ಸಂಗೀತದ ಆರಂಭ ಎಲ್ಲಿಂದ ಎನ್ನುವ ಪ್ರಶ್ನೆಯನ್ನು ನಾವು ನಮ್ಮ ಮುಂದೆ ಇರಿಸಿಕೊಂಡರೆ: ನಮ್ಮ ಪುರಾಣಗಳ ಪ್ರಕಾರ ಶ್ರೀಕೃಷ್ಣ ದ್ವಾಪರಯುಗದಲ್ಲಿದ್ದ ಎಂಬುದೊಂದು ಕಲ್ಪನೆ. ಸುಮಾರು 5,050 ವರ್ಷಗಳ ಹಿಂದೆ ಕೃಷ್ಣ ಜನಿಸಿದ ಎಂದು ಹೇಳುತ್ತಾರೆ. ಹೀಗೆ 5,000 ವರ್ಷಗಳ ಹಿಂದೆ ಇದ್ದ ಕೃಷ್ಣ ಕೊಳಲು ಊದುತ್ತಿದ್ದ. ಕೊಳಲು ಊದುತ್ತಿದ್ದ ಎಂದರೆ ಹೇಗೆ? ಸುಮ್ಮನೆ ಊದುತ್ತಿದ್ದನಾ ಅಥವಾ ರಾಗಸಹಿತವಾಗಿ ಊದುತ್ತಿದ್ದನಾ? ಕೊಳಲಿನ ನಾದ, ಅಂದರೆ ಸಂಗೀತದ ರಾಗದೊಂದಿಗೆ ಊದುತ್ತಿದ್ದ ಅಂದುಕೊಳ್ಳಬಹುದು. ಅಂದರೆ ಆ ಕಾಲದಿಂದ ಸಂಗೀತ, ನಾಟ್ಯ, ನೃತ್ಯ, ಗಂಧರ್ವರು, ಯಕ್ಷರು ಇದೆಲ್ಲ ಬಂದಂಥದ್ದು ಎಂದು ತಿಳಿದುಕೊಳ್ಳಬಹುದು. ಜಗತ್ತಿನ ಬೇರೆ ಬೇರೆ ಕಡೆ ಅದೇ ರೀತಿ ಆಗಿರಬೇಕು.
ಇನ್ನು ಸಂಗೀತದ ಮೂಲವನ್ನು ನೋಡುವುದಾದರೆ ಅದು ಪ್ರಕೃತಿಯಿಂದ ಬಂದದ್ದು; ಅದು ಪ್ರಕೃತಿಯ ನಾದ. ಹಕ್ಕಿಗಳ ಸ್ವರ, ಗಾಳಿಯ ಒಂದು ಸಣ್ಣ ಸ್ವರ, ನದಿಯ ಮೊರೆತ, ಬಿದಿರಿನ ಮೆಳೆಗಳ ಒಂದು ಶಬ್ದ – ಇವೆಲ್ಲ ಮನುಷ್ಯನ ಮನಸ್ಸಿನ ಮೇಲೆ ಪರಿಣಾಮ ಬೀರಿರಬೇಕು. ಆಗ ಅವನು ಕೂಡ ಒಂದು ನಾದವನ್ನು ಹೊರಡಿಸಲು ಶುರು ಮಾಡಿರಬೇಕು. ಅದೇ ಸಂಗೀತ. ಆ ಧ್ವನಿಯನ್ನು, ನಾದವನ್ನು ಒಂದು ವ್ಯವಸ್ಥಿತ ರೀತಿಯಲ್ಲಿ (ಆರ್ಡರ್ನಲ್ಲಿ) ಜೋಡಿಸಿದಾಗ ಒಂದು ಹಾಡಾಗಿ ಪರಿವರ್ತನೆಯಾಗುತ್ತದೆ. ಅಲ್ಲಿ ಒಂದು ನಾದವಿಶೇಷ, ಒಂದು ಟ್ಯೂನ್ (ಧಾಟಿ) ಇರುತ್ತದೆ.
ಅದೇ ರೀತಿ ನಮ್ಮ ವೇದಗಳಲ್ಲಿ ಸಂಗೀತವಿದೆ: ಮುಖ್ಯವಾಗಿ ಸಾಮವೇದದಲ್ಲಿ. ಅಂದರೆ ಅತ್ಯಂತ ಪ್ರಾಚೀನ ಕಾಲದಿಂದ ಸಂಗೀತದೊಂದಿಗೆ ಮನುಷ್ಯನ ಸಂಬಂಧವಿದೆ. ಆದಿಮಾನವನ ಕಾಲದಿಂದ ಧ್ವನಿ ಅಥವಾ ಶಬ್ದದೊಂದಿಗೆ (ಸೌಂಡ್) ಅವನ ಸಂಬಂಧ ಏರ್ಪಟ್ಟಿರಬೇಕು. ಅವನು ಸುಸಂಸ್ಕೃತ ವ್ಯಕ್ತಿಯಾಗಿ, ಅಕ್ಷರಾಭ್ಯಾಸ ಮುಂತಾದವು ಆರಂಭವಾದಾಗಿನಿಂದ ಸಂಗೀತವು ಅವನ ಜೊತೆಜೊತೆಗೇ ಇತ್ತು. ಇದು ಉಗಮ; ಪ್ರಕೃತಿಯಿಂದ ಬಂದದ್ದು. ಆದರೆ ಸಂಗೀತವನ್ನು ಸೃಷ್ಟಿಮಾಡಲು ಎಲ್ಲರಿಗೂ ಸಾಧ್ಯವಿಲ್ಲ. ಕೆಲವರು ಅದನ್ನು ಸೃಷ್ಟಿಸಿದರೆ, ಹೆಚ್ಚಿನವರು ಅದನ್ನು ಅನುಭವಿಸಿ ಆನಂದಿಸಬಲ್ಲವರಾಗಿರುತ್ತಾರೆ. ನನ್ನ ಬಾಲ್ಯದಲ್ಲಿ ಕೂಡ ನಾನು ಈ ಹಾಡುಗಳನ್ನು ಕೇಳುತ್ತ ಒಂದು ರೀತಿ ಭಾವಪರವಶನಾಗುತ್ತಿದ್ದೆ. ಸಿನೆಮಾ ಹಾಡುಗಳಾಗಲಿ, ಬೇರೆ ಗಾಯನವಾಗಲಿ ಎಲ್ಲಿ ಏನು ಸಂಗೀತವನ್ನು ಕೇಳಿದರೂ ತುಂಬ ಅನುಭವಿಸುತ್ತಿದ್ದೆ; ಖುಷಿ ಪಡುತ್ತಿದ್ದೆ.
ರಂಗಭೂಮಿಯೇ ಮೂಲ
ನಮ್ಮ ಚಲನಚಿತ್ರ ಸಂಗೀತ ಅಥವಾ ಸಿನೆಮಾ ಸಂಗೀತದ ಬಗ್ಗೆ ಹೇಳುವುದಾದರೆ, ನಾಟಕ ಅಥವಾ ರಂಗಭೂಮಿಯೇ ಅದರ ಮೂಲ ಎನ್ನುವ ತೀರ್ಮಾನಕ್ಕೆ ಬರಬೇಕಾಗುತ್ತದೆ. ಕಂಪೆನಿ ನಾಟಕಗಳು ಮತ್ತು ಅವುಗಳ ಸಂಗೀತಪ್ರಧಾನ ನಾಟಕಗಳ ಮುಂದುವರಿಕೆಯೇ ಸಿನೆಮಾ ಸಂಗೀತ ಎನ್ನಬಹುದು. ಕನ್ನಡದ ಮೊದಲ ಟಾಕಿ ಸಿನೆಮಾ ‘ಸತಿ ಸುಲೋಚನ’ 1934ರಲ್ಲಿ ಬಂತು. ಅದರಲ್ಲಿ ಪಾತ್ರ ಮಾಡಿದವರು ಸುಬ್ಬಯ್ಯನಾಯ್ಡು ಮತ್ತು ಆರ್. ನಾಗೇಂದ್ರ ರಾಯರು. ಇಬ್ಬರೂ ನಾಟಕ ಕಂಪೆನಿಯಲ್ಲಿ ಇದ್ದವರು. ನಾಟಕ ಕಂಪೆನಿಯಲ್ಲಿ ನಾಟಕವೆಂದರೆ ಅದು ಸಂಗೀತಪ್ರಧಾನ. ಪ್ರತಿಯೊಂದು ಪಾತ್ರ ಬಂದು ಹಾಡು ಹೇಳಿ ಹೋಗುತ್ತವೆ. ಅದು ಯಾವುದು? ಕ್ಲಾಸಿಕಲ್ (ಶಾಸ್ತ್ರೀಯ) ಹಾಡುಗಳು, ಕಂದಪದ್ಯಗಳು. ಆಮೇಲೆ ಸಂಭಾಷಣೆಯನ್ನೇ ಹಾಡಾಗಿ ಹೇಳುವುದು ಕೂಡ ಇತ್ತು. ಇದು ಆಗಿನ ಕ್ರಮ. ಅದನ್ನೇ ಬಭ್ರುವಾಹನದಲ್ಲಿ (ಸಿನೆಮಾ) ‘ಯಾರು ತಿಳಿಯರು ನಿನ್ನ ಭುಜಬಲ ಪರಾಕ್ರಮಾ’ ಎಂದು ಹಾಡಿದ್ದು. ಒಟ್ಟಿನಲ್ಲಿ ನಾಟಕದಲ್ಲಿ ಸಂಗೀತ ಬಹಳ ಮುಖ್ಯ ಆಗಿತ್ತು.
ಸಿನೆಮಾ ಬೇರೆ ಕಡೆಯೂ ಅದೇ ರೀತಿ ಇತ್ತು. ಉದಾಹರಣೆಗೆ, ಸಿನೆಮಾ ಮೊದಲು ಆರಂಭವಾದದ್ದು ಹಾಲಿವುಡ್ನಲ್ಲಿ. 1926-30ರ ವೇಳೆ ಎಂಜಿಎಂ ಪ್ರೋಡಕ್ಷನ್ಸ್ ಮತ್ತು ವಾರ್ನರ್ ಬ್ರದರ್ಸ್ ಅವರು ಸಿನೆಮಾ ಮಾಡಿದಾಗಲೂ ಮ್ಯೂಸಿಕಲ್ (ಸಂಗೀತಮಯ) ಸಿನೆಮಾಗಳನ್ನೇ ಮಾಡಿದರು. ಅಲ್ಲಿನ ಇಂಗ್ಲಿಷ್ ರಂಗಭೂಮಿಯಲ್ಲಿ ಕೂಡ ತುಂಬ ಹಾಡುಗಳು ಇರುತ್ತಿದ್ದವು – ಇಂಗ್ಲಿಷ್ ಹಾಡುಗಳು. ಅದೇ ಪದ್ಧತಿಯನ್ನು ಅವರು ಸಿನೆಮಾಕ್ಕೆ ಅಳವಡಿಸಿಕೊಂಡರು. ಹಾಗಾಗಿ ಅದೇ ಪದ್ಧತಿಯನ್ನು ನಮ್ಮವರು ಕೂಡ ಸಿನೆಮಾಕ್ಕೆ ಅಳವಡಿಸಿಕೊಂಡರು. ಹಾಡು-ಸಂಭಾಷಣೆ-ಹಾಡು – ಹೀಗೆ ಒಂದೊಂದು ಸಿನೆಮಾದಲ್ಲಿ 30-40 ಹಾಡುಗಳು ಇರುತ್ತಿದ್ದವು. ಅದೆಲ್ಲ ಸಣ್ಣಸಣ್ಣ ಹಾಡು; ಆದರೆ ಸಂಗೀತಮಯ. ಏಕೆಂದರೆ ಅದು ಜನಕ್ಕೆ ಇಷ್ಟವಾಗುತ್ತಿತ್ತು. ನಾಟಕಗಳಲ್ಲಿ ಪ್ರೇಕ್ಷಕರು ಒನ್ಸ್ಮೋರ್ ಹೇಳುವುದು, ಆಗ ನಾಟಕ ಅಲ್ಲಿಗೇ ನಿಂತು ಪದ್ಯ ರಿಪೀಟ್ ಆಗುವುದು ಕೂಡ ಇತ್ತಲ್ಲವೆ!
ಸುಬ್ಬಯ್ಯನಾಯ್ಡು, ನಾಗೇಂದ್ರರಾಯರು, ಗುಬ್ಬಿ ವೀರಣ್ಣ – ಹೀಗೆ ಆಗ ಸಿನೆಮಾ ಮಾಡುತ್ತಿದ್ದವರು ನಾಟಕದವರೇ, ನಾಟಕ ಕಂಪೆನಿಯವರೇ ಆದ್ದರಿಂದ ಅದೇ ಶಾಸ್ತ್ರೀಯ ಸಂಗೀತ, ಕಂದಪದ್ಯಗಳು, ಸಣ್ಣಸಣ್ಣ ಹಾಡು ಸಿನೆಮಾಕ್ಕೂ ಬಂದವು. ಕ್ರಮೇಣ ಸಾಮಾಜಿಕ ನಾಟಕಗಳು ಬಂದಾಗ ಪೌರಾಣಿಕ ಧಾಟಿಯ ಕ್ಲಾಸಿಕಲ್ ಹಾಡುಗಳು ಅಷ್ಟೊಂದು ಹೊಂದಿಕೊಳ್ಳುತ್ತಿರಲಿಲ್ಲ. ಅದಕ್ಕೆ ಸ್ವಲ್ಪ ವೆಸ್ಟರ್ನ್ (ಪಾಶ್ಚಾತ್ಯ) ಮ್ಯೂಸಿಕ್ ರೀತಿಯ ಲಯ-ರಿದಮ್; ‘ನಾನ್ ಕೋಳಿಕೇ ರಂಗ, ಕೋನೂ ಳೀನೂ…’ ಎಂದು ಇತ್ತಲ್ಲ – ಕೈಲಾಸಂ ಹಾಡು.
ಸಂಗೀತದ ಸಮುದ್ರ
ಕೈಲಾಸಂ ನಾಟಕಗಳು 1936-40ರ ಹೊತ್ತಿಗೆ ವಿಶೇಷವಾಗಿ ಬಂದವು. ಅವುಗಳಲ್ಲಿ ಈ ವೆಸ್ಟರ್ನ್ ಹಾಡು ಜಾಸ್ತಿ. ಸಿನೆಮಾದ ಮೇಲೆ ಇದರ ಪ್ರಭಾವ ಆಯಿತು. ಪರಿಣಾಮವಾಗಿ ಕನ್ನಡ ಸಿನೆಮಾಗಳಿಗೆ ಪಾಶ್ಚಾತ್ಯ ಸಂಗೀತ ಬಂತು. ಆಗ ಕೆಲವು ಹಿಂದಿ ಸಂಗೀತ ನಿರ್ದೇಶಕರು ಪಾಶ್ಚಾತ್ಯ ಸಂಗೀತದ ಜೊತೆಗೆ ಬೇರೆ ದೇಶಗಳ ಹಾಡುಗಳನ್ನು ಕೂಡ ಕೇಳುವುದಕ್ಕೆ ಶುರು ಮಾಡಿದರು. ಈಜಿಪ್ಶಿಯನ್ ಮ್ಯೂಸಿಕ್ ಕೇಳಿ ಕೆಲವರು ಅದನ್ನು ಯಥಾವತ್ತಾಗಿ ಹಿಂದಿ ಸಿನೆಮಾಗಳಿಗೆ ಅಳವಡಿಸಿದ್ದಿದೆ. ಅರೇಬಿಕ್ ಹಾಡುಗಳನ್ನು ಕೇಳಿ ಅದನ್ನು ಬಳಸಿಕೊಂಡರು; ಚೈನೀಸ್ ಹಾಡುಗಳನ್ನು ಕೇಳಿ ಆ ಹಾಡುಗಳ ಶೈಲಿಯನ್ನು ಕೂಡ ಬಳಸಿಕೊಂಡರು. ಒಟ್ಟಿನಲ್ಲಿ ಸಿನೆಮಾ ಅನ್ನುವುದು ಸಮುದ್ರ. ಎಲ್ಲ ನದಿಗಳು ಸಮುದ್ರಕ್ಕೆ ಸೇರುತ್ತವೆ. ಅದೇ ರೀತಿ ಎಲ್ಲ ಬಗೆಯ ಸಂಗೀತಗಳು ಸಿನೆಮಾಕ್ಕೆ ಸೇರಿದವು.
ಸಿನೆಮಾಕ್ಕೆ ಯಾವುದೇ ಭೇದಭಾವ ಇಲ್ಲ. ಜಾನಪದ, ಬುಡಕಟ್ಟು, ವೆಸ್ಟರ್ನ್, ಅರೇಬಿಕ್ ಮ್ಯೂಸಿಕ್, ಸ್ಪ್ಯಾನಿಷ್, ರಷ್ಯನ್, ಚೈನೀಸ್ ಮ್ಯೂಸಿಕ್, ಇನ್ನು ನಮ್ಮ ಹಿಂದುಸ್ತಾನಿ, ಕರ್ನಾಟಕ ಸಂಗೀತಗಳು – ಒಟ್ಟು ಸಂಗೀತದ ಎಲ್ಲ ಪ್ರಕಾರಗಳು ಅಲ್ಲಿ ಸೇರಿದವು. ಎಲ್ಲವೂ ಸೇರಿ ಅಲ್ಲೊಂದು ಹೊಸ ವಿನ್ಯಾಸ ಉದ್ಭವವಾಯಿತು, ಸಮುದ್ರಮಥನದ ರೀತಿ. ಸಮುದ್ರಮಥನ ಮಾಡಿದಾಗ ಹೇಗೆ ಅಮೃತ ಬಂತೋ ಅದೇ ರೀತಿ ಸಿನೆಮಾ ಸಂಗೀತದಲ್ಲಿ ಹೊಸ ಹೊಸ ಹಾಡುಗಳು ಹುಟ್ಟಿದವು.
ಸಿನೆಮಾ ಸಂಗೀತದಲ್ಲಿ ಜಾನಪದ (ಫೆÇೀಕ್) ಸಂಗೀತವೂ ದೊಡ್ಡ ರೀತಿಯಲ್ಲೇ ಸೇರಿದೆ. ಉದಾಹರಣೆಗೆ, ‘ಜನುಮದ ಜೋಡಿ’ ಚಿತ್ರಕ್ಕೆ ನಾನು ಮಾಡಿದ ‘ಕೋಲುಮಂಡೆ ಜಂಗಮದೇವ’ ಹಾಡು ಕಂಸಾಳೆ ಧಾಟಿಯದ್ದು, ಅದರ ಸ್ಫೂರ್ತಿಯಿಂದ ಮಾಡಿರುವಂಥದ್ದು; ಎಲ್ಲವೂ ಜಾನಪದ ಹಾಡಿನ ಶೈಲಿ. ಅದು ಸೂಪರ್ ಹಿಟ್ ಆಯಿತು. ಜಾನಪದ ಶೈಲಿಯ ಹಾಡುಗಳನ್ನು ರಾಜನ್-ನಾಗೇಂದ್ರ ಅವರು ಬೇಕಾದಷ್ಟು ಮಾಡಿದ್ದಾರೆ. ‘ಪರಸಂಗದ ಗೆಂಡೆತಿಮ್ಮ’ ಸಿನೆಮಾದ ‘ತೇರಾ ಏರಿ ಅಂಬರದಾಗೆ ನೇಸರು ಮೂಡ್ಯಾನೆ’ ಹಾಡು ಸೂಪರ್ ಹಿಟ್ ಆಯಿತು. ಆ ಸಿನೆಮಾದ ಜಾನಪದ ಶೈಲಿಯ ಎಲ್ಲ ಹಾಡುಗಳು ತುಂಬ ಜನಪ್ರಿಯ ಆದವು. ದೊಡ್ಡರಂಗೇಗೌಡರು ಬಂದ ಮೇಲೆ ಜಾನಪದ ಶೈಲಿಯ ಸಾಹಿತ್ಯವು ದೊಡ್ಡ ರೀತಿಯಲ್ಲಿ ಸಿನೆಮಾಕ್ಕೆ ಬಂದು ಸಿನೆಮಾ ಸಂಗೀತವು ಶ್ರೀಮಂತವಾಯಿತು.
ಚಿತ್ರರಂಗದಲ್ಲಿ ಬಹಳಷ್ಟು ಜನ ಸಂಗೀತ ನಿರ್ದೇಶಕರು ಮತ್ತು ಸಾಹಿತಿಗಳು ದುಡಿದಿದ್ದು ಅವರ ಕೊಡುಗೆ ಸಾಕಷ್ಟಿದೆ. ಚಿ| ಉದಯಶಂಕರ್ ಅವರ ಸರಳ ಸಾಹಿತ್ಯ ಮತ್ತು ಆರ್.ಎನ್. ಜಯಗೋಪಾಲ್ ಅವರ ಸ್ವಲ್ಪ ಪೆÇಯೆಟಿಕ್ (ಕಾವ್ಯಾತ್ಮಕ) ಆದ ಸಾಹಿತ್ಯಗಳು ಮೊದಲಿಗೆ ಮೆರೆದಿದ್ದವು. ಆಮೇಲೆ ಬಂದ ಹಂಸಲೇಖ ತುಂಬ ಬದಲಾವಣೆಗಳನ್ನು ತಂದರು; ಜಾನಪದ ಶೈಲಿ, ಆಧುನಿಕ ಶೈಲಿ, ವೆಸ್ಟರ್ನ್ ಶೈಲಿಗಳನ್ನು ತಂದರು; ಫಿಲಾಸಫಿಯನ್ನು (ತತ್ತ್ವಶಾಸ್ತ್ರ) ಸಿನೆಮಾಕ್ಕೆ ತಂದರು; ಹೀಗೆ ಚಿತ್ರರಂಗದ ಸಂಗೀತ ಮತ್ತು ಸಾಹಿತ್ಯಕ್ಕೆ ಹಂಸಲೇಖ ಅವರ ಕೊಡುಗೆ ಅತಿಶಯವಾದದ್ದು. ಆರಂಭದ ವರ್ಷಗಳಲ್ಲಿ ಸಿನೆಮಾ ಸಂಗೀತದಲ್ಲಿ ಶಾಸ್ತ್ರೀಯ ಸಂಗೀತವೇ ಜಾಸ್ತಿ ಇದ್ದರೂ ಕೂಡ ಆ ಕಾಲದಲ್ಲೇ ಮಾಡರ್ನ್ (ಆಧುನಿಕ) ಹಾಡುಗಳು ಕೂಡ ಬಂದಿದ್ದವು.
ಮದ್ರಾಸಿನ ಪ್ರಭಾವ
ಇನ್ನು ಆರಂಭದ ಕಾಲದಲ್ಲಿ ನಮ್ಮ ಸಿನೆಮಾಗಳೆಲ್ಲ ಮದ್ರಾಸ್ನಲ್ಲಿ (ಚೆನ್ನೈ) ತಯಾರಾಗುತ್ತಿದ್ದ ಕಾರಣದಿಂದಾಗಿ ಅಲ್ಲಿನ ಪ್ರಭಾವ, ಮುಖ್ಯವಾಗಿ ಕರ್ನಾಟಕ ಸಂಗೀತದ ಪ್ರಭಾವ ಸ್ವಲ್ಪ ಜಾಸ್ತಿಯೇ ಇತ್ತು. 1930, 1940, 1950ರ ದಶಕಗಳಲ್ಲಿ ಸ್ಟುಡಿಯೋ ಇದ್ದದ್ದು ಮದ್ರಾಸಿನಲ್ಲಿ ಮಾತ್ರ. ಕನ್ನಡವಷ್ಟೇ ಅಲ್ಲ, ದಕ್ಷಿಣಭಾರತದ ಎಲ್ಲ ಭಾಷೆಗಳ ಸಿನೆಮಾಗಳಿಗೆ ಅದೇ ತಾಯಿಮನೆ. ಕನ್ನಡ, ತೆಲುಗು, ಮಲೆಯಾಳಂ, ತಮಿಳು – ಹೀಗೆ ನಾಲ್ಕು ಭಾಷೆಗಳ ಸಿನೆಮಾಗಳು ಅಲ್ಲೇ ತಯಾರಾಗುತ್ತಿದ್ದವು. ಅಲ್ಲಿನ ಎವಿಎಂ ಸ್ಟುಡಿಯೋ, ಜೆಮಿನಿ ಸ್ಟುಡಿಯೊ, ವಿಜಯವಾಹಿನಿ, ಆಮೇಲೆ ಭರಣಿ ಸ್ಟುಡಿಯೊ – ಈ ಸ್ಟುಡಿಯೊಗಳಲ್ಲಿ ಸಿನೆಮಾಗಳ ಶೂಟಿಂಗ್ ನಡೆಯುತ್ತಿತ್ತು. ಪರಿಣಾಮವಾಗಿ ಪರಸ್ಪರ ಅಭಿಪ್ರಾಯ ವಿನಿಮಯ ಮತ್ತು ಕಲೆಯ ವಿನಿಮಯ ನಡೆಯುತ್ತಿತ್ತು. ಅದರಿಂದಾಗಿ ನಮ್ಮ ಕನ್ನಡ ಸಿನೆಮಾಗಳಿಗೆ ಬೇರೆ ಭಾಷೆಗಳ ಗಾಯಕರೇ ಜಾಸ್ತಿ ಹಾಡುತ್ತಿದ್ದರು; ಪಿ.ಬಿ. ಶ್ರೀನಿವಾಸ್, ಪಿ. ಸುಶೀಲ, ಎಸ್. ಜಾನಕಿ, ಎಸ್.ಪಿ. ಬಾಲಸುಬ್ರಹ್ಮಣ್ಯಂ ಹೀಗೆ. ಮದ್ರಾಸಿನಲ್ಲೇ ರೆಕಾರ್ಡಿಂಗ್ ಆಗುತ್ತಿದ್ದುದರಿಂದ ಅಲ್ಲೇ ಹತ್ತಿರ ಇದ್ದವರು ಹಾಡುತ್ತಿದ್ದರು. ಕನ್ನಡ ಕಲಿತು ಕನ್ನಡ ಹಾಡುಗಳನ್ನು ಹಾಡುತ್ತಿದ್ದರು. ಅಂದಿನ ಆ ಗಾಯಕರಿಗೆಲ್ಲ ಕನ್ನಡ ಬರುತ್ತಿತ್ತು. ಏಕೆಂದರೆ ಅಲ್ಲಿ ಕನ್ನಡದ ಅಟ್ಮಾಸ್ಫಿಯರ್ (ವಾತಾವರಣ) ಇತ್ತು. ಆ ವಾತಾವರಣದಲ್ಲಿ ಅವರು ಕನ್ನಡ ಕಲಿತಿರುತ್ತಿದ್ದರು. ಕನ್ನಡ ಮಾತಾಡಬಲ್ಲವರಾಗಿದ್ದರು. ಅವರ ಭಾಷೆಯಲ್ಲಿ ಬರೆದುಕೊಂಡು ಚೆನ್ನಾಗಿ ಉಚ್ಚಾರ ಮಾಡಿ ಹಾಡುತ್ತಿದ್ದರು. ಪಿ. ಸುಶೀಲ, ಎಸ್. ಜಾನಕಿಯಮ್ಮ, ಪಿ.ಬಿ. ಶ್ರೀನಿವಾಸ್ ಅವರು ಹಾಡಿದ ಹಾಡುಗಳು ಈವತ್ತು ಬೇರೆ ಮೂಲಭಾಷೆಯವರು ಹಾಡಿದ್ದು ಅಂತ ಅನ್ನಿಸುವುದೇ ಇಲ್ಲ. ಅವರು ಅಷ್ಟೊಂದು ಕನ್ನಡ ಭಾಷೆಗೆ ಹೊಂದಿಕೊಂಡಿದ್ದರು. ಕನ್ನಡ ಸಿನೆಮಾಕ್ಕೆ ದುಡಿಯುತ್ತಿದ್ದ ಕಲಾವಿದರಲ್ಲಿ ಅಣ್ಣ-ತಮ್ಮಂದಿರ ಥರ ಸೌಹಾರ್ದ ಇರುತ್ತಿತ್ತು.
ನಾನು ಸಂಗೀತ ನಿರ್ದೇಶಕ ಆದದ್ದು
ಹುಟ್ಟೂರು ವಿಟ್ಲ ಮತ್ತು ಪುತ್ತೂರುಗಳಲ್ಲಿ ಶಿಕ್ಷಣವನ್ನು ಮುಗಿಸಿ ಪದವೀಧರನಾಗಿ 1980ರ ಸುಮಾರಿಗೆ ಬೆಂಗಳೂರಿಗೆ ಬಂದ ನಾನು ಒಂದೆರಡು ಪತ್ರಿಕೆಗಳಲ್ಲಿ ಕಾರ್ಟೂನಿಸ್ಟ್ ಆಗಿ ಕೆಲಸ ಮಾಡಿದರೂ ಸಿನೆಮಾ ಮತ್ತು ಸಿನೆಮಾ ಸಂಗೀತದ ಗೀಳು ತಲೆಯನ್ನು ತುಂಬಿಕೊಂಡಿದ್ದವು. ಕೈಯಲ್ಲಿದ್ದ ಟ್ಯೂನ್ಗಳನ್ನು ಗಾಂಧಿನಗರದವರಿಗೆ ತೋರಿಸಿದರೆ “ವಿಳಾಸ ಕೊಟ್ಟು ಹೋಗಿ, ತಿಳಿಸುತ್ತೇವೆ” ಎನ್ನುತ್ತಿದ್ದರು. ಕಾರ್ಟೂನ್ ಬರೆಯುವ ಮಧ್ಯೆ ಸಿನೆಮಾದವರ ಪರಿಚಯ ಮಾಡಿಕೊಳ್ಳುವ ಹುಚ್ಚು. ಆಗ ಶಂಖನಾದ ಅರವಿಂದ (ಅನುಭವ ಅರವಿಂದ) ಅವರ ಪರಿಚಯವಾಗಿ ಅವರು ಮತ್ತು ಕ್ಯಾಮರಾಮನ್ ಸುಂದರನಾಥ ಸುವರ್ಣರ ಮೂಲಕ ಕಾಶೀನಾಥ್ ಸರ್ ಅವರ ಪರಿಚಯವಾಯಿತು. ಅವರು ‘ಅನುಭವ’ ಚಿತ್ರದ ಹಾಡುಗಳನ್ನು ಬರೆಯಲು ಹೇಳಿದರು. ಅದರ ಎರಡೂ ಹಾಡುಗಳನ್ನು ನಾನೇ ಬರೆದೆ. ಅದು ಸೂಪರ್ ಹಿಟ್ ಆಯಿತು. ಮುಂದೆ ಕಾಶೀನಾಥ್ ಅವರಲ್ಲಿ ಅವರ ಅಸಿಸ್ಟೆಂಟಾಗಿ ಕೆಲಸ ಮಾಡುವ ಅಪೇಕ್ಷೆ ವ್ಯಕ್ತಪಡಿಸಿದೆ; ಅವರು ಅದಕ್ಕೆ ಒಪ್ಪಿದ್ದಲ್ಲದೆ ಆರು ವರ್ಷ ತಮ್ಮ ಮನೆಯಲ್ಲೇ ಉಳಿದುಕೊಳ್ಳಲು ಅವಕಾಶ ನೀಡಿದರು. ಆಗ ಹಂಸಲೇಖ ಅವರ ಪರಿಚಯವಾಯಿತು. ಉಪೇಂದ್ರ ಅವರ ಪರಿಚಯವಾಗಿ ಆತ್ಮೀಯ ಗೆಳೆಯರೂ ಆದರು. ನನ್ನ ಬಳಿಯಿದ್ದ ಟ್ಯೂನ್ಗಳು ಉಪೇಂದ್ರರಿಗೆ ಇಷ್ಟವಾದವು. ಇನ್ನೊಬ್ಬ ಸಹವರ್ತಿ ಎಲ್.ಎನ್. ಶಾಸ್ತ್ರಿ ಒಂದು ಅಲ್ಬಂ ಮಾಡೋಣ ಎಂದರು; ಎಂಟು ಹಾಡುಗಳ ‘ಓ ಕುಸುಮಬಾಲೆ’ ಆಲ್ಬಂ ತಯಾರಾಯಿತು. ಅದು ಉಪೇಂದ್ರ, ಕಾಶೀನಾಥ್ ಅವರಿಗೆಲ್ಲ ಇಷ್ಟವಾಯಿತು. ಆಗ ಉಪೇಂದ್ರರಿಗೆ ‘ತರ್ಲೆ ನನ್ ಮಗ’ ಸಿನೆಮಾದ ನಿರ್ದೇಶನ ಸಿಕ್ಕಿತು. ಕಾಶೀನಾಥರ ‘ಅನಾಮಿಕ’, ‘ಅನಂತನ ಅವಾಂತರ’, ‘ಅಜಗಜಾಂತರ’ಗಳಿಗೆ ಸಹಾಯಕ ನಿರ್ದೇಶಕನಾಗಿದ್ದ ನಾನು ‘ತರ್ಲೆ ನನ್ ಮಗ’ಕ್ಕೂ ಆ ಕೆಲಸ ಮಾಡಿದೆ. ಇದ್ದಕ್ಕಿದ್ದಂತೆ ಉಪೇಂದ್ರ ಸಿನೆಮಾದ ಸಂಗೀತವನ್ನು ಮನೋಹರ್ರಿಂದ ಮಾಡಿಸಿ ಎಂದು ನಿರ್ಮಾಪಕರಿಗೆ ಸಲಹೆ ನೀಡಿದರು; ಮತ್ತು ನನಗೆ ಧೈರ್ಯ ತುಂಬಿದರು. ಆಗ ನನಗೆ ಟ್ಯೂನ್ ಏನೋ ಬರುತ್ತಿತ್ತು; ಆದರೆ ಸಂಗೀತಜ್ಞಾನ ಇರಲಿಲ್ಲ. ಸ್ವರ(ನೋಟ್ಸ್)ಗಳನ್ನು ಹಾಕಲು ಬರುತ್ತಿರಲಿಲ್ಲ. ಆಗ ಹಂಸಲೇಖ ಅವರು ಬೆಂಬಲಿಸಿ ಓರ್ವ ಸಹಾಯಕನನ್ನು ನೀಡಿದರು. ‘ತರ್ಲೆ ನನ್ ಮಗ’ ಸಂಗೀತ ಇಷ್ಟವಾದ ಹೀರೋ ಜಗ್ಗೇಶ್ ತಮ್ಮ ‘ಭಂಡ ನನ್ನ ಗಂಡ’ದ ಸಂಗೀತವನ್ನು ನನಗೇ ವಹಿಸಿದರು. ನನ್ನ ಅದೃಷ್ಟಕ್ಕೆ ಎರಡೂ ಚಿತ್ರಗಳ ಹಾಡುಗಳು ಕ್ಲಿಕ್ ಆದವು. ಮುಂದೆ ಒಂದರ ಬೆನ್ನಿಗೊಂದು ಅವಕಾಶಗಳು ಬಂದು ನಾನು ಪೂರ್ಣಾವಧಿ ಸಂಗೀತ ನಿರ್ದೇಶಕನಾಗಿಬಿಟ್ಟೆ.
ಆರಂಭಕಾಲದ ಬಹಳಷ್ಟು ಗಾಯಕರು ಶಾಸ್ತ್ರೀಯ ಸಂಗೀತವನ್ನು ಬಲ್ಲವರೇ ಆಗಿದ್ದರು. ನಮ್ಮ ಹೊನ್ನಪ್ಪ ಭಾಗವತರ್ ಥರದವರು ಅನೇಕರಿದ್ದರು. ಆ ಕಾಲದಲ್ಲಿ ಅವರಲ್ಲಿ ಹಲವಾರು ಗಾಯಕರು ರಂಗಭೂಮಿಯಿಂದ ಬಂದ ಕಲಾವಿದರಾಗಿದ್ದರು. ನಾಟಕಗಳಲ್ಲಿ ವೇದಿಕೆಯ ಮೇಲೆ ಅವರು ಹಾಡಲೇಬೇಕಿತ್ತು; ಅದಕ್ಕಾಗಿ ಸಂಗೀತಾಭ್ಯಾಸ ಮಾಡಲೇಬೇಕಿತ್ತು. ಹೊನ್ನಪ್ಪ ಭಾಗವತರಿಗಿಂತ ಹಿಂದೆ ತ್ಯಾಗರಾಜ ಭಾಗವತರಿದ್ದರು. ತಮಿಳಿನಲ್ಲಿ ಅವರು ತುಂಬ ಪ್ರಖ್ಯಾತರು. 1936ರಲ್ಲೇ ಅವರು ಬಂದರು: ಗಾಯಕರಾಗಿ ಮತ್ತು ನಾಯಕರಾಗಿ. ಸಿನೆಮಾದಲ್ಲಿ ಅವರೇ ಹೀರೋ ಆಗಿ ನಟಿಸುತ್ತಿದ್ದರು. ಮತ್ತು ತಮ್ಮ ಚಿತ್ರದಲ್ಲಿ ಅವರೇ ಹಾಡುತ್ತಿದ್ದರು. ಒಂದೊಂದು ಸಿನೆಮಾದಲ್ಲಿ 25-30 ಹಾಡುಗಳು; ಅವರಿಗೆ ಅಭಿಮಾನಿಗಳು ಹೇರಳ. ಆದರೆ ಅವರ ಜೀವನ ದುರಂತದಲ್ಲಿ ಪರ್ಯವಸಾನಗೊಂಡದ್ದೊಂದು ವಿಪರ್ಯಾಸ.
ಶಾಸ್ತ್ರೀಯ ಸಂಗೀತದಲ್ಲಿ ದೊಡ್ಡ ಹೆಸರು ಮಾಡಿದ ಡಾ| ಬಾಲಮುರಳೀಕೃಷ್ಣ, ಪಂಡಿತ್ ಭೀಮ್ಸೇನ್ ಜೋಶಿ, ಘಂಟಸಾಲ ಅವರಂತಹ ಸಂಗೀತ ವಿದ್ವಾಂಸರ ಕೂಡ ಸಿನೆಮಾ ಸಂಗೀತಕ್ಕೆ ಕೆಲಸ ಮಾಡಿದ್ದಾರೆ, ಹಾಡಿದ್ದಾರೆ, ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ. ಬಾಲಮುರಳೀಕೃಷ್ಣ ಸಂಗೀತ ನಿರ್ದೇಶನ ಮಾಡಿದ್ದಾರೆ. ಎಸ್.ಪಿ. ಬಾಲಸುಬ್ರಹ್ಮಣ್ಯಂ, ಘಂಟಸಾಲ ಕೂಡ ಸಿನೆಮಾಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಅದರಲ್ಲಿ ಘಂಟಸಾಲ ಯಶಸ್ವಿ ನಿರ್ದೇಶಕರು. ಬೇರೆ ಗಾಯಕರು, ಸಂಗೀತ ವಿದ್ವಾಂಸರು ಒಂದೋ ಎರಡೋ ಸಿನೆಮಾಗಳಿಗೆ ಸಂಗೀತ ನಿರ್ದೇಶನ ಮಾಡಿದರೆ ಘಂಟಸಾಲ ತುಂಬ ಮಾಡಿದ್ದಾರೆ; ಅದಲ್ಲದೆ ಅವರು ಮಾಡಿದ ಹಾಡುಗಳೆಲ್ಲ ಹಿಟ್.
ಘಂಟಸಾಲ ಯಶಸ್ಸು
ಸಾಮಾನ್ಯವಾಗಿ ಗಾಯಕರು ಸಂಗೀತ ನಿರ್ದೇಶಕರಾದಾಗ ಯಶಸ್ವಿಯಾಗಲಿಲ್ಲ. ಆದರೆ ಘಂಟಸಾಲ ಅವರು ಅದಕ್ಕೊಂದು ಅಪವಾದ. ಅವರು ಸಂಗೀತ ಸಂಯೋಜನೆ ಮಾಡಿದ ಹಾಡುಗಳೆಲ್ಲ ಹಿಟ್ ಆದವು. ಶಾಸ್ತ್ರೀಯ ಸಂಗೀತದಲ್ಲಿ ಅವರು ದೊಡ್ಡ ವ್ಯಕ್ತಿ. ತೆಲುಗಿನಲ್ಲಿ ಅವರು ಪ್ರಮುಖ ಹಿನ್ನೆಲೆ ಗಾಯಕ. ಕನ್ನಡದಲ್ಲಿ ಹೇಗೆ ಪಿ.ಬಿ. ಶ್ರೀನಿವಾಸ್ ಇದ್ದರೋ
ಹಾಗೆ ಅಲ್ಲಿ ಘಂಟಸಾಲ. ತಮಿಳಿನಲ್ಲಿ ಟಿ.ಎಂ. ಸೌಂದರರಾಜನ್; ಮಲೆಯಾಳಂನಲ್ಲಿ ಯೇಸುದಾಸ್. ಆವಾಗ ಈ ನಾಲ್ವರು ನಾಲ್ಕು ಭಾಷೆಗಳಲ್ಲಿ ಮುಖ್ಯ ಹಿನ್ನೆಲೆ ಗಾಯಕರು. ಮಹಿಳೆಯರಲ್ಲಿ ಅದೇ ರೀತಿ ಮಲೆಯಾಳಂನಲ್ಲಿ ಪಿ. ಲೀಲಾ, ಎಸ್. ಜಾನಕಿ ಮತ್ತು ಪಿ. ಸುಶೀಲ ಅವರು ತಮಿಳು, ತೆಲುಗು, ಕನ್ನಡ ಮೂರು ಭಾಷೆಗಳಿಗೂ ಮುಖ್ಯ ಗಾಯಕಿಯರು.
ಮತ್ತೆ ಸಂಗೀತ ನಿರ್ದೇಶಕರು ಕೂಡ ಅಷ್ಟೇ. ಆಗಿನ ಕಾಲದಿಂದ ಗಮನಿಸಿದರೆ, ಕನ್ನಡದ ಸಂಗೀತ ನಿರ್ದೇಶಕರಾಗಿದ್ದ ರಾಜನ್-ನಾಗೇಂದ್ರ, ಟಿ.ಜಿ. ಲಿಂಗಪ್ಪ, ವಿಜಯ ಭಾಸ್ಕರ್, ಜಿ.ಕೆ. ವೆಂಕಟೇಶ್, ಎಂ. ರಂಗರಾವ್, ಉಪೇಂದ್ರಕುಮಾರ್ – ಇವರೆಲ್ಲರ ಮಾತೃಭಾಷೆ ಕನ್ನಡ ಅಲ್ಲ. ಹೆಚ್ಚಿನವರ ಮಾತೃಭಾಷೆ ತೆಲುಗು; ಟಿ.ಜಿ. ಲಿಂಗಪ್ಪ ಅವರದ್ದು ಬಹುಶಃ ತಮಿಳಿರಬೇಕು. ಉಪೇಂದ್ರಕುಮಾರ್ ಅವರದ್ದು ಒರಿಯಾ. ಕನ್ನಡ ಮಾತೃಭಾಷೆಯ ಸಂಗೀತ ನಿರ್ದೇಶಕರು ಆಗ ಇರಲಿಲ್ಲ. ಆಮೇಲೆ 1970ರ ದಶಕದಲ್ಲಿ ಸಿ. ಅಶ್ವತ್ಥ್ ಅವರ ಮೂಲಕ ಕನ್ನಡದ್ದೇ ಸಂಗೀತ ನಿರ್ದೇಶಕರು ಬಂದಂತಾಯಿತು. ಸಂಗೀತ ನಿರ್ದೇಶಕರಾಗಿ, ಗಾಯಕರಾಗಿ ಮತ್ತು ವಾದ್ಯಗಾರರಾಗಿ ಕನ್ನಡಕ್ಕೆ ಬೇರೆ ಭಾಷೆಯವರ ಕೊಡುಗೆ ತುಂಬ ಇದೆ. ವಾದ್ಯಗಾರರಂತೂ ಬಹುತೇಕ ತಮಿಳು ಮತ್ತು ತೆಲುಗಿನವರೇ. ಕನ್ನಡದಲ್ಲಿ ವಾದ್ಯಗಾರರಿದ್ದರು. ಆದರೆ ಸಿನೆಮಾ ಸಂಗೀತಕ್ಕೆ ನುಡಿಸಲು ಅವರಿಗೆ ಅವಕಾಶ ಸಿಕ್ಕಿರಲಿಲ್ಲ.
ಶಂಕರ್ ನಾಗ್ – ಹಂಸಲೇಖ
ಈ ಅವಕಾಶ ಆದದ್ದು ಶಂಕರ್ನಾಗ್ ಬಂದ ಮೇಲೆ ಎನ್ನಬಹುದು. “ಕನ್ನಡದಲ್ಲಿ ತುಂಬ ಒಳ್ಳೆಯ ವಾದ್ಯಗಾರರಿದ್ದಾರೆ, ಅವರನ್ನು ನಾವು ಬಳಸಿಕೊಳ್ಳೋಣ” ಎಂದು ಶಂಕರ್ನಾಗ್ ಹಂಸಲೇಖ ಅವರ ಗಮನಸೆಳೆದರು. ಹಂಸಲೇಖ ಅವರು ಕನ್ನಡದ ವಾದ್ಯಗಾರರನ್ನು ಬಳಸಿಕೊಂಡರು; ಸ್ವತಂತ್ರವಾಗಿ ನಮ್ಮ ಸಂಗೀತಗಾರರಿಗೆ ಅವಕಾಶ ನೀಡಿದರು. ಶಂಕರ್ನಾಗ್ ಸಂಕೇತ್ ಸ್ಟುಡಿಯೋವನ್ನು ಸ್ಥಾಪಿಸಿದ ಮೇಲೆ ಸಿನೆಮಾ ಸಂಗೀತ ಅಲ್ಲೇ ರೆಕಾರ್ಡಿಂಗ್ ಆಗತೊಡಗಿತು. ಕನ್ನಡದವರೇ ಸಂಗೀತಗಾರ(ವಾದ್ಯಗಾರ)ರಾಗಿದ್ದರು. ಹೀಗೆ ಕನ್ನಡದ ಸಂಗೀತಗಾರರಿಗೆ ಅವಕಾಶ ಸಿಕ್ಕಿದುದರಲ್ಲಿ ಹಂಸಲೇಖ ಅವರ ಕೊಡುಗೆ ಮುಖ್ಯವಾದದ್ದು.
ಹಂಸಲೇಖ ಅವರು ಮೂಲತಃ ರಂಗಭೂಮಿಯಿಂದ ಬಂದವರು. ಅವರದ್ದು ‘ವಿವೇಕರಂಗ’ ಎನ್ನುವ ನಾಟಕ ಕಂಪೆನಿ ಇತ್ತು. ಆ ನಾಟಕ ಸಂಸ್ಥೆಯಿಂದ ತುಂಬ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ‘ರೈತಜೀವಿ’, ‘ರಾಮಚಂದ್ರ’ ಇತ್ಯಾದಿ ಹಲವು ನಾಟಕಗಳನ್ನು ಅವರು ಪ್ರದರ್ಶಿಸಿದ್ದರು. ಅದಾದ ಬಳಿಕ ಹಾಡು ಬರೆಯುವ ಮೂಲಕ ಸಿನೆಮಾ ರಂಗಕ್ಕೆ ಬಂದರು. ‘ತ್ರಿವೇಣಿ’ ಸಿನೆಮಾಕ್ಕೆ ‘ನೀನಾ ಭಗವಂತ’ ಎನ್ನುವ ಹಾಡನ್ನು ಬರೆದರು. ಸಾಕಷ್ಟು ಅಂತರದಲ್ಲಿ (ಗ್ಯಾಪ್) ‘ಸ್ವಾಭಿಮಾನ’, ‘ಅವಳೇ ನನ್ನ ಹೆಂಡ್ತಿ’ ಚಿತ್ರಗಳಿಗೆ ಶಂಕರ್-ಗಣೇಶ್ ಸಂಗೀತಕ್ಕೆ ಹಾಡು ಬರೆದರು. ಮುಂದೆ ‘ಪ್ರೇಮಲೋಕ’ ಚಿತ್ರದಲ್ಲಿ ಸ್ವತಂತ್ರ ಸಂಗೀತ ನಿರ್ದೇಶಕರಾದರು. ಕ್ರಮೇಣ ಚಿತ್ರರಂಗದಲ್ಲಿ ಸಂಗೀತದ ಪ್ರಕಾರವನ್ನೇ ಬದಲಾಯಿಸಿಬಿಟ್ಟರು.
ಅವರ ಆನಂತರ ಸಿನೆಮಾ ಸಂಗೀತದಲ್ಲಿ ನಾದದ (ಮೆಲೊಡಿ) ಅಂಶ ಕಡಮೆ ಆಯಿತೆಂದು ಕೆಲವರು ಟೀಕಿಸುತ್ತಾರೆ. ಹಾಗೇನೂ ಇಲ್ಲ. ನಿಜವೆಂದರೆ, ಅವರು ಒಳ್ಳೊಳ್ಳೆಯ ಮೆಲೊಡಿ ಕೊಟ್ಟಿದ್ದಾರೆ. ಉದಾಹರಣೆಗೆ ‘ಅವನೇ ನನ್ನ ಗಂಡ’, ‘ಅವಳೇ ನನ್ನ ಹೆಂಡ್ತಿ’ ಚಿತ್ರಗಳಲ್ಲಿ ಒಳ್ಳೆಯ ಮೆಲೊಡಿ ಕೊಟ್ಟರು. ಅಂಬರೀಷರ ಕೆಲವು ಸಿನೆಮಾಗಳಿಗೂ ಒಳ್ಳೆಯ ಮೆಲೊಡಿ ಕೊಟ್ಟಿದ್ದಾರೆ. ರವಿಚಂದ್ರ ಅವರ ಸಿನೆಮಾ ‘ರಣಧೀರ’ದಲ್ಲೂ ಒಳ್ಳೆಯ ಮೆಲೊಡಿ ಇದೆ. ಏನೆಂದರೆ ಜಾಸ್ತಿ ಪ್ರಯೋಗಗಳನ್ನು ಮಾಡಿದರು. ‘ಚೈತ್ರದ ಪ್ರೇಮಾಂಜಲಿ’, ‘ಅನುರಾಗ ಅರಳಿತು’ ಚಿತ್ರಗಳಲ್ಲೂ ಉತ್ತಮ ಮೆಲೊಡಿ ಹಾಡುಗಳಿವೆ. ಜೊತೆಗೆ ವೆಸ್ಟರ್ನ್ ಮ್ಯೂಸಿಕ್ಕನ್ನೂ ಕೊಟ್ಟರು. ಹಂಸಲೇಖ ಅವರ ಪ್ರಯೋಗಗಳ ಬಗ್ಗೆ ಹೇಳುವುದಾದರೆ, ಅವರು ಎಲ್ಲವನ್ನೂ ಮಾಡಿ ಆಗಿದೆಯೆನಿಸುತ್ತದೆ. ಈಗ ಏನಾದರೂ ಮಾಡಿದರೆ ಅವರದ್ದೇ ಅನುಕರಣೆಯಾಗುತ್ತದೆ; ಅದರ ಮುಂದುವರಿದ ಭಾಗ ಅಷ್ಟೇ ಆದೀತು. ಸಾಹಿತ್ಯದ ಸರಳೀಕರಣವನ್ನು ಅವರು ಮಾಡಿದರು; ಕಾವ್ಯಾತ್ಮಕವನ್ನಾಗಿ ಕೂಡ ಮಾಡಿದರು. ಹಾಡುಗಳಲ್ಲಿ ಫಿಲಾಸಫಿಯನ್ನೂ ತಂದರು; ತತ್ತ್ವಗಳನ್ನು ಹಾಡಿನಲ್ಲಿ ಬಳಸಿಕೊಂಡರು. ಹೀಗೆ ಅವರ ಕೊಡುಗೆ ತುಂಬ ಇದೆ. ಸುಮಾರು 350 ಸಿನೆಮಾಗಳಿಗೆ ಹಂಸಲೇಖ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.
ಹೊರಗಡೆಯಿಂದ ಬಂದ ಸಂಗೀತ ನಿರ್ದೇಶಕರಲ್ಲಿ ಇಳಯರಾಜಾ ಒಬ್ಬರು. ಅಷ್ಟೇ ಅಲ್ಲ, ಹೊರಗಿನಿಂದ ಬಂದು ಯಶಸ್ವಿ ಆದವರು ಅವರು ಮಾತ್ರವೇನೋ. ಬೇರೆಯವರು ಅಷ್ಟೊಂದು ಯಶಸ್ವಿ ಆಗಲಿಲ್ಲ. ಶಂಕರ್-ಗಣೇಶ್ ಸ್ವಲ್ಪ ಯಶಸ್ವಿಯಾದರು. ಕೆಲವು ಸಮಯ ಅವರು ಒಳ್ಳೊಳ್ಳೆಯ ಹಾಡುಗಳನ್ನು ಕೊಟ್ಟರು.
ರ್ಯ್ಯಾಪ್ ಸಂಗೀತ
ಸಿನೆಮಾ ಸಂಗೀತದಲ್ಲಿ ಪ್ರಯೋಗಗಳು ನಡೆಯುತ್ತಲೇ ಇವೆ. ಈಗ ‘ರ್ಯಾಪ್’ ಒಂದು ಬಂದಿದೆ. ಚಂದನ್ ಶೆಟ್ಟಿ ರ್ಯಾಪ್ ಸಂಗೀತ ಮಾಡುತ್ತಿದ್ದಾರೆ. ಆದರೆ ಅದು ಹೊಸತೇನಲ್ಲ; ಈಗ ಅದು ಮತ್ತೆ ಬಂದಿದೆ ಅಷ್ಟೆ. ಈಚೆಗೆ ‘ಹಿಬಾಬ್’ ಅಂತ ಒಂದು ಸ್ಟೈಲ್ ಬಂದಿದೆ. ಚಂದನ್ ಶೆಟ್ಟಿ ಇರಬಹುದು ಅಥವಾ ಅರ್ಜುನ್ ಜನ್ಯ ಇರಬಹುದು. ನಮ್ಮ ಹೊಸ ಹುಡುಗರು ರ್ಯಾಪ್ ಮಾಡಿ ಅದರಲ್ಲಿ ಯಶಸ್ವಿಯಾಗಿದ್ದಾರೆ. ಪ್ರಯೋಗಗಳಂತೂ ನಡೆಯುತ್ತಲೇ ಇವೆ. ಅರ್ಜುನ್ ಜನ್ಯ ರ್ಯಾಪ್ ಒಂದೋ ಎರಡೋ ಮಾಡಿದ್ದಾರೆ. ಅವರದ್ದು ಜಾಸ್ತಿ ಹೊಸ ಶೈಲಿ ಮತ್ತು ಮೆಲೊಡಿ ತುಂಬ ಚೆನ್ನಾಗಿ ತಂದಿದ್ದಾರೆ. ‘ಒಂದು ಮಳೆಬಿಲ್ಲು ಸೇರಿ ಮಳೆಮೋಡ’ ಆ ಹಾಡು ಸೂಪರ್ ಹಿಟ್ ಆಯಿತು. ‘ಅಯೋಗ್ಯ’ ಸಿನೆಮಾದ ಅವರ ‘ಏನಮ್ಮಿ, ಏನಮ್ಮಿ’ ಹಾಡು ಕೂಡ ಹಿಟ್ ಆಯಿತು. ‘ಅಯೋಗ್ಯ’, ‘ಚಕ್ರವರ್ತಿ’ ಈ ಥರದ ಸಿನೆಮಾಗಳಲ್ಲಿ ಜನ್ಯ ಒಳ್ಳೊಳ್ಳೆಯ ಹಾಡುಗಳನ್ನು ಕೊಟ್ಟರು.
ಇನ್ನು ಹರಿಕೃಷ್ಣ ಅವರೂ ಒಳ್ಳೆಯ ಮೆಲೊಡಿ ನೀಡುತ್ತಾರೆ. ಆಮೇಲೆ ಅಜನೀಶ್ ಲೋಕನಾಥ್ ಎನ್ನುವ ತರುಣನಿಗೆ ತುಂಬ ಒಳ್ಳೆಯ ಭವಿಷ್ಯವಿದೆ. ‘ಕಿರಿಕ್ ಪಾರ್ಟಿ’ಯಲ್ಲಿ ಆತ ಒಳ್ಳೆಯ ಹಾಡು ಮಾಡಿದ್ದಾರೆ. ‘ಟಗರು’ವಿನಲ್ಲಿ ಚರಣ್ ರಾಜ್ ಅವರ ಹಾಡು ಹಿಟ್ ಆಯಿತು. ಹೀಗೆ ಹೊಸ ತಲೆಮಾರಿನವರು ಬಹಳಷ್ಟು ಹೊಸತು ಮಾಡುತ್ತಿದ್ದಾರೆ. ಜನಪ್ರಿಯ ಗೀತೆಗಳನ್ನು ಕೊಡುತ್ತಿದ್ದಾರೆ. ಅವರಿಗೆ ಸಾಕಷ್ಟು ಅವಕಾಶಗಳೂ ಸಿಗುತ್ತಿವೆ.
ರೆಹಮಾನ್ ಪರಿಣಾಮ
ರಿದಂ ಜಾಸ್ತಿ ಆದದ್ದು ಮತ್ತು ನಾದದ ಸಂಗೀತ ಸ್ವಲ್ಪ ಕಡಮೆ ಆದದ್ದು ಸಿನೆಮಾ ಸಂಗೀತದಲ್ಲಿನ ಒಂದು ಗಮನಿಸಬಹುದಾದ ಬೆಳವಣಿಗೆಯಾಗಿದೆ. ಎ.ಆರ್. ರೆಹಮಾನ್ ಪ್ರವೇಶದೊಂದಿಗೆ ಅದು ಆರಂಭವಾಯಿತೆನ್ನಬಹುದು. ಮಣಿರತ್ನಂ ನಿರ್ದೇಶನದ ‘ರೋಜಾ’ ಎ.ಆರ್. ರೆಹಮಾನ್ ಅವರ ಮೊದಲ ಸಿನೆಮಾ ಆಗಿತ್ತು. ಅಲ್ಲಿಂದ ಸಿನೆಮಾ ಸಂಗೀತದಲ್ಲಿ ತಾಂತ್ರಿಕ ಪರಿಪೂರ್ಣತೆ (ಟೆಕ್ನಿಕಲ್ ಪರ್ಫೆಕ್ಷನ್) ಎನ್ನುವುದು ಬಂತು. ತಾಂತ್ರಿಕವಾಗಿ ಸೌಂಡ್ (ಶಬ್ದ) ಮುಖ್ಯವಾದದ್ದು. ಅದರಲ್ಲಿ ಪರಿಪೂರ್ಣತೆ. ಹಿಂದೆ ಸೌಂಡ್ ಮುಖ್ಯವಾಗಿರಲಿಲ್ಲ; ಸಾಹಿತ್ಯ ಮುಖ್ಯವಾಗಿತ್ತು; ಗಾಯನ ಮುಖ್ಯವಾಗಿತ್ತು. ಮೊದಲು ರಿದಂ (ತಾಳ) ಇದ್ದರೂ ಅದನ್ನು ಪ್ರಧಾನವಾಗಿ ಇರಿಸುತ್ತಿರಲಿಲ್ಲ.
ರೆಹಮಾನ್ ಬಂದ ಮೇಲೆ ಸಿನೆಮಾ ಸಂಗೀತ ತಾಳ ಪ್ರಧಾನವಾಯಿತು. ತಾಳಪ್ರಧಾನವೆಂದರೆ ಕುಣಿಸುವುದು. ಜನರನ್ನು ಕುಣಿಸಬೇಕು ಎನ್ನುವ ಮನಃಸ್ಥಿತಿಯ ಸಂಗೀತ ನಿರ್ದೇಶಕರಿಂದ ಕುಣಿಸುವ ಹಾಡುಗಳು ಜಾಸ್ತಿಯಾದವು (ರಿದಂ-ಓರಿಯೆಂಟೆಡ್). ಹೀಗೆ ತಾಳಪ್ರಧಾನವಾದಾಗ ಅದರಲ್ಲಿ ಮೆಲೊಡಿಯೂ ಮಿಕ್ಸ್ ಆದರೆ ಮಾತ್ರ ಸಂಗೀತವು ಯಶಸ್ವಿ ಆಗುತ್ತದೆ. ಬರೇ ರಿದಂ ಆದಾಗ ಸಕ್ಸಸ್ ಆಗುವುದಿಲ್ಲ. ಹರಿಕೃಷ್ಣ ಏನು ಮಾಡಿದರೆಂದರೆ, ಮೆಲೊಡಿ, ರಿದಂ ಎರಡನ್ನೂ ಮಿಕ್ಸ್ ಮಾಡಿ ಅದನ್ನು ಜನಪ್ರಿಯಗೊಳಿಸಿದರು. ಗುರುಕಿರಣ್ ಕೂಡ ಅದನ್ನೇ ಮಾಡಿದರು. ಒಳ್ಳೆಯ ಮೆಲೊಡಿ, ಒಳ್ಳೆಯ ರಿದಂ ಎರಡನ್ನೂ ಕೊಟ್ಟರು. ಉಪೇಂದ್ರ ಅವರ ‘ಎ’ ಸಿನೆಮಾ; ಮತ್ತು ಇತರ ಸಿನೆಮಾಗಳಲ್ಲೆಲ್ಲ ಒಂದು ರೀತಿಯ ರಿದಮ್ಯಾಟಿಕ್ ಹಾಡುಗಳು; ಮತ್ತೆ ಅದರಲ್ಲಿ ಒಳ್ಳೆಯ ಮೆಲೊಡಿ; ಗುರುಕಿರಣ್ ಮಾಡಿದ್ದು.
ಹೀಗೆ ಸಂಗೀತ ನಿರ್ದೇಶಕರಾಗಿ ಬಂದವರೆಲ್ಲ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ತುಂಬ ಪ್ರಯತ್ನಪಟ್ಟರು; ಸಾಕಷ್ಟು ಕೊಡುಗೆಗಳನ್ನೂ ಕೊಟ್ಟರು. ಒಬ್ಬ ಸಂಗೀತ ನಿರ್ದೇಶಕ ಚಿತ್ರರಂಗಕ್ಕೆ ಬಂದಾಗ ತಾನು ಯಶಸ್ವಿ ಆಗಬೇಕೆನ್ನುವ ಒಂದು ವಿಚಾರ ಮನಸ್ಸಿನಲ್ಲಿ ಬಂದು ತುಂಬ ಕಠಿಣ ಪರಿಶ್ರಮ ಮಾಡುತ್ತಾನೆ. ಒಳ್ಳೆಯ ರಿದಂ, ಒಳ್ಳೆಯ ಮೆಲೊಡಿ, ಒಳ್ಳೆಯ ಸಾಹಿತ್ಯ ಇವುಗಳ ಬಗ್ಗೆ ಗಮನ ಕೊಡುತ್ತಾನೆ. ಆಗ ಒಂದಷ್ಟು ಪ್ರಯೋಗಗಳು, ಒಂದಷ್ಟು ಒಳ್ಳೆಯ ಹಾಡುಗಳು ಬರುತ್ತವೆ.
ಕವಿಗಳು ಬಂದರು
ಅದಕ್ಕೆ ಸರಿಯಾಗಿ ನಮಗೆ ಜಯಂತ ಕಾಯ್ಕಿಣಿ, ಯೋಗರಾಜ ಭಟ್, ಕವಿರಾಜ್, ನಾಗೇಂದ್ರಪ್ರಸಾದ್ ಇವರೆಲ್ಲ ಸಿಕ್ಕಿದರು. ಸಾಹಿತ್ಯದಲ್ಲಿ ನಾವು ಏನಾದರೂ ಕೃಷಿ ಮಾಡಬೇಕೆಂದರೆ ಒಳ್ಳೆಯ ಸಾಹಿತ್ಯ ಬೇಕು. ಮೊದಲೆಲ್ಲ ಕವಿಗಳಿಗೆ ಟ್ಯೂನಿಗೆ ಸಾಹಿತ್ಯ ಬರೆಯಲು ಬರುತ್ತಿರಲಿಲ್ಲ. “ಟ್ಯೂನಿಗೆ ಪದ್ಯ ಬರೆಯಲಿಕ್ಕೆ ನಮಗೆ ಆಗುವುದಿಲ್ಲ. ನಮ್ಮ ಸಾಹಿತ್ಯಕ್ಕೆ ನೀವು ಟ್ಯೂನ್ ಹಾಕಿ” ಎಂದು ಹೇಳುತ್ತಿದ್ದರು. ಆದರೆ ಸಿನೆಮಾದ ಪದ್ಧತಿ ಏನೆಂದರೆ ಮೊದಲು ಟ್ಯೂನ್, ಆಮೇಲೆ ಸಾಹಿತ್ಯ. ಈ ಪದ್ಧತಿಯಲ್ಲಿ ಎಷ್ಟೆಷ್ಟೋ ಒಳ್ಳೆಯ ಹಾಡುಗಳು ಬಂದಿವೆ. ಚಿ. ಉದಯಶಂಕರ್, ಆರ್.ಎನ್. ಜಯಗೋಪಾಲ್, ವಿಜಯ ನಾರಸಿಂಹ, ನರೇಂದ್ರ ಬಾಬು, ಕು.ರಾ.ಸೀ., ದೊಡ್ಡರಂಗೇಗೌಡ, ಶ್ಯಾಮಸುಂದರ ಕುಲಕರ್ಣಿ, ಎಂ.ಎನ್. ವ್ಯಾಸರಾವ್, ರುದ್ರಮೂರ್ತಿ ಶಾಸ್ತ್ರಿ ಇವರೆಲ್ಲ ಟ್ಯೂನಿಗೆ ಬರೆದಿದ್ದರೂ ಒಳ್ಳೊಳ್ಳೆಯ ಹಾಡುಗಳು ಬಂದಿದ್ದವು. ಅದು ಟ್ಯೂನಿಗೆ ಬರೆದದ್ದೆಂದು ನಮಗೆ ಅನಿಸುವುದೇ ಇಲ್ಲ.. ಕೇಳಿದಾಗ ಅಲ್ಲಿ ಸಾಹಿತ್ಯ ಕಾಣುತ್ತದೆ; ಆದರೆ ಅದು ಟ್ಯೂನಿಗೆ ಬರೆದದ್ದು.
ಜಯಂತ ಕಾಯ್ಕಿಣಿ ಬಂದವರು ಟ್ಯೂನಿಗೆ ಕವಿತೆಯನ್ನೂ ಬರೆಯಬಹುದು ಎಂದು ತೋರಿಸಿಕೊಟ್ಟರು. ಅವರ ಸಿನೆಮಾ ಹಾಡುಗಳನ್ನು ಓದಿದರೆ ಅದು ಕವನ; ಕೇಳಿದಾಗ ಸಿನೆಮಾ ಹಾಡು. ಇದು ಜಯಂತ ಕಾಯ್ಕಿಣಿ ಅವರು ಮಾಡಿದ ಒಂದು ಬದಲಾವಣೆ. ಯೋಗರಾಜ ಭಟ್ಟರು ಫಿಲಾಸಫಿಗೆ ಹಾಸ್ಯದ ಲೇಪನ ಕೊಟ್ಟು ಹಾಡುಗಳನ್ನು ಬರೆದರು. ಉದಾಹರಣೆಗೆ ಅವರ ಒಂದು ಹಾಡು “ಕತ್ಲಲ್ಲಿ ಕರಡೀಗೆ ಜಾಮೂನು ತಿನ್ಸೋಕೆ ಯಾವತ್ತು ಹೋಗ್ಬಾರ್ದುರೀ” ಎಂದು ಆರಂಭವಾಗುತ್ತದೆ. ‘ಅತ್ಲಾಗಿ ಆ ಹುಡುಗಿ ಇತ್ಲಾಗಿ ಈ ಹುಡುಗಿ ಯಾವತ್ತು ಇರ್ಬಾರ್ದುರೀ; ಯಾವ್ದಕ್ಕು ಇನ್ನೊಬ್ಳ ಫೆÇೀನ್ ನಂಬರ್ ಇಟ್ಕೊಂಡಿರಿ’ ಎಂದೆಲ್ಲ ಹೇಳುತ್ತದೆ. ಅಂದರೆ ಏನರ್ಥ? ಅಲ್ಲಿ ಫಿಲಾಸಫಿ ಇದೆ. ಯಾವ ಕೆಲಸವನ್ನು ಮಾಡಬಾರದೋ ಅದನ್ನು ಮಾಡಲು ಹೋಗಬೇಡ (ಕರಡಿಗೆ ಜಾಮೂನು ತಿನ್ನಿಸುವುದು); ಅದೇ ರೀತಿ ಜೀವನದಲ್ಲಿ ಏನೇ ಆದರೂ ಇನ್ನೊಂದು ಬದಲಿ ಯೋಚನೆ ಮಾಡಬೇಕು, ಬದಲಿ ಪರಿಹಾರಮಾರ್ಗ ಇಟ್ಟುಕೊಳ್ಳಬೇಕು – ಎಂದು ಇದರಲ್ಲಿ ಹೇಳಿದ್ದಾರೆ. ಯೋಗರಾಜ ಭಟ್ಟರ ಹಾಡುಗಳಲ್ಲಿ ಮೇಲ್ನೋಟಕ್ಕೆ ಹಾಸ್ಯ ಕಂಡರೂ ಫಿಲಾಸಫಿಯೇ ಜಾಸ್ತಿ; ಯೋಚನೆ ಮಾಡಿದಾಗ ಅದರ ಒಳ ಅರ್ಥ ಹೊಳೆಯುತ್ತದೆ.
ಮೆಲೊಡಿ ಸದಾ ಹಸಿರು
ಆವತ್ತಿನ ಸಿನೆಮಾ ಹಾಡುಗಳು ಎಷ್ಟೊಂದು ಚೆನ್ನಾಗಿದ್ದವು; ಈವತ್ತಿನ ಹಾಡುಗಳು ಕೇಳುವುದಕ್ಕೇ ಆಗುವುದಿಲ್ಲ – ಎಂದು ತುಂಬ ಮಂದಿ ಹೇಳುತ್ತಾರೆ. ಅದನ್ನು ನಾನು ಒಪ್ಪುವುದಿಲ್ಲ. ಇಂದಿನ ಹಾಡುಗಳು ಕೂಡ ಚೆನ್ನಾಗಿವೆ. ಅವುಗಳಲ್ಲಿ ಒಳ್ಳೆಯ ಸಾಹಿತ್ಯವಿದೆ. ಈವತ್ತಿನ ಹಾಡುಗಳಲ್ಲೂ ಕೆಲವು ಹಿಟ್ ಆಗುತ್ತವೆ. ಆವತ್ತಿನ ಹೆಚ್ಚಿನ ಹಾಡುಗಳು ಯಾಕೆ ಹಿಟ್ ಆಗುತ್ತಿದ್ದವು, ಈವತ್ತು ಯಾಕೆ ಹಿಟ್ ಆಗುವುದಿಲ್ಲ ಎಂದರೆ ಅದಕ್ಕೆ ಕಾರಣವಿದೆ. ಆವತ್ತು ವರ್ಷಕ್ಕೆ ಬಿಡುಗಡೆ ಆಗುತ್ತಿದ್ದ ಚಿತ್ರಗಳು 20-30 ಮಾತ್ರ. ನಿಮಗೆ ಚಾಯ್ಸ್ ಇರಲಿಲ್ಲ. ಈಗ ವರ್ಷದಲ್ಲಿ ಸುಮಾರು 200 ಚಿತ್ರಗಳು ಬಿಡುಗಡೆ ಆಗುತ್ತಿವೆ; ಹೋದ ವರ್ಷ 248. ವರ್ಷಕ್ಕೆ ಇಷ್ಟೊಂದು ರಿಲೀಸ್ ಆದರೆ ಏನಾಗಬಹುದು? ನೀವು ಒಂದು ಅಥವಾ ಎರಡು ಮಾವಿನ ಹಣ್ಣು ತಿನ್ನಬಹುದು. ಒಂದು ಮೂಟೆ ಹಣ್ಣನ್ನು ನಿಮ್ಮ ಮುಂದೆ ಸುರಿದರೆ ತಿನ್ನಲು ಸಾಧ್ಯವೆ? ಒಂದೆರಡು ತುಂಬ ಒಳ್ಳೆಯ ಹಣ್ಣನ್ನು ಮಾತ್ರ ನೀವು ಆರಿಸಿಕೊಳ್ಳುತ್ತೀರಿ. ಅದೇ ರೀತಿ ಈವತ್ತು ಸಿನೆಮಾ ಹಾಡುಗಳು ರಾಶಿರಾಶಿ ಬಂದು ನಿಮ್ಮ ಮುಂದೆ ಬೀಳುತ್ತಿವೆ. ಮೊದಲು ನಿಮಗೆ ಆಯ್ಕೆ ಇದ್ದದ್ದು ಕನ್ನಡ ಮಾತ್ರ. ಈಗ ಟಿವಿ, ಫೇಸ್ಬುಕ್ಕು, ಇಂಟರ್ನೆಟ್ ಎಲ್ಲ ಇರುವಾಗ ತಮಿಳು, ತೆಲುಗು, ಹಿಂದಿ ಎಲ್ಲವನ್ನೂ ಕೇಳಬಹುದು. ಮೊಬೈಲಿನಲ್ಲಿ, ಯೂಟ್ಯೂಬಿನಲ್ಲಿ ಈವತ್ತು ಅಂಗೈಯಲ್ಲೇ ಹಿಂದಿ, ತಮಿಳು, ತೆಲುಗು ಹಾಡುಗಳು ಸಿಗುತ್ತವೆ. ಈಗ ತುಂಬ ಚೆನ್ನಾಗಿದ್ದರೆ ಮಾತ್ರ ಮನುಷ್ಯ ಕೇಳುತ್ತಾನೆ. ಉಳಿದದ್ದು ಚೆನ್ನಾಗಿದ್ದರೂ ಅವನಿಗೆ ಬೇಡ; ಬಿಟ್ಟುಬಿಡುತ್ತಾನೆ. ಅಂದರೆ ಈಗ ಆಯ್ಕೆಗೆ ಬೇಕಾದಷ್ಟಿದೆ. ಈಗ ಗೆದ್ದವ ನಿಜವಾದ ಪ್ರತಿಭಾವಂತ. ಇಷ್ಟು ರಾಶಿಯಲ್ಲಿ ಯಾರು ಜನರ ಗಮನ ಸೆಳೆಯುತ್ತಾನೋ ಅವನು ನಿಜವಾಗಿಯೂ ಪ್ರತಿಭಾವಂತ. ಇಂದು ಸಂಗೀತ ನಿರ್ದೇಶನ ಮಾಡುವವರಿಗೆ ತುಂಬ ಕಷ್ಟ ಇದೆ. ಏಕೆಂದರೆ ಅಷ್ಟೊಂದು ಸ್ಪರ್ಧೆ ಇದೆ. ಈವತ್ತು ನಾವು ಹಿಂದಿಯವರ ಜೊತೆ, ತಮಿಳಿನವರ ಜೊತೆ, ತೆಲುಗಿನವರ ಜೊತೆ ಸ್ಪರ್ಧಿಸಬೇಕು. ಅವರನ್ನು ಮೀರಿ ಸಾಂಗ್ (ಹಾಡು) ಮಾಡಬೇಕಾದರೆ ತುಂಬ ತಲೆಕೆಡಿಸಿಕೊಳ್ಳಬೇಕಾಗುತ್ತದೆ. ಅದು ಈವತ್ತಿನ ಸಂಗೀತ ನಿರ್ದೇಶಕನಿಗಿರುವ ಸವಾಲು. ಒಳ್ಳೆಯ ಟ್ಯೂನು, ಒಳ್ಳೆಯ ರಿದಮ್ಮು; ಜೊತೆಗೆ ಕುಣಿಸುವ ಬಗೆಗೂ ಗಮನ ಕೊಡಬೇಕು, ಕುಣಿಸಬೇಕು, ಮೆಲೊಡಿ ಬೇಕು. ಇದನ್ನು ಈಗಿನವರು ಮಾಡುತ್ತಿದ್ದಾರೆ. ಕೆಲವರು ಅದರಲ್ಲಿ ಗೆಲ್ಲುತ್ತಾರೆ; ಎಲ್ಲರಿಗೂ ಗೆಲ್ಲಲು ಆಗುವುದಿಲ್ಲ. ಎಲ್ಲರಿಗೂ ಅದನ್ನು ಕೊಡಲು ಕಷ್ಟ.
ಜನ ಮೆಲೊಡಿಯನ್ನು ಈಗಲೂ ಇಷ್ಟಪಡುತ್ತಾರೆ. ‘ಒಂದು ಮಳೆಬಿಲ್ಲು’ ಹಾಡು ಸೂಪರ್ ಹಿಟ್ ಆದದ್ದೇ ಅದಕ್ಕೆ ಸಾಕ್ಷಿ. ಆಮೇಲೆ ‘ಏನಮ್ಮಿ ಏನಮ್ಮಿ’ ಹಾಡು ಹಿಟ್ ಆಯಿತು. ಕೆಲವು ವರ್ಷಗಳ ಹಿಂದೆ ‘ಮುಂಗಾರು ಮಳೆ’, ‘ದುನಿಯಾ’, ‘ಕರಿಯ ಐ ಲವ್ ಯು’ ಚಿತ್ರಗಳ ಹಾಡುಗಳು ಅದೇ ಕಾರಣಕ್ಕೆ ಸೂಪರ್ ಹಿಟ್ ಆದವು. ಮೆಲೊಡಿ ಯಾವ ಕಾಲಕ್ಕೂ ಎವರ್ಗ್ರೀನ್; ಅದು ಸದಾ ಹಸಿರು. ಜನ ಯಾವತ್ತೂ ಅದನ್ನು ಇಷ್ಟಪಡುತ್ತಾರೆ. ಆದರೆ ಮೆಲಡಿ ಕೊಡುವುದು ಕಷ್ಟ. ಅದು ಎಲ್ಲರಿಗೂ ಬರುವುದಿಲ್ಲ. ಮೆಲೊಡಿ ಕೊಟ್ಟು ಯಾರು ಸಂಗೀತವನ್ನು ಹಿಟ್ ಮಾಡುತ್ತಾನೋ ಆ ಸಂಗೀತ ನಿರ್ದೇಶಕ ನಿಜಕ್ಕೂ ಗ್ರೇಟ್. ಮನೋಮೂರ್ತಿ ಮೆಲೊಡಿಯನ್ನು ಕೊಟ್ಟರು. ಹಿಂದೆ ‘ಅಮೆರಿಕ ಅಮೆರಿಕ’ ಮುಂತಾದ ಕೆಲವು ಚಿತ್ರಗಳಿಗೆ ಸಂಗೀತ ನೀಡಿದ್ದರೂ ಕೂಡ ಅವರಿಗೆ ಬ್ರೇಕ್ ಸಿಕ್ಕಿದ್ದು ‘ಮುಂಗಾರು ಮಳೆ’ಯಲ್ಲಿ. ಆನಂತರ ಬೆನ್ನು ಬೆನ್ನಿಗೆ ‘ಚೆಲುವಿನ ಚಿತ್ತಾರ’, ‘ಮಿಲನ’ ಮುಂತಾಗಿ ಸಾಲುಸಾಲಾಗಿ ಮ್ಯೂಸಿಕ್ ಮಾಡಿದರು. ಒಳ್ಳೆಯ ಮೆಲೊಡಿಯನ್ನೂ ಕೊಟ್ಟರು. ಸಿನೆಮಾ ಸಂಗೀತಕ್ಕೆ ಅವರ ಕೊಡುಗೆ ದೊಡ್ಡದೇ ಇದೆ. ಈಗ ಸ್ವಲ್ಪ ಹಿಂದೆ ಸರಿದಿದ್ದಾರೆ. ಒಂದು ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ; ಅದರಲ್ಲಿ ಬ್ಯುಸಿ ಇದ್ದಾರೆ.
ಕುಣಿತ ಜಾಸ್ತಿ
ಇನ್ನೊಂದು ಗಮನಿಸಬೇಕಾದ ಅಂಶವೆಂದರೆ, ಈಗ ಸಿನೆಮಾಗಳಲ್ಲಿ ಕುಣಿತ ಜಾಸ್ತಿ ಆಗಿದೆ. ಮೊದಲು ಅಷ್ಟು ಕುಣಿತ ಇರಲಿಲ್ಲ. ಮೊದಲು ಕುಣಿತದ ಸಾಂಗ್ನಲ್ಲಿ ಕೂಡ ಕುಣಿಯೋದನ್ನು ಜಾಸ್ತಿ ತೋರಿಸುತ್ತಿರಲಿಲ್ಲ. ಈಗ ಕುಣಿಯುವುದರಲ್ಲಿ ಏನಾಗಿದೆ ಎಂದರೆ ಟಿವಿ ಧಾರಾವಾಹಿಗಳ ಡಾನ್ಸಿಂಗ್ ರಿಯಾಲಿಟಿ ಶೋಗಳಲ್ಲಿ ವಿಪರೀತ ಕುಣಿಯುವುದನ್ನು ತೋರಿಸುತ್ತಿದ್ದಾರೆ. ಅವರು ಎಷ್ಟು ಚೆನ್ನಾಗಿ ಡಾನ್ಸ್ ಮಾಡುತ್ತಾರೆ, ಅದಕ್ಕಾಗಿ ಎಷ್ಟು ಹಣ ಖರ್ಚು ಮಾಡುತ್ತಾರೆ ಎಂಬುದನ್ನು ನೋಡಿದರೆ ನಾವು ಸಿನೆಮಾದವರು ಸಂಕೋಚಪಡಬೇಕು. ಅದನ್ನೆಲ್ಲ ನೋಡಿದ ಸಿನೆಮಾದವರು ತಾವು ಕೂಡ ಏನಾದರೂ ಮಾಡಬೇಕೆಂದು ಕಷ್ಟಪಡುತ್ತಿದ್ದಾರೆ. ಹೀಗೆ ಡಾನ್ಸ್ ರಿಯಾಲಿಟಿ ಶೋಗಳು ಸಿನೆಮಾಕ್ಕೆ ಸವಾಲಾಗಿವೆ; ಸ್ಫೂರ್ತಿಯಾಗಿವೆ. ಅದರಲ್ಲಿ ಸಾಕಷ್ಟು ಪ್ರಯೋಗ
ನಡೆಯುತ್ತಿದೆ. ‘ಡಾನ್ಸಿಂಗ್ ಸ್ಟಾರ್’ನಲ್ಲಿ ಕೂಡ ಅಷ್ಟೆ. ಎಷ್ಟು ವೆರೈಟಿ (ವೈವಿಧ್ಯ) ಡಾನ್ಸ್ ಮಾಡುತ್ತಾರೆ; ಸಿನೆಮಾಗಳಲ್ಲಿ ಯಾರು ಕೂಡ ಅಷ್ಟು ಮಾಡಿಲ್ಲ; ಅಷ್ಟು ರಿಸ್ಕ್ (ಅಪಾಯ) ತೆಗೆದುಕೊಂಡು ಮಾಡುತ್ತಾರೆ. ಕೆಲವು ಎಕ್ರೋಬ್ಯಾಟಿಕ್ಸ್ (ಡೊಂಬರಾಟ) ಥರ ಕಾಣಿಸಬಹುದು. ಆದರೆ ಅದೂ ಕಷ್ಟವೇ. ಜೀವದ ರಿಸ್ಕ್ ತೆಗೆದುಕೊಂಡು ಮಾಡುತ್ತಾರೆ. ಎಣಿಸಿಕೊಂಡರೆ ಮೈ ಜುಂ ಅನ್ನುತ್ತದೆ.
ಸಿನೆಮಾ ಸಂಗೀತದಲ್ಲಿ ಪ್ರಯೋಗಗಳಿಗೆ ಅವಕಾಶ ಇದ್ದೇ ಇದೆ. ನನಗೆ ಪ್ರಶಸ್ತಿ ತಂದುಕೊಟ್ಟ ಸಿನೆಮಾಗಳನ್ನು ಗಮನಿಸಿದರೆ ಅದು ತಿಳಿಯುತ್ತದೆ. ನನಗೆ ಮೊದಲಿಗೆ 1994ರಲ್ಲಿ ‘ಗೆಜ್ಜೆನಾದ’ಕ್ಕೆ ರಾಜ್ಯಪ್ರಶಸ್ತಿ ಬಂತು. ಅದು ಅತ್ಯುತ್ತಮ ಸಾಹಿತ್ಯಕ್ಕೆ ಬಂತು. ಆಮೇಲೆ ‘ಜನುಮದ ಜೋಡಿ’ಗೆ 1996ರಲ್ಲಿ ‘ಅತ್ಯುತ್ತಮ ಸಂಗೀತ’ (ಬೆಸ್ಟ್ ಮ್ಯೂಸಿಕ್) ಅಂತ ಬಂತು. ಮರುವರ್ಷ ‘ಜೋಡಿಹಕ್ಕಿ’ಗೆ ಬೆಸ್ಟ್ ಮ್ಯೂಸಿಕ್ ಅಂತ ಬಂತು. ಆಮೇಲೆ 2003ರಲ್ಲಿ ‘ಚಿಗುರಿದ ಕನಸು’ ಚಿತ್ರಕ್ಕೆ ಅತ್ಯುತ್ತಮ ಸಂಗೀತ ಪ್ರಶಸ್ತಿ ಬಂತು. ಇವು ನಾಲ್ಕು ರಾಜ್ಯಪ್ರಶಸ್ತಿಗಳು. ಇನ್ನು ‘ಜನುಮದ ಜೋಡಿ’ಗೆ ಹಾಗೂ ‘ಕಣ್ಣಲ್ಲೂ ನೀನೇ’ ಎನ್ನುವ ಹಾಡಿಗೆ ಎರಡು ‘ಫಿಲ್ಮ್ಫೇರ್’ ಪ್ರಶಸ್ತಿಗಳು ಬಂದವು. ‘ಜನುಮದ ಜೋಡಿ’ಗೆ ಆರ್ಯಭಟ ಪ್ರಶಸ್ತಿಯೂ ಬಂತು. ಅದು ನನ್ನ 30ನೇ ಸಿನೆಮಾ. ಈಗ 140 ಸಿನೆಮಾಗಳಿಗೆ ಸಂಗೀತ ನಿರ್ದೇಶನ ಮಾಡಿ ಆಗಿದೆ. 70-80 ಟಿವಿ ಧಾರಾವಾಹಿಗಳಿಗೆ ಟೈಟಲ್ ಮ್ಯೂಸಿಕ್ ಮಾಡಿಕೊಟ್ಟಿದ್ದೇನೆ.
ಪ್ರಶಸ್ತಿ ಗಳಿಸಿದ ‘ಜನುಮದ ಜೋಡಿ’ಯಲ್ಲಿ ಜಾನಪದ ಸಂಗೀತವನ್ನು ಬಳಸಿಕೊಂಡೆ. ಅದರ ಹಾಡುಗಳು ತಮಗೆ ಇಷ್ಟವೆಂದು ಜನ ಈಗಲೂ ಹೇಳುತ್ತಾರೆ. ಕಂಸಾಳೆ ಹಾಡನ್ನು ಅದಕ್ಕೆ ಬಳಸಿಕೊಂಡಿದ್ದೆ. ‘ಜೋಡಿಹಕ್ಕಿ’ಯಲ್ಲಿ ಜಾನಪದ, ಮೆಲೊಡಿ, ವೆಸ್ಟರ್ನ್ ಎಲ್ಲ ಇದೆ. ಏಕೆಂದರೆ ಅದು ಒಬ್ಬ ಗಾಯಕನ ಕಥೆ. ನನ್ನದು ಮೆಲೊಡಿ ಹಾಡುಗಳೇ ಜಾಸ್ತಿ. ನನಗೆ ವೆಸ್ಟರ್ನ್ ಮ್ಯೂಸಿಕ್ ಮಾಡುವ ಅವಕಾಶ ಅಷ್ಟೊಂದು ಬರಲಿಲ್ಲ. ‘ಅನುರಾಗ ಸಂಗಮ’ದಲ್ಲಿ ‘ಓಹೋಹೋ ಮೊನಾಲಿಸಾ, ನನ್ನೊಲವೆ ಮೊನಾಲಿಸಾ’ ಎನ್ನುವ ಒಂದು ಹಾಡು ಪಾಶ್ಚಾತ್ಯ ಸಂಗೀತದಲ್ಲಿ ಮಾಡಿದ್ದೆ. ಆದರೆ ಅದರಲ್ಲಿ ಹಿಟ್ ಆದದ್ದು ‘ಓ ಮಲ್ಲಿಗೆ ನಿನ್ನೊಂದಿಗೆ ನಾನಿಲ್ಲವೆ’ ಎನ್ನುವ ಹಾಡು. ಇನ್ನು ಜಗ್ಗೇಶ್ ಸಿನೆಮಾಗಳ ಸಂಗೀತದಲ್ಲಿ ಬೇಕಾದಷ್ಟು ಪ್ರಯೋಗಗಳನ್ನು ಮಾಡಿದ್ದೇನೆ.
ಸಾಹಿತ್ಯದ ಬಗ್ಗೆ ಹೇಳುವುದಾದರೆ, ನನ್ನ ಸಂಗೀತ ನಿರ್ದೇಶನಕ್ಕೆ ಹಾಡುಗಳನ್ನು ನಾನೊಬ್ಬನೇ ಬರೆಯುತ್ತಿರಲಿಲ್ಲ. ಆರಂಭದಲ್ಲಿ ನಮ್ಮ ಗುರುಗಳಾದ ಹಂಸಲೇಖ ಅವರಂತೆ ನಾನು ಕೂಡ ಪದ್ಯರಚನೆ, ಸಂಗೀತವನ್ನು ನಾನೇ ಮಾಡುತ್ತಿದ್ದೆ. ಆಮೇಲೆ ದೊಡ್ಡರಂಗೇಗೌಡ, ಎಂ.ಎನ್. ವ್ಯಾಸರಾವ್, ಶ್ಯಾಮಸುಂದರ ಕುಲಕರ್ಣಿ, ಕೆ. ಕಲ್ಯಾಣ್, ರಮೇಶ್ ರಾವ್ ಸೇರಿದಂತೆ ತುಂಬ ಸಾಹಿತಿಗಳು ನನ್ನ ಸಂಗೀತಕ್ಕೆ ಹಾಡು ಬರೆದುಕೊಟ್ಟಿದ್ದಾರೆ.
ಟ್ಯೂನ್ಗಳ ಬಗ್ಗೆ ಹೇಳುವುದಾದರೆ: ಪಿಯುಸಿ ಮತ್ತು ಕಾಲೇಜು ವಿದ್ಯಾರ್ಥಿಜೀವನದ ಹೊತ್ತಿಗೇ ತಲೆಯಲ್ಲಿ ಸುಮಾರು ಟ್ಯೂನ್ಗಳು ಗುನುಗುತ್ತಿದ್ದವು. ‘ಜೋಡಿಹಕ್ಕಿ’ಯಲ್ಲಿ ಎರಡು ಹಾಡುಗಳಿಗೆ ಆ ಟ್ಯೂನ್ಗಳನ್ನು ಬಳಸಿದ್ದೇನೆ. ‘ಓ ಚಂದಮಾಮ, ಓ ಚಂದಮಾಮ’ ಅದರಲ್ಲೊಂದು. ‘ನಮನ ನಮನ ಸಿರಿದೇವಿಗೆ’ 1980ರ ದಶಕದಲ್ಲಿ ಬೆಂಗಳೂರಿಗೆ ಬಂದ ಹೊಸದರಲ್ಲಿ ಮಾಡಿದ ಟ್ಯೂನು (ಹುಟ್ಟೂರು ದಕ್ಷಿಣಕನ್ನಡ ಜಿಲ್ಲೆಯ ವಿಟ್ಲ). ‘ಗಣೇಶ ಸುಬ್ರಹ್ಮಣ್ಯ’, ‘ಚೈತ್ರದ ಚಿಗುರು’ ಸಿನೆಮಾಗಳಿಗೂ ಅಂದಿನ ಆ ಟ್ಯೂನ್ಗಳನ್ನು ಬಳಸಿದ್ದೇನೆ. ಬ್ಯಾರಿ ಸಮುದಾಯವನ್ನು ಕುರಿತ ‘ಮುನ್ನುಡಿ’ ಸಿನೆಮಾದಲ್ಲಿ ಬಾಲ್ಯದಲ್ಲಿ ಕೇಳಿದ್ದ ಮಾಪಿಳ್ಳೆ ಪಾಟ್ಟುಗಳ ಟ್ಯೂನ್ಗಳನ್ನು ಬಳಸಿಕೊಂಡಿದ್ದೇನೆ. ಪ್ರತಿ ಸಿನೆಮಾದ ಕಂಪೆÇೀಸಿಂಗ್ ವೇಳೆ ಇಪ್ಪತ್ತೋ ಮೂವತ್ತೋ ಟ್ಯೂನ್ಗಳನ್ನು ಮಾಡಿಕೊಳ್ಳುತ್ತೇವೆ. ಅದರಲ್ಲಿ ಐದೋ ಆರೋ ಆಯ್ಕೆಯಾಗುತ್ತವೆ. ಉಳಿದವು ಹಾಗೇ ಇರುತ್ತವೆ. ಹಾಗೆ ಉಳಿದದ್ದೆಲ್ಲ ಸೇರಿ ಈಗ ಸುಮಾರು 1,000 ಟ್ಯೂನ್ಗಳು ಆಗಿರಬಹುದು. ವಿದ್ಯಾರ್ಥಿಯಾಗಿದ್ದಾಗ ಮಾಡಿದ ಟ್ಯೂನ್ಗಳಲ್ಲೇ ಸುಮಾರು ಹತ್ತು ಉಳಿದಿವೆ. ಅದನ್ನೊಂದು ಆಲ್ಬಮ್ ಆದರೂ ಮಾಡಬೇಕೆಂಬ ಯೋಚನೆಯಿದೆ; ಏಕೆಂದರೆ ಅವು ತುಂಬ ಒಳ್ಳೆಯ ಟ್ಯೂನ್ಗಳು.
ಗೆಳೆಯರ ಗುಂಪಿನಲ್ಲಿ ಹಾಡು ಕಟ್ಟಿ ಏನೋ ಟ್ಯೂನ್ ಹಾಕಿ ಹಾಡುವುದನ್ನು ವಿದ್ಯಾರ್ಥಿಜೀವನದಂತೆಯೇ ಮುಂದೆ ‘ಮುಂಗಾರು’ ದಿನಪತ್ರಿಕೆ, ‘ಜನವಾಣಿ’, ‘ಸಂಜೆವಾಣಿ’ ಪತ್ರಿಕೆಗಳಲ್ಲಿ (ಕಾರ್ಟೂನಿಸ್ಟ್ ಆಗಿ) ಇದ್ದಾಗಲೂ ಮಾಡುತ್ತಿದ್ದೆ. ಸಂಗೀತ ನಿರ್ದೇಶನವೆಂದರೆ ಅದೇ. ಅದು ನಮ್ಮ ಮನಸ್ಸಿನಿಂದ ಬರುವುದು. ಒಬ್ಬ ಜಾನಪದ ಸಂಗೀತಗಾರ ಏನೋ ತಮಟೆ ಬಡಿದುಕೊಂಡು ಹಾಡುತ್ತಾನಲ್ಲ. ಸಂಗೀತವನ್ನು ಆತ ಶಾಸ್ತ್ರೀಯವಾಗಿ ಕಲಿತಿರುವುದಿಲ್ಲ. ಆದರೆ ಏನೋ ಒಂದು ಟ್ಯೂನು ಒಳಗಡೆಯಿಂದ ಬರುತ್ತಿರುತ್ತದೆ. ಅದಕ್ಕೆ ಏನೋ ಸಾಹಿತ್ಯವನ್ನು ಸೇರಿಸಿ ಕಟ್ಟಿ ಹಾಡುತ್ತಾನೆ. ವ್ಯಕ್ತಿಯೊಬ್ಬನು ಸಂಗೀತ ನಿರ್ದೇಶಕನಾಗುವುದು ಹಾಗೇನೇ. ಅವನಿಗೆ ಆ ರೀತಿ ಟ್ಯೂನ್ ಕಟ್ಟಿ ಹಾಡುವ ಸಾಮಥ್ರ್ಯ ಇರಬೇಕು. ಸ್ವರಜ್ಞಾನ ಕಲಿತರೆ ಇನ್ನೂ ಚೆನ್ನಾಗಿ ಆಗುತ್ತದೆ. ‘ಸರಿಗಮಪದನಿ’ ಟಿವಿ ರಿಯಾಲಿಟಿ ಶೋದಲ್ಲಿ ಶಾಸ್ತ್ರೀಯ ಸಂಗೀತದ ಹಾಡುಗಳನ್ನು ಹಾಡುವವರೇ ಹೆಚ್ಚಾಗಿ ಬಹುಮಾನ ಗಿಟ್ಟಿಸಿಕೊಳ್ಳುವುದನ್ನು ಕಾಣಬಹುದು. ಅಂದರೆ ಟಫ್ (ಕಷ್ಟ) ಆಗಿರುವುದನ್ನು ಹಾಡಿದಾಗ ಅವರ ಸಾಮಥ್ರ್ಯ ಗೊತ್ತಾಗುತ್ತದೆ.
ನೆರೆ ರಾಜ್ಯಗಳಲ್ಲಿ
ಈಗ ಹಿಂದೀ ಹಾಗೂ ನಮ್ಮ ನೆರೆರಾಜ್ಯಗಳಲ್ಲಿನ ಸಿನೆಮಾ ಸಂಗೀತ ಹೇಗಿದೆ ಎನ್ನುವುದನ್ನು ಗಮನಿಸಬಹುದು. ಹಿಂದೀ ಹಾಡುಗಳು ಈಗಲೂ ಚೆನ್ನಾಗಿವೆ. ತಮಿಳು ಹಾಡುಗಳು ಅಷ್ಟೊಂದಿಲ್ಲ. ತೆಲುಗು ಹಾಡುಗಳು ಚೆನ್ನಾಗಿ ಬರುತ್ತಿವೆ. ತೆಲುಗಿನಲ್ಲಿ ಕುಣಿಸುವ ಹಾಡುಗಳು ತುಂಬಾ ಬರುತ್ತಿವೆ; ಮೆಲೊಡಿಯನ್ನು ಮಾಡುತ್ತಾರೆ. ತಮಿಳಿನಲ್ಲಿ ಪ್ರಯೋಗಗಳು ಜಾಸ್ತಿ ಆಗುತ್ತಿವೆ; ಮೆಲೊಡಿ ಕಡಮೆ ಆಗಿದೆ. ಮಲಯಾಳಂನಲ್ಲಿ ಈವತ್ತಿಗೂ ಮೆಲೊಡಿ ಇದೆ; ಅವರು ಮೊದಲಿನಿಂದಲೂ ಮೆಲಡಿಯನ್ನೇ ಮಾಡುತ್ತಿದ್ದಾರೆ. ಹಳೆಯ ಹಿಂದಿ ಹಾಡುಗಳನ್ನು ಈಗಲೂ ಜನ ಇಷ್ಟಪಡುತ್ತಾರೆ. ಶಂಕರ್-ಜೈಕಿಶನ್, ಲಕ್ಷ್ಮೀಕಾಂತ್-ಪ್ಯಾರೇಲಾಲ್, ಕಲ್ಯಾಣ್ಜೀ-ಆನಂದ್ಜೀ, ಆರ್.ಡಿ. ಬರ್ಮನ್, ಮದನ್ಮೋಹನ್, ಎಸ್.ಡಿ. ಬರ್ಮನ್, ಹೇಮಂತ್ಕುಮಾರ್, ಓ.ಪಿ. ನಯ್ಯರ್ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಹಿಂದೀ ಚಿತ್ರರಂಗವು ಶ್ರೀಮಂತ ಆಗುವುದಕ್ಕೆ ಮಹಮ್ಮದ್ ರಫಿ, ಕಿಶೋರ್ಕುಮಾರ್, ಮುಕೇಶ್, ಮಹೇಂದ್ರ ಕಪೂರ್, ಮನ್ನಾ ಡೇ, ಲತಾ ಮಂಗೇಶ್ಕರ್, ಆಶಾ ಭೋನ್ಸ್ಲೆ, ಸುಮನ್ ಕಲ್ಯಾಣಪುರ್, ಕೃಷ್ಣಾ ಕಲ್ಲೆ, ಶಾರದಾ – ಹೀಗೆ ಗಾಯಕ-ಗಾಯಕಿಯರು ತಮ್ಮ ಕೊಡುಗೆಗಳನ್ನು ನೀಡಿದ್ದಾರೆ.
ಕನ್ನಡದ ಗಾಯಕರು
ನಾನು ಹೆಚ್ಚಾಗಿ ಕನ್ನಡದ ಗಾಯಕ ಗಾಯಕಿಯರಿಂದ ಹಾಡಿಸಿದೆ. ರಾಜೇಶ್ ಕೃಷ್ಣ, ಹೇಮಂತ್, ಸಂತೋಷ್ ವೆಂಕಿ, ಶಶಾಂಕ್ ಶೇಷಗಿರಿ, ಚಿಂತನ್ ವಿಕಾಸ್, ವ್ಯಾಸರಾಜ ಸೋಸಲೆ, ಬಿ.ಆರ್. ಛಾಯಾ, ಮಂಜುಳಾ ಗುರುರಾಜ್, ಅನುರಾಧಾ ಭಟ್ ಮುಂತಾದವರಿಂದ ಹಾಡಿಸಿದೆ. ಮೊದಲು ಚಿತ್ರಾ ಅವರ ಕೈಯಲ್ಲಿ ಹಾಡಿಸಿದ್ದೇನೆ. ಆದಷ್ಟು ಕನ್ನಡ ಗಾಯಕರಿಗೇ ನಾನು ಹೆಚ್ಚಿನ ಅವಕಾಶ ನೀಡಿದೆ. ಏಕೆಂದರೆ ಇವರಲ್ಲಿ ಟ್ಯಾಲೆಂಟ್ (ಪ್ರತಿಭೆ) ಇದೆ; ಆದರೆ ಅವಕಾಶ ಇರಲಿಲ್ಲ; ಮತ್ತು ನಮ್ಮವರಿಂದ ಹಾಡಿಸಿದಾಗ ಕನ್ನಡದ ಕಬರು ಜಾಸ್ತಿ ಇರುತ್ತದೆ; ಮತ್ತು ನಮ್ಮ ಮಿತಿಯಲ್ಲಿ ನಮಗೆ ಅವರಿಂದ ಹಾಡಿಸಿದರೆ ಸಾಕು ಅನ್ನಿಸುತ್ತಿತ್ತು. ಕನ್ನಡದವರು ಒಳ್ಳೆಯ ಪ್ರತಿಭೆ ಇರುವವರು ತುಂಬ ಮಂದಿ ಇದ್ದಾರೆ. ಅವರಿಗೆ ನಾವೇ ಅವಕಾಶ ಕೊಡದಿದ್ದರೆ ಮತ್ತೆ ಯಾರು ಕೊಡುತ್ತಾರೆ? ಅದಕ್ಕಾಗಿ ನಾನು ಆದಷ್ಟು ಸ್ಥಳೀಯ ಗಾಯಕರಿಗೇ ಅವಕಾಶ ಕೊಡುತ್ತೇನೆ. ಈಗಲೂ ಹಾಗೆಯೇ. ನನಗೆ ಬಾಂಬೆ (ಮುಂಬಯಿ) ಸಿಂಗರ್ಗಳ ವ್ಯಾಮೋಹ ಇಲ್ಲ. ಆದರೆ ನಿರ್ಮಾಪಕರ ಒತ್ತಾಯಕ್ಕೆ ಎರಡೇ ಎರಡು ಹಾಡುಗಳನ್ನು ಸೋನು ನಿಗಮ್ರಿಂದ ಹಾಡಿಸಿದ್ದೇನೆ.
ಸಿನೆಮಾ ಸಂಗೀತದಲ್ಲಿ ಹಿನ್ನೆಲೆ ಸಂಗೀತ ಒಂದು ಪ್ರಮುಖ ಭಾಗವಾಗಿದೆ. ಅದನ್ನೂ ಸಂಗೀತ ನಿರ್ದೇಶಕರೇ ಕೊಡಬೇಕು. ಡಬ್ಬಿಂಗ್ ಎಲ್ಲ ಆದ ಮೇಲೆ ರೀರೆಕಾರ್ಡಿಂಗ್ನಲ್ಲಿ ಅದನ್ನು ಮಾಡಲಾಗುತ್ತದೆ. ಅದಕ್ಕೆ ನಾವು ದೃಶ್ಯವನ್ನು ಅನುಭವಿಸಿ, ಸನ್ನಿವೇಶದ ಬಗ್ಗೆ ನಿರ್ದೇಶಕರೊಡನೆ ಸಮಾಲೋಚನೆ ನಡೆಸಿ, ಒಂದು ಸನ್ನಿವೇಶಕ್ಕೆ ಯಾವುದು ಸೂಕ್ತವಾದ ವಾದ್ಯ, ಯಾವುದು ಸೂಕ್ತವಾದ ಧಾಟಿ ಎಂಬುದನ್ನು ತೀರ್ಮಾನಿಸಿ ಸಂಯೋಜನೆ ಮಾಡಿ ಹಾಕುತ್ತೇವೆ. ಕಥೆಯನ್ನು ಅನುಭವಿಸಿ, ಆ ಸನ್ನಿವೇಶದ ಭಾವನೆ ಏನು ಎಂಬುದನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕ ಹಾಗೆ ಮಾಡಬೇಕು. ಅದು ಕಷ್ಟದ ಕೆಲಸ; ಆದರೆ ಎಫೆಕ್ಟಿವ್ (ಪರಿಣಾಮಕಾರಿ) ಆದ ಕೆಲಸ. ಆ ಸಂಗೀತವು ಸಂಭಾಷಣೆಯನ್ನು ಡಾಮಿನೇಟ್ ಮಾಡಬಾರದು. ಅದು ಸಂಭಾಷಣೆಯನ್ನು ಮುಚ್ಚಿಹಾಕುವ ಸಂಗೀತ ಆಗಬಾರದು, ಅದಕ್ಕೆ ಪೂರಕವಾಗಿರಬೇಕು; ಆ ದೃಶ್ಯವನ್ನು ಎತ್ತಿಹಿಡಿಯಬೇಕು. ಅಲ್ಲಿಯ ಭಾವನೆಯನ್ನು ಜನರ ಮುಂದೆ ಸ್ಪಷ್ಟವಾಗಿ ಎತ್ತಿಹಿಡಿಯಬೇಕು. ಡಾಮಿನೇಟ್ ಮಾಡಬಾರದು. ಅದಕ್ಕೆ ಬೇರೆ ಬೇರೆ ವಾದ್ಯಗಳನ್ನು ಬಳಸುತ್ತೇವೆ. ವಾದ್ಯಸಂಗೀತ ಡಾಮಿನೇಟ್ ಮಾಡಿದಾಗ ಸಂಗೀತ ಎಲ್ಲವನ್ನೂ ಮುಚ್ಚಿಹಾಕುತ್ತದೆ. ಹಿನ್ನೆಲೆ ಸಂಗೀತಕ್ಕೆ ಕನ್ನಡದಲ್ಲಿ ಪ್ರತ್ಯೇಕ ಪ್ರಶಸ್ತಿಯಿಲ್ಲ. ಬೇರೆ ಕೆಲವು ಭಾಷೆಗಳಲ್ಲಿ ಕೊಡುತ್ತಾರೆ. ಕನ್ನಡದಲ್ಲಿ ಆ ರೀತಿಯ ವಿಭಾಗ ಮಾಡಿಲ್ಲ. ಇನ್ನೊಂದು ಕೊರತೆಯೆಂದರೆ ಮಕ್ಕಳಿಗೆ ಅವಾರ್ಡಿಲ್ಲ; ಬಾಲಗಾಯಕರಿಗೆ ಸಿನೆಮಾ ಸಂಗೀತದಲ್ಲಿ ಪ್ರಶಸ್ತಿಯಿಲ್ಲ.
ಇದು ರಂಗಸಂಗೀತ
ಸಿನೆಮಾ ಸಂಗೀತ ಒಂದು ರಂಗಸಂಗೀತವೇ ಆಗಿದೆ. ರಂಗಸಂಗೀತದಲ್ಲಿ ಪಾಶ್ಚಾತ್ಯ ಸಂಗೀತ, ಜಾನಪದ ಸಂಗೀತಗಳೆಲ್ಲ ಇತ್ತಲ್ಲವೇ? ಸಿನೆಮಾದಲ್ಲೂ ಅಷ್ಟೇ. ಹಿರಣ್ಣಯ್ಯನವರು ಆಡುತ್ತಿದ್ದ ‘ಸದಾರಮೆ’ ನಾಟಕದಲ್ಲಿ ಕುಡುಕರ ಹಾಡಿತ್ತು. 1950ರ ದಶಕದಲ್ಲೇ ಅದನ್ನು ಬಳಸುತ್ತಿದ್ದರು. ನಾಟಕದ ಪಾತ್ರಗಳು ಯಾವಾವ ಥರ ಇರುತ್ತಿದ್ದವು – ಆ ಪಾತ್ರಗಳಿಗೆ ನೀವು ಹಾಡು ಮಾಡಬೇಕು. ‘ಕರಿಯ’ ಸಿನೆಮಾದಲ್ಲಿ ‘ಕೆಂಚಾಲೋ ಮಂಚಾಲೋ’ ಹಾಡು ಹಿಟ್ ಆಯಿತು. ಆಗ ಕೆಲವರು “ಏನ್ಸಾರ್ ಸಂಗೀತ? ಈ ತರಹ ಸಿನೆಮಾ ಹಾಡುಗಳು?” ಎಂದು ಆಕ್ಷೇಪಿಸಿದರು. ಆದರೆ ಸಿನೆಮಾದಲ್ಲಿ ಆ ಹಾಡನ್ನು ಹಾಡುವ ಪಾತ್ರ ಯಾವುದು? ಒಬ್ಬ ರೌಡಿ. ರೌಡಿಗಳು ‘ಜಯತು ಜಯ ವಿಠಲ’ ಹಾಡಲು ಆಗುವುದಿಲ್ಲ; ‘ಕೆಂಚಾಲೊ ಮಂಚಾಲೊ’ವನ್ನೇ ಹಾಡಬೇಕು. ಅದನ್ನು ನಾಗೇಂದ್ರಪ್ರಸಾದ್ ತುಂಬಾ ಚೆನ್ನಾಗಿ ಬರೆದಿದ್ದಾರೆ; ಸಂಗೀತ ಗುರುಕಿರಣ್. ಆ ಹಾಡು ಸಿನೆಮಾದ ಯಾವ ಪಾತ್ರ? ಅದಕ್ಕೆ ತಕ್ಕದ್ದೋ ಹಾಡನ್ನು ಹಾಡಬೇಕು. ಸಂಗೀತವು ಪಾತ್ರಕ್ಕೆ ಸರಿಯಾಗಿ ಇರಬೇಕು. ರಂಗ ಸಂಗೀತವೆಂದರೆ ಎಲ್ಲವನ್ನೂ ಅದು ಒಳಗೊಳ್ಳಬೇಕು.
ಶಾಸ್ತ್ರೀಯ ಸಂಗೀತ ಅನಿವಾರ್ಯ
ಗಮನಿಸಬೇಕಾದ ಮಹತ್ತ್ವದ ಅಂಶವೆಂದರೆ, ಸಿನೆಮಾ ಸಂಗೀತವು ಶಾಸ್ತ್ರೀಯ ಸಂಗೀತವನ್ನು ಮರೆಯುವಂತಿಲ್ಲ. ಶಾಸ್ತ್ರೀಯ ಸಂಗೀತದ ಅಡಿಪಾಯವಿಲ್ಲದೆ ಸಿನೆಮಾ ಸಂಗೀತ ಆಗುವುದಿಲ್ಲ. ಶಾಸ್ತ್ರೀಯ ಸಂಗೀತದ ಅಡಿಪಾಯ ಬೇಕೇ ಬೇಕು. ಇಲ್ಲವಾದರೆ ನಿಮಗೆ ಆ ಸ್ಟ್ರಕ್ಚರೇ ಸಿಗುವುದಿಲ್ಲ. ಸಿನೆಮಾ ಸಂಗೀತಕ್ಕೆ ಒಂದು ಚೌಕಟ್ಟು ಸಿಗಬೇಕಾದರೆ ಶಾಸ್ತ್ರೀಯ ಸಂಗೀತದ ತಳಪಾಯ ಅನಿವಾರ್ಯ. ಪೂರ್ತಿ ಜಾನಪದ ಟ್ಯೂನಿನಿಂದ ಸಂಗೀತ ಮಾಡುವುದು ಕಾರ್ಯಸಾಧ್ಯವಲ್ಲ. ಜಾನಪದ ಹಾಡಿನ ಒಳಗಡೆ ಕೂಡ ಒಂದು ಶಾಸ್ತ್ರೀಯ ಸಂಗೀತದ ಅಂಶ ಇರುತ್ತದೆ. ಜಾನಪದ ಹಾಡುಗಳು ಕೇಳಲು ಸರಳವಾಗಿ ಇರಬಹುದು. ಆದರೆ ಅವು ಯಾವುದೋ ಒಂದು ರಾಗ ಆಧಾರಿತ ಆಗಿಯೇ ಇರುತ್ತದೆ. ಅದನ್ನು ಸಂಯೋಜನೆ ಮಾಡಿದವನಿಗೆ ಅದು ಗೊತ್ತೇ ಇರುವುದಿಲ್ಲ. ನನ್ನದೇ ಅನುಭವ ಹೇಳುವುದಾದರೆ, ಕಾಲೇಜಿಗೆ ಹೋಗುವಾಗ ನನಗೆ ಶಾಸ್ತ್ರೀಯ ಸಂಗೀತದ ಜ್ಞಾನ ಇರಲಿಲ್ಲ; ಆಗ ನನಗೊಂದು ಟ್ಯೂನ್ ಬಂದಿತ್ತು. ಅದನ್ನು ನಾನು ‘ಜೋಡಿಹಕ್ಕಿ’ ಸಿನೆಮಾದ ಸಂಗೀತಕ್ಕೆ ಬಳಸಿಕೊಂಡೆ. ‘ಓ ಚಂದಮಾಮ ಓ ಚಂದಮಾಮ’ ಎನ್ನುವ ಆ ಹಾಡು ಯಾವ ರಾಗ ಆಧಾರಿತ ಎಂದು ನನಗೆ ಗೊತ್ತಿರಲಿಲ್ಲ. ಹಾಡನ್ನು ರೆಕಾರ್ಡಿಂಗ್ ಮಾಡುವಾಗ ಶಂಕರ ಶಾನುಭೋಗ್ ಹೇಳಿದರು – ಅದು ‘ಚಾರುಕೇಶಿ’ ರಾಗ ಅಂತ. ನನ್ನೊಳಗಿದ್ದ ಟ್ಯೂನ್ ಚಾರುಕೇಶಿ ರಾಗದ್ದೆಂದು ನನಗೆ ಆಗಲೇ ಗೊತ್ತಾಗಿದ್ದು!ಮಾಡುವಾಗ ನನಗೆ ಏನು ಭಾವನೆ ಬಂತೋ ಆ ಭಾವನೆಯಲ್ಲಿ ರಾಗ ಸಂಯೋಜನೆ ಮಾಡಿದೆ. ನನಗೆ ಬಂದ ಟ್ಯೂನ್ ಯಾವ ರಾಗವೆಂದು ನನಗೆ ಗೊತ್ತಿರಲಿಲ್ಲ. ಸಂಗೀತ ಗೊತ್ತಿದ್ದವರು ಅದನ್ನು ಗುರುತಿಸಿದರು. ಒಂದು ರಾಗ ಆಧಾರಿತ ಹಾಡು ಮಾಡಿದ್ದೇನೆಂದು ಆಗ ನನಗೆ ಖುಷಿ ಆಯಿತು. ಹೀಗೆ, ರಾಗಜ್ಞಾನವಿಲ್ಲದಿದ್ದರೆ ನಮಗೆ ಹಾಡು ಮಾಡುವಾಗ ಯಾವ ರಾಗವೆಂದು ಗೊತ್ತಾಗುವುದಿಲ್ಲ. ‘ಗೆಜ್ಜೆ ನಾದ’ ಚಿತ್ರಕ್ಕೆ ‘ಮಳ್ಳಿ ಮಳ್ಳಿ ಮಿಂಚುಳ್ಳಿ’ ಎನ್ನುವ ಒಂದು ಸಾಂಗ್ ಮಾಡಿದೆ; ಅದು ಸೂಪರ್ ಹಿಟ್ ಆಯಿತು. ಅದು ಮೋಹನ ರಾಗವೆಂದು ಗೆಳೆಯರು ಹೇಳಿದರು. ಅಲ್ಲಿ ಕೂಡ ಹಾಡನ್ನು ಮಾಡಿದ ಮೇಲೆಯೇ ರಾಗ ಗೊತ್ತಾದದ್ದು.
ಕೆಲಸ ಸುಲಭ
ಈಗ ನನಗೆ ಸುಮಾರು 30-40 ರಾಗಗಳ ಪರಿಚಯವಿದೆ. ಅದರಲ್ಲಿ ಹಿಂದುಸ್ತಾನಿ, ಕರ್ನಾಟಕ ಸಂಗೀತ ಎರಡೂ ಇವೆ. ಸಾಮಾನ್ಯವಾಗಿ ಕೆಲವು ರಾಗಗಳು ಹಿಂದುಸ್ತಾನಿಯಲ್ಲಿ ಒಂದು ಹೆಸರಿದ್ದರೆ ಕರ್ನಾಟಕ ಸಂಗೀತದಲ್ಲಿ ಬೇರೆ ಹೆಸರು ಇರುತ್ತದೆ; ಸ್ವರಗಳು ಒಂದೇ. ಹಿಂದುಸ್ತಾನಿಯ ಮಾಲಕೌಂಸ್ ಕರ್ನಾಟಕದಲ್ಲಿ ಹಿಂದೋಳ. ಕರ್ನಾಟಕದ ಮೋಹನರಾಗ ಹಿಂದುಸ್ತಾನಿಯಲ್ಲಿ ಭೂಪ್. ಒಂದಷ್ಟು ರಾಗಗಳನ್ನು ಕೇಳಿ ಬಲ್ಲೆ. ಕೀರವಾಣಿ, ದರ್ಬಾರೀ, ಪಟ್ದೀಪ್ (ಗೌರಿ ಮನೋಹರಿ), ಭೀಮಪಲಾಸ್, ದರ್ಬಾರೀ ಕಾನಡಾ, ಆಮೇಲೆ ಕಲ್ಯಾಣಿ, ನೀಲಾಂಬರಿ, ಸಿಂಧುಭೈರವಿ, ತೋಡಿ, ಶುಭಪಂತುವರಾಳಿ – ಹೀಗೆ ಕೆಲವು ರಾಗಗಳ ಪರಿಚಯ ಇರುವುದರಿಂದ ನನಗೆ ಈವಾಗ ಅಷ್ಟು ಕಷ್ಟ ಇಲ್ಲ. ಮೊದಲು ಟ್ಯೂನ್ಗಳು ತಾವಾಗಿ ಬರುತ್ತಿದ್ದವು. ಈಗ ಶಾಸ್ತ್ರೀಯ ಸಂಗೀತದ ಪರಿಚಯ ಸ್ವಲ್ಪ ಇರುವುದರಿಂದ ಕೆಲಸ ಸುಲಭವಾಗಿದೆ.
ಸಂಗೀತವಂತೂ ನಾನು ತುಂಬ ಕೇಳುತ್ತೇನೆ. ನಮಗೆ ಅದು ಬೇಕೇ ಬೇಕು. ಸಂಗೀತ ಕೇಳುವುದೆಂದರೆ ನನಗೆ ತುಂಬ ಪ್ರೀತಿ. ಎಲ್ಲ ಭಾಷೆಗಳ, ಎಲ್ಲ ದೇಶಗಳ ಹಾಡು ಕೇಳುತ್ತೇನೆ. ಶಾಸ್ತ್ರೀಯದಲ್ಲಿ ಕರ್ನಾಟಕ, ಹಿಂದುಸ್ತಾನಿ ಎರಡೂ ಕೇಳುತ್ತೇನೆ. ಏಕೆಂದರೆ ಎರಡೂ ನನ್ನ ಸಹಾಯಕ್ಕೆ ಬರುತ್ತವೆ. ಶಾಸ್ತ್ರೀಯ ಸಂಗೀತವನ್ನು ಕೇಳಿದ್ದು ಸಿನೆಮಾ ಸಂಗೀತ ಮಾಡುವಾಗ ತುಂಬಾ ಉಪಯುಕ್ತ ಆಗುತ್ತದೆ. ಶಾಸ್ತ್ರೀಯ ಸಂಗೀತ ಏನೂ ಗೊತ್ತಿಲ್ಲದೆ ಕೆಲವರು ಸಂಗೀತ ಮಾಡುತ್ತಾರೆ; ಅದು ಸರಳವಾಗಿ ಇರುತ್ತದೆ. ಆದರೆ ಅದರಲ್ಲಿ ಸತ್ತ್ವ ಇರುವುದಿಲ್ಲ; ಮುಖ್ಯವಾಗಿ ರಸ ಇರುವುದಿಲ್ಲ. ಅದೇ ನಿಮಗೆ ಶಾಸ್ತ್ರೀಯ ಸಂಗೀತ ಗೊತ್ತಿದ್ದರೆ ಸ್ವಲ್ಪ ಟಫ್ ಆಗಿ ಮಾಡುತ್ತೀರಿ. ಅದಕ್ಕೊಂದು ಸ್ಟ್ರಕ್ಚರ್ (ಆಕಾರ) ಕೊಡುತ್ತೀರಿ; ಆ ಸಂಗೀತಕ್ಕೆ ಒಳ್ಳೆಯ ಆಕಾರ ಬರುತ್ತದೆ.
ಸಂಗೀತವು ಪೂರಕ
ಕೆಲವರು ಸಂಗೀತದಿಂದ ಒಂದು ಸಿನೆಮಾ ಕ್ಲಿಕ್ (ಯಶಸ್ವಿ) ಆಯಿತು ಎನ್ನುತ್ತಾರೆ. ಅದನ್ನು ನಾನು ಒಪ್ಪುವುದಿಲ್ಲ. ಸಿನೆಮಾ ಚೆನ್ನಾಗಿದ್ದರೆ ಸಂಗೀತ ಕೂಡ ಕ್ಲಿಕ್ ಆಗುತ್ತದೆ. ಸಿನೆಮಾ ತೀರಾ ಕಳಪೆಯಾದಾಗ ಅದರ ಸಂಗೀತ ಜನರನ್ನು ತಲಪುವುದಿಲ್ಲ. ಅದರ ಸಂಗೀತ ಜನರಿಗೆ ಇಷ್ಟ ಆಗುವುದಿಲ್ಲ. ಅದು ಶವಕ್ಕೆ ಅಲಂಕಾರ ಮಾಡಿದ ಹಾಗೆ. ಶವವನ್ನು ಎಷ್ಟು ಅಲಂಕಾರ ಮಾಡಿದರೂ ಅದು ಆಕರ್ಷಕವಾಗಿ ಕಾಣಿಸುವುದಿಲ್ಲ; ಶವ ಶವವೇ. ಕಥೆ ಒಂದು ಸಿನೆಮಾದ ಜೀವ. ಆ ಜೀವವೇ ಇಲ್ಲ ಎಂದಾದರೆ ಸಂಗೀತದಿಂದ ನೀವು ಎಷ್ಟು ಅಲಂಕಾರ ಮಾಡಿದರೂ ಅಷ್ಟೆ. ಕಥೆಯೇ ಜೀವ. ಕಥೆ, ಚಿತ್ರಕಥೆ, ಸಂಭಾಷಣೆ ಒಟ್ಟಾಗಿ ಸಿನೆಮಾ ಸಂಗೀತ ಇಲ್ಲದೆಯೂ ಚೆನ್ನಾಗಿದೆ ಎಂದಾಗ ಅದಕ್ಕೆ ಸಂಗೀತವೂ ಚೆನ್ನಾಗಿ ಬಂದರೆ ಆಗ ಸಂಗೀತವು ಸೂಪರ್ಹಿಟ್ ಆಗುತ್ತದೆ.
ಕೆಲವು ಚಿತ್ರಗಳು ತುಂಬಾ ಚೆನ್ನಾಗಿರುತ್ತವೆ; ಆದರೆ ಹಾಡುಗಳು ಸೋಲುತ್ತವೆ; ಏಕೆಂದರೆ ಹಾಡುಗಳು ಚೆನ್ನಾಗಿರುವುದಿಲ್ಲ. ಇನ್ನು ಕೆಲವು ಸಿನೆಮಾಗಳ ಹಾಡುಗಳು ತುಂಬಾ ಇಷ್ಟವಾಗುತ್ತವೆ. ಆದರೆ ಪಿಕ್ಚರ್ ಚೆನ್ನಾಗಿರುವುದಿಲ್ಲ. ಆಗ ಹಾಡುಗಳು ಅಷ್ಟೊಂದು ಜನಪ್ರಿಯ ಆಗುವುದಿಲ್ಲ. ಸಿನೆಮಾ ಕೂಡ ಚೆನ್ನಾಗಿದ್ದಾಗ ಅದರ ಸಂಗೀತವೂ ಪ್ಲಸ್ ಆಗುತ್ತದೆ. ‘ಜನುಮದ ಜೋಡಿ’ ಹಾಡುಗಳು ಸೂಪರ್ ಹಿಟ್ ಆದವು; ಅದು ಸಿನೆಮಾ ಕೂಡಾ ಚೆನ್ನಾಗಿತ್ತು. ಒಂದಕ್ಕೊಂದು ಸೇರಿತು. ‘ಎ’, ‘ಉಪೇಂದ್ರ’, ‘ಜನುಮದ ಜೋಡಿ’, ‘ಪ್ರೇಮಲೋಕ’, ‘ದುನಿಯಾ’, ‘ಮುಂಗಾರು ಮಳೆ’ ಇವೆಲ್ಲ ಒಳ್ಳೆಯ ಚಿತ್ರವೂ ಸಂಗೀತವೂ ಒಂದಕ್ಕೊಂದು ಕೂಡಿ ಬಂದ ನಿದರ್ಶನಗಳು.
ಕಿರುತೆರೆ ಸಂಗೀತ
ಕಿರುತೆರೆಯ ಧಾರಾವಾಹಿಗಳು ಈಗ ಬಹಳಷ್ಟು ಜನಪ್ರಿಯವಾಗುತ್ತಿವೆ. ಸಿನೆಮಾ ಸಂಗೀತಕ್ಕೂ ಕಿರುತೆರೆ ಸಂಗೀತಕ್ಕೂ ಸ್ವಲ್ಪ ವ್ಯತ್ಯಾಸವಿದೆ. ಕಿರುತೆರೆಯಲ್ಲಿ ಹಿನ್ನೆಲೆ ಸಂಗೀತವೇ ಮುಖ್ಯ. ಮೊದಲು ಶೀರ್ಷಕಗೀತೆ (ಟೈಟಲ್ ಸಾಂಗ್) ಇರುತ್ತಿತ್ತು. 70-80 ಸೀರಿಯಲ್ಗಳಿಗೆ ನಾನು ಟೈಟಲ್ ಮ್ಯೂಸಿಕ್ ಮಾಡಿದ್ದೇನೆ. ಈಚೆಗೆ ನಾನು ಸಂಗೀತ ನೀಡಿದ ಸೀರಿಯಲ್ ‘ಮಂಗಳೂರು ಹುಡುಗಿ, ಹುಬ್ಬಳ್ಳಿ ಹುಡುಗ’. ಐದಾರು ವರ್ಷಗಳ ಹಿಂದೆ ‘ಪಾಂಡುರಂಗ ವಿಠಲ’ ಮತ್ತು ‘ಪಾರ್ವತಿ ಪರಮೇಶ್ವರ’ಗಳಿಗೆ ಸಂಗೀತ ಮಾಡಿದ್ದೆ. ಆಮೇಲೆ ಪಿ. ಶೇಷಾದ್ರಿ ಅವರ ‘ಮೌನರಾಗ’ ಮತ್ತು ‘ಉಯ್ಯಾಲೆ’ಗೆ ಮಾಡಿದ್ದೆ. ನನಗೆ ಜಾಸ್ತಿ ಹೆಸರು ತಂದುಕೊಟ್ಟಿದ್ದು ಸಿಹಿಕಹಿ ಚಂದ್ರು ಅವರ ‘ಸಿಲ್ಲಿ ಲಲ್ಲಿ’, ‘ಪಾಪ ಪಾಂಡು’. ಚಂದ್ರು ಅವರ ಎಲ್ಲ ಸೀರಿಯಲ್ಗಳಿಗೂ ನಾನೇ ಮ್ಯೂಸಿಕ್ ಮಾಡಿದ್ದು. ‘ದಂಡಪಿಂಡಗಳು’ ನನಗೊಂದು ಟರ್ನಿಂಗ್ ಪಾಯಿಂಟ್ ಆಯಿತು. ಅದರ ಸಂಗೀತ ನಿರ್ದೇಶನ ರಾಜೇಶ್ ರಾಮನಾಥನ್ ಅವರದ್ದಾದರೂ ಹಾಡಿದ್ದು ಮತ್ತು ನಾರದನ ಪಾತ್ರ ಮಾಡಿದ್ದು ನಾನು; ಹೀಗಾಗಿ ಹೆಸರು ನನಗೆ ಬಂತು.
‘ದಂಡಪಿಂಡಗಳು’, ‘ಪಾಪ ಪಾಂಡು’ ಮತ್ತು ‘ಸಿಲ್ಲಿ ಲಲ್ಲಿ’ ಬಂದ ಸಮಯದಲ್ಲಿ ಒಂದು ಹಾಡನ್ನು ಪೂರ್ತಿ ಹಾಕುತ್ತಿದ್ದರು. ಈಗ ಶೀರ್ಷಕ ಗೀತೆ ಒಂದೇ ಸಾಲು ಹಾಕುವುದು – ಹತ್ತು ಸೆಕೆಂಡ್; ಅದಕ್ಕಿಂತ ಜಾಸ್ತಿ ಹಾಕುವುದಿಲ್ಲ. ಹಾಡನ್ನು ಮಾಡಿಸಿಕೊಳ್ಳುತ್ತಾರೆ; ಒಂದು ವಾರ ಹಾಕುತ್ತಾರೆ. ಆನಂತರ ಮುಂದುವರಿಸುವುದಿಲ್ಲ. ಕಿರುತೆರೆಯಲ್ಲಿ ದೃಶ್ಯವೇ ಪ್ರಧಾನ ಆಗಿರುವುದರಿಂದ ಹಿನ್ನೆಲೆಸಂಗೀತ ಮುಖ್ಯ. ಈ ಸೀರಿಯಲ್ಗಳಿಗೆ ಮ್ಯೂಸಿಕ್ ಮಾಡುವುದು ತುಂಬ ಕಷ್ಟ. ಒಂದು ಟಿವಿ ಸೀರಿಯಲ್ಲಿಗೆ ಬರೆಯುವುದು ಕೂಡ ಕಷ್ಟವೇ. ಸೀರಿಯಲ್ನ ಒಂದು ಕಂತಿಗೆ ಅರ್ಧಗಂಟೆ ಇದ್ದರೆ ಅದರಲ್ಲಿ ಮೂರು ಇಂಟರ್ವಲ್ಗಳು (ಪುಟ್ಟ ವಿರಾಮ) ಇರುತ್ತವೆ; ಕಮರ್ಷಿಯಲ್ ಬ್ರೇಕ್. ಆ ಮೂರು ಬ್ರೇಕ್ಗಳಲ್ಲಿ ಕೂಡ ಒಂದೊಂದು ಟ್ವಿಸ್ಟ್ ಇಡಬೇಕು. ಏಕೆಂದರೆ ಈ ಬ್ರೇಕ್ ಕೊಟ್ಟ ತಕ್ಷಣ ನೋಡುತ್ತಿದ್ದವ ಚಾನೆಲ್ ಚೇಂಜ್ ಮಾಡಬಾರದು. ಅದಕ್ಕಾಗಿ ಒಂದು ಕುತೂಹಲಕಾರಿ ದೃಶ್ಯದಿಂದ ಕೊನೆ ಮಾಡಬೇಕು. ಅರ್ಧಗಂಟೆಯಲ್ಲಿ ಅಂತಹ ಮೂರು ಸಂದರ್ಭಗಳು ಬರುತ್ತವೆ; ಒಂದು ದಿನಕ್ಕೆ ಅಷ್ಟು. ಅಷ್ಟು ಕಷ್ಟಪಟ್ಟು ಒಂದು ಸಿನೆಮಾಕ್ಕಿಂತ ಹೆಚ್ಚು ಯೋಚನೆ ಮಾಡಿ ಬರೆದರೂ ಅದರ ಆಯುಸ್ಸು ಅರ್ಧಗಂಟೆಯಲ್ಲಿ ಮುಗಿದುಹೋಗುತ್ತದೆ. ಎರಡನೇ ದಿನಕ್ಕೆ ಮತ್ತೆ ಯೋಚಿಸಬೇಕು; ಅಷ್ಟು ಕಷ್ಟ ಇದೆ. ದೃಶ್ಯ ಮಾಡುವುದು, ಆ ದೃಶ್ಯಕ್ಕೆ ಸಂಗೀತ ಮಾಡುವುದು ಕೂಡ ಕಷ್ಟ. ಏಕೆಂದರೆ ರಿಪೀಟ್ ಆಗಬಾರದು. ನೂರಾರು ಧಾರಾವಾಹಿಗಳು ಬರುವ ಕಾರಣ ಒಂದರ ಥರ ಇನ್ನೊಂದು ಇರಬಾರದು; ಇಲ್ಲಿ ಬೇರೆ ಪ್ರಯೋಗ ಮಾಡಬೇಕು; ಇದು ತುಂಬಾ ಸವಾಲಿನ ಕೆಲಸ.
ಜಾಹೀರಾತು ಮುಖ್ಯ
ಕಮರ್ಷಿಯಲ್ ಅಂಶ ಅಥವಾ ಜಾಹೀರಾತೇ ಚಾನೆಲ್ಗಳ ಕಾರ್ಯಶೈಲಿಯನ್ನು ನಿರ್ಧರಿಸುತ್ತದೆ. ಆರಂಭದ ಹಾಡನ್ನು ಒಂದೇ ಸಾಲಿಗೆ ನಿಲ್ಲಿಸಲು ಅದೇ ಕಾರಣ. ಅಷ್ಟೇ ಹಾಕಿದಾಗ ಜಾಹೀರಾತಿಗೆ ಹೆಚ್ಚು ಸಮಯ ಕೊಡಬಹುದಲ್ಲವೇ? ಜಾಸ್ತಿ ಜಾಹೀರಾತು ಎಂದರೆ ಜಾಸ್ತಿ ದುಡ್ಡು. ಹಾಡನ್ನು ಜನ ಇಷ್ಟಪಡುತ್ತಾರೆ; ಆದರೆ ಒಂದು ಹಾಡೆಂದರೆ ಕನಿಷ್ಠ ಒಂದು ನಿಮಿಷ ಬೇಕು. ಒಂದು ನಿಮಿಷವೆಂದರೆ ಅಷ್ಟು ಜಾಹೀರಾತು ಕೈ ತಪ್ಪುತ್ತದೆ. ಚಾನೆಲ್ನವರು ಅದನ್ನು ಹೀಗೆ ಯೋಚಿಸುತ್ತಾರೆ – ಒಂದು ಧಾರಾವಾಹಿಯ ಅರ್ಧಗಂಟೆಯಲ್ಲಿ ನಿಮಗೆ ಎಂಟು ನಿಮಿಷ ಜಾಹೀರಾತು ಬರುತ್ತದೆ. ಇನ್ನೂ ಜಾಸ್ತಿ ಮಾಡುವುದಕ್ಕೆ ಜಾಹೀರಾತಿನವರ ಬೇಡಿಕೆ ಇದೆ. ಆದರೆ ಇನ್ನೂ ಹೆಚ್ಚಿಸಿದರೆ ಸೀರಿಯಲ್ನ ಸಮಯ ಮತ್ತಷ್ಟು ಕಡಮೆಯಾಗುತ್ತದೆ; ಪ್ರೇಕ್ಷಕರು ಅದನ್ನು ಒಪ್ಪುವುದಿಲ್ಲ; ಮತ್ತು ಜಾಹೀರಾತಿನ ಗ್ಯಾಪ್ ಇನ್ನಷ್ಟು ಜಾಸ್ತಿಯಾದರೆ ಅವರು ಬೇರೆ ಚಾನೆಲ್ಲಿಗೆ ಹೋಗುತ್ತಾರೆ. ಆದಕಾರಣ ಜಾಸ್ತಿ ಮಾಡುವಂತಿಲ್ಲ; ಬಿಡುವಂತೆಯೂ ಇಲ್ಲ. ಅದಕ್ಕಾಗಿ ಸಂಗೀತಕ್ಕೆ ಕತ್ತರಿ ಹಾಕುತ್ತಾರೆ; ಶೀರ್ಷಿಕೆ ಗೀತೆಯನ್ನು ಮೊಟಕುಗೊಳಿಸುತ್ತಾರೆ.
ಈಗ ಇನ್ನೊಂದು ಏನಾಗುತ್ತಿದೆ ಎಂದರೆ ಕಿರುತೆರೆ ಸಂಗೀತದಲ್ಲಿ ನಾವು ಮೇಲೊಡಿ ಮಾಡುವುದನ್ನು ಅವರು ಒಪ್ಪುವುದಿಲ್ಲ. ಸ್ವಲ್ಪ ಕಿರುಚುವುದು ಮಾಡಿ ಎನ್ನುತ್ತಾರೆ; ಶೀರ್ಷಿಕೆ ಗೀತೆ ಶೌಟಿಂಗ್ ಇರಲಿ ಎಂದು ಹೇಳುತ್ತಾರೆ. ಶೌಟಿಂಗ್ ಮಾಡಿದಾಗ ಅದು ನೆರೆಮನೆಗೂ ಕೇಳಿಸುತ್ತದೆ; ಧಾರಾವಾಹಿ ಶುರುವಾಯಿತು ಅಂತ. ಈ ಥರದ ಬದಲಾವಣೆಗಳೆಲ್ಲ ಆಗುತ್ತಿವೆ. ಅದಕ್ಕೆ ನಾವು ಅಡ್ಜಸ್ಟ್ ಆಗುತ್ತಾ ಇದ್ದೇವೆ.
ಕೈಯಲ್ಲಿ ಐದು ಸಿನೆಮಾಗಳಿದ್ದು ಕಳೆದ ಐದಾರು ತಿಂಗಳಿಂದ ಸ್ವಲ್ಪ ಬ್ಯುಸಿ ಇದ್ದೇನೆ. ಆದ್ದರಿಂದ ಸೃಜನ್ ಲೋಕೇಶ್ ಅವರ ‘ಮಜಾ ಟಾಕೀಸ್’ನ ನಟನೆಗೆ ಹೋಗುವುದು ಸ್ವಲ್ಪ ವಿರಳವಾಗಿದೆ. ‘ರಣಹೇಡಿ’, ‘ಕಾಲಬ್ರಹ್ಮ’, ‘ಕಲಿವೀರ’, ‘ಸಾರಿ ಕಾವೇರಿ’ ಹಾಗೂ ಮತ್ತೆ ಉದ್ಭವಗಳಿಗೆ ಸಂಗೀತ ನೀಡುತ್ತಿದ್ದೇನೆ. ಬೆನ್ನುಬೆನ್ನಿಗೆ ಈ ಕೆಲಸಗಳು ಬಂದವು. ಅಭಿರಾಮ್ – ಕಲಿವೀರ, ಪ್ರತಾಪ್ – ಕಾಲಬ್ರಹ್ಮ, ಸಾರಿ ಕಾವೇರಿ – ಪತ್ರಕರ್ತ ಹರಿ, ಕೋಡ್ಲು ರಾಮಕೃಷ್ಣ ಮುಂತಾದವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನನ್ನ ಆದ್ಯತೆ ಸಂಗೀತಕ್ಕೆ. ಎರಡು ಸಿನೆಮಾಗಳನ್ನು (ಓ ಮಲ್ಲಿಗೆ, ಇಂದ್ರಧನುಷ್) ನಿರ್ದೇಶಿಸಿದ್ದೇನೆ. ಒಳ್ಳೆಯ ನಿರ್ಮಾಪಕರು ಸಿಕ್ಕಿದರೆ ಸಿನೆಮಾ ನಿರ್ದೇಶನ ಮಾಡಬೇಕೆನ್ನುವ ಆಸೆ ಕೂಡ ಇದೆ. ಅದಕ್ಕೆ ಒಂದಷ್ಟು ಕಥೆಗಳನ್ನು ಮಾಡಿದ್ದೇನೆ. ಸಂಗೀತಕ್ಕೆ ಸಂಬಂಧಿಸಿ ಇನ್ನಷ್ಟು ಅಲ್ಬಮ್ ಮಾಡಬೇಕೆನ್ನುವ ಯೋಚನೆ ಕೂಡ ಇದೆ.
ನಿರೂಪಣೆ: ಎಚ್. ಮಂಜುನಾಥ ಭಟ್