ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಜುಲೈ 2015 > ಸಂಪ್ರದಾಯ, ಪರಂಪರೆ ಇವೆಲ್ಲ ಒಮ್ಮೆ ಕೈತಪ್ಪಿಹೋದರೆ ಮತ್ತೆ ಸಿಗುವುದಿಲ್ಲ: ಕೆರೆಮನೆ ಶಿವಾನಂದ ಹೆಗಡೆ

ಸಂಪ್ರದಾಯ, ಪರಂಪರೆ ಇವೆಲ್ಲ ಒಮ್ಮೆ ಕೈತಪ್ಪಿಹೋದರೆ ಮತ್ತೆ ಸಿಗುವುದಿಲ್ಲ: ಕೆರೆಮನೆ ಶಿವಾನಂದ ಹೆಗಡೆ

ವಿಶೇಷ ಸಂದರ್ಶನ

ಯಕ್ಷಗಾನ ಪರಂಪರೆಯಲ್ಲಿಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರೆಮನೆಮೇಳಕ್ಕೆ 87 ವರ್ಷಗಳ ಸುದೀರ್ಘ ಇತಿಹಾಸವಿದೆ. ಸಂಪ್ರದಾಯವನ್ನು ಮೀರದೆ ಕಲಾಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸುತ್ತಿರುವ ಮೇಳದ ಪ್ರಮುಖರಾಗಿ ಸದ್ಯಃ ಕೆರೆಮನೆ ಶಿವಾನಂದ ಹೆಗಡೆಯವರು ಮೇಳವನ್ನು ಮುಂದುವರಿಸುತ್ತಿದ್ದಾರೆ. ನಿತ್ಯ ರಂಗಪ್ರಯೋಗಶೀಲರಾದ ಶಿವಾನಂದ ಹೆಗಡೆಯವರೊಡನೆಉತ್ಥಾನಕ್ಕಾಗಿ ಸಂಪಾದಕ ಕಾಕುಂಜೆ ಕೇಶವ ಭಟ್ಟ ಅವರು ನಡೆಸಿದ ಸಂದರ್ಶನದ ಪೂರ್ಣಪಾಠ ಇಲ್ಲಿದೆ.

ಪ್ರಶ್ನೆ: ಯಕ್ಷಗಾನದ ಸುಭದ್ರ ಪರಂಪರೆಯಿರುವ ಮನೆತನದಿಂದ ಬಂದವರು ನೀವು. ನಿಮ್ಮ ಯಕ್ಷಗಾನ ತೊಡಗಿಸಿಕೊಳ್ಳುವಿಕೆಯಲ್ಲಿ ಅದರಿಂದ ಆದ ಅನುಕೂಲಗಳೇನು? ರಂಗಸ್ಥಳದಲ್ಲಿ ನಿಮಗೆ ಯಾವ ಕಲಾವಿದರು ಮಾದರಿಯಾಗಿದ್ದರು?

ಉತ್ತರ: ಹೌದು, ನಮ್ಮದು ಒಂದು ಸುಭದ್ರ ಯಕ್ಷಗಾನ ಪರಂಪರೆ. ಕೆರೆಮನೆ ಶಿವರಾಮ ಹೆಗಡೆಯವರ ತಂದೆ ಶಂಭು ಹೆಗಡೆ ಕವಿ, ಮೃದಂಗವಾದಕ ಮತ್ತು ಅರ್ಥಧಾರಿ ಹಾಗೆ ಕೆರೆಮನೆ ಮಹಾಬಲ ಹೆಗಡೆಯವರ ಅಜ್ಜ ಭಾಗವತರಾಗಿದ್ದರು. ಇವರಿಬ್ಬರ ತಂದೆ ಕೂಡಾ ಯಕ್ಷಗಾನದ ಕಲಾವಿದರಾಗಿದ್ದರು. ಹೀಗಾಗಿ ಕೆರೆಮನೆ ಶಿವರಾಮ ಹೆಗಡೆಯವರೇ ನಮ್ಮ ಪರಂಪರೆಯ ಮೂರನೆಯ ತಲೆಮಾರಿನವರಾಗಿದ್ದಾರೆ.

ಯಕ್ಷಗಾನಕ್ಕೆ ಬರುವುದಕ್ಕೆ ನಮ್ಮ ಪರಂಪರೆಯೇ ನನಗೆ ಪ್ರೇರಣೆ. ಚಂಡೆ ಮದ್ದಳೆ ಕೇಳುತ್ತಲೇ ಬೆಳೆದ ನನಗೆ ಸಹಜವಾಗಿ ಆ ಕಡೆಯೇ ಸೆಳೆತವಿತ್ತು. ಇದರಿಂದಾಗಿ ಬಂದೆ. ಅದನ್ನು ಮುಂದುವರಿಸುವುದಕ್ಕೆ ನಮ್ಮೊಡನೆಯೇ ಇದ್ದ ನಮ್ಮ ಹಿರಿಯರು, ಅವರು ಸಂಪಾದಿಸಿದ ಸಿದ್ಧಿ, ಪ್ರಸಿದ್ಧಿ, ಮಾಡಿದ ಸಾಧನೆ, ಅವರು ಹಾಕಿಕೊಟ್ಟ ಉತ್ತಮ ಚೌಕಟ್ಟು ಇವೆಲ್ಲವೂ ಭದ್ರಬುನಾದಿಯನ್ನು ಒದಗಿಸಿಕೊಟ್ಟಿತಲ್ಲದೆ, ಅದನ್ನು ಆರಂಭಿಸುವುದಕ್ಕೆ, ಮುಂದುವರಿಸುವುದಕ್ಕೆ ಧೈರ್ಯವನ್ನು ಒದಗಿಸಿತು.

ಒಂದು ಮನೆಯಲ್ಲಿ ಪರಂಪರೆ ಇದ್ದರೆ ಯಾವುದೇ ಕಲಾ ಪ್ರಕಾರವಿರಲಿ; ಅದನ್ನು ಮುಂದುವರಿಸುವುದಕ್ಕೂ ಬೆಳೆಸುವುದಕ್ಕೂ ಸಹಜವಾದ ಕೆಲವು ಅನುಕೂಲಗಳಿರುತ್ತವೆ. ಹಾಗೆಯೆ ಸಾಕಷ್ಟು

ತೊಡಕು, ಸವಾಲುಗಳು ಕೂಡಾ ಬಳುವಳಿಯಾಗಿ ಬಂದಿರುತ್ತವೆ ಎಂಬುದನ್ನು ಮರೆಯಬಾರದು. ನನ್ನಮಟ್ಟಿಗೆ ಪರಂಪರೆಯಿಂದ ನನಗೆ ದೊಡ್ಡ ಆಶೀರ್ವಾದವೇ ದೊರಕಿದೆ ಎನ್ನುವುದು ನನ್ನ ಭಾವನೆ. ಮೂರು-ನಾಲ್ಕು ತಲೆಮಾರಿನ ಒಂದು ಕಲಾ-ಸಾತತ್ಯ, ಯಕ್ಷಗಾನಸಂಬಂಧಿ ಇತಿಹಾಸಗಳು, ರಂಗಭೂಮಿಯ ಅನೇಕ ವಿಷಯಗಳು ಹೆಚ್ಚು ನಿಖರವಾಗಿ ಸಿಗಬಹುದು. ಆದರೆ ಅಂತಹ ಪರಂಪರೆ ಹುಟ್ಟುಹಾಕಿರುವ ಶುಚಿತ್ವ, ಧ್ಯೇಯೋದ್ದೇಶಗಳನ್ನು ಈಡೇರಿಸಿಕೊಂಡು ಬೆಳೆದ ಬಗೆ, ಆಶಯ ಯಾರಿಗೇ ಆದರೂ ಹೆಚ್ಚು ಸವಾಲಿನ ರೂಪದಲ್ಲಿಯೇ ಇರುತ್ತದೆ. ಅದನ್ನು ದಕ್ಕಿಸಬೇಕು, ಬೆಳೆಸಬೇಕು ಎಂದು ನಿರೀಕ್ಷಿಸುವಬಹುದೊಡ್ಡ ಸಮುದಾಯವೂ ಕೂಡ ನಮ್ಮ ಬೆನ್ನ ಹಿಂದೆ ಇರುತ್ತದೆ. ಆ ಎಚ್ಚರ ಸದಾ ನಮ್ಮ ದಾರಿಯನ್ನು ಹೆಚ್ಚುಹೆಚ್ಚು ಬದ್ಧತೆಯಿಂದ ಕಟ್ಟುವ ಅನಿವಾರ್ಯತೆಯನ್ನು ಸೃಷ್ಟಿಸುತ್ತದೆ. ಸರಳವಾಗಿ ಹೇಳುವುದಾದರೆ ತಪ್ಪುಹಾದಿ ಹಿಡಿಯದಂತೆ ಪ್ರತಿಬಂಧಿಸುತ್ತದೆ.

ನಮ್ಮ ಹಿರಿಯರಿಗೆ ಯಕ್ಷಗಾನ ಕೇವಲ ಒಂದು ಹವ್ಯಾಸವಾಗಿರದೆ, ಅದು ಅವರ ಅಭಿವ್ಯಕ್ತಿಯ ಮಾಧ್ಯಮವಾಗಿತ್ತು. ಅದಕ್ಕೊಂದು ಸುಂದರವಾದ ಕಲಾತ್ಮಕ ನೆಲಗಟ್ಟು, ನೈತಿಕತೆ ಇತ್ತು. ಇವೆಲ್ಲ ನನಗೆ ಪ್ರೇರಣೆಯಾಗಿ ಸಂದಿತು. ಮನೆಯಲ್ಲೇ ಕಲಿಯುವ ಅನುಕೂಲ – ಇವೂ ನಮಗೆ ಪರಂಪರೆಯಿಂದ ದೊರಕಿದ್ದು. ಆರಂಭದಲ್ಲಿ ನನಗೆ ತಂದೆಯಾಗಲಿ ಅಜ್ಜನಾಗಲಿ ನೇರ ಗುರುವಾಗಿ ದೊರಕಿಲ್ಲ. ನನಗೆ ಪ್ರೋತ್ಸಾಹ ನೀಡಿ, ಮೊದಲ ಹೆಜ್ಜೆ ಕಲಿಸಿದವರು ನನ್ನ ಚಿಕ್ಕಪ್ಪ ಗಜಾನನ ಹೆಗಡೆ ಅವರು. ಚಿಕ್ಕವಯಸ್ಸಿನಲ್ಲೇ, ಅಂದರೆ ತಮ್ಮ ಮೂವತ್ತಮೂರರ ವಯಸ್ಸಿನಲ್ಲೆ ನಿಧನರಾದ ಅವರಿಗೆ ನಮ್ಮ ಮನೆಯ ಮಕ್ಕಳೆಲ್ಲ ವೇಷ ಮಾಡಲಿ ಎನ್ನುವ ಆಸೆ ಇತ್ತು; ಆ ವಿಷಯದಲ್ಲಿನ ಆಸಕ್ತಿಯಿಂದಾಗಿ ಅವರೇ ನಮಗೆ ವೇಷ ಮಾಡಿಸಿ, ಅರ್ಥ ಬರೆದು, ಹೆಜ್ಜೆಗಳನ್ನು ಕಲಿಸಿದರು. ಆದರೆ ಆಮೇಲೆ ನನ್ನ ಅಜ್ಜ ಶಿವರಾಮ ಹೆಗಡೆಯವರಿಂದ ಹಾಗೂ ತಂದೆಯವರಿಂದ ರಂಗಭೂಮಿಯ ಅನೇಕ ವಿಷಯ, ವಿವೇಕ, ನಾಟ್ಯಭಂಗಿ, ಅಭಿನಯ, ಮುದ್ರೆಗಳು ಇವುಗಳನ್ನು ಕುರಿತ ಮಾರ್ಗದರ್ಶನ ದೊರಕಿತು. ಮಲ್ಲಗದ್ದೆ ಗಣೇಶ ಹೆಗಡೆ ಅವರು ಶಿವರಾಮ ಹೆಗಡೆಯವರು ನಡೆಸುತ್ತಿದ್ದ ನಮ್ಮ ಹಳೆಯ ಮೇಳದಲ್ಲಿ ಪ್ರಮುಖ ಸ್ತ್ರೀವೇಷಧಾರಿಯಾಗಿದ್ದರು. ನಮ್ಮ ಉತ್ತರಕನ್ನಡ ಯಕ್ಷಗಾನ ಪರಂಪರೆಯ ಅರಿತ, ನುರಿತ ಮತ್ತು ಪರಂಪರೆ ಬಲ್ಲ ಕಲಾವಿದರಾಗಿದ್ದರು ಮತ್ತು ಕಲಿಸುವ ಆಸಕ್ತಿ ಇದ್ದವರು ಆಗಿದ್ದವರು. ಅವರ ಬಳಿ ಅಭ್ಯಾಸ ಮಾಡಿದೆ. ದಕ್ಷಿಣಕನ್ನಡದಲ್ಲಿ ಮಧ್ಯ ತಿಟ್ಟು ಅಥವಾ ಬಡಗು ಯಕ್ಷಗಾನ ಎಂದೇನು ನಾವು ಕರೆಯುತ್ತೇವೋ ಅದರಲ್ಲಿ ಹೆರಂಜಾಲ ವೆಂಕಟರಮಣ ಗಾಣಿಗರದ್ದು ದೊಡ್ಡ ಹೆಸರು. ಅವರು ನಮ್ಮ ಯಕ್ಷಗಾನ ಕೇಂದ್ರದಲ್ಲಿ ಇದ್ದರು. ಅವರಲ್ಲಿ ಅಭ್ಯಾಸ ಮಾಡಿದೆ. ‘ಕರ್ಕಿಪರಂಪರೆ’ ಎಂಬುದು ಉತ್ತರಕನ್ನಡದಲ್ಲಿ ದೊಡ್ಡ ಹೆಸರು. ಆ ಮನೆತನದ ಕಲಾವಿದರಾದ ಪಿ.ವಿ. ಹಾಸ್ಯಗಾರರು, ನಾರಾಯಣ ಹಾಸ್ಯಗಾರರು, ಸತ್ಯ ಹಾಸ್ಯಗಾರರು, ಇವರಿಂದ ಪ್ರೇರಣೆ, ಕಲಿಕೆ ನನಗೆ ದೊರಕಿದೆ. ಹೊಸ್ತೋಟ ಮಂಜುನಾಥ ಭಾಗವತರಲ್ಲಿ ಕೂಡಾ ಅಭ್ಯಾಸ ಮಾಡಿದೆ. ಹೀಗಿದ್ದೂ ಈ ಮಹನೀಯರ ಅರ್ಹತೆ, ಸಾಧನೆಯ ಸಮುದ್ರದಲ್ಲಿನ ಮರಳಿನ ಕಣದಷ್ಟೂ ನಾನು ಪಡೆಯಲು ಸಾಧ್ಯವಾಗಿದೆ ಎಂದು ಹೇಳುವ ಧೈರ್ಯ ಇಲ್ಲ ಎಂದು ವಿನಮ್ರತೆಯಿಂದ ಹೇಳುತ್ತೇನೆ. ನನ್ನ ಕಲಾ ಬದುಕಿಗೆ ಗುರು ಡಾ. ಮಾಯಾರಾವ್ ಇವರ ಮಾರ್ಗದರ್ಶನ, ಪ್ರೋತ್ಸಾಹ, ಪಡೆದ ಕಲಾಶಿಕ್ಷಣವನ್ನು ನಾನು ಎಂದೂ ಮರೆಯುವಂತಿಲ್ಲ.

ಇನ್ನು ಅನುಸರಣೆಯ ಅಥವಾ ಮಾದರಿಯ ಬಗ್ಗೆ ಹೇಳುವುದಾದರೆ ಕೆಲವು ಪಾತ್ರಗಳನ್ನು ಕೆಲವರು ಅತ್ಯುತ್ತಮವಾಗಿ ನಿರ್ವಹಿಸುತ್ತಾರೆ. ಹಾಗಾಗಿ ಇಲ್ಲಿ ನಾನು ಯಾವುದೋ ಒಬ್ಬ ಕಲಾವಿದನನ್ನು ಅನುಸರಿಸುತ್ತೇನೆ ಎನ್ನುವುದು ಕಷ್ಟ. ‘ನಾವು ಯಾರನ್ನೇ ಮೆಚ್ಚಿಕೊಳ್ಳಬಹುದು, ಆದರೆ ನಮ್ಮದಾದದ್ದನ್ನೇ ಕೊಡಬೇಕು’ ಎನ್ನುವುದು ನಮ್ಮ ಮನೆತನದ ಮೂಲ ಲಕ್ಷಣ. ಶಿವರಾಮ ಹೆಗಡೆಯವರು ಮಾಡಿದ್ದನ್ನು ಶಂಭು ಹೆಗಡೆಯವರಾಗಲಿ ಗಜಾನನ ಹೆಗಡೆಯವರಾಗಲಿ ಅನುಕರಿಸಲೇ ಇಲ್ಲ. ವಿಚಾರ, ಧೋರಣೆ, ಪ್ರಧಾನ ಗುರಿ, ವಿಷಯ ಒಂದೇ ಇದ್ದರೂ ಅಭಿವ್ಯಕ್ತಿಯಲ್ಲಿ ವಿಭಿನ್ನತೆ ಇತ್ತು. ಕೆಲವು ಯಶಸ್ವೀ ಕಲಾವಿದರನ್ನು ನೂರಾರು ಜನ ಅನುಸರಿಸುತ್ತಿದ್ದಾರೆ. ಜನರೂ ಸಹ ಆತ ಅವರ ಹಾಗೆ, ಅವರಂತೆ ಮಾಡುತ್ತಾನೆ ಎಂದೆಲ್ಲ ಹೇಳುತ್ತಾರೆ. ಆದರೆ ಆ ಕಲಾವಿದರ ಪ್ರಭಾವದಿಂದ ಹೊರತಾಗಬೇಕಾದದ್ದಿದೆಯಲ್ಲ, ಅದು ದೊಡ್ಡ ಸವಾಲು; ಕಷ್ಟಪಟ್ಟಾದರೂ ಸರಿ, ಸ್ವಂತಿಕೆಯನ್ನು ಬೆಳೆಸಿಕೊಳ್ಳಬೇಕು ಎನ್ನುವುದು ನಮ್ಮ ಕುಟುಂಬದ ಮೂಲಲಕ್ಷಣ. ಶಿವರಾಮ ಹೆಗಡೆಯವರ ಪಾತ್ರಗಳನ್ನು ಹತ್ತಿರದಿಂದ ಬಲ್ಲ, ಅವರಿಂದ ಮಾರ್ಗದರ್ಶನ ಪಡೆದ ಮಹಾಬಲ ಹೆಗಡೆಯವರು ಎಷ್ಟೊಂದು ಸುಲಭದಲ್ಲಿ ಅನುಕರಣೆ ಮಾಡಬಹುದಿತ್ತು. ಆದರೆ ಅವರು ಅದಕ್ಕೆ ಸಂಪೂರ್ಣ ಭಿನ್ನವೇ ಆದ ತನ್ನದೇ ಮಾರ್ಗ ಅನುಸರಿಸಿದರು; ನಿಜ ಕಲಾವಿದನಿಗಿರಬೇಕಾದ ‘ನನ್ನದು ಬರೀ ಅನುಕರಣೆ ಅಲ್ಲ, ನಾನು ನನ್ನದೇ ಹಾದಿಯಲ್ಲಿ ಸಾಗಬೇಕು’ ಎನ್ನುವುದು ನಮ್ಮ ಪರಂಪರೆಯಲ್ಲಿ ಬಲವಾಗಿ ಬೇರೂರಿದ ಭಾವನೆ. “ನನ್ನ ನುಡಿಯೊಳೆ ಬಣ್ಣ ಬಣ್ಣದಲಿ ಬಣ್ಣಿಸುವ ಪನ್ನತಿಕೆ ಬರುವನಕ ನನ್ನ ಬಾಳಿದು ನರಕ’’ ಎಂದು ಡಾ. ಗೋಪಾಲಕೃಷ್ಣ ಅಡಿಗರು ಹೇಳಿದಂತೆ.

ಪ್ರಶ್ನೆ: ನಿಮ್ಮ ಕುಟುಂಬವು ಯಕ್ಷಗಾನದಲ್ಲಿ ಸಾಕಷ್ಟು ಪ್ರಯೋಗವನ್ನೂ ಮಾಡಿದೆ; ಮೇಳವನ್ನೂ ಕಟ್ಟಿ ನಡೆಸಿದೆ. ಹೊಸತನವೂ ಕಂಡುಬಂದಿದೆ. ಈ ಹೊಸತನ ಪರಂಪರೆಯ ಒಳಗೆ ಇದೆಯೊ ಅಥವಾ ಅದನ್ನು ಮೀರಿ ಇದೆಯೊ?

ಉತ್ತರ: ನಮ್ಮ ಮಂಡಳಿಯ ಪ್ರಯೋಗಗಳು ಪರಂಪರೆಯ ಒಳಗೇ ಇದ್ದು ಅದರಲ್ಲಿ ಹೆಚ್ಚು ಹೊಸ ವಿನ್ಯಾಸ, ಸಾಧ್ಯತೆ ಶೋಧನೆಯ ಕುರಿತು ಪ್ರಯತ್ನಿಸುವುದೇ ಆಗಿದೆ. ಸಾಕಷ್ಟು ಪ್ರಯೋಗಗಳನ್ನು ನಮ್ಮ ಮಂಡಳಿ ಮಾಡಿದೆ. 1934ರಲ್ಲಿ, ಶ್ರೀ ಇಡಗುಂಜಿ ಮಹಾಗಣಪತಿ ಪ್ರಸಾದಿತ ಯಕ್ಷಗಾನ ಮಂಡಳಿ ಮತ್ತು ಅವರ ಅತ್ಯಂತ ಆಪ್ತರಾದ ವೆಂಕಟರಮಣ ಯಾಜಿ ಭಾಗವತರು ಸೇರಿ, ಶಿವರಾಮ ಹೆಗಡೆಯವರು ಮೇಳ ಕಟ್ಟಿದರು. ಅದಕ್ಕಿಂತ ಪೂರ್ವದಲ್ಲಿ ಬೇರೆಬೇರೆ ಕಲಾವಿದರ ಕೂಟದಲ್ಲಿ ಅವರು ವೇಷ ಮಾಡುತ್ತಿದ್ದರು. ನಮ್ಮ ತಂದೆಯವರೂ ಸಾಲಿಗ್ರಾಮ, ಮೂಲ್ಕಿ ಮೇಳಗಳಲ್ಲಿ ಇದ್ದರು. ಬೇರೆ ಮೇಳದಲ್ಲಿ ಇದ್ದು ತಮಗೆ ಬೇಕಾದ ಕಲಾ ಆದರ್ಶಗಳನ್ನೂ ಗುಣಗಳನ್ನೂ ತರಲಿಕ್ಕೆ ಅನ್ಯಸಂಘಟನೆಯಲ್ಲಿ ಆಗಲಿಲ್ಲ. ನಿರೀಕ್ಷಿಸುವುದು ಸಾಧ್ಯವೂ ಅಲ್ಲ.

ಕಲಾವಿದರಿಗೆ ಎದುರಾಗುವ ಒಂದು ಮುಖ್ಯ ತೊಂದರೆ ಎಂದರೆ ತನ್ನದಾದ ಕಲ್ಪನೆ ಇದ್ದರೆ ಸಾಲದು; ಕಲ್ಪನೆಯನ್ನು ಎಲ್ಲಿ ಪ್ರಯೋಗ ಮಾಡಬೇಕು ಎನ್ನುವುದು ಮುಖ್ಯವಾದದ್ದು.  ಇನ್ನೊಬ್ಬರು ಕಟ್ಟಿದ ಮನೆಯಲ್ಲಿ ವಾಸ್ತವ್ಯಕ್ಕೆ ಹೋದಾಗ ಎದುರಾಗುವ ತೊಂದರೆಯೇ ಇಲ್ಲೂ ಎದುರಾಗುತ್ತದೆ. ಅಲ್ಲಿ ಅವರ ವ್ಯವಸ್ಥೆಗೆ ಹೊಂದಿಕೊಳ್ಳಬೇಕು. ನಮ್ಮ ಯೋಚನೆಯನ್ನೂ ಕನಸನ್ನೂ ಅಲ್ಲಿ ತರುವುದಕ್ಕೆ ಆಗುವುದಿಲ್ಲ, ಬೇರೆಯವರ ಮೇಲೆ ನಮ್ಮ ಆಶಯವನ್ನು ಹೇರಲಿಕ್ಕೂ ಆಗುವುದಿಲ್ಲ. ಹಾಗಾಗಿ ನಮ್ಮದೇ ಸಂಘಟನೆಯ ಮೇಳ ಮಾಡಿಕೊಂಡರೆ ಆದರ್ಶ ಕಲ್ಪನೆಗಳನ್ನು ಸ್ವಲ್ಪ ಮಟ್ಟಿಗಾದರೂ ತರಬಹುದು. ಆ ಕಾರಣಕ್ಕಾಗಿ ಮೇಳವನ್ನು ಕಟ್ಟಿದ್ದು. ಹಾಗಾಗಿ ಕಲಾವಿದರೂ, ಸಂಘಟಕರೂ ಆಗಿ ಕಲಾತ್ಮಕ ಮತ್ತು ಪರಂಪರೆಯ ಸಾಧ್ಯತೆಯನ್ನು ಕಾಣಬೇಕೆಂಬ ಉದ್ದೇಶದಿಂದ ಕಟ್ಟಿದ ಮೇಳವೇ ಒಂದು ಮಹತ್ತ್ವದ ಪ್ರಯೋಗ ಎನ್ನಬಹುದು. ಕಲಾತ್ಮಕ ಯಕ್ಷಗಾನವನ್ನು ಕೊಡಬಹುದೇ? ಕೊಟ್ಟರೆ ಹೇಗೆಲ್ಲ ಸಾಧ್ಯತೆ ಇದೆ ಎನ್ನುವ ಪ್ರಯತ್ನಕ್ಕಾಗಿಯೇ ಇಡಗುಂಜಿ ಮೇಳದ ಹುಟ್ಟಿಗೆ ಬಹುಮಟ್ಟಿಗೆ ಕಾರಣ.

ಪರಂಪರೆ ಮತ್ತು ಹೊಸತನ ಈ ಬಗ್ಗೆ ಹೇಳುವುದಾದರೆ ಹೊಸತನ ಎಂದಾಕ್ಷಣ ಅದು ಪರಂಪರೆಗೆ ಧಕ್ಕೆ ತರಬೇಕಾಗಿಲ್ಲ. ಹಾನಿ ಮಾಡದೆಯೂ ಹೊಸತನವನ್ನು ಅಥವಾ ಇನ್ನೂ ಹೊಳಪು ತರಬಹುದು. ಪರಂಪರೆ ಎಂದರೆ ನಿಂತ ನೀರಲ್ಲ. ಅನಗತ್ಯ ಜಾಡ್ಯ, ಮೌಢ್ಯ ಇಟ್ಟುಕೊಳ್ಳುವುದೂ ಸಲ್ಲ. ಅಲ್ಲಿ ಕೆಲವನ್ನು ಬಿಡುವುದು, ಸಂಸ್ಕರಿಸುವುದು, ನವೀಕರಿಸುವುದು ಕಾಲಾನುಗತವಾಗಿ ಅಗತ್ಯ ಕೂಡಾ. ಹೊಸತನ ಎಂದರೆ ಕೆಲವರು ತಿಳಿಯುವ ಹಾಗೆ ಯಕ್ಷಗಾನ ರಂಗಭೂಮಿಯಲ್ಲಿ ಬೇರೆ ನೃತ್ಯಗಳನ್ನು ತರುವುದು, ಬೇರೆ ಹಾಡುಗಳನ್ನು ತರುವುದು, ಯಕ್ಷಗಾನದ ಹಾಡಿಗೆ ಭಾವಗೀತೆಯ ಟ್ಯೂನ್‍ಗಳನ್ನು, ಸಿನೆಮಾ ಹಾಡಿನ ಟ್ಯೂನ್‍ಗಳನ್ನು ಹಾಕುವುದು ಇವೆಲ್ಲ ಹೊಸತನ ಅಲ್ಲ; ಇದು ಅಧಃಪತನ. ಮೂಲಸತ್ತ್ವದಲ್ಲೇ ಇರುವಂಥದ್ದನ್ನು ನಾವು ಶೋಧನೆ ಮಾಡಬೇಕಾಗುತ್ತದೆ. ಕೆಲವೊಂದು ಶಿಸ್ತುಗಳು ಪರಂಪರೆಯಲ್ಲಿ ಇಲ್ಲದೇ ಹೋಗಿರುತ್ತದೆ. ರಂಗಭೂಮಿ ಬೆಳೆದ ಹಾಗೆ ಜನರೂ ಬೆಳೆಯುತ್ತಾರೆ. ಜನರ ವಿಮರ್ಶಾದೃಷ್ಟಿ ಬೆಳೆದ ಹಾಗೆ ರಂಗಭೂಮಿಯೂ ಬೆಳೆಯಬೇಕಾಗುತ್ತದೆ. ಆ ನೆಲೆಯಲ್ಲಿ ಬದಲಾವಣೆಗಳನ್ನು ತಂದಿದ್ದಾರೆ. ವೇಷಭೂಷಣಗಳ ವಿಚಾರದಲ್ಲೂ ಹಾಗೆಯೆ. ಉದಾಹರಣೆಗೆ ನಮ್ಮಲ್ಲಿ ಹಳೆಯ ಕಾಲದಲ್ಲಿ ಸಿಕ್ಕ ಬಣ್ಣದ ಸಾಮಗ್ರಿಗಳು ಈಗ ಸಿಗುವುದೇ ಇಲ್ಲ. ಅಂತಹ ಸಂದರ್ಭದಲ್ಲಿ ಕಲಾ ಸೌಂದರ್ಯ, ಸೊಗಸು ಬಲಿಯಾಗದ ಬದಲಿ ವ್ಯವಸ್ಥೆ ತರಬಹುದು. ಎಲ್ಲಾ ಕಡೆ ಆ ರೀತಿಯ ಸಕಾರಾತ್ಮಕ ಬದಲಾವಣೆ ಒಪ್ಪಿತ.

ಪ್ರಶ್ನೆ: ನೀವು ಕೋರಿಯೋಗ್ರಫಿಯನ್ನು ಅಭ್ಯಸಿಸಿದ್ದೀರಲ್ಲ. ಅದರಿಂದ ಯಕ್ಷಗಾನದಲ್ಲಿ ನೀವು ನಡೆಸುವ ಪ್ರಯೋಗಗಳಿಗೆ ಎಷ್ಟರಮಟ್ಟಿಗೆ ನೆರವಾಗಿದೆ? ಯಕ್ಷಗಾನದಲ್ಲಿ ಕೊರಿಯೋಗ್ರಫಿ ಅಗತ್ಯವೇ ಅಥವಾ ಸಾಧ್ಯವೇ?

ಉತ್ತರ: ಕೋರಿಯೋಗ್ರಫಿ ಎನ್ನುವುದು ರಂಗತಂತ್ರಗಳನ್ನು, ರಂಗ ಚಲನೆಯನ್ನು ಅಭ್ಯಸಿಸುವ ವಿಧಾನ. ಒಂದರ್ಥದಲ್ಲಿ ಅದು ಕಲಾರಂಗದಲ್ಲಿ ಉನ್ನತಶಿಕ್ಷಣವನ್ನು ಪಡೆದ ಹಾಗೆ. ಕೋರಿಯೋಗ್ರಫಿಯು ಇಡೀ ಜಗತ್ತಿನ ಬೇರೆಬೇರೆ ರಂಗಭೂಮಿಯಲ್ಲಿ ಆಗುತ್ತಿರುವ ಬೆಳವಣಿಗೆ, ರಂಗಭೂಮಿಯಲ್ಲಿ ಹೇಗೆ ಶಿಸ್ತು ಸಂಯಮಗಳನ್ನು ಕಾಪಾಡಿಕೊಳ್ಳಬೇಕು, ಪ್ರದರ್ಶನ ಪರಿಣಾಮ, ರಂಗಸ್ಥಳದ ಬಳಕೆ, ಉದ್ದೇಶ ಇತ್ಯಾದಿ ಒಳಗೊಂಡಿದೆ. ಅಲ್ಲಿ ನಾಟ್ಯಶಾಸ್ತ್ರದ ಅಭ್ಯಾಸದ ಜೊತೆಗೆ, ಆಧುನಿಕ (ಪ್ರೊಸಿನಿಯಮ್), ರಂಗದ ಬಳಕೆ ಹಾಗೂ ಸಂಸ್ಕೃತ ರಂಗಭೂಮಿಯ ತೃಷ್ಯ, ಚತುರಷ್ಯ, ವಿಕೃಷ್ಟ  ಇತ್ಯಾದಿ ರಂಗಸ್ಥಳಗಳ ಬಗ್ಗೆ ನಮಗೆ ಮಾಹಿತಿ ದೊರಕುತ್ತದೆ. ಇದು ಓದಿಕೊಂಡರೆ ಮಾತ್ರ ಅರ್ಥವಾಗುವುದಿಲ್ಲ. ಓದಿಕೊಂಡರೆ ಅರ್ಥವಾಗುವುದು ಬೇರೆ. ಅದರ ಪ್ರಯೋಗಕ್ಕೆ ಅನ್ವಯಿಸಿ ಹೇಳುವುದು, ಪ್ರಾಯೋಗಿಕವಾಗಿ ತೋರಿಸುವಂಥವರು ಬೇಕಾಗುತ್ತದೆ. ಅದನ್ನು ಈ ಅಧ್ಯಯನ ಮಾಡುತ್ತದೆ.

ನಮ್ಮ ನೃತ್ಯದಲ್ಲಿ ನಾವು ಏನೇನು ಪ್ರಯೋಗಗಳನ್ನು ಮಾಡಬಹುದು, ಇದರಲ್ಲಿ ಹೊಸತೇನು ತರಬಹುದು, ನಮ್ಮ ಅಭಿವ್ಯಕ್ತಿಯಲ್ಲಿ ಏನೇನು ಅಳವಡಿಸಲು ಸಾಧ್ಯ ಮತ್ತು ಇವೆಲ್ಲ ಪ್ರಯತ್ನಗಳು ನಮ್ಮ ರಂಗಭೂಮಿಯನ್ನು ನವನವೋನ್ವೇಷವಾಗಿ ಉಳಿಸಿಕೊಳ್ಳುವುದಕ್ಕೆ ಹೇಗೆ ಪೂರಕವಾಗಬಹುದು ಎನ್ನುವುದೇ ಅದರ ವಿಷಯ. ಕೋರಿಯೋಗ್ರಫಿ ಮಾಡಿದಾಕ್ಷಣಕ್ಕೆ ಯಾವುದೋ ಪಾಶ್ಚಾತ್ಯಸಂಬಂಧಿ ಚಲನೆಯೋ ನೃತ್ಯವೋ ತರುವುದಲ್ಲ್ಲ. ಅದು ಅವರವರ ಮಾಧ್ಯಮದಲ್ಲಿ ಹೆಚ್ಚಿನ ಸಂಶೋಧನೆಗಳಿಗೆ, ಪ್ರಯೋಗಕ್ಕೆ ಅವಕಾಶ ಮಾಡಿಕೊಡುತ್ತದೆ. ಅಲ್ಲಿ ಇಡೀ ದೇಶದ ಕಲಾಪರಂಪರೆಯ ಅಭ್ಯಾಸಕ್ಕೆ ಅವಕಾಶವಿದೆ. ನಮ್ಮಲ್ಲಿ ಕಮರ್ಶಿಯಲ್ ಅಥವಾ ವೃತ್ತಿನಾಟಕ ಕಲಿಯಲಿಕ್ಕೆ ಒಂದು ದಾರಿ ಇತ್ತಲ್ಲ; ಆದರೆ ರಂಗಭೂಮಿಯ ಹೊಸದಾದ ಚಿಂತನೆ, ಸಾಧ್ಯತೆ, ಅನ್ಯ ಅಭಿವ್ಯಕ್ತಿ ಕ್ರಮಕ್ಕಾಗಿಯೇ ದೇಶದಲ್ಲಿ ಎನ್‍ಎಸ್‍ಡಿಯಂತಹ ಸಂಸ್ಥೆ ಹುಟ್ಟಿಕೊಂಡಿತು. ಹಾಗೆಯೇ ಯಕ್ಷಗಾನ ಹಾಗೂ ಇನ್ನಿತರ ಕಲೆಗಳ ನಾಟ್ಯಗಳ ವಿಷಯದಲ್ಲಿ ಹೇಗೆ ಇನ್ನೂ ಚೆನ್ನಾಗಿ, ಭಿನ್ನವಾಗಿ ಕೊಡಬೇಕು ಎನ್ನುವುದಕ್ಕಾಗಿ ಡಾ. ಮಾಯಾರಾವ್ ಅವರು ಕೋರಿಯೋಗ್ರಫಿಯನ್ನು ಅಧ್ಯಯನ ಮಾಡಿ ದೆಹಲಿಯಲ್ಲಿ ‘ಭಾರತೀಯ ನಾಟ್ಯಸಂಘ’ವನ್ನು ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಮಾರ್ಗದರ್ಶನದಲ್ಲಿ ಪ್ರಾರಂಭ ಮಾಡಿದರು. ಅಲ್ಲಿಗೆ ಯಕ್ಷಗಾನವೊಂದೇ ಅಲ್ಲದೆ, ದೇಶದ ಬಹಳಷ್ಟು ಸಾಂಪ್ರದಾಯಿಕ ಕಲಾವಿದರು, ಬೇರೆಬೇರೆ ನಾಟ್ಯಪರಂಪರೆಯವರು ಬಂದು ಕಲಿತಿದ್ದಾರೆ. ನಾನೂ ಸಹ ನನ್ನ ತಂದೆಯವರ ಹಾಗೆಯೆ ಅಲ್ಲಿಗೆ ಹೋಗಿ ಕೋರಿಯೋಗ್ರಫಿ ಕಲಿತಿದ್ದೇನೆ; ಒಂದು ಹೊಸದೃಷ್ಟಿ ನನಗೆ ದೊರಕಿ ತುಂಬ ಸಹಾಯವಾಗಿದೆ; ಅದರಿಂದ ಯಕ್ಷಗಾನಕ್ಕೆ ಹಾನಿ ಏನೂ ಇಲ್ಲ. ಬದಲಾಗಿ ಪ್ರಯೋಜನ ತುಂಬಾ ಇದೆ. ನನ್ನ ಈಗಿನ ಎಲ್ಲ ಯಕ್ಷಗಾನ ಪ್ರಯೋಗ ಪ್ರದರ್ಶನಕ್ಕೆ ನನಗೆ ಅದು ಹೆಚ್ಚು ಸಹಾಯಕವಾಗಿದೆ. ಗುರು ಡಾ. ಮಾಯಾ ರಾವ್ ಅವರಲ್ಲಿ ದೇಶ-ವಿದೇಶದ ಅನೇಕ ನಾಮಾಂಕಿತರು ಶಿಷ್ಯತ್ವವನ್ನು ಪಡೆದಿದ್ದಾರೆ. ಈ ದೃಷ್ಠಿಯಲ್ಲಿ ಅವರು ಭಾರತೀಯ ಕಲಾಪರಂಪರೆಗೆ ಮತ್ತು ಯಕ್ಷಗಾನಕ್ಕೆ ನೀಡಿದ ಕೊಡುಗೆ ಸದಾ ಸ್ಮರಣೀಯ, ಅನನ್ಯ.

ಯಕ್ಷಗಾನದಲ್ಲಿ ‘ದೀಗಿಣ’ ‘ಒಡ್ಡೋಲಗ’, ‘ಭೇಟೆ’, ‘ತೆರೆಕುಣಿತ’, ‘ಪಾತ್ರಪ್ರವೇಶ’ ಎಂದೆಲ್ಲ ವೈವಿಧ್ಯಮಯ ನೃತ್ಯಗಳಿವೆ; ಇವೆಲ್ಲ ಸಾಂಪ್ರದಾಯಿಕವಾಗಿ ಬಂದ ಕೋರಿಯೋಗ್ರಫಿ ನೃತ್ಯಗಳು. ಒಬ್ಬ ರಾಜ ಹೇಗೆ ಪ್ರವೇಶ ಮಾಡಬೇಕು, ರಕ್ಕಸನ ಪ್ರವೇಶ ಹೇಗಿದ್ದರೆ ಸರಿ ಎಂದೆಲ್ಲ ನಮ್ಮ ಪರಂಪರೆಯಲ್ಲಿ ಸಾಂಪ್ರದಾಯಿಕವಾಗಿ ಇರುವಂತಹ ಅತ್ಯುತ್ತಮವಾದ ಕೋರಿಯೋಗ್ರಫಿ ತುಣುಕುಗಳು.

ನಾನು ಕಥಕ್, ಭರತನಾಟ್ಯವನ್ನೆಲ್ಲ ಅಭ್ಯಾಸ ಮಾಡಿದ್ದೇನೆ, ಕಥಕ್‍ನಲ್ಲಿ ಪ್ರದರ್ಶನ ಕೂಡ ನೀಡಿದ್ದೇನೆ. ಅದಾವುದನ್ನೂ ಇಲ್ಲಿ ತರುವುದಿಲ್ಲ. ಹೇಗೆ ನನಗೆ ಹಿಂದಿ ಇಂಗ್ಲಿಷ್ ಮಾತನಾಡಲಿಕ್ಕೆ ಬರುವುದಾದರೂ ರಂಗಸ್ಥಳದಲ್ಲಿ ಕನ್ನಡವನ್ನೇ ಮಾತನಾಡುತ್ತೇನೆಯೋ, ಇದೂ ಹಾಗೆ. ಅಲ್ಲಿನ ರಂಗಾನುಭವ ನನಗೆ ಪರೋಕ್ಷವಾಗಿ ಸಹಾಯಕವಾಗಿದೆ. ಮತ್ತೊಂದು ನಾಟ್ಯ ಪ್ರಕಾರದ ಅಭ್ಯಾಸ ಮಾತೃಭಾಷೆಯ ಜೊತೆಗೆ ಇನ್ನೊಂದು ಭಾಷೆಯನ್ನು ಅಭ್ಯಸಿಸಿದ ಹಾಗೆ. ನಾನು ಭರತನಾಟ್ಯ, ಕಥಕ್ ಹಾಗೂ ಇನ್ನಿತರ ನಾಟ್ಯಗಳನ್ನು ಕಲಿತದ್ದು ಈ ನೆಲೆಯಲ್ಲಿ.

ಪ್ರಶ್ನೆ: ಸಂದರ್ಭ ಸನ್ನಿವೇಶದ ಭಾವಕ್ಕನುಸಾರವಾಗಿ ಪದ್ಯವನ್ನು ವಿಸ್ತರಿಸುವ ಅಥವಾ ಮೊಟಕುಗೊಳಿಸುವ ಸ್ವಾತಂತ್ರ್ಯ ಭಾಗವತರಿಗಿರುತ್ತದೆಯಲ್ಲ…. ಅದರಿಂದ ಸಂವಹನಕ್ಕೆ ಭಂಗ ತಂದಂತಾಗುವುದಿಲ್ಲವೇ?

ಉತ್ತರ: ಯಕ್ಷಗಾನ ರಂಗಭೂಮಿಯಲ್ಲಿ ಯಾರಿಗೂ ಸ್ವಾತಂತ್ರ್ಯವಿಲ್ಲ ಅಥವಾ ಎಲ್ಲರಿಗೂ ಸ್ವಾತಂತ್ರ್ಯವಿದೆ. ಇಲ್ಲಿ ಭಾಗವತ ಅಥವಾ ಮುಖ್ಯ ವೇಷಧಾರಿ ಇತ್ಯಾದಿ ಯಾರೇ ಆಗಲಿ ನಾವು ಪರಸ್ಪರ ಸಂವಾದವನ್ನು ಮಾಡುತ್ತಲೇ ಇರಬೇಕಾಗುತ್ತದೆ. ಭಾಗವತರಿಗೂ ಈ ಒಂದು ಪದ್ಯಕ್ಕೆ ಕಲಾವಿದ ಯಾವ ರೀತಿ ಅಭಿವ್ಯಕ್ತಗೊಳಿಸುತ್ತಾನೆ ಎಂದು ಗೊತ್ತಿರಬೇಕಾಗುತ್ತದೆ. ಕಲಾವಿದರಿಗೂ ಭಾಗವತ ಈ ಪದ್ಯವನ್ನು ಹೇಗೆ ಎತ್ತುಗಡೆ ಮಾಡುತ್ತಾನೆ, ಎಲ್ಲಿ ಶಕ್ತಿಯನ್ನು ತುಂಬುತ್ತಾನೆ ಇತ್ಯಾದಿ ತಿಳಿದಿರಬೇಕಾಗುತ್ತದೆ. ಈ ಪರಸ್ಪರ ಸಮನ್ವಯವು ಭಾಗವತ, ಮದ್ದಲೆ, ಚಂಡೆ, ಮುಮ್ಮೇಳ ಮತ್ತು ಪ್ರೇಕ್ಷಕರಿಗೂ ಅನ್ವಯಿಸುತ್ತದೆ. ಇಲ್ಲಿ ಕೇವಲ ಮೂರು-ನಾಲ್ಕು ಜನ ಏನೋ ಮಾಡುವುದಲ್ಲ. ಅದು ಎಲ್ಲರೂ ಸೇರಿ ನಡೆಸುವ ನಿರಂತರ ಕಲಾ ಸಂವಹನ. ರಂಗಭೂಮಿಯಲ್ಲಿ ನಡೆಯುವ ಎಲ್ಲ ಕ್ರಿಯೆಗಳೂ ಸಂವಹನವೇ. ಸಮೂಹವನ್ನು ಕಟ್ಟುವಾಗ ಪರಸ್ಪರ ಸಂಪರ್ಕ ಸಂವೇದನೆಗಳನ್ನು ನಾವು ಇಟ್ಟುಕೊಳ್ಳಲೇ ಬೇಕಾಗುತ್ತದೆ. ಎಲ್ಲರೂ ಪರಸ್ಪರ ಸಮಾನ ಹೊಂದಾಣಿಕೆಯೊಂದಿಗೆ ಪೂರಕವಾಗಿ ಸಾಗಬೇಕು.

ಈ ನೆಲೆಯಲ್ಲಿ ಭಾಗವತ ಇಷ್ಟೇ ಸಲ ಹಾಡಬೇಕು ಎನ್ನುವ ಯಾವುದೇ ನಿಯಮ ಇಲ್ಲ; ಇದು ಪದ್ಯದ ಭಾವಕ್ಕೆ, ಸನ್ನಿವೇಶಕ್ಕೆ, ಕಲಾವಿದರ ಸಾಮರ್ಥ್ಯಕ್ಕೆ ಅನುಗುಣವಾಗಿ ಬದಲಾಗುತ್ತದೆ. ನಾವು ಕಂಡ ಕಾಲಖಂಡದಲ್ಲಿ ನಮಗೆ ದಕ್ಕಿದ ಕಲಾವಿದರ ಸಂದರ್ಭದಲ್ಲಿ ಪರಂಪರೆ ಎಂದು ಏನು ಹೇಳುತ್ತೇವೋ ಅದರಲ್ಲಿ ಸಂಪೂರ್ಣವಾಗಿ ಇಳಿದು ನೋಡಿದಾಗ ಒಬ್ಬ ಶಕ್ತಿ ತಾಕತ್ತು ಇರುವಂಥ ಕಲಾವಿದ ಅಭಿವ್ಯಕ್ತಿಯಲ್ಲಿ ಅಪೂರ್ವವಾದದ್ದನ್ನು ಸಾಧಿಸಬೇಕಾದರೆ ಒಂದು ಹಂತದಲ್ಲಿ ಗೆರೆಯನ್ನು ದಾಟಲೇಬೇಕಾಗುತ್ತದೆ. ಹಳೆಯದಕ್ಕೆ ಪೂರಕವಾದ ಹೊಸದನ್ನು ಕೊಟ್ಟರೆ ರಂಗಭೂಮಿ ಬೆಳೆಯುತ್ತದೆ. ಕಲಾವಿದನಿಗೆ ಇನ್ನೂ ಏನೋ ಭಿನ್ನವಾಗಿ, ವೈವಿಧ್ಯತೆಯಿಂದ ಹೇಳಬೇಕು ಎಂದಿದ್ದರೆ ಆತ ಯಾಕೆ ಅದನ್ನು ನಿರ್ಭಂಧಿಸಿಕೊಳ್ಳಬೇಕು? ಇಂಥವಕ್ಕೆ ಅವಕಾಶ ಬೆಳವಣಿಗೆಯ ಹಂತವೇ ಆಗಿರುತ್ತದೆ.

ಯಕ್ಷಗಾನದಲ್ಲಿ ಅಥವಾ ಉಳಿದ ಕಲೆಗಳಲ್ಲೂ ಹಾಗೆ, ಭಾವ ಭಂಗಿ, ಮುದ್ರೆಗಳನ್ನು ಬಳಸಿ ಒಂದು ಸಂವೇದನೆಯನ್ನು ಕಟ್ಟಬೇಕಿದ್ದರೆ ಒಂದಿಷ್ಟು ಹೆಚ್ಚು ಸಮಯ ಬೇಕಾಗುತ್ತದೆ. ಕೋಪದ ಭಾವನೆಯನ್ನು ಅಭಿವ್ಯಕ್ತಿಸಲು ಬೇಕಾದ ಸಂಯಮಕ್ಕಿಂತ ದುಃಖಗಳನ್ನು ತೋರಿಸಬೇಕಾದರೆ ಬೇರೆ, ಶೃಂಗಾರದ ಅಭಿವ್ಯಕ್ತಿಗೆ ಬೇರೆ – ಹೀಗೆ ರಸ, ಭಾವದ ತೀವ್ರತೆ ಸನ್ನಿವೇಶದ ಸಂಕೀರ್ಣತೆ ಅವಲಂಬಿಸಿ ಹೆಚ್ಚು ಕಡಮೆ ಆಗುತ್ತದೆ.

ಹಾಗಾಗಿ ಭಾವಪ್ರಚೋದನೆಯ ಸಂದರ್ಭದಲ್ಲಿ ಇಂತಿಷ್ಟೇ ಸಲ ಹೇಳುತ್ತೇವೆ ಎಂದು ಮಿತಿ ಹಾಕಿಕೊಳ್ಳಲಿಕ್ಕೆ ಸಾಧ್ಯವಿಲ್ಲ. ಕಲಾವಿದ ಆ ಸನ್ನಿವೇಶವನ್ನು ಇನ್ನೂ ಹೆಚ್ಚು ವಿಸ್ತಾರವಾದ ಆಯಾಮ ನೀಡಲು ಹೆಚ್ಚು ಸಮಯ ಅಭಿನಯಿಸಬೇಕಾಗಿ ಬರುವಾಗ ಪರಸ್ಪರ ಅರಿವು ಸಹಕಾರ ಮುಖ್ಯ. ನಾಲ್ಕೋ ಎಂಟೋ ಸಲವೋ ಎಂಬ ಗಣಿತ ಮುಖ್ಯವಲ್ಲ. ಭಾಗವತ, ಹಿಮ್ಮೇಳ ಮುಮ್ಮೇಳಗಳ ಭಾವಸಾಮರಸ್ಯ ಮುಖ್ಯ.

ಶ್ರೀರಾಮ ನಿರ್ಯಾಣದ ‘ನೋವು ನಲಿವುಗಳಿಂದ ಕೂಡಿದ ಜೀವನವ ಕಂಡಾಯ್ತು’ ಎಂಬ ಪದ್ಯ ತೆಗೆದುಕೊಂಡರೆ ಇಲ್ಲಿ ಮುದ್ರೆಗಳ ಬಳಕೆ ಸೀಮಿತ. ‘ಮತ್ತಿನ್ನಾವ ಫಲವಿದೆ, ನೀತಿಯಿಂದೇ ದೇವನೆನಿಸಿತು ಎನ್ನನು’ ಇಲ್ಲಂತೂ ಇನ್ನೂ ಹೆಚ್ಚು ಅಮೂರ್ತವಾದ್ದು (abstract). ಅಂತಹ ಸಂಗತಿಗಳಿಗೆ ಭಾಗವತನ ಸ್ವಾತಂತ್ರ್ಯಕ್ಕಿಂತ ಒಟ್ಟಾರೆ ಎಲ್ಲರೂ ಸೇರಿ ಹೇಗೆ ಚೆನ್ನಾಗಿ ಅಭಿವ್ಯಕ್ತಪಡಿಸುತ್ತೀರಿ ಎನ್ನುವುದಷ್ಟೆ ಮುಖ್ಯವಾಗುತ್ತದೆ. ಪುನರಾವರ್ತನೆ (repetition) ಎನ್ನುವುದನ್ನು ನಮ್ಮಲ್ಲಿ ತಪ್ಪಾಗಿ ವ್ಯಾಖ್ಯಾನಿಸಿದ್ದೇ ಹೆಚ್ಚು. ಕಲಾವಿದ ಮಾಡುವ ಆವರ್ತನದಲ್ಲಿ ಹೊಸ ಸಂಗತಿಗಳನ್ನು, ಆಯಾಮವನ್ನು ಅನ್ವಯಿಸಲು ಆಗದಿದ್ದಾಗ, ಪುನರಾವರ್ತನೆ ಬೇಕಾಗಿಲ್ಲ. ಅಭಿನಯದ ವಿಸ್ತಾರದ ಸಾಮರ್ಥ್ಯ ಇದ್ದಾಗ ಬೇಕಾಗುತ್ತದೆ.  ಮಾಡಿದ್ದನ್ನೇ ಮಾಡಿದರೆ ರಿಪಿಟಿಶನ್ ಆಗುತ್ತದೆ, ಬೋರಾಗುತ್ತದೆ; ಅದು ಭಾವದ ಬಹುವ್ಯಾಖ್ಯಾನ (Interpretation) ವಿನಾ ಮಾಡಿದ್ದನ್ನೇ (repetition)  ಮಾಡುವುದಲ್ಲ. ಶಬ್ದಕ್ಕೆ, ಅರ್ಥಕ್ಕೆ, ಭಾವಕ್ಕೆ ಮರುವ್ಯಾಖ್ಯಾನ ಮಾಡಲು ಸಮಯ ಬೇಕಾಗುತ್ತದೆ. ಹೀಗೆ ರಂಗಭೂಮಿಯಲ್ಲಿ ಎಲ್ಲರಿಗೂ ಸ್ವಾತಂತ್ರ್ಯ ಇದೆ, ಆದರೆ ಚೌಕಟ್ಟನ್ನೂ ಪರಂಪರೆಯನ್ನೂ ಮೀರಿ ಇಲ್ಲ.

ಪ್ರಶ್ನೆ: ಒಟ್ಟಾರೆಯಾಗಿ ಯಕ್ಷಗಾನದ ಮೇಲೆ ಆಧುನಿಕತೆಯ ಪರಿಣಾಮಗಳೇನು? ತೆಂಕುತಿಟ್ಟು, ಬಡಗುತಿಟ್ಟು, ಬಡಗು-ಬಡಗುತಿಟ್ಟುಗಳ ಪರಿಸ್ಥಿತಿ ಹೇಗಿದೆ?

ಉತ್ತರ: ಆಧುನಿಕತೆಯ ಪರಿಣಾಮ ಎಲ್ಲ ತಿಟ್ಟುಗಳಲ್ಲೂ ತುಂಬಾ ಆಗಿದೆ. ಇದರಲ್ಲಿ ಕಲಾವಿದರದ್ದೇ ಬಹುದೊಡ್ಡ ಕೊಡುಗೆ ಇದೆ. ಕಲಾವಿದ ಇದರ ಮೂಲಸ್ವರೂಪವನ್ನು, ಪಾವಿತ್ರ್ಯವನ್ನು ಅರ್ಥಮಾಡಿಕೊಂಡು ರಂಗಸ್ಥಳಕ್ಕೆ ಬರಬೇಕು. ಜನಪ್ರಿಯತೆಗಾಗಿ ರಂಗಭೂಮಿಗೆ ಒಗ್ಗದ ಸಂಗತಿಗಳನ್ನು ಇಲ್ಲಿ ಎಳೆದುತರುವುದು ತಪ್ಪು. 

ಒಬ್ಬ ಕಲಾವಿದ ಚೆನ್ನಾಗಿ ಮಾಡಬಹುದು; ಆ ಪ್ರಶ್ನೆ ಬೇರೆ. ಆದರೆ ಚೆನ್ನಾಗಿ ಮಾಡುತ್ತೀರಿ, ಜನಪ್ರಿಯತೆ ಇದೆ ಎಂಬ ಕಾರಣಕ್ಕೆ ಒಂದು ಇಡೀ ಪರಂಪರೆಯನ್ನು ನಾಶಮಾಡುವುದಕ್ಕೆ ಹೋಗಬಾರದು. ಯಕ್ಷಗಾನದ ಒಂದು ಸ್ತ್ರೀವೇಷವನ್ನೇ ನೋಡುವುದಾದರೆ ಅದಕ್ಕೆ ಸ್ತ್ರೀ ಸಂವೇದನೆಯ ಒಂದು ಪ್ರಮಾಣ ಮತ್ತು ಮಿತಿ ಇದೆ. ಚೆನ್ನಾಗಿ ಕಾಣಬೇಕು ಅಥವಾ ಕಾಣುತ್ತದೆ ಎಂಬ ಭ್ರಮೆಯಲ್ಲಿ ಅನಗತ್ಯ ಅಯಕ್ಷಗಾನೀಯ ವೇಷಭೂಷಣ ತೊಡುವುದು, ಅತಿಯಾದ ಅಲಂಕಾರ ಮಾಡಿಕೊಳ್ಳುವುದು, ಆಧುನಿಕ ವಸ್ತು-ಒಡವೆಯ ಬಳಕೆ ಇತ್ಯಾದಿಗಳು ಅದರ ಮೂಲಪಾವಿತ್ರ್ಯವನ್ನೇ ಕೆಡಿಸುತ್ತವೆ. ಸಾಂಪ್ರದಾಯಿಕ ರಂಗಭೂಮಿಯ ಮೇಲೆ ಬರುವ ಸ್ತ್ರೀವೇಷದಲ್ಲಿ ಮತ್ತು ಯಕ್ಷಗಾನದ ಇತರ ಯಾವುದೇ ವೇಷದಲ್ಲಿ ಸಿನೆಮಾ, ನಾಟಕ ಶೈಲಿಯ ಪ್ರಭಾವ, ಅಭಿನಯ, ನೃತ್ಯ ಮತ್ತು ಆಹಾರ್ಯದಲ್ಲಿ ಕಾಣಬಾರದು.

ಭಾಗವತಿಕೆಯ ವಿಷಯವನ್ನು ತೆಗೆದುಕೊಂಡರೆ, ಪೂರ್ತಿ ಸಿನೆಮಾವನ್ನೇ ಡಬ್ ಮಾಡಿದ ಕಥೆ, ಮತ್ತೆ ಜನಪ್ರಿಯ ಸಿನೆಮಾಧಾಟಿಗಳನ್ನು ಕೆಲವು ಭಾಗವತರು ಶ್ರದ್ಧೆಯಿಂದಲೇ ಹಾಡುತ್ತಾರೆ ಮತ್ತು ಆಟ ಆಡಿಸುತ್ತಾರೆ. ನಾಲ್ಕು ಎಂಟು  ಚಂಡೆಗಳನ್ನು ಇಟ್ಟುಕೊಂಡು ಬಾರಿಸುವುದು, ರಂಗಸ್ಥಳಕ್ಕೆ ಜೀವಂತ ಪ್ರಾಣಿಗಳನ್ನು ತರುವುದು ಇವೆಲ್ಲ ಗಿಮಿಕ್ ಎಂದು ನಾವು ಹೇಳಬಹುದು. ಅವು ತತ್ಕಾಲಕ್ಕೆ ಒಂದು ಮನರಂಜನೆಯನ್ನು ಕೊಡುವುದೇ ಹೊರತು ದೀರ್ಘ ಬಾಳದು; ಮತ್ತು ಹೀಗೆ ಮಾಡುತ್ತ ಹೋಗುವಲ್ಲಿ ಮಿತಿ ಎಂಬುದಿಲ್ಲ. ಶಿಷ್ಟವಾದ ಯಕ್ಷಗಾನ ನೋಡಬೇಕು ಎನ್ನುವವರಿಗೆ ಇದರಿಂದ ಕಷ್ಟವಾಗುತ್ತದೆ. ನಿರಾಸೆಯಾಗುತ್ತದೆ. ರಂಗಭೂಮಿಯ ಸತ್ತ್ವ ಅಡಗುತ್ತದೆ.

ಸಂಪ್ರದಾಯ, ಪರಂಪರೆ ಇವೆಲ್ಲ ಒಮ್ಮೆ ಕೈತಪ್ಪಿಹೋದರೆ ನಂತರ ಸಿಗುವುದಿಲ್ಲ, ಕೇಳುವವರು ಹೇಳುವವರು ಯಾರೂ ಇರುವುದಿಲ್ಲ. ಇಂದಿನ ಕಲಾವಿದರು ಮತ್ತು ಅದಕ್ಕೆ ಕೊಂಡಿಯಾಗಿ  ಪರಂಪರೆಯ ಕಲಾವಿದರು ಇನ್ನೂ ಇದ್ದಾರೆ ಎನ್ನುವುದು ಸಮಾಧಾನದ ಸಂಗತಿ. ಆ ಕೊಂಡಿ ಏನು ಎನ್ನುವುದನ್ನು ನಾವು ಅರ್ಥಮಾಡಿಕೊಂಡು ಅದರ ಪ್ರಯೋಜನ ಪಡೆಯಬೇಕು. ಮೂರೂ ತಿಟ್ಟುಗಳಲ್ಲೂ ಅಂತಹ ನೂರಾರು ದೋಷ ಸೇರಿದೆ ಎನ್ನುವುದು ವಿಷಾದದ ಸಂಗತಿ. ಅದರಲ್ಲಿ ಏನೂ ಅನುಮಾನವೇ ಇಲ್ಲ. ಈಗ ಪ್ರದರ್ಶನ ಮಾಡುತ್ತಿರುವ ಕಲಾವಿದರೂ ಅದಕ್ಕೆ ಕಾರಣ. ‘ರಾಜಾ ಕಾಲಸ್ಯ ಕಾರಣಂ’ ಎಂಬಂತೆ.

ರಂಗಸ್ಥಳಕ್ಕೆ ಬೇಕಾದದ್ದು ಬೇಡವಾದದ್ದನ್ನು ತರುವ ಸ್ವಾತಂತ್ರ್ಯವಿರುವುದು ಕಲಾವಿದನಿಗೆ ಮಾತ್ರ. ಇನ್ನು ಮೇಳ ಕಟ್ಟಿದವನ ಉದ್ದೇಶವೇ ಬೇರೆ ಇರುತ್ತದೆ; ಆತ ತಾನು ಹಾಕಿದ ಬಂಡವಾಳ ನೋಡುತ್ತಾನೆ. ಕೆಲವೊಂದು ಹರಕೆ ಮೇಳಗಳ ಧೋರಣೆ ಕೂಡಾ ಆಶಾದಾಯಕವಲ್ಲ. ಕಲಾವಿದನು ಬದ್ಧತೆಯಿಂದ ಮುಂದೆ ಬಂದರೆ ಮಾತ್ರ ಯಕ್ಷಗಾನ ರಂಗಭೂಮಿಗೆ ನುಸುಳಿದ ಅಪಸವ್ಯಗಳನ್ನು ತಡೆಯಬಹುದು.

ಪ್ರಶ್ನೆ: ಅರ್ಥಗಾರಿಕೆಯಲ್ಲಿ ಮೂಲಮೌಲ್ಯಗಳೇನಿವೆಯೋ ಅವನ್ನು ಬಿಟ್ಟು ಪ್ರಸಿದ್ಧಿಯ ಹಿಂದೆ ಬಿದ್ದು ಅದನ್ನೇ ವಿಸ್ತರಿಸುವ ಪ್ರಯತ್ನವೂ ಆಗುತ್ತಿದೆಯಲ್ಲವೇ?

ಉತ್ತರ: ಖಂಡಿತವಾಗಿಯೂ. ಬೇರೆ ಬೇರೆ ಬೇಡದ ರಾಜಕೀಯ ವಿಷಯಗಳನ್ನು ತರುವುದು ಆಗುತ್ತಿದೆ. ಇಂತಹ ರಂಗಭೂಮಿ ಕಾರ್ಯಕ್ರಮದಲ್ಲಿ ನಾವು ಪ್ರೇಕ್ಷಕರಿಗೆ ಅವರ ಸಂಸಾರದ ವಿಷಯವನ್ನು ಮರೆತು ಹೊಸದೊಂದು ಲೋಕದಲ್ಲಿ ಕುಳಿತುಕೊಳ್ಳಿ ಎಂದು ಒಂದು ಅವಕಾಶ (space) ನೀಡುತ್ತೇವೆ. ನಿತ್ಯ ಜಂಜಾಟವನ್ನು ಬಿಟ್ಟು ರಂಗಭೂಮಿ ನಾಟ್ಯ ಶಾಸ್ತ್ರ ಸಾರಿದಂತೆ ‘ದುಃಖಾರ್ತಾನಾಂ, ಶ್ರಮಾರ್ತಾನಾಂ, ಶೋಕಾರ್ತಾನಾಂ ತಪಸ್ವಿನಾಂ’ ಎಂಬ ಬಹುಮುಖ್ಯ ಮಾತು ಹೇಳಿದ್ದನ್ನು ಲಕ್ಷಿಸಬೇಕು. ಪ್ರೇಕ್ಷಕರಲ್ಲಿ ಸಂತೋಷದಿಂದ ಇದ್ದವರು ಮಾತ್ರವಲ್ಲ, ಕಷ್ಟ ಕಾರ್ಪಣ್ಯವಿದ್ದವರೂ ಇರುತ್ತಾರೆ. ಅಂತಹ ಸಂದರ್ಭದಲ್ಲಿ ಪುನಃ ಲೌಕಿಕವನ್ನೇ ನೆನಪು ಮಾಡುತ್ತ ಹೋದರೆ, ಶಬ್ದಶಬ್ದಗಳಲ್ಲಿ ಈಗಿನ ರಾಜಕೀಯ ವಿಚಾರಗಳನ್ನು ಹೇಳುವುದೋ, ಒಂದು ಪಕ್ಷದ ಧ್ಯೇಯಗಳನ್ನು ತೋರಿಸುವುದೋ ಇವೆಲ್ಲ ಸಂಪೂರ್ಣ ರಂಗಭೂಮಿಯನ್ನು ಹಾಳುಮಾಡುತ್ತವೆ. ನಾವು ಸಾವಿರ ವರ್ಷಗಳ ಹಿಂದಿನ ಪರಂಪರೆಯನ್ನೋ, ಐದಾರು ಸಾವಿರ ವರ್ಷಗಳ ಹಿಂದಿನ ಕಥೆಗಳನ್ನೋ ನಿಮ್ಮೆದುರಿಗೆ ಕೊಡುತ್ತಿದ್ದೇವೆ ಎನ್ನುವ ಎಚ್ಚರಿಕೆಯ ಭಾವ ಮುಖ್ಯ. ಅದಕ್ಕಿಂತ ಹೆಚ್ಚಿನದೇನನ್ನು ಸಾಧಿಸುವುದಿದೆ? ಅಷ್ಟು ಮುಖ್ಯವಾದ ಪರಂಪರಾಗತ ಸಂಗತಿಯನ್ನು ನಿರೀಕ್ಷಿಸಿ ತನ್ನ ಮನಸ್ಸಿನ ದುಗುಡ ದುಮ್ಮಾನ ಮರೆಯುವುದಕ್ಕೆ ಪ್ರೇಕ್ಷಕರು ಬಂದಾಗ ಇಲ್ಲಸಲ್ಲದ ರಾಜಕೀಯ, ಕೀಳು ಅಭಿರುಚಿಯ ಹಾಸ್ಯ, ಸತ್ತ್ವಹೀನ ಅನಗತ್ಯ ವಿಚಾರ ತರುವುದು ವಿವೇಕವಲ್ಲ. ಕೆಲವು ಹಂತದಲ್ಲಿ ಯಕ್ಷಗಾನವು ಜಾಹಿರಾತಿನ ವಸ್ತು ಆಗಿದೆ; ಆದರೆ ಅದರಿಂದ ಕಲೆಗೂ ರಂಗಭೂಮಿಗೂ ಏನೂ ಪ್ರಯೋಜನ ಇಲ್ಲ. ಸಗ್ಗದ ಕಲೆಗೆ ಅಗ್ಗದ ಬೆಲೆ ಕಟ್ಟುತ್ತಿದ್ದೇವೆ.

ಪ್ರಶ್ನೆ: ಯೂರೋಪಿಯನ್ ನಾಟಕಗಳ ಆಧಾರದಲ್ಲಿಯೂ ಯಕ್ಷಗಾನ ಪ್ರಸಂಗಗಳು ಬಂದಿವೆಯಲ್ಲ; ಅವು ಪ್ರಯೋಗಾರ್ಹವೇ?

ಉತ್ತರ: ಹೌದು. ಮ್ಯಾಕ್ಬೆತ್, ಈಡಿಪಸ್ ಇತ್ಯಾದಿ ತಂದಿದ್ದಾರೆ. ಇಂಗ್ಲಿಷಿನಲ್ಲಿ ಮತ್ತು ಬೇರೆಬೇರೆ ಭಾಷೆಯಲ್ಲಿ ಯಕ್ಷಗಾನ ತಾಳಮದ್ದಲೆ ಆಟಗಳ ಪ್ರಯೋಗಗಳನ್ನು ಮಾಡಲಾಗಿದೆ. ಪ್ರಯೋಗ ಮಾಡಲು ಯಾರನ್ನೂ ತಡೆಯುವಂತಿಲ್ಲ. ನನ್ನ ತಂದೆಯವರು ಹೇಳುತ್ತಿದ್ದರು, ‘ಹೊಸ ಕಥೆ ಕೊಡುವುದಕ್ಕಿಂತ ಹಳೆಯದನ್ನು ಹೊಸದಾಗಿ ಕೊಡುವ ಪ್ರಯತ್ನ ಆಗಬೇಕು’ ಎಂದು.

ಎಷ್ಟೋ ವರ್ಷದಿಂದ ‘ಭೀಷ್ಮವಿಜಯ’, ‘ಸಂಧಾನ’, ‘ಕರ್ಣಪರ್ವ’, ‘ದೇವೀ ಮಹಾತ್ಮೆ’ – ಇತ್ಯಾದಿ ಪೌರಾಣಿಕ ಪ್ರಸಂಗ ಆಡುತ್ತಿದ್ದೇವೆ, ಇನ್ನೂ ಆಡದೇ ಇರುವ ನೂರಾರು ಪ್ರಸಂಗಗಳು ಇವೆ. ಪೌರಾಣಿಕ ಪ್ರಸಂಗಗಳಲ್ಲಿ ಮನುಷ್ಯನ ಭಾವನೆಗೆ, ವಿಚಾರಕ್ಕೆ ಸಂಬಂಧಪಟ್ಟ ಬೌದ್ಧಿಕವೂ, ತಾತ್ತ್ವಿಕವೂ ಆದ ಸಾಕಷ್ಟು ವಿಸ್ತಾರವಾದ ವಿಷಯಕ್ಕೆ ಅವಕಾಶ ಇದೆ. ಅಷ್ಟು ಸಮೃದ್ಧವಾಗಿರುವ ಪರಂಪರೆ ನಮ್ಮದಾಗಿರುವಾಗ, ಅರಿಯದ ಅನ್ಯ ಸಂವೇದನೆಯ ಕಥೆಯನ್ನು ತರುವುದು ಅಗತ್ಯವೇ? – ಎಂದು ನಮಗೆ ನಾವೇ ಪ್ರಶ್ನೆ ಹಾಕಿಕೊಳ್ಳಬೇಕು. ಯಕ್ಷಗಾನದಂತಹ ರಂಗಭೂಮಿಯ ಪ್ರಯೋಗಗಳು ಹೆಚ್ಚು ಆಶುವಾಗಿರುತ್ತವೆ; ದಿನವೂ ಹೊಸದಾಗಿ ಹುಟ್ಟುವ ಕಲೆ ಅದು. ಕೆಲವೊಂದು ಕಥೆಗಳು ಸುದೀರ್ಘವಾದ ಕಾಲದ ನಂತರ ಇನ್ನೂ ಹೆಚ್ಚು ಅರ್ಥವಾಗುತ್ತದೆ. ಹಾಗಾಗಿ ನನ್ನ ದೃಷ್ಟಿಯಲ್ಲಿ ಹೊಸ ಕಥೆ ಮುಖ್ಯವೋ ಅಥವಾ ಅದರ ಸತ್ತ್ವ, ಪ್ರಯೋಗ ಹೊಸತಾಗಿ ಬರಬೇಕೋ ಎಂಬ ವಿಚಾರ ಮುಖ್ಯ. ಕೆಲವರಿಗೆ ನಮ್ಮ ಪುರಾಣದ ಹಳೆಯ ಕಥೆಗಳು ಸೀಮಿತವಾಗಿ ಅರ್ಥವಾಗಿದೆ. ಹಾಗಾಗಿ ಮಾಡಿದ್ದನ್ನೇ ಮಾಡುವುದರಲ್ಲಿ ಏನಿದೆ ಎಂಬ ಪ್ರಶ್ನೆ ಇದೆ. ಈ ಹೊಸತು ಎಂಬ ತುಡಿತ ಮತ್ತು ಹಳೆಯದು ಎಂಬ ನಿರ್ಲಕ್ಷ, ಅಸಡ್ಡೆಯನ್ನು ನೋಡುವಾಗ, ಅದನ್ನು ವಿಶ್ಲೇಷಿಸುವಾಗ ನಮಗೆ ಬಹಳ ನಾಜೂಕಾದ ಸವಾಲು ಇದೆ. ಮತ್ತು ತೀರಾ ಎಚ್ಚರಿಕೆಯಿಂದ ಈ ಎರಡನ್ನೂ ಪರಿಶೀಲಿಸಬೇಕಾಗಿದೆ.  

ಉದಾಹರಣೆಗೆ ಯಕ್ಷಗಾನದ ಹಾಡುಗಾರಿಕೆಯನ್ನು ನೋಡಿದರೆ ರಾಗ ಮೋಹನ ಹಾಡಿ ಬೋರಾಗಿದೆ, ಅದಕ್ಕೆ ಇನ್ನೇನೋ ಬೆರೆಸಿ ಹಾಡುತ್ತೇನೆ ಎನ್ನುವುದಲ್ಲ; ಮೋಹನವೋ, ಆರಭಿಯೋ, ಝುಂಝೂಟಿಯೋ, ಕಲ್ಯಾಣಿಯೋ ಹಾಡಿಹಾಡಿ ಸಿದ್ಧಿಯನ್ನು ಪಡೆದಿರುತ್ತದೆ. ಕಲಾವಿದರಂತೆ, ಪ್ರೇಕ್ಷಕರೂ ಹತ್ತು ಸಾರಿ ಕೇಳಿದರೆ ಹನ್ನೊಂದನೇ ಬಾರಿ ಅವರಿಗೆ ಉಂಟಾಗುವ ಸಂವೇದನೆಯೇ ಬೇರೆ. ಬದಲಾವಣೆ ಮಾಡುವಾಗ ಇದನ್ನು ತಿಳಿದುಕೊಳ್ಳಬೇಕು. ಎಷ್ಟೋ ಸಾವಿರ ವರ್ಷಗಳಿಂದಲೂ ಪುರುಷಸೂಕ್ತವನ್ನೂ ಗಾಯತ್ರಿಯನ್ನೂ ಹೀಗೇ ಹೇಳಬೇಕು ಎಂದಿದೆ; ಗಾಯತ್ರಿಯನ್ನು ಇಪ್ಪತ್ತು ವರ್ಷದಿಂದ ಇದೇ ರೀತಿ ಹೇಳುತ್ತಿದ್ದೇನೆ, ಬೇಸರವಾಗಿದೆ, ಹಾಗಾಗಿ ಇದರಲ್ಲಿ ಬದಲಾವಣೆ ತರುತ್ತೇನೆ ಎಂದರೆ ಆಗುತ್ತದೆಯೇ? ಏಕೆಂದರೆ ಅದೇ ಮಾರ್ಗದಲ್ಲೇ ಆ ಮಂತ್ರದ ಪುನರುಚ್ಚರಣದಿಂದಲೇ ಅದು ಸಿದ್ಧಿಯಾಗುವುದು ತಾನೆ?

ಮೂಲವಸ್ತುವನ್ನು ಯಾಕೆ ಬದಲಾಯಿಸುತ್ತೇವೆ, ಯಾಕೆ ಬದಲಾಯಿಸಬಾರದು, ಯಾವುದನ್ನು ಬದಲಾಯಿಸಬಾರದು ಎಂಬುದನ್ನು ತಿಳಿದುಕೊಳ್ಳಬೇಕು. ನನಗಂತೂ ಅಂತಹ ಹೊಸ ಪ್ರಸಂಗವನ್ನು ಮಾಡಬೇಕೆಂದು ಅನಿಸಿಲ್ಲ. ನಮ್ಮ ಪ್ರಸಂಗಗಳಲ್ಲಿಯೇ ಈಗಾಗಲೇ ಪ್ರಚಲಿತದಲ್ಲಿರುವ ಒಂದು ನೂರು ಪ್ರಸಂಗವನ್ನೇ ಜನರಿಗೆ ಮುಟ್ಟಿಸುತ್ತೇನೆ ಎಂದು ಒಬ್ಬ ಹಠಹಿಡಿದರೂ ಅವನ ಆಯುಸ್ಸು ಸಾಲುವುದಿಲ್ಲ.

ನನ್ನ ಬಳಿ ಇಂಗ್ಲಿಷಿನಲ್ಲಿ, ಹಿಂದಿಯಲ್ಲಿ ಯಕ್ಷಗಾನ ಮಾಡಿ ಎಂದವರಿದ್ದಾರೆ. ನಮ್ಮ ದೇಶದಲ್ಲೇ ಹತ್ತಾರು ಭಾಷೆಗಳಿವೆ. ಒಂದೊಂದು ರಾಜ್ಯದಲ್ಲಿ ಒಂದೊಂದು ಭಾಷೆ ಕಲಿತು ಆಟ ಆಡುವುದು ಸಾಧ್ಯವೇ? ಎಲ್ಲ ಭಾಷೆಗಳಲ್ಲಿ ಮಾಡತೊಡಗಿದರೆ ಕಲಾವಿದ ವಾಚಿಕವನ್ನು ಹೇಗೆ ಸಿದ್ಧಿಮಾಡಿಕೊಳ್ಳಬಲ್ಲ? ಅವರ ಭಾಷೆಯನ್ನು ಅವರ ಮಟ್ಟಕ್ಕೆ ಮಾತನಾಡಲಿಕ್ಕೆ ನಮಗೆ ಸಾಧ್ಯವಿಲ್ಲ. ಇನ್ನೊಂದು ಸಂಸ್ಕೃತಿಯಲ್ಲಿ ಹುಟ್ಟಿಬಂದ ಭಾಷೆಯನ್ನು ನಾವು ಎಷ್ಟು ಅರ್ಥಮಾಡಿಕೊಳ್ಳಬಹುದು? ಇಂಗ್ಲಿಷಿನವರಿಗೆ ಅವರದೇ ನಾಟಕಗಳು ಸಾಕಷ್ಟಿವೆ. ನಮ್ಮ ಯಕ್ಷಗಾನವನ್ನು ಅವರು ನೋಡಬೇಕೆಂದರೆ ನಮ್ಮ ಭಾಷೆಯ ಸಮೇತ ನೋಡಬೇಕಾಗುತ್ತದೆ. ಭಾಷೆಯ ಹೊರತಾಗಿ ಸಂಸ್ಕೃತಿಯ ದರ್ಶನ ಸಾಧ್ಯವೆಂದು ನನಗೆ ತೋರುತ್ತಿಲ್ಲ. ಸಾಂಪ್ರದಾಯಿಕ ರಂಗಮಾಧ್ಯಮ ತನ್ನ ಭಾಷೆಯನ್ನು ಬಿಟ್ಟಲ್ಲಿ ಅಥವಾ ಅನ್ಯ ಭಾಷೆಯನ್ನು ಬಳಸಿದಲ್ಲಿ ಒಟ್ಟಾರೆ ಆ ಕಲೆಯ ಮೂಲ ದರ್ಶನ ಅಸಾಧ್ಯ.

ಒಂದು ರಂಗಭೂಮಿಯೆಂದರೆ ಒಂದು ಸಂಸ್ಕೃತಿಯ ಅಥವಾ ಸಮೂಹದ ಪ್ರತಿನಿಧಿ. ಆ ಆ ಭಾಗದ ಮಾನಸಿಕ ಸ್ಥಿತಿಗತಿ, ಭಾಷೆ, ನಡೆನುಡಿ ಎಲ್ಲ ಅಭಿವ್ಯಕ್ತವಾಗುವುದು ಅಲ್ಲಿನ ಪ್ರಾದೇಶಿಕ ಕಲೆಯಲ್ಲಿ. ಎಲ್ಲಕ್ಕಿಂತ ಹೆಚ್ಚು ಶ್ರೇಷ್ಠವಾಗಿ ನಮಗೆ ಕಾಣುವುದೆಂದರೆ ಕಲೆ ಇಡೀ ಸಂಸ್ಕೃತಿಯ ತುದಿಯ ಮೇಲಿರುವ ಒಂದು ಕೆನೆಪದರು. ಕಾಳಿದಾಸನು ಹೇಳಿದಂತೆ ‘ನಾಟ್ಯಂ ಭಿನ್ನರುಚೇರ್ಜನಸ್ಯ ಬಹುದಾಪೇಕ್ಷಂ ಸಮಾರಾಧನಂ’ ಎಂದಂತೆ. ಅಲ್ಲಿ ಬದಲಾವಣೆ ಮಾಡಿಬಿಟ್ಟರೆ ಎಲ್ಲವೂ ಅಳಿದುಹೋಗುತ್ತದೆ. ಆ ನಿಟ್ಟಿನಲ್ಲಿ ಬೇರೆಯದನ್ನು ತರುವಾಗ ತುಂಬಾ ಎಚ್ಚರ ಅಗತ್ಯ ಎಂಬುದು ನನ್ನ ಭಾವನೆ. ಆದರೆ ಸುಧಾರಣೆ, ಬದಲಾವಣೆ, ಪ್ರಯೋಗದ ವಿರೋಧಿ ನಾನಲ್ಲ. ಇಲ್ಲಿ ವಿವೇಚನೆ, ಸಮಗ್ರ ಅರಿವು, ತೋಲತಪ್ಪದ ನಡೆ ಮುಖ್ಯ.

ಪ್ರಶ್ನೆ: ಯಕ್ಷಗಾನ ಒಂದು ಪರಂಪರೆಯಾಗಿ ಬೆಳೆದುಬಂದ ಜನಪದ ಕಲೆ. ಅದನ್ನು ಸಂರಕ್ಷಿಸಿ ಪೋಷಿಸುವ ಭಾರವೂ ನಮ್ಮ ಮೇಲಿದೆ. ಹಾಗಾದರೆ ಪೋಷಣೆ-ಸಂರಕ್ಷಣೆಯ ಭಾರವು ಕಲೆಯ ಬೆಳವಣಿಗೆಗೆ ಅಡ್ಡಗಾಲಾಗಿದೆಯೇ? ಪರಂಪರೆಯ ಪೋಷಣೆ, ಸಂರಕ್ಷಣೆ ಹಾಗೂ ಬೆಳವಣಿಗೆ ಇವುಗಳ ನಡುವೆ ಸಮತೋಲ ಹೇಗೆ ಸಾಧ್ಯ?

ಉತ್ತರ: ಸಂರಕ್ಷಿಸುವ ಪೋಷಿಸುವ ಭಾರ ನಮ್ಮ ಮೇಲೆ ಖಂಡಿತಾ ಇದೆ. ಹಾಗೆ ಮಾಡದಿದ್ದರೆ ಇದು ಉಳಿಯುವುದಿಲ್ಲ. ಮನುಷ್ಯನು ಸಮಾಜದ, ನಿಸರ್ಗದ ಒಂದು ಭಾಗವಾಗಿದ್ದಾಗ ಎಲ್ಲವೂ ನೈಸರ್ಗಿಕವಾಗಿಯೇ ಇರುತ್ತಿತ್ತು. ಈವತ್ತು ಎಲ್ಲದರ ಮೇಲೂ ಅವನ ಪ್ರಭುತ್ವ ಇರುವುದರಿಂದ ಆ ಪ್ರಭುತ್ವ ಪೋಷಣೆಯನ್ನೂ ಮಾಡಬೇಕಾಗುತ್ತದೆ.

ಯಕ್ಷಗಾನ ಸಹಿತ ಎಲ್ಲ ಜನಪದ ಕಲೆಗಳೂ ಸಮಾಜದ ಉಳಿದ ಬೆಳವಣಿಗೆಯ ಜೊತೆಗೇ ಸಾಗುತ್ತಿದ್ದ ಕಾಲವೊಂದಿತ್ತು. ಹೊಲಕ್ಕೆ ಹೋದಾಗ ಅಲ್ಲಿ ಮೈಕ್ ಇಡುತ್ತಿರಲಿಲ್ಲ, ಫೋಟೊಗ್ರಫಿ ಮಾಡುತ್ತಿರಲಿಲ್ಲ. ಅವರು ಹೊಲದ ಕೆಲಸ ಮಾಡುತ್ತಲೇ ಹಾಡುತ್ತಿದ್ದರು. ಜನರ ಸಂತೋಷಕ್ಕಾಗಿ ಹುಟ್ಟಿತು, ಜನರ ಸಂತೋಷಕ್ಕಾಗಿ ಬೆಳೆಯಿತು. ನಾಟ್ಯಶಾಸ್ತ್ರ ಹೇಳಿದಂತೆ ಅದು ‘ಕ್ರೀಡನೀಯಕಂ’. ದೇವಸ್ಥಾನಗಳಲ್ಲಿ, ರಾಜರ ಆಸ್ಥಾನದಲ್ಲಿ ಕೂಡಾ ಬೆಳೆದು ಪೋಷಣೆ ಪಡೆಯಿತು. ಮತ್ತು ಅದು ಆಗ ತನ್ನಿಂದ ತಾನೆ ಮುಂದಿನ ಪರಂಪರೆಗೆ ದಾಟುತ್ತಿತ್ತು. ಯಾವಾಗ ಯಂತ್ರಗಳು ಬಂದವೋ, ಯಾವಾಗ ಇಡೀ ಸಮಾಜ ಬೇರೆ ರೀತಿಯ ಬದಲಾವಣೆಯನ್ನು ಕಾಣತೊಡಗಿತೋ ಆಗ ಅದರ ಉಳಿವಿನ ನೈತಿಕತೆಯೂ ನಮ್ಮ ಸಮಾಜದ ಮೇಲೆ ಬರುತ್ತದೆ; ಇಲ್ಲದಿದ್ದರೆ ಕಲೆ ನಶಿಸುತ್ತದೆ ಅಲ್ಲವೆ?

ಈಗ ಯಕ್ಷಗಾನ ಹಾಗೂ ಇನ್ನಿತರ ಕಲೆಗಳ ಸುತ್ತಮುತ್ತ ಎಲ್ಲ ವ್ಯವಸ್ಥೆಗಳು, ಸಮಾಜದ ಪರಸ್ಪರ ಕೊಂಡಿಯಂತೆ ಬೆಳೆಯುತ್ತ ಬರದೇ ಮನುಷ್ಯ ಎಲ್ಲವನ್ನು ತನ್ನ ವರ್ಚಸ್ಸಿನಿಂದ, ಹಣಬಲದಿಂದ, ಅಧಿಕಾರದಿಂದ ನಿಯಂತ್ರಿಸಲು ಹೊರಟ ಸಂದರ್ಭದಲ್ಲಿ ನಾವಿದ್ದೇವೆ. ಈಗ ಸರ್ಕಾರ, ಕಾಯಿದೆ-ಕಾನೂನುಗಳೆಲ್ಲ ಇವೆ. ಇಂತಹ ಸನ್ನಿವೇಶದಲ್ಲಿ ಕಲೆಗೆ ರಾಜಾಶ್ರಯ ಹಾಗೂ ಪಷಣೆ, ಸಮಾಜದ ಬೆಂಬಲ ಇವೆಲ್ಲ ಬೇಕೇಬೇಕು. ದೇವಸ್ಥಾನಗಳು, ಮಠಮಾನ್ಯಗಳು, ರಾಜಕಾರಣಿಗಳು ಎಲ್ಲರೂ ಕಲೆಯನ್ನು ಪ್ರೋತ್ಸಾಹಿಸಬೇಕು.

ಸಂಪೂರ್ಣ ಭಾರತದ ನೆಲದ ಸೊಗಸು, ಪರಿಮಳ, ಸೌಂದರ್ಯ, ವಿಶಿಷ್ಟವಾದ ಶಕ್ತಿಯನ್ನು ಕಾಣುವುದೇ ಇಲ್ಲಿನ ಕಲೆ ಮತ್ತು ಸಂಸ್ಕøತಿಯಲ್ಲಿ. ಕಲೆ ಮತ್ತು ಸಂಸ್ಕೃತಿ ಬೇರೆಬೇರೆ ಎಂದು ನನಗೆ ಅನ್ನಿಸುವುದಿಲ್ಲ. ಹಾಗಾಗಿ ಈ ಕಲೆಗಳನ್ನು, ಅದರಲ್ಲೂ ಜನಪದ ಕಲೆಗಳನ್ನು, ಹಾಗೆಯೆ ಜನಪದದಿಂದ ಹುಟ್ಟಿಬಂದಂತಹ ಸಾಂಪ್ರದಾಯಿಕ ಕಲೆಗಳಾದ ಯಕ್ಷಗಾನ, ಮೂಡಲಪಾಯ, ಕೂಡಿಯಾಟ್ಟಂ, ದೇಶದಾದ್ಯಂತ ಹಬ್ಬಿರುವ ವಿವಿಧ ಕಲಾಪ್ರಕಾರ ಇವನ್ನೆಲ್ಲ ಸಂರಕ್ಷಿಸಲೇಬೇಕು.

ನಾವು ಸಂವಿಧಾನವನ್ನು ರೂಪಿಸುವಾಗ ಹತ್ತುಹಲವು ದೇಶಗಳ ಸಂವಿಧಾನವನ್ನು ಅಭ್ಯಸಿಸಿ ರೂಪಿಸಿದ್ದೇವೆ. ಆದರೆ ಇಲ್ಲಿನ ಕಲೆ ಹಾಗಲ್ಲ; ಇದರ ಅನನ್ಯತೆಗೆ ಹೊರಗಿನ ಆಶ್ರಯ ಬೇಕಾಗಲಿಲ್ಲ. ಕಲೆ ಇಲ್ಲಿಯದನ್ನೇ ನೋಡಿ ರೂಪಿಸಿಕೊಂಡಿದೆಯೆ ವಿನಾ ಬೇರೆ ಒತ್ತಡಗಳಿಂದ ಬಂದಿಲ್ಲ; ಅದು ಇಲ್ಲೇ ಹುಟ್ಟಿದಂಥದ್ದು. ಅದಕ್ಕೆ ಯಾವುದೋ ಕಸಿ ಮಾಡಿದ್ದಿಲ್ಲವೇ ಇಲ್ಲ. ಹಾಗಾಗಿ ನೈಜತೆಯೊಂದಿಗೆ ಜನಪದದ ಎಲ್ಲ ವೈವಿಧ್ಯವನ್ನು ಕಾಣುವಂಥದ್ದು. ಅದರಲ್ಲಿ ಇಡೀ ಭಾರತೀಯತೆ ಬೀಜರೂಪದಲ್ಲಿ ಸಮಾಹಿತವಾಗಿದೆ. ಭಾರತದ ಸೌಜನ್ಯ, ಬಹುರೂಪಿ ಸಂಸ್ಕೃತಿ, ಧಾರ್ಮಿಕ ಸಹಿಷ್ಣುತೆ ಇಂಥವನ್ನೆಲ್ಲ ಕಾಣುವುದು ಕಲೆಗಳಲ್ಲಿ. ಅದನ್ನು ಉಳಿಸಲಿಕ್ಕೆ ಎಲ್ಲರೂ ಪ್ರಯತ್ನ ಮಾಡಲೇಬೇಕು. ನಮ್ಮಲ್ಲಿ ಸದ್ಯಕ್ಕೆ ಅದಕ್ಕೆ ಹೆಚ್ಚಿನ ಲಕ್ಷ್ಯ ದೊರಕುತ್ತಿಲ್ಲ ಎನ್ನುವುದು ವಿಷಾದನೀಯ.

ಪ್ರಶ್ನೆ: ತಾಳಮದ್ದಲೆಯ ಹೊರತಾದ ಯಕ್ಷಗಾನ ಪ್ರದರ್ಶನಗಳಲ್ಲಿ ಮಾತುಗಾರಿಕೆ ಎಷ್ಟಿರಬೇಕು?

ಉತ್ತರ: ಯಕ್ಷಗಾನ ರಂಗಭೂಮಿಯಲ್ಲಿ ಒಂದು ಕಾಲದಲ್ಲಿ ಮಾತು ಹೇಗಿತ್ತೆಂದರೆ ‘ಸಂದರ್ಭ ಕೊಡುವುದು’ ಅಂದರೆ ಒಂದು ಪದ್ಯದಿಂದ ಮತ್ತೊಂದು ಪದ್ಯಕ್ಕೆ ಸಂದರ್ಭ ಕೊಡುವಷ್ಟು ಮಾತ್ರ ಅರ್ಥ ಹೇಳುವುದು ಇತ್ತು; ಪದ್ಯಕ್ಕೆ, ಶಬ್ದಕ್ಕೆ ವ್ಯಾಖ್ಯಾನಿಸುವ ಪದ್ಧತಿ ಆನಂತರ ಬಂತು. ಅದರಿಂದ ಮಾತುಗಾರಿಕೆ ಬೆಳೆಯಿತು. ರಂಗಭೂಮಿಯಲ್ಲಿ ಮೊದಲು ತಾಳಮದ್ದಲೆಯಲ್ಲಿ ಮಾತ್ರ ವಿಸ್ತಾರಕ್ಕೆ ಅವಕಾಶಗಳಿತ್ತೇ ವಿನಾ ರಂಗಭೂಮಿಯಲ್ಲಿ ವಿಸ್ತಾರಕ್ಕೆ ಅಂತಹ ಅವಕಾಶಗಳಿರಲಿಲ್ಲ. ರಂಗಸ್ಥಳದಲ್ಲಿ ಅದು ವಾಚಿಕ ಮಾತ್ರವಲ್ಲ ವಾಚಿಕಾಭಿನಯ. ಅಭಿನಯಬದ್ಧವಾದ ಮಾತು. ಯಕ್ಷಗಾನದಲ್ಲಿ ನನ್ನ ತಂದೆಯವರು ಹೇಳಿದಂತಹ ಬಹು ಮುಖ್ಯ ಶಬ್ದ ‘ಆವರಣಭಂಗ’ ಅಂದರೆ ಮಾತುಗಾರಿಕೆಯಲ್ಲಿ ಒಂದು ನಿರ್ದಿಷ್ಟ ಹದ, ಕಾಯ್ದುಕೊಂಡಿರಬೇಕು. ಇದು ತಾಳಮದ್ದಲೆಗೆ, ಯಕ್ಷಗಾನ ಪ್ರದರ್ಶನ ಇವೆರಡಕ್ಕೂ ಅನ್ವಯವಾಗಬಹುದು.

ಪ್ರಶ್ನೆ: ಇಂದು ಅನೇಕ ಕಲಾವಿದರು ತಮ್ಮ ಪ್ರದರ್ಶನಗಳಲ್ಲಿ ಪ್ರತಿ ಪದ್ಯಕ್ಕೂ ಹತ್ತರಿಂದ ಇಪ್ಪತ್ತು ನಿಮಿಷಗಳ ಕಾಲ ಕುಣಿಯುವ, ಆ ಮೂಲಕ ಚಪ್ಪಾಳೆ, ಶಿಳ್ಳೆ ಗಿಟ್ಟಿಸಿಕೊಳ್ಳುವ ಗಿಮಿಕ್‍ಗಳನ್ನು ಮಾಡುತ್ತಾರೆ. ಭಾಗವತರು ಹಾಡುತ್ತಿರುವ ಸಾಹಿತ್ಯಕ್ಕೂ ಅಭಿನಯಕ್ಕೂ ಹಲವೊಮ್ಮೆ ಸಂಬಂಧವೇ ಇರುವುದಿಲ್ಲ. ಅಷ್ಟು ಕುಣಿದ ಮೇಲೆ ಪದ್ಯದ ಅರ್ಥವನ್ನು ಪೂರ್ಣ ಹೇಳದೆ ಮುಂದಿನ ಪದ್ಯದ ಎತ್ತುಗಡೆ ಮಾಡುತ್ತಾರೆ ಎಂಬುದನ್ನು ಕೇಳಿದ್ದೇವೆ, ನೋಡಿದ್ದೇವೆ. ಈ ಬಗ್ಗೆ ನಿಮ್ಮ ಅಭಿಪ್ರಾಯ?

ಉತ್ತರ: ಹತ್ತು ಇಪ್ಪತ್ತು ನಿಮಿಷಗಳ ಕಾಲ ಕುಣಿಯುವ ಅಗತ್ಯವೇ ಇಲ್ಲ. ರಂಗದಲ್ಲಿ ಸಮತೋಲ ಕಾಯ್ದುಕೊಳ್ಳುವ ಜವಾಬ್ದಾರಿ ಕಲಾವಿದನಿಗೆ ಇರುತ್ತದೆ. ತನಗೆ ತಾಕತ್ತಿದೆ, ವಯಸ್ಸಿದೆ ಎಂದು ಅತಿಯಾದ ಅಭಿವ್ಯಕ್ತಿಯನ್ನು ಮಾಡಿದರೆ ಆ ಸನ್ನಿವೇಶ ಮರೆತುಹೋಗುತ್ತದೆ; ಕಥೆಯಿಂದ ಹೊರತಾದ ಬೇರೆ ಭಾಗವಾಗಿ ಕಾಣುತ್ತದೆ. ಆಗ ರಸಭಂಗವಾಗುತ್ತದೆ. ಅದು ಚಪ್ಪಾಳೆ, ಶಿಳ್ಳು, ಗಿಮಿಕ್‍ಗಳಿಗಾಗಿ ಎಂದೇ ಹೇಳಬೇಕಾಗುತ್ತದೆ.

ವೈವಿಧ್ಯ ನೃತ್ಯಗಳನ್ನು ತರಬೇಕು ಎಂದಿದ್ದರೆ ಬೇರೆಬೇರೆ ಪದ್ಯಗಳಿಗೆ ಮುಂದೆ ಇರುವ ಅವಕಾಶಗಳಿಗೆ ಅದನ್ನು ಬಳಸಿಕೊಳ್ಳಬೇಕು. ಅವಕಾಶ ಬರುವುದು ಒಂದೇ ದಿನ ಅಲ್ಲವಲ್ಲ. ನಾಳೆ ಬೇರೆ ಪಾತ್ರ ಮಾಡುತ್ತೇವೆ. ಅದರಲ್ಲಿ ಒಂದಷ್ಟು ವಿವೇಚನೆಯಿಂದ ಬಳಸಿಕೊಳ್ಳಬೇಕು. ತನಗೆ ತಿಳಿದದ್ದನ್ನೆಲ್ಲ ಒಂದೇ ದಿವಸ ಒಂದೇ ಪದ್ಯದಲ್ಲಿ ಮಾಡಿ ಮುಗಿಸುವುದಕ್ಕಿಂತ ‘ಕಲಾವಿದನಲ್ಲಿ ಇನ್ನೂ ಏನೋ ಇದೆ’ ಎನ್ನುವ ತರಹ ಇರಬೇಕು. ಸಮಾರಂಭದಲ್ಲಿ ಹತ್ತು ಬಗೆಯ ಸಿಹಿ ಇದ್ದರೂ ಒಂದೋ ಎರಡೋ ತಿನ್ನಲಿಕ್ಕಾಗುವಂತೆ. ಯಾವುದೇ ಆಗಲಿ ಅತಿಯಾಗಿ ಮಾಡಿದಾಗ ಅನರ್ಥವೇ ಆಗುತ್ತದೆ.

ಪ್ರಶ್ನೆ: ಪ್ರಸಂಗಕೇಂದ್ರಿತವಾಗಿರಬೇಕಾದ ಪ್ರದರ್ಶನಗಳು ವ್ಯಕ್ತಿಕೇಂದ್ರಿತವಾಗುತ್ತಿವೆ; ಪ್ರೇಕ್ಷಕರೂ ಕೂಡಾ ಒಟ್ಟಂದದಲ್ಲಿ ಪ್ರಸಂಗವನ್ನು ಗಮನಿಸುವ ಬದಲು ತಮ್ಮ ಆಯ್ಕೆಯ ಕೆಲವೇ ಕಲಾವಿದರನ್ನು ಮನ್ನಿಸುವ ವ್ಯಕ್ತಿ-ಆರಾಧನೆಯ ಮನೋಭಾವ ಬೆಳೆಯುತ್ತಿರುವ ಬಗ್ಗೆ ಏನೆನ್ನುತ್ತೀರಿ?

ಉತ್ತರ: ಯಕ್ಷಗಾನವನ್ನು ಕಾಡುತ್ತಿರುವ ನಿರಂತರ ಸಮಸ್ಯೆ ಇದು. ಅಂದರೆ ವ್ಯಕ್ತಿಯೇ ಮುಖ್ಯವಾಗಿಬಿಡುವುದು. ನಾವು ರಂಗಸ್ಥಳಕ್ಕೆ ಹೋದಾಗ ಯಾರೆಂದು ಗೊತ್ತಾಗಬಾರದೆಂದೇ ವೇಷಭೂಷಣಗಳನ್ನೆಲ್ಲ ಹಾಕುವುದು! ರಂಗಸ್ಥಳದಲ್ಲಿ ನಮ್ಮ ವೈಯಕ್ತಿಕವಾದದ್ದನ್ನು ಹೇಳಲಿಕ್ಕೆ ಬರುವುದಿಲ್ಲ. ಕೌರವನದೋ ಸುಭದ್ರೆಯದೋ ಕಷ್ಟಗಳನ್ನು, ಭೀಷ್ಮನ ಕಷ್ಟಸುಖಗಳನ್ನು, ಕೃಷ್ಣನ ಚಾಕಚಕ್ಯತೆಗಳನ್ನು ಹೇಳುತ್ತೇವೆಯೇ ಹೊರತು ನಮ್ಮ ಕಷ್ಟಸುಖಗಳನ್ನಲ್ಲ; ಇದಕ್ಕೆ ಕಲಾವಿದ ಒಬ್ಬ ವಾಹಕ ಮಾತ್ರ. ಆತ ಆ ಪ್ರಯತ್ನವನ್ನು ಮಾಡುತ್ತಾನೆ ಅಷ್ಟೆ. ಇದನ್ನು ವಿಸ್ತರಿಸಿ (ಆಂಪ್ಲಿಫೈ) ಅದ್ಭುತವಾಗಿ ಕಾಣಲಿಕ್ಕೆ ಪ್ರಯತ್ನ ಮಾಡುತ್ತಿದ್ದಂತೆಯೇ ಕಲಾವಿದ ಹೆಚ್ಚು ಪ್ರೇಕ್ಷಕನಿಗೆ ತಲಪುತ್ತಾನೆ. ಕಲಾವಿದನ ಕಲ್ಪನಾ ಲೋಕದಲ್ಲಿ ಪ್ರೇಕ್ಷಕನೂ ವಿಹರಿಸುತ್ತಾನೆ.

ಪಾತ್ರವು ವ್ಯಕ್ತಿಯಾಗಿ ಕಾಣಿಸಲಿಕ್ಕೆ ಶುರುವಾದಾಗ ಆ ವೈಭವವು ಮರೆಯಾಗಿ ಇಂಥವರು ಬಂದರು, ಅಂಥವರು ಬಂದರು, ಮತ್ತಿನ್ನಾರೋ ಬಂದರು; ಈ ರೀತಿ ಆದಾಗ ರಂಗದ ಮೇಲೆ ರಾಮ, ಕೃಷ್ಣ, ಕಂಸ ಬರುವುದಿಲ್ಲ; ಈ ವ್ಯತ್ಯಾಸವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ‘ವ್ಯಕ್ತಿಕೇಂದ್ರಿತ’ ಎನ್ನುವ ಪದ ಸ್ವಲ್ಪ ಸೂಕ್ಷ್ಮ. ಹೇಗೆಂದರೆ, ಒಬ್ಬ ಕಲಾವಿದನು ರಂಗಸ್ಥಳಕ್ಕೆ ಬಂದಾಗ ಅವನಿಂದ ಪ್ರಭಾವಿತರಾದಂತಹ ಜನ ಅವನ ಅಭಿಮಾನಿಗಳಾಗುತ್ತಾರೆ. ಕಲಾವಿದನಿಗೆ ಅದು ಒಳ್ಳೆಯದೇ. ಆದರೆ ಪ್ರೇಕ್ಷಕ ಅದರಿಂದ ಕಳೆದುಕೊಳ್ಳುತ್ತಾನೆ. ಅಂದರೆ ಅಂತಹ ಹಂತದಲ್ಲಿ ಆತ ಒಂದು ಪಾತ್ರವನ್ನು ಕಳೆದುಕೊಂಡು ವ್ಯಕ್ತಿಯನ್ನು ಗಳಿಸಿಕೊಳ್ಳುತ್ತಾನೆ; ಕಲಾವಿದನೂ ಹಾಗೆ ಆಗುತ್ತ ಹೋಗುತ್ತಾನೆ. ಮುಂದೆ ಹೋದ ಹಾಗೆ ಅವನಿಗೆ ಆ ಸಮೂಹವನ್ನು ತನ್ನೊಳಗೆ ಇಟ್ಟುಕೊಳ್ಳುವ ಅನಿವಾರ್ಯತೆ ಹುಟ್ಟಿಕೊಳ್ಳುತ್ತದೆ; ಇವರು ನನ್ನ ಅಭಿಮಾನಿಗಳು, ಇವರನ್ನು ಉಳಿಸಿಕೊಳ್ಳಬೇಕು ಎನ್ನುವಂತಾದಾಗ ಅವನೊಂದು ಸಮೂಹದ ಸಾಂತ್ವನಕ್ಕೆ ತನ್ನ ಸರ್ಜನಶೀಲತೆಯನ್ನು ಕಳೆದುಕೊಳ್ಳಬಹುದು. ಪ್ರೇಕ್ಷಕಸಮೂಹ ಓರ್ವ ವ್ಯಕ್ತಿಯ ಹಿಂದೆ ನಿಂತು, ಪಾತ್ರದ ವಿಸ್ತಾರವಾದ ಅನುಭವದಿಂದ ವಂಚಿತವಾಗುತ್ತದೆ. ಆಗಲೇ ತಾನು ನಂಬಿದ ಮೆಚ್ಚಿದ ಕಲಾವಿದ ಮಾತ್ರ ಬಿಟ್ಟು ಬೇರೆ ಯಾರೂ ಸರಿಯಿಲ್ಲ ಎಂಬ ಹಠ ಶುರುವಾಗುತ್ತದೆ. ಇದು ಇಡೀ ರಂಗಭೂಮಿಯನ್ನು ಸಂಕುಚಿತಗೊಳಿಸುತ್ತದೆ.

ಇದೇ ಕಾರಣದಿಂದಲೇ ಕೆಲವರು ‘ನನಗೆ ಬೆಳಗಿನ ಜಾವದ ವೇಷ ಕೊಡಬೇಡಿ’, ‘ನಾನು ಅದೇ ವೇಷ ಮಾಡುತ್ತೇನೆ’, ‘ನನಗೆ ಹೆಚ್ಚಿನ ವೇಷ ಕೊಡಿ’ ಎಂದೆಲ್ಲ ಹೇಳುವುದು. ‘ತನ್ನ ಮೇಲಿನ ಪ್ರೀತಿ ಇರುವಂಥ ಸಮೂಹವನ್ನು, ಅಭಿಮಾನಿಗಳನ್ನು ಕಳೆದುಕೊಳ್ಳಬಾರದು, ಅವರನ್ನು ಹೇಗಾದರೂ ಇಟ್ಟುಕೊಳ್ಳಬೇಕು’ ಎಂದು. ಇಲ್ಲಿ ಕಲೆ ಕಲಾವಿದ ಪ್ರೇಕ್ಷಕ ಮೂರೂ ಜನರೂ ಸೋಲುತ್ತಾರೆ. ತಾತ್ಕಾಲಿಕ ಗೆಲವಷ್ಟೇ ಕಾಣುತ್ತದೆ.

ವ್ಯಕ್ತಿ-ಆರಾಧನೆ ಎನ್ನುವಂಥದ್ದು ತುಂಬಾ ಎಚ್ಚರಿಕೆಯ ಪ್ರಜ್ಞಾಸ್ತರದಲ್ಲಿ ನಾವೆಲ್ಲ ಗ್ರಹಿಸಬೇಕಾದ್ದು. ಒಬ್ಬ ಕಲಾವಿದನು ಬೆಳೆದಾಗ ಅವನ ಸುತ್ತಮುತ್ತ ಇರುವಂತಹ ಶಕ್ತಿ ಇದೆಯಲ್ಲ, ಎಷ್ಟು ಸಾಧ್ಯವೋ ಅಷ್ಟು ಅದು ತನ್ನನ್ನು ನಿಯಂತ್ರಿಸಲಿಕ್ಕೆ ಬಿಡದ ಹಾಗೆ ಕಲಾವಿದ ಪ್ರಯತ್ನಿಸಬೇಕು. ಉಳಿದ ಸಾಮಾಜಿಕ ಆದರ, ಗೌರವ ನೀಡುವುದು ಬೇರೆ. ಅದು ಕೊಡಲೇಬೇಕಾದ್ದು. ಸಾಧನೆಗೆ ಗೌರವವನ್ನು ಕೊಟ್ಟೇ ಕೊಡಬೇಕು. ರಂಗಸ್ಥಳದಲ್ಲಿ ಒಟ್ಟು ಕಲೆಗೆ ಬಾಧಕ ಆಗದ ರೀತಿಯಲ್ಲಿ ಬೆಳೆಯಬೇಕಾಗುತ್ತದೆ. ಇದು ತುಂಬ ಎಚ್ಚರಿಕೆಯಿಂದ ಆಗಬೇಕಾದದ್ದು. ಕಲೆ ಎನ್ನುವಂಥದ್ದು ಎಲ್ಲಕ್ಕಿಂತ ಸಂಕೀರ್ಣ ಆಗುವುದು ಇಂತಹ ಸನ್ನಿವೇಶ, ಸಂದರ್ಭಗಳಲ್ಲೇ.

ಒಳ್ಳೆಯದನ್ನು ಮಾಡಿದಾಗ ಜನಪ್ರಿಯತೆ ಬರುತ್ತದೆ. ಹಿಮಾಲಯದಲ್ಲಿ ಕೆಲವು ಸಂನ್ಯಾಸಿಗಳು ಜನರು ಹತ್ತಿರ ಬಂದರೆ ಕಲ್ಲು ಒಗೆಯುತ್ತಾರೆಂದು ಕೇಳಿದ್ದೇನೆ. ಅವರಿಗೆ ಅವರ ಸಾಧನೆ ಮುಖ್ಯವೇ ವಿನಾ ಜನಪ್ರಿಯತೆ ಅಲ್ಲ. ನಾವು ತೀರಾ ಸಮಾಜದ ಹತ್ತಿರ ಹೋದ ಹಾಗೆ ಮೂಲ ಉದ್ದೇಶಗಳು ಭಂಗ ಆಗುತ್ತ ಹೋಗುತ್ತವೆ. ಆ ಹಿನ್ನೆಲೆಯಲ್ಲಿ ನೋಡಬೇಕು. ಆ ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದಾಗ ಜನಪ್ರಿಯತೆ ಹೆಚ್ಚಾಗುತ್ತಿರುವಾಗ ನಾವು ಅಲ್ಲೇ ಕರಗಿಹೋಗಬೇಕೋ ಅಥವಾ ಮುಂದೆ ಹೆಜ್ಜೆ ಇಡಬೇಕೋ ಎನ್ನುವುದನ್ನು ನಿರ್ಧರಿಸಬೇಕು. ಹಾಗೆಂದು ಜನಪ್ರಿಯತೆ ಅಪಥ್ಯ ಅಲ್ಲ. ಅದು ಕಲಾವಿದನ ಸ್ಫೂರ್ತಿಯೂ ಹೌದು. ಹಾಗಾಗಿ ಇಂಥದ್ದನ್ನು ಯಕ್ಷಗಾನ ರಂಗಭೂಮಿ ಒಟ್ಟಾಗಿ ಗ್ರಹಿಸಬೇಕು. ಇಲ್ಲಿ ನನ್ನ ಅಜ್ಜ ಕೆರೆಮನೆ ಶಿವರಾಮ ಹೆಗಡೆಯವರು ಹೇಳುವ ಒಂದು ಮಾತು – “ನಾವು ಪ್ರೇಕ್ಷಕರ ಮಟ್ಟಕ್ಕೆ ಇಳಿಯಬಾರದು, ಪ್ರೇಕ್ಷಕರನ್ನು ನಮ್ಮ ಮಟ್ಟಕ್ಕೆ ಏರಿಸಬೇಕು’’ ಎಂದು. ಕಲಾವಿದ, ಕಲೆಯಲ್ಲಿ ಶುದ್ಧ ಸಂಪೂರ್ಣ ಲೀನವಾದಾಗ, ತನ್ನನ್ನು ಅರ್ಪಿಸಿಕೊಂಡಾಗ, ಕಲೆಯೊಂದಿಗೆ ಅನ್ಯೋನ್ಯವಾದಾಗ ಇಂತಹ ಮಾತು ಬರಲು ಸಾಧ್ಯ ಮತ್ತು ಅದು ಹೆಚ್ಚು ಸಂಗತವಾಗುತ್ತದೆ.

ನನ್ನ ತಂದೆಯವರು ಬಹುಹಿಂದೆಯೇ ಹೇಳಿದ ಒಂದು ಮಂತ್ರದಂತಹ ಮಾತು ಇಲ್ಲಿ ಉಲ್ಲೇಖಿಸಿದರೆ ಒಟ್ಟಾರೆ ಅಭಿಪ್ರಾಯ ತಿಳಿದೀತು. “ನನಗಿಂತ ನನ್ನ ಮೇಳ ದೊಡ್ಡದು. ಮೇಳಕ್ಕಿಂತ ನಮ್ಮ ಕಲೆ ದೊಡ್ಡದು!” ಕಲಾವಿದನಿಗೆ ಜನಪ್ರಿಯತೆ ಬೇಕು. ಆದರೆ ಜನಪ್ರಿಯತೆ ಮಾತ್ರವೇ ಸಾಕು ಎಂದಾಗಬಾರದು.

ಪ್ರಶ್ನೆ: ಆರ್ಥಿಕ ವಲಯದ ಬೆಳವಣಿಗೆಗೆ ಸರ್ಕಾರ ಹೆಚ್ಚು ಆಸಕ್ತಿ ತೋರುತ್ತಿದೆ. ಅದು ಅಗತ್ಯವೂ ಹೌದು. ಆದರೆ ಸಾಂಸ್ಕೃತಿಕವಲಯದ ಬೆಳವಣಿಗೆ ಜೀವನಮಟ್ಟದ ಸುಧಾರಣೆಯಲ್ಲಿ ಮಹತ್ತ್ವದ ಪಾತ್ರವನ್ನು ವಹಿಸುತ್ತದೆ. ಹೀಗಿರುವಾಗ, ಸರ್ಕಾರ ಎಷ್ಟರ ಮಟ್ಟಿಗೆ ಸಾಂಸ್ಕೃತಿಕವಲಯಕ್ಕೆ ಪ್ರೋತ್ಸಾಹ ನೀಡುತ್ತಿದೆ? ನಿಮ್ಮ ಅಭಿಪ್ರಾಯವೇನು?

ಉತ್ತರ: ಹೌದು. ಸದ್ಯದ ಪರಿಸ್ಥಿತಿಯಲ್ಲಿ ಆರ್ಥಿಕಮಟ್ಟವೇ ಮನುಷ್ಯನ ಬದುಕಿನ ಎಲ್ಲ ಸಾಧನೆ ಎನ್ನುವ ಹಾಗೆ ಇಡೀ ಸಮಾಜವೇ ಬದಲಾವಣೆಯಾಗಿದೆ. ಎಲ್ಲರಿಗೂ ಆರ್ಥಿಕಶಕ್ತಿ ಇಂದು ಬೇಕಾಗಿದೆ. ಅದು ದೊಡ್ಡ ಅಪಾಯ. ನಮ್ಮ ಭಾರತೀಯ ಮೌಲ್ಯಪರಂಪರೆಯಲ್ಲಿ ಹಣದ ಸ್ಥಾನ ಗೌಣವಾಗಿತ್ತು. ಯಾವುದನ್ನೂ ಮಾರಾಟ ಮಾಡದ ಕಾಲವೂ ಇತ್ತು. ಹೋಟೆಲ್‍ನಲ್ಲಿ ಅನ್ನ ಮಾರಾಟ ಮಾಡುವುದು ಸಹ ಗೌರವವೆನಿಸಿರಲಿಲ್ಲ. ಇಂದೂ ಅದೇ ಕಾಲದಲ್ಲಿ ಇರಲಾಗದು; ಎಂದಮಾತ್ರಕ್ಕೆ ತೀರಾ ಆರ್ಥಿಕ ಆಧಾರದ ಮೇಲೆ ಬದುಕಲೂ ಬಾರದು.

ಇದಕ್ಕೆ ಪಾಶ್ಚಾತ್ಯಪ್ರಭಾವವೇ ಕಾರಣ. ಪಾಶ್ಚಾತ್ಯರಲ್ಲೂ ನಾವು ತುಂಬ ಹಳೆಯ ಪರಂಪರೆಯ ದೇಶಗಳಿಂದ ಪ್ರಭಾವಿತರಾಗಿರಲಿಲ್ಲ. ಇಂಗ್ಲೆಂಡಿಗಿಂತ ನಾವು ಹೆಚ್ಚು ಪ್ರಭಾವಿತರಾದದ್ದು ಅಮೆರಿಕದಿಂದ. ಉದಾಹರಣೆಗೆ: ಇಂಗ್ಲೆಂಡಿನಲ್ಲಿ ಒಂದು ಕಟ್ಟಡ ‘ಲಿಸ್ಟೆಡ್’ ಆದ ಮೇಲೆ ಆ ಕಟ್ಟಡವನ್ನು ಸರ್ಕಾರವೇ ತೆಗೆಯಲಿಕ್ಕೆ ಕೊಡುವುದಿಲ್ಲ. ಆ ಎಚ್ಚರ ನಮ್ಮಲ್ಲಿ ಇಲ್ಲ. ನಮ್ಮಲ್ಲಿ ಸಾವಿರ ವರ್ಷ ಆದ ದೇವಸ್ಥಾನವನ್ನು ಯಾವುದೋ ಎಂಪಿ ಫಂಡ್ ಬಂದರೆ ಕಿತ್ತುಹಾಕಿಬಿಡುತ್ತೇವೆ. ಸಂಪ್ರದಾಯವನ್ನು ಅನುಸರಿಸುವಂಥ ಇಂಗ್ಲೆಂಡಿನಿಂದ ನಾವು ಪ್ರಭಾವಿತ ಆಗಲಿಲ್ಲ. ಇಂಡೋನೇಷಿಯಾ, ಫ್ರಾನ್ಸ್, ಜಪಾನ್ ಮುಂದುವರಿಸಿಕೊಂಡ ಕಲಾ ಆಸಕ್ತಿ, ಸಂಪ್ರದಾಯ ಪರಂಪರೆ ನಮಗೆ ಮಾದರಿಯಾಗಲಿಲ್ಲ. ರಶಿಯಾದಲ್ಲಿ ಮೊದಲ ಆದ್ಯತೆ ವಿಜ್ಞಾನಿಗಳಿಗಿದ್ದರೆ ಎರಡನೇ ಪ್ರಾಮುಖ್ಯ ಕಲಾವಿದರಿಗೆ ಇದೆ ಎಂದು ನಾನು ಕೇಳಿದ್ದೇನೆ. ಬೆಲರಿನಾ (Ballerina – ಮುಖ್ಯ ನೃತ್ಯಗಾರ್ತಿ) ರಸ್ತೆಯಲ್ಲಿ ಹೋಗುತ್ತಿದ್ದರೆ ಜನ ರಸ್ತೆಯಲ್ಲಿ ಹೂ ಹಿಡಿದು ನಿಲ್ಲುತ್ತಾರಂತೆ! ಇಂತಹ ದೇಶಗಳತ್ತ ನಮ್ಮ ಚಿತ್ತ ಇಲ್ಲ. ಎಲ್ಲ ಅಮೆರಿಕಾಮಯ.

ಆರ್ಥಿಕ ಕೇಂದ್ರಿತ ಅಭಿವೃದ್ಧಿಯು ಎಲ್ಲದರ ಮೇಲೂ ಪರಿಣಾಮ ಬೀರುತ್ತದೆ. ಯಕ್ಷಗಾನರಂಗದ ಮೇಲೂ ಸಹ ಪ್ರಭಾವ ಬೀರಿದೆ. ನಮ್ಮ ದೇಶದಲ್ಲಿ ಯಾವುದೇ ಹೆಚ್ಚಿನ ಆರ್ಥಿಕಹೊರೆ ಬಂದರೂ ನಮ್ಮ ಬಜೆಟ್‍ನಲ್ಲಿ ಮೊದಲು ಕತ್ತರಿಬೀಳುವುದು ಕಲೆಗಾಗಿ ಮೀಸಲಿಟ್ಟ ನಿಧಿಗೆ. ಸರ್ಕಾರ ಇದೊಂದು ವ್ಯರ್ಥ ಎಂದು ತಿಳಿದಂತಿದೆ.

ಕಲೆ ಸಾಹಿತ್ಯ ಸಂಸ್ಕೃತಿಯನ್ನು ನಿರ್ಲಕ್ಷಿಸಿದ ಪರಿಣಾಮದಿಂದಾಗಿಯೇ ಇಷ್ಟೆಲ್ಲ ಗೊಂದಲ ಸೃಷ್ಟಿಯಾಗುತ್ತಿರುವುದು ಎನ್ನುವುದು ನನ್ನ ಅನಿಸಿಕೆ. ಒಂದು ಬಜೆಟ್ ಮಾಡಿ ರೈತರಿಗೆ, ವ್ಯಾಪಾರಿಗಳಿಗೆ, ಸಾಮಾಜಿಕರಿಗೆ ಎಷ್ಟು ನೀಡಿದರೂ ಆತ್ಯಂತಿಕ ತೃಪ್ತಿ ಎಂದೂ ಆಗುವುದಿಲ್ಲ. ಅಧ್ಯಯನ ಮಾಡಿ ನೋಡಲಿ, ಅವರಿಗೆ ಸಂತೋಷ ತೃಪ್ತಿ ಕೊಡುವ ಸಾಧ್ಯತೆ ಇರುವುದು ಕಲೆಗೆ ಮಾತ್ರ. ಮಿಲಿಟರಿ ಬಲವನ್ನು ನಾವು ಹತ್ತುಪಟ್ಟು ಹೆಚ್ಚು ಮಾಡಿದರೆ ಹನ್ನೊಂದು ಪಟ್ಟು ಮಾಡುವವರು ಪಕ್ಕದಲ್ಲೇ ಇರುತ್ತಾರೆ. ಆದರೆ ಕಲೆ ಸಂಸ್ಕೃತಿ ನಮ್ಮಿಂದ ಅಷ್ಟೇ ಬಲವಾಗಿ ಮತ್ತೊಂದು ದೇಶ ಕಿತ್ತುಕೊಳ್ಳಲಿಕ್ಕೆ ಆಗದ ಸಂಪತ್ತು.

ನಮ್ಮ ದೇಶದ ಪ್ರಜೆಗಳಿಗೆ ಆಂತರ್ಯದಲ್ಲಿ ಪ್ರೇರಣೆ, ಬದುಕುವ ಆಸೆ, ಆಸಕ್ತಿ, ಸಂತೋಷ ತುಂಬುವುದೇ ಕಲೆಯಿಂದ. ಇದಕ್ಕೆ ಮೌಲ್ಯಮಾಪನ ಕಟ್ಟಿ ರೂಪಾಯಿಯಲ್ಲಿ ಎಣಿಸುವುದು ಕಷ್ಟ. ಕಾಡಿನ ಮರಗಳ ಗಾತ್ರವನ್ನು ನೋಡಿ ಮೌಲ್ಯ ಕಟ್ಟುವಂತೆ ಇದು. ಕಾಡು ನೀಡುವ ಆಮ್ಲಜನಕಕ್ಕೆ ಮೌಲ್ಯ ಕಟ್ಟಲಾದೀತೆ? ಕಲೆಯಿಂದ ಎಷ್ಟು ರೆವಿನ್ಯೂ ಬರುತ್ತದೆ ಎಂದು ಕೇಳಿದರೆ ಅದನ್ನು ಹೇಳಲಾಗುವುದಿಲ್ಲ.

ದೇವಸ್ಥಾನದಲ್ಲಿ ಗಂಟೆ ಬಾರಿಸುವುದರ ಜೊತೆಗೆ ಡೋಲು, ಮದ್ದಳೆ ಇತ್ಯಾದಿ ವಾದ್ಯವನ್ನೂ ಬಾರಿಸುತ್ತೇವೆ. ಹಾಲು ಹಣ್ಣಿನ ನೈವೇದ್ಯದಂತೆ ವಾದ್ಯಗಳೂ ಬೇಕಲ್ಲ ದೇವರಿಗೆ? ಮಂತ್ರಗಳೂ ಸ್ವರಯುಕ್ತವಾಗಿಯೇ ಇರಬೇಕಲ್ಲ; ಇವೆಲ್ಲವೂ ಕಲೆಯಿಂದಲೇ ಬಂತಲ್ಲವೆ? ಸಂಗೀತದಿಂದ ಹಸು ಹೆಚ್ಚು ಹಾಲು ಕೊಡುವುದು, ಕೆಲವು ರೋಗಗಳಿಗೆ ಸಂಗೀತಚಿಕಿತ್ಸೆ ನೀಡುವುದು ಇವೆಲ್ಲ ಸಂಶೋಧನೆಯಿಂದ ಸಿದ್ಧವಾಗಿದೆಯಲ್ಲ?

ಮಠಮಾನ್ಯಗಳು ಕೂಡ ಅವರದೊಂದು ದೊಡ್ಡ ಮೊತ್ತವನ್ನು ಕಲೆಗೆ ಮೀಸಲಿಟ್ಟರೂ ಒಳ್ಳೆಯದೇ. ಕಲಾವಿದ, ಕಲೆ ಉಳಿಯಬೇಕಲ್ಲ; ಮೊದಲೆಲ್ಲ ರಾಜ ಮಹಾರಾಜರು ಕಲೆಗೆ ಆಶ್ರಯ ನೀಡಿದರು. ಅದಕ್ಕಾಗಿಯೇ ಕಲೆ ಬದುಕಿತು. ಕಲೆ ಸಂಸ್ಕೃತಿಗೆ ತೆಗೆದಿರಿಸಿರುವ ಹಣ ಯಾವತ್ತೂ ವ್ಯರ್ಥ ಅಲ್ಲ. ಇಡೀ ದೇಶದಲ್ಲಿ ಎಲ್ಲಿಗೆ ಹೋದರೂ ಕಲೆ ಎದ್ದುಕಾಣುತ್ತದೆ. ಅದನ್ನು ಏಕೆ ಕೊಲ್ಲಬೇಕು? ಸಾವಿರ ವರ್ಷಗಳ ಹಿಂದಿನ ಕಲೆಯೆಲ್ಲ ನಮ್ಮ ಶಿಲ್ಪದಲ್ಲಿ ಕಾಣುತ್ತಿದೆಯಲ್ಲ; ಅದು ಕಲಾವಿದನಿಂದ, ಕಲೆಯಿಂದ ಬಂದದ್ದಲ್ಲವೇ? ಇಲ್ಲದಿದ್ದರೆ ನಮಗೆ ಯಾವ ಬೇರೂ ಇಲ್ಲ. ಧರ್ಮಕ್ಕೂ ಮೀರಿದಂಥದ್ದು ಕಲೆಯಲ್ಲಿ ಇದೆ. ಹಾಗಾಗಿಯೇ ಇದನ್ನು ‘ಪಂಚಮ ವೇದ’ ಎಂದು ನಮ್ಮ ಋಷಿಪರಂಪರೆ ಗುರುತಿಸಿದ್ದು. ಕಲೆಯಿಂದ ಸಮಾಜದಲ್ಲಿ ಘರ್ಷಣೆಯೂ ನಿವಾರಣೆಯಾಗುತ್ತದೆ. ಹಾಗಾಗಿ ಕಲೆ, ಸಂಸ್ಕೃತಿಗೆ ಪ್ರೋತ್ಸಾಹದ ಅಗತ್ಯ ತುಂಬಾ ಇದೆ. ಜನರಿಗಾಗಿಯೇ ರಂಗಭೂಮಿ ಇರುವುದಾದ್ದರಿಂದ ಸರಕಾರ ನೀಡುವ ಆಶ್ರಯ, ಸಹಾಯ ಪರೋಕ್ಷವಾಗಿ ಜನರಿಗಾಗಿ ಮಾಡುವ ಕೆಲಸವೇ ಆಗುತ್ತದಲ್ಲ?

ಪ್ರಶ್ನೆ: ಒಮ್ಮೆ ಕನ್ನಡದ ಹಿರಿಯ ಸಾಹಿತಿಗಳೊಬ್ಬರು “ಯಕ್ಷಗಾನರಂಗವು ಸರ್ಕಾರಕ್ಕಿಂತ ಹೆಚ್ಚಾಗಿ ಜನರಿಂದಲೇ ನಡೆಯುತ್ತಿರುವ ಕಾರಣದಿಂದಲೇ ಇದು ಅಬಾಧಿತವಾಗಿ ಸಾಗಿದೆ. ನಾಟಕರಂಗಕ್ಕೆ ಸರ್ಕಾರದ ಆಶ್ರಯ ಇರುವುದರಿಂದಾಗಿಯೇ ಅದು ನಶಿಸುವ ಹಂತಕ್ಕೆ ಬಂದಿದೆ. ಜನರೇ ಈ ರಂಗವನ್ನು ನಡೆಸುತ್ತಿರಲಿ” ಎಂದಿದ್ದರು. ಆ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಉತ್ತರ: ಆ ಹೇಳಿಕೆಯನ್ನು ನಾನು ಪೂರ್ತಿ ಒಪ್ಪಲು ಸಾಧ್ಯವಿಲ್ಲ. ಸರ್ಕಾರ ಹಣವನ್ನೇ ಕೊಡಬಾರದು ಎನ್ನುವುದಕ್ಕಿಂತ, ಹಣವನ್ನು ಕೊಟ್ಟು ಕಲೆಯನ್ನು ನಿಯಂತ್ರಿಸಬಾರದು ಎನ್ನುವ ನೆಲೆಯಲ್ಲಿ ನಾವು ಈ ಹೇಳಿಕೆಯನ್ನು ಗ್ರಹಿಸಬೇಕಾಗುತ್ತದೆ. ಸರ್ಕಾರವು ನಾವು ನಮ್ಮ ರಕ್ಷಣೆಗೆ ನಾವೇ ಮಾಡಿಕೊಂಡ ವ್ಯವಸ್ಥೆ. ಈಗ ಮದುವೆಗೆ ಕರಿಮಣಿ ಕೊಡುವಷ್ಟು, ತಟ್ಟೆಗೆ ಊಟ ಬಡಿಸಿ ಕೊಡುವಷ್ಟು ಸರ್ಕಾರ ನಮ್ಮ ಮನೆಯ ಮಧ್ಯಕೋಣೆಗೇ ಪ್ರವೇಶ ಮಾಡಿದ ಮೇಲೆ ಕಲಾಕ್ಷೇತ್ರಕ್ಕೆ ಮಾತ್ರ ಪ್ರವೇಶ ಮಾಡಬೇಡಿ ಎಂದರೆ ಹೇಗಾಗುತ್ತದೆ? ಕಲ್ಯಾಣಯೋಜನೆಗಳು ಬಂದಮೇಲಂತೂ ಸರ್ಕಾರ ಎಲ್ಲ ವ್ಯವಹಾರದಲ್ಲೂ ಕೈಹಾಕುತ್ತಿದೆ. ಅನಪೇಕ್ಷಿತವಾಗಿ ನಿಯಂತ್ರಣ ಮೀರಿ ಸರ್ಕಾರ ನಮ್ಮ ಮೇಲೆ ಇದೆ. ಬಡವರ ಉದ್ಧಾರ ಎನ್ನುವ ನೆಪದಲ್ಲಿ ಅಡುಗೆ ಸ್ನಾನದಾದಿಯಾಗಿ ದೇವಸ್ಥಾನದ ವರೆಗೆ ಸರ್ಕಾರ ಬಂದಿರುವಾಗ ಕಲೆಗೊಂದು ಬೇಡ ಎನ್ನಲಿಕ್ಕಾಗುತ್ತದೆಯೇ?

ಇಲ್ಲಿ ಪ್ರೋತ್ಸಾಹ ಕೊಡಲಿ ಎಂದರೆ ಕಲೆಯನ್ನು ನಿಯಂತ್ರಿಸಲಿ ಎಂದರ್ಥವಲ್ಲ. ಈವತ್ತು ಸರ್ಕಾರ, ಕಂಪನಿಗಳು ಎಲ್ಲದಕ್ಕೂ ನಮ್ಮನ್ನು ನಿಯಂತ್ರಿಸುತ್ತಿರುವ ಸನ್ನಿವೇಶದಲ್ಲಿ ನಾವಿದ್ದೇವೆ. ಸರ್ಕಾರ ಎಂದಲ್ಲ, ಸಾಮಾಜಿಕ ಪರಿಸ್ಥಿತಿಯೇ ಹಾಗಿದೆ. ದುಡ್ಡಿಲ್ಲದಿದ್ದವರು ಕೆಲವು ಕ್ಷೇತ್ರದ ಅವೆನ್ಯೂದಿಂದ ಹೊರಗಡೆಯೇ ಹೋಗಿಬಿಟ್ಟಿದ್ದಾರೆ; ಹೊರಗೆ ಹೋಗುವ ಸನ್ನಿವೇಶವೇ ಇದೆ.

ಕಲೆಯ ನಿಯಂತ್ರಣ ಯಾರ ಕೈಯಲ್ಲೂ ಇರಕೂಡದು. ಇದನ್ನು ಸಮಾಜದ ಸ್ವಾಸ್ಥ್ಯಕ್ಕಾಗಿ ಹೇಳುತ್ತಿದ್ದೇನೆ. ಕಲಾವಿದ ಸ್ವತಂತ್ರವಾದ ಮನಃಸ್ಥಿತಿಯಿಂದ ಸೃಷ್ಟಿಶೀಲನಾಗಿ ಬೆಳೆಯಬೇಕು ಎಂದಾದರೆ ನಿರ್ಮಲವಾದ ವಾತಾವರಣದಲ್ಲಿ ಅವನಿಗೆ ಅವಕಾಶ ನೀಡಬೇಕು. ಗಿಡಕ್ಕೆ ಈವತ್ತು ಗೊಬ್ಬರ ನೀರು ಹಾಕಿದರೂ ನಾಲ್ಕೆಂಟು ವರುಷದ ನಂತರವೇ ಅದು ಹಣ್ಣು ಕೊಡುವುದು; ಆದರೆ ಮುಂದೆ ಅದು ನೂರು ವರ್ಷ ಫಲ ಕೊಡುತ್ತದೆ. ಕಲೆಯೂ ಹಾಗೆಯೆ. ಕಲೆಯಿಂದ ತುಂಬ ಪ್ರಯೋಜನ ಇರುವುದರಿಂದ ನಿವ್ರ್ಯಾಮೋಹದಿಂದ, ನಿರಪೇಕ್ಷೆಯಿಂದ, ತಟಸ್ಥವಾಗಿ ಸರ್ಕಾರ ಹಾಗೂ ಉಳಿದೆಲ್ಲ ಸಂಸ್ಥೆಗಳು ಪ್ರೋತ್ಸಾಹ ಕೊಡಬೇಕು; ಕಲಾವಿದ ಈ ಪ್ರೋತ್ಸಾಹವನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು; ಆಗ ಅದರಿಂದ ಸಮಾಜಕ್ಕೂ ಒಳಿತಾಗುತ್ತದೆ.

ರಂಗಭೂಮಿ ದೊಡ್ಡದು. ಅದರ ವಿಶಾಲತೆ, ಗಹನತೆ, ಸೃಷ್ಠಿಶೀಲಶಕ್ತಿಯನ್ನು ಉಜ್ಜ್ವಲಗೊಳಿಸುವ ಪ್ರಯತ್ನಗಳೇ ನಮ್ಮ ಸಂಸ್ಕಾರ ಸಂಸ್ಕೃತಿಯ ಮೊದಲ ಹೆಜ್ಜೆ. ಜಗದ ಬಂಧೀಗ್ರಹವ ತೊಡೆವ ಮೆಟ್ಟಿಲು ಎಂದು ನನ್ನ ಭಾವನೆ.

ಪ್ರಶ್ನೆ: ಕಲಾವಿದರಿಗೆ ಇರಬೇಕಾದ ಸಾಮಾಜಿಕ ಬದ್ಧತೆಯೇನು? ಹಿರಿಯ ತಲೆಮಾರಿನ ಕಲಾವಿದರನ್ನು ಅನುಕರಿಸುವ ಮತ್ತು ಅನುಸರಿಸುವ ಬಗ್ಗೆ ಕಿರಿಯ ತಲೆಮಾರಿನವರಿಗೆ ನಿಮ್ಮ ಸಲಹೆಗಳೇನು?

ಉತ್ತರ: ಸಮಾಜ ಯಾವ ಸ್ಥಿತಿಯಲ್ಲಿದೆ ಎಂದು ಅರಿಯುವುದು, ಮತ್ತೆ ಅದಕ್ಕೆ ಸ್ಪಂದಿಸುವುದು, ಮಿಡಿಯಬೇಕಾದದ್ದು ಕಲಾವಿದನಿಗೆ ಇರುವ ಸಾಮಾಜಿಕ ಬದ್ಧತೆ. ಸಮಾಜ ನಮ್ಮಿಂದ ಏನು ನಿರೀಕ್ಷೆ ಮಾಡುತ್ತದೆ, ಸಂಸ್ಕೃತಿ ಯಾವ ಸನ್ನಿವೇಶದಲ್ಲಿದೆ, ಅದರಲ್ಲಿಯ ಒಳಿತು ಕೆಡುಕುಗಳನ್ನು ಗ್ರಹಿಸಬೇಕು. ಸ್ಪಂದನೆ ಹೆಚ್ಚು ಇದ್ದಷ್ಟೂ ಹೆಚ್ಚು ಒಳ್ಳೆಯ ಕಲಾವಿದನಾಗುತ್ತಾನೆ. ಕಲಾತ್ಮಕ ವಸ್ತುವನ್ನು ಅವನು ಬೇರೆ ಎಲ್ಲಿಂದಲೋ ತಂದು ರಂಗಸ್ಥಳದಲ್ಲಿ ಕೊಡುವುದಲ್ಲ; ಬದಲಾಗಿ ಸಮಾಜದಲ್ಲಿನ ಸಂಗತಿಗಳನ್ನೇ ರಂಗಸ್ಥಳದಲ್ಲಿ ಕಲಾತ್ಮಕವಾಗಿ ಹೇಳುವುದು. ತ್ರೈಲೋಕ್ಯ ಭಾವಾನುಕೀರ್ತನಂ ಎಂದಂತೆ. ನಿಜಜೀವನದ ಅನುಭವಗಳನ್ನೇ ಅವನು ಹೇಳುವುದು. ಸಮಾಜದ, ಸಂಸಾರದ ಒಳಗಡೆ ಆತ ಎಷ್ಟು ಹೆಚ್ಚು ಸೇರಿಕೊಳ್ಳುತ್ತಾನೋ ಅಷ್ಟು ಅವನ ಅಭಿವ್ಯಕ್ತಿ ಪಕ್ವವಾಗುತ್ತದೆ.

ನಮ್ಮ ಅಜ್ಜ ಶಿವರಾಮ ಹೆಗಡೆಯವರಿಗೆ ಸಮಾಜದ ಎಲ್ಲ ಸಂಗತಿಗಳೂ ಮಹತ್ತ್ವದ್ದಾಗಿದ್ದವು. ಯಾರದೋ ಮನೆಯ ಮದುವೆ, ಜಮೀನು ಮಾಡಿಸುವುದು, ಕಾಯಿಲೆಬಿದ್ದರೆ ನೆರವಾಗುವುದು, ಕಷ್ಟದಲ್ಲಿ ಸಾಂತ್ವನ ಹೇಳುವುದು ಎಲ್ಲವೂ ಅವರಲ್ಲಿ ಮತ್ತೆ ತಂದೆಯವರಲ್ಲಿ ಬಹಳ ತೀವ್ರವಾಗಿ ಸದಾ ಇತ್ತು. ಇದರಿಂದ ಹುಟ್ಟುವ ಬದುಕಿನ ವಾಸ್ತವತೆಯ ಆಳ ಅರಿವು ಕಲಾಭಿವ್ಯಕ್ತಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಸಮಾಜದ ಎಲ್ಲ ಸಂವೇದನೆಗಳಿಗೆ ಕಲಾವಿದ ಒದಗಲೇಬೇಕು. ದೂರದಿಂದಲ್ಲ, ಸಕ್ರಿಯವಾಗಿ. ಆಗ ಸಮಾಜವೂ ಸಹಜವಾಗಿ ಅವನ ಬೆಂಬಲಕ್ಕೆ ಬರುತ್ತದೆ. ಇದರ ಜೊತೆಗೆ ಕಲಾವಿದ ‘ಒಂದು ಏಕಾಂತ ಸಿದ್ಧಿ’ ಎಂದು ಮಾಡಿಕೊಳ್ಳಬೇಕಾಗುತ್ತದೆ. ಸಮಾಜದ ಒಳಗೆ ಇದ್ದು ತನ್ನೊಳಗಿನ ಕಲಾವಿದನನ್ನು ಜೀವಂತಗೊಳಿಸುವುದಕ್ಕೆ ಅವನಿಗೆ ಬೇಕಾದಂಥ ನಿರ್ವಾತ ಸ್ಥಿತಿ ಇದೆಯಲ್ಲ, ಅದನ್ನು ಆತ ಸೃಷ್ಟಿಸಿಕೊಳ್ಳಬೇಕಾಗುತ್ತದೆ. ರಂಗಭೂಮಿ ಸಮಾಜದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಕಲಾವಿದ ನಂಬಿಕೊಂಡಿದ್ದರಿಂದ ಅವನು ಏನೇ ರಂಗಸ್ಥಳದಲ್ಲಿ ಮಾಡಲಿ ಅದು ಸಮಾಜಕ್ಕೆ ನಾವು ಕೊಡುವ ಸಂದೇಶವಾದ್ದರಿಂದ ಬಹಳ ಎಚ್ಚರಿಕೆ ವಹಿಸಬೇಕು.

ಉದಾಹರಣೆಗೆ, ನಮ್ಮ ಮೇಳದಲ್ಲಿ ತಂದೆಯವರು ಯಾವಾಗಲೂ ಕಲಾವಿದರಿಗೆ ಹೇಳುತ್ತಿದ್ದದ್ದು, ‘ನೀವು ಯಾವುದೋ ಭಾಷೆಯ ವಿಷಯದಲ್ಲಿ, ಜಾತಿಯ ವಿಷಯದಲ್ಲಿ ನಿಂದನೆಗಳು, ಅಂಗವಿಕಲರನ್ನು ತೋರಿಸಿ ಹಾಸ್ಯ ಮಾಡುವುದು, ವಿಧವೆ, ಬಂಜೆ ಎಂದೆಲ್ಲ ಯಾರನ್ನೋ ಕರೆಯುವುದು, ಯಾವುದೋ ಜಾತಿಯ ಹೆಸರು ಹೇಳುವುದು, ಇದನ್ನು ತರಬೇಡಿ’ ಎಂದು. ಯಕ್ಷಗಾನದಲ್ಲಿ ಎಷ್ಟೋ ಕಲಾವಿದರಿಗೆ ಅದು ಗೊತ್ತಿರುವುದಿಲ್ಲ; ತರುವುದಿದ್ದರೂ ಹೇಗೆ ತರಬೇಕು ಎನ್ನುವುದಕ್ಕೆ ಮಹತ್ತ್ವವಿರುತ್ತದೆ. ಅಂದರೆ ಕಾಲಕಾಲಕ್ಕೆ ಸಮಾಜದ ಮುನ್ನಡೆಯನ್ನು ನೋಡಿಕೊಂಡು ಹೋಗಬೇಕು. ನಮ್ಮ ಮೇಳದಲ್ಲಿ ಕಾರ್ತವೀರ್ಯಾರ್ಜುನ ಪ್ರಸಂಗದಲ್ಲಿ ಒಬ್ಬ ಮೂಗ ಬರುತ್ತಿದ್ದ. ಹಾಸ್ಯದ ಪಾತ್ರವಾಗಿತ್ತು. ಈಗ ಅದನ್ನು ಮಾಡುವುದಿಲ್ಲ. ಸರಿ ಇದ್ದವರಲ್ಲೇ ಹಾಸ್ಯ ಸೃಷ್ಟಿಸಬಹುದಲ್ಲ? ಜೀವನದಲ್ಲಿ ಯಾರಿಗೆ ಏನೂ ಆಗಬಹುದು. ಅಂಗವೈಕಲ್ಯ ರಂಗಭೂಮಿಯ ಲೇವಡಿಯ ವಸ್ತು ಆಗಬಾರದು. ಆಟಕ್ಕೆ ಬಂದವರಲ್ಲಿ ಯಾರೋ ಗಂಡನನ್ನು ಕಳೆದುಕೊಂಡಿರಬಹುದು, ಮಕ್ಕಳಿಲ್ಲದವರು ಇರಬಹುದು. ರಂಗದಲ್ಲಿ ನಡೆಯುವ ಭಾಷಾ ಪ್ರಯೋಗ, ದೃಶ್ಯಗಳಿಂದ ಅನ್ಯರಿಗೆ ನೋವಾಗಬಾರದು ಎಂಬ ಎಚ್ಚರ ಅಗತ್ಯ.

ಜಾತಿವ್ಯವಸ್ಥೆಯೂ ಅಷ್ಟೆ; ನಾವು ಅದನ್ನು ಪೋಷಿಸಲಿಕ್ಕೆ ಇರುವವರಲ್ಲ. ಏನಿದ್ದರೂ ಅಲ್ಲಿ ಸಾಮರಸ್ಯ ಮತ್ತು ಮನಸ್ಸಿನ ಭಾವನೆಗಳನ್ನು ಅರ್ಥವಿಸಬೇಕು. ಪುರಾಣದ ಕಥೆಗಳನ್ನು  ಇಟ್ಟುಕೊಂಡು ಅತ್ಯಂತ ಮೃದುವಾಗಿ ಸತ್ಯವನ್ನು ಹೇಳುವಂಥ ಮಾರ್ಗಗಳು ಇವೆ. ರಂಗಸ್ಥಳದಲ್ಲಿ ನಮ್ಮ ನುಡಿ ನಡೆ ಸಂಸ್ಕೃತಿಗಳ ವಿಷಯದಲ್ಲಿ ಯಾವುದೇ ಅಧಃಪತನ ಹೊಂದುವಂಥ ಸಂಗತಿಗಳನ್ನು ತೋರಿಸಬಾರದು. ಯಾವುದೋ ಒಂದು ಸಂಸ್ಕೃತಿಯನ್ನು ಹೀಯಾಳಿಸುವ ಸಂಗತಿಗಳಿದ್ದರೆ ಅದು ಕಲಾವಿದನಿಗೆ ಸಂಬಂಧಪಟ್ಟ ವಿಶ್ಲೇಷಣೆ ಅಲ್ಲವೇ ಅಲ್ಲ. ಎಲ್ಲೋ ಆದಂಥ ಧರಣಿಗಳು, ಹೋರಾಟಗಳು ಇಂಥವೆಲ್ಲ ತಾತ್ಕಾಲಿಕ ಸಂಗತಿಗಳೇ ವಿನಾ ನೇರವಾಗಿ ರಂಗಭೂಮಿಯ ವಿಷಯ ಅಲ್ಲ. ಎಲ್ಲಕ್ಕಿಂತ ಅದು ಶಿವನ ತಾಂಡವ. ಉಮೆಯ ಲಾಸ್ಯ.

ಇಡೀ ದೇಶದಲ್ಲಿ ಎಲ್ಲಿಗೆ ಹೋದರೂ ಕಲೆ ಎದ್ದುಕಾಣುತ್ತದೆ. ಅದನ್ನು ಏಕೆ ಕೊಲ್ಲಬೇಕು? ಸಾವಿರ ವರ್ಷಗಳ ಹಿಂದಿನ ಕಲೆಯೆಲ್ಲ ನಮ್ಮ ಶಿಲ್ಪದಲ್ಲಿ ಕಾಣುತ್ತಿದೆಯಲ್ಲ; ಅದು ಕಲಾವಿದನಿಂದ , ಕಲೆಯಿಂದ ಬಂದದ್ದಲ್ಲವೇ? ಇಲ್ಲದಿದ್ದರೆ ನಮಗೆ ಯಾವ ಬೇರೂ ಇಲ್ಲ. ಧರ್ಮಕ್ಕೂ ಮೀರಿದಂಥದ್ದು ಕಲೆಯಲ್ಲಿ ಇದೆ. ಹಾಗಾಗಿಯೇ ಇದನ್ನು ‘ಪಂಚಮವೇದ’ ಎಂದು ನಮ್ಮ ಋಷಿಪರಂಪರೆ ಗುರುತಿಸಿದ್ದು. ಕಲೆಯಿಂದ ಸಮಾಜದಲ್ಲಿ ಘರ್ಷಣೆಯೂ ನಿವಾರಣೆಯಾಗುತ್ತದೆ. ಹಾಗಾಗಿ ಕಲೆ , ಸಂಸ್ಕೃತಿಗೆ ಪ್ರೋತ್ಸಾಹದ ಅಗತ್ಯ ತುಂಬಾ ಇದೆ.

“ಹಿರಿಯ ಕಲಾವಿದರ ಮಾರ್ಗದರ್ಶನದ ಅಗತ್ಯವಿದೆ”

ಪ್ರಶ್ನೆ: ಹಿರಿಯ ಕಲಾವಿದರು ಒಂದು ಆಕ್ಷೇಪ ಮಾಡುತ್ತಾರೆ: ‘ಹೊಸಬರು ಬಹುಬೇಗ ಪ್ರಸಿದ್ಧಿಗೆ ಬರಲು ಅಪೇಕ್ಷೆ ಪಡುತ್ತಾರೆ. ಹಿರಿಯ ಸಾಧಕರ ಸಾಧನೆಯನ್ನು ಮಾತ್ರ ಗಮನಿಸುವುದಿಲ್ಲ; ಹೇಗೆ ಸಾಧನೆ ಮಾಡಬೇಕು ಎಂದೂ ಅರಿತುಕೊಳ್ಳುವುದಿಲ್ಲ.’

ಉತ್ತರ: ಈಗ ಎಲ್ಲವೂ ಮಾಧ್ಯಮದಲ್ಲಿ ಸರಳವಾಗಿ ಸುಲಭವಾಗಿ ಪ್ರಚಾರ ಆಗುವುದರಿಂದ ಬೇಕೋ ಬೇಡವೋ ಪ್ರಚಾರ ಆಗಿಹೋಗುತ್ತದೆ. ಈವತ್ತು ಇಲ್ಲಿ ಒಂದು ವೇಷ ಮಾಡಿದ ಕಲಾವಿದ ಇಡೀ ಕರ್ನಾಟಕದಲ್ಲಿ ಸುದ್ದಿ ಆಗುತ್ತಾನೆ. ಮಾಧ್ಯಮವೇ ಆ ತರಹ ಇರುವುದು ಅದಕ್ಕೆ ಕಾರಣ. ಜೊತೆಗೆ ಕಲಾವಿದರಲ್ಲಿ ಆ ಚಪಲತೆ ಇರುವುದನ್ನೂ ಅಲ್ಲಗಳೆಯಲಾಗುವುದಿಲ್ಲ.

ನಮ್ಮಲ್ಲಿ ಅಂದು ಬಹಳಷ್ಟು ಹಿರಿಯ ಕಲಾವಿದರು ರಂಗಭೂಮಿಯಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು, ಸ್ಥಾಪಿಸಿಕೊಳ್ಳಲು ಬಹಳ ವರ್ಷ ಕಷ್ಟಪಡಬೇಕಿತ್ತು. ಅದು ಅಷ್ಟು ಸುಲಭದಲ್ಲಿ ದಕ್ಕುವಂಥದ್ದಲ್ಲ. ಸಾಧನೆಯ ಮೂಲಕವೇ ಸುದ್ದಿ ಆಗಬೇಕು.

ಕಲಾವಿದರು ವೇಷಕಟ್ಟಿದ ತಕ್ಷಣವೇ ಹೆಸರು ಬರಲಿಕ್ಕೆ ಸಾಧ್ಯವಿಲ್ಲ. ಪಾತ್ರಸೃಷ್ಟಿ ಆಗಬೇಕು, ಪಾತ್ರಕ್ಕೆ ಒಂದು ಆಯಾಮ ಕೊಡಬೇಕು; ಕೇವಲ ಒಂದು ಪಾತ್ರ ಅಲ್ಲ, ಕಲಾವಿದ ಬೆಳೆಯುವುದಕ್ಕೆ ಹೆಚ್ಚು ಸಮಯ ಬೇಕೇಬೇಕು. ಇದು ನಿರಂತರ ಬೆಳವಣಿಗೆಯ ಕ್ರಿಯೆ.

ಅವಸರದಲ್ಲಿ ಪ್ರಚಾರ ಪಡೆಯುವುದು ಭವಿಷ್ಯದಲ್ಲಿ ದೊಡ್ಡ ಹಾನಿಯನ್ನು ತರುತ್ತದೆ. ಏನು ಬೇಕೋ ಅದು ಬೇಗ ಸಿಗುತ್ತಿದ್ದಂತೆಯೇ ಮುಂದೆ ತಾನು ಮಾಡಿದ್ದೇ ಸರಿ ಎನ್ನುವುದಲ್ಲದೆ, ರಂಗಸ್ಥಳದಲ್ಲಿ ಪಾತ್ರಸೃಷ್ಟಿಗಾಗಿ ಹಿಂದಿನ ಕಲಾವಿದರತ್ತ ನೋಡುವ ರೂಢಿಯನ್ನೆ ಬಿಟ್ಟುಬಿಡುತ್ತಾರೆ.

ಯಕ್ಷಗಾನದಲ್ಲಿ ಗುರುಕುಲವೆನ್ನುವ ಪದ್ಧತಿಯೇ ನಷ್ಟವಾಗಿ ಹೋಗಿದೆ. ದೊಡ್ಡ ಸಮಸ್ಯೆ ಇದು. ಗುರು ಯಾರು ಎಂದು ಕಲಾವಿದ ಹೇಳುವುದೇ ಇಲ್ಲ. ತಾನೇ ಸ್ವಯಂಭೂ ಎಂದು ತಿಳಿದುಕೊಂಡಿರುತ್ತಾರೆ. ತಾಸುಗಟ್ಟಲೆ ಕುಣಿಯುವುದೆಲ್ಲ ಈ ಕಾರಣಕ್ಕಾಗಿ. ಯಾವ ಹಿನ್ನೆಲೆ, ಹಿಂದಿನ ಪ್ರಭಾವವೂ ಇಲ್ಲ. ಮುಂದೆ ಇನ್ನೊಬ್ಬ ಬಂದು ಅವನಿಗಿಂತ ಐದು ನಿಮಿಷ ಹೆಚ್ಚು ಕುಣಿಯುತ್ತಾನೆ. ಕಲೆಗೆ ಪರಂಪರೆಯ ಗುರು ಎನ್ನುವುದಿರದಿರುವುದು ಬಹುದೊಡ್ಡ ಸಮಸ್ಯೆ. ಅತಿಯಾದ ಪ್ರದರ್ಶನಾವಕಾಶ ಸಾಧನೆಗೆ ಅವಕಾಶ ಕೊಡದು. ಸಣ್ಣದಾಗಿರುವುದನ್ನೇ ವೈಭವೀಕರಿಸುವುದು ಮತ್ತು ಅನೇಕ ವರ್ಷ ರಂಗದಲ್ಲಿ ಇದ್ದವರ ಅನುಭವವನ್ನು ಪಡೆದುಕೊಳ್ಳುವತ್ತ ನಮ್ಮ ಗಮನ ಇಲ್ಲದಿರುವುದು ಇದೆಲ್ಲ ನಮ್ಮೆಲ್ಲರ ಶಕ್ತಿಯನ್ನು ಕುಂದಿಸಿದೆ.

ಕ್ರೀಡಾರಂಗದಲ್ಲಿ ಒಂದು ಹಂತದ ದೈಹಿಕ ಶಕ್ತಿಗುಂದಿದವನು ಕಡ್ಡಾಯವಾಗಿ ಶಿಕ್ಷಕನಾಗಿ ಅಥವಾ ಆ ಕ್ಷೇತ್ರದಲ್ಲಿ ಇನ್ನಿತರ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾನೆ. ಆದರೆ ಯಕ್ಷಗಾನರಂಗದಲ್ಲಿ ಒಮ್ಮೆ ಪ್ರದರ್ಶನ ನೀಡುವವನೆಂದಾದರೆ ಆತ ಆಟ ಕುಣಿಯುತ್ತ ಹೋಗುವುದಷ್ಟೆ. ಕೋಚಿಂಗ್ ವ್ಯವಸ್ಥೆಯೇ ಇಲ್ಲ. ಕೆಲವು ಹಿರಿಯ ಕಲಾವಿದರಿಂದ ಮಾರ್ಗದರ್ಶನದ ಅಗತ್ಯ ಸದಾ ಇರುತ್ತದೆ. ಹೀಗೆ  ಕಲಿಯುವುದಕ್ಕೆ ನಾವು ಅವಕಾಶ ಮಾಡಿಕೊಡುವುದಿಲ್ಲ, ಪ್ರೇರಿಸುವುದಿಲ್ಲ, ವ್ಯವಸ್ಥೆಯನ್ನೂ ಮಾಡಿಕೊಡುವುದಿಲ್ಲ.

ಇದರಿಂದ ಗುರುಪರಂಪರೆ ನಷ್ಟವಾಗುತ್ತದೆ. ಕಲಾವಿದರಿಗೆ ದೈಹಿಕ ಕ್ಷಮತೆ ಕಡಮೆಯಾಗುತ್ತಿದ್ದಂತೆಯೇ ಅವರಿಗೆ ಶಿಷ್ಯರನ್ನು ತಯಾರು ಮಾಡಲಿಕ್ಕೆ ಒಂದಷ್ಟು ಕಾಲವನ್ನು ಸಮಾಜವೇ ನೀಡಬೇಕು. ಅಂಥವರಿಗೆ ರಂಗಸ್ಥಳದಲ್ಲಿ ನೀಡುವಷ್ಟೇ ಗೌರವವನ್ನು ನೀಡಬೇಕು. ಆಗ ಗುರುಪರಂಪರೆ ಜೀವಂತವಾಗುತ್ತದೆ; ಅಪಸವ್ಯಗಳೆಲ್ಲ ಇಲ್ಲವಾಗುತ್ತದೆ. ನಾವು ಗುರುಪರಂಪರೆಯನ್ನು ಮಾತ್ರ ಬೆಂಬಲಿಸುತ್ತೇವೆ, ಬೇರೆ ಯಾವುದನ್ನೂ ಬೆಂಬಲಿಸುವುದಿಲ್ಲ ಎನ್ನುವ ಗಟ್ಟಿ ನಿಲವು, ತಿಳಿವಳಿಕೆಯು ಪ್ರೇಕ್ಷಕರಲ್ಲಿ ಬರಬೇಕು. ಕಲಾವಿದನಲ್ಲಿ ‘ನಿಮ್ಮ ಪರಂಪರೆ ಏನು, ಎಲ್ಲಿ ಕಲಿತೆ?’ ಎಂದೆಲ್ಲ ಕೇಳುವಂತಾಗಬೇಕು. ಆಗ ಇದೆಲ್ಲ ಒಂದು ಹಾದಿಗೆ ಬರುತ್ತದೆ. ಇಲ್ಲದಿದ್ದರೆ ಯಾರಿಗೆ ಯಾರೋ ಏನೋ.

ಒಂದು ಪ್ರಸಂಗ ಬರೆದಿದ್ದಾರೆ, ಕಥೆ ಕೊಟ್ಟಿದ್ದಾರೆ ಎಂದಾಕ್ಷಣಕ್ಕೆ ಮಾಧ್ಯಮಗಳು ಸಹ ಅರ್ಧಪುಟದ ಲೇಖನ ಬರೆಯುವುದು; ಹೊಗಳಿ ಪುಟಗಟ್ಟಲೆ ಜಾಹೀರಾತು ನೀಡುವುದು, ಇವೆಲ್ಲ ಅತಿಯಾದದ್ದರಿಂದ ಸಾಧನೆಗೆ ಅವಕಾಶ ಕಡಮೆಯಾಗುತ್ತ ಹೋಗುತ್ತದೆ.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ