ಇಸ್ರೇಲ್ ರಾಷ್ಟ್ರೀಯ ಲಾಂಛನ ಮೆನೋರಾ. ಇದು ಏಳು ಶಾಖೆಗಳಿರುವ ದೀಪಸ್ತಂಭ. ಜಗತ್ತಿಗೆ ಬೆಳಕಿನ ಮೂಲವಾಗುವ ಇಚ್ಛೆ ಇಸ್ರೇಲ್ಗಿದೆ ಎಂಬುದನ್ನು ಸಾಂಕೇತಿಕವಾಗಿ ಹೇಳುತ್ತದೆ. ಇಂದಿಗೂ ಇಸ್ರೇಲ್ನಲ್ಲಿ ‘ಮರಾಠಿ ಡೇಲಿ’ ಪತ್ರಿಕೆ ಚಾಲ್ತಿಯಲ್ಲಿದೆ! ಅಷ್ಟೇ ಅಲ್ಲ ಮೂರು ಬಾರಿ ಜಾಗತಿಕ ಮರಾಠಿ ಸಮ್ಮೇಳನ ಕೂಡ ಇಸ್ರೇಲ್ನಲ್ಲಿ ನಡೆಸಲಾಗಿದೆ.
ಮಹಾರಾಷ್ಟ್ರದಲ್ಲಿದ್ದ ಅನೇಕ ಯಹೂದಿಗಳನ್ನು, ಧಾರವಾಡದ ಹವಾಮಾನ, ಪ್ರಕೃತಿಸೌಂದರ್ಯ, ಶಾಂತಿ, ನೆಮ್ಮದಿ ಆಕರ್ಷಿಸಿತು. ಅನೇಕ ಯಹೂದಿಗಳು ಧಾರವಾಡಕ್ಕೆ ಬಂದು, ರೈಲ್ವೆಯಲ್ಲಿ, ಆಸ್ಪತ್ರೆಗಳಲ್ಲಿ, ಸೈನ್ಯದಲ್ಲಿ ಮತ್ತು ಕಾಲೇಜುಗಳಲ್ಲಿ ವಿವಿಧ ಹುದ್ದೆಗಳಲ್ಲಿ ಹಿರಿಯ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದರು.
ಧಾರವಾಡದಿಂದ ಬೆಳಗಾವಿಗೆ ಹೋಗುವ ರಸ್ತೆಗುಂಟ, ೩ ಕಿ.ಮೀ. ಸಾಗಿದರೆ ಮೋರೆ ಆಯಿಲ್ ಮಿಲ್. ಹಾಗೆಯೆ ಮುಂದೆ ಅರ್ಧ ಕಿ.ಮೀ. ಕ್ರಮಿಸಿ, ಉತ್ತರದಿಕ್ಕಿಗೆ ಹೊರಳಿದರೆ ಲೋಕೋಪಯೋಗಿ ಇಲಾಖೆ (ಪಿ.ಡಬ್ಲೂ.ಡಿ.) ಸಿಬ್ಬಂದಿ ವಸತಿ ಗೃಹಗಳಿವೆ. ನಮ್ಮ ವಾಹನ ಇಲ್ಲಿಯವರೆಗೆ ಮಾತ್ರ ಸಾಗಬಹುದು.
ಮುಂದೆ ಸುಮಾರು ೧.೫ ಕಿ.ಮೀ. ಹೊಲ, ಗದ್ದೆ, ತೋಟಗಳ ಬದುವಿನ ಮೇಲೆ ಕಾಲ್ನಡಿಗೆಯಲ್ಲಿ ಸಾಗಬೇಕು. ಮಧ್ಯೆ ಪುಟ್ಟ ಹಳ್ಳ ಹರಿಯುತ್ತದೆ. ಈಗ ಅದು ಕೊಚ್ಚೆ ನಾಲೆ. ಇದನ್ನು ದಾಟಿಕೊಂಡು ಮುಂದೆ ಹೋದರೆ, ಕರಡಿಗುಡ್ಡದ ಮೈಲಾರ ಲಿಂಗೇಶ್ವರನ ತಟದಲ್ಲಿ ಪುಟ್ಟ ಅಕೇಷಿಯಾ-ನೀಲಗಿರಿ ನೆಡುತೋಪಿದೆ. ಅಲ್ಲಿ ೧೭ ಯಹೂದಿಗಳ ಸಮಾಧಿಗಳಿವೆ.
ಈ ಸಮಾಧಿಗಳ ಸಂಗಡ ಕೆಲ ಹಿಂದು ಹಾಗೂ ಮುಸಲ್ಮಾನರ ಸಮಾಧಿಗಳೂ ಇವೆ. ಈಗ ಕಬ್ರಸ್ಥಾನ್ ಮಾತ್ರ ವಾಢಾಯಿಸಿ, ಗೋರಿಗಳು ಯಹೂದಿಗಳ ಸಮಾಧಿಗಳನ್ನು ಅತಿಕ್ರಮಿಸಿಬಿಟ್ಟಿವೆ. ಆಳೆತ್ತರ ಕಸ, ಕಂಟಿ. ಸುತ್ತಲೂ ಹೇಸಿಗೆ ಮಡ್ಡಿ. ಡಂಪಿಂಗ್ ಯಾರ್ಡ್ ಯಹೂದಿಗಳ ಸ್ಮಶಾನದ ಪಾವಿತ್ರö್ಯವನ್ನೇ ಕಳೆದಿದೆ. ಸಮಾಧಿ ಸೀಳಿಕೊಂಡು, ಕಂಟಿ ಬೆಳೆದು, ದೇಗುಲ ‘ಸಿನೆಗಾಗ್’ ಕಾಲಗರ್ಭ ಸೇರಿ, ಹೇಳಹೆಸರಿಲ್ಲದ ಪೀರಾ ಗೋರಿ ತಲೆಯೆತ್ತಿದೆ.
ಸದ್ಯ ಅಳಿದುಳಿದ ೧೧ ಯಹೂದಿ ಸಮಾಧಿಗಳ ಮುಂದೆ, ಸುಂದರವಾದ ಕಡುಕಪ್ಪು ಮತ್ತು ಬಿಳಿ ಸಂಗಮರವರಿ ಕಲ್ಲುಗಳನ್ನು ನೆಟ್ಟು, ಮೃತರ ವಿವರಗಳನ್ನು ಕೆತ್ತಲಾಗಿದೆ. ವಿಶೇಷವೆಂದರೆ, ಸಮಾಧಿ ಕಲ್ಲುಗಳಲ್ಲಿ ಮೂರು ಭಾಷೆ ಬಳಸಲಾಗಿದೆ. ಮೇಲ್ಗಡೆ ಹೀಬ್ರೂ ಭಾಷೆ, ಮಧ್ಯದಲ್ಲಿ ಇಂಗ್ಲಿಷ್ ಹಾಗೂ ಕೆಳಗಡೆ ಮರಾಠಿಯಲ್ಲಿ ವಿವರ ಬರೆಸಲಾಗಿದೆ. ಯಹೂದಿಗಳು ತಮ್ಮ ಅಡ್ಡಹೆಸರುಗಳನ್ನು ಮರಾಠಿಗರಂತೆ, ಮರಾಠಿ ಭಾಷೆಯಲ್ಲೇ ಅಳವಡಿಸಿಕೊಂಡಿರುವುದನ್ನು ಕಾಣುತ್ತೇವೆ.
ಓದುಗರ ಮಾಹಿತಿಗಾಗಿ
- ಕೆಲ ಯಹೂದಿಗರ ಸಮಾಧಿ ಕಲ್ಲುಗಳ ಮೇಲೆ ಕೆತ್ತಿಸಲಾದ ವಿವರ ಇಂತಿವೆ.
- ಸುಬೇದಾರ್ ಮೇಜರ್ ಹುತಕೆಜಿ ಬಾಪೂಜಿ ಸರದಾರ ಬಹಾದ್ದೂರ್, ವಯಸ್ಸು: ೫೯. ನಿಧನ ೧೪.೦೨.೧೮೭೬
- ಉಝಿರೆಯಿಲ್ ಜಾಕೋಬ, ಫಸ್ಟ್ ಕ್ಲಾಸ್ ಹಾಸ್ಪಿಟಲ್ ಅಸಿಸ್ಟೆಂಟ್, ವಯಸ್ಸು ೪೬. ತೀರಿಕೊಂಡಿದ್ದು ೭.೦೪.೧೮೮೦
- ಸಾರಾ, ಸೋಲೋಮನ್ ಅಪ್ಟೇಕರ್ ಅವರ ಹೆಂಡತಿ ತೀರಿಕೊಂಡಿದ್ದು ಮೇ ೦೭, ೧೯೦೯
- ವಿಶೇಷವೆಂದರೆ, ವಾಲವ್ಹುಟಕರ್ ಕುಟುಂಬಕ್ಕೆ ಸೇರಿದ ೫ ಸಮಾಧಿಗಳು ಒಂದೇ ಬದಿಯಲ್ಲಿವೆ. ಹೆಚ್ಚೂಕಡಮೆ ೮ ದಶಕಗಳ ಬದುಕು ಈ ಕುಟುಂಬ ಇಲ್ಲಿ ಸವೆಸಿದ ಮಾಹಿತಿ ನಮಗೆ ಲಭ್ಯವಾಗುತ್ತದೆ.
ಒಟ್ಟು ೧೮ ಯಹೂದಿ ಸಮಾಧಿಗಳ ಪೈಕಿ (೧೫ ವರ್ಷಗಳ ಹಿಂದೆ, ೨೦೦೮ರಲ್ಲಿ ನಾನು ಕೈಗೊಂಡ ಸಮೀಕ್ಷೆ) ಈಗ (೨೦೨೩, ಅಕ್ಟೋಬರ್ ೨೦) ಯಾವ ಸಮಾಧಿಗಳೂ ಸುಸ್ಥಿತಿಯಲ್ಲಿಲ್ಲ. ಆದರೆ, ಏಳನ್ನು ಗುರುತಿಸಬಹುದು.
ಪ್ರತಿ ಸಮಾಧಿ ಕಲ್ಲುಗಳ ಮೇಲೆ ಒಂದರೊಳಗೊಂದು ಕೂಡಿದ ತ್ರಿಕೋನ ಚಿತ್ರವಿದೆ. ‘ಸ್ಟಾರ್ ಆಫ್ ಡೇವಿಡ್’ ಲಾಂಛನವದು. ಇಸ್ರೇಲ್ ಧ್ವಜದ ಮೇಲೆಯೂ ಈ ಸಂಕೇತವಿದೆ.
ಸ್ನೇಹಪರರು, ಸಹಬಾಳ್ವೆಯ ಆಕಾಂಕ್ಷಿಗಳು
ನೆಮ್ಮದಿಯ ಜೀವನ ನಡೆಸಲು ಸಾವಿರಾರು ಮೈಲು ದೂರದಿಂದ ಧಾರವಾಡಕ್ಕೆ ಬಂದು, ನಮ್ಮೊಡನೆ ಬೆರೆತು, ಸಹಬಾಳ್ವೆ ನಡೆಸಿದ ಯಹೂದಿಗಳ ಸಮಾಧಿಗಳು, ಮುಂಬೈ ಕರ್ನಾಟಕದ ಧಾರವಾಡಕ್ಕೂ ಮತ್ತು ಇಸ್ರೇಲಿಗೂ ೩ ಶತಮಾನಗಳ ಸಂಬಂಧವನ್ನು ಸಿದ್ಧಗೊಳಿಸುವ ಪುರಾವೆ.
ಇಂದಿಗೂ ನಿಲ್ಲದ ಪರಕೀಯರ ದಾಳಿಯಿಂದ ಇಸ್ರೇಲ್ ತುಂಬ ಸಂಕಷ್ಟದಲ್ಲಿದೆ. ಆದರೆ ಸ್ವಾಭಿಮಾನದಿಂದ, ಆತ್ಮಬಲ ಒಗ್ಗೂಡಿಸಿ, ವೈರಿಗಳನ್ನು ಎದುರಿಸುತ್ತ ಬಂದಿದೆ. ಆದರೆ ೧೮ ಮತ್ತು ೧೯ನೇ ಶತಮಾನದಲ್ಲಿ ಇದೇ ರೀತಿ, ಸುತ್ತುವರಿದ ಮುಸ್ಲಿಂ ರಾಷ್ಟ್ರಗಳ ಸತತ ಉಪಟಳದಿಂದ ತತ್ತರಿಸಿ, ಕಂಗಾಲಾಗಿ ಅನೇಕ ಯಹೂದಿಗಳು ತಮ್ಮ ದೇಶವನ್ನು ತೊರೆದು ಬೇರೆಬೇರೆ ದೇಶಗಳಿಗೆ ವಲಸೆಹೋದ, ದುಃಖದ ಇತಿಹಾಸ ನಮ್ಮ ಕಣ್ಣ ಮುಂದಿದೆ.
ಹೀಗೆ ೧೮ನೇ ಶತಮಾನದ ಉತ್ತರಾರ್ಧದಲ್ಲಿ ಕೆಲ ಯಹೂದಿಗಳು ಎರಡು ಹಡಗುಗಳ ಮೂಲಕ ಹಿಂದೂ ಮಹಾಸಾಗರ (ಅಂದು ಅರಬ್ಬೀ ಸಮುದ್ರ) ಮಾರ್ಗವಾಗಿ, ಹಿಂದೂಸ್ಥಾನಕ್ಕೆ ಆಶ್ರಯ ಬೇಡಿ, ಬಯಸಿ ಬಂದರು. ಒಂದು ಹಡಗು ಮಹಾರಾಷ್ಟ್ರದ ದಂಡೆಯಲ್ಲಿ ಲಂಗರು ಹಾಕಿತು. ಮತ್ತೊಂದು ಕೇರಳಕ್ಕೆ ತೆರಳಿತು.
ಅತ್ಯಂತ ಪರಿಶ್ರಮಿ, ಬುದ್ಧಿಜೀವಿ ಮತ್ತು ಸಹೃದಯರಾದ ಯಹೂದಿಗಳು ತಾವು ಆಶ್ರಯ ಪಡೆದ ಪ್ರದೇಶದ ಜನರೊಂದಿಗೆ ಹೊಂದಿಕೊಂಡು, ಬೆರೆತು ಸಹಬಾಳ್ವೆ ನಡೆಸಿದರು. ಆಯಾ ಪ್ರದೇಶಗಳ ಭಾಷೆ ಕಲಿತರು. ಅಲ್ಲಿ ಪ್ರಚಲಿತವಿದ್ದ ಅಡ್ಡ ಹೆಸರುಗಳನ್ನು ತಮ್ಮ ಹೆಸರಿಗೆ ಜೋಡಿಸಿಕೊಂಡರು. ಪ್ರಾರ್ಥನೆಗೆ ಅನುಕೂಲವಾಗಲಿ ಎಂದು ಯಹೂದಿ ಪ್ರಾರ್ಥನಾ ಮಂದಿರ, ‘ಸಿನೆಗಾಗ್’ ಕಟ್ಟಿಕೊಂಡರು. ಕೇರಳದಲ್ಲಿ ಇಂದಿಗೂ ಸಿನೆಗಾಗ್ಗಳು ನಮಗೆ ಕಾಣಸಿಗುವವು.
ಅಲೀನು ಪ್ರಾರ್ಥನೆ
ಮಧ್ಯಯುಗದಿಂದ ಅಥವಾ ಬಹುಶಃ ಅದಕ್ಕಿಂತ ಹಿಂದಿನಿಂದ ಯಹೂದಿಗಳು ‘ಅಲೀನು’ ಎಂಬ ಪ್ರಾರ್ಥನೆಯನ್ನು ದಿನಕ್ಕೆ ಮೂರು ಬಾರಿ ಮಾಡುತ್ತ ಬಂದಿದ್ದಾರೆ. ಆ ಪ್ರಾರ್ಥನೆಯಲ್ಲಿ ಹಲವು ಸುವಿಚಾರಗಳಿವೆ. ಆದರೆ ಆ ಪೈಕಿ, “ನೀವು ಜಗತ್ತನ್ನು ದುರಸ್ತಿ ಮಾಡಬೇಕು” ಎಂಬ ಸದಾಶಯ ಮಹತ್ತ್ವದ್ದು. ಇದಕ್ಕೆ ‘ಹೀಬ್ರೂ’ ಭಾಷೆಯಲ್ಲಿ ‘ಟಿಕ್ಕುನ್ ಓಲಂ’ ಎನ್ನಲಾಗುತ್ತದೆ.
ಅರ್ಥ, “ನಾವು ದೇವರ ಪಾಲುದಾರರು ಎಂದು ನಂಬುತ್ತೇವೆ. ಹೀಗಾಗಿ ನಮ್ಮ ಮೇಲೆ ಜಗತ್ತಿನಾದ್ಯಂತ ನೈತಿಕತೆ ಹಾಗೂ ನ್ಯಾಯವನ್ನು ಹರಡುವ ಜವಾಬ್ದಾರಿ ಇದೆ.”
ಎರಡನೇ ಶತಮಾನದಲ್ಲಿ ಕ್ರೋಡೀಕರಿಸಲಾದ ರೆಬ್ಬೈ ಬೋಧನೆಗಳ ಸಾರಸಂಗ್ರಹವಾಗಿರುವ, ಮಿಶ್ನಾದಲ್ಲಿ ಟಿಕ್ಕುನ್ ಓಲಂನ ಉಲ್ಲೇಖ ಹತ್ತಾರು ಬಾರಿ ಬರುತ್ತದೆ. ಅದರಲ್ಲಿ, ಜಗತ್ತನ್ನು ದುರಸ್ತಿ ಮಾಡಲು ನೀವು ಅಂಗವಿಕಲರಿಗೆ ಹಾಗೂ ದುರ್ಬಲರಿಗೆ ಹೆಚ್ಚು ರಕ್ಷಣೆ ನೀಡಬೇಕು ಎಂದು ತಾಕೀತು ಮಾಡಲಾಗಿದೆ.
ಪ್ರವಾದಿ ಐಸೇಯ ಕೂಡ, ಯಹೂದಿಗಳ ಬಳಿಗೆ ಬಂದು, “ನೀವೆಲ್ಲ ಈ ಜಗತ್ತಿಗೆ ಬೆಳಕಾಗಬೇಕು” ಎಂದು ಹೇಳಿದ್ದಾನಂತೆ. (೪೨:೬).
ಪರೋಪಕಾರಾರ್ಥಂ…
ಬೇರೆಯವರಿಗೆ ಸಹಾಯ ಮಾಡಬೇಕು ಎಂಬ ಯಹೂದಿಗಳ ಸಂದೇಶ ಪಿರ್ಕಿ ಅವೋಟ್ (ಎಥಿಕ್ಸ್ ಆಫ್ ದಿ ಫಾದರ್ಸ್)ನಲ್ಲೂ ಸ್ಪಷ್ಟವಾಗಿದೆ. ಎರಡು ಮತ್ತು ಮೂರನೇ ಶತಮಾನದ ಅವಧಿಯಲ್ಲಿ, ರೆಬ್ಬೈಗಳ ನೈತಿಕ ಬೋಧನೆಗಳನ್ನು ಒಂದೆಡೆ ಸಂಗ್ರಹಿಸಿ, ರಚಿಸಲಾದ ಗ್ರಂಥವಿದು.
ಅದರಲ್ಲಿರುವ ಸೂತ್ರಗಳ ಪೈಕಿ, ಎರಡು ತುಂಬ ಪ್ರಸಿದ್ಧವಾಗಿವೆ. ರೆಬ್ಬೈ ಟರ್ಝೋನ್ ಹೇಳಿದ, “ನೀನು ನಿನ್ನ ಜವಾಬ್ದಾರಿಯನ್ನು ಪೂರೈಸಲೇಬೇಕು ಎಂದು ಯಾರೂ ನಿನ್ನ ಮೇಲೆ ಒತ್ತಡ ಹೇರಿಲ್ಲ. ಆದರೆ, ಅದರಿಂದ ನುಣುಚಿಕೊಳ್ಳುವ ಸ್ವಾತಂತ್ರ್ಯವೂ ನಿನಗಿಲ್ಲ” – ಎಂಬುದು ಒಂದು ನಿಯಮ.
ರೆಬ್ಬೈ ಹಿಲ್ಲೇಲ್ನ ಸರಣಿ ಪ್ರಶ್ನೆಗಳಾದ, “ನನಗೆ ನಾನು ಆಗಿಬರದಿದ್ದರೆ ಬೇರಾರು ಆಗಿಬರುತ್ತಾರೆ? ಆದರೆ, ನಾನು ನನಗಷ್ಟೇ ಆಗಿಬಿಟ್ಟರೆ, ನಿಜಕ್ಕೂ ನಾನು ಯಾರು? ಮತ್ತು ಈಗಲ್ಲದಿದ್ದರೆ ಇನ್ನು ಯಾವಾಗ?” ಎಂಬುದು ಎರಡನೇ ಸೂತ್ರ.
ದೇವರು ಮತ್ತು ಸೃಷ್ಟಿಗೆ ಕೃತಜ್ಞ, ಯಹೂದಿ
ಹೀಗಾಗಿ ಯಹೂದಿಗಳ ಎಲ್ಲ ಧರ್ಮಗ್ರಂಥಗಳಲ್ಲಿರುವ ಬೋಧನೆಯ ಪ್ರಧಾನ ಆಶಯ, ಜನರ ಪ್ರಾಪಂಚಿಕ ಮನಃಸ್ಥಿತಿಯನ್ನು ಪವಿತ್ರ ಚಿಂತನೆಯನ್ನಾಗಿ ರೂಪಾಂತರಗೊಳಿಸುವುದೇ ಆಗಿದೆ. ಆದ್ದರಿಂದಲೇ ಒಬ್ಬ ಆಸ್ತಿಕ ಯಹೂದಿ, ಒಂದು ಚೂರು ಆಹಾರ ಸೇವಿಸುವ ಮುನ್ನ, ಬಚ್ಚಲುಮನೆಗೆ ಹೋದಾಗ, ಪ್ರತಿಯೊಂದು ಖುಷಿಯ ಅಥವಾ ದುಃಖದ ಸಂದರ್ಭದಲ್ಲಿ, ಎಲ್ಲಾ ಸಂದರ್ಭಗಳಲ್ಲೂ ದೇವರು ಮತ್ತು ಅವನ ಸೃಷ್ಟಿಯನ್ನು ಹೊಗಳುವ ಮಂತ್ರಗಳನ್ನು ಪಠಿಸುತ್ತಾನೆ.
ಸಬ್ಬತ್ ಆದ ತಕ್ಷಣ, ಮೇಣದ ಬತ್ತಿಗಳನ್ನು ಹಚ್ಚಿ ಪವಿತ್ರ ಹಾಗೂ ಜಾತ್ಯತೀತ ಮೌಲ್ಯಗಳ, ಬೆಳಕು ಮತ್ತು ಕತ್ತಲೆಯ ನಡುವಿನ ವ್ಯತ್ಯಾಸವನ್ನು ತೋರಿಸಿಕೊಟ್ಟಿದ್ದಕ್ಕಾಗಿ, ವಿಶ್ವದ ಸಾರ್ವಭೌಮ ಶಕ್ತಿಗೆ ನಮಸ್ಕರಿಸುತ್ತಾನೆ.
“ಇಸ್ರೇಲ್ನ ಜಾರ್ಜ್ ವಾಷಿಂಗ್ಟನ್”
ಇಸ್ರೇಲ್ನ ಸಂಸ್ಥಾಪಕರಲ್ಲಿ ಬಹಳಷ್ಟು ಜನ ಈ ಧಾರ್ಮಿಕ ಬೋಧನೆಗಳಿಂದ ಪ್ರಭಾವಿತರಾಗಿದ್ದಾರೆ. ಅವರಲ್ಲಿ ಅತ್ಯಂತ ಪ್ರಮುಖರೆಂದರೆ, ದೇಶದ ಮೊದಲ ಪ್ರಧಾನಮಂತ್ರಿ ಹಾಗೂ ‘ಇಸ್ರೇಲ್ನ ಜಾರ್ಜ್ ವಾಷಿಂಗ್ಟನ್’ ಎಂದೇ ಹೆಸರು ಗಳಿಸಿದ, ಡೇವಿಡ್ ಬೆನ್-ಗುರಿಯನ್, “ನಾವು ನಮ್ಮ ಎಲ್ಲಾ ನೆರೆ ದೇಶಗಳು ಹಾಗೂ ಅಲ್ಲಿನ ಜನರನ್ನು ಕೈಚಾಚಿ ತಬ್ಬಿಕೊಳ್ಳುತ್ತೇವೆ. ಶಾಂತಿ ಮತ್ತು ಉತ್ತಮ ನೆರೆಹೊರೆ ನಮ್ಮ ಆದ್ಯತೆ. ತಮ್ಮದೇ ನೆಲೆ ಕಂಡುಕೊಂಡಿರುವ ಸಾರ್ವಭೌಮ ಯಹೂದಿ ಜನರೊಂದಿಗೆ ಉತ್ತಮ ಸಂಬಂಧ ಹಾಗೂ ಪರಸ್ಪರ ಸಹಕಾರಿ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ಎಲ್ಲರಿಗೂ ಮನವಿ ಮಾಡುತ್ತೇವೆ” – ಎಂದಿದ್ದಾರೆ. ೧೯೪೮ರಲ್ಲಿ ಇಸ್ರೇಲ್ಗೆ ಸ್ವತಂತ್ರ ಸಾರ್ವಭೌಮ ರಾಷ್ಟ್ರ ಮಾನ್ಯತೆ ದೊರಕಿತು.
ಇಸ್ರೇಲ್ ರಾಷ್ಟಿçÃಯ ಲಾಂಛನ ಮೆನೋರಾ. ಇದು ಏಳು ಶಾಖೆಗಳಿರುವ ದೀಪಸ್ತಂಭ. ಜಗತ್ತಿಗೆ ಬೆಳಕಿನ ಮೂಲವಾಗುವ ಇಚ್ಛೆ ಇಸ್ರೇಲ್ಗಿದೆ ಎಂಬುದನ್ನು ಸಾಂಕೇತಿಕವಾಗಿ ಹೇಳುತ್ತದೆ.
ದಿ ಜ್ಯೂಯಿಷ್ ಸ್ಟೇಟ್ ಪರಿಕಲ್ಪನೆ
೧೮೯೬ರಲ್ಲಿ ಆಧುನಿಕ ಜಿಯೋನಿಸಂ ಸಂಸ್ಥಾಪಕರು ಭವಿಷ್ಯದಲ್ಲಿ ಯಹೂದಿ ರಾಷ್ಟçವನ್ನು ಸ್ಥಾಪಿಸುವ ದೂರದೃಷ್ಟಿಯನ್ನು ಮೊದಲ ಬಾರಿಗೆ ಹಂಚಿಕೊಂಡಾಗಲೇ, ಅವರ ‘ಡೇರ್ ಜುಡೇನ್ಸ್ತಾನ್ ದಿ ಜ್ಯೂಯಿಷ್ ಸ್ಟೇಟ್ ಪರಿಕಲ್ಪನೆಯ ಆಧಾರಸ್ತಂಭವೇ, ಜಿಯೋನಿಸ್ಟ್ಗಳು ಸಾಮಾಜಿಕ ಬದಲಾವಣೆಗೆ ಶ್ರಮಿಸಬೇಕು ಎಂಬುದಾಗಿತ್ತು. “ನಾವು ನಮ್ಮ ಅನುಕೂಲಕ್ಕಾಗಿ ಏನನ್ನು ಮಾಡಲು ಪ್ರಯತ್ನಿಸಿದರೂ (ಯಹೂದಿ ರಾಷ್ಟ್ರದಲ್ಲಿ) ಅದರಿಂದ ಇಡೀ ಮನುಕುಲಕ್ಕೆ ಒಳ್ಳೆಯದಾಗಬೇಕು” ಎಂದು ಬೆನ್-ಗುರಿಯನ್ ಹೇಳುತ್ತಿದ್ದರು.
ಈಗ ಇಸ್ರೇಲ್, ವೆಸ್ಟ್ ಬ್ಯಾಂಕ್ ಹಾಗೂ ಗಾಜಾದಲ್ಲಿ ನಡೆಯುತ್ತಿರುವ ಹಿಂಸಾಚಾರ ಗಮನಿಸಿದವರಿಗೆ, ಯುದ್ಧದಲ್ಲಿ ಏನಾಗುತ್ತದೆ ಎಂಬ ಸಾಮಾನ್ಯ ಜ್ಞಾನವುಳ್ಳವರಿಗೆ, ಬೆನ್-ಗುರಿಯನ್ ಮಾತು ಸಿನಿಕ ಅಥವಾ ಚೋದ್ಯ ಎನಿಸುವ ಸಾಧ್ಯತೆ ಇದೆ. ಆದರೆ, ಜಿಯೋನಿಸ್ಟ್ ಆಶೋತ್ತರಗಳ ಸುದೀರ್ಘ ಪರಂಪರೆಯಿಂದ ಬಂದ ಓರ್ವ ಯಹೂದಿಯ ಪ್ರಾಮಾಣಿಕ ಮತ್ತು ನೈಜ ಅನಿಸಿಕೆ ಇಷ್ಟು ಉದಾತ್ತ ಎಂಬುದರಲ್ಲಿ ಎರಡು ಮಾತಿಲ್ಲ.
ಯಹೂದಿ ಜನಾಂಗದಲ್ಲಿ ಆಗ ೧೨ ಪಂಗಡಗಳಿದ್ದವು. ಆದರೆ ಅವರಿಗೆ ಪ್ರಮುಖ ರಾಜನಿರಲಿಲ್ಲ. ಹೀಗಾಗಿ ಜನಾಂಗ ಪರಕೀಯರ ದಾಳಿ, ದಬ್ಬಾಳಿಕೆಗೆ ಸಿಲುಕಿ ತತ್ತರಿಸಿಹೋಗಿತ್ತು. ಅನೇಕರು ದೇಶವನ್ನೇ ತೊರೆದು, ನೆಮ್ಮದಿ ಬಯಸಿ ವಲಸೆಹೋದರು. ಮುಂದೆ ಇವರೆಲ್ಲ ಒಗ್ಗಟ್ಟಾಗಿ ‘ಸಾಲ’ ಎಂಬವವನನ್ನು ತಮ್ಮ ರಾಜನಾಗಿ ನಿಯುಕ್ತಿಗೊಳಿಸಿ, ಘೋಷಿಸಿಕೊಂಡರು.
ಇಸ್ರೇಲ್ ಮತ್ತು ಜ್ಯೂಡಾ
ಆನಂತರ ಬಂದ ಡೇವಿಡ (ಸುಮಾರು ಕ್ರಿ.ಪೂ. ೧೦೦೦) ಯಹೂದಿಗಳನ್ನು ಶಕ್ತಿಯುತ ಜನಾಂಗವನ್ನಾಗಿ ಕಟ್ಟಿ-ಬೆಳೆಸಿ, ಜೇರೊಸಲೇಮ್ನ್ನು ರಾಜಧಾನಿಯನ್ನಾಗಿಸಿದ. ಅದನ್ನು ಸುಂದರ ನಗರವನ್ನಾಗಿ ಮಾರ್ಪಡಿಸಿದ. ಅವನ ಮಗ ಸೋಲೋಮನ್ ರಾಜನಾಗಿ ಅಧಿಕಾರ ವಹಿಸಿಕೊಂಡಾಗ ಇಸ್ರೇಲ್ ಸಂಪದ್ಭರಿತವಾಗಿತ್ತು. ಅವನು ಬಂಗಾರದ ಗುಡಿ ‘ಸಿನೆಗಾಗ್’ ಕಟ್ಟಿಸಿದ. ಇವನ ಬಳಿಕ ರಾಜ್ಯ ಇಬ್ಭಾಗವಾಯಿತು. ಉತ್ತರದ ಪ್ರದೇಶ ‘ಇಸ್ರೇಲ್’ ಮತ್ತು ದಕ್ಷಿಣದ ಪ್ರದೇಶವನ್ನು ‘ಜ್ಯೂಡಾ’ ಎಂದು ಕರೆಯಲಾಯಿತು. ಜ್ಯೂಡಾದ ಜನರನ್ನು ‘ಯಹೂದಿ’ಗಳೆಂದು ಕರೆಯತೊಡಗಿದರು.
ಜೆರೋಸಲೇಮ್ ಕೂಡ ಇಬ್ಭಾಗವಾಯಿತು. ಇಸ್ರೇಲ್ ಭಾಗಕ್ಕೆ ನಗರವೆಂದು, ದಕ್ಷಿಣದ ಭಾಗಕ್ಕೆ ಹಳೆಯ ನಗರವೆಂದು ಕರೆದರು. ಚಾರಿತ್ರಿಕ ಪ್ರಸಿದ್ಧ ಹಾಗೂ ಪವಿತ್ರ ಎಂದು ಪರಿಗಣಿಸಲ್ಪಟ್ಟ ಜಾಗಗಳಿರುವುದು ಈ ಹಳೆಯ ನಗರದಲ್ಲಿ.
ಯೇಸುಕ್ರಿಸ್ತ ಉಪದೇಶಿಸಿದ್ದು, ಮೊಹಮ್ಮದ್ ಪೈಗಂಬರ್ ಧ್ಯಾನ ಮಾಡಿದ್ದು ಇಲ್ಲಿಯೇ ಎಂಬ ಉಲ್ಲೇಖಗಳಿವೆ. ಇಲ್ಲಿರುವ ‘ದುಃಖದ ದಾರಿ’ ಅಥವಾ ‘ಶಿಲುಬೆಯ ದಾರಿ’ ಮಾರ್ಗವಾಗಿ, ಯೇಸುಕ್ರಿಸ್ತನು ಶಿಲುಬೆಯನ್ನು ಹೊತ್ತು ಶಿಲುಬೆಗೇರಿದ ಸ್ಥಳ ಗೋಲ್ಗೊಥಾಕ್ಕೆ ತೆರಳಿದ ಎಂಬ ಐತಿಹ್ಯವಿದೆ. ಯೇಸು ಕೊನೆಯ ಭೋಜನ ಮಾಡಿದ ಸ್ಥಳ, ಪ್ರವಾದಿ ಜಾನ್ನ ಜನ್ಮಸ್ಥಳ ಹೊಸ ನಗರದಲ್ಲಿವೆ.
೧೯೬೭ರಲ್ಲಿ ಅರಬ್ ರಾಷ್ಟ್ರ ಮತ್ತು ಇಸ್ರೇಲ್ ಯುದ್ಧದ ನಂತರ ಜೆರೋಸಲೇಮ್ ಸಂಪೂರ್ಣ ಇಸ್ರೇಲ್ ವಶವಾಯಿತು.
ಹೀಬ್ರೂ ಭಾಷೆಯಲ್ಲಿರುವ ‘ಹಳೇ ಒಡಂಬಡಿಕೆ’ ಯಹೂದಿಗಳ ಧರ್ಮಗ್ರಂಥ. ಇದು ನಾಲ್ಕು ಅಥವಾ ೫ನೇ ಶತಮಾನದಲ್ಲಿ ಬರೆಯಲ್ಪಟ್ಟಿತು. ಒಟ್ಟು ೩೯ ಗ್ರಂಥಗಳಲ್ಲಿ ಹರಡಿದೆ. ಈ ಗ್ರಂಥದಲ್ಲಿ ಕ್ರೈಸ್ತಮತದ ತತ್ತ್ವಗಳನ್ನು ಹಾಗೂ ಆರಂಭವನ್ನು ಗುರುತಿಸಬಹುದು.
ಇಸ್ರೇಲ್ ಸ್ವತಂತ್ರವಾದ ಮೇಲೆ, ಅನೇಕ ಯಹೂದಿಗಳು ತಮ್ಮ ಮಾತೃಭೂಮಿಗೆ ತೆರಳಿದರು. ಆದರೆ, ಹಿಂದೂಸ್ಥಾನದೊಂದಿಗಿನ ಸಮಧುರ ಸಂಬಂಧವನ್ನು ಹಿರಿಯರು ಮರೆಯಲಿಲ್ಲ. ಇಂದಿಗೂ ಇಸ್ರೇಲ್ನಲ್ಲಿ ‘ಮರಾಠಿ ಡೇಲಿ’ ಪತ್ರಿಕೆ ಚಾಲ್ತಿಯಲ್ಲಿದೆ! ಅಷ್ಟೇ ಅಲ್ಲ ಮೂರು ಬಾರಿ ಜಾಗತಿಕ ಮರಾಠಿ ಸಮ್ಮೇಳನ ಕೂಡ ಇಸ್ರೇಲ್ನಲ್ಲಿ ನಡೆಸಲಾಗಿದೆ.
ಮಹಾರಾಷ್ಟ್ರದಲ್ಲಿದ್ದ ಅನೇಕ ಯಹೂದಿಗಳನ್ನು, ಧಾರವಾಡದ ಹವಾಮಾನ, ಪ್ರಕೃತಿ ಸೌಂದರ್ಯ, ಶಾಂತಿ, ನೆಮ್ಮದಿ ಆಕರ್ಷಿಸಿತು. ಅನೇಕ ಯಹೂದಿಗಳು ಧಾರವಾಡಕ್ಕೆ ಬಂದು, ರೈಲ್ವೆಯಲ್ಲಿ, ಆಸ್ಪತ್ರೆಗಳಲ್ಲಿ, ಸೈನ್ಯದಲ್ಲಿ ಮತ್ತು ಕಾಲೇಜುಗಲ್ಲಿ ವಿವಿಧ ಹುದ್ದೆಗಳಲ್ಲಿ ಹಿರಿಯ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದರು.
ಧಾರವಾಡದ ಕರ್ನಾಟಕ ಕಾಲೇಜಿನ ಆರಂಭದ ವರ್ಷಗಳಲ್ಲಿ ಮೂರು ವಿದ್ಯಾರ್ಥಿನಿಯರ ಪೈಕಿ, ಒಬ್ಬಳು ಜ್ಯೂಯಿಷ್ ಆಗಿದ್ದಳು ಎಂದು ದಾಖಲೆಗಳು ಸಾರುತ್ತವೆ. ಹೆಣ್ಣು ಮಕ್ಕಳ ಟ್ರೇನಿಂಗ್ ಕಾಲೇಜಿನಲ್ಲಿ ಓರ್ವ ಜ್ಯೂಯಿಷ್ ಮಹಿಳೆ ಪ್ರಾಚಾರ್ಯರಾಗಿಯೂ ಸೇವೆಸಲ್ಲಿಸಿದ್ದಾರೆ. ಧಾರವಾಡದ ಸಿವಿಲ್ ಆಸ್ಪತ್ರೆಯಲ್ಲಿ ಸೀನಿಯರ್ ಹೆಲ್ತ್ ಅಸಿಸ್ಟಂಟ್ ಹಾಗೂ ಸರ್ಜನ್ ಆಗಿಯೂ ಯಹೂದಿಗಳು ಇಲ್ಲಿನ ಜನರ ಸೇವೆ ಮಾಡಿದ್ದಾರೆ. ಈ ಮಧ್ಯೆ ಅನೇಕ ಯಹೂದಿಗಳು ಇಲ್ಲಿಯೇ ಮರಣಹೊಂದಿದರು. ಆ ಪೈಕಿ ಕೆಲವರ ಸಮಾಧಿಗಳು ಧಾರವಾಡದಲ್ಲಿವೆ.
* * *
ಆವಿಷ್ಕಾರದ ಹಲವು ಪ್ರಥಮಗಳ ಶ್ರೇಯ ಇಸ್ರೇಲಿಗರದ್ದು!
- ಟಿಕ್ಕುನ್ ಓಲಂ ಮೇಕರ್ಸ್ (ಟಾಮ್) (೨೦೧೪) ಮೇಕ್-ಅ-ಥಾನ್: ಮೊಟ್ಟಮೊದಲ ಸಮಾವೇಶ ನಜರತ್ನಲ್ಲಿ ನಡೆಯಿತು. ವಿಕಲಾಂಗಚೇತನರ ಸಮಸ್ಯೆಗಳಿಗೆ ವಿಶಿಷ್ಟ ಪರಿಹಾರ ಹುಡುಕುವ ಮಾದರಿ ಪ್ರಯತ್ನ. ಪರಿಹಾರಗಳನ್ನು ಜಗತ್ತಿನಾದ್ಯಂತ ಉಚಿತವಾಗಿ ಅಪ್ಲೋಡ್ ಮಾಡಬಹುದು. ಬೆಳಗಾವಿ ಜಿಲ್ಲೆ, ಬೈಲಹೊಂಗಲ ತಾಲೂಕಿನ ಸರ್ಕಾರಿ ಇಲಾಖೆಯೊಂದರಲ್ಲಿ ಪ್ರಥಮ ದರ್ಜೆ ಸಹಾಯಕರಾದ, ಅಂಧವ್ಯಕ್ತಿ ಸಿದ್ಧಲಿಂಗೇಶ್ವರ ಬೀಳಗಿ ಅವರ ಪ್ರಯತ್ನದ ಫಲವಾಗಿ ಗೂಗಲ್ ಅಂಧರಿಗಾಗಿ ಕೇಳುವ, ಕೇಳಿಸಿಕೊಳ್ಳುವ ಹಾಗೂ ಧ್ವನಿ ಮುದ್ರಿಸಿಕೊಳ್ಳುವ ವಿಶೇಷ ವ್ಯವಸ್ಥೆ ಜಾರಿಗೆ ತಂದಿದೆ.
- ಇಸ್ರೇಲ್ಸ್ ಕೋರ್ ಸೈಂಟಿಫಿಕ್ ಕ್ರಿಯೇಷನ್ಸ್ (೨೦೧೬): ಕರಗುವ ಬ್ಯಾಂಡೇಜ್, ‘ವೂಂಡ್ ಕ್ಲಾಟ್’ ಹೆಸರಿನ ಈ ಬ್ಯಾಂಡೇಜ್, ದೊಡ್ಡ ಗಾತ್ರದ ಭಾರೀ ಗಾಯದಿಂದ ರಕ್ತಸ್ರಾವವನ್ನು ತಡೆದು, ಗಾಯ ಮಾಯ್ದಂತೆ ದೇಹದಲ್ಲೇ ಕರಗಿ ಹೋಗುತ್ತದೆ!
- ಕ್ಯಾನ್ಸರ್ ಪತ್ತೆಗೆ ಸುಲಭೋಪಾಯ (೨೦೧೫) ‘ನಾ-ನೋಸ್’: ಹೊಸಾಮ್ ಹೇಕ್ ಎಂಬವರು ಅಭಿವೃದ್ಧಿಪಡಿಸಿದ, ಬ್ರೀದ್ಲೈಸರ್. ಅತ್ಯಂತ ಕರಾರುವಾಕ್ ಮತ್ತು ಸುಲಭವಾಗಿ, ಸಾಕಷ್ಟು ಮೊದಲೇ ಶ್ವಾಸಕೋಶದ ಕ್ಯಾನ್ಸರ್ ಪತ್ತೆ ಮಾಡಬಹುದು.
- ಗಾಯಾಳು ಹೊರಲು ಸುಲಭ ಉಪಕರಣ (೨೦೧೨): ಎಲಿ ಐಸಾಕ್ಸನ್ ಹಾಗೂ ಇಜಕ್ ಒಪೆನ್ಹೀಮ್ ಸೇರಿ, ಅಪಘಾತದ ಸ್ಥಳದಿಂದ ಗಾಯಾಳುಗಳನ್ನು ಬೆನ್ನಿನ ಮೇಲೆ ಸುಲಭವಾಗಿ ಹೊತ್ತೊಯ್ಯಬಹುದಾದ ಉಪಕರಣ ಶೋಧಿಸಿದರು.
- ಬಯೋಗ್ಯಾಸ್ ಮನೆ ಯಂತ್ರ (೨೦೧೧): ಸಾಕುಪ್ರಾಣಿಗಳ ಮಲ, ಅಡುಗೆಮನೆ ಮತ್ತು ಕೈತೋಟ ತ್ಯಾಜ್ಯ ಬಳಸಿ, ಅತ್ಯಂತ ಸರಳ ಮತ್ತು ಹೆಚ್ಚು ಅನಿಲ ಉತ್ಪಾದಿಸುವ, ಬಯೋಗ್ಯಾಸ್ ಯಂತ್ರ ಸಂಶೋಧಿಸಿದವರು, ಯೇರ್ ಟೆಲ್ಲರ್ ಹಾಗೂ ಓಶಿಕ್ ಎಫ್ರಟಿ.
- ಆಹಾರ ಪ್ಯಾಕ್ ಮಾಡಲು, ಕರಗುವ ಪ್ಲಾಸ್ಟಿಕ್ ‘ಟಿಪಾ’ (೨೦೧೦): ಡಾಫ್ನಾ ನಿಸ್ಸೇನ್ಬೌಮ್ ಹಾಗೂ ಟಾಲ್ ನ್ಯೂಮನ್ ಕಂಡುಹಿಡಿದ ಈ ಪ್ಲಾಸ್ಟಿಕ್, ಸುಲಭವಾಗಿ ಮಣ್ಣಿನಲ್ಲಿ ಕರಗಬಲ್ಲುದು!
- ಮನೆಗೆ ಡೈನಮೋ ವಿದ್ಯುತ್, ಹೈಡ್ರೋಸ್ಪಿನ್ (೨೦೧೦): ಡಯಾನಿ ಪೆಲೆಗ್ ಪೈಪಿನೊಳಗೆ ತಿರುಗುವ ಪುಟ್ಟ ಹೈಡ್ರೋಸ್ಪಿನ್ ಯಂತ್ರ ಕಂಡುಹಿಡಿದರು. ಕೊಳವೆ ಮೂಲಕ ಹರಿಯುವ ನೀರಿನ ಶಕ್ತಿಯನ್ನೇ ಬಳಸಿಕೊಂಡು, ಖರ್ಚಿಲ್ಲದ ಹಸಿರು ವಿದ್ಯುತ್ ಪಡೆಯುವ ದಾರಿ ತೋರಿದರು.
- ಏಡ್ಸ್ ನಿಯಂತ್ರಣ (೨೦೦೯): ಒರೆನ್ ಫ್ಯೂರೆಸ್ಟ್, ಇಡೋ ಕಿಲೆಮ್ನಿಕ್ ಹಾಗೂ ಶೌಲ್ ಶೋಹಟ್ ಕಂಡುಹಿಡಿದ, ‘ಪ್ರಿಪೆಕ್ಸ್’ ಶಸ್ತ್ರಚಿಕಿತ್ಸೆ, ಅರವಳಿಕೆ ನೀಡದೆ, ರಕ್ತ ಸ್ರಾವವಿಲ್ಲದ, ನೋವು ರಹಿತ, ಸೋಂಕಿಗೆ ಒಳಗಾಗದಂತೆ ತಡೆಗಟ್ಟುವ ಚಿಕಿತ್ಸೆ.
- ಟಾಯ್ಲೆಟ್ ‘ಆಶ್ ಪೂಪಿ’ (೨೦೦೮): ಒಡೆದ್ ಶೊಸೆಯೊವ್ ಹಾಗೂ ಒಡೆದ್ ಹಲ್ಪೆರಿನ್ ಸೇರಿ, ಆಶ್ ಪೂಪಿ ವಿಶಿಷ್ಟ ಶೌಚಾಲಯ ನಿರ್ಮಿಸಿದ್ದಾರೆ. ನೀರು ಮತ್ತು ವಿದ್ಯುತ್ ಇಲ್ಲದೆ ಈ ಶೌಚಾಲಯ ಕಾರ್ಯನಿರ್ವಹಿಸುತ್ತದೆ!
- ನೀರಿನ ಸೋರಿಕೆ ತಡೆ ಸಾಫ್ಟ್ವೇರ್ ‘ಟಕಾಡು’ (೨೦೦೮), ಅಮಿರ್ ಪೆಲೆಗ್ ಮಹಾನಗರ, ಮುನ್ಸಿಪಾಲಿಟಿ ಹಾಗೂ ದೇಶಗಳ ಜಲ ಪೂರೈಕೆ ವ್ಯವಸ್ಥೆ ಮಾಹಿತಿ ಸಂಗ್ರಹಿಸಿ, ಎಲ್ಲಿ ಸೋರಿಕೆ ಇದೆ, ಪೈಪ್ ಒಡೆದಿದೆ, ನೀರು ಉಳಿಸಬಹುದು. ಕೋಟ್ಯಂತರ ಲೀಟರ್ ನೀರು ಪೋಲಾಗದಂತೆ ಉಳಿಸುತ್ತದೆ!
ಯಾರು ಒಂದು ಜೀವವನ್ನು ಕಾಪಾಡುತ್ತಾರೋ ಅವರು ಇಡೀ ಜಗತ್ತನ್ನು ಕಾಪಾಡಿದಂತೆ.
– ಮಿಶ್ನಾ, ಸನ್ಹೆಡ್ರಿನ್ ೪:೯
* * *
ಚಿತ್ರಗಳು: ಮಿಲಿಂದ ಪಿಸೆ, ಧಾರವಾಡ