ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಆಗಸ್ಟ್ 2019 > ‘ಸಿನೆಮಾ ಸಂಗೀತಕ್ಕೇ ಹೋಗಬೇಡಿ, ನಿಸರ್ಗದಲ್ಲೇ ಸಂಗೀತವಿದೆ; ಆಸ್ವಾದಿಸಿ’ : ‘ನಾದಬ್ರಹ್ಮ’ ಹಂಸಲೇಖ

‘ಸಿನೆಮಾ ಸಂಗೀತಕ್ಕೇ ಹೋಗಬೇಡಿ, ನಿಸರ್ಗದಲ್ಲೇ ಸಂಗೀತವಿದೆ; ಆಸ್ವಾದಿಸಿ’ : ‘ನಾದಬ್ರಹ್ಮ’ ಹಂಸಲೇಖ

ಇನ್ನೂ ತಂತ್ರಜ್ಞಾನ ಮುನ್ನೆಲೆಗೆ ಬಂದಿರದ ಕಾಲ; ಸಿನೆಮಾಗಳು ಇನ್ನೇನು ತನ್ನ ಹೆಜ್ಜೆಗಳನ್ನಿಡುತ್ತ ದೃಢವಾಗಿ ನಿಲ್ಲುವ ಹಂತದಲ್ಲಿದ್ದ ಕಾಲ. ಅಂತಹ ಸಮಯದಲ್ಲಿ ಕನ್ನಡ ಸಿನೆಮಾಕ್ಕೆ ಉತ್ತಮ ಗುಣಮಟ್ಟದ ಸಂಗೀತ, ಸಾಹಿತ್ಯವನ್ನು ನೀಡಿದ ಕೀರ್ತಿ ಹಂಸಲೇಖ ಅವರಿಗೆ ಸಲ್ಲುತ್ತದೆ. ಸುಮಾರು 30 ವರ್ಷಗಳಿಂದ ಕನ್ನಡ ಸಿನೆಮಾ ಸಂಗೀತ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತ ಬಂದಿರುವ ಹಂಸಲೇಖ ಅವರದ್ದು ರಂಗಭೂಮಿ, ಸಿನೆಮಾ, ಜಾನಪದ – ಹೀಗೆ ಸಂಗೀತ-ಸಾಹಿತ್ಯಗಳಲ್ಲಿ ಬಹುಮುಖವಾದ ಮೇರುವ್ಯಕ್ತಿತ್ವ. ಅವರು ಸಂಗೀತಕ್ಷೇತ್ರದ ಯುವಪ್ರತಿಭೆಗಳಿಗೆ ಸದಾ ಮಾರ್ಗದರ್ಶಕರು. ಇತ್ತೀಚೆಗೆ ‘ಉತ್ಥಾನ’ ಮಾಸಪತ್ರಿಕೆ ಹಂಸಲೇಖ ಅವರೊಂದಿಗೆ ನಡೆಸಿದ ಸಂವಾದದ ಪೂರ್ಣಪಾಠವನ್ನು ಇಲ್ಲಿ ನಮ್ಮ ಓದುಗರಿಗಾಗಿ ನೀಡುತ್ತಿದ್ದೇವೆ.

ಪ್ರಶ್ನೆ: ಚಿತ್ರಸಂಗೀತದ ಈಗಿನ ಸ್ಥಿತಿ-ಗತಿಗಳ ಬಗೆಗೆ ನಿಮ್ಮ ಅನಿಸಿಕೆ ಏನು?

ಉತ್ತರ: ಚೆನ್ನಾಗಿದೆ. ಬದಲಾವಣೆ ಸಹಜ. ಅದಕ್ಕೆ ನಾವು ಹೊಂದಿಕೊಳ್ಳುತ್ತಾ ಸಾಗಬೇಕು. ನೋಡಿ, ಕನ್ನಡವನ್ನು ರಕ್ಷಿಸುವುದು ಬೇರೆ, ಅದನ್ನು ಜೀವಂತವಾಗಿ ಇರುವುದಕ್ಕೆ ಬಿಡುವುದು ಬೇರೆ. ನನಗೆ ಎರಡನೆಯದರ ಮೇಲೆ ನಂಬಿಕೆ ಹೆಚ್ಚು. ಭಾಷೆಯ ಬಳಕೆ ಆಗಬೇಕು. ಈಗ ನೋಡಿ, ಪ್ರತಿ ಬಾರ್ ಅಥವಾ ರೆಸ್ಟೊರೆಂಟ್‍ಗಳು ಸಂಜೆ 4 ಗಂಟೆಯ ಬಳಿಕ ಚುರುಕಾಗಿರುತ್ತವೆ. ಪ್ರತಿದಿನ ಅಲ್ಲಿ ನೂರಾರು ಜನ ಬಂದು ಹೋಗುತ್ತಾರೆ. ಆದರೆ ಬಿಲ್ ಇಂಗ್ಲಿಷಿನಲ್ಲಿ ಇರುತ್ತದೆ. ಅಂಥ ಕಡೆಗಳಲ್ಲಿ ಕನ್ನಡ ಬರಬೇಕು. ಇದು ಹೇಳುವುದಕ್ಕೆ ಸುಲಭ; ಆದರೆ ಕಷ್ಟಕರವಾದ ವಿಷಯ. ಇಂತಹವು ಆಗಬೇಕು. ಸಣ್ಣ ಅಕ್ಷರ ಇರುತ್ತವೆ; ಅಲ್ಲಿ ಬಳಕೆಯಲ್ಲಿ ಕನ್ನಡ ಬರಬೇಕು.

ಮತ್ತೆ ಯೋಗರಾಜ್ ಭಟ್ ಬರೆಯುತ್ತಾರಲ್ಲ, ಅಂತಹ ಸಾಹಿತ್ಯವನ್ನು ವಿರೋಧಿಸಬಾರದು ಎನ್ನುವುದು ನನ್ನ ಅಭಿಪ್ರಾಯ. ಎಲ್ಲರೂ ಆತನನ್ನು ತಮಾಷೆ ಮಾಡುತ್ತಾರೆ. ಆದರೆ ಆತ ಗ್ರಂಥಿ ಮತ್ತು ಗ್ರಂಥ ಎರಡನ್ನೂ ಹಾಕಿ ರುಬ್ಬುತ್ತಾರೆ. ರುಬ್ಬಿ ಪಾಕ ಬರುವುದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಅಷ್ಟೆ. ಆದ್ದರಿಂದ ಯೋಗರಾಜ್ ಕನ್ನಡದ ಭಾಷಾ-ಲಯವನ್ನು ಬದಲಾಯಿಸುತ್ತಾರೆ. ಭಾಷೆಗೆ ಒಂದು ಸಂಗೀತ ಇರುತ್ತದೆ. ಅದು ಕೂಡ ಬದಲಾಗುತ್ತಲೇ ಇರುತ್ತದೆ. ‘ಬ್ರಹ್ಮಗಂಟು’ ಇರುವುದು ಇಂದು ಟ್ಯೂನ್‍ಗೆ ಸರಿಯಾಗಲು ‘ಬ್ರಹ್ಮಾಗಂಟು’ ಆಗುತ್ತದೆ. ನನಗೆ ಅದು ಜೀರ್ಣಿಸಿಕೊಳ್ಳಲೇ ಆಗುವುದಿಲ್ಲ. ಬದಲಾವಣೆ ಸಹಜ. ಕಾಯ್ಕಿಣಿ ಹೀಗೆ ಟ್ಯೂನ್‍ಗೆ ಸರಿಯಾಗಿ ಮಾಡಲು ಬಹಳ ಕಷ್ಟಪಟ್ಟಿದ್ದಾರೆ. ಭಾಷಾಸಂಗೀತ ಬದಲಾಗುತ್ತಿದೆ. ಯಾಕೆ ಹೀಗಾಗುತ್ತದೆ ಎಂದರೆ, ಬೇರೆ ಭಾಷೆಯ ಉಚ್ಚರಿಸುವ ರೀತಿ ನಮ್ಮ ಭಾಷೆಗೆ ಬಂದಾಗ ಶ್ರುತಿಸಹ್ಯವಾಗಲು ಬದಲಾವಣೆ ಅಗತ್ಯ. ಶ್ರುತಿ ನಮಗೆ ಇಂಪಾಗಿರಬೇಕು. ಹಣ್ಣು ಮತ್ತು ಫಲ ‘ಹಂಫಲ’ ಆಗುತ್ತದೆ; ಅದು ಸಾಕಾಗದೆ ‘ಹಣ್ಣು-ಹಂಪಲ’ ಆಯಿತು. ಹೀಗೆ ಭಾಷೆ ಲಯವನ್ನು ಪಡೆದುಕೊಂಡು ಬದಲಾಗುತ್ತಿರುತ್ತದೆ.

ಉದಾಹರಣೆಗೆ ಹೋಗುವುದಾದರೆ ಕೈಲಾಸಂ ಅವರ ನಾಟಕಕ್ಕೆ ಹೋಗಬೇಕು. ಅವರು ಎಲ್ಲವನ್ನೂ ಬ್ಲೆಂಡ್ (ಮಿಶ್ರಣ) ಮಾಡಿದರು. ಅವರು ಮಾಡಿದ್ದು ಇವರಿಗೆ ಅರ್ಥವಾಗಲಿಲ್ಲ. ಅವರ ಎದುರು ಕುಳಿತುಕೊಂಡು ರಾಜರತ್ನಂ ಅಥವಾ ಇನ್ನಾರೋ ಕೇಳಿಸಿಕೊಳ್ಳುವವರು. ಒತ್ತಕ್ಷರ ಕೊಡು, ಸುಳಿ ಕೊಡು, ಅರ್ಧವಿರಾಮ ಕೊಡು ಹೀಗೆ. ಇಂಗ್ಲಿಷ್ ಕನ್ನಡ ಬ್ಲೆಂಡ್ ಮಾಡಿ ಹೇಳುವವರು. ಇಂಗ್ಲಿಷ್ ಮುಂದೆ ಕನ್ನಡದ ಒಳಗೆ ಸೇರಿಹೋಗುತ್ತದೆ ಎಂದು ಯೋಚಿಸಿದವರು ಅವರು. ಮದರಾಸಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅವರ ಅಧ್ಯಕ್ಷೀಯ ಭಾಷಣವನ್ನು ಒಮ್ಮೆ ಓದಬೇಕು. ಅದರಲ್ಲಿ ಇಂಗ್ಲಿಷ್ ಮುಂದೆ ಏನು ಮಾಡುತ್ತದೆ ಎನ್ನುವುದನ್ನು ಹೇಳಿದ್ದಾರೆ. ಅವರನ್ನು ನಾವು ತಮಾಷೆ ಮಾಡಿದ್ದೇ ಜಾಸ್ತಿ. ನಾನು ಯಾವತ್ತೂ ಅವರನ್ನು ಬಿಟ್ಟುಕೊಟ್ಟಿಲ್ಲ. ಅದಕ್ಕೇ, ‘ಕೈಲಾಸಂ ಕಂಡ ನಮಗೆ ಕೈಲಾಸ ಯಾಕೆ ಬೇಕು’ ಎಂದು ಬರೆದಿದ್ದು. ಆಡುಭಾಷೆಗೆ ಬಹಳ ಬೇಗ ಬದಲಾವಣೆ ತಂದವರು ಅವರು.

ಪ್ರಶ್ನೆ: ಈಗ್ಗೆ ಮೂರು ದಶಕಗಳ ಹಿಂದಿನ ಚಿತ್ರಗೀತೆಗಳ ಗುಣಮಟ್ಟಕ್ಕೆ ಹೋಲಿಸಿದರೆ ಈಚಿನ ಚಿತ್ರಗೀತೆಗಳಲ್ಲಿ ದೀರ್ಘಕಾಲ ನೆನಪಿನಲ್ಲಿ ಉಳಿಯುವಂತಹವು ಕಡಮೆ ಎಂಬ ಭಾವನೆ ಹಲವರಲ್ಲಿ ವ್ಯಕ್ತಗೊಂಡಿದೆ. ಇದರ ಬಗೆಗೆ ನಿಮ್ಮ ಅಭಿಪ್ರಾಯ ಏನು?

ಉತ್ತರ:  ಎರಡು ಭಾಷೆ ಇದೆ. ಒಂದು ಗ್ರಂಥ ಭಾಷೆ, ಇನ್ನೊಂದು ಗ್ರಂಥಿ ಭಾಷೆ. ಸಲುಗೆ ಇರುತ್ತದೆ; ಸಲುಗೆಭಾಷೆ ಇನ್ನೊಂದು ಸಾಮಾನ್ಯವಾದ ಭಾಷೆಯಾಗುತ್ತಿದೆ. ಎಲ್ಲಾ ಕಾಲದಲ್ಲೂ ಆಗಿದೆ. ಈಗಲೂ ಆಗುತ್ತಿದೆ. ಏಕೆಂದರೆ ಪಂಪನ ಕಾಲದ ಕನ್ನಡ, ಆಮೇಲೆ ಕುಮಾರವ್ಯಾಸನಿಗೆ ಬರಲಿಲ್ಲ, ಕುಮಾರವ್ಯಾಸನ ಕನ್ನಡ ವಚನಕಾರರಿಗೆ ಬರಲಿಲ್ಲ, ಜನಪದಕ್ಕೆ ವಚನಕಾರರು ಬರಲೇ ಇಲ್ಲ. ಆಮೇಲೆ ಲಾವಣಿ, ಆಡಳಿತ ಭಾಷೆಯಲ್ಲಿ ಉರ್ದು ಶಬ್ದಗಳು ಬಂದವು. ಪಾರ್ಸಿ ಶಬ್ದಗಳು. ಬದಲಾಗುತ್ತಿರುವ ಕನ್ನಡ ಯಾವತ್ತೂ ಉಳಿಯುತ್ತದೆ; ಬದಲಾಗುವ ಕನ್ನಡ ಉಳಿಯುತ್ತದೆ. ಬದಲಾಗಬೇಡ ಎನ್ನುವುದು ತಪ್ಪು. ಬದಲಾಗುತ್ತಿರುವಾಗ ಸ್ವಲ್ಪ ಸಹನೆ ಬೇಕು. ಸಲುಗೆ ಮಾತು ಕಷ್ಟ ಆದರೂ ಸಹಿಸಿಕೊಳ್ಳಬೇಕು. ಭಾಷೆ ಬದುಕುವುದು ಮುಖ್ಯ. ಅದರ ಒಳಗೆ ನಾವು ಸೇರಿಕೊಳ್ಳುವುದಿಲ್ಲ ಎಂದರೆ ತಳಿಯನ್ನು ಉಳಿಸಿಕೊಳ್ಳಲಾಗುವುದಿಲ್ಲ.

ಪ್ರಶ್ನೆ: ಈಚೆಗೆ ಲಭ್ಯವಾಗಿರುವ ಹೊಸ ತಂತ್ರಜ್ಞಾನ ಆವಿಷ್ಕರಣಗಳಿಂದ ಚಿತ್ರಸಂಗೀತದ ಗುಣವಂತಿಕೆಯ ಮೇಲ್ಮೆಗೆ ಅನುಕೂಲವಾಗಿದೆ ಎನಿಸುತ್ತಿದೆಯೇ?

ಉತ್ತರ: ಆಗ ಒಂದು ಬೈಂಡಿಂಗ್ ಇತ್ತು. ಒಂದು ಹಾಡು ತಯಾರಿಸಬೇಕು ಎಂದರೆ ಬೈಂಡಿಂಗ್ ಹಿಂದೆ ಫೆÇೀರ್ಸ್ ಇತ್ತು. ಅದುವೇ ಲೈಫ್; ಒಂದು ಹಾಡು ಆಗಬೇಕೆಂದರೆ 5 ಜನ ಸೇರುತ್ತಿದ್ದೆವು. ಹಾಡು ಬರೆದು, ರಾಗ ಸಂಯೋಜನೆ ಮಾಡುತ್ತಿದ್ದೆವು. ಹಾಡು ರೆಕಾರ್ಡ್ ಮಾಡಲು 35 ಜನ ಒಟ್ಟಿಗೆ ಒಂದೇ ಸಲಕ್ಕೆ ಸೇರುತ್ತಿದ್ದೆವು. ಅದು ಒಂದು ಶಕ್ತಿ ಮತ್ತು ಬೈಂಡಿಂಗ್. 9 ಗಂಟೆಯ ಒಳಗೆ, ಟ್ರಂಪೆಟ್ ಅವನಿಗೆ ಕೊಡಬೇಕು, ಕೊಳಲಿನವನಿಗೆ ಹೇಳಬೇಕು… – ಹೀಗೆ ಕೆಲಸ ಆಗುತ್ತಿತ್ತು. ‘ನನ್ನ ಸಂಪೂರ್ಣ ಶಕ್ತಿಯನ್ನು ವಿನಿಯೋಗಿಸಬೇಕು’ ಎಂದು ಕೆಲಸ ಮಾಡುತ್ತಿದ್ದೆವು. 4 ಗಂಟೆಯಲ್ಲಿ ಅಂದುಕೊಂಡಿದ್ದ

ಕೆಲಸ ಆಗುತ್ತಿತ್ತು. ಅಲ್ಲೊಂದು ಶಕ್ತಿ ಇತ್ತು. ಆದರೆ ಅಲ್ಲಿ ತಪ್ಪುಗಳೂ ಬಹಳ ಇರುತ್ತಿದ್ದವು. ಅದನ್ನು ಸರಿಪಡಿಸುವುದು ಅಸಾಧ್ಯವಾಗುತ್ತಿತ್ತು; ಸಮಯ, ಆರ್ಥಿಕ ಸ್ಥಿತಿ, ತಂತ್ರಜ್ಞಾನ ಯಾವುದೂ ಕೂಡ ಅದಕ್ಕೆ ಎಡೆಮಾಡಿಕೊಡುತ್ತಿರಲಿಲ್ಲ.

ಈವತ್ತು ಬೈಂಡಿಂಗ್ ಇದೆ; ಫೋರ್ಸ್ ಇಲ್ಲ. ಎಂತಹ ತಪ್ಪನ್ನೂ ಸರಿಮಾಡಬಹುದು. ಯಂತ್ರದ ಹತ್ತಿರ ಒಬ್ಬ ಕುಳಿತಿರುತ್ತಾನೆ; ಅವನಿಗೆ ಸ್ವಲ್ಪ ಡಿಸ್ಟರ್ಬ್ ಆದರೂ ಎನರ್ಜಿ ಕಳೆದುಕೊಳ್ಳುತ್ತಾನೆ. ನಾನು ನೋಟ್ಸ್ ಬರೆದು ‘ಇದನ್ನು ಹಾಕು’ ಎಂದರೆ ಅದರಲ್ಲಿ ಎನರ್ಜಿ ಇರುವುದಿಲ್ಲ. ಅದನ್ನೇ ‘ನೋಡಯ್ಯಾ, ಇದು ಐಡಿಯಾ ಕಣಯ್ಯಾ, ಯಾವುದು ಸರಿಹೊಂದುತ್ತೆ ಹುಡುಕು’ ಎಂದರೆ, ಅವನ ಬಳಿ ಲಕ್ಷಾಂತರ ಟ್ಯೂನ್ ಇರುತ್ತದೆ, ಅದರಲ್ಲಿ ಹುಡುಕಿ ತೆಗೆಯುತ್ತಾನೆ. ಅದರಲ್ಲಿ ಎನರ್ಜಿ ಇರುತ್ತದೆ. ದುಡ್ಡು, ಸಮಯ, ಪೆÇ್ರೀಸೆಸ್ ಎಲ್ಲವೂ ಹೆಚ್ಚು ಬೇಕು. ಇದು ಈಗ ಕನಿಷ್ಠ ಒಂದು ಅಥವಾ ಒಂದೂವರೆ ತಿಂಗಳ ಕೆಲಸ. ಮೊದಲು 4 ಗಂಟೆಯಲ್ಲಿ ಮಾಡುತ್ತಿದ್ದೆವು.

ನನ್ನ ಅಸಿಸ್ಟೆಂಟ್ ಹೇಳುತ್ತಿದ್ದರು, ಒಂದೇ ದಿನದಲ್ಲಿ 5 ಹಾಡು ಮಾಡಿದ್ದೇವೆ ಎಂದು. ಟ್ಯೂನ್ ಬರೆದು, ಸಾಹಿತ್ಯ ಬರೆದು, ಎಲ್ಲಾ ತಯಾರು ಮಾಡಿ ಹಾಡಿಸಿಯೂಬಿಡುತ್ತಿದ್ದೆವು. ಅಷ್ಟು ಬೇಗ ಎಲ್ಲವೂ ಆಗುತ್ತಿತ್ತು, ಅಲ್ಲೊಂದು ಫೆÇೀರ್ಸ್ ಇತ್ತು. ಇಂದು ಬೈಂಡಿಂಗ್ ಇದೆ, ಫೆÇೀರ್ಸ್ ಇಲ್ಲ; ಯಾವುದನ್ನು ಬೇಕಾದರೂ ಸರಿಮಾಡಬಹುದು. ಬಹಳ ಫೈನ್ ಟ್ಯೂನ್ ಮಾಡುವುದಕ್ಕೆ ಹೋದರೆ ಸಂಗೀತ ಸೈನ್ಸ್ ಆಗಿಬಿಡುತ್ತದೆ. ಸೆನ್ಸ್ ಇದ್ದರೆ ಮಾತ್ರ ತಾನೇ ಸಂಗೀತ? ಕೇವಲ ಸೈನ್ಸ್ ಎಲ್ಲರಿಗೂ ಗೊತ್ತಿರುವುದೇ, ಸೆನ್ಸ್ ಇರಬೇಕು, ಫೀಲ್ ಇರಬೇಕು. 

ಪ್ರಶ್ನೆ: ಚಿತ್ರಸಂಗೀತ ಸಂಯೋಜಕರಿಗೆ ಶಾಸ್ತ್ರೀಯ ಸಂಗೀತದ ಹಿನ್ನೆಲೆ ಅವಶ್ಯವೆಂದು ತಮಗೆ ಅನಿಸುತ್ತಿದೆಯೇ?

ಉತ್ತರ: ಶಾಸ್ತ್ರೀಯತೆ ಬೇಕಿರುವುದು ಸಂವಹನಕ್ಕಾಗಿ. ಇದು ಈ ಶ್ರುತಿಯಲ್ಲಿದೆ, ಇಂತಹ ತಾಳದಲ್ಲಿದೆ, ಇಂತಹ ಫ್ರೇಸ್‍ನಲ್ಲಿ ಇದೆ ಎಂದು ತಿಳಿಯುವುದೇ ಸಂವಹನ. ಶಾಸ್ತ್ರೀಯ ಸಂಸ್ಕೃತಿ ಇದೆಯಲ್ಲಾ, ಅದು ಬಹಳ ಮುಖ್ಯ. ಶಾಸ್ತ್ರೀಯ ಸಂಸ್ಕೃತಿ ಒಂದು ಪ್ರಾಕಾರಕ್ಕೆ ಕರೆದುಕೊಂಡು ಹೋಗುತ್ತದೆ. ಆ ಪ್ರಾಕಾರದ ಅರಿವು ಇದ್ದರೆ ಆತ ತನ್ನ ಪರಂಪರೆಯನ್ನು ಹಿಂದಕ್ಕೆ ತೆಗೆದುಕೊಂಡುಬರಬಲ್ಲ. ರಾಗದ ಬಗ್ಗೆ ಸರಿಯಾದ ಅರಿವು ಆತನಿಗಿದ್ದರೆ ಆಧುನಿಕ ಬೀಟ್ಸ್ ಮೇಲೂ ಆತ ಅದನ್ನು ತರಬಲ್ಲ. ಪರಂಪರೆ ತರುವುದಕ್ಕೆ ಆತನಿಗೆ ಶಾಸ್ತ್ರೀಯ ಸಂಸ್ಕೃತಿ ಇರಬೇಕು, ಕೇವಲ ಶಾಸ್ತ್ರೀಯ ಸಂವಹನ ಅಲ್ಲ. ಇಂದಿನ ಹುಡುಗರು ಇದನ್ನು ಕಲಿಯುತ್ತಿಲ್ಲ. ಎಲ್ಲಾ ರೆಡಿಮೇಡ್ ಆಗುತ್ತಿದೆ. ತ್ರಿಶಂಕು ಸ್ಥಿತಿ. 

ಪ್ರಶ್ನೆ: ತಮಿಳು, ತೆಲುಗು, ಹಿಂದಿ ಮೊದಲಾದ ಇತರ ಭಾಷೆಗಳ ಚಿತ್ರಸಂಗೀತಕ್ಕೆ ಹೋಲಿಸಿದರೆ ಕನ್ನಡ ಚಿತ್ರಸಂಗೀತದ ಸ್ಥಾನದ ಬಗೆಗೆ ತಮ್ಮ ಅಭಿಪ್ರಾಯ ಏನು?

ಉತ್ತರ: ತಂತ್ರಜ್ಞಾನದ ದೃಷ್ಟಿಯಲ್ಲಿ ನಾವು ಬಹಳ ಮುಂದುವರಿದಿದ್ದೇವೆ. ಅದು ಮುಂದುವರಿದಿರುವುದರಿಂದಲೇ ಸಾಹಿತ್ಯ ಸ್ವಲ್ಪ ಹಿಂದಾಗಿದೆ. ಯಾವುದೇ ಹಾಡಿನಲ್ಲಿ ಅದು ತಾಂತ್ರಿಕವಾಗಿ ಚೆನ್ನಾಗಿ ಕೇಳಿಸಬೇಕು ಎನ್ನುವುದೇ ಹೆಚ್ಚಾಗಿದೆ. ಉದಾಹರಣೆಗೆ: ‘ಈ ಟಚ್ಚಲಿ ಏನೋ ಇದೆ’, ಇದರಲ್ಲಿ ಟಚ್ಚಲಿ ಎನ್ನುವುದು ಆತನಿಗೆ ಇಷ್ಟವಾಗಿರುತ್ತದೆ. ಅದು ಇಂಗ್ಲಿಷ್ ಅಥವಾ ಕನ್ನಡ ಆದರೆ ಏನು? ಅಲ್ಲಿ ಬರುವ ಸೌಂಡಿಂಗ್ ಚೆನ್ನಾಗಿರಬೇಕು. ‘ಹಲೋ ಹಲೋ ಹಲೋ ಮಾಮ’ ಇಲ್ಲೂ ತಾಂತ್ರಿಕವಾಗಿ ಸೌಂಡಿಂಗ್ ಚೆನ್ನಾಗಿರಬೇಕು. ಸಾಹಿತ್ಯ ಮುಖ್ಯವಾಗಿರುವುದಿಲ್ಲ. ತಾಂತ್ರಿಕವಾಗಿ ಮುಂದಿದೆ, ಸಾಹಿತ್ಯಕವಾಗಿ ಸ್ವಲ್ಪ ಹಿಂದಿದ್ದೇವೆ. ಸಾಹಿತ್ಯಕವಾಗಿ ಮುಂದೆ ಬರಬೇಕು ಎಂದರೆ, ತಾಂತ್ರಿಕತೆ ಹೊಂದುವಂತಹ ಉತ್ತಮ ಗುಣಮಟ್ಟದ ಸಾಹಿತ್ಯವನ್ನು ತಂದು ಹಾಕಬೇಕು. ಅದು ಸಮಯ ತೆಗೆದುಕೊಳ್ಳುತ್ತದೆ. ಸಮಯ ಸಿಗುತ್ತಿಲ್ಲ. ಪ್ರಯತ್ನ ಪಡುತ್ತಿದ್ದಾರೆ. ಆದರೂ ಬದಲಾವಣೆ ಆಗುತ್ತಿದೆ.

ಸಂಗೀತಲೋಕದಲ್ಲಿ ’ನಾದಬ್ರಹ್ಮ’ನ ಪಯಣ
ನಾದಬ್ರಹ್ಮ ಎಂದೇ ಕನ್ನಡ ಚಿತ್ರಲೋಕದಲ್ಲಿ ಪರಿಚಿತರಾಗಿರುವ ಹಂಸಲೇಖ ಅವರು ಅತ್ಯಂತ ಮಧುರ, ಸುಶ್ರಾವ್ಯ, ಭಾವಪೂರ್ಣವಾದ ಸಾಹಿತ್ಯ ಮತ್ತು ಸಂಗೀತವನ್ನು ಸತತ ೩೦ ವ?ಗಳಿಂದ ನೀಡುತ್ತಿದ್ದಾರೆ. ’ಗಾನಯೋಗಿ ಪಂಚಾಕ್ಷರಿ ಗವಾಯಿ’ ಚಿತ್ರಕ್ಕೆ ನೀಡಿದ ಅತ್ಯುತ್ತಮ ಸಂಗೀತಕ್ಕಾಗಿ ’ನ್ಯಾ?ನಲ್ ಫಿಲಂಫೇರ್ ಪ್ರಶಸ್ತಿ’ಯನ್ನು ಪಡೆದಿದ್ದಾರೆ. ’ನೀಡು ಶಿವ ನೀಡದಿರೂ ಶಿವ’, ’ಈ ಭೂಮಿ ಬಣ್ಣದ ಬುಗುರಿ’, ’ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು’ ಇಂತಹ ಚಿರಸ್ಥಾಯಿಯಾಗಿ ಉಳಿಯುವಂಥ ಹಾಡುಗಳನ್ನು ನಮಗೆ ಕೊಟ್ಟಿರುವವರು ಹಂಸಲೇಖ. ’ಶ್ರೀ ಮಂಜುನಾಥ’ ಭಕ್ತಿಪ್ರಧಾನ ಸಿನೆಮಾಕ್ಕೆ ಅದ್ಭುತವಾದ ಭಕ್ತಿಗೀತೆ ಸಾಹಿತ್ಯವನ್ನು ನೀಡಿದ್ದಕ್ಕಾಗಿ ’ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ’ಯನ್ನು ಪಡೆದಿದ್ದಾರೆ. ಹಂಸಲೇಖ ಅವರು ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳಿನಲ್ಲೂ ಸಂಗೀತಸೇವೆ ಸಲ್ಲಿಸಿದ್ದಾರೆ.

ಪ್ರಶ್ನೆ: ಈಗಿನ ಚಿತ್ರಸಂಗೀತದ ಸಾಹಿತ್ಯಾಂಶ ಕುರಿತು ತಮ್ಮ ಅನಿಸಿಕೆ ಏನು?

ಉತ್ತರ: ಸಿನೆಮಾ ಮತ್ತು ಸಾಹಿತ್ಯಕ್ಕೆ ಸಂಬಂಧ ಕೆಲವೊಮ್ಮೆ ಇರುತ್ತದೆ. ಕೆಲವೊಮ್ಮೆ ಇರುವುದಿಲ್ಲ. ಇದು ಇಂದು ಚಾಲ್ತಿಯಲ್ಲಿರುವ ಸಂಗೀತ (ಹ್ಯಾಪನಿಂಗ್ ಮ್ಯೂಸಿಕ್). ಇದಕ್ಕೆ ಗೌರವ ಕೊಡಬೇಕು. ಕರ್ನಾಟಕದಲ್ಲಿ ಸಂಗೀತವೇ ಆಗುತ್ತಿಲ್ಲ, ಸ್ಟುಡಿಯೋ ಕೆಲಸ ಮಾಡುತ್ತಿಲ್ಲ, ಸಂಗೀತಗಾರರು ಇಲ್ಲ ಎನ್ನುವ ಸ್ಥಿತಿ ಇದ್ದರೆ ಅದು ಅಪಾಯ. ಸಂಗೀತ ನಡೆಯುತ್ತಿದೆ ಎನ್ನುವುದು ಉದ್ಯಮಕ್ಕೆ ಎಂದಿಗೂ ಪ್ಲಸ್ ಪಾಯಿಂಟ್. ನಮ್ಮವರು ಎಲ್ಲರೂ ಚಿಕ್ಕ ಹುಡುಗರು, ಅನುಭವ ಎಷ್ಟಿರುತ್ತದೆ ಹೇಳಿ. ಆದ್ದರಿಂದ ಯಾವುದಕ್ಕೆ ಬೇಡಿಕೆ  ಇದೆಯೋ ಅದನ್ನೇ ಮಾಡುತ್ತಿರುತ್ತಾರೆ. ಕೆಲಸ ನಡೆಯುತ್ತಿದೆ. ಬುದ್ಧಿವಂತ ಯಾರಾದರೂ ಒಬ್ಬ ಬಂದರೆ ಉತ್ತಮ ಕೆಲಸ ಮಾಡುತ್ತಾನೆ, ಅದು ಬೇರೆ ವಿಷಯ. ನಾನು ಕೆಲಸ ಮಾಡುತ್ತಿದ್ದ ಸಮಯದಲ್ಲಿ ವರ್ಷಕ್ಕೆ 70 ಸಿನೆಮಾ, ಅದನ್ನೇ ತಡೆದುಕೊಳ್ಳಲಾಗುತ್ತಿರಲಿಲ್ಲ. ನಾನೇ 35 ಸಿನೆಮಾ ಸಂಗೀತ ಸಂಯೋಜನೆ ಮಾಡುತ್ತಿದ್ದೆ. 35 ವರ್ಷ ನನ್ನ ಕುಟುಂಬ, ಸ್ನೇಹಿತವಲಯ, ಸಾಮಾಜಿಕ ಜೀವನ ಎಲ್ಲದರಿಂದಲೂ ದೂರವಾದೆ. ಈಗ ನೀವು ನಂಬಲಾರಿರಿ, 270 ಸಿನೆಮಾ ಬರುತ್ತದೆ. ಕನ್ನಡ ಸಿನೆಮಾ ಕ್ಷೇತ್ರ ಬಹಳ ಶ್ರೀಮಂತವಾಗಿದೆ. ವಾರಕ್ಕೆ 6-7 ಸಿನೆಮಾ ಬಿಡುಗಡೆಯಾಗುತ್ತಿದೆ. ಉದ್ಯಮದ ದೃಷ್ಟಿಯಿಂದ ಕ್ಷೇತ್ರ ಬಹಳ ಶ್ರೀಮಂತವಾಗಿದೆ. ದುಡ್ಡು ಬಂದು ಸುರಿಯುತ್ತಿದೆ. ಉದ್ಯೋಗ ಸೃಷ್ಟಿಯಾಗುತ್ತಿದೆ. ಪ್ರಾದೇಶಿಕ ಉದ್ಯಮಕ್ಕೆ ಮೂಲಭೂತ ಸೌಕರ್ಯ ಮತ್ತು ಕೆಲಸಗಾರರು ಯಾವತ್ತು ಇಲ್ಲವೋ ಆಗ ಅದು ಸತ್ತ ಹಾಗೆ. ನಮ್ಮದು 3500 ಜನ ಕಾರ್ಮಿಕರು, 85 ಜನ ಸಂಗೀತ ಸಂಯೋಜಕರು, ವರ್ಷಕ್ಕೆ 270 ಸಿನೆಮಾ ಬಿಡುಗಡೆಯಾಗುತ್ತಿರುವ ಕ್ಷೇತ್ರ. ಆರ್ಥಿಕವಾಗಿ ಬಹಳ ಶ್ರೀಮಂತವಾಗಿದ್ದೇವೆ; ಆದರೆ ಲಕ್ಷ್ಯ-ಡೆಸ್ಟಿನಿ ಏನು ಎನ್ನುವುದು ತಿಳಿದಿಲ್ಲ. 70-75 ಸಿನೆಮಾ ಮಾಡುತ್ತಿದ್ದಾಗ ಶೇ. 10 ಸಿನೆಮಾಗಳು ಯಶಸ್ಸು ಕಾಣುತ್ತಿದ್ದವು. ಈಗ 250-270 ಸಿನೆಮಾಗಳಲ್ಲಿ ಯಶಸ್ಸು ಕಾಣುವುದು ಶೇ. 10 ಅಷ್ಟೇ.

ಪ್ರಶ್ನೆ: ನಲವತ್ತು ವರ್ಷ ಹಿಂದೆ ಚಿತ್ರಗೀತೆಗಳಿಗೂ ಆ ಚಿತ್ರಗಳಿಗೂ ನಡುವೆ ಈಗಿಗಿಂತ ಹೆಚ್ಚಿನ ಜೈವಿಕ (organic) ಸಂಬಂಧ ಇರುತ್ತಿತ್ತು ಎನಿಸುತ್ತದೆಯೇ? ಈಗ ಅಂತಹ ಸ್ಥಿತಿ ಇದೆಯೆ?

ಉತ್ತರ: ಅನಂತಮೂರ್ತಿ ಹೇಳುತ್ತಿದ್ದರು: ‘ನೋಡ್ರಿ ನಾವೆಲ್ಲಾ ಬದಲಾವಣೆ ಆಗದೇ ಇರುವವರು ಎಂದು ಹೇಳಿಕೊಳ್ಳುತ್ತೇವೆ. ನಮ್ಮ ಪ್ರಾಚೀನರೆಲ್ಲಾ ತೆಂಗಿನ ಮರ ಬೆಳೆಯುತ್ತಿದ್ದರು. ತೆಂಗಿನ ವ್ಯಾಪಾರ ಕಡಮೆಯಾಗುತ್ತದೆ ಎಂದು ತಿಳಿದ ಕೂಡಲೇ ಅಡಕೆಗೆ ಬದಲಾಯಿಸಿಕೊಂಡೆವು. ಅಡಕೆಗೆ ಹೋಗಿ ಕಲ್ಪವೃಕ್ಷವಾದ ತೆಂಗನ್ನೇ ಮರೆತುಬಿಟ್ಟೆವು. ಕಲ್ಪವೃಕ್ಷ ಮರೆತುಬಿಟ್ಟು ಅಡಕೆಯನ್ನು ನೆಚ್ಚಿದೆವು. ಅಡಕೆಯೂ ಕೈಕೊಟ್ಟಾಗ ಮತ್ತೆ ಇನ್ನಾವುದನ್ನೋ ಹುಡುಕಿದೆವು.’

ಹೀಗೆ ರಾಗಪ್ರಧಾನವಾಗಿದ್ದ ಸಂಗೀತ ಎಲ್ಲರಿಗೂ ಸಂಗೀತ ಎನಿಸುತ್ತಿತ್ತು. ಅದರಲ್ಲಿ ಗಣಿತ ಒಂದು ಭಾಗವಾಗಿತ್ತು. ಸಿನೆಮಾ ಎನ್ನುವುದು ಮೊದಲು ಒಂದು ತಾಂತ್ರಿಕ ಉದ್ಯಮವಾಗಿ ಬಂದಿತು. ಅಲ್ಲಿ ಭಾರತೀಯ ಸಂಗೀತ ಸೇರಬೇಕೆಂದರೆ ಬಹಳ ಕಷ್ಟಪಟ್ಟಿದೆ. ಆವಾಗ ಅದು ರಂಗಸಂಗೀತದ ಹತ್ತಿರ ಹೋಯಿತು. ರಂಗಸಂಗೀತದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕಿಂತಲೂ ಹೆಚ್ಚಾಗಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಇತ್ತು. ಸ್ವಲ್ಪ ಸ್ವಾತಂತ್ರ್ಯ ತೆಗೆದುಕೊಂಡು ರಂಗಕ್ಕೆ ಹೇಗೆ ಬೇಕೋ ಹಾಗೆ ಕೆಲವು ಸ್ವರ, ಸಾಹಿತ್ಯ, ಅಭಿನಯ ಮಾಡಿದರು. ರಂಗಸಂಗೀತವೇ ಸಿನೆಮಾಕ್ಕೆ ಮೊದಲು ಬಂದಿತು. ಕಾಲಕ್ರಮೇಣ ಸಾಹಿತ್ಯಕವಾಗಿ ಬದಲಾವಣೆಯಾಯಿತು. ಆಂಗಿಕ ಚಲನೆಯೇ ಇರಲಿಲ್ಲ. ಅಲ್ಲಿ ಸಾಹಿತ್ಯ ಇರಬೇಕು, ಸಂಗೀತ ಇರಬೇಕು ಅಷ್ಟೆ. ಆಂಗಿಕಕ್ಕೆ ಯಾವಾಗ ಚಾಲನೆ ಬಂತೋ ಆಗ ಸಾಹಿತ್ಯ ಕಡಮೆಯಾಗುತ್ತ ಬಂತು. ರಾಗ ಕಡಮೆಯಾಗುತ್ತ ಬಂತು. ಈಗ ಅದರ ಅಂತಿಮ ಹಂತದಲ್ಲಿ ಇದ್ದೇವೆ. ದೊಡ್ಡ ವಿಕಾಸ ಕಾಣುತ್ತಿದ್ದೇವೆ. ಈ ವಿಕಾಸದಲ್ಲಿ ರಿದಂನತ್ತ ಗಮನ ಪ್ರಮುಖವಾಗಿದೆ, ಸಾಹಿತ್ಯದತ್ತ ಪ್ರಮಾಣ ಕಡಮೆಯಾಗಿದೆ. ರಾಗ ಕಡಮೆ, ತಾಳ ಪ್ರಮುಖ. ಆಂಗಿಕ ಚಲನೆಯೂ ಮುಖ್ಯವಾಗಿದೆ. ಇದು ವನವಾಸಿ ಅನುಭವ; ಮೂಲಕ್ಕೆ ಹೋಗುತ್ತಿದ್ದೇವೆ. ಸಣ್ಣ ಹಾಡು ಹೇಳುತ್ತಿದ್ದರೂ, ಹಿಂದೆ ಒಂದು ಕುಣಿತ ಇರುತ್ತದೆ. ಹಿಂದೆ ವನವಾಸಿಗಳಾಗಿದ್ದಾಗ ಇದೇ ರೀತಿ ನಡೆಯುತ್ತಿದ್ದುದು, ರಾತ್ರಿ ಕಾಲ ಕಳೆಯಲು ಬೆಂಕಿ ಹಾಕಿಕೊಳ್ಳುತ್ತಿದ್ದೆವು. ಪ್ರಾಣಿಗಳ ಭಯಕ್ಕೆ ಚೆನ್ನಾಗಿ ಕುಣಿಯುತ್ತಿದ್ದೆವು. ಈಗ ಅಂತಹ ಚಿತ್ರಣವನ್ನೇ ನೋಡುತ್ತಿದ್ದೇವೆ. ಕೊನೆಯ ಹಂತ ಏನು ಗೊತ್ತೇ? ಸಿನೆಮಾದಿಂದ ಈ ಹಾಡುಗಳು ಬೇರೆಯಾಗಿಬಿಡುತ್ತವೆ. ಬಳಿಕ ರಾಗವೇ ಬೇಕು. ತಾಳದ ಅತಿರೇಕವಾದ ಮೇಲೆ ರಾಗವೇ ಬೇಕಾಗುತ್ತದೆ. ರಾಗವೇ ಬೇಕು ಎಂದಾದಾಗ ಹಿನ್ನೆಲೆ ಸಂಗೀತದಲ್ಲಷ್ಟೇ ರಾಗ ಉಳಿಯುತ್ತದೆ, ಹಾಡುಗಳು ಹೊರಗೆ ಬರುತ್ತವೆ. ಸಂಗೀತ ನಿಲ್ಲುವುದಿಲ್ಲ.

ಸಿನೆಮಾ ಹೊರತಾದ ಸಂಗೀತದಲ್ಲಿ ಲಕ್ಷಾಂತರ ಮಂದಿ ಸಂಗೀತಗಾರರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸಿನೆಮಾ ಬೇಕಾಗಿಲ್ಲ. ಮತ್ತೆ ಗುಣಮಟ್ಟ ಇಲ್ಲಿ ಬರುತ್ತದೆ. ಸಂಗೀತಕ್ಕೆ ಕನಿಷ್ಠ ಒಂದು ಲಕ್ಷ ವರ್ಷ ಆಯುಸ್ಸಿದೆ. ಲಕ್ಷ ವರ್ಷದಿಂದ ಬೆಳೆದು ಬಂದಿದೆ; ನಾಗರಿಕತೆಯು ಜೊತೆಯಲ್ಲೇ ಬೆಳೆದು ಬಂದಿದೆ. ಸಿನೆಮಾಕ್ಕೆ ಕೇವಲ 100 ವರ್ಷ. ಅದರ ಮೊದಲು ಸಿನೆಮಾ ಇರಲಿಲ್ಲ. ಸಂಗೀತಕ್ಕೆ ನಾಗರಿಕತೆ ಇದೆ, ಸಿನೆಮಾಕ್ಕೆ ನಾಗರಿಕತೆ ನೆಪ ಅಷ್ಟೆ. ಅದು ಬದಲಾವಣೆ ಆಗುತ್ತಿರುತ್ತದೆ. ಸಿನೆಮಾದ ಹೊರತಾಗಿ ಸಂಗೀತ ಬರುತ್ತದೆ. ಹರಿಹರನ್, ಶ್ರೇಯಾ ಘೋಷಾಲ್ ಹೀಗೆ ಬಹಳ ಮಂದಿ ಸಿನೆಮಾ ಹೊರತಾಗಿ ಹಾಡುತ್ತಿದ್ದಾರೆ. ವಿಜಯ್ ಪ್ರಕಾಶ್ ಹೇಳ್ತಾರೆ, “ಸರ್, ರಾಜೇಶ್ ಕೃಷ್ಣನ್ ಅವರಿಂದ 10 ಹೆಜ್ಜೆ ದೂರ ಇದ್ದೇನೆ ಅಂತ ನನಗೆ ಗೊತ್ತು. ಆದರೆ ನಿಮ್ಮ ಹತ್ತಿರ ಎಷ್ಟು ಮಾರಾಟ ಶಕ್ತಿ ಇದೆ ಎನ್ನುವುದು ಗೊತ್ತಿಲ್ಲದಿರುವುದೇ ದುರಂತ. ನನ್ನನ್ನು ನಾನು ಅರ್ಥೈಸಿಕೊಂಡಿದ್ದೇನೆ. ಆದರೆ ನಾನು ಈವತ್ತು ಹ್ಯಾಪನಿಂಗ್ ಮ್ಯೂಸಿಕ್‍ನಲ್ಲಿ ಇರಬೇಕು. 50 ಸಾವಿರ ಹಾಡು ಹಾಡಬೇಕಾಗಿಲ್ಲ, ಅದಕ್ಕೆ ಸಮಯವೂ ಇಲ್ಲ. ನನಗೆ ಒಳ್ಳೆಯ ಹಾಡು 50 ಸಿಕ್ಕಿದರೆ ಸಾಕು. ನನ್ನ ಆಹಾರ ನಾನು ಸಂಪಾದಿಸಬಲ್ಲೆ. ನೀವು ಇಲ್ಲಿ ಮಾತನಾಡುವುದನ್ನು ಟಿವಿಯಲ್ಲಿ ಬಂದು ಮಾತನಾಡಿ, ಜನರಿಗೆ ಚಿರಪರಿಚಿತರಾಗಿ” ಎಂದರು. ಆತ ಹೇಳಿದ ಮೇಲೆ ನಾನು ‘ಸರಿಗಮಪ’ಕ್ಕೆ ಹೋಗಲು ಆರಂಭಿಸಿದೆ. ಇಂದು ಕಲೆಯ ಸೆನ್ಸ್ ಬಿಫೆÇೀರ್ ಲೆನ್ಸ್ ಆಗಿದೆ. ಲೆನ್ಸ್ ಮುಂದೆ ಎಲ್ಲವೂ ಇದೆ, ಏನೇ ವಿಷಯ ಹೇಳುವುದಿದ್ದರೂ ಅದಕ್ಕೆ ಅಭಿನಯ ಮುಖ್ಯ. ಶಾಸ್ತ್ರೀಯ, ಸುಗಮಸಂಗೀತ, ಜಾನಪದ ಹೀಗೆ ಎಲ್ಲಾ ಪ್ರಾಕಾರಗಳಲ್ಲೂ ನಾವು ಶ್ರೀಮಂತವಾಗಿದ್ದೇವೆ. ಸಿನೆಮಾ ಅದನ್ನು ಬಳಸಿಕೊಂಡರೆ, ಅದು ಸಿನೆಮಾದ ಪುಣ್ಯ. ಬಳಸಿಕೊಂಡಿಲ್ಲ ಎಂದರೂ ಸಂಗೀತ ಇಲ್ಲಿ ಇದ್ದೇ ಇರುತ್ತದೆ. ಸಂಗೀತಕ್ಕೆ ಎಂದಿಗೂ ಅಪಾಯ ಇಲ್ಲ. ಐಪಿಆರ್ ಇಂದು ಬಹಳ ದುಡ್ಡು ಮಾಡುತ್ತಿದೆ. ನಾನು ಅಂದು ಮಾಡಿದ ಕೆಲಸಗಳಿಗೆ ಇಂದು ದುಡ್ಡು ಬರುತ್ತಿದೆ. ಟಿವಿ, ರೇಡಿಯೋ ಸ್ಟೇಷನ್‍ಗಳಲ್ಲಿ ಎಲ್ಲಿ ಪ್ರಸಾರವಾದರೂ ನಮ್ಮ ಬ್ಯಾಂಕ್ ಖಾತೆಗೆ ಅದರ ಶೇರ್ ಹಣ ಬರುತ್ತದೆ.     

ಪ್ರಶ್ನೆ: ಹಿಂದೆ ಹಲವು ಸಂಗೀತಪ್ರಧಾನ ಚಿತ್ರಗಳು ಬಂದಿದ್ದವು (ಹಂಸಗೀತೆ, ಶಂಕರಾಭರಣಂ ಇತ್ಯಾದಿ). ಅಂತಹ ಚಿತ್ರಗಳು ಈಗಿನ ಸನ್ನಿವೇಶದಲ್ಲಿ ಬರುವ ಸಾಧ್ಯತೆಗಳು ಕಾಣುತ್ತಿವೆಯೇ?

ಉತ್ತರ: ಬಂದರೆ ನನ್ನಿಂದ ಬರುತ್ತದೆ. ಮೊದಲನೆಯದಾಗಿ, ‘ಶಕುಂತಲೆ’ ಎನ್ನುವ ಕಿನ್ನರಲೋಕದ ಕಲ್ಪನೆ. ಭಾರತದ ಪ್ರಥಮ ಕಿನ್ನರಲೋಕದ ಕಥೆ ಈ ಶಕುಂತಲೆ.

ಬಳಿಕ, ‘ಗಿಟಾರ್’ ಎನ್ನುವ ಇನ್ನೊಂದು ಸಿನೆಮಾ. ಇದು ವಿಶ್ವ ದಾಖಲೆಗಾಗಿ ಮಾಡಲಾಗುತ್ತಿರುವ ಸಿನೆಮಾ. ಕಮರ್ಷಿಯಲ್ ಕಿನ್ನರಲೋಕದ ಕಥೆ. ಇನ್ನೊಂದು ‘ರಕ್ಕಸತಂಗಡಿ’, ಪ್ರಪಂಚದ ಕಡೆಯದಾಗಿ ನಾಶಹೊಂದಿದ ಸಾಮ್ರಾಜ್ಯ ವಿಜಯನಗರ ಸಾಮ್ರಾಜ್ಯ. ಅದನ್ನು ಇಟ್ಟುಕೊಂಡು ಈ ಸಿನೆಮಾ ಆಗಲಿದೆ.

ಇವು ಕನ್ನಡದ ಹೆಮ್ಮೆ, ಸಂಗೀತಕ್ಕಾಗಿ ನನ್ನ ಸೇವೆ.    

ಪ್ರಶ್ನೆ: ಕಿರುತೆರೆ ಧಾರಾವಾಹಿಗಳಲ್ಲಿ ಬಳಸುವ ಹಿನ್ನೆಲೆ ಸಂಗೀತದ ಬಗೆಗೆ ನಿಮ್ಮ ಅನಿಸಿಕೆ ಏನು?

ಉತ್ತರ:  ಟಿವಿಯಲ್ಲಿ ಸಂಗೀತದ ಕ್ರಮವೇ ಬದಲಾಗಿದೆ. ಸಿನೆಮಾದಲ್ಲಿ ಸ್ಪೇಸ್, ಸೈಲೆನ್ಸ್, ಕ್ರೆಸೆಂಡೋ, ಕ್ಲೈಮಾಕ್ಸ್ ಇತ್ತು; ಲೌಡರ್‍ಗೆ ಬೇರೆ ವಿಭಾಗ ಇತ್ತು. ಕ್ಲೈಮಾಕ್ಸ್ ಅಂತಿಮ ಎಂದ ಮೇಲೆ ಧಾರಾವಾಹಿಗಳಲ್ಲಿ ಪ್ರತಿ ಘಟನೆಯೂ ಕೈಮಾಕ್ಸ್ ಆಗಿರುತ್ತದೆ. ಸೈಲೆನ್ಸ್, ಕ್ರೆಸೆಂಡೋ ಬಿಟ್ಟು ನೇರವಾಗಿ ಕೈಮಾಕ್ಸ್ ತೆಗೆದುಕೊಂಡರು. ಒಂದು ದೃಢವಾದ ಶಬ್ದ ಇರಬೇಕು ಮತ್ತು ಅದು ಕೆಳಗಿನ ಸ್ತರದಲ್ಲಿ ಇರಬಾರದು. ಇದು ಟಿವಿ ಸಂಗೀತದ ಕ್ರಮ. ಜನರನ್ನು ಹಿಡಿದಿಡಲು ಈ ಕ್ರಮ ಬಂದಿದೆ. ಉತ್ತಮ ಸಂಗೀತವನ್ನೇ ಹಾಕುತ್ತಾರೆ.

ಹಂಸಲೇಖ ದೇಸೀ ವಿದ್ಯಾ ಸಂಸ್ಥೆ
೨೦೧೦ ನವೆಂಬರ್ ೧ರಂದು `ಹಂಸಲೇಖ ದೇಸೀ ಸಂಗೀತ ಯೂನಿವರ್ಸಿಟಿ’ಯನ್ನು (www.hamsalekhadesi.com) ಹಂಸಲೇಖ ಅವರು ಸ್ಥಾಪಿಸಿದರು. ಸಂಸ್ಥೆಯು ಕನ್ನಡ ವಿಶ್ವವಿದ್ಯಾಲಯ, ಹಂಪಿಯಿಂದ ಅನುಮೋದಿತವಾಗಿದೆ. ಹಿಂದೂಸ್ಥಾನಿ ಸಂಗೀತದಲ್ಲಿ ಬಿ. ಮ್ಯೂಸಿಕ್, ಎಂ. ಮ್ಯೂಸಿಕ್ ಕೋರ್ಸ್ ಇಲ್ಲಿ ಲಭ್ಯವಿದೆ. ಸಂಗೀತವನ್ನು ಕಲಿಯಲು ಬಯಸುವವರಿಗೆ, ಕಲೆಯ ಹಲವು ಮಜಲುಗಳಿಗೆ ತೆರೆದುಕೊಳ್ಳಲು ಬಯಸುವವರಿಗೆ ಸಂಸ್ಥೆ ಸದಾ ತೆರೆದಿದೆ.

ಸಮಯ ಹಾಕಿ, ಅಲ್ಲಿಗೆ ತಕ್ಕುದಾದ ಕ್ರಿಯೇಟಿವ್ ಹಾಡು ತಯಾರು ಮಾಡಲು ಧಾರಾವಾಹಿಗಳಲ್ಲಿ ಸಮಯ ಇರುವುದಿಲ್ಲ. ಬೇಗ ಸಿಗುವುದು ರೆಡಿಮೇಡ್ ಸಂಗೀತ. ಕೆಲಸ ಕಡಮೆ ಮಾಡುತ್ತದೆ. ಅದರಿಂದ ಸಂಗೀತ ಸಂಯೋಜಕರಿಗೆ, ಐಪಿಆರ್‍ಗೆ ದುಡ್ಡು ಹೋಗುತ್ತದೆ. ಸಮಯ, ಗುಣಮಟ್ಟ ಎರಡನ್ನೂ ಉಳಿಸಿಕೊಂಡು ಜೊತೆಗೆ ಸಿನೆಮಾ ಸಂಗೀತ ಕ್ಷೇತ್ರಕ್ಕೆ ದುಡ್ಡು ಬರುವಂತೆ ಮಾಡುತ್ತದೆ.

ಪ್ರಶ್ನೆ: ಚಿತ್ರಗೀತ ಸಂಯೋಜನೆಯನ್ನು ವ್ಯವಸ್ಥಿತವಾಗಿ ಕಲಿಯುವ ಮತ್ತು ಕಲಿಸುವ ಏರ್ಪಾಡುಗಳು ಇವೆಯೇ?

ಉತ್ತರ: ಇದೆ. ದೊಡ್ಡ ದೊಡ್ಡ ಯೂನಿವರ್ಸಿಟಿಗಳು ಇವೆ. ಸಮಸ್ಯೆ ಎಲ್ಲಿ ಎಂದರೆ, ತಾಂತ್ರಿಕ ಸಹಾಯವು ನೇರ ಫಲಿತಾಂಶ ಕೊಡುತ್ತಿದೆ. ಅದು ಕಲಿಕೆಗೆ ತೊಂದರೆ ಕೊಡುತ್ತಿದೆ. ನನ್ನ ಬಳಿ ಗಿಟಾರಿಸ್ಟ್ ಹುಡುಗ ಬರುತ್ತಾನೆ, ಅವನಿಗೆ ಬೇಸಿಕ್ಸ್ ಹೇಳಿಕೊಡುತ್ತಿರುತ್ತೇನೆ. ಅವನು ‘ಸರ್, ನಿನ್ನೆ ಕಂಪ್ಯೂಟರ್‍ನಲ್ಲಿ ಹೀಗೆ ಮಾಡಿದ್ದೇನೆ, ನೋಡಿ ಸರ್’ ಎನ್ನುತ್ತಾನೆ. 4 ಫ್ರೇಸ್ ಸೇರಿಸಿದರೆ ಒಂದು ರೆಡಿಮೇಡ್ ಟ್ಯೂನ್ ಕೊಟ್ಟುಬಿಡುತ್ತದೆ. ಆತನ ಗಮನ ಅಲ್ಲಿಯೇ ಹೆಚ್ಚಿರುತ್ತದೆ, ಆತನಿಗೆ ಕಲಿಸುವುದು ಅಸಾಧ್ಯ. 3 ತಿಂಗಳು ಆತ ಕಲಿಯಲು ಮನಸ್ಸು ಮಾಡಿದರೆ ಗುರುವಿನ ಪುಣ್ಯ. 6 ತಿಂಗಳು ಇದ್ದುಬಿಟ್ಟರೆ ಅದ್ಭುತ. ಇದು ಬಹಳ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಆದರೆ ಕಲಿತೆವು ಎಂದು ಪ್ರಮಾಣಪತ್ರ ತಂದುಕೊಡುವವರು, ಅಂತಹ ಪ್ರಮಾಣಪತ್ರ ಕೊಡುವ ಸಂಸ್ಥೆಗಳು ಇವೆ. ಇದು ಅಪಾಯ. ನಮ್ಮ ಸಿಲ್ಲೆಬಸ್, ಟೀಚಿಂಗ್ ಅವರಿಗೆ ಕಿರಿಕಿರಿ ಉಂಟುಮಾಡುತ್ತದೆ. ನಾವು ಮಾತನಾಡಿದರೆ, ಜೋರಾಗಿ ನಕ್ಕರೆ ಕಿರಿಕಿರಿ ಮಾಡಿಕೊಳ್ಳುವವರು ಇದ್ದಾರೆ. ಸಿಲ್ಲೆಬಸ್, ಟೀಚಿಂಗ್ ಎಲ್ಲವೂ ನಾಟಕೀಯ ಆಗುತ್ತಿದೆ. ಎಲ್ಲವೂ ರೆಡಿಮೇಡ್ ಆಗುತ್ತಿದೆ.

ಪ್ರಶ್ನೆ: ಶ್ರೋತೃಗಳಿಂದ ತಾವು ನಿರೀಕ್ಷಿಸುವ ಸ್ಪಂದನ ಯಾವ ರೀತಿಯದು?

ಉತ್ತರ: ನಾನು ನಿರೀಕ್ಷಿಸುವುದಿಲ್ಲ ಮತ್ತು ಅವರು ಏನು ನಿರೀಕ್ಷಿಸುತ್ತಾರೆ ಎಂದು ಯೋಚಿಸುವುದೂ ತಪ್ಪು. ಅವರಿಗೆ ನಿರೀಕ್ಷೆಯೇ ಇಲ್ಲದ್ದನ್ನು ನೀಡಬೇಕು ಎನ್ನುವುದು ನನ್ನ ಚಿಂತನೆ. ಸರಳ ಉದಾಹರಣೆ, ಚಾಪ್ಲಿನ್ ಮೂಕಿ ಚಿತ್ರದಲ್ಲಿ ವಿಶ್ವವಿಖ್ಯಾತರು. ಬಳಿಕ ಟಾಕೀ ಸಿನೆಮಾ ಬಂದಾಗ ಎರಡು ಸಿನೆಮಾ ಮಾಡಿದರು. ಅದು ವಿಫಲವಾಯಿತು. ಎಲ್ಲಿ ಎಡವಿದೆ ಎಂದು ಯೋಚಿಸಿದ ಚಾಪ್ಲಿನ್‍ಗೆ ‘ಜನ ಏನು ಬಯಸುತ್ತಾರೋ, ಅದನ್ನು ಕೊಡಲು ಹೋಗಿದ್ದೇ ನನ್ನ ತಪ್ಪು’ ಎನ್ನುವುದು ಅರಿವಾಗುತ್ತದೆ. ‘ಮಾಡರ್ನ್ ಟೈಮ್ಸ್’ ಎಂಬ ಸಿನೆಮಾ ಮಾಡಿದಾಗ, ಸ್ವಲ್ಪ ಸೌಂಡ್ ಕೊಟ್ಟು, ಮತ್ತೆ ಸಂಪೂರ್ಣ ಮೂಕಿ ಸಿನೆಮಾವಾಗಿತ್ತು ಅದು. ಆ ಸಿನೆಮಾ ಸಂಪೂರ್ಣ ಯಶಸ್ಸು ಕಂಡಿತು. ಜನ ನಿರೀಕ್ಷಿಸದೇ ಇರುವುದನ್ನು ಕೊಡುವವನೇ ಕ್ರಿಯೇಟರ್. ಈಗ ಏನಾಗುತ್ತಿದೆ ಎಂದರೆ ಗೊಂದಲಕ್ಕೀಡುಮಾಡುವುದನ್ನು ಕಲಿತುಕೊಂಡಿದ್ದಾರೆ. ಎಲ್ಲವನ್ನೂ ಹಾಕಿ ಜನರನ್ನು ಗೋಜಲು ಮಾಡುವುದು; ಇದು ಕಲಾವಂತಿಕೆಯಲ್ಲ. ಬದಲಾಗಿ ವಕ್ರೋಕ್ತಿ. 

ಪ್ರಶ್ನೆ: ಶ್ರೋತೃಗಳಿಗೆ ತಾವು ಸಂದೇಶವನ್ನೇನಾದರೂ ನೀಡಬಯಸುತ್ತೀರಾ?

ಉತ್ತರ: ಸಿನೆಮಾ ಸಂಗೀತವನ್ನು ಬಿಟ್ಟು ನಿಜವಾದ ಸಂಗೀತ ಕೇಳಿ. ನಿಮ್ಮ ಆರೋಗ್ಯಕ್ಕೆ, ಅಧ್ಯಾತ್ಮದ ಸುಖಕ್ಕೆ ಉತ್ತರ ಇರುತ್ತದೆ. ಏಕೆಂದರೆ ಮನಸ್ಸಿನ ಉತ್ಥಾನ, ಅಧ್ಯಾತ್ಮದ ಉತ್ಥಾನಕ್ಕೆ ಏನು ಬೇಕೋ ಅದನ್ನು ಪಡೆದುಕೊಳ್ಳಿ. ನಮಗೆ ಬೇಕಿರುವುದು ಇದು, ಕೇಳುತ್ತಿರುವುದು ಅದು. ಇದು ಒಳ್ಳೆಯದಲ್ಲ. ಅದಕ್ಕಾಗಿಯೇ ನಿಸರ್ಗವು ಸಂಗೀತವನ್ನು ವಿನ್ಯಾಸ ಮಾಡಿದೆ. ನೀವು ಸಂಗೀತದಲ್ಲೇ ಕೇಳಬೇಕು ಎಂದೇನಿಲ್ಲ, ಧ್ವನಿಗಳ ತರಂಗಗಳು ಕೂಡ ನಿಸರ್ಗದಲ್ಲಿ ಇವೆ. ದನಿಗಳ ತರಂಗಗಳನ್ನು ಆಸ್ವಾದಿಸಲು ಕಲಿಯಿರಿ. ಅಷ್ಟು ಕಲಿತರೆ ನಿಮ್ಮ ಮನಸ್ಸು ಸುಖವಾಗಿರುತ್ತದೆ. ಪಕ್ಷಿಸಂಗೀತದಲ್ಲೂ ವಿಜ್ಞಾನವಿದೆ. ಸಿನೆಮಾ ಸಂಗೀತಕ್ಕೇ ಹೋಗಬೇಕಾಗಿಲ್ಲ.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : utthana1965@gmail.com

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ


vulkan vegas, vulkan casino, vulkan vegas casino, vulkan vegas login, vulkan vegas deutschland, vulkan vegas bonus code, vulkan vegas promo code, vulkan vegas österreich, vulkan vegas erfahrung, vulkan vegas bonus code 50 freispiele, 1win, 1 win, 1win az, 1win giriş, 1win aviator, 1 win az, 1win azerbaycan, 1win yukle, pin up, pinup, pin up casino, pin-up, pinup az, pin-up casino giriş, pin-up casino, pin-up kazino, pin up azerbaycan, pin up az, mostbet, mostbet uz, mostbet skachat, mostbet apk, mostbet uz kirish, mostbet online, mostbet casino, mostbet o'ynash, mostbet uz online, most bet, mostbet, mostbet az, mostbet giriş, mostbet yukle, mostbet indir, mostbet aviator, mostbet casino, mostbet azerbaycan, mostbet yükle, mostbet qeydiyyat