪರಿಣಾಮಕಾರಿ. ನಮ್ಮ ಪರಂಪರೆಯು ಅನುಭವದಿಂದ ಕಂಡುಕೊಂಡ ಸತ್ಯ ಅದು. ಋಷಿಗಳು ಆಪ್ತರು. ಋಷಿವಾಕ್ಯವೆಂದರೆ ಆಪ್ತವಾಕ್ಯ. ಅದರ ವೈಜ್ಞಾನಿಕತೆಯ ವಿಷಯದಲ್ಲಿ ಸಂದೇಹ ಸಲ್ಲದು. ಜನರ ಸ್ವಾಸ್ಥ್ಯ ಕಲ್ಯಾಣಕ್ಕೆ ಅವೆಲ್ಲವೂ ಬೇಕು.
ಪ್ರ: ಸರ್ವಸಾಮಾನ್ಯವಾಗಿ ರೋಗಿಗಳಿಗೆ ಯಾವುದೇ ರೋಗಕ್ಕೂ ಯಂತ್ರಪರೀಕ್ಷಣವು ಕಡ್ಡಾಯ ಅನಿವಾರ್ಯ ಎಂಬ ಅನಧಿಕೃತ ಅನುಶಾಸನ ಚಾಲ್ತಿಯಲ್ಲಿದೆ. ಯಂತ್ರಾವಲಂಬನದ ಆವಶ್ಯಕತೆಯ ಪರಿಮಾಣ ಎಷ್ಟು?
ಉ: ಇಂತಹ ಪರೀಕ್ಷೆಗಳು ಅಗತ್ಯಾಧಿಕವಾಗಿ ಈಗಿನ ದಿನಮಾನದಲ್ಲಿ ತಾಂಡವಿಸುತ್ತಿವೆ. ದರ್ಶನಸ್ಪರ್ಶನಪ್ರಶ್ನೈಃ ಪರೀಕ್ಷೇತ ಚ ರೋಗಿಣಮ್. ಇದರೊಟ್ಟಿಗೆ ಅನುಮಾನ ಪ್ರಮಾಣವನ್ನೂ ಸೇರಿಸಿದೆ ಶಾಸ್ತ್ರ. ದರ್ಶನದಲ್ಲಿ ಈಗಿನ ಹೈಯರ್ ಲೆವೆಲಿನ ಯಂತ್ರಪರೀಕ್ಷೆಗಳು ಮುಗಿಯಬೇಕು. ಸ್ಕ್ಯಾನಿಂಗುಗಳು ಅನುಮಾನಪ್ರಮಾಣಕ್ಕೆ ಸಮ. ಕಣ್ಣಿಗೆ ಸ್ಪಷ್ಟವಾಗಿ ಕಾಣುವುದನ್ನು ನೋಡಲಿಕ್ಕೆ ಕನ್ನಡಕವನ್ನು ಹಾಕಿಕೊಳ್ಳಬೇಕಾಗಿಲ್ಲ. ಪರದೆ ಅಡ್ಡ ಹಿಡಿದೇ ನೋಡಬೇಕೆಂದಿಲ್ಲ. ಬೇಕಿದ್ದರೆ ಸೂಕ್ಷ್ಮದರ್ಶಕಗಳ ಮೂಲಕವೂ ನೋಡಬಹುದು. ತೊಡಕೇನೂ ಇಲ್ಲ. ಪೂರಕಮಾಹಿತಿ ದೊರಕಿದರೂ ದೊರಕಬಹುದು. ತಪ್ಪೇನೂ ಇಲ್ಲ. ಅದು ಶಾಸ್ತ್ರಕ್ಕೆ ವಿರೋಧವೂ ಅಲ್ಲ. ಆದರೆ ಅದನ್ನೇ ಅತೀ ಮಾಡಬಾರದು. ಪೂರ್ತಿಯಾಗಿ ಅತ್ಯವಲಂಬನವು ಸಾಧುವಲ್ಲ. ಅದರ ಬದಲು ನಾಡೀಶೋಧದಲ್ಲೇ ನಿದಾನದ ಆವಿಷ್ಕರಣವಾಗುವುದು ಯೋಗ್ಯತರ. ನಾಡೀಶೋಧದ ಆಳ ಅಗಲ ಅಸೀಮವಾದುದು. ಈ ಶೋಧವ್ರತದಲ್ಲಿ ನನ್ನದೇ ಆದ ಒಂದಷ್ಟು ವಿಶಿಷ್ಟ ಪ್ರಯೋಗಫಲಿತಗಳು ಇವೆ. ಅದನ್ನು ಇದುವರೆಗೂ ಅಧಿಕೃತವಾಗಿ ಪ್ರಕಟಿಸಲಿಲ್ಲ. ಮುಂದೊಂದು ದಿನ ವೈದ್ಯಲೋಕದೆದುರು ಬಿತ್ತರಿಸುತ್ತೇನೆ. ಅದನ್ನು ಎಲ್ಲ ವೈದ್ಯರೂ ಅನುಸರಿಸಬೇಕೆಂಬುದು ನನ್ನ ಮಹೋದ್ದೇಶ. ಅದು ಯಾವುದೆಂದರೆ, ಬಿಪಿ ಹಾಗೂ ಶುಗರ್ಗಳನ್ನು ನಾಡಿಯಲ್ಲೇ ಅಳೆವ ಹದ ಹಾಗೂ ಹೂರಣ. ಅದರ ಅನುಭವವು ನನಗಾದದ್ದು ಆಕಸ್ಮಿಕ. ಅಂದು ಗುರುಪೂರ್ಣಿಮೆ. ಮಲ್ಲೇಶ್ವರದ ನನ್ನ ಕ್ಲಿನಿಕ್ಕಿಗೆ ಮುಸ್ಲಿಂ ವ್ಯಕ್ತಿಯೊಬ್ಬರು ಬಂದರು. ಅವರ ದೂರು ಇದ್ದದ್ದು ಹೊಟ್ಟೆನೋವಿನ ಕುರಿತು. ನಾನು ನಾಡಿ ಹಿಡಿದಾಗ ಆಕೆಗೆ ಸಿಕ್ಕಾಪಟ್ಟೆ ಬಿಪಿ ಇದ್ದದ್ದು ಭಾಸವಾಗಲು ಶುರುವಾಯಿತು. ಬಿಪಿ ಇದೆಯಾ? ಎಂದು ಕೇಳಿದೆ. ಇಲ್ಲವೆಂದರು. ಮತ್ತೆ ಮತ್ತೆ ನಾಡೀಪರೀಕ್ಷೆ ಮಾಡಿದೆ. ಬಿಪಿಯ ಉತ್ಕಟತೆಯು ಖಚಿತವಾಗಿ ಬೋಧವಾಗುತ್ತಿತ್ತು. ನಾಡೀಸ್ಪಂದದಲ್ಲಿ ಅಧಿಕ ರಕ್ತದೊತ್ತಡದ ಅನುಭವವಾಗುತ್ತಿತ್ತು, ಮೊದಲ ಬಾರಿಗೆ. ಆ ಗ್ರಹಿಕೆಯು ಸ್ಪಷ್ಟವಾಗಿ ಬಿಪಿಯದೇ ಎಂದು ಒಳಮನಸ್ಸು ಚೀರುತ್ತಿತ್ತು. ಆರಂಭದ ದಿನಗಳಿಂದಲೂ ನಾಡಿಯ ಮೂಲಕ ಬಿಪಿ ಶುಗರ್ ತಿಳಿಯುವುದರ ಬಗ್ಗೆ ನನ್ನೊಳಗೆ ಇನ್ನಿಲ್ಲದ ಗುದುಮುರಿಗೆ ಕಸರತ್ತು ನಡೆಯುತ್ತಲೇ ಇತ್ತು. ಬರುವ ರೋಗಿಗಳ ಬಿಪಿ ರೀಡಿಂಗ್ಗಳನ್ನು ಎಚ್ಚರದಿಂದ ಗಮನಿಸುತ್ತಿದ್ದೆ. ಎಂದಾದರೂ ನಾಡಿಯು ಸತ್ಯವನ್ನು ನುಡಿದೀತೆಂಬ ಅಂತರ್ಬೋಧೆ ನನ್ನಲ್ಲಿ ನಿರಂತರವಾಗಿ ಚಲಾವಣೆಯಲ್ಲಿತ್ತು. ಏನೇನೋ ಪ್ರಯೋಗ ಮಾಡುತ್ತಿರುತ್ತಿದ್ದೆ. ಫಲಿತಾಂಶವು ನಿರಾಶೆಯದೇ ಆಗಿರುತ್ತಿತ್ತು. ಗುರುಪೂರ್ಣಿಮೆಯಂದು ಆ ವ್ಯಕ್ತಿಯ ನಾಡಿಯು ನನಗೆ ತಿಳಿಸಿದ ರಹಸ್ಯದ ಕುರಿತು ಎಳ್ಳಷ್ಟೂ ಅನುಮಾನವಿರಲಿಲ್ಲ. ಕ್ರಾಸ್ಚೆಕ್ ಮಾಡಿಸಬೇಕೆಂದು ಅನಿಸಲೇ ಇಲ್ಲ. ಅಷ್ಟು ನಿಶ್ಚಯವಿತ್ತು. ಆ ಕ್ಷಣದ ರೋಮಾಂಚನವನ್ನು ಮರೆಯುವ ಹಾಗೇ ಇಲ್ಲ. ಒಳಕೋಣೆಗೆ ಹೋಗಿ ಸಹೋದ್ಯೋಗಿಗಳಿಗೆ ಹೇಳಿ ಕುಣಿದೆ. ಊರಿಗೆ ಫೋನ್ ಮಾಡಿ ಅಮ್ಮನಿಗೆ, ಹೆಂಡತಿಗೆ ಫೋನಿಸಿ ತಣಿದೆ. ಎಲ್ಲರಿಗೂ ಹೇಳಿದ್ದು ಒಂದೇ ವಾಕ್ಯ, ನಾಡಿಯಲ್ಲಿ ಬಿಪಿ ನೋಡೋದು ಹ್ಯಾಗೆ ಎಂದು ನನಗೀಗ ಗೊತ್ತಾಯ್ತು. ಅದೇ ದಿನ ಹತ್ತಾರು ರೋಗಿಗಳ ಬಿಪಿಯನ್ನು ಬಾಲಕುತೂಹಲದಿಂದ ಪರೀಕ್ಷಿಸಿ ಖಚಿತಪಡಿಸಿಕೊಂಡೆ. ಅದರ ಮರುದಿನ ಇನ್ನೊಂದು ಅಚ್ಚರಿ ಕಾದಿತ್ತು. ಶುಗರ್ ನಾಡಿಯಲ್ಲಿ ಸಿಹಿಯಾಗಿ ಮಿಡಿದಿತ್ತು. ಇದರ ಬಗ್ಗೆ ಹೇಳುವುದು ಬಹಳಷ್ಟಿದೆ. ನನ್ನ ಪರಿಶೀಲನವನ್ನು ಲೋಕಮುಖಕ್ಕೆ ತಿಳಿಸಿ ಇಡೀ ವಿಶ್ವವೇ ಆಯುರ್ವೇದವನ್ನು ಒಪ್ಪುವಂತೆ ಮಾಡುವ ಆಶಯವಿದೆ.
ಪ್ರ: ನಿಮ್ಮ ಸಿದ್ಧಿಯು ಆದಷ್ಟು ಬೇಗ ಪ್ರಕಟವಾಗಲಿ ಎಂದು ಹಾರೈಸುತ್ತೇನೆ. ನಾಡೀಶೋಧಕ್ಕೂ ಯಂತ್ರಪರೀಕ್ಷೆಗೂ ವ್ಯತ್ಯಾಸವೇನಾದರೂ ಇದೆಯೆ?
ಉ: ಸ್ಥೂಲವಾಗಿಯಲ್ಲದಿದ್ದರೂ ಸೂಕ್ಷ್ಮಸ್ತರದಲ್ಲಿ ಇದೆ. ಪ್ರತಿಯೊಬ್ಬ ಆಯುರ್ವೇದ ವೈದ್ಯರೂ ನಾಡೀಪರೀಕ್ಷೆಯನ್ನು ಕಲಿಯಬೇಕು. ಕಲಿತೇ ಸಿದ್ಧಿಯಾಗಲಿಕ್ಕೆ ಸ್ವಲ್ಪ ಕಷ್ಟವಿದೆ. ಹಿಂದಿನವರು ಹೇಳಿದ ಪರೀಕ್ಷಾವಿಧಾನವನ್ನು ಅನುಸರಿಸಬೇಕು. ಇದರಿಂದ ರೋಗಿಗಳ ಆರ್ಥಿಕ ಹೊರೆಯು ಗಣನೀಯವಾಗಿ ಇಳಿಯುತ್ತದೆ. ಈಗಿನ ವೈದ್ಯವಲಯವು ಬೌದ್ಧಿಕಚಿಂತನೆಯನ್ನು ಬಹುತೇಕ ಅವಗಣಿಸಿದೆ. ಊಹಿಸುವ ಕೌಶಲವನ್ನು ಕಡೆಗಣಿಸಿದೆ. ಕ್ಯಾಲ್ಕುಲೇಟರ್ ರೀತಿ ಆಗಿದೆ ಟೆಸ್ಟಿಂಗ್. ಎರಡು ಕೂಡಿಸು ಎರಡು ಎನ್ನುವುದನ್ನು ಲೆಕ್ಕಹಾಕಲೂ ಕ್ಯಾಲ್ಕುಲೇಟರ್ ಒತ್ತುವುದನ್ನು ರೂಢಿಸಿಕೊಂಡುಬಿಟ್ಟಿದ್ದೇವೆ. ಇಂತಹ ಚಿಂತನಜಾಡ್ಯದಿಂದ ಹೊರಬರಬೇಕಾಗಿದೆ.
ಪ್ರ: ರೋಗಿಯು ವೈದ್ಯರ ಬಳಿ ಬಂದಾಗ ತನಗೇನು ಆಗುತ್ತಿದೆ ಎಂದು ಹೇಳುತ್ತಾನೆ. ನೀವು ನಾಡೀಪರೀಕ್ಷೆ ಮಾಡುತ್ತೀರಿ. ಅವನ ಹೇಳಿಕೆಗೂ ನಿಮ್ಮ ಪರಿಶೀಲನೆಗೂ ವ್ಯತ್ಯಾಸ ಬರುವ ಸಾಧ್ಯತೆ ಇದೆಯೇ?
ಉ: ನನ್ನ ಈಗಿನ ಚಿಂತನೆಯ ಪ್ರಕಾರ ಯಾವುದೆಲ್ಲ ರೋಗವನ್ನು ನೇರವಾಗಿ ರೋಗಿಗೆ ಹೇಳಲು ಆಗುತ್ತದೆಯೋ, ಅಥವಾ ವೈದ್ಯನಿಗೆ ಸ್ಪಷ್ಟವಾಗಿ ಗೋಚರಿಸುತ್ತದೆಯೋ, ಅದು ನಾಡಿಯ ಮೂಲಕ ಬಹುತೇಕ ಗೊತ್ತಾಗುವುದಿಲ್ಲ. ತನಗೆ ಬಿಪಿ ಇದೆಯೋ ಇಲ್ಲವೋ ಎಂದು ರೋಗಿಗೆ ಗೊತ್ತಾಗುವುದಿಲ್ಲ. ನಾಡಿಯಲ್ಲಿ ಗೊತ್ತಾಗುತ್ತದೆ. ಡಯಾಬಿಟೀಸ್, ಹೃದ್ರೋಗಗಳು, ಕಿಡ್ನಿಸ್ಟೋನ್ ಕೂಡಾ. ತೊಗಲ ತುರಿಕೆ ಇದ್ದರೆ, ಎಕ್ಸಿಮಾ ಆಗಿದ್ದರೆ, ಸೋರಿಯಾಸಿಸ್ ಆಗಿದ್ದರೆ ವೈದ್ಯರಿಗೆ ನೋಡಿದ ಕೂಡಲೇ ಗೊತ್ತಾಗುತ್ತದೆ. ಅದಕ್ಕೆ ನಾಡೀಪರೀಕ್ಷೆಯ ಅಗತ್ಯವಿಲ್ಲ. ಆಯುರ್ವೇದದಲ್ಲಿ ಅಷ್ಟವಿಧದ ಪರೀಕ್ಷೆಯ ಉಲ್ಲೇಖವಿದೆ: ನಾಡೀಂ ಮೂತ್ರಂ ಮಲಂ ಜಿಹ್ವಾ ಶಬ್ದಂ ಸ್ಪರ್ಶಂ ದೃಗಾಕೃತೀ. ಆ ಎಂಟನ್ನೂ ನಾವು ಕೇಳಿಯೇ ಕೇಳುತ್ತೇವೆ – ಪೇಶೆಂಟ್ ಏನೇ ಹೇಳಲಿ ಬಿಡಲಿ. ಎಂಟರಲ್ಲಿ ಯಾವುದನ್ನೂ ಕೈಬಿಡುವುದಿಲ್ಲ. ಮರೆಯುವುದೂ ಇಲ್ಲ. ಪರೀಕ್ಷಾಷ್ಟಕದಲ್ಲಿಯೇ ಬಹುಭಾಗ ಕವರ್ ಆಗುತ್ತದೆ. ಪರೀಕ್ಷಣಾಂಶಗಳನ್ನು ಗಮನಿಸುವುದು ಹೇಗೆ ಎಂದು ಸಹವೈದ್ಯರಿಗೆ ಹೇಳುತ್ತಿರುತ್ತೇನೆ. ಮೊದಲನೆಯದು ರೋಗಿಯು ಕೊಡುವ ಮಾಹಿತಿ. ಎರಡನೆಯದು ನಮ್ಮ ವಿಶ್ಲೇಷಣೆ. ಮೂರನೆಯದು ನಮಗೆ ಯಾವ ಯಾವ ನಿಖರವಾದ ಪೂರಕ ಮಾಹಿತಿಗಳು ಬೇಕೋ ಅದನ್ನು ರೋಗಿಯಿಂದ ಸಂಗ್ರಹಿಸುವುದು. ಅದು ವೈದ್ಯನ ಸಾಮರ್ಥ್ಯ ಕೌಶಲ ಸೂಕ್ಷ್ಮಜ್ಞತೆ. ನಾನು ಕ್ಲಿನಿಕ್ ಆರಂಭಿಸಿದ ಮೊದಲ ದಿನದಿಂದಲೂ ರೋಗವನ್ನು ನಾಡಿಯಲ್ಲಿ ಕಂಡುಹಿಡಿವ ತೀವ್ರ ಆಗ್ರಹವನ್ನು ನನಗೆ ನಾನೇ ಹೇರಿಕೊಂಡಿದ್ದೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಪುಸ್ತಕಗಳಿಲ್ಲ. ಆಕರಗಳಿಲ್ಲ.
ಪ್ರ: ಹೌದೇ! ಆಯುರ್ವೇದದ ಮೂಲನಾಡಿಯೇ ನಾಡೀಶೋಧವೆಂಬುದು ಲೋಕವಿದಿತವಾದ ಸತ್ಯ ತಥ್ಯ. ಆಕರಗ್ರಂಥವೇ ಇಲ್ಲವೆಂದಾದರೆ ಯಾಕೆ ಹಾಗಾಯಿತು?
ಉ: ಬಹುಶಃ ಹಿಂದೆ ನಾಡೀಪರೀಕ್ಷಣವಿಧಾನವು ಮೌಖಿಕಶಿಕ್ಷಣಪದ್ಧತಿಗೆ ಅಳವಟ್ಟಿರಬೇಕು. ದೇಹಪ್ರಕೃತಿಯ ಕುರಿತು ಆಕರವಿದೆ. ಅಷ್ಟವಿಧ ಪರೀಕ್ಷೆಯನ್ನೂ ಸೂಚಿಸಿದ್ದಾರೆ. ಆದರೆ ನಾಡೀಶೋಧದ ಮೂಲಕ ರೋಗಪರೀಕ್ಷೆಯನ್ನು ಹೇಗೆ ಮಾಡಬೇಕು ಎಂದು ಅಕ್ಷರ ರೂಪದಲ್ಲಿ ದಾಖಲಿಸಲಿಲ್ಲ. ಯಾವ ನಾಡಿಯು ಯಾವ ರೋಗದಲ್ಲಿ ಹೇಗೆ ಮಿಡಿಯುತ್ತದೆ ನುಡಿಯುತ್ತದೆ ಎಂದು ಮೂಲಗ್ರಂಥಗಳು ಪ್ರಸ್ತಾವಿಸಿಲ್ಲ. ನಾಡೀಪರಿಚಯವು ಹಳಬರಿಗೆ ಮಾತ್ರ ಇರುತ್ತದೆಂಬ ಗ್ರಹಿಕೆ ಸಮಾಜಕ್ಕಿದೆ. ನನ್ನದೇ ಉದಾಹರಣೆ ಇದೆ. ಒಮ್ಮೆ ಪ್ರಸಿದ್ಧ ಇಂಗ್ಲಿಷ್ ದಿನಪತ್ರಿಕೆಯಿಂದ ನನ್ನ ಸಂದರ್ಶನಕ್ಕೆಂದು ಹಿರಿಯ ಖ್ಯಾತ ಬರಹಗಾರ್ತಿ ಬಂದಿದ್ದರು. ಅವರಿಗೆ ಪತ್ರಿಕೆಯವರು ಮೂರುಜನ ವೈದ್ಯರನ್ನು ಇಂಟರ್ವ್ಯೂ ಮಾಡಲು ತಿಳಿಸಿದ್ದರಂತೆ. ಅವರ ಡಯಾಬಿಟೀಸ್ ನನ್ನ ಚಿಕಿತ್ಸೆಯಿಂದ ಗುಣವಾಗಿತ್ತು. ಹಾಗಾಗಿ ಪರಿಚಯವೂ ಇತ್ತು. ಮೊದಲ ಸಂದರ್ಶನ ನನ್ನದೇ. ಅಂಕಣಕ್ಕೆ ಕಳಿಸಿದರು. ಪತ್ರಿಕೆಯವರ ಪ್ರತಿಕ್ರಿಯೆ ವಿಭಿನ್ನವಾಗಿತ್ತಂತೆ. ನಮ್ಮ ಕಾಲಮ್ಮಿಗೆ ಬೇಕಾದ್ದು ಸೀನಿಯರ್ ಡಾಕ್ಟರ್ ಸಂದರ್ಶನ. ಇವರು (ಕಜೆಯವರು) ತರುಣರು. ಬೇಡ ಎಂದರಂತೆ. ಲೇಖಕಿಯ ಉತ್ತರ ಸ್ಪಷ್ಟವಾಗಿತ್ತು. ನನಗೆ ಕಜೆ ಗೊತ್ತು. ನನ್ನ ಡಯಾಬಿಟೀಸನ್ನು ಗುಣಪಡಿಸಿದ್ದಾರೆ. ಈ ಸಂದರ್ಶನವನ್ನು ಅಂಕಣಕ್ಕೆ ಸ್ವೀಕರಿಸಿದರೆ ಮಾತ್ರ ಉಳಿದೆರಡು ಸಂದರ್ಶನ ಮಾಡುತ್ತೇನೆ. ಕೊನೆಗೂ ಪತ್ರಿಕೆಯವರು ಅವರ ಆಗ್ರಹಕ್ಕೆ ಒಪ್ಪಿದರು. ಆ ಸಂದರ್ಶನದಲ್ಲಿ ನಾಡಿಯ ಮೂಲಕ ರೋಗವನ್ನು ಪತ್ತೆಹಚ್ಚಲು ನಿಮಗೆ ಬರುತ್ತದೆಯೆ? ಎಂದು ಪ್ರಶ್ನಿಸಿದ್ದರು. ಆಗ ನನಗೆ ನಾಡಿಯಲ್ಲಿ ಡಯಾಬಿಟೀಸ್ ಇನ್ನೂ ಕೈಹಿಡಿದಿರಲಿಲ್ಲ. ನಾನು ಪ್ರಯತ್ನಿಸುತ್ತಿದ್ದೇನೆ. ಎಷ್ಟು ದಶಕಗಳು ಬೇಕೋ ಸಿದ್ಧಿಯ ಸೋಪಾನ ಮುಟ್ಟಲಿಕ್ಕೆ. ಸದ್ಯಕ್ಕಂತೂ ಹುಡುಕಾಟದಲ್ಲಿದ್ದೇನೆ ಎಂದಿದ್ದೆ. ಅದಾಗಿ ಮೂರು ವರ್ಷದಲ್ಲಿ ನಾಡಿಯು ಗುಟ್ಟನ್ನು ಬಿಟ್ಟುಕೊಟ್ಟಿತ್ತು. ಅವ್ಯಾಹತವಾದ ಪ್ರಯತ್ನವು ಜಾರಿಯಲ್ಲಿದ್ದರೆ ಖಂಡಿತ ಫಲಿತಾಂಶವು ಕೈಗೆಟುಕುತ್ತದೆ. ಆಯುರ್ವೇದ ವೈದ್ಯರು ಪ್ರಯತ್ನಶೀಲರಾಗಬೇಕು. ಅದಕ್ಕೆ ಬೇಕಾಗುವುದು, ಅವಧಾನ, ಸಮಾಧಾನ, ಅನುಸಂಧಾನ.
ಪ್ರ: ನಾಸ್ತಿ ಮೂಲಂ ಅನೌಷಧಂ ಎನ್ನುತ್ತದೆ ಸುಭಾಷಿತ. ಮದ್ದಿಗೊದಗದ ಬೇರು ಇಲ್ಲ. ಆಯುರ್ವೇದ ಗ್ರಂಥಗಳಲ್ಲಿ ಸಾವಿರಾರು ಮೂಲಿಕೆಗಳ ಪ್ರಸ್ತಾವವಿದೆ ಎಂದು ಹೇಳಿದಿರಿ. ಆ ಮೂಲಿಕೆಗಳ ಪರಿಚಯ ಇವತ್ತಿಗೂ ಉಳಿದುಕೊಂಡಿದೆಯೇ?
ಉ: ಸಾಕಲ್ಯವಾಗಿ ಇಲ್ಲ ಎಂದೇ ಹೇಳಬೇಕು. ಶಾಸ್ತ್ರದಲ್ಲಿ ಒಂದು ಸಸ್ಯಕ್ಕೆ ಹಲವು ಹೆಸರು ಇರುತ್ತದೆ. ಪರ್ಯಾಯನಾಮಗಳನ್ನು ಪರಿಶೀಲಿಸಿದರೆ ಪ್ಲಾಂಟ್ಗಳ ಜಾತಕದ ಉತ್ತರೋತ್ತರ ಪರಿಚಯವಾಗುತ್ತ ಹೋಗುತ್ತದೆ. ಎಲೆ ಹೇಗಿರುತ್ತದೆ, ಎಲೆಗಳ ಸಂಖ್ಯೆ ಎಷ್ಟು, ಬೇರೆ ಬೇರೆ ಇರುತ್ತದೋ ಒಟ್ಟಿಗೆ ಇರುತ್ತದೋ ಎನ್ನುವುದೆಲ್ಲ ಹೆಸರುಗಳಿಂದಲೇ ಅರಿವಾಗುತ್ತದೆ. ಸಪ್ತಪರ್ಣ, ಏಳೆಲೆ ಎಂದು ಹೆಸರೇ ಹೇಳಿಕೊಳ್ಳುತ್ತದೆ. ನಕ್ತಮಾಲಾ ಅಂದರೆ ಇನ್ನೊಂದು ಗುಣಧರ್ಮ ಬೋಧೆಯಾಗುತ್ತದೆ. ಮೂಲಿಕೆಯ ಪರಿಚಯವು ನೆನಪಲ್ಲಿರುವುದಕ್ಕೆ ನಾಮಾಂತರವೂ ಒದಗಿಬರುವಂತೆ ಏನೇನೋ ಒಳದಾರಿಗಳನ್ನು ಕಂಡುಕೊಂಡಿದ್ದರು. ತಲೆಮಾರು ಸಾಗುತ್ತಿದ್ದ ಹಾಗೆ ಪರಿಚಯಜ್ಞಾನವೂ ಕ್ಷೀಣಿಸುತ್ತಾ ಬಂತು. ಈಗ ಬಿಎಎಮ್ಎಸ್ ಓದುವವರಿಗೆ ಸುಮಾರು ೩೦೦ ಸಸ್ಯಗಳ ಅಧ್ಯಯನವನ್ನು ಮಾಡಲು ಇರುತ್ತದೆ. ಅವುಗಳ ಪೈಕಿ ಪ್ರಾಧಾನ್ಯವನ್ನು ಪಡೆದದ್ದು ನೂರು-ಚಿಲ್ಲರೆ. ಮನೆಮದ್ದಾಗಿ ನಮೂನೆ ನಮೂನೆಯ ಮೂಲಿಕೆ ಸಸ್ಯಗಳು ಜನಪದಕ್ಕೆ ಇವತ್ತಿಗೂ ಕೈಯೆಟುಕಲ್ಲಿವೆ. ಭಾರತದಾದ್ಯಂತ ಸಮೀಕ್ಷಿಸಿ ಕ್ರೋಡೀಕರಿಸಿ ಡಾಟಾ ಡೆವಲಪ್ ಮಾಡಿದರೆ ಔಷಧೀಯ ಸಸ್ಯಗಳ ಬಗ್ಗೆ ಸಮಗ್ರವಾಗಿಯಲ್ಲದಿದ್ದರೂ ಪರ್ಯಾಪ್ತವಾದ ವಿಷಯವನ್ನು ಸಂಗ್ರಹಿಸಬಹುದಾಗುತ್ತದೆ. ನುರಿತ ವೈದ್ಯರಿಗೆ ಮುನ್ನೂರು ಸಸ್ಯಗಳ ಪರಿಚಯವಿದ್ದರೆ ಪ್ರಾಕ್ಟೀಸಿಗೆ ಧಾರಾಳ ಸಾಕು. ಅವುಗಳ ಪರಿವೃತ್ತಿ ಸಂಯೋಜನೆಗಳಿಂದ ಲಕ್ಷಾಂತರ ರೋಗಿಗಳನ್ನು ಉಪಚರಿಸಬಹುದು. ಯಥಾರ್ಥ ಹೀಗಿರುವಾಗ, ಆಯುರ್ವೇದವು ಗುರುತಿಸಿದ ಅಷ್ಟೂ ವನಸ್ಪತಿಗಳು ಬಳಕೆಗೆ ಬಂದಲ್ಲಿ ಅದರ ರೇಂಜ್ ಏನಿರಬಹುದು, ಅನೂಹ್ಯ. ಆಯುರ್ವೇದದಲ್ಲಿ ಸಂಶೋಧನೆಗಿಂತ ಮುಖ್ಯವಾಗಿ ಆಗಬೇಕಾದದ್ದು ಅನುಷ್ಠಾನ.
ಪ್ರ: ಮಲೇರಿಯಾ ಟೈಫಾಯಿಡ್ ಚಿಕನ್ಗುನ್ಯಾ ಡೆಂಗ್ಯೂ ಕೊರೋನಾ… ನೀವು ಆಯುರ್ವೇದದ ಔಷಧದಿಂದಲೇ ಇವನ್ನು ಗುಣಪಡಿಸುವೆನೆನ್ನುತ್ತೀರಿ. ಅಂದರೆ ರೋಗ ಮಾತ್ರ ಹೊಸತು, ಔಷಧ ಹಳತು ಎನ್ನಬಹುದೇ?
ಉ: ಚರಕಸಂಹಿತೆಯಲ್ಲಿ ಒಂದು ಮಾತು ಇದೆ. ರೋಗಿ ಬಂದಾಗ ಯಾವುದು ರೋಗವೆಂದು ಪತ್ತೆ ಆಗದಿದ್ದರೆ ಅಥವಾ ಅಂತಹ ರೋಗ ಈ ಮೊದಲು ಕಂಡಿಲ್ಲದಿದ್ದರೆ ಬೇರೆಬೇರೆ ಲಕ್ಷಣ ಪೂರ್ವರೂಪಗಳನ್ನೆಲ್ಲ ಪರಿಶೀಲಿಸಿ ಚಿಕಿತ್ಸೆ ಮಾಡಬೇಕು. ಇದು ಹೊಸ ಹೊಸ ರೋಗಗಳಿಗೆ ಅನ್ವಯವಾಗುವ ಸೂಚ್ಯೋಕ್ತಿ. ಹೊಸ ರೋಗ ಬಂದಿದೆ ಎಂದು ವೈದ್ಯ ಹಿಂಜರಿಯಬಾರದು, ಕೈಚೆಲ್ಲಬಾರದು. ಆಲೋಡನಗಳನ್ನು ಮಾಡಿ ಉಪಚರಿಸಲೇಬೇಕೆಂಬುದು ಆರ್ಷಾದೇಶ. ರೋಗದ ಘಟಕಗಳು ಹೇಗೂ ನಮಗೆ ಜ್ಞಾತವಾಗುತ್ತವೆ. ಔಷಧಪ್ರಯೋಗಕ್ಕೆ ತಂತ್ರವನ್ನು ಹುಡುಕಬೇಕು. ಹೊಸ ರೋಗವೆಂಬುದು ಇರುವುದೂ ಹೌದು, ಬರುವುದೂ ಹೌದು. ಅದು ಕಾಲವೈಪರೀತ್ಯ, ಕಾಲಪರಿಣಾಮ. ಆದ್ದರಿಂದಲೇ ಅನಿವಾರ್ಯ. ಸಾಮಾನ್ಯವಾಗಿ ರೋಗಪೀಡನೆಯಲ್ಲಿ ಜ್ವರವೇ ಅಗ್ರಮಾನ್ಯ. ಸುಮಾರು ೩೫ ಜ್ವರಪ್ರಭೇದಗಳನ್ನು ಸಂಹಿತೆ ಉದಾಹರಿಸುತ್ತದೆ. ಆ ಜ್ವರಗಳೇ ನಮಗೆ ಚಾಲ್ತಿಯಲ್ಲಿ ಪೂರಾ ಸಿಗುತ್ತಿಲ್ಲ. ಹೊಸತೇನು ಬಂದೀತು? ಏನಿದ್ದರೂ ಆ ೩೫ರಲ್ಲಿ ಅಂತರ್ಗತವಾಗಿರುತ್ತದೆ. ಕಫವಾತಜ್ವರ ಆಗಂತುಕಜ್ವರ ಅಭಿಘಾತಜ್ವರ ಇತ್ಯಾದಿಗಳಿವೆ. ಇಷ್ಟೊಂದು ಜ್ವರವೈವಿಧ್ಯವನ್ನು ಅಲೋಪತಿಯೂ ಹೇಳಿಲ್ಲ. ತಕ್ಕಮಟ್ಟಿಗೆ ಸಂಶೋಧನಶೀಲತೆ ಇರುವ ವೈದ್ಯರು ನವೀನವ್ಯಾಧಿಗಳ ಚಿಕಿತ್ಸೆಗೆ ಕಂಗೆಡುವುದಿಲ್ಲ, ಯಶೋರೇಖೆಯನ್ನು ದಾಟುತ್ತಾರೆ.
ಪ್ರ: ದರ್ಶನ ಸ್ಪರ್ಶನ ಪ್ರಶ್ನ ಅನುಮಾನಗಳಿಂದ ನೀವು ರೋಗಿಯೊಬ್ಬನನ್ನು ಪರೀಕ್ಷಿಸಿ ವ್ಯಾಧಿಯನ್ನು ನಿರ್ಣಯಿಸುತ್ತೀರಿ. ಒಂದೊಮ್ಮೆ ಆ ರೋಗವು ನಿಮ್ಮ ವ್ಯಾಪ್ತಿಯದಲ್ಲವೆಂದಾಗಿ, ಅಲೋಪತಿಯೇ ಅದಕ್ಕೆ ತಾರಕವೆಂದು ಅನಿಸಿದಲ್ಲಿ ನಿಮ್ಮ ಮುಂದಿನ ನಡೆ ಏನು?
ಉ: ಉದಾಹರಣೆಗೆ ಕ್ಷಯರೋಗ. ನಾನು ರೋಗಿಯಲ್ಲಿ ಟಿಬಿಯನ್ನು ಪತ್ತೆ ಮಾಡುತ್ತಿದ್ದೆ. ಆದರೆ ಚಿಕಿತ್ಸೆ ಮಾಡುತ್ತಿರಲಿಲ್ಲ. ನಾಲ್ಕಾರು ತಿಂಗಳಲ್ಲಿ ಅಲೋಪತಿಯಲ್ಲಿ ಗುಣವಾಗುತ್ತದೆ ಎಂದು ಕಳುಹಿಸುತ್ತಿದ್ದೆ. ಹೊಸಪೇಟೆಯ ಒಬ್ಬರು ಪೇಶೆಂಟ್. ನಾಲ್ಕು ವರ್ಷಗಳ ಕಾಲ ಹತ್ತಾರು ಕಡೆ ರೋಗಾರ್ತರಾಗಿ ತಿರುಗಿದ್ದಾರೆ. ರೋಗದ ಪತ್ತೆಯಾಗಿರಲಿಲ್ಲ. ನನ್ನ ಬಳಿ ಬಂದರು. ಪರೀಕ್ಷಿಸಿದೆ. ಟಿಬಿ ಎಂದೆ. ಅವರು ನಿರಾಕರಿಸಿದರು. ಪುನಃ ಟೆಸ್ಟ್ ಮಾಡಿಸಿ ಎಂದೆ. ಮಾಡಿಸಿದರು. ಟಿಬಿ ನಿಶ್ಚಿತವಾಯಿತು. ಅವರು ಪ್ರಾಮಾಣಿಕವಾದ ಸಂಶಯದಲ್ಲಿ ಇನ್ನೊಂದು ಪ್ರತಿಷ್ಠಿತ ಸಂಸ್ಥೆಯಲ್ಲಿ ಪರೀಕ್ಷಿಸಿದರು. ವ್ಯತ್ಯಾಸವಿರಲಿಲ್ಲ ಫಲಿತಾಂಶದಲ್ಲಿ. ಮರಳಿ ನನ್ನ ಹತ್ತಿರ ಬಂದರು. ನಾನು ಸದ್ಯ ನಾನು ಟಿಬಿ ಚಿಕಿತ್ಸೆ ಮಾಡುವುದಿಲ್ಲ. ಅಲೋಪತಿ ಮಾಡಿ ಎಂದೆ. ಒಪ್ಪಿ ಹೋದರು. ಚಿಕಿತ್ಸೆ ಪಡೆದು ಹುಶಾರಾದರು. ಇಪ್ಪತ್ತು ವರ್ಷ ಕಳೆದ ಮೇಲೆ ಅವರಲ್ಲಿ ಟಿಬಿ ಮತ್ತೆ ಕಾಣಿಸಿಕೊಂಡಿತು. ಸ್ಕ್ಯಾನಿಂಗ್ ರಿಪೋರ್ಟ್ ಸಮೇತ ನನ್ನಲ್ಲಿಗೇ ಬಂದರು. ರೋಗಸ್ಥಿತಿ ಉಲ್ಬಣಿಸಿತ್ತು. ಇದೇ ಪ್ರಶಾಂತಿ ಆಸ್ಪತ್ರೆಗೆ ಸೇರಿಸಿಕೊಂಡೆ. ಶ್ವಾಸಕೋಶದಲ್ಲಿ ಭರಪೂರ ನೀರು ತುಂಬಿತ್ತು. ಇಂತಹ ವಿಷಮಾವಸ್ಥೆಯಲ್ಲಿ ಸಾಮಾನ್ಯವಾಗಿ ಆಯುರ್ವೇದಚಿಕಿತ್ಸೆ ಮಾಡುವುದಿಲ್ಲ. ವಿಪರೀತಜ್ವರದ ಜುಗಲಬಂದಿಯೂ ಇತ್ತು. ಮಲಗಿದರೆ ಉಸಿರಾಡಲು ಅಸಾಧ್ಯವೆಂದು ಕುಳಿತೇ ಇರುತ್ತಿದ್ದರು. ಈ ನಮೂನೆಯ ಸಂದಿಗ್ಧಸಂಕೀರ್ಣತೆಯಲ್ಲೂ ನಮ್ಮ ಚಿಕಿತ್ಸೆಯ ಪರಿಣಾಮವಾಗಿ ಅವರು ಗುಣಮುಖರಾದರು. ವೃತ್ತಿಯು ನಮಗೆ ಕೊಡುವ ಅನುಭವ ಹಾಗೂ ಭರವಸೆಯು ನಮ್ಮನ್ನು ಬೆಳೆಸುತ್ತದೆ. ನನ್ನ ಕೈಯಳತೆಯದಲ್ಲದ ಅಥವಾ ಆತ್ಮಪ್ರತ್ಯಯವು ಅನುಮೋದಿಸದ ಕೇಸುಗಳನ್ನು ನಾನಾಗಿ ಬೇರೆ ಪದ್ಧತಿಗೋ ಅಲೋಪತಿಗೋ ವರ್ಗಾಯಿಸಿದ್ದಿದೆ. ಸದ್ಯೋವರ್ತಮಾನದಲ್ಲಿ ಯಾವುದೇ ವ್ಯಾಧಿಯ ಕುರಿತು ನನಗೆ ಅಧೀರತೆ ಇಲ್ಲ. ಉದಾರಣೆಗೆ, ಕಿಡ್ನಿಗೆ ಸಂಬಂಧಿಸಿದಂತೆ ಮಕ್ಕಳಲ್ಲಿ ಎಲ್ಲೋ ಕೋಟಿಗೊಂದು ಕಾಣಿಸುವ ಅಪರೂಪದ ಕೇಸು ಒಂದಿದೆ! ನಮ್ಮ ರಾಜ್ಯದಲ್ಲಿ ಹತ್ತು ಇರಬಹುದು. ಅದರಲ್ಲಿ ನಾಲ್ಕು ಪ್ರಕರಣಗಳು ನಮ್ಮಲ್ಲಿಗೆ ಬಂದಿವೆ. ಇಂತಹ ವಿರಳಾತಿವಿರಳ ಕೇಸುಗಳೂ ಬರುತ್ತವೆ. ವೈದ್ಯರು ಸವಾಲನ್ನು ಸ್ವೀಕರಿಸಬೇಕು. ಒಂದೊಮ್ಮೆ ಪ್ರಸ್ತುತದ ರೋಗಿಯ ಚಿಕಿತ್ಸೆ ತನ್ನ ವ್ಯಾಪ್ತಿಯದ್ದಲ್ಲವೆನಿಸಿದರೆ ತೆಗೆದುಕೊಳ್ಳಲೇಬಾರದು. ನೆಗೆಟಿವ್ ರಿಸಲ್ಟ್ ಬರುತ್ತದೆ. ಅದು ಪ್ರಾಕ್ಟೀಸ್ ಮೇಲೆ ಕರಿನೆರಳನ್ನು ಮುಸುಕುತ್ತದೆ. ವೈದ್ಯನ ಅಸಹಾಯತೆಯು ಹೀನವೂ ಅಲ್ಲ, ಹೇಯವೂ ಅಲ್ಲ, ಲಜ್ಜಾಸ್ಪದವೂ ಅಲ್ಲ. ಇವತ್ತಿಗೂ ಪ್ರಶಾಂತಿ ಸೆಂಟರಿನಲ್ಲಿ ಇದು ನಮ್ಮದಲ್ಲ ಎಂದು ಕಳುಹಿಸುವ ಪ್ರಕರಣ ಪ್ರತಿನಿತ್ಯ ಎರಡು-ಮೂರು ಇರುತ್ತದೆ. ಗ್ರಾಹ್ಯಾಗ್ರಾಹ್ಯದ ನಿರ್ಣಯ ತುಂಬ ಸುಲಭ. ಅದೇ ಕಾಯಿಲೆ ನಮ್ಮ ಕುಟುಂಬದವರಿಗೆ, ನಮ್ಮ ಮನೆಮಂದಿಗೆ ಬಂದಿದ್ದರೆ ನಾವು ಚಿಕಿತ್ಸೆಗೆ ಒಪ್ಪಿಕೊಳ್ಳುತ್ತಿದ್ದೆವೋ ಇಲ್ಲವೋ ಎಂದು ಯೋಚಿಸಿದರೆ ಸಾಕು. ರೋಗಿಗಳನ್ನು ಸ್ವಂತ ಕುಟುಂಬದಂತೆ ಕಾಣಬೇಕು. ಅವರು ಯಾವುದೇ ಮತ ಜಾತಿ ಕುಲ ಪಂಥದವರಾಗಿರಬಹುದು, ಅಪರಿಚಿತರಾಗಿರಬಹುದು, ಸ್ಲಮ್ಮಿಂದ ಬಂದವರಿರಬಹುದು, ಮಹಲಿನಿಂದ ಬಂದವರಿರಬಹುದು, ಅವರೆಲ್ಲರೂ ನಮ್ಮ ಕುಟುಂಬದವರೇ, ನಾನು ಅವರ ಕೌಟುಂಬಿಕ ಎಂಬ ಆರ್ದ್ರಭಾವ ಸೌಹಾರ್ದ ವೈದ್ಯನಿಗೆ ಇದ್ದರೆ ಗೊಂದಲಕ್ಕೆ ಆಸ್ಪದವೇ ಇಲ್ಲ. ಇದು ನನ್ನ ಧ್ಯೇಯವೂ ಹೌದು, ಮಾರ್ಗವೂ ಹೌದು. ಎಷ್ಟು ಸಮಯದಲ್ಲಿ ಒಂದು ರೋಗವನ್ನು ಗುಣಪಡಿಸಬಹುದೆಂದು ವೈದ್ಯರಿಗೆ ಹೇಳಲಿಕ್ಕೆ ಬರುವುದಿಲ್ಲ. ಆದರೆ ಅಜಮಾಸು ಗುಣವಾಗುತ್ತದೋ ಇಲ್ಲವೋ ಎಂದು ಹೇಳಲು ಸಾಧ್ಯವಿದೆ.
ಪ್ರ: ವೈದ್ಯವೃತ್ತಿಯು ಗರಿಷ್ಠಮಿತಿಯಲ್ಲಿ ಫಲಿತಾಂಶ ನಿಷ್ಠವಾಗಿರಬೇಕು ಎಂಬುದಾಗಿ ನೀವು ಮತ್ತೆ ಮತ್ತೆ ಹೇಳಿದಿರಿ. ಪ್ರಶಾಂತಿ ಆಯುರ್ವೇದ ಸೆಂಟರಿನಲ್ಲಿ ಇದರ ಪ್ರಮಾಣ ಹೇಗಿದೆ?
ಉ: ನಮ್ಮ ಆಸ್ಪತ್ರೆಯಲ್ಲಿ ಶಾಖೆಯ ವೈದ್ಯರಿಗೆ ಚಿಕಿತ್ಸಾ ತರಬೇತಿಯ ಕಾಲದಲ್ಲಿ ಒಂದು ದಿನ ಚಿಕಿತ್ಸಾ ದರ್ಶನ ಎನ್ನುವುದನ್ನು ಏರ್ಪಡಿಸುತ್ತೇನೆ. ಒಂದಿಡೀ ದಿನ ರೋಗಿಗಳ ಪರೀಕ್ಷಣದಲ್ಲಿ ಅವರು ನನ್ನ ಜೊತೆಗೆ ಇರುವುದಷ್ಟೇ ಉದ್ದೇಶ. ಆ ವೈದ್ಯರು ಪರೀಕ್ಷಣಕಲಾಪವನ್ನು ಗಮನಿಸಬೇಕು. ಆ ರೀತಿಯಲ್ಲಿ ಇಲ್ಲಿಗೆ ಬಂದ ಬಹುಪಾಲು ವೈದ್ಯರಿಗಾಗುವ ಮೊದಲ ಸೋಜಿಗವೆಂದರೆ, ಇಡೀ ದಿನದಲ್ಲಿ ಇಲ್ಲಿ ಬರುವ ನೂರಾರು ರೋಗಿಗಳಲ್ಲಿ ಕಳೆದ ಬಾರಿಗಿಂತ ಈಗ ರೋಗ ಕಡಮೆಯಾಗಲಿಲ್ಲ ಎನ್ನುವ ಒಬ್ಬನೇ ಒಬ್ಬ ಇರದಿರುವುದು! ಈ ಸೌಖ್ಯಾನುಭವವು ನನಗೆ ನಿತ್ಯಕಟ್ಟಳೆ. ದಿನವೂ ಹತ್ತಿರ ಹತ್ತಿರ ಇನ್ನೂರು ಪೇಶೆಂಟುಗಳು ಧನಾತ್ಮಕ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಾರೆ ಎಂದರೆ, ಅಹೋಭಾಗ್ಯವಲ್ಲವೆ! ಅಂತಹ ಯಶಸ್ಸು ಎಲ್ಲ ಆಯುರ್ವೇದ ವೈದ್ಯರಿಗೂ ಲಭಿಸಬೇಕು. ಪ್ರತಿದಿನದ ನನ್ನ ವೃತ್ತಿಯ ಪರಿಶೀಲನೆಯಲ್ಲಿ ಯಶೋಲಾಭದ ಮೌಲ್ಯಾಂಕವು ೯೦%ಗಿಂತ ಇಳಿದದ್ದಿಲ್ಲ. ಇದು ಆಯುರ್ವೇದದ ಮಹತ್ತ್ವ, ಸತ್ತ್ವ. ಆ ಬಗ್ಗೆ ನನಗೆ ಹೆಮ್ಮೆ ಇದೆ, ಹಸಾದವಿದೆ.
ಪ್ರ: ಆಯುರ್ವೇದವನ್ನೇ ಪ್ರಾಕ್ಟೀಸ್ ಮಾಡುವಂತೆ ಪ್ರೋತ್ಸಾಹಿಸುವ ಮಾರ್ಗದರ್ಶನವನ್ನು ಆಸಕ್ತ ತರುಣ ವೈದ್ಯರಿಗೆ ನೀಡುವ ಯೋಜನೆಯನ್ನು ಒಂದು ಸಂಸ್ಥೆಯಾಗಿ ತಾವು ಕೈಗೆತ್ತಿಕೊಳ್ಳಬಹುದೆ?
ಉ: ಆ ಸತ್ಸಂಕಲ್ಪವಿದೆ. ಜಗತ್ತಿನಲ್ಲಿ ಶ್ರೇಷ್ಠ ಆಯುರ್ವೇದಪ್ರಸ್ಥಾನವನ್ನು ಪ್ರತಿಷ್ಠಾಪಿಸಬೇಕೆಂಬ ಹಂಬಲವಿದೆ. ಆ ಮೂಲಕ ಸಹಸ್ರಾರು ಆಯುರ್ವೇದ ವೈದ್ಯರನ್ನು ತಯಾರುಮಾಡುವ ಉದ್ದೇಶವಿದೆ. ಇಲ್ಲಿ ಸಿದ್ಧರಾದ ವೈದ್ಯರು ಯಥೋಚಿತವಾಗಿ ಜನಸೇವೆ ಮಾಡಲೂ ಸಾಧ್ಯವಾಗಬೇಕು. ಅಂದರೆ ಅತ್ಯಂತ ಕಡಮೆ ವೆಚ್ಚದಲ್ಲಿ ಅವರಿಗೆ ಶಿಕ್ಷಣ ಸಿಗುವಂತಾಗಿಸಬೇಕು. ಆ ಸಂಸ್ಥೆಯು ಅತ್ಯುತ್ತಮ ಗುಣಮಟ್ಟದ್ದಾಗಿ ಹೊಮ್ಮಬೇಕು. ಕೇವಲ ಪದವೀಪತ್ರವನ್ನು ಪಡೆದು ವಿದ್ಯಾರ್ಥಿಗಳು ಸಂಸ್ಥೆಯಿಂದ ತೆರಳುವುದಲ್ಲ. ನೈತಿಕವಾದ ಹೊಣೆಯನ್ನು ಹೊತ್ತು ಹೊರಡುತ್ತಾರೆ. ಪರಿಪೂರ್ಣ ಪರಿಶುದ್ಧ ವೈದ್ಯರಾಗಿ ಸಮಾಜಮುಖರಾಗುತ್ತಾರೆ. ಅವರಿಗೆ ಪ್ರಾಕ್ಟೀಸ್ ಮಾಡಲು ಆರ್ಥಿಕ ಸಹಾಯವನ್ನು ಶಕ್ಯವಿದ್ದಷ್ಟು ಸಂಸ್ಥೆಯೇ ಒದಗಿಸುವಂತಾಗಬೇಕು. ಜೀವನದಲ್ಲಿ ಇವೆಲ್ಲವನ್ನೂ ಸಾಧಿಸಿಯೇ ಸಾಧಿಸುತ್ತೇನೆ ಎಂಬ ಅಪರಿಮಿತ ವಿಶ್ವಾಸವಿದೆ.
ನಿಮ್ಮ ಎಲ್ಲ ಸದಿಚ್ಛೆಗಳಿಗೆ ಸದನುಗ್ರಹವಿರಲಿ, ಸದಾನುಗ್ರಹವಿರಲಿ. ನಮಸ್ಕಾರ.